ಕಳೆದ 12 ವರ್ಷಗಳಿಂದ ದೇಶದ ಅಧಿಕಾರ ಹಿಡಿದಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಜೊತೆಗೆ ಜಾರ್ಜ್ ಅವರ ಕೋಮುವಾದ ವಿರೋಧ, ಹಿಂದುತ್ವದ ಖಂಡನೆ, ಮೋದಿ ಟೀಕೆಗಳನ್ನು ಪಕ್ಕಕ್ಕೆ ಸರಿಸಿ ಕೊಂಡಾಡಲಾಗುತ್ತಿದೆ. ಹೀಗಾಗಿಯೇ ಸದರಿ ಬರೆಹದಲ್ಲಿ ಈ ಅಂಶಗಳ ಕುರಿತ ಜಾರ್ಜ್ ನಿಲುವುಗಳಿಗೆ ಒತ್ತು ಕೊಡಬೇಕಾಯಿತು. ಸದ್ಯದ ಪರಿಸ್ಥಿತಿಯಲ್ಲಿ ದೇಶವನ್ನು ಕಾಡುತ್ತಿರುವ ಕಾಯಿಲೆಗಳಿವು ಎಂಬ ಕಾರಣಕ್ಕಾಗಿ ಈ ಅಂಶಗಳು ಹೆಚ್ಚು ಪ್ರಸ್ತುತ ಎನಿಸಿವೆ.
ಮೊನ್ನೆ ಕಡೆಯುಸಿರೆಳೆದ ಧೀಮಂತ ಪತ್ರಕರ್ತ ಟಿಜೆಎಸ್ ಜಾರ್ಜ್ ಅವರು ಕೋಮುವಾದದ ಕಡು ವಿರೋಧಿಯಾಗಿದ್ದರು, ‘ಒಂದು ದೇಶ-ಒಂದು-ಭಾಷೆ-ಒಂದು ಸಂಸ್ಕೃತಿ-ಒಂದು ಧರ್ಮ’ ಸಂಕುಚಿತ ಸಿದ್ಧಾಂತವನ್ನು ಗಟ್ಟಿಯಾಗಿ ವಿರೋಧಿಸುತ್ತಿದ್ದರು. ದೇಶದ ಸಂವಿಧಾನವೇ ರೂಪಿಸಿಕೊಟ್ಟಿರುವ ಸ್ವಾಯತ್ತಾಧಿಕಾರದ ಸಂಸ್ಥೆಗಳ ಪತನದ ಕುರಿತು ಕಳವಳ ಪ್ರಕಟಿಸಿದ್ದರು. ಈ ಮಾತಿಗೆ ಹತ್ತು ಹಲವು ಉದಾಹರಣೆಗಳನ್ನು ಅವರ ಬರೆಹಗಳಿಂದಲೇ ಎತ್ತಿ ಕೊಡಬಹುದು… ಅಂತಹ ವಿವೇಕರಾಶಿಯ ಕೆಲ ಹನಿಗಳನ್ನಷ್ಟೇ ಇಲ್ಲಿ ನೀಡಲಾಗಿದೆ.
ನೇರ ನಿಷ್ಠುರತೆಗೆ ಹೆಸರಾದ ತಮ್ಮ ‘ಪಾಯಿಂಟ್ ಆಫ್ ವ್ಯೂ’ ಶೀರ್ಷಿಕೆಯ ಅಂಕಣ ಬರೆಹವನ್ನು ಜಾರ್ಜ್, 2022ರ ಮಧ್ಯಭಾಗದಲ್ಲಿ ನಿಲ್ಲಿಸಿದರು. ಅಡಿಯಲ್ಲಿ 2019ರ ಮಾರ್ಚ್ 18ರ ಸೋಮವಾರದಂದು WILL THIS BE THE LAST BATTLE? ಎಂಬ ಶೀರ್ಷಿಕೆಯಡಿ ಅವರು ಬರೆದ ಅಂಕಣದ ಕೆಲ ಭಾಗಗಳ ಕನ್ನಡ ಅನುವಾದ ಮತ್ತು ಮೂಲ ಇಂಗ್ಲಿಷ್ ರೂಪ ಈ ಕೆಳಗಿದೆ-
“… ಹಿಂದುತ್ವದ ಉದಯವು ಧರ್ಮಕ್ಕೆ ಹೊಸ ಭಾವನಾತ್ಮಕ ಆಯಾಮ ನೀಡಿದೆ. ಅಲೆಗಳನ್ನೆಬ್ಬಿಸಲು ಬಿಜೆಪಿಗೆ ನೆರವಾಗಿದೆ. ಎಲ್ಲ ಅಲೆಗಳ ಮಾದರಿಯಲ್ಲಿ ಈ ಅಲೆಗಳು ಕೂಡ ಚದುರಿ ಹೋಗಿವೆ. ಹಿಂದುತ್ವದ ಕಾರ್ಯಕರ್ತರು ಭಾರತೀಯ ಸಂವೇದನೆಗಳನ್ನು ಉಲ್ಲಂಘಿಸುವ ಅತಿರೇಕಗಳನ್ನು ಮಾಡುತ್ತಾರೆ. ಧರ್ಮದ ಹೆಸರಿನಲ್ಲಿ ಬಡಿತ, ಕೊಲೆ, ಗುಂಪು ಹತ್ಯೆ ಸಮೀಪ ಸೆಳೆಯುವುದಕ್ಕಿಂತ ದೂರ ಸರಿಸುತ್ತದೆ. ಈ ಮಾತಿಗೆ IS ಒಂದು ಉದಾಹರಣೆ. ಹುತಾತ್ಮನಾಗುವ ಇಸ್ಲಾಮ್ ಪರಿಕಲ್ಪನೆಯು ಅತ್ಯುತ್ಸಾಹಿ ಯುವಜನರನ್ನು ಆತ್ಮಹತ್ಯಾ ದಳಗಳತ್ತ ಸೆಳೆಯಿತು. ಆದರೆ ಮುಸಲ್ಮಾನ ಸಮಾಜದಲ್ಲಿ ಕೂಡ ಒಂದೊಮ್ಮೆ ಸಂಪಾದಿಸಿದ್ದ ಪದವಿ ಪ್ರತಿಷ್ಠೆಗಳನ್ನು IS ಈಗ ಕಳೆದುಕೊಂಡಿದೆ”.
“ರಾಷ್ಟ್ರವಾದದ ಕುರಿತು ಆರೋಗ್ಯಕರ ಚರ್ಚೆಗಳನ್ನು ನಡೆಸಲು ಅವಕಾಶವಿದೆ. ರವೀಂದ್ರನಾಥರ ಇಂತಹುದೇ ಚರ್ಚೆಯನ್ನು ಆರಂಭಿಸಿದ್ದರು. ಮಾನವತಾವಾದ ಸರಿ ಮತ್ತು ರಾಷ್ಟ್ರವಾದ ತಪ್ಪು ಎಂಬುದು ಅವರ ನಿಲುವಾಗಿತ್ತು. ಆದರೆ ಭಾರತೀಯನೊಬ್ಬನು ಇಲ್ಲಿಯೇ ಹುಟ್ಟಿ, ಭಾರತೀಯನಾಗಿ ಬೆಳೆದ ನಂತರ ತನ್ನ ರಾಷ್ಟ್ರನಿಷ್ಠೆಯನ್ನು ರುಜುವಾತು ಮಾಡಬೇಕು ಎನ್ನುವುದು ಬೇರೆಯೇ ಸಂಗತಿ. ಹಲವು ಭಾಷೆಗಳು, ಹಲವು ಬಗೆಯ ಆಹಾರಪದ್ಧತಿಗಳು, ಹಲವು ರೀತಿಯ ಉಡುಗೆ-ತೊಡುಗೆಗಳು, ಸಾಂಸ್ಕೃತಿಕ ಹಿನ್ನೆಲೆಗಳು ನಮ್ಮ ದೇಶದ ಬಹುಮುಖೀ ಮತ್ತು ವೈವಿಧ್ಯ ಸ್ವರೂಪದ ಪ್ರತಿಬಿಂಬ. ನಿರಂತರ ಚಲಿಸುತ್ತಿರುವ ಸುಂದರ ಮತ್ತು ಸಂಕೀರ್ಣ ಸಮ್ಮಿತೀಯ ಮಾದರಿಯ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಮತ್ತು ಈ ಮಾದರಿಯೇ ದೇಶವನ್ನು ಒಟ್ಟಾಗಿಟ್ಟು ಮುನ್ನಡೆಸುತ್ತದೆಂಬುದು ಸಿದ್ಧವಾಗಿದೆ. ಈ ಮಾದರಿಯನ್ನು ಮೂಲೆಗೆಸೆದು ಏಕಶಿಲೆಯ ಏಕರೂಪಿ ಸಾಂಸ್ಕೃತಿಕ ಸಂರಚನೆಯನ್ನು ಆಹ್ವಾನಿಸುವುದು ವಿನಾಶವನ್ನು ಆಹ್ವಾನಿಸಿದಂತೆ”.

“ಸ್ವಾಯತ್ತಾಧಿಕಾರ ಹೊಂದಿದ್ದ ಹಲವು ಸಂಸ್ಥೆಗಳು ತಮ್ಮ ಸ್ವಾತಂತ್ರ್ಯವನ್ನು ಹುರುಪು-ಉತ್ಸಾಹದಿಂದ ಕಾಯ್ದುಕೊಂಡು ಬಂದಿದ್ದವು. ಈ ಸ್ವಾಯತ್ತಾಧಿಕಾರವೇ ಆಡಳಿತಕ್ಕೆ ಅಂಕುಶವಿಟ್ಟು ಸಮತೂಕ ಸಾಧನೆಗೆ ನೆರವಾಗಿತ್ತು. ಆದರೆ, ಒಂದರ ನಂತರ ಮತ್ತೊಂದು ರಾಜಿಯಾಗಬೇಕಾಯಿತು…”
“ಚುಟುಕಾಗಿ ಹೇಳಬೇಕೆಂದರೆ ಭಾರತೀಯ ರಾಜ್ಯಾಡಳಿತ ಕ್ರಮದ ಮೂಲ ನಿರ್ಮಿತಿಯನ್ನು ಪಕ್ಷಪಾತೀಯ ಕಾರ್ಯಸೂಚಿಯಾಗಿ ರೂಪಾಂತರಿಸಲು ತನ್ನ ಎಲ್ಲ ಶಕ್ತಿಯನ್ನು ಬಿಜೆಪಿ ಸರ್ಕಾರ ವಿನಿಯೋಗಿಸುತ್ತಿದೆ. ಪ್ರಧಾನಮಂತ್ರಿಯೇ ಅದರ ಟ್ರಂಪ್ ಕಾರ್ಡ್. ಪ್ರಧಾನಿಯ ಊರ್ಜೆಯನ್ನು, ಅವರ ವಾಕ್ಪಟುತ್ವವನ್ನು ಹಾಗೂ ಬಿಡುವೇ ಇಲ್ಲದ ಅವರ ನಿತ್ಯನಿರಂತರ ಚುನಾವಣಾ ಪ್ರಚಾರ ವೈಖರಿಯನ್ನು ಸರಿಗಟ್ಟುವವರು ಭಾರತದಲ್ಲಿ ಬೇರೆ ಯಾರೂ ಇಲ್ಲವಾಗಿದ್ದಾರೆ. ಭಟ್ಟಂಗಿತನವನ್ನು ಆಕರ್ಷಿಸುವ ಸಾಮರ್ಥ್ಯವೂ ಅವರದಾಗಿದೆ…. “
“This time the question is more complicated because religion is involved. So is nationalism in its new avatar. The rise of Hindutva has given a new emotional dimension to religion. It helped the BJP create some waves although, like all waves, they dissipated quickly. Dissipation happens because Hindutva activists resort to extreme steps that violate Indian sensibilities. Lynchings and whippings and killings in the name of religion repel more than they attract. The IS is an example. Islam’s concept of martyrdom was an attraction for over-enthusiastic youngsters to volunteer for suicide missions. But even in Muslim societies, IS lost the prestige it once had”.
“There can be healthy arguments over nationalism, like Ravindranath Tagore initiated with his notion that humanism was right and nationalism wrong. But it is something else when an Indian, born and brought up as an Indian, is asked to prove his bonafides as a nationalist. Diversity is the essence of this nation of many languages and diets and dress habits and cultural backgrounds. Unity in diversity is the ideal for such a kaleidoscopic nation. And it proved workable. To discard that in favour of a monolithic culture will be to invite disaster”.
“Many autonomous institutions had zealously preserved their independence to ensure checks and balances in governance. One by one these were compromised….. “
“In short the BJP Government has been focusing on a partisan agenda to transform the basic democratic structure of the Indian polity. Its trump card has been the personality of the prime minister. There is no one in India today to rival his energy, his oratory and his nonstop campaigning style. He also has a capacity to attract sycophancy….”
2019ರ ಮಾರ್ಚ್ 10ರ ಸೋಮವಾರದ ಅವರ ಅಂಕಣದ ಶೀರ್ಷಿಕೆ- THE DANGERS OF ISRAELISATION (ಇಸ್ರೇಲೀಕರಣದ ಅಪಾಯಗಳು).
“… ಜೈಶ್-ಎ-ಮಹಮ್ಮದ್ ನಂತಹ ಸಂಘಟನೆಗಳ ಚಾಲಕಶಕ್ತಿಯೇ ಆಗಿರುವ ಕಡುದ್ವೇಷಗಳು ಆಳವಾಗಿ ಬೇರು ಬಿಟ್ಟಿರುವಂತಹವು. ಅವು ಸುಲಭವಾಗಿ ತೊಲಗುವುದಿಲ್ಲ. ಇಂತಹ ದ್ವೇಷಗಳಿಗೆ ಹೋಲಿಸಬಹುದಾದ ದ್ವೇಷಗಳು ದುರದೃಷ್ಟವಶಾತ್ ಭಾರತೀಯ ಜನಸಂಖ್ಯೆಯ ಕೆಲ ವರ್ಗಗಳಲ್ಲೂ ತಲೆಯೆತ್ತಿವೆ. ಈ ವಾಸ್ತವವನ್ನು ಒಪ್ಪದೆ ಹೋದರೆ ನೈತಿಕವಾಗಿ ನಾವು ಪಾಕಿಸ್ತಾನಕ್ಕಿಂತ ಶ್ರೇಷ್ಠರು ಎಂದು ಹೇಳಿಕೊಳ್ಳುವ ಯಾವ ಹಕ್ಕೂ ನಮಗೆ ಇಲ್ಲ. ಪುಲ್ವಾಮದ ನಂತರ ಭಾರತದ ನಿಲುವುಗಳು ಹಲವು ಸವಾಲುಗಳನ್ನು ಹುಟ್ಟಿ ಹಾಕಿವೆ…”.
“… ದಶಕಗಳಿಂದ ಪ್ಯಾಲೆಸ್ತೀನೀಯರ ಅತಿಹತ್ಯೆಯಲ್ಲಿ ತೊಡಗಿದೆ ಇಸ್ರೇಲ್. ಆದರೂ ತನ್ನ ‘ಪ್ಯಾಲೆಸ್ತೀನ್ ಸಮಸ್ಯೆ’ಯನ್ನು ಬಿಡಿಸಿಕೊಳ್ಳಲು ವಿಫಲವಾಗಿದೆ. ಭಾರತವು ಇಸ್ರೇಲ್ ಕಾರ್ಯವೈಖರಿ ಕುರಿತು ಭಾರತದಲ್ಲಿ ಮೂಡಿರುವ ಹೊಸ ಮೆಚ್ಚುಗೆಯ ವಿಡಂಬನೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ ಎನ್ನುತ್ತಾರೆ ಜಾರ್ಜ್. ಭಾರತದಲ್ಲಿ ಇಸ್ರೇಲಿನ ಅತಿ ದೊಡ್ಡ ಪ್ರಶಂಸಕರು ‘ಇಂಟರ್ನೆಟ್ ಹಿಂದೂಗಳು’. ಪ್ಯಾಲೆಸ್ತೀನ್ ಮತ್ತು ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ವೈಖರಿಗಾಗಿ ಇಸ್ರೇಲನ್ನು ಪ್ರೀತಿಸುವವರಿವರು ಎಂಬ ಸಂಶೋಧಕಿ ಶೈರೀ ಮಲ್ಹೋತ್ರಾ ಅಭಿಪ್ರಾಯವನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾರೆ. ಪ್ಯಾಲೆಸ್ತೀನ್ ತಮ್ಮ ತಾಯಿನೆಲ ಎಂದು ಅದರ ಮೇಲೆ ಆಕ್ರಮಣ ಮಾಡಿ ಇಡೀ ದೇಶ ತಮ್ಮದೆಂದು ಸಾರಿರುವ ಯಹೂದಿವಾದಿ ರಾಷ್ಟ್ರವಾದವು (Zionist Nationalism), ಹಿಂದೂ ರಾಷ್ಟ್ರವಾದದೊಳಕ್ಕೆ ಜಿಗಣೆಯಂತೆ ಹೇಗೆ ತೂರಿಕೊಳ್ಳುವುದಿಲ್ಲ ನೋಡಬೇಕಿದೆ, ಅದೂ ಇಸ್ರೇಲ್ ಅಷ್ಡೊಂದು ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಪೂರೈಸುತ್ತಿರುವಾಗ?” ಎಂಬುದು ಜಾರ್ಜ್ ಮಾಡಿರುವ ಮತ್ತೊಂದು ಉಲ್ಲೇಖ (ಮಧ್ಯಪ್ರಾಚ್ಯ ವಿಶೇಷಜ್ಞ ರಾಬರ್ಟ್ ಫಿಸ್ಕ್).
ಈ ಅಂಕಣದಲ್ಲಿ ಅವರ ಕಟ್ಟಕಡೆಯ ವಾಕ್ಯ- ಯಾರಿಗೆ ಕಿವಿಗಳಿವೆಯೋ ಅವರು ಕೇಳಿಸಿಕೊಳ್ಳಲಿ (He who has ears to hear, let him hear).
ಅಸ್ಸಾಮಿನ ಹಿಮಂತ ಬಿಸ್ವ ಶರ್ಮ ಎಂಬ ಬಿಜೆಪಿ ಮುಖ್ಯಮಂತ್ರಿಯ ಮುಸ್ಲಿಮ್ ದ್ವೇಷದ ಅತಿರೇಕಗಳ ಕುರಿತು ಎಚ್ಚರಿಸಿದರು (Why Northeast Citizens Rebel, 04.02.2019). ಟೀಕೆ-ವಿಮರ್ಶೆ ಮಾಡುವವರನ್ನು ಬೆದರಿಸಿ ಅಟ್ಟಬಹುದೆಂದು ಬಗೆಯುವುದು ಮನುಷ್ಯನ ಸಣ್ಣತನ… ದಿ ಮೀಡಿಯಾ ವಾಚ್ ಡಾಗ್, ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆಗಳ ಪ್ರಕಾರ ಪತ್ರಕರ್ತನ ಪಾಲಿಗೆ ಭಾರತವು ವಿಶ್ವದಲ್ಲೇ ಐದನೆಯ ಅತಿ ಭಯಾನಕ ದೇಶವೆಂದವು. ತನ್ನನ್ನು ಟೀಕಿಸುವವರನ್ನು ದಸ್ತಗಿರಿ ಮಾಡುವ ಹಕ್ಕು ಕೂಡ ತನಗಿದೆಯೆಂದು ವಾದಿಸಿ ಅವರನ್ನು ಅನಕ್ಷರಸ್ಥರೆಂದು ಕರೆಯುತ್ತಾನೆ ರಾಜಕಾರಣಿ. ಒಂದೋ ರಾಜಕಾರಣಿ ಗೆಲ್ಲುತ್ತಾನೆ ಮತ್ತು ಟೀಕಿಸುವವರು ಸೋಲುತ್ತಾರೆ, ಇಲ್ಲವೇ ಟೀಕಿಸುವವರು ಸೋಲುತ್ತಾರೆ ಮತ್ತು ರಾಜಕಾರಣಿ ಗೆಲ್ಲುತ್ತಾನೆ ಎಂಬ ವಾಕ್ಯದೊಂದಿಗೆ ತಮ್ಮ ಅಂಕಣವೊಂದನ್ನು ಅಂತ್ಯಗೊಳಿಸಿದ್ದಾರೆ ಜಾರ್ಜ್. (When Midgets Hijack Democracy, 30.01.2019).
Claims Vs Facts in a New Year (07.01.2019) ಎಂಬ ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತು ಅವರು ಬರೆದಿದ್ದ ಮತ್ತೊಂದು ಅಂಕಣ ಏನು ಹೇಳುತ್ತದೆ?
… ವೈಫಲ್ಯಗಳ ಪಟ್ಟಿ ದೊಡ್ಡದಾಗುತ್ತಲೇ ಹೋಗತ್ತದೆ. ಯಾಕೆಂದರೆ ನಾಗರಿಕರನ್ನು ಮೋಸಗೊಳಿಸುವ ಹುನ್ನಾರಗಳಿಗೆ ಮುಸುಕು ಹೊದಿಸುವುದು ಸಾಧ್ಯವಿಲ್ಲ. ಕೋಟಿ ಉದ್ಯೋಗಗಳ ಭರವಸೆ ಈಡೇರಿಲ್ಲ, ಕೃಷಿ ಆದಾಯ ದುಪ್ಪಟ್ಟಾಗಿಸುವ ಆಶ್ವಾಸನೆ ಹಾಗೆಯೇ ಉಳಿದಿದೆ. ಹೊಸ ವರ್ಷಗಳು ಬಂದಿವೆ, ಸಂದು ಹೋಗಿವೆ, ಆದರೆ ಭಾರತ ಮುಂದಕ್ಕೆ ಅಲ್ಲ, ಹಿಂದಕ್ಕೆ ಚಲಿಸಿದೆ. ಚುನಾವಣಾ ಋತುವಿನಲ್ಲಿ ಹೊಸ ಆಶ್ವಾಸನೆಗಳ ಮಳೆಯನ್ನೇ ಕರೆಯಲಾಗುತ್ತದೆ. ಹ್ಯಾಪೀ ನ್ಯೂ ಇಯರ್ ಬಣ್ಣಗೆಟ್ಟಿದೆ. ಹ್ಯಾಪೀ ಓಲ್ಡ್ ಇಯರ್ಸ್ ಎಂದು ಅಭಿನಂದಿಸುವುದೇ ಹೆಚ್ಚು ಅರ್ಥಪೂರ್ಣ. (The listing of failures can go on because attempts to deceive citizens have not worked. Ten million jobs were promised, doubling of farm income promised….. India has gone backward, not forward despite the New Years that have come and gone. That reality will prevail even as new promises and new claims rain on us this election season. “Happy New Year” has lost its glamour. It’s more relevant to wish “Happy Old Years”).

ಹೌದು, ಜಾರ್ಜ್ ಅವರು ತಮ್ಮ ಅಂಕಣಗಳಲ್ಲಿ ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯನ್ನೂ ಕಟುವಾಗಿ ವಿಮರ್ಶಿಸಿದ್ದರು. ಕಾಂಗ್ರೆಸ್ ಪಕ್ಷವನ್ನು ಖಂಡತುಂಡವಾಗಿ ಟೀಕಿಸಿದ್ದರು. ಸೋನಿಯಾಗಾಂಧಿ ಅವರ ಅಳೀಮಯ್ಯ ರಾಬರ್ಟ್ ವಾಡ್ರಾ ಹೇಗೆ ಪ್ರಿಯಾಂಕಾ ಗಾಂಧಿ ಅವರ ಕೊರಳಿಗೆ ಕಟ್ಟಿದ ಒರಳುಕಲ್ಲಾಗಿ ಹೋಗಿದ್ದಾರೆಂದು ಬಣ್ಣಿಸಿದರು.
ಕಳೆದ 12 ವರ್ಷಗಳಿಂದ ದೇಶದ ಅಧಿಕಾರ ಹಿಡಿದಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಜೊತೆಗೆ ಜಾರ್ಜ್ ಅವರ ಕೋಮುವಾದ ವಿರೋಧ, ಹಿಂದುತ್ವದ ಖಂಡನೆ, ಮೋದಿ ಟೀಕೆಗಳನ್ನು ಪಕ್ಕಕ್ಕೆ ಸರಿಸಿ ಕೊಂಡಾಡಲಾಗುತ್ತಿದೆ. ಹೀಗಾಗಿಯೇ ಸದರಿ ಬರೆಹದಲ್ಲಿ ಈ ಅಂಶಗಳ ಕುರಿತ ಜಾರ್ಜ್ ನಿಲುವುಗಳಿಗೆ ಒತ್ತು ಕೊಡಬೇಕಾಯಿತು. ಸದ್ಯದ ಪರಿಸ್ಥಿತಿಯಲ್ಲಿ ದೇಶವನ್ನು ಕಾಡುತ್ತಿರುವ ಕಾಯಿಲೆಗಳಿವು ಎಂಬ ಕಾರಣಕ್ಕಾಗಿ ಈ ಅಂಶಗಳು ಹೆಚ್ಚು ಪ್ರಸ್ತುತ ಎನಿಸಿವೆ.
ಇದನ್ನೂ ಓದಿ ಕಳಚಿದ ’ಪತ್ರಿಕಾಧರ್ಮ’ದ ʻಭದ್ರ ಕೊಂಡಿʼ ಟಿ ಜೆ ಎಸ್ ಜಾರ್ಜ್
ಜಾರ್ಜ್ ಅವರನ್ನು ಬರಿದೇ ಗುಣಗಾನ ಮಾಡುತ್ತಿರುವ ನಾವು ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ನಮ್ಮ ನಮ್ಮ ಪತ್ರಿಕಾ ಉದ್ಯೋಗಗಳಲ್ಲಿ ಎಷ್ಟರಮಟ್ಟಿಗೆ ಪಾಲಿಸುತ್ತಿದ್ದೇವೆ ಎಂಬ ಕುರಿತು ತುಸುವಾದರೂ ಆತ್ಮನಿರೀಕ್ಷಣೆ ಮಾಡಿಕೊಂಡಿದ್ದೇವೆಯೇ? ಸಾವಿರಾರು ಕಟುಪ್ರಶ್ನೆಗಳ ಸರಮಾಲೆಯನ್ನೇ ತಮ್ಮ ಬರೆಹಗಳಲ್ಲಿ ಹೆಣೆದ ದಿಟ್ಟ ಪತ್ರಕರ್ತ ಜಾರ್ಜ್. ಅವರನ್ನು ಹಾಡಿ ಹರಸುವ ನಾವು ದೇಶವನ್ನು ಅಳುತ್ತಿರುವವರ ಕಣ್ಣಲ್ಲಿ ಕಣ್ಣಿಟ್ಟು ಕೆಲವು ಸರಳ ಪ್ರಶ್ನೆಗಳನ್ನಾದರೂ ಕೇಳಬಾರದೇ, ಕೇವಲ ನಿಸ್ತೇಜ ಪ್ರತಿಪಕ್ಷಗಳನ್ನು ಮಾತ್ರವೇ ಬೇಟೆಯಾಡುವ ಶೌರ್ಯ ಸಾಹಸಗಳನ್ನು ಪ್ರದರ್ಶಿಸಬೇಕೇ? ಧೀಮಂತ ದೈತ್ಯನೆಂದು ಹೊಗಳಿದರಷ್ಟೇ ಸಾಕೇ?
ಬಸವಣ್ಣನವರು ಹೇಳಿದಂತೆ ‘ಹೊಗಳಿಕೆಯ ಹೊನ್ನಶೂಲಕ್ಕೇರಿಸಿ’ ನೇತಾಡಿಸಿ ಮರೆತುಬಿಡಬೇಕೇ?

ಡಿ ಉಮಾಪತಿ
ಹಿರಿಯ ಪತ್ರಕರ್ತರು




