ಭೈರಪ್ಪ ಅವರು ಜಾತಿವಾದಿ ಹೌದೋ-ಅಲ್ಲವೋ ಎಂಬುದನ್ನು ಅವರು ಪ್ರತಿಪಾದಿಸುವ ಹಿಂದುತ್ವ ವಿಚಾರದಿಂದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅವರ ಸಾಮಾಜಿಕ ಸಂಬಂಧಗಳು, ಅವರ ನಡೆ ನುಡಿ ಎಲ್ಲವೂ ಅದಕ್ಕೆ ಪೂರಕವಾಗಿರಬೇಕಾಗುತ್ತದೆ.
ಕನ್ನಡದ ಜನಪ್ರಿಯ ಕಾದಂಬರಿಕಾರರಾದ ಎಸ್.ಎಲ್ ಭೈರಪ್ಪನವರು ನಿಧನರಾಗಿದ್ದಾರೆ. ಅವರಿಗೆ ಗೌರವಪೂರ್ವಕ ವಿದಾಯ.
ಅಭಿಮಾನಿಗಳು ಅವರನ್ನು ಚಿಂತಕ ಮತ್ತು ತತ್ವಜ್ಞಾನಿ ಎಂದು ಕರೆಯುವುದೂ ಉಂಟು. ಅವರೊಬ್ಬ ಹಿಂದುತ್ವ ಪ್ರತಿಪಾದಕರಾಗಿದ್ದುದರಿಂದ ಜಾತಿವಾದಿಯಲ್ಲ ಎಂದು ಅನೇಕರು ವಾದಿಸುತ್ತಾರೆ. ಬ್ರಾಹ್ಮಣ ಪಕ್ಷಪಾತಿಯಂತೂ ಖಂಡಿತ ಅಲ್ಲ ಎಂದು ನಂಬಿದ್ದಾರೆ. ಭೈರಪ್ಪನವರು ತಾನೊಬ್ಬ ಹಿಂದು ಎಂದು ಹೇಳಿಕೊಂಡು ತನ್ನ ಜಾತಿಯ ಗುರುತನ್ನು ಬಿಟ್ಟುಕೊಟ್ಟಿದ್ದಾರೆಯೇ? ಅವರು ಬ್ರಾಹ್ಮಣರೋ ಅಥವಾ ಹಿಂದುವೋ ಎಂಬ ಪ್ರಶ್ನೆಗಳು ಏಳುತ್ತವೆ.
ಸಾಮಾಜಿಕ ಸಂಬಂಧಗಳಲ್ಲಿ ಬಹಳ ಮುಖ್ಯವಾದುದು ಗೆಳೆತನ. ಗೆಳೆತನವನ್ನು ಕುರಿತು ಸಾಕಷ್ಟು ಸಮಾಜಶಾಸ್ತ್ರೀಯ ಸಂಶೋಧನೆಗಳು ನಡೆದಿವೆ. ಅರಿಸ್ಟಾಟಲ್‌ನಿಂದ ಹಿಡಿದು ಡಾರಿಡಾವರೆಗೆ ‘ಗೆಳೆತನ’ದ ಕುರಿತು ತಾತ್ವಿಕ ಜಿಜ್ಞಾಸೆ ನಡೆದಿದೆ. ಡಾರಿಡಾ ಅವರು ‘ಪಾಲಿಟಿಕ್ಸ್ ಆಫ್ ಫ್ರೆಂಡ್‌ಶಿಪ್’ ಎಂಬ ಕೃತಿಯಲ್ಲಿ ಗೆಳೆತನ ಉಂಟಾಗುವ, ರೂಪುಗೊಳ್ಳುವ, ಬೆಳೆಯುವ, ಅಳಿಯುವ ಮತ್ತು ಉಳಿಯುವ ಸಂಕೀರ್ಣ ಪ್ರಕ್ರಿಯೆಗಳನ್ನು ತಾತ್ವಿಕವಾಗಿ ವಿವರಿಸಿದ್ದಾರೆ. ಭಾರತದಲ್ಲಿ ಕೂಡ ಗೆಳೆತನವನ್ನು ಕುರಿತು ಸಂಶೋಧನಾತ್ಮಕ ಲೇಖನಗಳು ಬಂದಿವೆ.
ಡಿ. ಶಾಮ್‌ಬಾಬು ಮತ್ತು ಆರ್.ಎಸ್ ಖಾರೆಯವರು ಕ್ಯಾಸ್ಟ್ ಇನ್ ಲೈಫ್ ಎಕ್ಸ್‌ಪೀರಿಯೆನ್ಸಿಂಗ್ ಇನಿಕ್ವಾಲಿಟಿಸ್ ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ. ಅದರಲ್ಲಿ ಅನೇಕ ಸಮಾಜವಿಜ್ಞಾನಿಗಳು, ಸೃಜನಶೀಲ ಲೇಖಕರು ಮತ್ತು ಸಮಾಜಶಾಸ್ತ್ರಜ್ಞರು ಜಾತಿಗೂ ಮತ್ತು ಗೆಳೆತನಕ್ಕೂ ಇರುವ ಸಂಬಂಧವನ್ನು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡದ ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ಜಾತಿವಾದಿ ಹೌದೋ – ಅಲ್ಲವೋ ಎಂಬುದನ್ನು ಪರಿಶೀಲಿಸಬಹುದು.
ಸಮಾಜಶಾಸ್ತ್ರಜ್ಞರು ಸಾಮಾಜಿಕ ಸಂಬಂಧಗಳನ್ನು ಅಧ್ಯಯನ ಮಾಡುವಾಗ ವಿವಿಧ ಆಕರಗಳನ್ನು ಬಳಸುತ್ತಾರೆ. ಇಬ್ಬರು ವ್ಯಕ್ತಿಗಳು ಎಷ್ಟು ಹೊತ್ತು ಸಮಯ ಕಳೆಯುತ್ತಾರೆ. ಅವರ ನಡುವೆ ನಡೆಯುವ ಸಂವಾದ ಯಾವ ಬಗೆಯದು, ಪರಸ್ಪರ ಲಾಭ ನಷ್ಟದ ವ್ಯವಹಾರ, ಔದಾರ್ಯ ಮತ್ತು ಕ್ಷಮೆಯಂಥ ಭಾವನೆಗಳ ಪ್ರಕಟಗೊಳಿಸುವ ಸಂದರ್ಭ, ಜೊತೆಗೆ ಪಿಯರಿ ಬೋರ್ದ್ಯ ಹೇಳುವ ಸಾಮಾಜಿಕ ಬಂಡವಾಳ, ಸಾಂಸ್ಕೃತಿಕ ಬಂಡವಾಳ, ಸಾಂಕೇತಿಕ ಬಂಡವಾಳ ಗೆಳೆತನದ ನಡುವೆ ವಿನಿಮಯವಾಗುವ ವಿಧಾನವನ್ನು ಗ್ರಹಿಸಲು ಪ್ರಯತ್ನಿಸುತ್ತಾರೆ.
ಭೈರಪ್ಪನವರು ಜಾತಿವಾದಿ ಹೌದೋ ಅಲ್ಲವೋ ಎಂದು ಪರಿಶೀಲಿಸಲು ಮೇಲಿನ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಅವರು ಜಾತಿವಾದಿ ಅಲ್ಲ ಎಂಬುದನ್ನು ಅವರು ಪ್ರತಿಪಾದಿಸುವ ಹಿಂದುತ್ವ ವಿಚಾರದಿಂದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅವರ ಸಾಮಾಜಿಕ ಸಂಬಂಧಗಳು, ಅವರ ನಡೆ ನುಡಿ ಎಲ್ಲವೂ ಅದಕ್ಕೆ ಪೂರಕವಾಗಿರಬೇಕಾಗುತ್ತದೆ.

ಭೈರಪ್ಪನವರು ತಮ್ಮ ಸುದೀರ್ಘ 94 ವರ್ಷಗಳ ಅವಧಿಯಲ್ಲಿ ತಮ್ಮ ಕುಟುಂಬವನ್ನು ಹೊರತುಪಡಿಸಿ ಯಾರ ಜೊತೆ ಹೆಚ್ಚಿನ ಸಾಮಾಜಿಕ ಸಂಬಂಧಗಳನ್ನು ಹೊಂದಿದ್ದರು ಎಂಬುದರ ಆಧಾರದ ಮೇಲೆ ಅವರು ಜಾತಿವಾದಿಯೋ ಅಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಭಾರತದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಜಾತಿವಾದಿಯಾಗದೆ ಇರಲು ಬಹಳ ಕಷ್ಟವಾಗುತ್ತದೆ. ತನ್ನ ಜಾತಿಯ ಬಗೆಗಿನ ಹೆಮ್ಮೆಯೇ ಜಾತಿವಾದವಾಗಿರುತ್ತದೆ. ಜಾತಿಯು ಒಳಬಾಂಧವ್ಯ ವ್ಯವಸ್ಥೆಯಾಗಿರುವುದರಿಂದ ಅದು ವ್ಯಕ್ತಿಯ ಸಾಮಾಜಿಕ ಸಂಬಂಧಗಳನ್ನು ನಿಯಂತ್ರಿಸುತ್ತಿರುತ್ತದೆ. ಮಡಿ, ಮೈಲಿಗೆ, ಶುದ್ಧ-ಅಶುದ್ಧ, ಮಾಂಸಾಹಾರ, ಸಸ್ಯಾಹಾರ ಮೊದಲಾದ ಅಂಶಗಳು ವ್ಯಕ್ತಿಯನ್ನು ತನ್ನ ಜಾತಿಯಲ್ಲೇ ಇರುವಂತೆ ನಿರ್ಬಂಧಿಸುತ್ತವೆ.
ಇವುಗಳನ್ನು ಮೀರಿ ಮತ್ತೊಬ್ಬರ ಜೊತೆಗೆ ಸಾಮಾಜಿಕ ಸಂಬಂಧಗಳನ್ನು ಸಮಾನ ಗೌರವದ ನೆಲೆಯಲ್ಲಿ ಸ್ಥಾಪಿಸಿಕೊಂಡ ವ್ಯಕ್ತಿ ಧೈರ್ಯವಾಗಿ ತಾನು ಜಾತಿವಾದಿಯಲ್ಲ ಎಂದು ನಿರೂಪಿಸಿಕೊಳ್ಳಬಹುದು. ಭೈರಪ್ಪನವರೂ ಜಾತಿವಾದಿಯಲ್ಲ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬಹುದು. ಇಲ್ಲಿ ಭೈರಪ್ಪನವರ ಸಾಹಿತ್ಯದ ಯಾವ ಅಂಶವನ್ನೂ ಪರಿಗಣಿಸದೆ ಕೇವಲ ಅವರು ಏರ್ಪಡಿಸಿಕೊಂಡ ಸಾಮಾಜಿಕ ಸಂಬಂಧಗಳನ್ನು ಕುರಿತು ವಿಶ್ಲೇಷಿಸಬಹುದು.
ಈ ಲೇಖನ ಓದಿದ್ದೀರಾ?: ಭೈರಪ್ಪ- ‘ಗೃಹಭಂಗ’ ದಿಂದ ‘ಉತ್ತರಕಾಂಡ’ದವರೆಗೆ
ಅವರು ಮದುವೆಯಾಗಿದ್ದು ತನ್ನದೇ ಬ್ರಾಹ್ಮಣ ಜಾತಿಯ ಸರಸ್ವತಿಯವರನ್ನು. ಏಕೆಂದರೆ ಜಾತಿ ಪದ್ಧತಿಯನ್ನು ಮೀರುವುದರಲ್ಲಿ ಪ್ರಮುಖ ಅಂಶವೇ ಅಂತರ್ಜಾತಿ ವಿವಾಹ. ಆಗಿನ ಯುವಕರು ಮತ್ತು ಅಸಹಾಯಕರು ಆಗಿದ್ದ ಭೈರಪ್ಪನವರು ಅದನ್ನು ಮೀರುವಷ್ಟು ಧೈರ್ಯ ತೋರದೆ ಇರುವುದು ಸಹಜವೆಂದು ಭಾವಿಸಬಹುದು. ಆದರೆ ಅವರು ಮುಂದೆ ಏರ್ಪಡಿಸಿಕೊಂಡ ಗೆಳೆತನ ಎಂದು ಕರೆಯಲಾಗುವ ಸಾಮಾಜಿಕ ಸಂಬಂಧಗಳನ್ನು ನೋಡಬಹುದು.
ಭೈರಪ್ಪನವರು ಒಟ್ಟು 24 ಕಾದಂಬರಿಗಳನ್ನು ಬರೆದಿದ್ದಾರೆ. ಅವರ 24 ಕಾದಂಬರಿಗಳನ್ನು ಪ್ರಕಟಿಸಿರುವುದು ಸಾಹಿತ್ಯ ಭಂಡಾರ ಎನ್ನುವ ಪ್ರಕಾಶನ ಸಂಸ್ಥೆ. ಇದನ್ನು ಸ್ಥಾಪಿಸಿದ ಮಂಗಳೂರು ಮೂಲದ ಗೋವಿಂದ ರಾವ್ ಬ್ರಾಹ್ಮಣರು. ತಮ್ಮ 24 ಕಾದಂಬರಿಗಳ ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ತನ್ನ ಜಾತಿಯ ವ್ಯಕ್ತಿಯೊಬ್ಬರು ನಿರ್ವಹಿಸುವಂತೆ ಭೈರಪ್ಪನವರು ನೋಡಿಕೊಂಡರು. ಜನಪ್ರಿಯ ಕಾದಂಬರಿಕಾರರಾಗಿದ್ದರಿಂದ ಅವರ ಕಾದಂಬರಿಗಳಿಗೆ ಸಿನಿಮಾ ಕ್ಷೇತ್ರದಿಂದ ಅಪಾರ ಬೇಡಿಕೆ ಇತ್ತು. ಅವರ ನಾಲ್ಕು ಕಾದಂಬರಿಗಳು ಸಿನಿಮಾಗಳಾದವು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಮತ್ತು ನಾಯಿನೆರಳು, ವಂಶವೃಕ್ಷ ಚಲನಚಿತ್ರ ಮಾಡುವ ಮತ್ತು ನಿರ್ದೇಶಿಸುವ ಹಕ್ಕನ್ನು ಗಿರೀಶ್ ಕಾರ್ನಾಡ್ ಅವರಿಗೆ ನೀಡಿದರು. ತಬ್ಬಲಿಯು ನೀನಾದೆ ಮಗನೆ ನಿರ್ದೇಶಕರು ಬಿ.ವಿ. ಕಾರಂತ ಮತ್ತು ಗಿರೀಶ್ ಕಾರ್ನಾಡ್, ನಾಯಿ ನೆರಳನ್ನು ಗಿರೀಶ್ ಕಾಸರವಳ್ಳಿ ಮತ್ತು ಮತದಾನದ ನಿರ್ದೇಶನವನ್ನು ಮಾಡಿದವರು ಟಿ.ಎನ್. ಸೀತಾರಾಂ. ಅವರ ನಾಲ್ಕು ಕಾದಂಬರಿಗಳನ್ನು ಸಿನಿಮಾ ಮಾಡುವ ಹಕ್ಕನ್ನು ಬ್ರಾಹ್ಮಣ ನಿರ್ದೇಶಕರಿಗೆ ಮಾತ್ರ ನೀಡಿದ್ದಾರೆ. ಇತರರು ಹಕ್ಕುಗಳನ್ನು ಕೇಳಿದಾಗ ನಿರಾಕರಿಸಿದ್ದಾರೆ.

ಎಸ್. ಭಗವಾನ್‌ರವರು ಡಾ. ರಾಜ್ ಕುಮಾರ್‌ರವರಿಗಾಗಿ ಸಿನಿಮಾ ನಿರ್ದೇಶಿಸಲು ಕಾದಂಬರಿಯೊಂದರ ಹಕ್ಕನ್ನು ಕೇಳಿದಾಗ ಅವನೊಬ್ಬ ಆಕ್ಟರ್ ಏನ್ರಿ? ಎಂದು ಹೇಳಿದ್ದನ್ನು ಸ್ವತಃ ಭಗವಾನ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ. ರಾಜ್‌ಕುಮಾರ್ ಅವರು ಒಳ್ಳೆಯ ನಟರೋ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಹಕ್ಕು ಭೈರಪ್ಪನವರಿಗೆ ಇದೆ. ಆದರೆ ಅದನ್ನು ವ್ಯಕ್ತಪಡಿಸುವ ವಿಧಾನದಲ್ಲಿ ನಿಶ್ಚಿತವಾಗಿಯೂ ಜಾತಿಯ ಉದ್ಧಟತನವಿದೆ.
ಭೈರಪ್ಪನವರ ಪರ್ವ ಕಾದಂಬರಿಯನ್ನು ಹಿಂದಿಯಲ್ಲಿ ಚಲನಚಿತ್ರ ಮಾಡಲು ವಿವೇಕ್ ಅಗ್ನಿಹೋತ್ರಿ ಎಂಬ ಉತ್ತರ ಭಾರತದ ಬ್ರಾಹ್ಮಣ ನಿರ್ದೇಶಕರಿಗೆ ನೀಡಿದ್ದಾರೆ. ಕಾಶ್ಮೀರಿ ಫೈಲ್ಸ್ ಎಂಬ ಮುಸ್ಲಿಮ್ ವಿರೋಧಿ ಚಲನಚಿತ್ರವನ್ನು ಮಾಡಿದವರು. ಪರ್ವ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಲು ಕನ್ನಡದ ಖ್ಯಾತ ರಂಗನಟ ಪ್ರಕಾಶ್ ಬೆಳವಾಡಿಯವರಿಗೆ ಒಪ್ಪಿಗೆ ನೀಡಿದರು. ಪ್ರಕಾಶ್ ಬೆಳವಾಡಿಯವರು ಕರ್ನಾಟಕ ಸಿನಿಮಾ ವಲಯದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು.

ಭೈರಪ್ಪನವರನ್ನು ಕುರಿತ ಸಾಕ್ಷ್ಯಚಿತ್ರವನ್ನು ಕನ್ನಡದ ಸಾಕ್ಷ್ಯ ಚಿತ್ರ ನಿರ್ದೇಶಕರಲ್ಲಿ ಪ್ರಮುಖರಾದ, ಬ್ರಾಹ್ಮಣರಾದ ಪಿ. ಶೇಷಾದ್ರಿ ಎಂಬ ನಿರ್ದೇಶಕರು ನಿರ್ದೇಶಿಸಿದ್ದಾರೆ. ಭೈರಪ್ಪನವರಿಗೆ ಅವರ ಪತ್ನಿ ಸರಸ್ವತಿಯವರು ಹೇಳುವಂತೆ ಗುಜರಾತಿನಲ್ಲಿದ್ದಾಗ ಕರ್ನಾಟಕದ ಇಬ್ಬರು ಆತ್ಮೀಯ ಸ್ನೇಹಿತರಿದ್ದರು. ಎಂ.ಎಸ್.ಕೆ. ಪ್ರಭು ಮತ್ತು ಬಾಲಸುಬ್ರಮಣ್ಯಂ, ಎಂ.ಎಸ್.ಕೆ. ಪ್ರಭು ಅವರ ಪೂರ್ತಿ ಹೆಸರು ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು. ಆಕಾಶವಾಣಿಯಲ್ಲಿ ಕಾರ್ಯಕ್ರಮದ ಅಧಿಕಾರಿಯಾಗಿದ್ದ ಅವರು ಉತ್ತಮ ಲೇಖಕರೂ ಹೌದು. ಅನುವಾದ, ನಾಟಕ, ಕಥಾ ಸಂಕಲನ ಮೊದಲಾದವುಗಳನ್ನು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದಿರುವ ಎಂ.ಎಸ್.ಕೆ. ಪ್ರಭು ಅವರನ್ನು ಭೈರಪ್ಪ ಗಾಢವಾಗಿ ನಂಬಿದ್ದರು. ಭೈರಪ್ಪನವರು ಬರೆದ ಪ್ರತಿ ಕಾದಂಬರಿಯ ಕರಡು ಪ್ರತಿಯನ್ನು ಮೊದಲು ಪ್ರಭು ಅವರು ಓದುತ್ತಿದ್ದರು. ಅವರ ಮತ್ತೊಬ್ಬ ಸ್ನೇಹಿತ ಬಾಲಸುಬ್ರಮಣ್ಯಂ. ಬಾಲಸುಬ್ರಮಣ್ಯಂ ಮತ್ತು ಎಂ.ಎಸ್.ಕೆ. ಪ್ರಭು ಇಬ್ಬರೂ ಬ್ರಾಹ್ಮಣ ಜಾತಿಗೆ ಸೇರಿದವರು.
ಏಕಾಂತವನ್ನು ಬಯಸುತ್ತಿದ್ದ ಭೈರಪ್ಪನವರು ಹೆಚ್ಚು ಸ್ನೇಹಿತರನ್ನು ಹೊಂದಿರಲಿಲ್ಲ. ಅವರು ಕೆಲವೇ ಕೆಲವು ಸ್ನೇಹಿತರನ್ನು ಮಾತ್ರ ಹೊಂದಿದ್ದರು ಎಂದು ಅವರ ಹೆಂಡತಿ ಬರೆಯುತ್ತಾರೆ. ಶೇಖರ್ ಎನ್ನುವ ಚಾರ್ಟರ್ಡ್ ಅಕೌಂಟೆಂಟ್ ಅವರ ಮಕ್ಕಳ ಮೂಲಕ ಅವರಿಗೆ ಆತ್ಮೀಯರಾಗಿದ್ದರು. ಬ್ರಾಹ್ಮಣರಾದ ಶೇಖರ್ ರವರು ಅವರ ಕಡೆಯ ದಿನಗಳವರೆಗೆ ಅವರ ಆಗುಹೋಗುಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು.
ಎಸ್.ಎಲ್. ಭೈರಪ್ಪನವರು ಕಳೆದ ಅನೇಕ ವರ್ಷಗಳಿಂದ ಸಹನಾ ವಿಜಯಕುಮಾರ್ ಎಂಬ ಮಹಿಳೆಯೊಬ್ಬರನ್ನು ಮಗಳಂತೆ ಸ್ವೀಕರಿಸಿ ಕಾದಂಬರಿಕಾರ್ತಿಯನ್ನಾಗಿ ರೂಪಿಸಿದ್ದರು. ಬ್ರಾಹ್ಮಣರಾದ ಸಹನಾ ವಿಜಯಕುಮಾರ್ ಅವರು ಐ.ಟಿ. ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದರು. ಭೈರಪ್ಪನವರ ಬರಹಗಳನ್ನು ಮೆಚ್ಚಿ ಅವರ ಅಭಿಮಾನಿಯಾಗಿ ನಂತರ ಶಿಷ್ಯ ವೃತ್ತಿಯನ್ನು ಸ್ವೀಕರಿಸಿದರು. ಅವರ ಮಾರ್ಗದರ್ಶನದಲ್ಲಿ ಕಶೀರ, ಮಾಗಧ ಮೊದಲಾದ ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗುತ್ತಿದ್ದಾರೆ. ಅವರ ಕಾದಂಬರಿಗಳನ್ನು ಕುರಿತು ಅನೇಕ ಕಡೆ ಸಂವಾದ ಮತ್ತು ಚರ್ಚೆಗಳು ಜರುಗಿವೆ. ಆ ಚರ್ಚೆಗಳಲ್ಲಿ ಕರಪತ್ರಗಳು ಹೇಳುವ ಪ್ರಕಾರ ಭಾಗವಹಿಸಿರುವ ವ್ಯಕ್ತಿಗಳು ಚಂದ್ರಶೇಖರ ದಾಮಲೆ, ಅರ್ಚನಾ ಆರ್ಯ, ರೋಹಿತ್ ಚಕ್ರವರ್ತಿ, ಅರವಿಂದ ಚೊಕ್ಕಾಡಿ, ಅಶ್ವಿನಿ ದೇಸಾಯಿ, ಡಾ. ಜಿ.ಬಿ. ಹರೀಶ, ಡಾ. ನಿರಂಜನ ವಾನಳ್ಳಿ ಮುಂತಾದವರು. ಅವರೆಲ್ಲರೂ ಬ್ರಾಹ್ಮಣ ಜಾತಿಗೆ ಸೇರಿದವರು. ಭೈರಪ್ಪನವರೊಂದಿಗೆ ಅನೇಕ ಸಂವಾದಗಳನ್ನು ನಡೆಸಿಕೊಟ್ಟಿದ್ದಾರೆ. ಆ ಸಂವಾದಗಳಲ್ಲಿ ಬೇರೆ ಜಾತಿಯವರಿಗೆ ಸ್ಥಳ ನೀಡಿದ್ದರೆ ಸ್ವಾಗತಕಾರರಾಗಿ ಅಥವಾ ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ. ಆದರೆ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಕಾಶ್ ಬೆಳವಾಡಿ, ಅಂಜಲಿ ಜೋಶಿ, ಡಾ. ಉಮಾ ಕುಲಕರ್ಣಿ ಮೊದಲಾದ ಬ್ರಾಹ್ಮಣ ಪುರುಷ ಮತ್ತು ಮಹಿಳೆಯರು ಭಾಗವಹಿಸಿದ್ದಾರೆ. ಭೈರಪ್ಪನವರ ಕೃತಿಗಳನ್ನು ವಿಶೇಷವಾಗಿ ಮೌಲ್ಯಮಾಪನ ಮಾಡಿದವರಲ್ಲಿ ಶತಾವಧಾನಿ ಗಣೇಶ್ ಪ್ರಮುಖರು.

ಸಹನಾ ಅವರ ಮಾಗಧ ಕಾದಂಬರಿಯನ್ನು ಲೋಕಾರ್ಪಣ ಮಾಡಿದವರು ಅಜ್ಜಕ್ಕಳ ಗಿರೀಶ್ ಭಟ್ಟರು. ಅದರ ವಿಶ್ಲೇಷಣೆ ಮತ್ತು ಸಂವಾದ ನಡೆಸಿದವರು ಯಾ.ರು. ಪಾಟೀಲ, ರೂಪಾ ಜೋಶಿ ಮತ್ತು ಸರಸ್ವತಿ ಬೋಸ್ಲೇಯವರು. ಈ ಬ್ರಾಹ್ಮಣ ವ್ಯಕ್ತಿಗಳೆಲ್ಲರೂ ಸಂಪನ್ಮೂಲ ವ್ಯಕ್ತಿಗಳು. ಇನ್ನುಳಿದವರು ಉಪಸ್ಥಿತಿ, ಸ್ವಾಗತ ಭಾಷಣಕ್ಕೆ ಮೀಸಲಾದವರು. ಮಾಗಧ ಕಾದಂಬರಿಯನ್ನು ಬಿಡುಗಡೆ ಮಾಡಿದವರು ಎನ್.ಎಸ್. ಸೇತುರಾಮ್, ಸಹನಾ ಅವರ ಇನ್ಸ್ಟಾಗ್ರಾಮ್ ಪ್ರಕಾರ ಸಪ್ನ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಮಳಿಗೆ ಪಟ್ಟಾಂಗ ಏರ್ಪಡಿಸಲಾಗಿತ್ತು. ಆ ಪಟ್ಟಾಂಗದಲ್ಲಿ ಭಾಗವಹಿಸಿದವರು ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾದ ಹಿರೋಯಿನ್ ಶ್ವೇತ ಶ್ರೀವಾತ್ಸವ್, ಸಹನಾ ವಿಜಯಕುಮಾರ್, ಎಂ.ಆರ್. ದತ್ತಾತ್ರಿ ಎಂಬ ಲೇಖಕರು ಖ್ಯಾತ ಕತೆ ಮತ್ತು ಕಾದಂಬರಿಕಾರ ವಸುಧೇಂದ್ರ, ಪತ್ರಕರ್ತ ಮತ್ತು ಲೇಖಕ ಜೋಗಿ, ಇವರೆಲ್ಲರೂ ಬ್ರಾಹ್ಮಣರೇ. ಮಾಗಧ ಲೋಕಾರ್ಪಣ ಕಾರ್ಯಕ್ರಮದಲ್ಲಿ ಶತಾವಧಾನಿ ಆರ್. ಗಣೇಶ್, ಡಾ. ಗಜಾನನ ಶರ್ಮಾ, ಶ್ರೀ ಪ್ರಕಾಶ್ ಬೆಳವಾಡಿ, ಶ್ರೀ ಎಸ್.ಎಲ್.ಭೈರಪ್ಪ ಮತ್ತು ಪ್ರಧಾನ್ ಗುರುದತ್. ಮತ್ತೆ ಬ್ರಾಹ್ಮಣರು ಎಂದು ಹೇಳಲು ಸಂಕೋಚವಾದರೂ ಇವರು ಬ್ರಾಹ್ಮಣರೇ ಎಂದು ಹೇಳಬೇಕಾಗುತ್ತದೆ.
ಈ ಲೇಖನ ಓದಿದ್ದೀರಾ?: ಭೈರಪ್ಪ ಮತ್ತು ಕುತರ್ಕದ ಉರುಳು
ಜೂನ್ 14, 2025ರಂದು ಎಸ್.ಎಲ್. ಭೈರಪ್ಪ ಅವರ ಧ್ಯೇಯೋದ್ದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಸ್.ಎಲ್. ಭೈರಪ್ಪ ಪ್ರತಿಷ್ಠಾನ ಉದ್ಘಾಟನೆಯಾಯಿತು. ಕಾರ್ಯಕ್ರಮದಲ್ಲಿ ಬ್ರಾಹ್ಮಣೇತರರು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಿದ್ದರು. ಅವರನ್ನು ಹೊರತುಪಡಿಸಿದರೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಎಸ್.ಎಲ್. ಭೈರಪ್ಪನವರು, ಸಹನಾ ವಿಜಯಕುಮಾರ್, ಕೃಷ್ಣ ಪ್ರಸಾದ್ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಅಂದರೆ ಸಾಹಿತ್ಯ ಭಂಡಾರದ ಅರುಣಾ ಅವರು ಭಾಗವಹಿಸಿದ್ದರು. ಶತಾವಧಾನಿ ಡಾ. ರಾ. ಗಣೇಶ್ ನಿರೂಪಕರಾಗಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷರು ತೇಜಸ್ವಿನಿ ಅನಂತಕುಮಾರ್, ಖಜಾಂಚಿ ಕೃಷ್ಣ ಪ್ರಸಾದ್ ಹಾಗೂ ವಿಶ್ವೇಶ್ವರ ಭಟ್ ಟ್ರಸ್ಟಿಗಳು ಭಾಗವಹಿಸಿದ್ದರು.

ಭೈರಪ್ಪನವರ ವಿಲ್‌ನಲ್ಲಿ ಅವರು ತಮ್ಮ ಅಂತ್ಯಕ್ರಿಯೆಯನ್ನು ಸಹನಾ ವಿಜಯಕುಮಾರ್ ಅವರು ನಡೆಸಿಕೊಡಬೇಕೆಂದು ಬರೆದಿದ್ದಾರೆ ಮತ್ತು ಸಕಲ ಆಸ್ತಿಯು ಭೈರಪ್ಪ ಪ್ರತಿಷ್ಠಾನಕ್ಕೆ ಹೋಗಬೇಕು, ಬಡಬಗ್ಗರ ಸೇವೆಗೆ ಮೀಸಲಾಗಬೇಕು ಮುಂತಾಗಿ ಹೇಳಿದ್ದಾರೆ.
ಮೇಲಿನ ಸಂಶೋಧನೆಯ ಮಾಹಿತಿಯನ್ನು ವಿಶ್ಲೇಷಿಸೋಣ. ಗೆಳೆತನವನ್ನು ಒಂದು ಸಂಸ್ಥೆಯೆಂದು ಪರಿಗಣಿಸಿದರೆ ಅದರಲ್ಲಿ ಮೇಲೆ ಹೇಳಿದಂತೆ ಸಾಮಾಜಿಕ, ಸಾಂಸ್ಕೃತಿಕ, ಸಾಂಕೇತಿಕ ಮತ್ತು ಆರ್ಥಿಕ ಬಂಡವಾಳವನ್ನು ತೊಡಗಿಸಲಾಗಿರುತ್ತದೆ. ಕುಟುಂಬವನ್ನು ಹೊರತುಪಡಿಸಿದರೆ ಭಾರತದಂಥ ಸಮಾಜದಲ್ಲಿ ತನ್ನ ಜಾತಿಯವರನ್ನು ಬಿಟ್ಟು ವೃತ್ತಿ, ವ್ಯಾಪಾರ, ವ್ಯವಹಾರ, ಕ್ರೀಡೆ, ಮನರಂಜನೆ, ಹವ್ಯಾಸ ಮೊದಲಾದವುಗಳಿಗೆ ಇತರ ಜಾತಿಯವರನ್ನು ಸ್ವಲ್ಪ ಮಟ್ಟಿಗಾದರೂ ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಮೇಲಿನ ಎಲ್ಲ ಅಂಶಗಳಿಗೂ ತನ್ನ ಜಾತಿಯವರನ್ನೇ ಅವಲಂಬಿಸಿಕೊಳ್ಳುವುದು ಕಷ್ಟ. ಆದರೆ ತನ್ನ ಜಾತಿಯವರನ್ನೇ ಅವಲಂಬಿಸಿಕೊಂಡು ಬದುಕಬೇಕೆಂದರೆ ಅದಕ್ಕೆ ಅಪಾರವಾದ ಜಾತಿಬದ್ಧತೆ ಬೇಕು. ತನ್ನ ಜಾತಿಯ ಬಗೆಗೆ ಕದಲದ ನಿಷ್ಠೆ ಮತ್ತು ನಂಬಿಕೆ ಇರಬೇಕು. ತನ್ನ ಜಾತಿಯ ಬಗ್ಗೆ ನಿಷ್ಠೆ ಮತ್ತು ನಂಬಿಕೆ ಎನ್ನುವುದು ಮತ್ತೊಂದು ಅಪ್ರಕಟಿತ ಅಂಶವನ್ನು ಸೂಚಿಸುತ್ತದೆ. ಬೇರೆ ಜಾತಿಯವರ ಬಗೆಗೆ ಅಪನಂಬಿಕೆ, ಅನುಮಾನ, ಅಸಹನೆ, ಮಡಿ ಮೈಲಿಗೆಯೂ ಇರುತ್ತದೆ.
ಈ ಲೇಖನ ಓದಿದ್ದೀರಾ?: ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’
ಎಸ್.ಎಲ್. ಭೈರಪ್ಪನವರ ಗೆಳೆತನ ಪರಿಶೀಲಿಸಿದರೆ ಶೇಕಡ 90ರಷ್ಟು ತಮ್ಮದೇ ಅಂದರೆ ಬ್ರಾಹ್ಮಣ ಸಂಬಂಧಗಳ ಜಾಲ ಕಂಡುಬರುತ್ತದೆ. ಕಾದಂಬರಿಗಳ ಪ್ರಕಟಣೆಯ ಹಕ್ಕನ್ನು ತನ್ನ ಜಾತಿಯವರಿಗೆ ನೀಡುವ 3 ಪುಸ್ತಕ ಪ್ರಕಾಶನ ಲೋಕದಲ್ಲಿ ಬ್ರಾಹ್ಮಣರ ಮೇಲುಗೈ ಸಾಧಿಸುವಂತೆ ನೋಡಿಕೊಂಡಿದ್ದಾರೆ. ಅದರಿಂದ ದೊರಕುವ ಅಪಾರ ಲಾಭವು ಅವರಿಗೆ ದೊರಕುವಂತೆ ಮಾಡಿದ್ದಾರೆ. ಅವರು ಜನಪ್ರಿಯ ಲೇಖಕರಾದುದರಿಂದ ಅವರ ಜಾತಿಯ ಇತರರು ಅವರ ಕಾದಂಬರಿಗಳನ್ನು ವಿಮರ್ಶಿಸಿ, ಮಾರುಕಟ್ಟೆ ಒದಗಿಸಿ ಸಾಂಸ್ಕೃತಿಕ ಬಂಡವಾಳವನ್ನು ಗಳಿಸಿಕೊಂಡಿದ್ದಾರೆ.
ಕಾದಂಬರಿಗಳನ್ನು ಸಿನಿಮಾ ಮಾಡಲು ನೀಡಿದ ಹಕ್ಕುಗಳನ್ನು ಆಗತಾನೆ ಅರಳುತ್ತಿದ್ದ ಯುವ ಬ್ರಾಹ್ಮಣ ಪ್ರತಿಭೆಗಳಾದ ಗಿರೀಶ್ ಕಾರ್ನಾಡ್, ಬಿ.ವಿ. ಕಾರಂತ, ಗಿರೀಶ್ ಕಾಸರವಳ್ಳಿಯವರಿಗೇ ನೀಡಿದರು. ಟಿ.ಎನ್. ಸೀತಾರಂ ರವರಿಗೆ ಕಾಲಾನಂತರದಲ್ಲಿ ನೀಡಿದರು. ಇದರ ಮೂಲಕ ತನ್ನ ಜಾತಿಯ ಪ್ರತಿಭಾವಂತರಿಗೆ ಎಳೆಯ ವಯಸ್ಸಿನಲ್ಲಿಯೇ ನೀರೆರೆದು ಪೋಷಿಸಿದರು. ಈ ಪೋಷಣೆಯಿಂದಾಗಿ ಅವರೆಲ್ಲರೂ ಮುಂದೆ ಪ್ರಸಿದ್ದ ನಿರ್ದೇಶಕರು, ನಟರೂ ಆಗಿ ಬೆಳೆದರು. ತನ್ನ ಜಾತಿಯವರನ್ನು ಬೆಳೆಸಿ ಅವರನ್ನು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸ್ಥಾಪಿಸಬೇಕೆನ್ನುವ ಮುನ್ನೋಟ ಭೈರಪ್ಪನವರಿಗಿತ್ತು. ಏಕೆಂದರೆ ತನ್ನ ಕಾದಂಬರಿಯ ಸಾಂಸ್ಕೃತಿಕ ಬಂಡವಾಳವು ಅನ್ಯರ ಪಾಲಾಗಬಹುದೆಂಬ ಭಯವೂ ಇತ್ತು. ಹಾಗಾಗಿಯೇ ಅವರು ಈಡಿಗ ಜಾತಿಗೆ ಸೇರಿದ ಡಾ.ರಾಜ್ ಕುಮಾರ್ ಅವರು ಅಭಿನಯಿಸಬೇಕಾಗಿದ್ದ ಚಲನಚಿತ್ರಕ್ಕೆ ಒಪ್ಪಿಗೆಯನ್ನು ನೀಡಲಿಲ್ಲ. ಇಲ್ಲಿ ಒಂದು ಪ್ರಶ್ನೆಯೂ ಉದ್ಭವಿಸಬಹುದು. ಸ್ವತಃ ಭಗವಾನ್ ಅವರೇ ಬ್ರಾಹ್ಮಣರಾಗಿದ್ದರಲ್ಲ, ಅವರಿಗೇಕೆ ನೀಡಲಿಲ್ಲ? ಏಕೆಂದರೆ ಭಗವಾನ್‌ರವರು ಬ್ರಾಹ್ಮಣರಾದರೂ ರಾಜ್ ಕುಮಾರ್‌ರವರ ಪ್ರತಿಭೆಯೇ ಮುಂದಾಗಿ ಭಗವಾನ್ ಹಿಂದಾಗುತ್ತಿದ್ದರು. ಹಾಗಾಗಿ ತಮ್ಮ ಸಾಂಸ್ಕೃತಿಕ ಬಂಡವಾಳವನ್ನು ಈಡಿಗ ಜಾತಿಯ ವ್ಯಕ್ತಿಗೆ ನೀಡಬಾರದು ಎನ್ನುವುದು ಅವರ ಉದ್ದೇಶವಾಗಿತ್ತು ಎನಿಸುತ್ತದೆ.

ಕುಟುಂಬ ಮತ್ತು ಗೆಳೆತನದ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ನಮ್ಮ ನಂತರದ ಕಿರಿಯ ಪೀಳಿಗೆಯನ್ನು ಚೆನ್ನಾಗಿ ರೂಪಿಸಿ ಅವರ ಸಾಮಾಜಿಕ ಮತ್ತು ಆರ್ಥಿಕ ಬಂಡವಾಳವನ್ನು ಬಿಟ್ಟು ಹೋಗಬೇಕೆಂಬ ಉದ್ದೇಶವಿರುತ್ತದೆ. ಎಸ್.ಎಲ್. ಭೈರಪ್ಪನವರು ತಮ್ಮ ಜಾತಿಗೆ ಸೇರಿದ ಸಹನಾ ವಿಜಯಕುಮಾರ್‌ರವರನ್ನು ಮಗಳಂತೆ ಸ್ವೀಕರಿಸಿ ಬರವಣಿಗೆಯ ಕೌಶಲ್ಯವನ್ನು ಅಂದರೆ ತಾನು ಕಲಿತಿದ್ದ ಕೌಶಲ್ಯ ಎನ್ನುವ ಸಾಂಕೇತಿಕ ಬಂಡವಾಳವನ್ನು ಧಾರೆಯೆರೆದರು. ತನ್ನ ಸಾಂಕೇತಿಕ ಬಂಡವಾಳವೂ ಬೇರೆ ಜಾತಿಗಳ ಪಾಲಾಗಬಾರದೆಂಬ ಎಚ್ಚರಿಕೆ ವಹಿಸಿದ್ದರು.
ಎಸ್.ಎಲ್. ಭೈರಪ್ಪನವರು ಬಡತನದಲ್ಲಿ ಬೆಳೆದಿದ್ದರಿಂದ ಅವರಿಗೆ ಇತರರಿಗೆ ಸಹಾಯ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಅದಕ್ಕಾಗಿ ಭೈರಪ್ಪ ಪ್ರತಿಷ್ಠಾನವನ್ನು ಹಠ ಮಾಡಿ ಸ್ಥಾಪಿಸಿದರು. ಬ್ರಾಹ್ಮಣರಲ್ಲದೆ ಬೇರೆ ಜಾತಿಯವರು ತನ್ನ ಪ್ರತಿಷ್ಠಾನವನ್ನು ಸರಿಯಾಗಿ ನಡೆಸಲಾರರು ಎಂಬ ಅನುಮಾನವಿತ್ತು. ಏಕೆಂದರೆ ಅವರಿಗೆ ಬ್ರಾಹ್ಮಣರ ಪ್ರತಿಭೆ ಮತ್ತು ಸಾಮರ್ಥ್ಯದಲ್ಲಿ ಅಪಾರ ನಂಬಿಕೆ ಇತ್ತು. ಅಂಥ ನಂಬಿಕೆಯಿಂದಾಗಿ ಅವರ ಪ್ರತಿಷ್ಠಾನಕ್ಕೆ ನೂರಕ್ಕೆ ನೂರರಷ್ಟು ಬ್ರಾಹ್ಮಣರನ್ನೇ ನೇಮಿಸಿದರು. ಆ ಟ್ರಸ್ಟ್‌ನಲ್ಲಿರುವವರು ಬಡವರಿಗೆ ದಾನ ಮಾಡುವುದರಿಂದ ಬ್ರಾಹ್ಮಣರು ಕೇವಲ ದಾನ ಸ್ವೀಕರಿಸುವವರಲ್ಲ, ದಾನ ಮಾಡುವವರು ಎಂಬ ಭಾವನೆಯನ್ನು ಬಲಪಡಿಸಬೇಕೆಂದು ಅವರ ಇಚ್ಛೆಯಾಗಿತ್ತು.
ಅವರ ಕನ್ನಡ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುವ ಹಕ್ಕನ್ನು ಬ್ರಾಹ್ಮಣರಿಗೇ ನೀಡಿದರು. ಬ್ರಾಹ್ಮಣರನ್ನು ಹೊರತುಪಡಿಸಿ ಬೇರೆಯವರಿಗೆ ಬ್ರಾಹ್ಮಣ ಚಿಂತನಾಕ್ರಮವನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂಬ ನಿಲುವಿಗೆ ಅವರು ತಲುಪಿದ್ದರು.
ಈಗ ನಮ್ಮ ಸಂಶೋಧನಾ ಪ್ರಶ್ನೆಗೆ ಹಿಂತಿರುಗೋಣ. ಭೈರಪ್ಪನವರು ಜಾತಿವಾದಿಯೋ ಅಲ್ಲವೋ ಎಂಬ ಪ್ರಶ್ನೆಗೆ ಮರಳಿದರೆ ಅವರು ಜಾತಿವಾದಿ ಎಂಬುದು ಮೇಲಿನ ವಿಶ್ಲೇಷಣೆಯಿಂದ ದೃಢಪಡುತ್ತದೆ. ಸಾವಿರಾರು ಜಾತಿಗಳಿರುವ ವೈವಿಧ್ಯಮಯವಾದ ಭಾರತದಲ್ಲಿ ಬ್ರಾಹ್ಮಣರಲ್ಲದವರಿಗೆ ತಮ್ಮ ಯಾವ ಬಗೆಯ ಬಂಡವಾಳವನ್ನೂ ಬಿಟ್ಟುಕೊಡದೆ, ಅವರನ್ನು ಕೇವಲ ಮಾರುಕಟ್ಟೆಯ ಸರಕುಗಳು, ವಿಶಲ್ ಹೊಡೆಯುವ ಅಭಿಮಾನಿಗಳು, ಓದಿ ಮೆಚ್ಚುವ ಅನುಭೋಗಿಗಳು ಎಂಬ ತೀರ್ಮಾನಕ್ಕೆ ಬಂದಿರುವಂತೆ ಕಾಣುತ್ತದೆ. ಭೈರಪ್ಪನವರ ಯೋಚನಾ ಕ್ರಮದಲ್ಲಿ ಎಂದಿಗೂ ಬೇರೆ ಜಾತಿಯವರನ್ನು ಪರಿಗಣಿಸಬೇಕು ಎಂಬುದು ಹೊಳೆಯಲಿಲ್ಲವೇಕೆ? ಎಂಬ ಸಮಾಜಶಾಸ್ತ್ರೀಯ ಪ್ರಶ್ನೆಯು ಮತ್ತಷ್ಟು ಸಂಶೋಧನೆಯನ್ನು ಬೇಡುತ್ತದೆ. ಅವರು ಹಿಂದೂ ಎಂದು ಹೇಳುವ ಧರ್ಮವು ಕೇವಲ ಬ್ರಾಹ್ಮಣರನ್ನು ಒಳಗೊಂಡಿದೆಯೇ ಎಂಬ ಸಂದೇಹವೂ ಉದ್ಭವವಾಗುತ್ತದೆ. ಹಿಂದೂ ಅಥವಾ ಹಿಂದುತ್ವವಾದಿಗಳು ಎಂದರೆ ಬ್ರಾಹ್ಮಣರು ತಮ್ಮ ಸ್ವಯಂ ರಕ್ಷಣೆಗಾಗಿ ಕಲ್ಪಿಸಿ, ಇತರರನ್ನು ಬಳಸಿಕೊಳ್ಳುವ ಒಂದು ಸಿದ್ದಾಂತವೇನೋ ಅನಿಸುತ್ತದೆ.
ಒಬ್ಬ ವ್ಯಕ್ತಿಯ ಆಪ್ತ ವಲಯದಲ್ಲಿ ತನ್ನ ಜಾತಿಯವನಲ್ಲದ ಬೇರೆ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲದೆ ಇರುವುದನ್ನು ನಮ್ಮ ಸಂದರ್ಭದಲ್ಲಿ ಹೇಗೆ ಪರಿಗಣಿಸಬಹುದು? ಭೈರಪ್ಪನವರು ಕಾದಂಬರಿಕಾರರು ಮಾತ್ರವಲ್ಲದೆ, ತತ್ವಜ್ಞಾನಿ ಮತ್ತು ಸಾಂಸ್ಕೃತಿಕ ವಕ್ತಾರರೆಂದು ಬಿಂಬಿಸಲ್ಪಟ್ಟಿದ್ದಾರೆ. ಕರ್ನಾಟಕ ಮತ್ತು ಭಾರತದ ಇತರ ರಾಜ್ಯಗಳಲ್ಲಿ ಓದುಗ ವಲಯವಿದೆ. ಓದುಗ ವಲಯದ ಮೇಲೆ ಪ್ರಭಾವ ಬೀರಿದ್ದಾರೆ. ತಾವು ಹಿಂದು ಎಂದು ಆಗಾಗ ಹೇಳಿಕೊಂಡಿದ್ದಾರೆ. ಆದರೆ ಇವರ ಸಾಮಾಜಿಕ ಸಂಬಂಧಗಳನ್ನು ಗಮನಿಸಿದರೆ ಇವರು ಹಿಂದೂಗಳೆಲ್ಲರನ್ನು ಒಳಗೊಳ್ಳದೆ ತಮ್ಮ ಜಾತಿಯವರನ್ನು ಮಾತ್ರ ಒಳಗೊಂಡಿರುವುದು ಕಂಡುಬರುತ್ತದೆ. ಬೇರೆ ಜಾತಿಯ ಜನರ ಜೊತೆಗೆ ಅನಿವಾರ್ಯವಾಗಿ ತನ್ನ ಬಾಲ್ಯ ಹೊರತುಪಡಿಸಿ ಯಾವುದೇ ರೀತಿಯ ಗೆಳೆತನ ಹೊಂದಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ತಮ್ಮ ವ್ಯಕ್ತಿತ್ವ ಮತ್ತು ಸೃಜನಶೀಲತೆಯಿಂದ ಬಂದ ಬಂಡವಾಳವನ್ನೆಲ್ಲ ಬ್ರಾಹ್ಮಣ ಜಾತಿಗೆ ನೀಡಿರುತ್ತಾರೆ. ಎಲ್ಲ ಬಗೆಯ ಸಾಹಿತ್ಯ ಹೊರತುಪಡಿಸಿದ ಆಕರಗಳನ್ನು ಪರಿಶೀಲಿಸಿದರೆ ಅಂದರೆ ಕರಪತ್ರಗಳು, ವಿಡಿಯೋಗಳನ್ನು ಪರಿಶೀಲಿಸಿದರೆ ಅವರನ್ನು ಅನಿವಾರ್ಯವಾಗಿ ಜಾತಿವಾದಿ ಎಂದು ಹೇಳಬೇಕಾದ ನಿರ್ಣಯವನ್ನು ತಲುಪಬೇಕಾಗುತ್ತದೆ.




