ಚುನಾವಣೆಗಳು ಕೇವಲ ಅಧಿಕಾರದ ಹೋರಾಟವಾಗದೆ, ವಿಶ್ವಾಸದ ಸಂಭ್ರಮವಾಗಬೇಕು. ಪಾರದರ್ಶಕತೆ ಇಲ್ಲದೆ ಪ್ರಜಾಪ್ರಭುತ್ವವೇ ಇಲ್ಲ ಎಂಬುದು ಜಗದೀಪ್ ಎಸ್ ಚೋಕ್ಕರ್ ಅವರ ಕನಸು. ಇದನ್ನು ದೇಶದ ಪ್ರತಿಯೊಬ್ಬ ಪ್ರಜೆ ಉಳಿಸಿಕೊಳ್ಳುವುತ್ತ ಗಮನಹರಿಸಬೇಕು.
ಭಾರತದ ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಉತ್ತೇಜಿಸುವಲ್ಲಿ ಅಪಾರ ಕೊಡುಗೆ ನೀಡಿದ ಜಗದೀಪ್ ಎಸ್ ಚೋಕ್ಕರ್ (81) ಅವರು ಸೆಪ್ಟೆಂಬರ್ 12ರಂದು ನವದೆಹಲಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಡೆಮಾಕ್ರಟಿಕ್ ರಿಫಾರ್ಮ್ಸ್ ಅಸೋಸಿಯೇಷನ್ (ಎಡಿಆರ್) ಸಹಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು, ಭಾರತೀಯ ರಾಜಕೀಯದಲ್ಲಿ ಸ್ವಚ್ಛತೆಯನ್ನು ತರುವ ಸಲುವಾಗಿ ನಿರಂತರವಾಗಿ ಹೋರಾಡಿದರು. ಚೋಕ್ಕರ್ ಅವರು ಕೇವಲ ಒಬ್ಬ ರಾಜಕೀಯ ಸುಧಾರಕರಲ್ಲದೆ, ಶಿಕ್ಷಣತಜ್ಞ, ಸಂಶೋಧಕ, ಬರಹಗಾರ, ಪಕ್ಷಿಪ್ರಿಯ ಮತ್ತು ಪರಿಸರ ಸಂರಕ್ಷಕರೂ ಆಗಿದ್ದರು. ಅವರ ಜೀವನವು ವೈವಿಧ್ಯಮಯವಾಗಿದ್ದು, ಭಾರತದ ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಅನನ್ಯವಾಗಿದೆ. ಅವರ ಹೋರಾಟಗಳು ಸುಪ್ರೀಂ ಕೋರ್ಟ್‌ನ ಹಲವು ಐತಿಹಾಸಿಕ ತೀರ್ಪುಗಳಿಗೆ ಕಾರಣವಾಯಿತು, ಇದರಿಂದಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆಯು ಹೆಚ್ಚಾಯಿತು.
ಜಗದೀಪ್ ಎಸ್ ಚೋಕ್ಕರ್ ಅವರು ಹರಿಯಾಣದ ಪಾಣಿಪತ್ ಜಿಲ್ಲೆಯ ಗ್ರಾಮದ ಸಾಧಾರಣ ಕುಟುಂಬದಲ್ಲಿ ಜನಿಸಿದವರು. ತಮ್ಮ ಊರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ನಂತರ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿ ಭಾರತೀಯ ರೈಲ್ವೆಯಲ್ಲಿ ವೃತ್ತಿಜೀವನ ಆರಂಭಿಸಿದರು. ಸುರಕ್ಷಿತ ಜೀವನಕ್ಕೆ ಉದ್ಯೋಗ ಲಭಿಸಿದ್ದರೂ ಇನ್ನಷ್ಟು ಕಲಿಯುವ ಆಸೆಯಿಂದ ದೆಹಲಿ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಎಂಬಿಎ ಪದವಿ ಪಡೆದರು. ಅಲ್ಲಿಂದ ಅಮೆರಿಕದ ಲೂಯಿಜಿಯಾನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪಿಎಚ್.ಡಿ ಮುಗಿಸಿ, 1985ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್(ಐಐಎಂಎ)ಯಲ್ಲಿ ಸಂಸ್ಥಾತ್ಮಕ ನಡವಳಿಕೆಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇರಿ ಡೀನ್ ಮತ್ತು ಮುಖ್ಯ ನಿರ್ದೇಶಕರ ಸ್ಥಾನಗಳನ್ನು ಅಲಂಕರಿಸಿದರು.
ಚೋಕ್ಕರ್ 2006ರ ನವೆಂಬರ್‌ನಲ್ಲಿ ನಿವೃತ್ತರಾದರು, ಆದರೆ ಅವರ ಶೈಕ್ಷಣಿಕ ಕೊಡುಗೆಗಳು ಅನೇಕ ವಿದ್ಯಾರ್ಥಿಗಳ ಜೀವನವನ್ನು ಪ್ರಭಾವಿಸಿದವು. ಅವರು ಆಸ್ಟ್ರೇಲಿಯಾ, ಫ್ರಾನ್ಸ್, ಜಪಾನ್ ಮತ್ತು ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಬೋಧಿಸಿದರು, ತಮ್ಮ ಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಹಂಚಿಕೊಂಡರು. ಅವರ ಸಂಶೋಧನೆಗಳು ಜರ್ನಲ್ ಆಫ್ ಅಪ್ಲೈಡ್ ಸೈಕಾಲಜಿ, ಕೊಲಂಬಿಯಾ ಜರ್ನಲ್ ಆಫ್ ವರ್ಲ್ಡ್ ಬಿಸಿನೆಸ್ (ಈಗ ಜರ್ನಲ್ ಆಫ್ ವರ್ಲ್ಡ್ ಬಿಸಿನೆಸ್), ಇಂಟರ್‌ನ್ಯಾಷನಲ್ ಲೇಬರ್ ರಿವ್ಯೂ, ಇಂಡಸ್ಟ್ರಿಯಲ್ ರಿಲೇಷನ್ಸ್, ಜರ್ನಲ್ ಆಫ್ ಸೇಫ್ಟಿ ರಿಸರ್ಚ್ ಮುಂತಾದ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ದೇಶ, ವಿದೇಶದ ಪ್ರಮುಖ ಮಾಧ್ಯಮಗಳಿಗೆ ಅಂಕಣಗಳು ಮತ್ತು ಲೇಖನಗಳನ್ನು ಬರೆಯುತ್ತಿದ್ದ ಅವರು, ತಮ್ಮ ವೃತ್ತಿಯಲ್ಲಿ ಸಂಶೋಧನೆ ಮತ್ತು ಬೋಧನೆಯ ನಡುವೆ ಸಮತೋಲನ ಸಾಧಿಸಿದರು. ಐಐಎಂಎಯಲ್ಲಿ ಅವರ ಸೇವೆಯು ಅವರನ್ನು ರಾಜಕೀಯ ಸಕ್ರಿಯತೆಗೆ ಸಿದ್ಧಗೊಳಿಸಿತು, ಏಕೆಂದರೆ ಅಲ್ಲಿ ಅವರು ಸಂಸ್ಥಾತ್ಮಕ ನಡವಳಿಕೆಯನ್ನು ಅಧ್ಯಯನ ಮಾಡಿ, ಸಮಾಜದ ವ್ಯವಸ್ಥೆಗಳನ್ನು ಸುಧಾರಿಸುವ ಆಸಕ್ತಿ ಬೆಳೆಸಿಕೊಂಡರು. ಆದರೆ, ಇವರ ಬದುಕನ್ನು ಇತಿಹಾಸದಲ್ಲಿ ಅಳಿಸದ ಗುರುತು ಮಾಡಿದ ಕ್ಷೇತ್ರವೆಂದರೆ ʼಚುನಾವಣೆ ಹಾಗೂ ರಾಜಕೀಯ ಸುಧಾರಣೆಗಳ ಹೋರಾಟʼ.
ADR ಹುಟ್ಟಿದ ಕಥೆ
1999ರ ಲೋಕಸಭಾ ಚುನಾವಣೆಯಲ್ಲಿ ಅಹಮದಾಬಾದ್‌ನಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ನಾಮನಿರ್ದೇಶನ ಪತ್ರಗಳನ್ನು ಪರಿಶೀಲಿಸಿದ ಅವರ ಸಹೋದ್ಯೋಗಿ ತ್ರಿಲೋಚನ್ ಶಾಸ್ತ್ರಿ ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಗುರುತಿಸಿ ಅಚ್ಚರಿಯ ವಿಚಾರಗಳನ್ನು ಪತ್ತೆಹಚ್ಚಿದರು. ಆ ಸಮಯದಲ್ಲಿ ಅಭ್ಯರ್ಥಿಗಳಿಂದ ಕೇವಲ ಹೆಸರು, ವಿಳಾಸ, ಮತದಾರರ ಸಂಖ್ಯೆ, ತಂದೆ ಅಥವಾ ಪತಿಯ ಹೆಸರು ಇತ್ಯಾದಿ ಮೂಲಭೂತ ಮಾಹಿತಿ ಮಾತ್ರವೇ ಕೇಳಲಾಗುತ್ತಿತ್ತು. ಇದರಿಂದ ಮತದಾರರಿಗೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ʼʼಜನತೆಗೆ ಅಭ್ಯರ್ಥಿಯ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲದೆ ಹೇಗೆ ತೀರ್ಮಾನ ಮಾಡುವುದು?” ಎಂಬ ಪ್ರಶ್ನೆ ಚೋಕ್ಕರ್, ಶಾಸ್ತ್ರಿ ಮತ್ತು ಅಜಿತ್ ರಣಡೆ ಅವರ ಮನಸ್ಸಿನಲ್ಲಿ ತಳಮಳವಾಯಿತು. ಇದು ಅವರನ್ನು ಹೆಚ್ಚು ಚುನಾವಣಾ ಮಾಹಿತಿ ಬೇಡಿಕೆಯ ಹೋರಾಟಕ್ಕೆ ಪ್ರೇರೇಪಿಸಿತು. ಇದೇ ಚಿಂತನೆ “Association for Democratic Reforms (ADR)” ಹುಟ್ಟಲು ಕಾರಣವಾಯಿತು.
ಇದರಲ್ಲಿ ಚೋಕ್ಕರ್ ಅವರು ಸಹಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಎಡಿಆರ್‌ನ ಉದ್ದೇಶವು ಚುನಾವಣಾ ಮತ್ತು ರಾಜಕೀಯ ಸುಧಾರಣೆಗಳ ಮೂಲಕ ಆಡಳಿತವನ್ನು ಸುಧಾರಿಸುವುದು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವುದಾಗಿತ್ತು. ಚೋಕ್ಕರ್ ಎಡಿಆರ್ ಮೂಲಕ ರಾಜಕೀಯ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಅಪರಾಧೀಕರಣವನ್ನು ವಿರೋಧಿಸಿದರು, ಮತದಾರರಿಗೆ ಅಭ್ಯರ್ಥಿಗಳ ಮತ್ತು ಪಕ್ಷಗಳ ಬಗ್ಗೆ ಮಾಹಿತಿ ಹಂಚುವ ಮೂಲಕ ಅವರನ್ನು ಸಬಲಗೊಳಿಸಿದರು. ರಾಜಕೀಯ ಪಕ್ಷಗಳ ಹೆಚ್ಚಿನ ಜವಾಬ್ದಾರಿತನ ಮತ್ತು ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದರು. ಎಡಿಆರ್‌ನ ಮೂಲಕ ಅವರು ಚುನಾವಣಾ ವೀಕ್ಷಣೆ, ಸಂಸದರು ಮತ್ತು ಶಾಸಕರ ಚುನಾವಣಾ ವೆಚ್ಚ, ರಾಜ್ಯಸಭಾ ಸದಸ್ಯರ ಆಸಕ್ತಿಗಳ ನೋಂದಣಿ, ರಾಜಕೀಯ ಪಕ್ಷಗಳ ಪರಿವೀಕ್ಷಣೆ ಮತ್ತು ಕಾನೂನು ಸಕ್ರಿಯತೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು.
ಐತಿಹಾಸಿಕ ಹೋರಾಟಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು
ಎಡಿಆರ್‌ನ ಮೂಲಕ ಚೋಕ್ಕರ್ ಅವರು ಹಲವು ಕಾನೂನು ಹೋರಾಟಗಳನ್ನು ನಡೆಸಿದರು, ಇದು ಭಾರತದ ಚುನಾವಣಾ ವ್ಯವಸ್ಥೆಯನ್ನು ಬದಲಾಯಿಸಿತು. 1999ರಲ್ಲಿ ಐಐಎಂ ಪ್ರೊಫೆಸರ್‌ಗಳ ಗುಂಪು ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿ ಅಭ್ಯರ್ಥಿಗಳ ಅಪರಾಧ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಬಹಿರಂಗಪಡಿಸುವಂತೆ ಕೋರಿದರು. 2000ರಲ್ಲಿ ಹೈಕೋರ್ಟ್ ತೀರ್ಪು ಎಡಿಆರ್ ಪರವಾಗಿ ತೀರ್ಪು ನೀಡಿತು, ಆದರೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. 2002 ಮತ್ತು 2003ರಲ್ಲಿ ಸುಪ್ರೀಂ ಕೋರ್ಟ್ ಅಭ್ಯರ್ಥಿಗಳು ಅಫಿಡವಿಟ್‌ನಲ್ಲಿ ತಮ್ಮ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿತು. ಸರ್ಕಾರದ ಅಧ್ಯಾದೇಶ ಮತ್ತು ಜನಪ್ರತಿನಿಧಿ ಕಾಯ್ದೆ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ಘೋಷಿಸಿತು. ಇದು ಚೋಕ್ಕರ್ ಅವರ ಹೋರಾಟದ ಮೊದಲ ದೊಡ್ಡ ಯಶಸ್ಸು. ನಂತರ, 2008ರಲ್ಲಿ ಎಡಿಆರ್‌ನ ಮನವಿಯ ಮೇರೆಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ರಾಜಕೀಯ ಪಕ್ಷಗಳ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಾರ್ವಜನಿಕಗೊಳಿಸುವಂತೆ ಆದೇಶಿಸಿತು. 2013ರಲ್ಲಿ, ಸಿಐಸಿ ಆರು ರಾಷ್ಟ್ರೀಯ ಪಕ್ಷಗಳನ್ನು ಸಾರ್ವಜನಿಕ ಪ್ರಾಧಿಕಾರಗಳೆಂದು ಘೋಷಿಸಿದರೂ, ಅವುಗಳು ಅದನ್ನು ಪಾಲಿಸದ ಕಾರಣ ಎಡಿಆರ್ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಅದೇ ವರ್ಷ, ಸುಪ್ರೀಂ ಕೋರ್ಟ್ ಜನಪ್ರತಿನಿಧಿ ಕಾಯ್ದೆಯ 8(4) ಕಲಮನ್ನು ರದ್ದುಪಡಿಸಿತು, ಇದರಿಂದಾಗಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಸಂಸದರು ಮತ್ತು ಶಾಸಕರು ತಮ್ಮ ಸ್ಥಾನಗಳನ್ನು ತ್ಯಜಿಸಬೇಕಾಯಿತು. ಸೆಪ್ಟೆಂಬರ್ 2013ರಲ್ಲಿ, ಇವಿಎಂಗಳಲ್ಲಿ “ಮೇಲಿನ ಯಾವುದು ಅಲ್ಲ” (NOTA) ಬಟನ್ ಅನ್ನು ಸೇರಿಸುವಂತೆ ತೀರ್ಪು ನೀಡಲಾಯಿತು. 2014ರಲ್ಲಿ, ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚವನ್ನು ಮೇಲ್ವಿಚಾರಣೆ ಮಾಡುವಂತೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿತು. ಇಷ್ಟೆ ಅಲ್ಲದೆ ಹಲವು ಚುನಾವಣಾ ಸುಧಾರಣೆಗಳಿಗೆ ಚೋಕ್ಕರ್ ಹಾಗೂ ಅವರ ನೇತೃತ್ವದ ಎಡಿಆರ್ ಕಾರಣವಾಗಿದೆ.
ಚುನಾವಣಾ ಬಾಂಡ್ ಭ್ರಷ್ಟಾಚಾರ ಬಯಲಿಗೆ
ಚೋಕ್ಕರ್ ಅವರು 80ರ ದಶಕದಿಂದಲೂ ಚುನಾವಣಾ ಸುಧಾರಣೆಗಳಲ್ಲಿ ಸಕ್ರಿಯರಾಗಿದ್ದರು, ಚುನಾವಣಾ ಬಾಂಡ್‌ಗಳ ವಿರುದ್ಧವೂ ಅವರು ಬಲವಾಗಿ ಧ್ವನಿ ಎತ್ತಿದ್ದರು. 2024ರ ಫೆಬ್ರವರಿಯಲ್ಲಿ, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿತು, ಇದರಲ್ಲಿ ಚೋಕ್ಕರ್ ನೇತೃತ್ವದ ಎಡಿಆರ್ ಪ್ರಮುಖ ಅರ್ಜಿದಾರರಲ್ಲಿ ಒಂದಾಗಿತ್ತು. 2024ರ ಏಪ್ರಿಲ್‌ನಲ್ಲಿ, ಇವಿಎಂಗಳ ಪರಿಶೀಲನೆಗಾಗಿ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆದೇಶಿಸಲಾಯಿತು. ಮಾರ್ಚ್ 2023ರಲ್ಲಿ, ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಯು ಸಮಿತಿಯ ಮೂಲಕ ನಡೆಯಬೇಕು ಎಂದು ತೀರ್ಪು ನೀಡಲಾಯಿತು. ಚೋಕ್ಕರ್ ಅವರು ಬಿಹಾರದಲ್ಲಿ ನಡೆದ ಎಸ್‌ಐಆರ್ ಬಗ್ಗೆ ಕಳವಳ ವ್ಯಕ್ತಪಡಿಸಿ, ಮತದಾರರನ್ನು ಹೊರಗಿಡುವ ಅಪಾಯದ ಬಗ್ಗೆ ಎಚ್ಚರಿಸಿದ್ದರು. ಎಡಿಆರ್‌ನೊಂಡಿಗೆ ರಾಜಕೀಯ ಪಕ್ಷಗಳ ಆದಾಯ, ದೇಣಿಗೆಗಳು ಮತ್ತು ಚುನಾವಣಾ ವೆಚ್ಚಗಳ ಬಗ್ಗೆ ಅವರು ನಿರಂತರವಾಗಿ ವಿಶ್ಲೇಷಣೆಗಳನ್ನು ನಡೆಸುತ್ತಿದ್ದರು.

ಸರಳ ಜೀವನ, ಪಕ್ಷಿಗಳ ಮೇಲೆ ಆಸಕ್ತಿ
ಚೋಕ್ಕರ್ ಅವರು ತಮ್ಮ ಜೀವನದ ಕೊನೆಯವರೆಗೂ ಚುನಾವಣೆಗಳ ಪಾರದರ್ಶಕತೆಯ ಬಗ್ಗೆ ಹೋರಾಟ ಮುಂದುವರಿಸಿದ್ದರು. ವೈಯುಕ್ತಿಕ ಜೀವನದಲ್ಲಿ ಅವರದು ಸರಳ ಜೀವನ. ಪಕ್ಷಿಗಳ ಮೇಲೆ ಅವರಿಗೆ ಅಪಾರ ಆಸಕ್ತಿಯಿತ್ತು. 2001ರಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಿಂದ ಪಕ್ಷಿಶಾಸ್ತ್ರ ಕೋರ್ಸ್ ಪೂರ್ಣಗೊಳಿಸಿದ ಅವರು, ಐಐಎಂ ಅಹಮದಾಬಾದ್ ಆವರಣದಲ್ಲಿ ಪಕ್ಷಿಗಳನ್ನು ಗಮನಿಸಿ ಆನಂದಿಸುತ್ತಿದ್ದರು. ಪಕ್ಷಿಗಳ ಆರೈಕೆಯ ಬಗ್ಗೆ, ಪಕ್ಷಿ ಜೀವ ಸಂಕುಲ ಉಳಿಸುವ ಬಗ್ಗೆ ಹಲವು ಮಾಧ್ಯಮಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಅವರು ಬಿಟ್ಟುಹೋದ ಪರಂಪರೆ ‘ಪ್ರಜಾಪ್ರಭುತ್ವವನ್ನು ಶುದ್ಧವಾಗಿಡುವ ಹೊಣೆಗಾರಿಕೆ’ ಈಗ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಚುನಾವಣೆಗಳು ಕೇವಲ ಅಧಿಕಾರದ ಹೋರಾಟವಾಗದೆ, ವಿಶ್ವಾಸದ ಸಂಭ್ರಮವಾಗಬೇಕು. ಪಾರದರ್ಶಕತೆ ಇಲ್ಲದೆ ಪ್ರಜಾಪ್ರಭುತ್ವವೇ ಇಲ್ಲ ಎಂಬುದು ಜಗದೀಪ್ ಎಸ್ ಚೋಕ್ಕರ್ ಅವರ ಕನಸು. ಇದನ್ನು ದೇಶದ ಪ್ರತಿಯೊಬ್ಬ ಪ್ರಜೆ ಉಳಿಸಿಕೊಳ್ಳುವುತ್ತ ಗಮನಹರಿಸಬೇಕು.





