ಶಾರುಖ್ ಖಾನ್ ನಿಜಕ್ಕೂ ದೇಶದ್ರೋಹಿಯೇ? ಧೋನಿ ಈ ನಿಂದೆಯಿಂದ ತಪ್ಪಿಸಿಕೊಂಡದ್ದು ಹೇಗೆ?

Date:

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರಹ್ಮಾನ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಶಾರುಖ್ ಅವರಿಗೆ ದೇಶದ್ರೋಹಿಯ ಪಟ್ಟ ಕಟ್ಟಲಾಗಿದೆ.

ನಿಜ ಬದುಕು ತಮ್ಮ ಬೆಳ್ಳಿತೆರೆಯ ಕಲೆಯನ್ನು ಈ ಪರಿ ಅನುಕರಿಸೀತೆಂದು ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಊಹಿಸಿರುವುದೂ ಸಾಧ್ಯವಿಲ್ಲ. ದೇಶಪ್ರೇಮದಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ ಅವರು. ಆದರೆ ದೇಶದ ಮುಸಲ್ಮಾನರು ತಮ್ಮ ದೇಶಭಕ್ತಿಯನ್ನು ಹೆಜ್ಜೆ ಹೆಜ್ಜೆಗೆ ರುಜುವಾತು ಮಾಡಬೇಕಿರುವ ಕೆಟ್ಟ ದಿನಮಾನಗಳಿವು.

‘ಚಕ್ ದೇ! ಇಂಡಿಯಾ’ ಶಾರುಖ್ ನಟಿಸಿದ ಪ್ರಸಿದ್ಧ ಸೂಪರ್ ಹಿಟ್ ಸಿನೆಮಾ. ಶಿಮಿತ್ ಅಮೀನ್ ನಿರ್ದೇಶನದ ಈ ಚಲನಚಿತ್ರವನ್ನು ನಿರ್ಮಿಸಿದ್ದು ಯಶ್ ರಾಜ್ ಫಿಲ್ಮ್ಸ್. ಈ ಕತೆ ಕಾಲ್ಪನಿಕ. ಭಾರತದ ಪುರುಷರ ಹಾಕಿ ತಂಡದ ನಾಯಕ ಕಬೀರ್ ಖಾನ್. ದೆಹಲಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ದೊರೆತ ಪೆನಲ್ಟಿ ಕಾರ್ನರ್ ನ್ನು ಗೋಲ್ ಪೋಸ್ಟ್ ಗೆ ನುಗ್ಗಿಸುವಲ್ಲಿ ಖಾನ್ ವಿಫಲನಾಗುತ್ತನೆ. ಒಂದು-ಶೂನ್ಯ ಗೋಲ್ ನಿಂದ ಮುಂದಿರುವ ಪಾಕಿಸ್ತಾನ ಪಂದ್ಯವನ್ನು ಗೆಲ್ಲುತ್ತದೆ. ಕ್ರೀಡಾ ಮನೋಭಾವ ತೋರುವ ಖಾನ್, ಪಾಕಿಸ್ತಾನ ತಂಡದ ನಾಯಕನನ್ನು ಅಭಿನಂದಿಸಿ ಆಲಿಂಗಿಸುತ್ತಾನೆ. ಅಷ್ಟೇ!  ಮುಸ್ಲಿಮ್ ಧರ್ಮೀಯ ಎಂಬ ಕಾರಣಕ್ಕಾಗಿ ಈ ಸೋಲು- ಅಭಿನಂದನೆ- ಆಲಿಂಗನಕ್ಕೆ ಕೋಮುವಾದಿ ರಂಗು ಬಳಿಯಲಾಗುತ್ತದೆ. ಕಬೀರ್ ಖಾನ್ ತನ್ನ ಊರು ಕೇರಿಯ ಬಹಿಷ್ಕಾರಕ್ಕೆ ತುತ್ತಾಗುತ್ತಾನೆ. ಆತನ ಮನೆಯ ಗೋಡೆಗಳ ಮೇಲೆ ‘ಗದ್ದಾರ್’ (ದೇಶದ್ರೋಹಿ) ಎಂದು ಇದ್ದಿಲುಗಳಿಂದ ಗೀಚಲಾಗುತ್ತದೆ. ಮನೆ ಊರನ್ನು ತೊರೆದು ಹೋಗುತ್ತಾನೆ ಕಬೀರ್ ಖಾನ್.

ಏಳು ವರ್ಷಗಳ ನಂತರ (ಚಿತ್ರಕತೆಯಲ್ಲಿ) ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಹುದ್ದೆ ಖಾನ್ ನನ್ನು ಹುಡುಕಿಕೊಂಡು ಬರುತ್ತದೆ. ಒಳಜಗಳ, ಮತ್ಸರ ಹಾಗೂ ವ್ಯೂಹರಚನೆಯ ಕೊರತೆಯಿಂದ ನೆಲಕಚ್ಚಿ ಹೋಗಿದ್ದ ಈ ತಂಡವನ್ನು ಕಬೀರ್ ಖಾನ್ ಮುರಿದು ಕಟ್ಟುವ ಪರಿ ಹೃದಯ ಕಲಕುವಂತಹುದು. ಇದೇ ತಂಡ ಕಡೆಗೆ ವಿಶ್ವಕಪ್ ಗೆಲ್ಲುತ್ತದೆ. ಅಸಾಧ್ಯವೆನಿಸಿದ್ದನ್ನು ಸಾಧ್ಯ ಮಾಡುತ್ತದೆ. ವಿಶ್ವ ಹಾಕಿ ಛಾಂಪಿಯನ್ ಎನಿಸಿಕೊಳ್ಳುತ್ತದೆ. 1983ರಲ್ಲಿ ಕಪಿಲ್ ದೇವ್ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗ ಉಂಟಾದ ರೋಮಾಂಚನ ಭಾರತದಲ್ಲಿ ಮರಳಿ ಸುರುಳಿ ಬಿಚ್ಚುತ್ತದೆ. ಕಪಿಲ್ ತಂಡದ ಗೆಲುವು ವಾಸ್ತವವಾಗಿರುತ್ತದೆ, ಆದರೆ ಕೋಚ್ ಕಬೀರ್ ಖಾನ್ ಕಟ್ಟಿದ ಮಹಿಳಾ ಹಾಕಿ ತಂಡದ ಗೆಲುವು ಕಾಲ್ಪನಿಕ ಎಂಬುದಷ್ಟೇ ವ್ಯತ್ಯಾಸ. ಹೆಣ್ಣುಮಕ್ಕಳ ಹಾಕಿ ಎಂದು ತಾತ್ಸಾರಕ್ಕೆ ತುತ್ತಾಗಿದ್ದ ಕ್ರೀಡೆಗೆ ದೊರೆಯುವ ಈ ಕಾಲ್ಪನಿಕ ಗೆಲುವು, ಪುರುಷಾಧಿಪತ್ಯ ಸಮಾಜದಲ್ಲಿ ಹೊಸ ಒಪ್ಪಿಗೆಯನ್ನು ಟಂಕಿಸಿರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2002ರ ಕಾಮನ್ವೆಲ್ತ್ ಪಂದ್ಯಗಳಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದ ನೈಜ ಕತೆ ಸುದ್ದಿ ಪತ್ರಿಕೆಗಳಲ್ಲಿ ಅಚ್ಚಾಗಿರುತ್ತದೆ.   ಈ ವರದಿಗಳನ್ನು ಆಧರಿಸಿ ಜೈದೀಪ್ ಸಾಹ್ನಿ ಎಂಬ ಪ್ರತಿಭಾವಂತ ರಚಿಸಿದ ಕಾಲ್ಪನಿಕ ಚಿತ್ರಕತೆಯೇ ‘ಚಕ್ ದೇ ಇಂಡಿಯಾ’. ನಿಜ ತಂಡ ಮತ್ತು ನಿಜ ಕೋಚ್ ಗಳಿಂದ ಪ್ರೇರಿತರಾಗಿಯೇ ಚಿತ್ರಕತೆ ರಚಿಸಿರುತ್ತಾರೆ ಸಾಹ್ನಿ. ಮಹಿಳೆಯರ ಹಾಕಿ ಕ್ರೀಡೆಗೆ ಮೀಡಿಯಾ ಜಾಗವನ್ನೇ ನೀಡುವುದಿಲ್ಲ ಯಾಕೆ ಎಂಬುದು ಸಾಹ್ನಿಯನ್ನು ಕಾಡುತ್ತದೆ. ಈ ಕುರಿತೇ ಗಮನ ಕೇಂದ್ರೀಕರಿಸುತ್ತಾರೆ. ಚಿತ್ರಕತೆ ರಚಿಸಲು ಎಂ.ಕೆ.ಕೌಶಿಕ್ ಅವರೊಂದಿಗೆ ಸಮಾಲೋಚಿಸಲಾಗುತ್ತದೆ. 1980ರ ಒಲಿಂಪಿಕ್ಸ್ ಚಿನ್ನ ಗೆದ್ದ ಭಾರತೀಯ ಪುರುಷ ಹಾಕಿ ತಂಡದ ನಾಯಕ ಎಂ.ಕೆ. ಕೌಶಿಕ್. ಕಾಮನ್ವೆಲ್ತ್ ಮಹಿಳಾ ಹಾಕಿ ಚಿನ್ನವನ್ನು ಗೆದ್ದ  ತಂಡದ ಕೋಚ್ ಆಗಿ ಕೆಲಸ ಮಾಡಿರುತ್ತಾರೆ.ಚಿತ್ರಕತೆಯ ಕಬೀರ್ ಖಾನ್ ಪಾತ್ರವು ಮೀರ್ ರಂಜನ್ ನೇಗಿ ಎಂಬ ಮತ್ತೊಬ್ಬ ಅಪ್ರತಿಮ ಹಾಕಿ ಪ್ರತಿಭೆಯನ್ನು ಹೋಲುವ ಕುರಿತು ಗಮನ ಸಳೆಯುತ್ತಾರೆ ಕೌಶಿಕ್.

ಕಾಕತಾಳೀಯ ಎಂಬಂತೆ ಕಬೀರ್ ಖಾನ್ ಪಾತ್ರವು ಮೀರ್ ರಂಜನ್ ನೇಗಿ ಎದುರಿಸಿದ ನಿಜಬದುಕಿನ ತಳಮಳಗಳು- ಕಳವಳಗಳನ್ನೇ ಹೋಲುತ್ತಿರುತ್ತದೆ. 1982ರ ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಪಾಕಿಸ್ತಾನಕ್ಕೆ ‘ಸಲೀಸಾಗಿ ಗೆಲುವು ಒಪ್ಪಿಸಿದ’ ಆಪಾದನೆಗೆ ತುತ್ತಾಗಿರುತ್ತಾರೆ ನೇಗಿ. ಕಡೆಗೆ, ಕಲ್ಪನೆಯ ಕತೆಯ ‘ದೇಶದ್ರೋಹಿ’ ಕಬೀರ್ ಖಾನ್ ನನ್ನು ಈ ನೈಜ ನೇಗಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ ‘ಚೆಕ್ ದೇ ಇಂಡಿಯಾ’ ಸಿನೆಮಾದಲ್ಲಿ. ಅಂತಿಮವಾಗಿ ಚಿತ್ರಕತೆಯ ಕಬೀರ್ ಖಾನ್,  ಕೌಶಿಕ್ ಮತ್ತು ನೇಗಿಯವರ ನಿಜ ಬದುಕಿನ ಅನುಭವಗಳನ್ನು ಕಲೆಸಿ ನಿರ್ಮಿಸಿದ ಪಾತ್ರವಾಗಿ ರೂಪು ತಳೆಯುತ್ತಾನೆ.

ಪುರುಷಪ್ರಾಧಾನ್ಯ ವ್ಯವಸ್ಥೆಯ ಮುಳ್ಳುಬೇಲಿಗಳನ್ನು ದಾಟಿ ಭಾರತೀಯ ಮಹಿಳಾ ಹಾಕಿ ತಂಡ ಗೆಲ್ಲಲು ಕಡೆಗೆ ಒಬ್ಬ ಪುರುಷ ತರಬೇತಿದಾರನೇ ಬೇಕಾಗುತ್ತಾನೆ ಎಂಬ ಮಹಿಳಾವಾದಿ ಕಟುಟೀಕೆಯನ್ನು ಚಕ್ ದೇ ಇಂಡಿಯಾ ಎದುರಿಸುತ್ತದೆ. ಆದರೆ ಟೀಕೆ ವಾಸ್ತವದೂರವೇನೂ ಅಲ್ಲ.

ಬೆಳ್ಳಿ ತೆರೆಯ ಭಾರತ ಮಹಿಳಾ ಹಾಕಿ ತಂಡ ಮತ್ತು ತರಬೇತುದಾರ ಕಬೀರ್ ಖಾನ್ ನ ಕತೆಯುಳ್ಳ ‘ಚಕ್ ದೇ ಇಂಡಿಯಾ’ 20 ಕೋಟಿ ಬಂಡವಾಳ ಹಾಕಿ, 120 ಕೋಟಿ ಸಂಪಾದಿಸಿದ ಸೂಪರ್ ಹಿಟ್ ಚಿತ್ರವಾಗುತ್ತದೆ. ಕ್ರೀಡಾಭಿಮಾನಿಗಳು- ಚಲನಚಿತ್ರ ಪ್ರೇಮಿಗಳ ಮನಸೂರೆಗೊಳ್ಳುತ್ತದೆ. ಕೋಟಿಗಟ್ಟಲೆ ಕಣ್ಣಂಚುಗಳನ್ನು ಒದ್ದೆ ಮಾಡುತ್ತದೆ. ಕೊರಳಸೆರೆಗಳನ್ನು ಉಬ್ಬಿಸುತ್ತದೆ.

ಅಂದ ಹಾಗೆ ಕಬೀರ್ ಖಾನ್ ಪಾತ್ರ ವಹಿಸಿದ್ದವರು ಶಾರುಖ್ ಖಾನ್ ಎಂಬುದನ್ನು ಎಲ್ಲರೂ ಬಲ್ಲರು. ಆದರೆ ಹಲವು ವರ್ಷಗಳ ನಂತರ, ಬೆಳ್ಳಿತೆರೆಯ ಕಬೀರ್ ಖಾನ್ ಪಾತ್ರವು ಶಾರುಖ್ ನಿಜ ಬದುಕಿಗೆ ಹೀಗೆ ನಡೆದು ಬಂದು ಕಾಡೀತೆಂಬುದನ್ನು ಖುದ್ದು ಶಾರುಖ್ ಕೂಡ ನಿರೀಕ್ಷಿಸಿರಲಾರರು.  

2007ರಲ್ಲಿ ಇಂಡಿಯನ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಆರಂಭ ಆದಾಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಸ್ತಿತ್ವಕ್ಕೆ ಬಂದಿತ್ತು. ಶಾರುಖ್ ಖಾನ್- ಜ್ಯೂಹಿ ಚಾವ್ಲಾ- ಆಕೆಯ ಗಂಡ ಜೈ ಮೆಹ್ತಾ ಈ ತಂಡದ ಮಾಲೀಕರು. ಕ್ಷಿಪ್ರಕ್ರಾಂತಿ ನಡೆದು ಶೇಖ್ ಹಸೀನಾ ಅವರು ಭಾರತಕ್ಕೆ ಪರಾರಿಯಾಗಿ ಬಂದು ನೆಲೆಸಿದ ನಂತರ ಭಾರತ- ಬಾಂಗ್ಲಾ ದೇಶದ ಸಂಬಂಧಗಳು ಪಾತಾಳಕ್ಕೆ ಕುಸಿದಿವೆ. ಭಾರತದ ಅಲ್ಪಸಂಖ್ಯಾತ ಮುಸಲ್ಮಾನರು ದ್ವೇಷದ ಹೆದ್ದೆರೆಗಳಿಗೆ ತುತ್ತಾಗಿರುವಂತೆ, ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರೂ ಅಮಾನುಷ ದೌರ್ಜನ್ಯ ಹತ್ಯೆಗಳಿಗೆ ಬಲಿಯಾಗುತ್ತಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರಹ್ಮಾನ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಶಾರುಖ್ ಅವರಿಗೆ ದೇಶದ್ರೋಹಿಯ ಪಟ್ಟ ಕಟ್ಟಲಾಗಿದೆ.

‘ಮನ್ನತ್’ನ (ಶಾರುಖ್ ಮುಂಬಯಿ ಬಂಗಲೆ) ಗೋಡೆಗಳ ಮೇಲೆ ‘ಗದ್ದಾರ್’ ಎಂದು ಈವರೆಗೆ ಗೀಚಲಾಗಿಲ್ಲ. ಪಳಗಿದ ಕ್ರೀಡಾ ಸುದ್ದಿಗಾರ ಸಂದೀಪ್ ದ್ವಿವೇದಿ ಅವರ ಮಾತುಗಳಲ್ಲಿ ಹೇಳುವುದಾದರೆ, ಕ್ರೀಡೆ ಅಥವಾ ಮನರಂಜನೆಯ ಓನಾಮವನ್ನೂ ತಿಳಿಯದವರು, ಐಪಿಎಲ್ ಹರಾಜು ನಿಯಮಗಳ ಗಂಧಗಾಳಿ ಇಲ್ಲದವರು ಅಸಂಬದ್ಧ ಮತ್ತು ಅಸಹ್ಯ ಆರೋಪಗಳನ್ನು ತೂರತೊಡಗಿದ್ದಾರೆ. ಶಾರುಖ್ ಕ್ರಿಕೆಟ್‌ಪ್ರೀತಿ ಅಥವಾ ದೇಶಪ್ರೇಮ ಕುರಿತು ಇವರಿಗೆ ಏನೂ ಗೊತ್ತಿಲ್ಲ. ವಾಸ್ತವವಾಗಿ,  ಕ್ರಿಕೆಟ್ ವಿಷಯಗಳಲ್ಲಿ ಎಷ್ಟು ಶಾರುಖ್ ಎಷ್ಟರಮಟ್ಟಿಗೆ ತೊಡಗಿಸಿಕೊಂಡಿದ್ದಾರೆ ಅಥವಾ ಮುಸ್ತಫಿಜುರ್ ಆಯ್ಕೆಯಲ್ಲಿ ಅವರ ಪಾತ್ರವೇನು ಎಂಬ ಕುರಿತ ಅಸಲಿ ಸಂಗತಿಗಳನ್ನು ಕೆಕೆಆರ್ ಅಂತರಂಗಿಗಳು ಮಾತ್ರವೇ ಬಲ್ಲರು. ಕ್ರಿಕೆಟ್ ವಿಷಯಗಳಲ್ಲಿ ಮೂಗು ತೂರಿಸುವುದು ಬಲು ಅಪರೂಪ. ಒಂದು ಕಾಲದಲ್ಲಿ ಅವರು ಗಂಭೀರ ಹಾಕಿ ಆಟಗಾರರಾಗಿದ್ದದ್ದು ಹೌದು.

ಈ ಲೇಖನ ಓದಿದ್ದೀರಾ?: ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?

 “ನಟನೆ ಕುರಿತ ಸಲಹೆಗಳನ್ನು ನಾನು ಕ್ರಿಕೆಟ್ ಆಟಗಾರರಿಂದ ಪಡೆಯುವುದಿಲ್ಲ; ಅದೇ ರೀತಿ ಕ್ರಿಕೆಟ್ ಕುರಿತು ನನ್ನ ಮಿತಿಗಳನ್ನೂ ನಾನು ಬಲ್ಲೆ” ಎನ್ನುವ ಅವರು, ತಂಡದೊಂದಿಗೆ ಕಳೆಯುವ ಸಮಯ ಕೇವಲ 10 ನಿಮಿಷ ಮಾತ್ರ. ಈ ಸಮಯದಲ್ಲಿ ಕ್ರಿಕೆಟ್ ಗಿಂತ ಹೆಚ್ಚು ಖುಶಿ ಖುಶಾಲುಗಳಲ್ಲಿ ತೊಡಗಿರುತ್ತಾರೆ.

ಕೆಕೆಆರ್ ಕೋಚ್ ಆಗಿ ಶಾರುಖ್ ಜೊತೆ ಅತ್ಯಂತ ದೀರ್ಘ ಕಾಲ ಕೆಲಸ ಮಾಡಿರುವ ಗೌತಮ್ ಗಂಭೀರ್ ಪ್ರಕಾರ- ತಾವು  ಏಳು ವರ್ಷಗಳಲ್ಲಿ ಕ್ರಿಕೆಟ್ ಕುರಿತು ಶಾರುಖ್ ಜೊತೆ ಮಾತನಾಡಿದ್ದು ಒಟ್ಟು ಸುಮಾರು 70 ಸೆಕೆಂಡುಗಳು.

ಇತ್ತೀಚಿನ ಈ ವಿವಾದಿತ ಹರಾಜಿನಲ್ಲಿ  ಮುಸ್ತಫಿಜುರ್‌ಗೆ ₹9 ಕೋಟಿ ಕೊಡುವ ಸಿದ್ಧತೆಯಲ್ಲಿತ್ತು ಚೆನ್ನೈ ಸೂಪರ್ ಕಿಂಗ್ಸ್. ಒಂಬತ್ತು ಕೋಟಿಗಿಂತ ಹೆಚ್ಚಿನ ಮೊತ್ತ ನೀಡಿ ಅವರನ್ನು ಪಡೆದಿತು ಕೆಕೆಆರ್. “ಹರಾಜಿನಲ್ಲಿ ಸಿಎಸ್ ಕೆ ಪಾಲಾಗಿದ್ದಿದ್ದರೆ,  ಆ ತಂಡದ ನಾಯಕ ಎಂಎಸ್ ಧೋನಿಯನ್ನು ದೇಶದ್ರೋಹಿ ಎಂದು ಕರೆಯಲಾಗುತ್ತಿತ್ತೇ ಎಂಬ ಪ್ರಶ್ನೆಯನ್ನು ದ್ವಿವೇದಿ ಎತ್ತಿದ್ದಾರೆ.

‘ಚಕ್ ದೇ ಇಂಡಿಯಾ’ದ ಕಡೆಯ ದೃಶ್ಯದಲ್ಲಿ ಕಬೀರ್ ಖಾನ್ ತನ್ನ ಊರು ಕೇರಿಗೆ ಹಿಂತಿರುಗುತ್ತಾನೆ. ಆನಂದದ ಕಣ್ಣೀರಿಡುವ ತಾಯಿಯ ಜೊತೆ ಮನೆಯ ಬೀಗ ತೆಗೆದು ಒಳ ಪ್ರವೇಶಿಸುತ್ತಾನೆ. ಕಾರಣವಿಲ್ಲದೆ ಅವಮಾನಿಸಿ ಗೋಡೆಗಳ ಮೇಲೆ ಗದ್ದಾರ್ ಎಂದು ಬರೆದಿದ್ದ ಅದೇ ಕೇರಿಯ ಅದೇ ಜನ ಪಶ್ಚಾತ್ತಾಪದಿಂದ ಗೋಡೆಯ ಮೇಲಿನ ಗದ್ದಾರ್ ಗೀಚುಗಳನ್ನು ಅಳಿಸುತ್ತಿರುತ್ತಾರೆ.

ಆದರೆ ಭಾರತದ ಬಹುಸಂಖ್ಯಾತರು ದೇಶದ ಗೋಡೆಗಳ ಮೇಲೆ ವಿನಾಕಾರಣ ಬರೆದಿರುವ ‘ಗದ್ದಾರ್’ ಗೀಚುಗಳನ್ನು ಅಳಿಸುವುದು ಎಂದಿಗೆ?

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ʼಈ ದಿನ.ಕಾಮ್‌ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...