ಜೆಸ್ಸಿ ಜಾಕ್ಸನ್ | ‘ಕರಿಯ’ ಎಂಬ ಕಳಂಕ ಅಳಿಸಿ ‘ಆಫ್ರಿಕನ್ ಅಮೆರಿಕನ್’ ಅಸ್ಮಿತೆ ತಂದುಕೊಟ್ಟ ಹರಿಕಾರ

Date:

ಜೆಸ್ಸಿ ಜಾಕ್ಸನ್ ಅವರ ಹೋರಾಟ ಕೇವಲ ಅಮೆರಿಕಕ್ಕೆ ಸೀಮಿತವಾಗಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಬಿಡುಗಡೆಗೆ ಆಗ್ರಹಿಸಿ ಹಾಗೂ ಅಲ್ಲಿನ ವರ್ಣಭೇದ ನೀತಿಯನ್ನು ವಿರೋಧಿಸಿ ದೊಡ್ಡ ಮಟ್ಟದ ಅಭಿಯಾನಗಳನ್ನು ನಡೆಸಿದರು. ಸಿರಿಯಾ, ಕ್ಯೂಬಾ, ಕೊಸೊವೊ ಮುಂತಾದ ದೇಶಗಳಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ಖುದ್ದಾಗಿ ಮಾತುಕತೆ ನಡೆಸಿ ಯಶಸ್ವಿಯಾದರು. ಕೇವಲ ಮೈಬಣ್ಣದ ಆಧಾರದ ಮೇಲಿನ ಕೀಳರಿಮೆಯನ್ನು ಮೀರಿ ಮನುಷ್ಯತ್ವವನ್ನು ಕಾಣಲು ಕಲಿಸಿದ, ‘ಕರಿಯ’ ಎಂಬ ಕಳಂಕವನ್ನು ಅಳಿಸಿ ಸಾಂಸ್ಕೃತಿಕ ಸ್ವಾಭಿಮಾನದ ಬೀಜ ಬಿತ್ತಿದ ಈ ಮಹಾನ್ ಚೇತನಕ್ಕೆ ಅಶ್ರುಪೂರ್ಣ ನುಡಿನಮನ

ಅಮೆರಿಕದ ವರ್ಣಭೇದ ನೀತಿಯ ಕರಾಳತೆಯ ವಿರುದ್ಧ ಸಿಡಿದೆದ್ದು, ದಶಕಗಳ ಕಾಲ ಸಮಾನತೆಗಾಗಿ ದನಿಯೆತ್ತಿದ್ದ ದೈತ್ಯ ನಾಯಕ, ಖ್ಯಾತ ನಾಗರಿಕ ಹಕ್ಕುಗಳ ಹೋರಾಟಗಾರ ರೆವರೆಂಡ್ ಜೆಸ್ಸಿ ಜಾಕ್ಸನ್ (84 ವರ್ಷ) ಅವರು ಮಂಗಳವಾರ (ಫೆಬ್ರವರಿ 17,2026) ರಂದು ಚಿಕಾಗೋದಲ್ಲಿ ನಿಧನರಾಗಿದ್ದಾರೆ. ಪಾರ್ಕಿನ್ಸನ್‌ ಹಾಗೂ ‘ಪ್ರೋಗ್ರೆಸಿವ್ ಸುಪ್ರಾನ್ಯೂಕ್ಲಿಯರ್ ಪ್ಯಾಲ್ಸಿ’(PSP) ಎಂಬ ಅಪರೂಪದ ನರವ್ಯೂಹದ ಕಾಯಿಲೆಯಿಂದ ದೀರ್ಘಕಾಲ ಬಳಲುತ್ತಿದ್ದ ಅವರು, ತಮ್ಮ ಸುದೀರ್ಘ ಹಾಗೂ ಸ್ಪೂರ್ತಿದಾಯಕ ಹೋರಾಟದ ಬದುಕಿಗೆ ವಿದಾಯ ಹೇಳಿದ್ದಾರೆ. ‘ಅವರು ಕೇವಲ ನಮ್ಮ ಕುಟುಂಬಕ್ಕಷ್ಟೇ ಅಲ್ಲ, ಜಗತ್ತಿನಾದ್ಯಂತ ಶೋಷಿತರ ಹಾಗೂ ದನಿ ಇಲ್ಲದವರ ಪಾಲಿನ ಸೇವಕ ನಾಯಕರಾಗಿದ್ದರು” ಎಂದು ಅವರ ಕುಟುಂಬ ಬಿಡುಗಡೆ ಮಾಡಿರುವ ಶೋಕ ಸಂದೇಶದಲ್ಲಿ ತಿಳಿಸಿದೆ.

ಅಮೆರಿಕದ ರಾಜಕಾರಣ, ಸಮಾಜ ಸುಧಾರಣೆ ಮತ್ತು ಜಾಗತಿಕ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಜಾಕ್ಸನ್‌ ಅವರದ್ದು ಅಳಿಸಲಾಗದ ಹೆಜ್ಜೆಗುರುತು. ಕೇವಲ ಹೋರಾಟಗಾರನಾಗಿ ಮಾತ್ರವಲ್ಲದೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿದು ಸಂಚಲನ ಮೂಡಿಸಿದ್ದ ಪ್ರಮುಖ ಆಫ್ರಿಕನ್- ಅಮೆರಿಕನ್ ನಾಯಕರಲ್ಲಿ ಇವರು ಮೊದಲಿಗರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಕರಿಯ’  ಪದದ ಬದಲಿಗೆ ‘ಆಫ್ರಿಕನ್ ಅಮೆರಿಕನ್’ ಅಸ್ಮಿತೆ

​ಜೆಸ್ಸಿ ಜಾಕ್ಸನ್ ಅವರು ಜಗತ್ತಿಗೆ ನೀಡಿದ ಅತ್ಯಂತ ಪ್ರಮುಖ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೊಡುಗೆಯೆಂದರೆ, ಅಮೆರಿಕದಲ್ಲಿ ವಾಸಿಸುತ್ತಿರುವ ಕಪ್ಪು ಬಣ್ಣದವರಿಗೆ ‘ಆಫ್ರಿಕನ್ ಅಮೆರಿಕನ್’ ಎಂಬ ಗೌರವಾನ್ವಿತ ಗುರುತನ್ನು ತಂದುಕೊಟ್ಟಿದ್ದು. 1988ರ ಡಿಸೆಂಬರ್‌ನಲ್ಲಿ ಚಿಕಾಗೋದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಅವರು, “ನಮ್ಮನ್ನು ಇನ್ನು ಮುಂದೆ ‘ಕರಿಯ’ ಎಂದು ಕರೆಯುವ ಬದಲು ‘ಆಫ್ರಿಕನ್ ಅಮೆರಿಕನ್’ ಎಂದು ಕರೆಯಬೇಕು” ಎಂದು ಅಧಿಕೃತವಾಗಿ ಪ್ರತಿಪಾದಿಸಿದರು. ಕೇವಲ ಮೈಬಣ್ಣದ ಆಧಾರದ ಮೇಲೆ ಗುರುತಿಸಿಕೊಳ್ಳುವುದು ಕೀಳರಿಮೆಗೆ ಕಾರಣವಾಗುತ್ತದೆ. ಅದರ ಬದಲಿಗೆ ಭೌಗೋಳಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಯನ್ನು ಸೂಚಿಸುವ ‘ಆಫ್ರಿಕನ್‌ ಅಮೆರಿಕನ್’ ಎಂಬ ಪದಪ್ರಯೋಗವು ಜನರಲ್ಲಿ ಸ್ವಾಭಿಮಾನ ಹಾಗೂ ತಮ್ಮ ಮೂಲದ ಬಗ್ಗೆ ಹೆಮ್ಮೆಯನ್ನು ಮೂಡಿಸುತ್ತದೆ ಎಂಬುದು ಅವರ ಬಲವಾದ ವಾದವಾಗಿತ್ತು. ಅವರ ಈ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಕೇವಲ ಕೆಲವೇ ತಿಂಗಳುಗಳಲ್ಲಿ ಅಮೆರಿಕದ ಪ್ರಮುಖ ಮಾಧ್ಯಮಗಳು, ಶಾಲಾ ಪಠ್ಯಪುಸ್ತಕಗಳು, ರಾಜಕೀಯ ವಲಯ ಹಾಗೂ ಜನಸಾಮಾನ್ಯರು ‘ಆಫ್ರಿಕನ್ ಅಮೆರಿಕನ್’ ಎಂಬ ಪದವನ್ನು ಬಳಸಲಾರಂಭಿಸಿದರು. ಒಂದು ಇಡೀ ಸಮುದಾಯಕ್ಕೆ ಬಣ್ಣದ ಬದಲು ಪರಂಪರೆಯ ಗುರುತನ್ನು ನೀಡಿದ ಕೀರ್ತಿ ಜಾಕ್ಸನ್‌ ಅವರಿಗೆ ಸಲ್ಲುತ್ತದೆ.   

ಮಾರ್ಟಿನ್ ಲೂಥರ್ ಕಿಂಗ್ – ಗಾಂಧೀಜಿಯವರ ತತ್ವಗಳ ಪ್ರೇರಣೆ

1941ರ ಅಕ್ಟೋಬರ್ 8ರಂದು ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆಯಲ್ಲಿ ಹುಟ್ಟಿ ಬೆಳೆದ ಜಾಕ್ಸನ್ ಅವರು ಬಾಲ್ಯದಿಂದಲೇ ವರ್ಣಭೇದ ನೀತಿಯ ಕರಾಳತೆಯನ್ನು ಅನುಭವಿಸಿದವರು. ಬಸ್ಸಿನಲ್ಲಿ ಹಿಂದಿನ ಸೀಟಿನಲ್ಲಿ ಕೂರುವುದು, ಪ್ರತ್ಯೇಕ ನೀರಿನ ನಳಿಕೆಗಳನ್ನು ಬಳಸುವುದು, ಕಪ್ಪು ವರ್ಣೀಯರಿಗಾಗಿಯೇ ಇದ್ದ ಪ್ರತ್ಯೇಕ ಶಾಲೆಗಳಲ್ಲಿ ಓದುವುದು ಮುಂತಾದ ತಾರತಮ್ಯಗಳು ಅವರಲ್ಲಿ ಬಂಡಾಯದ ಕಿಡಿಯನ್ನು ಹೊತ್ತಿಸಿದವು. ನಾರ್ತ್ ಕೆರೊಲಿನಾ ಎ&ಟಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವಾಗ ಅವರು ವಿದ್ಯಾರ್ಥಿ ನಾಯಕರಾಗಿ ರೂಪುಗೊಂಡರು. ಆದರೆ, ಈ ಆಕ್ರೋಶವನ್ನು ಹಿಂಸೆಯ ರೂಪಕ್ಕೆ ತಿರುಗಲು ಬಿಡದೆ, ಅಹಿಂಸೆಯ ಮಾರ್ಗದಲ್ಲಿ ಮುನ್ನಡೆಸಿದ್ದು ಮಹಾತ್ಮ ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ತತ್ವಗಳು.

Jesse Jackson 2

​ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹದ ಮಾರ್ಗವನ್ನು ಅಮೆರಿಕದಲ್ಲಿ ಅಳವಡಿಸಿಕೊಂಡಿದ್ದ ಮಾರ್ಟಿನ್ ಲೂಥರ್ ಕಿಂಗ್ ಅವರೊಂದಿಗೆ ಜಾಕ್ಸನ್ ನಿಕಟವಾಗಿ ಕೆಲಸ ಮಾಡಿದರು. ಕಿಂಗ್ ಅವರ ಅತ್ಯಂತ ನೆಚ್ಚಿನ ಅನುಯಾಯಿಯಾಗಿ ಬೆಳೆದ ಜಾಕ್ಸನ್, 1960ರ ದಶಕದ ನಾಗರಿಕ ಹಕ್ಕುಗಳ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ದಕ್ಷಿಣದ ರಾಜ್ಯಗಳಲ್ಲಿ ನಡೆದ ಶಾಂತಿಯುತ ಪ್ರತಿಭಟನೆಗಳು, ಸಮಾನತೆಗಾಗಿ ನಡೆದ ಮೆರವಣಿಗೆಗಳಲ್ಲಿ ಕಿಂಗ್ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದರು. 1968ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಮೆಂಫಿಸ್‌ನಲ್ಲಿ ಹತ್ಯೆ ಮಾಡಿದಾಗ, ಜಾಕ್ಸನ್ ಅವರು ಅದೇ ಹೋಟೆಲ್‌ನಲ್ಲಿ ಉಪಸ್ಥಿತರಿದ್ದರು. ದಾಳಿಯ ಸಮಯದಲ್ಲಿ ತಮಗೂ ಅಂಟಿದ್ದ ರಕ್ತಸಿಕ್ತ ಶರ್ಟ್ ಧರಿಸಿಯೇ ಟಿವಿ ವಾಹಿನಿಗಳಲ್ಲಿ ಕಾಣಿಸಿಕೊಂಡು ಶಾಂತಿಗಾಗಿ ಮನವಿ ಮಾಡಿದ್ದ ಜಾಕ್ಸನ್, ತಮ್ಮ ಗುರುವಿನ ಹತ್ಯೆಯ ನಂತರ ಆಘಾತಕ್ಕೊಳಗಾದ ಸಮುದಾಯದ ನಾಯಕತ್ವವನ್ನು ತಮ್ಮ ಹೆಗಲಿಗೆ ಎತ್ತಿಕೊಂಡರು. ಗಾಂಧೀಜಿಯವರ ಅಹಿಂಸೆ ಹಾಗೂ ಸಮಾನತೆಯ ತತ್ವಗಳನ್ನು ಅಮೆರಿಕದ ಶೋಷಿತರ ಬಿಡುಗಡೆಯ ಅಸ್ತ್ರವಾಗಿ ಅವರು ಕೊನೆಯವರೆಗೂ ಬಲವಾಗಿ ನಂಬಿದ್ದರು.

​ರಾಜಕೀಯ ಸಂಚಲನ

​ಜೆಸ್ಸಿ ಜಾಕ್ಸನ್ ಕೇವಲ ರಸ್ತೆಗಿಳಿದು ಹೋರಾಡಿದವರಲ್ಲ, ಬದಲಿಗೆ ಆಡಳಿತ ವ್ಯವಸ್ಥೆಯೊಳಗೆ ನುಗ್ಗಿ ಬದಲಾವಣೆ ತರಲು ಯತ್ನಿಸಿದವರು. 1984 ಹಾಗೂ 1988ರಲ್ಲಿ ಅವರು ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮನಿರ್ದೇಶನ ಕೋರಿ ಕಣಕ್ಕಿಳಿದರು. ಅವರು ಅಧ್ಯಕ್ಷರಾಗದಿದ್ದರೂ, ಲಕ್ಷಾಂತರ ಅಲ್ಪಸಂಖ್ಯಾತರು, ಯುವಕರು ಮತ್ತು ಶೋಷಿತ ವರ್ಗದ ಜನರನ್ನು ಮೊದಲ ಬಾರಿಗೆ ಮತಗಟ್ಟೆಗೆ ಬರುವಂತೆ ಪ್ರೇರೇಪಿಸಿದರು. ಅವರು ಸ್ಥಾಪಿಸಿದ ‘Rainbow PUSH Coalition’ ಆಫ್ರಿಕನ್ ಅಮೆರಿಕನ್ನರು, ಹಿಸ್ಪಾನಿಕ್‌ಗಳು, ಅರಬ್ಬರು, ಏಷಿಯನ್ನರು, ಮಹಿಳೆಯರು ಹಾಗೂ ಬಡ ಬಿಳಿಯರನ್ನು ಒಂದೇ ವೇದಿಕೆಯಡಿ ತರುವಲ್ಲಿ ಯಶಸ್ವಿಯಾಯಿತು. “ನಾನು ಕೂಡ ಮುಖ್ಯವಾದ ಮನುಷ್ಯ” ಎಂಬ ಅವರ ಘೋಷವಾಕ್ಯ ಲಕ್ಷಾಂತರ ಜನರಲ್ಲಿ ಸ್ವಾಭಿಮಾನ ಬಡಿದೆಬ್ಬಿಸಿತು. ಅವರ ಈ ರಾಜಕೀಯ ಹೆಜ್ಜೆಗುರುತುಗಳೇ ಮುಂದೊಂದು ದಿನ ಬರಾಕ್ ಒಬಾಮಾ ಅವರು ಅಮೆರಿಕದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಲು ಭದ್ರ ಬುನಾದಿ ಹಾಕಿಕೊಟ್ಟವು.

ಇದನ್ನು ಓದಿದ್ದೀರಾ? ಪ್ರೀಮಿಯಂ ಲೇಖನ | ಎಐ ಕಣ್ಣಲ್ಲೂ ಜೀವಂತವಾಗಿದೆ ಜಾತಿ ವ್ಯವಸ್ಥೆ: ಡಿಜಿಟಲ್ ಲೋಕದ ಕರಾಳ ಮುಖ ಅನಾವರಣ

​ಜಾಗತಿಕ ಮಾನವತಾವಾದಿ

​ಜೆಸ್ಸಿ ಜಾಕ್ಸನ್ ಅವರ ಹೋರಾಟ ಕೇವಲ ಅಮೆರಿಕಕ್ಕೆ ಸೀಮಿತವಾಗಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಬಿಡುಗಡೆಗೆ ಆಗ್ರಹಿಸಿ ಹಾಗೂ ಅಲ್ಲಿನ ವರ್ಣಭೇದ ನೀತಿಯನ್ನು ವಿರೋಧಿಸಿ ದೊಡ್ಡ ಮಟ್ಟದ ಅಭಿಯಾನಗಳನ್ನು ನಡೆಸಿದರು. ಸಿರಿಯಾ, ಕ್ಯೂಬಾ, ಕೊಸೊವೊ ಮುಂತಾದ ದೇಶಗಳಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ಖುದ್ದಾಗಿ ಮಾತುಕತೆ ನಡೆಸಿ ಯಶಸ್ವಿಯಾದರು. ಅವರ ಈ ಸುದೀರ್ಘ ಸೇವೆಯನ್ನು ಪರಿಗಣಿಸಿ, 2000ನೇ ಇಸವಿಯಲ್ಲಿ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ ನೀಡಿ ಗೌರವಿಸಿದ್ದರು.

Jesse Jackson and martin luther king

​ತಮ್ಮ ಇಳಿ ವಯಸ್ಸಿನಲ್ಲಿ ಪಾರ್ಕಿನ್ಸನ್ ಹಾಗೂ ಪಿಎಸ್‌ಪಿ ಕಾಯಿಲೆಗಳಿಂದ ಬಳಲುತ್ತಿದ್ದರೂ, ಅವರ ಧ್ವನಿ ಮಾತ್ರ ಎಂದಿಗೂ ಅಡಗಿರಲಿಲ್ಲ. ‘Black Lives Matter’ ಚಳವಳಿಯ ಸಂದರ್ಭದಲ್ಲೂ ಅವರು ಗಾಲಿಕುರ್ಚಿಯಲ್ಲಿ ಕುಳಿತೇ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಯುವಜನತೆಗೆ ಸ್ಫೂರ್ತಿಯಾಗಿದ್ದರು.

​​ವರ್ಣಭೇದ ನೀತಿಯ ಬೇರುಗಳನ್ನು ಕಿತ್ತೆಸೆಯಲು, ಅಸಮಾನತೆಯ ಗೋಡೆಗಳನ್ನು ಕೆಡವಲು ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟಿದ್ದ ರೆವರೆಂಡ್ ಜೆಸ್ಸಿ ಜಾಕ್ಸನ್ ಅವರ ನಿಧನದಿಂದ ಜಗತ್ತು ಒಬ್ಬ ಶ್ರೇಷ್ಠ ಮಾನವತಾವಾದಿಯನ್ನು ಕಳೆದುಕೊಂಡಿದೆ. ಕೇವಲ ಮೈಬಣ್ಣದ ಆಧಾರದ ಮೇಲಿನ ಕೀಳರಿಮೆಯನ್ನು ಮೀರಿ ಮನುಷ್ಯತ್ವವನ್ನು ಕಾಣಲು ಕಲಿಸಿದ, ‘ಕರಿಯ’ ಎಂಬ ಕಳಂಕವನ್ನು ಅಳಿಸಿ ಸಾಂಸ್ಕೃತಿಕ ಸ್ವಾಭಿಮಾನದ ಬೀಜ ಬಿತ್ತಿದ ಈ ಮಹಾನ್ ಚೇತನಕ್ಕೆ ಅಶ್ರುಪೂರ್ಣ ನುಡಿನಮನ. ಜಾಕ್ಸನ್ ಭೌತಿಕವಾಗಿ ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರು ರೂಪಿಸಿದ ‘ಮಳೆಬಿಲ್ಲು’ (Rainbow) ಸದಾ ಸಮಾನತೆಯ ಆಕಾಶದಲ್ಲಿ ರಾರಾಜಿಸುತ್ತಲೇ ಇರುತ್ತದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...