ಮಾರ್ಚ್ 1ರ ಕರಾಳ ಘಟನೆಯನ್ನು ಗಮನಿಸುವುದಾದರೆ, ಜೆರುಸಲೇಂನಿಂದ ಕೇವಲ 29 ಕಿ.ಮೀ ದೂರದಲ್ಲಿರುವ ಬೀಟ್ ಶೆಮೆಶ್ ನಗರದ ಸಿನಗಾಗ್ (ಯಹೂದಿಗಳ ಪ್ರಾರ್ಥನಾ ಮಂದಿರ) ಬಂಕರ್ ಮೇಲೆ ಇರಾನ್ ಕ್ಷಿಪಣಿ ನೇರವಾಗಿ ಅಪ್ಪಳಿಸಿ 9 ನಾಗರಿಕರು ಪ್ರಾಣ ಕಳೆದುಕೊಂಡರು. ಇದು ಇಸ್ರೇಲ್‌ನ ಭದ್ರತಾ ಕೋಟೆಯ ಮೇಲಿನ ಬಹುದೊಡ್ಡ ಪೆಟ್ಟಾಗಿದೆ. ಸುರಕ್ಷಿತ ಬಂಕರ್‌ನಲ್ಲಿದ್ದರೂ ಜನರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬುದು ಇಸ್ರೇಲ್‌ನ ಆತಂಕವನ್ನು ಇಮ್ಮಡಿಗೊಳಿಸಿದೆ
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಎಂದಿಗಿಂತಲೂ ದಟ್ಟವಾಗಿ ಆವರಿಸಿವೆ. ಫೆಬ್ರವರಿ 28, 2026 ರಂದು ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಆರಂಭಿಸಿದ ‘ಆಪರೇಷನ್ ಎಪಿಕ್ ಪ್ಯೂರಿ’(ಅಮೆರಿಕ) ಮತ್ತು ‘ಆಪರೇಷನ್ ರೋರಿಂಗ್ ಲಯನ್’(ಇಸ್ರೇಲ್) ಕಾರ್ಯಾಚರಣೆಗಳ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿವೆ. ಈ ಕಾರ್ಯಾಚರಣೆಯ ಆರಂಭದಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯಾಯಿತು. ಇದರ ಬೆನ್ನಲ್ಲೇ ರೊಚ್ಚಿಗೆದ್ದಿರುವ ಇರಾನ್, ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಸೇಡಿನ ಕ್ಷಿಪಣಿಗಳ ಮಳೆಯನ್ನೇ ಸುರಿಸುತ್ತಿದೆ. ಯಹೂದಿ ರಾಷ್ಟ್ರ ಇಸ್ರೇಲ್, ಇರಾನ್‌ನ ಈ ಅನಿರೀಕ್ಷಿತ ಹಾಗೂ ನಿರಂತರ ಪ್ರತಿದಾಳಿಗೆ ಅಕ್ಷರಶಃ ತತ್ತರಿಸಿದೆ.
ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿಯಾಗಿದೆ, ಅವರ ಜೀವಕ್ಕೆ ಕುತ್ತು ಬಂದಿದೆ ಎಂಬ ವರದಿಗಳು ಹಬ್ಬಿದ್ದವು. ಟೆಹ್ರಾನ್ ಕೂಡ ನೆತನ್ಯಹು ಕಚೇರಿಯನ್ನು ಗುರಿಯಾಗಿಸಿ ನಿಖರ ದಾಳಿ ನಡೆಸಿದ್ದಾಗಿ ಹೇಳಿಕೊಂಡಿತ್ತು. ಅಲ್ಲದೆ, ಲೆಬನಾನ್ ಹಿಜ್ಬುಲ್ಲಾ ಉಗ್ರರು ನೆತನ್ಯಾಹು ಅವರ ಸಿಸೇರಿಯಾ ನಿವಾಸದ ಬಳಿಯ ವಾಯುರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ನಡೆಸಿದ್ದರು. ಇದರಿಂದಾಗಿ ನೆತನ್ಯಾಹು ಬದುಕಿದ್ದಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆಗಳು ಜಾಗತಿಕ ಮಟ್ಟದಲ್ಲಿ ಎದ್ದಿದ್ದವು.
ಆದರೆ, ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಇಸ್ರೇಲ್ ಹೇಳಿಕೊಳ್ಳುತ್ತಿದೆ. ಅವರು ಕಣ್ಮರೆಯಾಗಿಲ್ಲ ಅಥವಾ ಅಧಿಕಾರ ಕಳೆದುಕೊಂಡಿಲ್ಲ. ಬದಲಾಗಿ, ಸಮರಭೂಮಿಯ ಮುಂಚೂಣಿಯಲ್ಲೇ ನಿಂತು ಮಾರ್ಗದರ್ಶನ ಮಾಡುತ್ತಿದ್ದಾರೆ ಅಲ್ಲಿನವರು ಮಾಹಿತಿ ನೀಡುತ್ತಿದ್ದಾರೆ. ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡುವುದು ಹಾಗೂ ಇರಾನ್ ಪರಮಾಣು ಕಾರ್ಯಕ್ರಮವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು ತಮ್ಮ ಪ್ರಮುಖ ಗುರಿ ಎಂದು ಇಸ್ರೇಲ್ ನಾಯಕರು ಸ್ಪಷ್ಟಪಡಿಸಿದ್ದಾರೆ. ಕೆಲವು ಸಮೀಕ್ಷೆಗಳ ಪ್ರಕಾರ ಶೇ. ಅರ್ಧದಷ್ಟು ಇಸ್ರೇಲಿಗರು ನೆತಾನ್ಯಹು ಇರಾನ್ ಮೇಲೆ ಕೈಗೊಂಡಿರುವ ಯುದ್ಧ ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ.
ತನ್ನ ಪರಮೋಚ್ಚ ನಾಯಕನ ಹತ್ಯೆಯ ಸೇಡು ತೀರಿಸಿಕೊಳ್ಳಲು ಇರಾನ್, ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ನೇತೃತ್ವದಲ್ಲಿ ಇಸ್ರೇಲ್ ಮೇಲೆ ಮುಗಿಬಿದ್ದಿದೆ. ಇಸ್ರೇಲ್‌ನ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಳಾದ ‘ಐರನ್ ಡೋಮ್’ ಮತ್ತು ‘ಆ್ಯರೋ’ಗಳನ್ನು ಭೇದಿಸಿ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಇಸ್ರೇಲ್ ನಗರಗಳ ಮೇಲೆ ಅಪ್ಪಳಿಸುತ್ತಿವೆ. ಈ ನಿರಂತರ ದಾಳಿಯಿಂದಾಗಿ ಇಸ್ರೇಲ್‌ನ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಿದೆ.
ಮಾರ್ಚ್ 1ರ ಕರಾಳ ಘಟನೆಯನ್ನು ಗಮನಿಸುವುದಾದರೆ, ಜೆರುಸಲೇಂನಿಂದ ಕೇವಲ 29 ಕಿ.ಮೀ ದೂರದಲ್ಲಿರುವ ಬೀಟ್ ಶೆಮೆಶ್ ನಗರದ ಸಿನಗಾಗ್ (ಯಹೂದಿಗಳ ಪ್ರಾರ್ಥನಾ ಮಂದಿರ) ಬಂಕರ್ ಮೇಲೆ ಇರಾನ್ ಕ್ಷಿಪಣಿ ನೇರವಾಗಿ ಅಪ್ಪಳಿಸಿ 9 ನಾಗರಿಕರು ಪ್ರಾಣ ಕಳೆದುಕೊಂಡರು. ಇದು ಇಸ್ರೇಲ್‌ನ ಭದ್ರತಾ ಕೋಟೆಯ ಮೇಲಿನ ಬಹುದೊಡ್ಡ ಪೆಟ್ಟಾಗಿದೆ. ಸುರಕ್ಷಿತ ಬಂಕರ್‌ನಲ್ಲಿದ್ದರೂ ಜನರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬುದು ಇಸ್ರೇಲ್‌ನ ಆತಂಕವನ್ನು ಇಮ್ಮಡಿಗೊಳಿಸಿದೆ.
ಇದನ್ನು ಓದಿದ್ದೀರಾ? ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು
ಇದಲ್ಲದೆ, ಟೆಲ್ ಅವಿವ್, ಹೋಲೋನ್, ಯೆಹೂದ್ ಮುಂತಾದ ನಗರಗಳ ಮೇಲೆ ನಿರಂತರ ದಾಳಿಗಳಾಗುತ್ತಿದ್ದು, ಇರಾನ್ ಕ್ಲಸ್ಟರ್ ಬಾಂಬ್‌ಗಳನ್ನು ಸಹ ಬಳಸುತ್ತಿದೆ. ಮಾರ್ಚ್ 9ರಂದು ಯೆಹೂದ್ ನಗರದಲ್ಲಿ ಕ್ಲಸ್ಟರ್ ಬಾಂಬ್ ಸಿಡಿತಲೆ ಹೊಂದಿದ್ದ ಕ್ಷಿಪಣಿ ದಾಳಿಗೆ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಇಸ್ರೇಲ್ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಇಸ್ರೇಲ್‌ನಲ್ಲಿ 17 ನಾಗರಿಕರು ಹಾಗೂ 2 ಸೈನಿಕರು ಮೃತಪಟ್ಟಿದ್ದು, 2,745ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಪಾಲ್ಮಾಚಿಮ್, ಓವ್ಡಾ ವಾಯುನೆಲೆಗಳ ಮೇಲೂ ತೀವ್ರ ದಾಳಿಯಾಗಿದೆ.
ಈ ಸಂಘರ್ಷದಲ್ಲಿ ಕೇವಲ ಇಸ್ರೇಲ್ ಮಾತ್ರವಲ್ಲ, ಇರಾನ್ ಮತ್ತು ಅಮೆರಿಕ ಕೂಡ ಭಾರೀ ಬೆಲೆ ತೆತ್ತಿವೆ. ಅಮೆರಿಕ-ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಗೆ ಇರಾನ್‌ನ 3,000ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿ ಹತರಾಗಿದ್ದಾರೆ. ಟೆಹ್ರಾನ್‌ನ ತೈಲ ಸಂಗ್ರಹಾಗಾರಗಳು, ಸೇನಾ ಅಕಾಡೆಮಿಗಳು, ಭೂಗತ ಕ್ಷಿಪಣಿ ನೆಲೆಗಳು ಸಂಪೂರ್ಣ ಧ್ವಂಸವಾಗಿವೆ ಹಾಗೂ 50ಕ್ಕೂ ಹೆಚ್ಚು ನೌಕಾ ಹಡಗುಗಳು ಮುಳುಗಡೆಯಾಗಿವೆ. ಇತ್ತ, ಅಮೆರಿಕದ 17ಕ್ಕೂ ಹೆಚ್ಚು ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದ್ದು, 9 ಅಮೆರಿಕನ್ ಸೈನಿಕರು ಹತರಾಗಿ 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇರಾನ್ ತನ್ನ ಪ್ರತಿದಾಳಿಯನ್ನು ಕೇವಲ ಇಸ್ರೇಲ್‌ಗೆ ಮಾತ್ರ ಸೀಮಿತಗೊಳಿಸದೆ, ಅಮೆರಿಕದ ಸೇನಾ ನೆಲೆಗಳಿರುವ ಯುಎಇ, ಬಹ್ರೇನ್, ಸೌದಿ ಅರೇಬಿಯಾ ಮತ್ತು ಕುವೈತ್‌ನಂತಹ ಗಲ್ಫ್ ರಾಷ್ಟ್ರಗಳ ಮೇಲೂ ವಿಸ್ತರಿಸಿದೆ. ಇದರಿಂದಾಗಿ ಜಾಗತಿಕ ವ್ಯಾಪಾರದ ಪ್ರಮುಖ ಕೊಂಡಿಯಾದ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ತೈಲ ಪೂರೈಕೆ ಸ್ಥಗಿತಗೊಂಡು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಗನಕ್ಕೇರಿದೆ. ಮಧ್ಯಪ್ರಾಚ್ಯದಾದ್ಯಂತ ವಿಮಾನ ಹಾರಾಟಗಳು ರದ್ದಾಗಿದ್ದು, ಲಕ್ಷಾಂತರ ಪ್ರಯಾಣಿಕರು ಅತಂತ್ರರಾಗಿದ್ದಾರೆ.
“ನೆತನ್ಯಾಹು ಇದಾರಾ, ಹೋದರಾ?” ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸ್ಪಷ್ಟವಾಗಿಲ್ಲ. ಯುದ್ಧ ಮಾತ್ರ ನಡೆಯುತ್ತಿದೆ. ಆದರೆ, ದಶಕಗಳಿಂದ ಇರಾನ್ ಪರಮಾಣು ಕಾರ್ಯಕ್ರಮವನ್ನು ಹತ್ತಿಕ್ಕುವ ಇಸ್ರೇಲ್‌ನ ಆಕಾಂಕ್ಷೆ ಈಗ ಪೂರ್ಣಪ್ರಮಾಣದ ಪ್ರಾದೇಶಿಕ ಯುದ್ಧವಾಗಿ ಮಾರ್ಪಟ್ಟಿದೆ. ಇಸ್ರೇಲ್ ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಿದ್ದರೂ, ಇರಾನ್‌ನ ನಿರಂತರ ಕ್ಷಿಪಣಿ ಮಳೆಯಿಂದಾಗಿ ದಿನನಿತ್ಯದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ಭೀಕರ ಸಂಘರ್ಷ ಇಡೀ ವಿಶ್ವದ ಆರ್ಥಿಕತೆಯ ಮೇಲೆಯೇ ಕರಿನೆರಳು ಬೀರಿದೆ.





