ವ್ಯಕ್ತಿ ವಿಶೇಷ | ಸಿದ್ದು ನಂತರ ಅಹಿಂದದ ಉತ್ತರಾಧಿಕಾರಿಯೇ ಸತೀಶ್‌ ಜಾರಕಿಹೊಳಿ?

Date:

ಕಳೆದ 25 ವರ್ಷದಿಂದ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಸತೀಶ್‌ ಜಾರಕಿಹೊಳಿ ಸ್ನೇಹವು ಕಾಲ ಕಾಲಕ್ಕೆ ಗಟ್ಟಿಗೊಳ್ಳುತ್ತ ಬಂದಿದೆ. ಸಿದ್ದರಾಮಯ್ಯ ಆಪ್ತವಲಯದಲ್ಲಿ ಸತೀಶ್‌ ಜಾರಕಿಹೊಳಿಗೆ ವಿಶೇಷ ಸ್ಥಾನವಿದೆ. ಈಗದು ರಾಜಕೀಯ ಒಡಂಬಡಿಕೆಯಾಗಿ ಮಾರ್ಪಾಡುಗೊಂಡಿದ್ದು, ಸಿದ್ದು ಅವರ ‘ರಾಜಕೀಯ ಉತ್ತರಾಧಿಕಾರಿ’ ಎಂಬ ಗುರುತು ಸಿಕ್ಕಿದೆ.

ಸಚಿವ ಸತೀಶ್‌ ಜಾರಕಿಹೊಳಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಆಡಿದ ಮಾತು ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ರಾಜಕೀಯದೊಳಗೆ ಸಂದೇಶಗಳನ್ನು ಹೇಗೆ ದಾಟಿಸುತ್ತಾರೆ ಎಂಬುದಕ್ಕೆ ರಾಜಕಾರಣವನ್ನು ತೀರಾ ಹತ್ತಿರದಿಂದ ನೋಡಿದವರಿಗೆ ಯತೀಂದ್ರ ಮಾತು ಬೇಗ ಅರ್ಥವಾಗುತ್ತದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದ ಕನಕದಾಸ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, “ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಇಂತಹ ಸಮಯದಲ್ಲಿ ಪ್ರಗತಿಪರ ಚಿಂತನೆ ಹೊಂದಿರುವ, ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡುವ ನಾಯಕನ ಅಗತ್ಯವಿದೆ. ಸತೀಶ್‌ ಜಾರಕಿಹೊಳಿ ಈ ಜವಾಬ್ದಾರಿ ಹೊರಲು ಸಮರ್ಥರು. ಕಾಂಗ್ರೆಸ್‌ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇರುವ ನಾಯಕರಿಗೆ ಮತ್ತು ಯುವಕರಿಗೆ ಅವರು ಮಾದರಿ. ಸಿದ್ಧಾಂತಬದ್ಧವಾದ ರಾಜಕಾರಣಿಗಳು ಇರುವುದು ವಿರಳ. ಆದರೆ, ಜಾರಕಿಹೊಳಿಯವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರು ಆ ಕೆಲಸವನ್ನು ಹೀಗೆ ಮುಂದುವರಿಸಬೇಕು” ಎಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಹುಕಾರ್‌ ಫ್ಯಾಮಿಲಿ‘ ಖ್ಯಾತಿಯ ಜಾರಕಿಹೊಳಿ ಕುಟುಂಬ ಹಿಡಿತ ಸಾಧಿಸಿರುವ ಬೆಳಗಾವಿ ನೆಲದಲ್ಲಿ ನಿಂತು ಸಿಎಂ ಪುತ್ರ ಹೀಗೆ ಸತೀಶ್‌ ಜಾರಕಿಹೊಳಿ ಬಗ್ಗೆ ಅಭಿಮಾನದ ಮಾತುಗಳನ್ನು ಆಡುವುದು ಎಂದರೆ; ಸಿಎಂ ಆಪ್ತ ವಲಯದೊಳಗಿನ ಚರ್ಚೆಯ ಸಾರವನ್ನು ಯತೀಂದ್ರ ಅವರು ಹೀಗೆ ಉಣಬಡಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ “ಪದವನ್ನು ಅರ್ಪಿಸಬಹುದಲ್ಲದೇ ಪದಾರ್ಥವನ್ನು ಅರ್ಪಿಸಬಹುದೇ?” ಎಂಬ ವಚನಗಾರ್ತಿ ಅಕ್ಕಮಹಾದೇವಿ ಮಾತು ಪ್ರಸ್ತುತ ಸನ್ನಿವೇಶಕ್ಕೆ ಸರಿಹೊಂದುತ್ತದೆ.

ಭಾರೀ ಚರ್ಚೆಗೆ ಗ್ರಾಸವಾಗಿರುವ ಯತೀಂದ್ರ ಮಾತುಗಳು ಕಾಂಗ್ರೆಸ್‌ ಒಳಗೆ ಹುಟ್ಟಿಕೊಂಡ ‘ನವೆಂಬರ್‌ ಕ್ರಾಂತಿ‘ಗೆ ಬಂದು ತಲುಪಿವೆ. ಮುಖ್ಯಮಂತ್ರಿ ಹುದ್ದೆ ಬದಲಾವಣೆ ಚರ್ಚೆ ಮತ್ತು ಸಚಿವ ಸಂಪುಟ ಪುನಾರಚನೆ ವಿಚಾರವೂ ಮುನ್ನೆಲೆಗೆ ಬಂದಿದೆ.

ದೇಶದ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎಂದೇ ವಿಶ್ಲೇಷಿಸಲಾಗಿರುವ ಬಿಹಾರ ಚುನಾವಣೆ ಫಲಿತಾಂಶ ನ.14ರಂದು ಪ್ರಕಟವಾಗಲಿದ್ದು, ಇದೇ ಸಂದರ್ಭದಲ್ಲಿ ನ.20ಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ನ.20ರ ಆಚೆ ಈಚೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಸಹಜವಾಗಿ ರಾಹುಲ್‌ ಗಾಂಧಿ ಆಗಮನ ವಿಚಾರ ಕಾಂಗ್ರೆಸ್‌ ಒಳಗಿನ ರಾಜಕೀಯ ವಿಚಾರಗಳನ್ನು ಗರಿಗೆದರುವಂತೆ ಮಾಡಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಒಳ ಒಪ್ಪಂದ ನೆನಪಿಸಲು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ನೇಮಕ ಇದನ್ನೇ ಕೆಲವರು ‘ನವೆಂಬರ್ ಕ್ರಾಂತಿ’ ಎಂದು ಕರೆಯುತ್ತಿದ್ದಾರೆ.

yatindra siddaramaiah

‘ನವೆಂಬರ್ ಕ್ರಾಂತಿ’ ಸುತ್ತ ಡಿ ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬಣ ಹಲವು ಪ್ಲ್ಯಾನ್‌ಗಳನ್ನು ಸಿದ್ದಮಾಡಿಕೊಂಡಂತೆ ಕಾಣುತ್ತಿದೆ. ಡಿ ಕೆ ಶಿವಕುಮಾರ್ ಅವರು ತಮ್ಮ ಪಕ್ಷ ನಿಷ್ಠೆಯನ್ನು ಎಷ್ಟೇ ಮುಂದು ಮಾಡಿ, ಒತ್ತಡ ತಂತ್ರಗಳನ್ನು ಹೇರಿದರೂ ಹೈಕಮಾಂಡ್ ಯಾವುದೇ ಕಾರಣಕ್ಕೂ ಸಿಎಂ ಕುರ್ಚಿಯನ್ನು ಡಿ ಕೆ ಶಿವಕುಮಾರ್‌ ಅವರಿಗೆ ಒಪ್ಪಿಸಲ್ಲ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು. ಆದಾಗ್ಯೂ ಡಿ ಕೆ ಶಿವಕುಮಾರ್ ಅವರು ಹೈಕಮಾಂಡ್‌ ಬಳಿ ಸಿಎಂ ಹುದ್ದೆ ಪಡೆಯಲು ಮೇಲುಗೈ ಸಾಧಿಸಿದರೆ, ಸಿದ್ದರಾಮಯ್ಯ ಬಣದಲ್ಲಿ ಪ್ಲ್ಯಾನ್‌ ಎ, ಬಿ, ಸಿ, ರೆಡಿ ಇವೆ. ಮುಖ್ಯಮಂತ್ರಿ ಸ್ಥಾನಕ್ಕೆ ‘ದಲಿತ ಸಿಎಂ’ ಕಾರ್ಡ್ ಪ್ಲೇ ಮಾಡಲು ಸಿದ್ದರಾಮಯ್ಯ ಯೋಜಿಸಿದ್ದಾರೆ ಎನ್ನಲಾಗುತ್ತಿದೆ. ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್‌, ಕೆ ಎಚ್‌ ಮುನಿಯಪ್ಪ ಹಾಗೂ ಡಾ. ಎಚ್.ಸಿ. ಮಹದೇವಪ್ಪ ಈ ಹುದ್ದೆಗೆ ಹಕ್ಕು ಮಂಡಿಸುವ ಲಕ್ಷಣಗಳು ಕಂಡುಬರುತ್ತಿವೆ.

ರಾಹುಲ್‌ ಗಾಂಧಿ ಭೇಟಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವೂ ಮುಖ್ಯವಾಗಿದೆ ಎಂದು ಮೂಲಗಳು ಹೇಳಿವೆ. ಒಕ್ಕಲಿಗ ಸಮುದಾಯದ ಡಿ ಕೆ ಶಿವಕುಮಾರ್‌ ಬದಲಿಗೆ ಲಿಂಗಾಯತ ಮುಖಂಡ ಅಥವಾ ಅಹಿಂದ ಚಹರೆಯ ಎಸ್‌ಟಿ ಸಮುದಾಯದ ಅಗ್ರ ನಾಯಕ ಸತೀಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ. ಇದೇ ಕಾರಣಕ್ಕೆ “ಸಿದ್ದರಾಮಯ್ಯ ಬಳಿಕ ಜವಾಬ್ದಾರಿ ಹೊರಲು ಸತೀಶ್‌ ಜಾರಕಿಹೊಳಿ ಸಮರ್ಥರು” ಎನ್ನುವ ಯತೀಂದ್ರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ. ಸಿಎಂ ಬಣದ ನಾಯಕರಾದ ಎಂ ಬಿ ಪಾಟೀಲ್‌, ಆರ್‌ ಬಿ ತಿಮ್ಮಾಪುರ, ಸಂತೋಷ್‌ ಲಾಡ್‌, ಡಾ. ಜಿ ಪರಮೇಶ್ವರ್‌ ಸೇರಿದಂತೆ ಹಲವು ನಾಯಕರು ಯತೀಂದ್ರ ಹೇಳಿಕೆಯ ಪರವಾಗಿ ಬ್ಯಾಟ್‌ ಬೀಸಿದ್ದು ಗಮನಿಸಬಹುದು.

2000 ದಶಕದಿಂದಲೂ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಸತೀಶ್‌ ಜಾರಕಿಹೊಳಿ ಸ್ನೇಹವು ಕಾಲ ಕಾಲಕ್ಕೆ ಗಟ್ಟಿಗೊಳ್ಳುತ್ತ ಬಂದಿದೆ. ಸಿದ್ದರಾಮಯ್ಯ ಆಪ್ತವಲಯದಲ್ಲಿ ಸತೀಶ್‌ ಜಾರಕಿಹೊಳಿಗೆ ಯಾವಾಗಲೂ ವಿಶೇಷ ಸ್ಥಾನವಿದೆ. ಈಗದು ರಾಜಕೀಯ ಒಡಂಬಡಿಕೆಯಾಗಿ ಮಾರ್ಪಾಡುಗೊಂಡಿದ್ದು, ಸಿದ್ದರಾಮಯ್ಯ ಅವರ ‘ರಾಜಕೀಯ ಉತ್ತರಾಧಿಕಾರಿ‘ ಎಂಬ ಗುರುತು ಸತೀಶ್ ಜಾರಕಿಹೊಳಿಗೆ ಸಿಕ್ಕಿದೆ.

ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಉದ್ದೇಶದಿಂದ ಹುಟ್ಟಿಕೊಂಡಿದ್ದೇ ಅಹಿಂದ ಚಳವಳಿ. ಇದು ಕರ್ನಾಟಕ ರಾಜಕಾರಣದಲ್ಲಿ ಜಾತಿ ಆಧಾರಿತ ಅಧಿಕಾರದ ವಿರುದ್ಧದ ಹೋರಾಟವಾಗಿ ಬೆಳೆದಿದೆ. ದೇವರಾಜ ಅರಸು ಅವರಿಂದ ಆರಂಭವಾದ ಅಹಿಂದ ಚಳವಳಿ ಸಂಪರ್ಕಕ್ಕೆ ಹೋದ ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿದ್ದಾಗ ಹೆಚ್ಚು ಅಹಿಂದ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದರು. ಇದನ್ನು ಸಹಿಸದ ಹೆಚ್‌ ಡಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು 2005ರಲ್ಲಿ ಪಕ್ಷದಿಂದ ಹೊರಹಾಕುತ್ತಾರೆ. ಈ ಹಿನ್ನಡೆ ಮುಂದೆ ಸಿದ್ದರಾಮಯ್ಯ ಅವರಿಗೆ ರಾಜ್ಯಾದ್ಯಂತ ಅಹಿಂದ ಚಳವಳಿ ಕಟ್ಟಲು ದೊಡ್ಡ ಪ್ರೇರಣೆಯಾಗುತ್ತದೆ.

ಸಿದ್ದರಾಮಯ್ಯ ಜೆಡಿಎಸ್‌ ತೊರೆದ ಮೇಲೆ ಬಸವ ಕಲ್ಯಾಣದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಹಿಂದ ಸಮಾವೇಶ ನಡೆಯುತ್ತದೆ. ಆಗ ಸಿಎಂ ಆಗಿದ್ದ ಎಸ್‌ ಎಂ ಕೃಷ್ಣ ಅವರು ಆಗಲೇ ಉಪಮುಖ್ಯಮಂತ್ರಿಯಾಗಿ ಕೆಳಗಿಳಿದಿದ್ದ ಸಿದ್ದರಾಮಯ್ಯ ಅವರ ಮುಂದಿನ ನಾಯಕತ್ವ ಊಹಿಸಿ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳುವ ನಿರ್ಧಾರ ಮಾಡುತ್ತಾರೆ. ಆದರೆ ಸಿದ್ದರಾಮಯ್ಯ ಕೇವಲ ಒಬ್ಬಂಟಿಯಾಗಿ ಕಾಂಗ್ರೆಸ್‌ ಸೇರಲು ನಿರ್ಧರಿಸದೇ ತನ್ನ ಬೆಂಬಲಿಗರೊಂದಿಗೆ ಮತ್ತು ಸೋನಿಯಾ ಗಾಂಧಿ ಸಮ್ಮುಖದಲ್ಲಿ ಪಕ್ಷ ಸೇರುವ ಪ್ರಸ್ತಾಪ ಮುಂದಿಡುತ್ತಾರೆ. ಎಸ್‌ ಎಂ ಕೃಷ್ಣ ಕೊನೆಗೆ ಹೈಕಮಾಂಡ್‌ ಮನವೊಲಿಸುತ್ತಾರೆ.

2006ರ ಜುಲೈ 24ರಂದು ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಸಮಾವೇಶಕ್ಕೆ ಸೋನಿಯಾ ಗಾಂಧಿ ಆಗಮಿಸುತ್ತಾರೆ. ಸಿದ್ದರಾಮಯ್ಯ ಜೊತೆ ಅಹಿಂದ ಕಟ್ಟಲು ತಳಮಟ್ಟದಲ್ಲಿ ಶ್ರಮಿಸಿದ ಸತೀಶ್‌ ಜಾರಕಿಹೊಳಿ ಮತ್ತು ಜೆಡಿಎಸ್‌ ಉಪನಾಯಕರಾಗಿದ್ದ ಎಂ ಪಿ ಪ್ರಕಾಶ್‌ ಸೇರಿ ಹಲವು ನಾಯಕರು ಸಿದ್ದರಾಮಯ್ಯ ಜೊತೆ ಕಾಂಗ್ರೆಸ್‌ ಸೇರುತ್ತಾರೆ.

satish 1

2008ರಲ್ಲಿ ಕ್ಷೇತ್ರ ಮರುವಿಂಗಡನೆಯಾದಾಗ ಯಮಕನಮರಡಿ ಕ್ಷೇತ್ರ ಅಸ್ತಿತ್ವಕ್ಕೆ ಬರುತ್ತದೆ. ಸತೀಶ್‌ ಜಾರಕಿಹೊಳಿ 2008ರಿಂದ ಯಮಕನಮರಡಿ ಕ್ಷೇತ್ರವನ್ನು ಪ್ರತಿನಿಧಿಸಿ ಸತತವಾಗಿ ಐದು ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಅಲ್ಲಿಂದ ಸಿದ್ದರಾಮಯ್ಯ ಜೊತೆ ಹೆಗಲಿಗೆ ಹೆಗಲುಕೊಟ್ಟು ಮುನ್ನಡೆಯುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಮತ್ತು ಸತೀಶ್‌ ಜಾರಕಿಹೊಳಿ ಸಂಯೋಜನೆಯಲ್ಲೇ 40-50 ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ಮಾತುಗಳು ರಾಜಕಾರಣದಲ್ಲಿ ಪ್ರಚಲಿತದಲ್ಲಿವೆ.

ಸತೀಶ್‌ ಜಾರಕಿಹೊಳಿ ಮತ್ತು ಅವರ ಕುಟುಂಬ ರಾಜಕೀಯಕ್ಕೆ ಬಂದಿರುವ ಹಿಂದೆ ರೋಚಕ ಕಥೆಯಿದೆ. ಬೆಳಗಾವಿಯ ಹಿರಿಯ ಪತ್ರಕರ್ತ ರಿಷಿಕೇಶ್‌ ಬಹದ್ದೂರ್‌ ದೇಸಾಯಿ ವಿವರಿಸುವಂತೆ, ಜಾರಕಿಹೊಳಿ ಕುಟಂಬಕ್ಕೆ ಮೂಲತಃ ರಾಜಕೀಯ ಹಿನ್ನೆಲೆ ಇಲ್ಲ. ಅವರು ಮೂಲತಃ ಹುಕ್ಕೇರಿ ತಾಲ್ಲೂಕಿನ ಘಟಪ್ರಭಾ ನದಿ ದಂಡೆಯಲ್ಲಿರುವ ಜಾರಕಿಹೊಳಿ ಗ್ರಾಮದವರು. ನದಿ ದಂಡೆಯಲ್ಲಿ ಕಲ್ಲುಗಳು ಜಾರುವುದರಿಂದ ಆ ಗ್ರಾಮಕ್ಕೆ ಜಾರಕಿಹೊಳಿ ಎನ್ನುವ ಹೆಸರು ಬಂದಿದೆ. ಆ ಗ್ರಾಮದಲ್ಲಿ ಲಕ್ಷ್ಮಣರಾವ್‌ ಜಾರಕಿಹೊಳಿ ಇದ್ದರು. ಅವರಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಗೆ ರಮೇಶ್‌ ಜಾಕಿಹೊಳಿ ಮತ್ತು ಮೂವರು ಪುತ್ರಿಯರು. ಎರಡನೇ ಹೆಂಡತಿಗೆ ನಾಲ್ವರು ಪುತ್ರರು. ಅವರೇ ಸತೀಶ್‌ ಜಾರಕಿಹೊಳಿ, ಲಖನ್‌ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಭೀಮಶಿ ಜಾರಕಿಹೊಳಿ.

ಲಕ್ಷ್ಮಣರಾವ್‌ ಜಾರಕಿಹೊಳಿ ದಂಪತಿ ಮೂಲತಃ ಮನೆಯಲ್ಲಿ ಸಾರಾಯಿ ತಯಾರಿಸುವ ಕೆಲಸ ಮಾಡುತ್ತಿದ್ದರು. ಇದನ್ನು ಕಂಡ ಅಬಕಾರಿ ಇಲಾಖೆಯ ಅಧಿಕಾರಿಗಳು ಲಕ್ಷ್ಮಣರಾವ್‌ ಜಾರಕಿಹೊಳಿ ಅವರಿಗೆ ಅಬಕಾರಿ ಇಲಾಖೆಯಲ್ಲಿ ಕೆಲಸ ಕೊಡುತ್ತಾರೆ. ಅಲ್ಲಿಂದ ಜಾರಕಿಹೊಳಿ ಕುಟುಂಬ ಗೋಕಾಕ್‌ನತ್ತ ವಲಸೆ ಬರುತ್ತದೆ. 1988ರಲ್ಲಿ ಐಗಳಿ ಎನ್ನುವ ಅಬಕಾರಿ ಅಧಿಕಾರಿಯೊಬ್ಬ ಲಕ್ಷ್ಮಣರಾವ್‌ ಜಾರಕಿಹೊಳಿ ಮತ್ತು ಪತ್ನಿಯನ್ನು ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಹೊಡೆಯುತ್ತಾನೆ. ಇದು ಸತೀಶ್‌ ಜಾರಕಿಹೊಳಿ ಆದಿಯಾಗಿ ಎಲ್ಲ ಸಹೋದರರನ್ನೂ ಕೆರಳಿಸುತ್ತದೆ. ಮುಂದೆ ಐಗಳಿ ಅಧಿಕಾರಿ ಎ.ಕೆ 47 ಗನ್‌ನಿಂದ ಕೊಲೆಯಾಗುತ್ತಾನೆ. ಬೆಳಗಾವಿಯಲ್ಲಿ ‘ಎ.ಕೆ 47 ಹತ್ಯಾ ಪ್ರಕರಣ’ ಎಂದೇ ಖ್ಯಾತಿಯಾಗಿದೆ. ಈ ಪ್ರಕರಣಲ್ಲಿ ಜಾರಕಿಹೊಳಿ ಸಹೋದರರು ಜೈಲು ಸೇರಿ ಕೊನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ಖುಲಾಸೆಯಾಗುತ್ತದೆ.

ತಂದೆ-ತಾಯಿಗೆ ಅವಮಾನವಾದ ಪ್ರಕರಣ ಜಾರಕಿಹೊಳಿ ಸಹೋದರರು ರಾಜಕೀಯಕ್ಕೆ ಬರಲು ಕಾರಣವಾಗಿದೆ ಎನ್ನುವುದು ಆ ಭಾಗದಲ್ಲಿ ಜನರು ಹೇಳುವ ಮಾತು. ಬರೀ ದುಡ್ಡು ಇದ್ದರೆ ಸಾಲದು, ಅಧಿಕಾರವೂ ಬೇಕು ಎಂದು ನಿರ್ಧರಿಸಿ ಜಾರಕಿಹೊಳಿ ಕುಟುಂಬ ರಾಜಕಾರಣಕ್ಕೆ ಧುಮಿಕಿತು. ಈಗ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸದಾ ಜಾರಕಿಹೊಳಿ ಕುಟುಂಬ ಅಧಿಕಾರ ಅನುಭವಿಸುತ್ತಲೇ ಬರುತ್ತಿದೆ.

satish 2

ರಿಷಿಕೇಶ್‌ ಬಹದ್ದೂರ್‌ ದೇಸಾಯಿ ಮುಂದುವರಿದು ಹೇಳುವಂತೆ, “ಸತೀಶ್‌ ಜಾರಕಿಹೊಳಿ ರಾಜಕೀಯ ಪ್ರವೇಶ ನನಗೆ ಭಿನ್ನವಾಗಿಯೇ ಕಾಣುತ್ತದೆ. ರಾಜ್ಯದಲ್ಲಿ ನಾನ್‌ ಒಕ್ಕಲಿಗ ಮತ್ತು ನಾನ್‌ ಲಿಂಗಾಯತ ಪಾಲಿಟಿಕ್ಸ್‌ ಪರ್ಯಾಯ ದಾರಿ ಇದೆ ಎಂಬುದನ್ನು ತೋರಿಸಿಕೊಟ್ಟವರು ಸಿದ್ದರಾಮಯ್ಯ. ಅವರನ್ನು ಜನ ಒಪ್ಪಿಕೊಂಡಿದೆ. ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡ ಸತೀಶ್‌ ಜಾರಕಿಹೊಳಿ ಭಿನ್ನ ಪಯಣಿಗರು. ಹೀಗಾಗಿಯೇ ಅವರು 2010ರಲ್ಲಿ ‘ಮಾನವ ಬಂಧುತ್ವ ವೇದಿಕೆ’ ಕಟ್ಟಿದರು. ಇದರ ಸ್ಪಷ್ಟ ಉದ್ದೇಶ ದಲಿತ ಸಂಘಟನೆ ಹರಿದು ಹಂಚಿಹೋದಂತೆ ಮಾನವ ಬಂಧುತ್ವ ವೇದಿಕೆ ಹಂಚಿಹೋಗಬಾರದು. ದಲಿತ ಸಂಘಟನೆ ಬರೀ ಪ್ರತಿಭಟನೆಯಲ್ಲಿ ಮುಳುಗಿದೆ. ಇದಕ್ಕಿಂತ ಭಿನ್ನವಾಗಿ ಮಾನವ ಬಂಧುತ್ವ ವೇದಿಕೆ ಇರಬೇಕು ಎಂದು ಸತೀಶ್‌ ಜಾರಕಿಹೊಳಿ ಕನಸು ಕಂಡವರು. ಮುಖ್ಯವಾಗಿ ರಾಜಕೀಯ ಅಧಿಕಾರವನ್ನು ವೇದಿಕೆಯಿಂದ ದೂರವಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಅಹಿಂದಕ್ಕಿಂತ ಮಾನವ ಬಂಧುತ್ವ ವೇದಿಕೆ ಭಿನ್ನವಾಗಿದೆ” ಎನ್ನುತ್ತಾರೆ.

ರಾಜ್ಯದಲ್ಲಿ 224 ವಿಧಾನಸಭೆ ಕ್ಷೇತ್ರಗಳ ಪೈಕಿ ಒಟ್ಟು 30 ಜಿಲ್ಲೆಗಳಲ್ಲಿ 51 ಕ್ಷೇತ್ರಗಳು ಮೀಸಲಾತಿ ವ್ಯಾಪ್ತಿಯಲ್ಲಿ ಬರುತ್ತವೆ. ಇವುಗಳಲ್ಲಿ ಎಸ್‌ಸಿ 36 ಮತ್ತು ಎಸ್‌ ಟಿ – 15 ಕ್ಷೇತ್ರಗಳಿವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಟಿ ಮತದಾರರು ಇದ್ದಾರೆ. ಬಹುಪಾಲು ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರು ಸಹ ಎಸ್‌ಟಿ ಸಮುದಾಯ ಆಗಿದೆ. ಹೀಗಾಗಿ ಬಿಜೆಪಿ ಪಕ್ಷ ಬಿ ಶ್ರೀರಾಮುಲು ಅವರನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಮೆರೆಯಿತು. 2018ರಲ್ಲಿ ಸಿದ್ದರಾಮಯ್ಯ ಎರಡನೇ ಕ್ಷೇತ್ರವಾಗಿ ಬಾದಾಮಿಯಿಂದ ಕಣಕ್ಕಿಳಿದಾಗ ಶ್ರೀರಾಮುಲು ಅವರನ್ನು ಬಿಜೆಪಿ ಕಣಕ್ಕಿಳಿಸಿತು. ಸತೀಶ್‌ ಜಾರಕಿಹೊಳಿಗೆ ಬಾದಾಮಿ ಚುನಾವಣೆ ಉಸ್ತುವಾರಿ ವಹಿಸಲಾಗಿತ್ತು.

ತನ್ನ ಕ್ಷೇತ್ರ ಯಮಕನಮರಡಿಯನ್ನು ಲೆಕ್ಕಿಸದೆ ಸತೀಶ್‌ ಜಾರಕಿಹೊಳಿ ಬಾದಾಮಿಯಲ್ಲಿ ಹಳ್ಳಿ ಹಳ್ಳಿ ಸುತ್ತಾಡಿ ಮುಖ್ಯವಾಗಿ ಎಸ್‌ಟಿ ಸಮುದಾಯ ಮತಗಳನ್ನು ಸೆಳೆಯಲು ಪ್ರಯತ್ನಪಟ್ಟರು. ತೀವ್ರ ಪೈಪೋಟಿ ನಡೆದು ಕೊನೆಗೆ ಸಿದ್ದರಾಮಯ್ಯ 1600 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಯಾವಾಗಲೂ 40-50 ಸಾವಿರ ಲೀಡ್‌ನಲ್ಲಿ ಗೆಲ್ಲುತ್ತಿದ್ದ ಸತೀಶ್‌ ಜಾರಕಿಹೊಳಿ ಕೇವಲ 2000 ಮತಗಳ ಅಂತರದಿಂದ ತಮ್ಮ ಕ್ಷೇತ್ರದಲ್ಲಿ ಗೆಲುವು ಕಾಣುತ್ತಾರೆ. ಬಾದಾಮಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಪುನರ್‌ಜನ್ಮ ಕೊಟ್ಟ ಕ್ಷೇತ್ರ. ಅಲ್ಲಿಂದ ಸಿದ್ದರಾಮಯ್ಯ ಅವರಿಗೆ ಸತೀಶ್‌ ಜಾರಕಿಹೊಳಿ ಇನ್ನೂ ಹತ್ತಿರವಾಗುತ್ತಾರೆ.

ರಾಜ್ಯದ ಒಟ್ಟು 15 ಎಸ್‌ಟಿ ಮೀಸಲು ಕ್ಷೇತ್ರಗಳ ಪೈಕಿ ಅಖಂಡ ಬಳ್ಳಾರಿ, ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಗಳಲ್ಲೇ ಬರೋಬ್ಬರಿ 11 ಕ್ಷೇತ್ರಗಳಿವೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 10 ಕ್ಷೇತ್ರಗಳ ಪೈಕಿ 5 ಎಸ್‌ಟಿ ಕ್ಷೇತ್ರಗಳಿವೆ. ರಾಯಚೂರು ಜಿಲ್ಲೆಯ 7 ಕ್ಷೇತ್ರಗಳಲ್ಲಿ 4 ಎಸ್‌ಟಿ ಕ್ಷೇತ್ರಗಳಿವೆ. ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 2 ಎಸ್‌ಟಿ ಕ್ಷೇತ್ರಗಳಿವೆ. ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಲೋಕಸಭಾ ಕ್ಷೇತ್ರಗಳು ಎಸ್‌ಟಿ ಮೀಸಲು ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಸತೀಶ್‌ ಜಾರಕಿಹೊಳಿ ಸಹ ವಿಶೇಷ ಹಿಡಿತ ಸಾಧಿಸಿದ್ದಾರೆ. ಜೊತೆಗೆ 36 ಎಸ್‌ಸಿ ಕ್ಷೇತ್ರಗಳಲ್ಲಿಯೂ ಕೆಲವು ಕ್ಷೇತ್ರಗಳಲ್ಲಿ ಸತೀಶ್‌ ಜಾರಕಿಹೊಳಿ ಹಿಡಿತವಿದೆ. ದಕ್ಷಿಣ ಕರ್ನಾಟಕದಲ್ಲೂ ಕೆಲವು ಶಾಸಕರಿಗೆ ತನು, ಮನ ಧನ ಸಹಾಯದೊಂದಿಗೆ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ನೊಳಗೆ ಒಂದು ಕೋಟೆ ಕಟ್ಟಿಕೊಂಡಿದ್ದಾರೆ.

ಮುಖ್ಯವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ್‌ ಜಾರಕಿಹೊಳಿ ಭವಿಷ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೂ ಆಕಾಂಕ್ಷಿ ಎಂದು ಈಗಾಗಲೇ ಬಹಿರಂಗವಾಗಿ ಹೇಳಿದ್ದಾರೆ. ಹೀಗಾಗಿಯೇ ‘ನವೆಂಬರ್‌ ಕ್ರಾಂತಿ’ ಸುತ್ತ ಎಲ್ಲರ ಕಣ್ಣು ನೆಟ್ಟಿದೆ.

satish 1 1

ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ ವಿ ನಟರಾಜು ವಿವರಿಸುವಂತೆ, “ನವೆಂಬರ್‌ ಕ್ರಾಂತಿ ಎಂಬುದು ಸಿದ್ದರಾಮಯ್ಯಗಿಂತ ಡಿ ಕೆ ಶಿವಕುಮಾರ್‌ಗೆ ಹೆಚ್ಚು ಹಿನ್ನಡೆಯಂತೆ ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಡಿಸಿಎಂ ಹುದ್ದೆ ಹಾಗೂ ಎರಡು ದೊಡ್ಡ ಖಾತೆಗಳನ್ನು ಹೊಂದಿರುವ ಡಿ ಕೆ ಶಿವಕುಮಾರ್‌ ಯಾವುದಕ್ಕೂ ಫೋಕಸ್‌ ಮಾಡುತ್ತಿಲ್ಲ. ಬೆಂಗಳೂರು ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದನ್ನು ಬಿಟ್ಟು ಸದ್ಯಕ್ಕೆ ಅಗತ್ಯವಿರದ ದೊಡ್ಡ ದೊಡ್ಡ ಯೋಜನೆಗಳ ಮೊರೆ ಹೋಗುತ್ತಾರೆ. ರಸ್ತೆ ಗುಂಡಿಗಳ ಸಮಸ್ಯೆ, ಬೆಂಗಳೂರು ಸಂಚಾರ ದಟ್ಟನೆಯಿಂದ ಜನರು ಬಸವಳಿದಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಸಹ ತಂದಿದೆ. ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿಲ್ಲ ಎನ್ನುವ ಅಭಿಪ್ರಾಯ ಪಕ್ಷದೊಳಗೆ ಮೂಡಿದೆ” ಎನ್ನುತ್ತಾರೆ.

ಮುಂದುವರಿದು, “ಪಕ್ಷದ ಕಾರ್ಯಕ್ರಮವಾದ ಜಾತಿ ಸಮೀಕ್ಷೆಗೆ ಡಿ ಕೆ ಶಿವಕುಮಾರ್‌ ಎಲ್ಲಿ ಕಾಳಜಿಯಿಂದ ಮಾತನಾಡಿದ್ದಾರೆ? ಕಾಂಗ್ರೆಸ್‌ನ ಸೈದ್ಧಾಂತಿಕ ನಿಲುವನ್ನು ಎಲ್ಲಿ ಪ್ರದರ್ಶಿಸಿದ್ದಾರೆ? ಆರ್‌ಎಸ್‌ಎಸ್‌ ವಿರುದ್ಧ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಬಿ ಕೆ ಹರಿಪ್ರಸಾದ್‌ ಹಾಗೂ ಪ್ರಿಯಾಂಕ್‌ ಖರ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರೆ ಡಿ ಕೆ ಶಿವಕುಮಾರ್‌ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡುತ್ತಾರೆ. ರಾಹುಲ್‌ ಗಾಂಧಿ ಇದನ್ನೆಲ್ಲ ಗಮನಿಸಿರುತ್ತಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ರಾಜಕಾರಣಕ್ಕೆ ವಿರುದ್ಧವಾಗಿ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ ಅಂತ ನನಗೆ ಅನ್ನಿಸುವುದಿಲ್ಲ” ಎಂದು ವಿವರಿಸಿದರು.

“ಡಿ ಕೆ ಶಿವಕುಮಾರ್‌ ಮತ್ತು ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ ಒಳಗೆ ರಾಜಕೀಯ ಬದ್ಧ ವೈರಿಗಳು ಎಂಬುದು ಕಣ್ಮುಂದಿನ ಸತ್ಯ. ಬೆಳಗಾವಿ ರಾಜಕಾರಣದಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ಧವಾಗಿ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಲಕ್ಷ್ಮಣ ಸವದಿಯನ್ನು ಬೆಳೆಸಲು ಡಿ ಕೆ ಶಿವಕುಮಾರ್‌ ಅವಿರಿತ ಪ್ರಯತ್ನ ಪಡುತ್ತಿದ್ದಾರೆ. ಅದರ ಆಚೆಗೂ ಸತೀಶ್‌ ಜಾರಕಿಹೊಳಿ ಬೆಳಗಾವಿ ಮತ್ತು ಉತ್ತರ ಕರ್ನಾಟಕದ ರಾಜಕಾರಣದ ಮೇಲೆ ಪ್ರಭಾವ ಬೀರುವಷ್ಟು ಶಕ್ತರಾಗಿದ್ದಾರೆ. ಡಿ ಕೆ ಶಿವಕುಮಾರ್‌ ಸದಾ ಪಕ್ಷ ನಿಷ್ಠೆ ಜಪ ಮಾಡುತ್ತಾರೆ. ಆದರೆ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ನ ಸೈದ್ಧಾಂತಿಕ ನಿಷ್ಠೆಯನ್ನು ಮೈಗೂಡಿಸಿಕೊಡಿದ್ದಾರೆ. ಅಹಿಂದ ಸಮುದಾಯಕ್ಕೂ ತಲುಪಬಲ್ಲ ನಾಯಕರಾಗಿ ಸತೀಶ್‌ ಜಾರಕಿಹೊಳಿ ಹೊರಹೊಮ್ಮಿದ್ದಾರೆ. ಅದಕ್ಕೆ ಬೇಕಾದ ಸಿದ್ದತೆಯನ್ನೂ ಅವರು ಪಕ್ಷದಲ್ಲಿ ಮಾಡಿಕೊಂಡಿದ್ದಾರೆ. ಕಡಿಮೆ ಮಾತುಗಾರ, ಒಳ್ಳೆಯ ಕೆಲಸಗಾರ ಎನ್ನುವ ಅಭಿಪ್ರಾಯವಿದೆ. ರಾಜಕೀಯ ಚಾಣಾಕ್ಷನೂ ಹೌದು, ತನ್ನ ಸ್ಪಷ್ಟ ನಿಲುವನ್ನು ಹೇಳಬಲ್ಲ ಛಾತಿಯೂ ಅವರಿಗಿದೆ. ಒಟ್ಟಾರೆ ನೋಡಿದರೆ ಕಾಂಗ್ರೆಸ್‌ನಲ್ಲಿ ಸತೀಶ್‌ ಜಾರಕಿಹೊಳಿಗೆ ಭವಿಷ್ಯವಿದೆ. ಜೊತೆಗೆ ಮುಂದಿನ 15-20 ವರ್ಷದ ರಾಜಕಾರಣ ಪಲ್ಲಟಗಳು ಸಹ ಅಷ್ಟೇ ಕುತೂಹಲಕಾರಿಯಾಗಿವೆ” ಎನ್ನುತ್ತಾರೆ ನಟರಾಜು.

ಇದನ್ನೂ ಓದಿ ಭಾವೀ ಸಿಜೆಐ ಜಸ್ಟೀಸ್‌ ಸೂರ್ಯಕಾಂತ್ ಅವರನ್ನು ಬಲ್ಲಿರಾ?

“ಸತೀಶ್‌ ಜಾರಕಿಹೊಳಿ ಹಿಂದೆ ‘ಸಮಯ ಟಿವಿ’ ನಡೆಸಿದ್ದರು. ಆದರೆ ತಮ್ಮ ಬಗ್ಗೆ ಎಂದಿಗೂ ಅವರು ಪ್ರಚಾರ ಬಯಸಲಿಲ್ಲ. ಈ ಕಾರಣಕ್ಕಾಗಿಯೇ ಅವರು ಮುಂದೆ ಅದನ್ನು ಸ್ಥಗಿತಗೊಳಿಸಿದರು. ಗೋಕಾಕ್ ಮತ್ತು ಮೂಡಲಗಿ ತಾಲ್ಲೂಕಿನ ಅತಿಥಿ ಉಪನ್ಯಾಸಕರಿಗೆ ತಮ್ಮ ತಾಯಿ ಹೆಸರಲ್ಲಿನ ಟ್ರಸ್ಟ್‌ ಮೂಲಕ ಗೌರವ ಸಂಭಾವನೆ ಕೊಡುತ್ತಿದ್ದಾರೆ. ಅದೇ ವರ್ಷಕ್ಕೆ 2-3 ಕೋಟಿ ರೂ. ಆಗುತ್ತದೆ. ಶಾಲೆಗಳಿಗೆ ನೀಡುವ ದಾನ ಲೆಕ್ಕವೇ ಇಲ್ಲ. ಸತೀಶ್‌ ಜಾರಕಿಹೊಳಿ ಅವರು ಒಬ್ಬ ಅಪ್ಪಟ ಕ್ರೀಡಾಭಿಮಾನಿ ಮತ್ತು ಕ್ರೀಡಾಪಟು. ಅವರು ನೋಡಲು ತೆಳ್ಳಗೆ ಇದ್ದರೂ ಗುಂಡು ಕಲ್ಲು ಎಸೆಯುವುದು, ಕ್ರಿಕೆಟ್‌ ಆಡುವುದು ಅವರ ಹವ್ಯಾಸ. ಆಟದ ಬಗ್ಗೆ ಯಾರೇ ಎಷ್ಟೇ ದೇಣಿಗೆ ಕೇಳಿದರೂ ಕಣ್ಮುಚ್ಚಿ ಕೊಟ್ಟುಬಿಡುತ್ತಾರೆ. ಜಾರಕಿಹೊಳಿ ಕುಟುಂಬದಲ್ಲೇ ಡೌನ್‌ ಟು ಅರ್ಥ್‌ ವ್ಯಕ್ತಿತ್ವ. ಮಾನಸಿಕವಾಗಿ ತುಂಬಾ ನೊಂದಿದ್ದಾರೆ. ಹೀಗಾಗಿ ಅವರು ಸರಳ ಜೀವನ ಅಳವಡಿಸಿಕೊಂಡಿದ್ದಾರೆ. ಪತ್ರಕರ್ತರ ಗುಂಪು ಕಟ್ಟಿಕೊಂಡು ಆಟವಾಡುವ ನಾಯಕ ಇವರಲ್ಲ. ಪಕ್ಷ ಸಂಘಟನೆಯನ್ನು ಅವರದ್ದೇ ಶೈಲಿಯಲ್ಲಿ ಮಾಡುತ್ತಿದ್ದಾರೆ. ಅದು ಕಣ್ಣಿಗೆ ಕಾಣುತ್ತಿಲ್ಲ ಅಷ್ಟೇ” ಎನ್ನುತ್ತಾರೆ ಬೆಳಗಾವಿ ಪತ್ರಕರ್ತ ಮಲ್ಲಿಕಾರ್ಜುನ ತಳವಾರ.

ಸತೀಶ್ ಜಾರಕಿಹೊಳಿ 1980ರ ದಶಕದಿಂದ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಅವರು ಜನತಾ ದಳದಿಂದ ಶುರುಮಾಡಿ, 2006ರಲ್ಲಿ ಕಾಂಗ್ರೆಸ್‌ಗೆ ಸೇರಿದವರು. 2008ರಿಂದ ಯಮಕನಮರಡಿ (ST) ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಮೊದಲ ಅವಧಿಯ ಸಿದ್ದರಾಮಯ್ಯ ಸರ್ಕಾರ, ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ (2020-23)ವರೆಗೆ ಕಾರ್ಯನಿರ್ವಹಿಸಿದ್ದಾರೆ. 62 ವರ್ಷದ ಸತೀಶ್‌ ಜಾರಕಿಹೊಳಿಗೆ ‘ನವೆಂಬರ್‌ ಕ್ರಾಂತಿ’ ‘ಜಾಕ್‌ ಪಾಟ್‌’ ಹೊಡೆಯುತ್ತಾ ಎಂಬುದನ್ನು ಕಾದುನೋಡಬೇಕು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...