ಭಾರತೀಯರು ತಮ್ಮ ಬಣ್ಣವನ್ನೇ ಕೀಳಾಗಿ ಕಂಡು ಪಾಶ್ಚಾತ್ಯ ಸೌಂದರ್ಯವನ್ನು ಹೊಗಳುತ್ತಿರುವುದು ಇಂದಿನ ದುರಂತವೇ ಸರಿ. ಈ ಕಪ್ಪು – ಬಿಳಿ ಎಂಬುದು ನಮ್ಮ ದೇಶದಲ್ಲಿ ಅಷ್ಟೇ ಇಲ್ಲ, ಜಗತ್ತಿನ ಯಾವ ನಗರಕ್ಕೆ ಹೋದರೂ ಕಾಣಸಿಗುವ ಕಟು ಸತ್ಯ ಈ ವರ್ಣಭೇದ. ವಿಶೇಷವಾಗಿ, ಆಫ್ರಿಕನ್ ದೇಶಗಳ ಕಪ್ಪು ವರ್ಣೀಯರನ್ನು ನಾವು ನಡೆಸಿಕೊಳ್ಳುವ ರೀತಿ ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವ ತೆರನಾದದ್ದು.
ಜಾಗತೀಕರಣ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲದರಲ್ಲಿಯೂ ಮುಂದುವರಿಯುತ್ತಿರುವ ಈ ಜಗತ್ತು ಈ ಮಾನವನ ಮೈ ಬಣ್ಣದ ವಿಚಾರದಲ್ಲಿ ಇನ್ನೂ ಅನಾದಿಕಾಲದಲ್ಲಿಯೇ ಇದೆ. ಮೈ ಬಣ್ಣದ ಆಧಾರದ ಮೇಲೆ ವ್ಯಕ್ತಿ ಗೌರವವನ್ನು ಅಳೆಯುವ ಈ ಕೀಳುಮಟ್ಟದ ಮನೋಭಾವ ಈ ಜಗತ್ತಿನಲ್ಲಿ ಇನ್ನೂ ಬೇರೂರಿದೆ. ಹೌದು, ವಿವಾಹವಾದ ವಧು – ವರರನ್ನು ಹರಸದೇ ಕೀಳುಮಟ್ಟದ ಟ್ರೋಲ್ ಮಾಡುವ ಮೂಲಕ ತಮ್ಮ ಮನಸ್ಥಿತಿಯನ್ನು ಹೊರಹಾಕುತ್ತಿದ್ದಾರೆ.
ಮಧ್ಯ ಪ್ರದೇಶದ ಯುವ ಜೋಡಿ ರಿಷಬ್ ರಾಜಪುತ್ ಮತ್ತು ಶೋನಲಿ ಚೌಕ್ಸಿ ಎಂಬವರು 11 ವರ್ಷಗಳ ಕಾಲ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಈ ವರ್ಷ ನವೆಂಬರ್ 23ರಂದು ಮದುವೆಯಾದರು. ತಮ್ಮ ಸಂಪ್ರದಾಯದಂತೆ ವಿವಾಹವಾದ ಅವರ ವಿಭಿನ್ನ ಶೈಲಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇವು ಅತಿ ಬೇಗನೆ ಜನರ ಗಮನ ಸೆಳೆದವು. ಅಷ್ಟೇ ವೇಗವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಮದುವೆ ವಿಡಿಯೋಗಳು ವೈರಲ್ ಆದವು. ವರನ ಚರ್ಮದ ಬಣ್ಣದ ಬಗ್ಗೆ ಅನೇಕರು ಟೀಕಿಸಿ, ಅಸಹ್ಯಕರ ಕಮೆಂಟ್ ಹಾಕಿ, ಟ್ರೋಲ್ ಮಾಡಿದರು.
ತಮ್ಮ ಖುಷಿಯ ಸಮಯ ಕಳೆದ ದಂಪತಿ ತಮ್ಮ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಆಗ ಅವರಿಗೆ ಕೆಲವರು ಅಭಿನಂದನೆಗಳನ್ನು ಸಲ್ಲಿಸಿದರೇ, ಇನ್ನೂ ಕೆಲವರು ವರ್ಣಭೇದ ಮಾಡಲು ಶುರು ಹಚ್ಚಿಕೊಂಡರು. ವರನ ಚರ್ಮದ ಬಣ್ಣಕ್ಕಾಗಿ ದಂಪತಿಗಳನ್ನು ಹೋಲಿಸಿ ಅತಿ ಕೀಳು ಮಟ್ಟದ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದರು. ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ವರನು ತೀವ್ರವಾದ ಅವಮಾನವನ್ನು ಎದುರಿಸಿದನು. ಕಪ್ಪು ಬಣ್ಣದ ಚರ್ಮ ಹೊಂದಿರುವ ಕಾರಣ ಆತನನ್ನು ಅನೇಕ ಹೆಸರುಗಳಿಂದ ಟೀಕೆ ಮಾಡಲಾಯಿತು.

ಇಷ್ಟೇ ಅಲ್ಲ, ಈ ಟ್ರೋಲ್‌ಗಳು ವಧುವನ್ನು ಸಹಿತ ಬಿಡಲಿಲ್ಲ. ಅನೇಕರು ‘ಆಕೆ ಅವನನ್ನು ದುಡ್ಡಿಗಾಗಿ ಮದುವೆಯಾಗಿದ್ದಾಳೆ’ ಎಂದು ಹೇಳಿದರೇ, ಇನ್ನೂ ಕೆಲವರು ‘ಮನೆಯಲ್ಲಿ ಬಲವಂತ ಮಾಡಿದ್ದಕ್ಕೆ ಆಕೆ ಅವನನ್ನು ಮದುವೆಯಾಗಿರಬೇಕು’ ಎಂದು ಬರೆದುಕೊಂಡಿದ್ದಾರೆ. ‘ಕಪ್ಪು ತ್ವಚೆ ಹೊಂದಿರುವ ಇಂತಹ ವ್ಯಕ್ತಿ ಜತೆಗೆ ಅವಳು ಖುಷಿಯಾಗಿರಲು ಸಾಧ್ಯವಿಲ್ಲ’ ಎಂಬುದು ಮತ್ತೊಬ್ಬರ ಟೇಕೆ.
ಚಿನ್ನಕ್ಕಾಗಿ, ಹಣಕ್ಕಾಗಿ ಕಪ್ಪು ಹುಡುಗನನ್ನು ಮದುವೆಯಾಗಿದ್ದಾಳೆ ಎಂಬ ಹಣೆಪಟ್ಟಿಯನ್ನು ಚೌಕ್ಸಿಗೆ ಕಟ್ಟಿದರು. ಸಂಪತ್ತಿಗಾಗಿ, ವಿಶೇಷ ಸವಲತ್ತುಗಳಿಗಾಗಿ, ಸರ್ಕಾರಿ ಕೆಲಸಕ್ಕಾಗಿ ಅವನನ್ನು ಮದುವೆಯಾಗಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಒಂದು ಕೈ ಮುಂದೆ ಹೋಗಿರುವ ಮತ್ತೊಬ್ಬ ಟೀಕಾಕಾರ, ‘ರಜಪೂತ್ ಅವರ ತಂದೆ ಸಚಿವರಾಗಿರಬೇಕು’ ಎಂದು ಹೇಳಿದ್ದಾರೆ.
ಇನ್ನು ಟ್ರೋಲ್‌ನಿಂದಾಗಿ ವೈರಲ್ ಆದ ಈ ದಂಪತಿಯನ್ನು ಮಾಧ್ಯಮಗಳು ಹುಡುಕಿಕೊಂಡು ಹೋಗಿ ಸಂದರ್ಶನ ಮಾಡಿವೆ.
“ಕಳೆದ 11 ವರ್ಷದಿಂದ ನಾವು ಪ್ರೀತಿ ಮಾಡುತ್ತಿದ್ದೆವು. ಮದುವೆಯಾಗುವ ಈ ಕ್ಷಣಕ್ಕಾಗಿ ನಾವು ಹಲವು ವರ್ಷಗಳಿಂದ ಕಾಯುತ್ತಿದ್ದೆವು. ಇದು ನಮ್ಮ ಕ್ಷಣ. ಇದು ನಮ್ಮ ಸಂತೋಷದ ಕ್ಷಣವಾಗಬೇಕಿತ್ತು. ಆದರೆ, ಜನರ ಪ್ರತಿಕ್ರಿಯೆಗಳನ್ನು ನೋಡಿದಾಗ, ನಾನು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೆ” ಎಂದು ರಜಪೂತ್ ಹೇಳಿದ್ದಾರೆ.
“ಜನರು ಜೋಕ್‌ಗಳು ಮತ್ತು ಮೀಮ್‌ಗಳನ್ನು ಮಾಡುತ್ತಿದ್ದರು. ಅದು ತುಂಬಾ ತಪ್ಪು” ಎಂದಿದ್ದಾರೆ. “ಇಷ್ಟು ವರ್ಷ ನಾವು ಜೊತೆಯಾಗಿ ಪ್ರೀತಿ ಮಾಡುತ್ತಿದ್ದೇವೆ. ಅವಳು ಹೆಚ್ಚು ಸುಂದರವಾಗಿದ್ದಾಳೆ. ನಾನು ಕಪ್ಪು ಮೈಬಣ್ಣ ಹೊಂದಿದ್ದೇನೆ. ನಿಮ್ಮಿಬ್ಬರ ಜೋಡಿ ಚೆನ್ನಾಗಿಲ್ಲ. ನಿಮ್ಮಿಬ್ಬರ ಬಣ್ಣ ಹೊಂದಿಕೆಯಾಗುವುದಿಲ್ಲ ಎಂದು ಇಲ್ಲಿಯವರೆಗೂ ಯಾರೂ ನಮಗೆ ಹೇಳಿರಲಿಲ್ಲ” ಎಂದಿದ್ದಾರೆ.

“ಈ ತರಹದ ಕಮೆಂಟ್‌ಗಳು ನಮ್ಮ ಮನಸ್ಸಿಗೆ ನೋವುಂಟು ಮಾಡಿವೆ. ಜನರ ಈ ಮಾತುಗಳು ನನ್ನನ್ನು ಕೆರಳಿಸುತ್ತಿದೆ” ಎಂದು ಚೌಕ್ಸಿ ಹೇಳಿದ್ದಾರೆ.
ಟ್ರೋಲ್, ಕಮೆಂಟ್, ಟೀಕೆಗಳ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಧೀರ್ಘವಾಗಿ ಬರೆದುಕೊಂಡಿರುವ ರಜಪೂತ್ ಅವರು, “ಟೀಕೆ ಮಾಡುವವರೇ, ನಿಮಗೆ ನಿರಾಶೆ ಉಂಟು ಮಾಡಿದ್ದಕ್ಕೆ ಕ್ಷಮೆ ಇರಲಿ. ಯಾಕೆಂದರೆ, ನಾನು ಸರ್ಕಾರಿ ಉದ್ಯೋಗಿಯಲ್ಲ. ನಾನು ನನ್ನ ಕುಟುಂಬಕ್ಕಾಗಿ ಕೆಲಸ ಮಾಡುತ್ತೇನೆ. ನನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನಗೆ ಉತ್ತಮ ಆದಾಯವಿದೆ. ನನ್ನ ಬಳಿ ಏನೂ ಇಲ್ಲದಿದ್ದಾಗ ಅವಳು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದಳು. ನನ್ನ ಕಾಲೇಜು ದಿನಗಳಿಂದಲೂ, ಅವಳು ನನಗೆ ಬೆಂಬಲವಾಗಿ ನಿಂತಿದ್ದಳು. ನಿಮ್ಮ ಅಭಿಪ್ರಾಯ ಹೇಗೆ ಇರಲಿ, ಅದು ಮುಖ್ಯವಾಗುವುದಿಲ್ಲ. ನಾನು ಅವಳನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಪ್ರೀತಿಸುತ್ತಿದ್ದೆ” ಎಂದು ತಮ್ಮ ಪ್ರೀತಿಯ ದಿನಗಳನ್ನ ಮೆಲುಕು ಹಾಕಿದ್ದಾರೆ.
“2014ರಲ್ಲಿ ಈ ಕನಸನ್ನು ನಾನು ಮೊದಲ ಬಾರಿಗೆ ಕಂಡಿದ್ದೆ. ನೀವು 30 ಸೆಕೆಂಡುಗಳಷ್ಟೇ ಎಂದು ಯೋಚಿಸುವ ಈ ಸಣ್ಣ ವಿಡಿಯೊ ಕ್ಲಿಪ್, ನನ್ನ ಸಂಪೂರ್ಣ ಜೀವನವನ್ನು ಸೆರೆ ಹಿಡಿದಿದೆ. ನಾನು ಹೆದರುತ್ತಿಲ್ಲ. ಇದು ನನ್ನೊಳಗೆ ಹಿಡಿದಿಟ್ಟುಕೊಂಡಿದ್ದ ಭಾವನಾತ್ಮಕ ಪ್ರವಾಹ. ಏಕೆಂದರೆ, ನಾನು ಸುಮಾರು 11 ವರ್ಷಗಳ ಕಾಲ ಈ ಕ್ಷಣಕ್ಕಾಗಿ ಕಾಯುತ್ತಿದ್ದೆ. ಇಷ್ಟು ವರ್ಷದ ನನ್ನ ನಿರೀಕ್ಷೆ ಇಷ್ಟೊಂದು ದೀರ್ಘಕಾಲದ ನಂತರ ಈ ಕ್ಷಣ ಬಂದಾಗ ನಾನು ಕಣ್ಣೀರು ಹಾಕಬಾರದು, ಅತಿಯಾದ ಸಂತೋಷ ತೋರಿಸಬಾರದು, ಭಾವನಾತ್ಮಕವಾಗಬಾರದು ಎಂದು ನಿರ್ಧರಿಸಿದ್ದೆ. ಆದರೆ, ಆಕೆಯನ್ನು ನೋಡುತ್ತಲೇ ಕಳೆದುಹೋದೆ. ಕಾಲೇಜು ದಿನಗಳಿಂದ ಇಲ್ಲಿಯವರೆಗೂ ಅವರು ನನ್ನ ಒಳ್ಳೆಯ ಮತ್ತು ಕೆಟ್ಟ ಕ್ಷಣದಲ್ಲಿ ನನ್ನೊಂದಿಗಿದ್ದಾರೆʼʼ ಎಂದು ವಿವರಿಸಿದ್ದಾರೆ.
ವರ್ಣಭೇದದ ವಿಷಯವನ್ನು ಉಲ್ಲೇಖಿಸಿದ ರಜಪೂತ್ ಅವರು, “ತಮ್ಮ ಜೀವನದುದ್ದಕ್ಕೂ ವರ್ಣ ತಾರತಮ್ಯವನ್ನು ಎದುರಿಸಿದ್ದೇನೆ. ನನ್ನದು ಕಪ್ಪು ಮೈಬಣ್ಣ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ, ನನ್ನ ಹೆಂಡತಿಯ ದೃಷ್ಟಿಯಲ್ಲಿ, ಅತ್ಯುತ್ತಮ ಗಂಡನಾಗಲು ಇಷ್ಟ ಪಡುತ್ತೇನೆ. ಅದು ಅತ್ಯಂತ ಮುಖ್ಯ. ನನ್ನ ಕುಟುಂಬದ ಬಗ್ಗೆ ತಪ್ಪಾಗಿ ಮಾತನಾಡುವ ಅಗತ್ಯವಿಲ್ಲ” ಎಂದಿದ್ದಾರೆ.

“ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡಿರುವುದು ನನಗೆ ಇಷ್ಟವಾಗಲಿಲ್ಲ. ನಾನು ಕಮೆಂಟ್ ಮಾಡುವವರಿಗೆ, ಟ್ರೋಲ್ ಮಾಡುವವರಿಗೆ ಹೇಳಲು ಬಯಸುತ್ತೇನೆ. ನೀವು ನನಗೆ ಯಾರೂ ಅಲ್ಲ. ನೀವುಗಳು ಯಾವುದೇ ಕುಟುಂಬವನ್ನೂ ಗುರಿಯಾಗಿಸುವ, ಟ್ರೋಲ್ ಮಾಡುವ ಹಕ್ಕನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ. ಜತೆಗೆ, “2014ರಲ್ಲಿ ಕಾಲೇಜಿನಲ್ಲಿ ಭೇಟಿಯಾದಾಗಿನಿಂದ ಒಟ್ಟಿಗೆ ಇದ್ದೇವೆ. ಹೊರಗಿನವರು ತಮ್ಮ ಜೀವನವನ್ನು ನಿರ್ಣಯಿಸಬಾರದು” ಎಂಬ ಕಿವಿಮಾತು ಹೇಳಿದ್ದಾರೆ.
ಈಗ ತಾನೇ ಮದುವೆಯಾದ ಈ ನವದಂಪತಿ ಖುಷಿ ದಿನಗಳನ್ನ ಕಳೆಯಬೇಕಿತ್ತು. ಆದರೆ, ಈ ಟ್ರೋಲ್‌ಗಳಿಂದ, ಜನರ ಈ ಅಸಹ್ಯಕರ ಕಾಮೆಂಟ್‌ಗಳಿಂದ ಕಂಗೆಡುವಂತಾಗಿದೆ.
ಈ ಟ್ರೋಲಿಗರಿಗೆ, ಕೊಳಕು, ಹೀನ ಮನಸ್ಥಿತಿ ಉಳ್ಳವರಿಗೆ ಇತ್ತೀಚೆಗೆ ಮದುವೆಯಾದ ರಿಷಭ್ ರಜಪೂತ್ ಮತ್ತು ಸೋನಾಲಿ ಚೌಕ್ಸಿ ಅಷ್ಟೇ ಇವರ ವರ್ಣ ಭೇದದ ಆಹಾರವಲ್ಲ. ಈ ಹಿಂದಿನಿಂದಲೂ ಸಾಮಾಜಿಕ ಮಾಧ್ಯಮದಲ್ಲಿ ಬಣ್ಣದ ಆಧಾರದ ಮೇಲೆ ಟ್ರೋಲ್ ಮಾಡುವ ಚಾಳಿ ಇದೆ.
ಈ ಸುದ್ದಿ ಓದಿದ್ದೀರಾ? ಪಶ್ಚಿಮ ಬಂಗಾಳ | ಕೋಮು ವಿಭಜನೆ; ಚುನಾವಣೆಗೂ ಮುನ್ನ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ!
ಪ್ಯಾನ್ ಇಂಡಿಯಾ ವ್ಯಕ್ತಿ, ಜವಾನ್ ಎಂಬ ಮೆಗಾ-ಬ್ಲಾಕ್ ಬಸ್ಟರ್ ಚಿತ್ರ ನೀಡಿದ ಖ್ಯಾತ ತಮಿಳು ನಿರ್ದೇಶಕ ಅಟ್ಲೀ ಕೂಡ ಈ ಟ್ರೋಲ್‌ನಿಂದ ಹೊರತಾಗಿಲ್ಲ. ಇವರ ಪತ್ನಿ ಪ್ರಿಯಾ ಅಟ್ಲೀ ಅವರು ಸುಂದರವಾಗಿರುವುದು, ನಿರ್ದೇಶಕನ ಮೈ ಬಣ್ಣ ಕಪ್ಪು ಆಗಿರುವುದೇ ಈ ಟ್ರೋಲ್‌ಗೆ ಪ್ರಮುಖ ಕಾರಣವಾಗಿತ್ತು.

ಇದಿಷ್ಟೇ ಅಲ್ಲ, ಈ ಹಿಂದಿನಿಂದಲೂ ಹಲವರು ವರ್ಣಭೇದಕ್ಕೆ ತುತ್ತಾಗಿದ್ದಾರೆ. ಇನ್ನು ಹಳ್ಳಿಕಡೆಯಂತೂ ಇಂದಿಗೂ ಕೂಡ ಗಂಡು ಮಕ್ಕಳು ಕಪ್ಪಾಗಿರಬಹುದು, ನಡೆಯುತ್ತೆ. ಆದರೆ, ಹೆಣ್ಣು ಮಕ್ಕಳು ಕಪ್ಪಾಗಿರಬಾರದು ಎಂಬ ಮನಸ್ಥಿತಿ ಬೇರೂರಿದೆ. ಗಂಡಿಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದರೆ, ಬಿಳಿ ಮೈಬಣ್ಣದ ಹೆಣ್ಣೇ ಬೇಕು ಎಂಬ ಮೊದಲ ನಿಯಮ ಹಾಕಿಕೊಂಡಿರುತ್ತಾರೆ.
ಭಾರತೀಯರು ತಮ್ಮ ಬಣ್ಣವನ್ನೇ ಕೀಳಾಗಿ ಕಂಡು ಪಾಶ್ಚಾತ್ಯ ಸೌಂದರ್ಯವನ್ನು ಹೊಗಳುತ್ತಿರುವುದು ಇಂದಿನ ದುರಂತವೇ ಸರಿ. ಇನ್ನು ಈ ಕಪ್ಪು – ಬಿಳಿ ಎಂಬುದು ನಮ್ಮ ದೇಶದಲ್ಲಿ ಅಷ್ಟೇ ಇಲ್ಲ, ಜಗತ್ತಿನ ಯಾವ ನಗರಕ್ಕೆ ಹೋದರೂ ಕಾಣಸಿಗುವ ಕಟು ಸತ್ಯ. ವಿಶೇಷವಾಗಿ ಆಫ್ರಿಕನ್ ದೇಶಗಳ ಕಪ್ಪು ವರ್ಣೀಯರನ್ನು ನಾವು ನಡೆಸಿಕೊಳ್ಳುವ ರೀತಿ ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವ ತೆರನಾದದ್ದು.
ಹಾಗಿದ್ದರೇ, ಈ ಬಿಳಿ ಬಣ್ಣ ಎಂಬುದು ಶ್ರೇಷ್ಠ, ಕಪ್ಪು ಕನಿಷ್ಠ ಎಂಬ ಭಾವನೆ ಶುರುವಾಗಿದ್ದು ಯಾವಾಗ?
ಆಸ್ಟ್ರೇಲಿಯಾದಲ್ಲಿ, ಬ್ರಿಟನ್‌ನಲ್ಲಿ, ಅಮೆರಿಕೆದಲ್ಲಿ ಭಾರತೀಯರ ಮೇಲೆ ನಡೆಯುವ ವರ್ಣದ್ವೇಷದ ಹಲ್ಲೆಗಳನ್ನು ಕೊರಳೆತ್ತಿ ಖಂಡಿಸುವ ನಮಗೆ ನಮ್ಮ ಬೆನ್ನೇ ಕಾಣುವುದಿಲ್ಲ. ಕಪ್ಪು ವರ್ಣವನ್ನು ಕೀಳು ಎಂದು, ಗೌರವರ್ಣವನ್ನು ಮೇಲೆಂದೂ ನೂರಾರು ವರ್ಷಗಳಿಂದ ನಿತ್ಯ ಬದುಕಿನಲ್ಲಿ ಕಂಡೂ ಕಾಣದಂತೆ ಭೇದ ಭಾವ ಬಗೆಯುತ್ತ ಬಂದಿರುವ ನಾವು ಆಷಾಢಭೂತಿಗಳು. ಬಿಳಿ ತೊಗಲು ಬಹುತೇಕ ಭಾರತೀಯರ ಅಂತಸ್ಸಾಕ್ಷಿಗಳಿಗೆ ಅಂಟಿಕೊಂಡು ಬಂದಿರುವ ಗೀಳು.
ಹೌದು, ಮೈ ಬಣ್ಣ ಕುರಿತ ಭ್ರಮೆಗಳು ಅಭದ್ರತೆಯ ಆತಂಕಗಳ ಅಡಿಪಾಯಗಳ ಮೇಲೆ ಸಾವಿರಾರು ಕೋಟಿ ರುಪಾಯಿಗಳ ವಹಿವಾಟಿನ ಉದ್ಯಮಗಳು ಎದ್ದು ನಿಂತಿವೆ. ಗಂಡಸರಿಗೆ ಪ್ರತ್ಯೇಕ ಫೇರ್ನೆಸ್ ಕ್ರೀಮುಗಳು ಮಾರುಕಟ್ಟೆಯನ್ನು ಮುತ್ತಿವೆ. ಹೆಂಗಸಿಗರಿಗಂತೂ ಹೇಳತೀರದ ಕ್ರೀಮ್ಗಳು…

ಭಾರತೀಯರ ಬಿಳಿ ತೊಗಲಿನ ಗೀಳಿನ ಬೇರುಗಳನ್ನು ಆರ್ಯರ ವಲಸೆ, ಮುಸ್ಲಿಂ ಆಕ್ರಮಣಕಾರರ ದಾಳಿ, ಬ್ರಿಟಿಷರ ಆಳ್ವಿಕೆಯಲ್ಲಿ ಅರಸುವ ಪ್ರಯತ್ನಗಳು ಜರುಗಿರುವುದು ಉಂಟು. ಆದರೆ, ಇಲ್ಲಿಯ ತನಕ ಇಂತಹುದೇ ಕಾರಣವೆಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗಿಲ್ಲ. ಆದರೆ, ಭಾರತ ದೇಶ ಆರಾಧಿಸುವ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಇಂತಹ ವರ್ಣದ್ವೇಷ ಕಂಡು ಬಂದಿಲ್ಲ ಎಂಬುದು ನಮ್ಮ ಆಷಾಢಭೂತಿಗಳ ಪಾಲಿಗೆ ಕಟು ವಾಸ್ತವ.
ಹೌದು, 1890ರ ಆಪ್ಟೆ ಸಂಸ್ಕೃತ ನಿಘಂಟಿನ ಪ್ರಕಾರ ಕೃಷ್ಣ ಎಂಬ ಶಬ್ದಕ್ಕೆ ಕಪ್ಪು, ಕತ್ತಲೆ, ಕಡು ನೀಲಿ, ದುಷ್ಟ, ಅನಿಷ್ಟ, ಕೃಷ್ಣಮೃಗ, ಕೋಗಿಲೆ, ಕೃಷ್ಣಪಕ್ಷ, ವಿಷ್ಣುವಿನ ಎಂಟನೆಯ ಅವತಾರ ಕೃಷ್ಣ, ಕೃಷ್ಣನ ಮಗ ಪ್ರದ್ಯುಮ್ನ, ಮಹಾಭಾರತದ ಅರ್ಜುನ ಎಂಬ ಅರ್ಥಗಳಿವೆ. ಕೃಷ್ಣ ಎಂಬುದು ದೇಶದ ಅತಿ ಜನಪ್ರಿಯ ಹೆಸರುಗಳಲ್ಲೊಂದು.
ವಿಷ್ಣುವಿನ ಮೂರು ಅವತಾರಗಳಾದ ರಾಮ, ಕೃಷ್ಣ ಹಾಗೂ ಮೋಹಿನಿಯ ಮೈ ಬಣ್ಣ ಕಪ್ಪು ಇಲ್ಲವೇ ಕಡು ನೀಲಿ. ಮೂವರ ಸೌಂದರ್ಯವನ್ನು ಪುರಾಣಗಳು, ಭಾಗವತಗಳು ಕೊಂಡಾಡಿವೆ.
ವಾಲ್ಮೀಕಿ ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ಬಣ್ಣಿಸುವ ಪ್ರಕಾರ ರಾಮನ ಮೈ ಕಡು ಕಂದು ಮತ್ತು ಕಣ್ಣುಗಳು ವರ್ಣ ಕೆಂಪು. ರಾವಣನ ಶಯ್ಯಾಗಾರದ ಸುಂದರಿಯರು ಕಪ್ಪು ಬಣ್ಣದವರಾಗಿದ್ದರು ಎಂಬುದು ಇದೇ ಸುಂದರಕಾಂಡದ ಪ್ರಸ್ತಾಪ. ಮಹಾಭಾರತದ ದ್ರೌಪದಿ, ಸತ್ಯವತಿ, ವ್ಯಾಸ, ಕರ್ಣ ಕಪ್ಪು ಬಣ್ಣದವರು. ಆಗ ಸುಂದರವಾಗಿದ್ದ ಕಪ್ಪು ಈಗ ಅಸಹ್ಯದ ಬಣ್ಣವಾಗಿ ಬದಲಾದದ್ದು ಹೇಗೆ ಮತ್ತು ಯಾಕೆ?
ದೇಶದ ಉದ್ದಗಲಕ್ಕೆ ದೇಗುಲಗಳು ಮತ್ತು ಸಂಪ್ರದಾಯಸ್ಥರ ಮನೆ ಗೋಡೆಗಳಲ್ಲಿ ತೂಗಿರುವ ರಾಜಾ ರವಿವರ್ಮನ ತೈಲ ಚಿತ್ರಗಳು ಈ ಎಲ್ಲರನ್ನೂ ಗೌರವರ್ಣದವರನ್ನಾಗಿ ಬದಲಾಯಿಸಿಬಿಟ್ಟಿವೆ. ಮನೆ ಮನೆಗಳನ್ನು ತಲುಪಿದ ರಮಾನಂದ ಸಾಗರ್ ಮತ್ತು ಛೋಪ್ರಾ ಅವರ ರಾಮಾಯಣ ಮಹಾಭಾರತ ಟೀವಿ ಧಾರಾವಾಹಿಗಳು ಪ್ರಸಾರ ಮಾಡಿದ್ದೂ ಇದೇ ಮಿಥ್ಯೆಯನ್ನು.
ಇನ್ನು 200 ವರ್ಷ ಭಾರತವನ್ನು ಆಳಿದ ಈ ಬ್ರೀಟಿಷರು ಬಿಳಿ ಮೈ ಬಣ್ಣವನ್ನು ಹೊಂದಿದ್ದರು. ದೇಶಕ್ಕೆ ಬಂದ ಮೊಘಲರ ಮೈ ಬಣ್ಣ ಬಿಳಿ. ಹೀಗಾಗಿ, ಆಳುವವರ ಮೈಬಣ್ಣ ಬಿಳಿ. ಇದು ಶ್ರೇಷ್ಠ ಎಂಬ ಭ್ರಮೆ ಜನರ ಮನಸ್ಸಲ್ಲಿ ಬಂತು.
ವಿಶ್ವದಲ್ಲಿ ಬದುಕಿರುವ ಎಲ್ಲ ಆಧುನಿಕ ಮಾನವರು ಆಫ್ರಿಕಾದಿಂದ ಉಗಮಗೊಂಡಿದ್ದಾರೆ. ಅವರ ಮೂಲ ಬಣ್ಣ ಕಪ್ಪು ಎಂಬುದು ವೈಜ್ಞಾನಿಕವಾಗಿ ಸಾಬೀತಾದ ಸತ್ಯ. ಇದನ್ನು ‘ಔಟ್ ಆಫ್ ಆಫ್ರಿಕಾ’ ಸಿದ್ಧಾಂತ ಎಂದು ಕರೆಯುತ್ತಾರೆ. ಸುಮಾರು 2,00,000-3,00,000 ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಉಗಮಗೊಂಡ ನಮ್ಮ ಪೂರ್ವಜರು, ಸುಮಾರು 60,000-70,000 ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಬಂದು ವಿಶ್ವದಾದ್ಯಂತ ವಲಸೆ ಬಂದರು. ಈ ವಲಸೆಯ ಸಮಯದಲ್ಲಿ ವಿವಿಧ ಪ್ರದೇಶಗಳ ಪರಿಸರಕ್ಕೆ ಅನುಗುಣವಾಗಿ ಅವರ ಮೈಬಣ್ಣದಲ್ಲಿ ವೈವಿದ್ಯತೆ ಬಂದಿತು.

ಆಫ್ರಿಕಾ ಭಾಗದಲ್ಲಿ ತೀವ್ರ ಯುವಿ ಕಿರಣಗಳು ನೇರವಾಗಿ ಬೀಳುವುದರಿಂದ ಅಲ್ಲಿನ ಜನರ ಬಣ್ಣವು ಕಪ್ಪಾಗಿದೆ. ವಲಸೆಯಿಂದ ಉತ್ತರ ದಿಕ್ಕಿಗೆ ಬಂದಾಗ, ಮುಖ್ಯವಾಗಿ ಯುರೋಪ್ ಮತ್ತು ಏಷ್ಯಾ ಭಾಗದಲ್ಲಿ ಯುವಿ ಕಿರಣಗಳ ಪ್ರಭಾವ ಕಡಿಮೆ. ಹೀಗಾಗಿ, ಇಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಚರ್ಮದ ಬಣ್ಣ ಬದಲಾಯಿತು.
ಕಪ್ಪು ಜನರು ಈ ಭೂಮಿ ಮೇಲೆ ಬದುಕಲೇಬಾರದು ಎಂಬ ರೀತಿ ವರ್ತಿಸುತ್ತಿದ್ದಾರೆ. ಆದರೆ, ಎದೆಯ ತೊಟ್ಟು ಕಪ್ಪು, ಮೋಡ ಕಪ್ಪಾಗಿದ್ದರೇ ಮಾತ್ರ ಮಳೆಯಾಗಿ ಬೆಳೆ, ರಾತ್ರಿಯ ಕತ್ತಲಿನಲ್ಲಿಯೇ ನಿದ್ದೆ ಮಾಡಬೇಕು, ಇನ್ನೂ ಆಗಸದಲ್ಲಿ ನಕ್ಷತ್ರಗಳು ಹೊಳೆಯುವುದು ಕತ್ತಲೆ ಇದ್ದಾಗ ಮಾತ್ರ. ಅಷ್ಟೇ ಯಾಕೆ, ನಿಮ್ಮ ಕಣ್ಣಲ್ಲಿರುವ ಕಪ್ಪು ಭಾಗದಿಂದಲೇ ನಿಮಗೆ ದೃಷ್ಟಿಯಿರುವುದು, ಅದು ಬೆಳ್ಳಗಿದ್ದರೇ ದೃಷ್ಟಿಯೇ ಇಲ್ಲ. ಕೂದಲು ಕಪ್ಪಾಗಿದ್ದರೇನೇ ನೋಡುವುದುಕ್ಕೆ ಚಂದ. ತಮಿಳುನಾಡಿನ ಜನ ಕಪ್ಪನ್ನ ಸುಂದರ ಎಂದು ಭಾವಿಸುತ್ತಾರೆ. ಬಿಳಿ ಬಣ್ಣವಾಗಲಿ, ಕಪ್ಪಾಗಲಿ ಯಾವುದು ಕೂಡ ಕೀಳಲ್ಲ, ಮೇಲಲ್ಲ, ಎಲ್ಲರೂ ಕೂಡ ಮಾನವರು. ಮಾನವರನ್ನ ಮಾನವರಂತೆ ಕಾಣುವುದನ್ನ ಮೊದಲು ಕಲಿಯೋಣ.




