ಜಾಮಾ ಮಸೀದಿ ಪ್ರಕರಣವು ಪೊಲೀಸ್ ತನಿಖೆಗೆ ಎಚ್ಚರಿಕೆ ನೀಡುವಂತಿದೆ. ಕಠಿಣ ಕಾನೂನುಗಳ ಬಳಕೆ ಅಗತ್ಯವಾದರೂ, ಅವುಗಳ ದುರುಪಯೋಗವನ್ನು ತಡೆಯುವ ಜವಾಬ್ದಾರಿಯನ್ನು ಒತ್ತಿ ಹೇಳಿದೆ.
ಮೋದಿ ಸರ್ಕಾರದ ದ್ವೇಷ ರಾಜಕಾರಣ, ಹಿಂದುತ್ವ ದಬ್ಬಾಳಿಕೆ, ಮುಸ್ಲಿಂ ದ್ವೇಷ ದೇಶದ ಮುಂದೆ ಮತ್ತೊಮ್ಮೆ ಬಟಾಬಯಲಾಗಿದೆ. ದೇಶದ್ರೋಹ ಪ್ರಕರಣದ ಅಡಿಯಲ್ಲಿ ಮೋದಿ-ಶಾ ಅಧೀನದಲ್ಲಿರುವ ದೆಹಲಿ ಪೊಲೀಸರು ಬಂಧಿಸಿದ್ದ ಇಬ್ಬರು ಯುವಕರನ್ನು ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಆರೋಪ ಸಾಬೀತು ಮಾಡಲು ಯಾವುದೇ ಪುರಾವೆ ಒದಗಿಸದ ದೆಹಲಿ ಪೊಲೀಸರಿಗೆ ಕೋರ್ಟ್ ಛೀಮಾರಿ ಹಾಕಿದೆ.
ಹೌದು, 2018ರಲ್ಲಿ ದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿ ನಡೆದ ಪ್ರಕರಣ ಈಗ ಎಂಟು ವರ್ಷಗಳ ಬಳಿಕ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆಗ ದೆಹಲಿ ಪೊಲೀಸರು ಇಬ್ಬರು ಯುವಕರನ್ನು UAPA ಅಡಿಯಲ್ಲಿ ಬಂಧಿಸಿ, ಅವರು ISIS ಸಂಪರ್ಕ ಹೊಂದಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದರು. ದೇಶದ ಭದ್ರತೆಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಈ ಬಂಧನವನ್ನು ಅತಿ ಗಂಭೀರವಾಗಿಯೂ ಪರಿಗಣಿಸಲಾಗಿತ್ತು. ಆದರೆ, ಇದೀಗ ಪಟಿಯಾಲ ಹೌಸ್ ನ್ಯಾಯಾಲಯವು ಈ ಇಬ್ಬರನ್ನೂ ಸಂಪೂರ್ಣ ನಿರ್ದೋಷಿಗಳೆಂದು ಘೋಷಿಸಿ ಬಿಡುಗಡೆ ಮಾಡಿದೆ.
ಬಿಜೆಪಿ ಸರ್ಕಾರದ ಕೋಮುದ್ವೇಷ ಮತ್ತು ದೆಹಲಿ ಪೊಲೀಸರು ದಾಖಲಿಸಿದ ಆಧಾರ ರಹಿತ ಪ್ರಕರಣದಿಂದಾಗಿ ಎಂಟು ವರ್ಷ ಸೆರೆವಾಸ ಅನುಭವಿಸಿದ, ಜಮ್ಶೀದ್ ಜಹೂರ್ ಪಾಲ್ ಮತ್ತು ಪರ್ವೈಜ್ ರಶೀದ್ ಲೋನ್ ಈಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜಮ್ಶೀದ್ ಮತ್ತು ರಶೀದ್ – ಇಬ್ಬರೂ ಐಎಸ್‌ಐಎಸ್ ಭಯೋತ್ಪಾದನಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿ ಬಂಧಿಸಿದ್ದರು. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 18 ಮತ್ತು 20ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಕೆಲವು ಮೂಲಭೂತವಾದಿ ಯುವಕರು ನಿಷೇಧಿತ ಭಯೋತ್ಪಾದನಾ ಸಂಘಟನೆ ISISಗೆ ನಿಷ್ಠರಾಗಿರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅವರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇವರು ಭಯೋತ್ಪಾದನಾ ಚಟುವಟಿಕೆಗಳ ಉದ್ದೇಶಕ್ಕಾಗಿ ಉತ್ತರಪ್ರದೇಶದ ತಮ್ಮ ಸಂಪರ್ಕಗಳ ಮೂಲಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದಾರೆ. ಜಮ್ಶೀದ್ ಮತ್ತು ರಶೀದ್ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂದು 2018ರ ಸೆಪ್ಟೆಂಬರ್ 6ರಂದು ದೆಹಲಿಯ ಲಾಲ್ ಕಿಲಾ ಬಳಿಕ ನೇತಾಜಿ ಸುಭಾಷ್ ಪಾರ್ಕ್‌ಗೆ ಬರುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ಪಡೆದು ಪ್ರಕರಣ ದಾಖಲಿಸಲಾಗಿದೆ. ಮತ್ತು ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡಿದ್ದರು.
ಆರೋಪಿ ರಶೀದ್ ಬಳಿಯಿದ್ದ ಬ್ಯಾಗ್ ಅನ್ನು ಪರಿಶೀಲಿಸಿದಾಗ, ಬಿಳಿ ಬಣ್ಣದ ಡಾಕ್ಟರ್ ಟೇಪ್‌ನಿಂದ ಸುತ್ತಲ್ಪಟ್ಟ ನೀಲಿ ಬಣ್ಣದ ಫೈಲ್‌ನಲ್ಲಿ 7.65 ಎಂಎಂ ಕ್ಯಾಲಿಬರ್ನ ಒಂದು ಪಿಸ್ತೂಲ್ ಪತ್ತೆಯಾಗಿದೆ. ಸದರಿ ಪಿಸ್ತೂಲ್‌ನ ಮ್ಯಾಗಜೀನ್‌ನಲ್ಲಿ ಐದು ಜೀವಂತ ಗುಂಡುಗಳಿದ್ದವು. ಅಂತೆಯೇ, ಆರೋಪಿ ಜಮ್ಶೀದ್‌ನ ಬ್ಯಾಗ್‌ನಲ್ಲಿಯೂ ಬಿಳಿ ಬಣ್ಣದ ಡಾಕ್ಟರ್ ಟೇಪ್ ಹಚ್ಚಿದ್ದ ನೋಟ್‌ಬುಕ್‌ನಲ್ಲಿ ಸುತ್ತಿದ 7.65 ಎಂಎಂ ಕ್ಯಾಲಿಬರ್ನ ಒಂದು ಪಿಸ್ತೂಲ್ ಪತ್ತೆಯಾಗಿದೆ. ಈ ಪಿಸ್ತೂಲ್‌ನಲ್ಲೂ ಐದು ಜೀವಂತ ಗುಂಡುಗಳಿದ್ದವು ಎಂದು ಪೊಲೀಸರು ಹೇಳಿಕೆ ನೀಡಿದ್ದರು.
ಮಾತ್ರವಲ್ಲದೆ, ಈ ಇಬ್ಬರು ಮಾತ್ರವಲ್ಲದೆ, ಇನ್ನೂ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರಲ್ಲಿ ಆಸಿಫ್ ನಜೀದ್ ದಾರ್ ಎಂಬ ಒಬ್ಬ ಆರೋಪಿ ಮೃತಪಟ್ಟಿದ್ದು, ಆದಿಲ್ ವಾನಿ ಅಲಿಯಾಸ್ ಆದಿಲ್ ಟೋಕರ್ ಎಂಬ ಇನ್ನೊಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸರು ವಿವರಿಸಿದ್ದರು.

ಜಮ್ಶೀದ್ ಮತ್ತು ರಶೀದ್ ಇಬ್ಬರೂ ಭಾರತದಲ್ಲಿ ಐಎಸ್‌ಐಎಸ್ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು ಎನ್ ಐಎ (NIA) ಯಿಂದ ಬಂಧಿಸಲ್ಪಟ್ಟಿದ್ದ ಅಬ್ದುಲ್ಲಾ ಬಸಿತ್ ಎಂಬ ಇನ್ನೊಬ್ಬ ಐಎಸ್ಐಎಸ್ ಉಗ್ರನೊಂದಿಗೆ ಸಂಪರ್ಕದಲ್ಲಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು.
ಆದರೆ, ವಿಚಾರಣೆ ಮುಂದುವರಿದಂತೆ, ಈ ಆರೋಪಗಳನ್ನು ಸಮರ್ಥಿಸುವ ದೃಢವಾದ ಸಾಕ್ಷ್ಯಗಳನ್ನು ಒದಗಿಸಲು ಪೊಲೀಸರು ವಿಫಲರಾದರು. ವಿಚಾರಣೆ ನಡೆಸಿದ ನ್ಯಾಯಾಲಯವು, “ಸಾಕ್ಷ್ಯಗಳ ಕೊರತೆ ಮಾತ್ರವಲ್ಲ, ಪ್ರಕರಣದ ತನಿಖೆಯಲ್ಲಿಯೂ ಗಂಭೀರ ದೋಷಗಳಿವೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬಂಗಾಳ ಚುನಾವಣೆ | 74 ಶಾಸಕರಿಗೆ TMC ಕೊಕ್; ಆಡಳಿತ ವಿರೋಧಿ ಅಲೆ ಜಯಿಸುವರೇ ಮಮತಾ?
“2018ರ ಸೆಪ್ಟೆಂಬರ್ 6ಕ್ಕಿಂತ ಮೊದಲು ಈ ಇಬ್ಬರೂ ಆರೋಪಿಗಳು ನಿಷೇಧಿತ ಭಯೋತ್ಪಾದನಾ ಸಂಘಟನೆಯಾದ ಐಎಸ್ಐಎಸ್ ಸದಸ್ಯರಾಗಿದ್ದರು ಅಥವಾ ಸಂಬಂಧ ಹೊಂದಿದ್ದರು. ಅವರು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ, ಇಬ್ಬರೂ ಆರೋಪಿಗಳು ಬಿಡುಗಡೆಗೆ ಅರ್ಹರಾಗಿದ್ದು, ಯುಎಪಿಎ ಸೆಕ್ಷನ್ 18, 20ರ ಅಡಿಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಸಾಕ್ಷ್ಯಾಧಾರಗಳೊಂದಿಗೆ ಪ್ರಕರಣವನ್ನು ಸಾಬೀತು ಮಾಡದ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದೆ. ಆರೋಪಿಗಳನ್ನು ಬಿಡುಗಡೆ ಮಾಡಿದೆ.
ಎಂಟು ವರ್ಷಗಳ ಸೆರೆವಾಸ ಅನುಭವಿದ ಇಬ್ಬರು ಯುವಕರು ಈಗ ಜೈಲಿನಿಂದ ಹೊರಬಂದಿದ್ದಾರೆ. ನ್ಯಾಯಾಲಯವು ಅವರನ್ನು ಬಿಡುಗಡೆ ಮಾಡಿದೆ. ಆದರೆ, ಇಬ್ಬರು ಯುವಕರ ಬದುಕಿನ ಎಂಟು ವರ್ಷಗಳು ಆಧಾರರಹಿತ ಪ್ರಕರಣದಿಂದಾಗಿ ಕಳೆದುಹೋಗಿವೆ. ಜೈಲಿನಿಂದ ಹೊರಬಂದಿರುವ ಅವರಿಬ್ಬರೂ ಹೊಸ ಬದುಕನ್ನು ಆರಂಭಿಸಲು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಿದೆ. ಸಮಾಜದಲ್ಲಿ ‘ಆರೋಪಿತ’ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬದುಕಬೇಕಿದೆ. ಉದ್ಯೋಗದ ಅಲಭ್ಯತೆ, ಮಾನಸಿಕ ಒತ್ತಡಗಳು ಅವರನ್ನು ಮತ್ತಷ್ಟು ಕಾಡಲಿವೆ. ಅವವರಿಬ್ಬರೂ ಮತ್ತೆ ಸಾಮಾನ್ಯ ಜೀವನಕ್ಕೆ ಮರಳಲು ಸಾಕಷ್ಟು ಕಷ್ಟಪಡಬೇಕಿದೆ.

ಇನ್ನೊಂದು ವಿಚಾರವೆಂದರೆ, ಈ ಯುಎಪಿಎ ಕಾನೂನಿನಡಿ ಬಂಧನಕ್ಕೊಳಗಾದರೆ, ಜಾಮೀನು ಪಡೆಯುವುದೂ ಭಾರೀ ಕಷ್ಟ. ಆದ್ದರಿಂದಲೇ, ಆರೋಪಗಳು ಸಾಬೀತಾಗದೆ, ವಿಚಾರಣೆಗಳೂ ನಡೆಯದೆ ಹಲವಾರು ಯುವಜನರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅಂತಹವರಲ್ಲಿ, ವಿದ್ಯಾರ್ಥಿ-ಯುವ ನಾಯಕ ಉಮರ್ ಖಾಲಿದ್ ಕೂಡ ಒಬ್ಬರು. 2020ರಲ್ಲಿ ನಡೆದ ದೆಹಲಿ ಗಲಭೆಗೆ ಪಿತೂರಿ ರೂಪಿಸಿದ್ದಾರೆಂದು ಖಾಲಿದ್ ಅವರನ್ನು ದೆಹಲಿ ಪೊಲೀಸರು 2020ರಲ್ಲಿ ಬಂಧಿಸಿದ್ದರು. ಅಂದಿನಿಂದಲೂ ಜಾಮೀನು ದೊರೆಯದೆ, ವಿಚಾರಣೆಯೂ ಆರಂಭವಾಗದೆ ಉಮರ್ ಜೈಲಿನಲ್ಲಿದ್ದಾರೆ. ಗಮನಾರ್ಹವಾಗಿ, ಉಮರ್ ವಿರುದ್ಧದ ಪ್ರಕರಣವನ್ನೂ ಸಾಬೀತು ಮಾಡಲು ದೆಹಲಿ ಪೊಲೀಸರ ಬಳಿ ಪುರಾವೆಗಳಿಲ್ಲವೆಂದು ಹೇಳಲಾಗುತ್ತಿದೆ. ಮುಂದೊಂದು ದಿನ ಉಮರ್ ಕೂಡ ಜೈಲಿನಿಂದ ಬಿಡುಗಡೆಯಾದರೂ, ಅವರ 6 ವರ್ಷಕ್ಕೂ ಹೆಚ್ಚು ಸಮಯ ಹಾಳಾಗಲಿದೆ.
ಸದ್ಯ, ಜಾಮಾ ಮಸೀದಿ ಪ್ರಕರಣವು ಪೊಲೀಸ್ ತನಿಖೆಗೆ ಎಚ್ಚರಿಕೆ ನೀಡುವಂತಿದೆ. ಕಠಿಣ ಕಾನೂನುಗಳ ಬಳಕೆ ಅಗತ್ಯವಾದರೂ, ಅವುಗಳ ದುರುಪಯೋಗವನ್ನು ತಡೆಯುವ ಜವಾಬ್ದಾರಿಯನ್ನು ಒತ್ತಿಹೇಳಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಅಮಾಯಕ ಮುಸ್ಲಿಮರ ಪಾಲಿಗೆ ಮೋದಿ ಸರ್ಕಾರವೇ ಭಯೋತ್ಪಾದಕರ ರೀತಿ ವರ್ತಿಸುತ್ತಿದೆ.




