ಪತ್ರಕರ್ತ ಇರ್ಷಾದ್‌ ಉಪ್ಪಿನಂಗಡಿ ಅವರ ಹೊಸ ಪುಸ್ತಕ ʼಕರಾವಳಿಯ ರಕ್ತಕಣ್ಣೀರುʼ ಫೆ.15ರಂದು ಬಿಡುಗಡೆ

Date:

ಪತ್ರಕರ್ತ ಇರ್ಷಾದ್‌ ಉಪ್ಪಿನಂಗಡಿ ಅವರ ಕರಾವಳಿಯ ರಕ್ತಕಣ್ಣೀರು ಕೃತಿ ಫೆ. ೧೫ರಂದು ಬೆಳಿಗ್ಗೆ ೧೦:೩೦ಕ್ಕೆ ಬೆಂಗಳೂರಿನ ಗಾಂಧಿಭವನದಲ್ಲಿ ಬಿಡುಗಡೆಯಾಗಲಿದೆ. ಕೃತಿಯ ಲೇಖಕರ ಮಾತು ಇಲ್ಲಿದೆ.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ೨೦೨೪ರ ಸೆಪ್ಟೆಂಬರ್ ೧೫ರಂದು ಬೀದರ್‌ನಿಂದ ಚಾಮರಾಜನಗರದವರೆಗೆ ಸುಮಾರು ೨,೫೦೦ ಕಿಲೋಮೀಟರ್ ಚಾರಿತ್ರಿಕ ಮಾನವ ಸರಪಳಿಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು. ಅಂದಿನ ದಿನವೇ ನಾನು ಮತೀಯವಾದಿಗಳಿಂದ ಭೀಕರವಾಗಿ ಹತ್ಯೆಗೊಳಗಾಗಿದ್ದ ಬಂಟ್ವಾಳದ ಮುಹಮ್ಮದ್ ನಾಸಿರ್ ಅವರ ಕುಟುಂಬವನ್ನು ಭೇಟಿ ಮಾಡಲು ಬಸ್‌ನಲ್ಲಿ ತೆರಳುತ್ತಿದ್ದೆ.

ಮಂಗಳೂರಿನಿಂದ ಬಂಟ್ವಾಳದವರೆಗೆ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಮಾನವ ಸರಪಳಿ ರಚನೆಯಾಗಿತ್ತು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಜೊತೆಯಾಗಿ ಕೈ ಹಿಡಿದು ನಿಂತುಕೊಂಡಿದ್ದ ದೃಶ್ಯ ಅಮೋಘವಾಗಿತ್ತು. ಬುರ್ಖಾಧಾರಿಗಳು, ಕುಂಕುಮ ಹಚ್ಚಿಕೊಂಡವರು, ಶಿರವಸ್ತ್ರಧಾರಿ ನನ್‌ಗಳು ಸುಡು ಬಿಸಿಲಿನಲ್ಲೂ ಪರಸ್ಪರ ಮಾತನಾಡುತ್ತಾ, ಒಂದೇ ಛತ್ರಿಯ ನೆರಳನ್ನು ಹಂಚಿಕೊಳ್ಳುತ್ತಾ ಒಗ್ಗಟ್ಟು ಪ್ರದರ್ಶನ ಮಾಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರಲ್ಲಿ ವಿಶೇಷ ಏನು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯವಾದ ಕನಿಷ್ಠ ಇಂತಹ ಸಾಂಕೇತಿಕ ಮನುಷ್ಯ ಬಾಂಧವ್ಯವನ್ನು ಕೂಡಾ ಇಲ್ಲವಾಗಿಸುತ್ತಿದೆ. ದಶಕಗಳಿಂದ ಜನರ ನಡುವೆ ಬಿತ್ತಿದ ಕೋಮುವಾದದ ವಿಷ ಹೆಮ್ಮರವಾಗಿ ಬೆಳೆದಿದೆ. ಅದರ ಬೇರುಗಳು ಆಳವಾಗಿ ಇಳಿದಿದೆ. ರೆಂಬೆ ಕೊಂಬೆಗಳು ವಿಶಾಲವಾಗಿ ಹರಡಿವೆ. ಅದು ಕೊಡುತ್ತಿರುವ ಫಲ ಅಮಾಯಕರ ಜೀವನವನ್ನು ಬಲಿತೆಗೆದುಕೊಳ್ಳುತ್ತಿವೆ. ಮುಹಮ್ಮದ್ ನಾಸಿರ್ ಸಜಿಪ, ಹರೀಶ್ ಪೂಜಾರಿ, ಅಶ್ರಫ್ ಕಲಾಯಿ, ಶರತ್ ಮಡಿವಾಳ ಹೀಗೆ ಹತ್ತಾರು ಅಮಾಯಕರು ಅದರ ಬಲಿಪಶುಗಳು.

ಮತೀಯವಾದ ಎಂಬುದು ಕೇವಲ ಒಂದು ಧಾರ್ಮಿಕ ಸಂಘರ್ಷವಲ್ಲ, ಅದು ಸಮಾಜದ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನೇ ಬುಡಮೇಲು ಮಾಡುವ ಒಂದು ವಿಷಕಾರಿ ಶಕ್ತಿ. ಕರಾವಳಿಯ ಪಾಲಿಗಂತೂ ಮತೀಯವಾದ ಎಂಬುದು ಅತ್ಯಂತ ವಿನಾಶಕಾರಿಯಾಗಿ ಪರಿಣಮಿಸಿದೆ. ಕೋಮು ದ್ವೇಷದ ಜ್ವಾಲೆಗಳು ಊರು, ಗಲ್ಲಿಗಳಿಗಷ್ಟೇ ಅಲ್ಲ; ಎಷ್ಟೋ ಮನೆ ಮನಗಳಿಗೂ ಹರಡಿದೆ. ಈ ಕುಲುಮೆಯಲ್ಲಿ ಬೆಂದು ಹೋಗುತ್ತಿರುವುದು ಮಾತ್ರ ಅಮಾಯಕರ ಜೀವಗಳು.

‘ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿ ಯಾನ್’ (ಹತ್ತು ತಾಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಪೊರೆಯುವ ಶಕ್ತಿ ನಾನು) ಎಂಬುದು ದೈವ ನುಡಿ. ಮತ ಸೌಹಾರ್ದವನ್ನು ಬಿಂಬಿಸುವ ದೈವದ ಈ ನುಡಿ ತುಳುನಾಡಿನ ನೈಜ ಪರಂಪರೆಯ ಪ್ರತೀಕ. ಹಿಂದೂ-ಮುಸ್ಲಿಮರ ನಡುವೆ ಪ್ರೀತಿ, ವಿಶ್ವಾಸದ ಬೆಸುಗೆಯಾಗಿರುವ ದೈವಗಳು ಮತ್ತು ಸೂಫಿ ದರ್ಗಾಗಳಿರುವ ಕರಾವಳಿಯಲ್ಲಿ, ಮತೀಯವಾದ ಹುಟ್ಟಿಸಿದ ದ್ವೇಷದ ಪ್ರತೀಕಾರವು ಹತ್ತಾರು ತಾಯಂದಿರ ಮಡಿಲನ್ನು ಬರಿದುಗೊಳಿಸಿದೆ.

ಸೌಹಾರ್ದತೆಗೆ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೋಮುವಾದಿ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ಮತೀಯತೆಯ ವಿಷಬೀಜದಿಂದಾಗಿ ತಲ್ಲಣಿಸುತ್ತಿದೆ. ಇಲ್ಲಿ ನಡೆದ ಕೋಮು ಗಲಭೆಗಳು ಮತ್ತು ಹತ್ಯೆಗಳಿಂದಾಗಿ, ಅದೆಷ್ಟೋ ಮನೆಗಳು ಸ್ಮಶಾನಗಳಾಗಿವೆ. ಮಕ್ಕಳನ್ನು ತಾಯಂದಿರಿಂದ ಕಸಿದುಕೊಳ್ಳಲಾಗಿದೆ. ಪತ್ನಿ ಕಂಡ ಸುಂದರ ಸಂಸಾರದ ಕನಸುಗಳು ನುಚ್ಚುನೂರಾದರೆ, ಪುಟಾಣಿ ಮಕ್ಕಳ ಭವಿಷ್ಯ ಅತಂತ್ರಗೊಂಡಿವೆ.

ಈ ಕುಟುಂಬಗಳು ಅನುಭವಿಸುತ್ತಿರುವ ಅಗಾಧ ನೋವು, ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಯಾತನೆಗಳನ್ನು ಸಮಾಜದ ಮುಂದೆ ತೆರೆದಿಡುವುದು ಈ ವಿಷಮ ಕಾಲದ ತುರ್ತು ಅಗತ್ಯವಾಗಿದೆ. ಮತೀಯ ಉನ್ಮಾದದಲ್ಲಿ ಸಿಲುಕಿರುವ ಸಮಾಜದ ಹೃದಯಕ್ಕೆ ಈ ವಾಸ್ತವವನ್ನು ತಲುಪಿಸುವ ಪ್ರಯತ್ನವನ್ನು ಈ ಪುಸ್ತಕದ ಮೂಲಕ ನಾನು ನಡೆಸಿದ್ದೇನೆ. ಇದು ಕೇವಲ ನಡೆದ ಘಟನೆಗಳ ಪಟ್ಟಿಯಲ್ಲ; ಬದಲಿಗೆ, ದ್ವೇಷಕ್ಕೆ ಬಲಿಯಾದ ಅಮಾಯಕ ಜೀವಗಳ ಹಿಂದೆ ಅಡಗಿರುವ ನೋವಿನ ಕಥನ. ಇಲ್ಲಿ ನೊಂದ ತಾಯಂದಿರ ಕಣ್ಣೀರು, ಅನಾಥ ಮಕ್ಕಳ ನೋವಿನ ಕೂಗು, ರಕ್ತ ಸಂಬಂಧಿಗಳ ವೇದನೆ ಇದೆ. ಇವೆಲ್ಲವೂ ಕನಿಷ್ಠ ಪಕ್ಷ ಸಮಾಜದ ಆತ್ಮಸಾಕ್ಷಿಯನ್ನು ಕೆಣಕಿ, ಸಾಮರಸ್ಯದ ಕಡೆಗೆ ಹೆಜ್ಜೆ ಇಡುವಂತೆ ಪ್ರೇರೇಪಿಸುವಂತಾಗಲಿ ಎಂಬ ಆಶಯ ನನ್ನದು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ‍್ಯಾನಂತರದಲ್ಲಿ ಹಿಂದೂ-ಮುಸ್ಲಿಮರ ನಡುವೆ ಮೊದಲ ಕೋಮು ಸಂಘರ್ಷ ನಡೆದಿದ್ದು ೧೯೬೮ ರಲ್ಲಿ. ಮಂಗಳೂರಿನ ಗೂಡ್‌ಶೆಡ್, ಬೋಳಾರ, ಕುದ್ರೋಳಿ ಮಸೀದಿ ಹಾಗೂ ಹೊಯ್ಗೆ ಬಜಾರ್ ಸುತ್ತಮುತ್ತ ಭೀಕರ ಕೋಮು ಸಂಘರ್ಷ ನಡೆದಿತ್ತು. ಗಲಭೆ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಘಟನೆ, ಹಿಂದೆ ಸೌಹಾರ್ದಕ್ಕೆ ಹೆಸರಾಗಿದ್ದ ಕರಾವಳಿ ಭಾಗದಲ್ಲಿ ಕೋಮು ಉದ್ವಿಗ್ನತೆಯ ಇತಿಹಾಸದ ಮೊದಲ ಕಹಿನೆನಪು.

ಅಂದಿನಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಹಲವು ಕೋಮುಗಲಭೆ, ಮತೀಯ ಹಿಂಸಾಚಾರ ಹಾಗೂ ಪ್ರತೀಕಾರದ ಸರಣಿ ಕೊಲೆಗಳು ನಡೆದಿವೆ. ಈ ಹಿಂಸಾಚಾರಗಳಿಗೆ ಕೇವಲ ಮತೀಯ ಅಪರಾಧ ಹಿನ್ನಲೆ ಹೊಂದಿದ್ದವರು ಹಾಗೂ ಕೋಮುವಾದಿ ಸಂಘಟನೆಗಳಲ್ಲಿ ಗುರುತಿಸಿಕೊಂಡವರು ಮಾತ್ರ ಬಲಿಯಾಗಿಲ್ಲ. ಯಾವುದೇ ಸಂಘಟನೆಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ ಮತ್ತು ಸಿದ್ಧಾಂತಗಳಲ್ಲಿ ಗುರುತಿಸಿಕೊಳ್ಳದ ಮುಗ್ಧರು, ಅಮಾಯಕರೂ ಪ್ರಾಣ ಕಳೆದುಕೊಂಡಿದ್ದಾರೆ.

ಈ ಪುಸ್ತಕದಲ್ಲಿ ೨೦೧೫ ರಿಂದ ೨೦೨೫ರ ತನಕ ಜಿಲ್ಲೆಯಲ್ಲಿ ಮತೀಯ ಪ್ರತೀಕಾರಕ್ಕೆ ಬಲಿಯಾದ ಅಮಾಯಕರ ಕುಟುಂಬಗಳ ನೋವು, ತಲ್ಲಣ, ಆತಂಕಗಳನ್ನು ತೆರೆದಿಡುವ ಪ್ರಯತ್ನ ನಡೆಸಿದ್ದೇನೆ. ಕೊಲೆಯಾದ ಹದಿಮೂರು ಮಂದಿ ಅಮಾಯಕರ ಪೈಕಿ ಮೂವರು ಮಾತ್ರ ಬೇರೆ ಬೇರೆ ಸಂಘಟನೆಗಳಲ್ಲಿ ಗುರುತಿಸಿಕೊಂಡವರು. ಅಶ್ರಫ್ ಕಲಾಯಿ – ಎಸ್‌ಡಿಪಿಐ, ಶರತ್ ಮಡಿವಾಳ – ಆರ್‌ಎಸ್‌ಎಸ್ ಹಾಗೂ ಪ್ರವೀಣ್ ನೆಟ್ಟಾರು ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯರಾಗಿದ್ದರು.

ಆದರೆ ಈ ಮೂವರೂ ಯಾವುದೇ ಮತೀಯ ಗಲಭೆಗಳು ಅಥವಾ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾದವರಲ್ಲ ಎಂಬುದು ಗಮನಾರ್ಹ. ಉಳಿದ ಹತ್ತು ಮಂದಿಯಂತೂ ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಂಡವರಲ್ಲ. ಬದಲಾಗಿ ಎಲ್ಲ ಸಮುದಾಯದ ಜೊತೆಗೆ ಸೌಹಾರ್ದಯುತ ಬಾಂಧವ್ಯವನ್ನು ಇಟ್ಟುಕೊಂಡಿದ್ದವರು. ಇವರೆಲ್ಲರೂ ಕೇವಲ ತಮ್ಮ ಧರ್ಮದ ಕಾರಣಕ್ಕಾಗಿ ಪ್ರತೀಕಾರದ ದ್ವೇಷಕ್ಕೆ ಬಲಿಯಾಗಿದ್ದಾರೆ.

ಮತೀಯ ದ್ವೇಷಕ್ಕೆ ಬಲಿಯಾದವರ ಕುಟುಂಬಗಳನ್ನು ನಾನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಒಂದು ವಿಚಾರ ಸಾಮಾನ್ಯವಾಗಿತ್ತು. ಹತ್ಯೆಯಾದವರು ತೀರಾ ಬಡತನದ ಕುಟುಂಬದ ಹಿನ್ನೆಲೆ ಹೊಂದಿದವರು. ಬಹುತೇಕ ಮಂದಿ ಆಟೋ ಚಾಲಕರು, ಕೂಲಿ ಕೆಲಸಗಾರರು ಹಾಗೂ ಹೊಟ್ಟೆ ಪಾಡಿಗಾಗಿ ದೈನಂದಿನ ಕಷ್ಟ ಪಟ್ಟು ದುಡಿದು ಬದುಕುತ್ತಿದ್ದವರು. ವಿಪರ್ಯಾಸವೆಂದರೆ, ಮತೀಯ ರಕ್ತದಾಹಿಗಳ ಪಾಲಿಗೆ ಇಂತವರೇ ಸುಲಭದ ತುತ್ತು.

ಪ್ರತೀಕಾರ ಕೋಮುವಾದಿ ಮತ್ತು ಮತೀಯವಾದಿಗಳ ಪಾಲಿಗೆ ‘ಲೆಕ್ಕ ಚುಕ್ತಾ’ ಆಗಿರಬಹುದು. ಆದರೆ, ತನ್ನವರನ್ನು ಕಳೆದುಕೊಂಡ ಕುಟುಂಬಕ್ಕೆ ಅದು ಎಂದಿಗೂ ಮಾಸದ ಗಾಯ. ಕೊಂದವರು ಧರ್ಮ ರಕ್ಷಣೆಯ ಉನ್ಮಾದದಲ್ಲಿ ಮಾಡಿದ ಕೃತ್ಯವನ್ನು ಹೆಮ್ಮೆಯಿಂದ ಸಮರ್ಥಿಸಿಕೊಳ್ಳುತ್ತಿರಬಹುದು. ಆದರೆ, ಸಂತ್ರಸ್ತರ ಕುಟುಂಬದ ಕಣ್ಣೀರು ಬತ್ತಿಲ್ಲ, ಅವರ ನ್ಯಾಯದ ನಿರೀಕ್ಷೆಗಳು ಈಡೇರಿಲ್ಲ. ತಮಗಾದ ಅನ್ಯಾಯಕ್ಕೆ ಕಾನೂನಿನ ಮೂಲಕ ಹೋರಾಟ ನಡೆಸುವ ಆರ್ಥಿಕ ಸಾಮರ್ಥ್ಯವೂ ಅವರಲಿಲ್ಲ.

ಮಗನನ್ನು ಕಳೆದುಕೊಂಡ ತಾಯಿಗೆ ಕಾನೂನು ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಶಕ್ತಿ ಇಲ್ಲವಾಗಿದೆ. ಆಕೆಗೆ ಮನೆಯ ಮತ್ತೊಬ್ಬ ಮಗನ ಜೀವದ ಬಗ್ಗೆ ಭಯ ಕಾಡುತ್ತಿದೆ. ‘ಯಾರನ್ನು ನಂಬಿಕೊಂಡು ಕಾನೂನು ಹೋರಾಟ ಮಾಡಲಿ? ನನ್ನ ಮತ್ತೊಬ್ಬ ಮಗನಿಗೆ ಅವರು ಏನಾದರೂ ಮಾಡಿದರೆ ಯಾರು ಗತಿ?’ ಎಂದು ಪ್ರಶ್ನಿಸುವ ಸೈಫಾನ್ ತಾಯಿಯ ಆತಂಕ ಕರಾವಳಿಯ ಕೋಮು ಸಂಘರ್ಷದ ಕರಾಳ ವಾಸ್ತವ. ಪರಿಣಾಮ ಮುಕ್ತವಾಗಿ ಮಾತನಾಡಲು ಕೊಲೆಯಾದವರ ಕುಟುಂಬಸ್ಥರು ಹಿಂಜರಿಯುವಂತಹ ವಾತಾವರಣ ಇದೆ.

ಮತೀಯ ಹತ್ಯೆ ಪ್ರಕರಣಗಳಲ್ಲಿ, ರಾಜೇಶ್ ಕೋಟ್ಯಾನ್ ಮತ್ತು ಮುಹಮ್ಮದ್ ನಾಸಿರ್ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಆದರೆ, ಈ ಪೈಕಿ ನಾಸಿರ್ ಕೊಲೆ ಆರೋಪಿಗಳ ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ರಾಷ್ಟ್ರಿಯ ತನಿಖಾ ದಳ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ತಿದ್ದುಪಡಿ ಕಾಯಿದೆ-೨೦೧೯ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದುರದೃಷ್ಟವಶಾತ್, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಮತೀಯ ಕೊಲೆ ಪ್ರಕರಣಗಳಲ್ಲಿ, ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಧರ್ಮ ರಕ್ಷಕರಾಗಿ ಮೆರೆಸಲಾಗುತ್ತಿದೆ. ಅಮಾಯಕರನ್ನು ಕೊಲೆ ಮಾಡಿದ್ದೇವೆ, ಮಕ್ಕಳನ್ನು ಅನಾಥಗೊಳಿಸಿದ್ದೇವೆ ಎಂಬ ಕನಿಷ್ಠ ಕೊರಗು ಸಹ ಅವರಲ್ಲಿ ಇಲ್ಲ. ಬದಲಾಗಿ, ಜೈಲಿನಿಂದ ಹೊರಬಂದ ಈ ಆರೋಪಿಗಳು ತಮ್ಮ ಕೃತ್ಯಗಳನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಧರ್ಮ ರಕ್ಷಣೆಗಾಗಿ ಮತ್ತಷ್ಟು ರಕ್ತ ಹರಿಸುವ ಬೆದರಿಕೆ ಹಾಕುತ್ತಿದ್ದಾರೆ.

ಕೆಲವು ಸಂದರ್ಭದಲ್ಲಿ ನೈಜ ಆರೋಪಿಗಳ ಬದಲಾಗಿ ಸಂಘಟನೆಗಳ ಸೂಚನೆಯಂತೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದೆ ಇರುವವರನ್ನು ಪೊಲೀಸರಿಗೆ ಒಪ್ಪಿಸುವ ಪರಿಪಾಠವೂ ಇತ್ತು. ಇದು ಕರಾವಳಿಯ ಧರ್ಮ ರಾಜಕಾರಣ ತಲುಪಿದ ಭೀಕರ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಕರ್ನಾಟಕ ಪೊಲೀಸ್ ಕೈಪಿಡಿ, ಓರ್ವ ಪೊಲೀಸ್ ಸಿಬ್ಬಂದಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಸಂಘಟನೆಯೊಂದಿಗೆ ಸಹಯೋಗ ಹೊಂದಿರಕೂಡದು ಎಂದು ಹೇಳುತ್ತದೆ. ಈ ನಿಯಮ ಪಾಲನೆಯಲ್ಲಿನ ಲೋಪಗಳು, ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತಿವೆ ಎಂಬ ಅಭಿಪ್ರಾಯವಿದೆ. ಪೊಲೀಸ್ ಇಲಾಖೆಯು ನಿಸ್ಪಕ್ಷಪಾತವಾಗಿ ವರ್ತಿಸಿ, ಎರಡು ಧರ್ಮಗಳ ಮತೀಯವಾದಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಲ್ಲಿ, ಕರಾವಳಿಯ ಮತೀಯ ಸಂಘರ್ಷಕ್ಕೆ ತಕ್ಕ ಮಟ್ಟದಲ್ಲಿ ಕೊನೆ ಹಾಡಬಹುದು ಎಂಬುದು ಸಮಾಜದ ನಿರೀಕ್ಷೆಯಾಗಿದೆ.

ಮತೀಯವಾದವು ಸಾಮಾಜಿಕವಾಗಿ ಕರಾವಳಿಯ ನೆಮ್ಮದಿಯನ್ನು ಕೆಡಿಸಿದ್ದಷ್ಟೇ ಅಲ್ಲ, ಇದು ಜಿಲ್ಲೆಯ ಆರ್ಥಿಕ ಪ್ರಗತಿಗೂ ಬಹುದೊಡ್ಡ ಹಿನ್ನಡೆಯನ್ನು ಉಂಟುಮಾಡಿದೆ. ಎರಡು ಸಮುದಾಯಗಳ ಜನರ ನಡುವೆ ಅಪನಂಬಿಕೆಯ ಕಂದಕವನ್ನು ಮತ್ತಷ್ಟು ಆಳ-ಅಗಲಗೊಳಿಸುತ್ತಿದೆ. ಆತಂಕಕಾರಿ ಸಂಗತಿಯೆAದರೆ, ಅದು ತನ್ನ ಸ್ವರೂಪವನ್ನು ಬದಲಾಯಿಸುತ್ತಿದೆ. ಮತಾಂಧತೆಯ ಅಮಲು ಹೊಂದಿದವರು ಈಗ ಕ್ರಿಮಿನಲ್ ಚಟುವಟಿಕೆಗಳು ಮತ್ತು ಹಫ್ತಾ ವಸೂಲಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಮತಾಂಧ ಸಂಘಟನೆಗಳು ನೇರವಾಗಿ ತಮ್ಮ ಕಾರ್ಯಕರ್ತರಿಗೆ ಹತ್ಯೆಗಳನ್ನು ನಡೆಸುವಂತೆ ಸೂಚನೆ ನೀಡುತ್ತಿರುವುದು ಕಡಿಮೆಯಾಗುತ್ತಿದೆ. ಬದಲಾಗಿ, ಕ್ರಿಮಿನಲ್ ಗುಂಪುಗಳನ್ನು ಇದಕ್ಕೆ ಬಳಸಿಕೊಳ್ಳುತ್ತಿವೆ. ದೀಪಕ್ ರಾವ್, ಬಶೀರ್, ಫಾಝಿಲ್, ಸುಹಾಸ್ ಶೆಟ್ಟಿ ಪ್ರಕರಣಗಳು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿವೆ. ಇಂತಹ ಕೆಲವು ಮತೀಯ ಕ್ರಿಮಿನಲ್ ಗುಂಪುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿವೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಪ್ರತೀಕಾರದ ಕೊಲೆಗಳಿಗಾಗಿ ಹಣಕಾಸು ಹಾಗೂ ಕಾನೂನು ನೆರವನ್ನು ಪಡೆದುಕೊಳ್ಳುತ್ತಿವೆ.

ಕರಾವಳಿಯಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳು ಅತ್ಯಂತ ನಿರಾಶಾದಾಯಕ ಸನ್ನಿವೇಶಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಇದರ ಹೊರತಾಗಿಯೂ, ಶಾಂತಿ, ಸಾಮರಸ್ಯ, ಪ್ರೀತಿ ಹರಡುವ ಮನಸ್ಸುಗಳು ಈ ಜಿಲ್ಲೆಯಲ್ಲಿವೆ. ಜಿಲ್ಲೆಯ ನೈಜ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವ ಜನಪರ ಸಂಘಟನೆಗಳು, ಚಳುವಳಿಗಳು ಹಾಗೂ ಹೋರಾಟಗಾರರಿದ್ದಾರೆ. ಮನುಷ್ಯ ಸಹಜ ಸಂಬಂಧಕ್ಕೆ ಬೆಲೆ ಕೊಡುವ ಜನಸಾಮಾನ್ಯರಿದ್ದಾರೆ. ಈ ಕಾರಣಕ್ಕಾಗಿ ಕರಾವಳಿಯಲ್ಲಿ ಕೋಮು ದ್ವೇಷದ ವಿಷಗಾಳಿಯ ಅಪಾಯದ ನಡುವೆಯೂ, ನೆಮ್ಮದಿಯಿಂದ ಉಸಿರಾಡುವ ಕಾಲ ಬರಬಹುದು ಎಂಬ ನಿರೀಕ್ಷೆ ಹುಸಿಯಾಗದು ಎಂಬುದು ನಂಬಿಕೆ.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ತನ್ನ ಕನಸಿನ ಭಾರತದಲ್ಲಿ ಧಾರ್ಮಿಕ ಸಹನಶಕ್ತಿ ಹೀಗಿರಬೇಕು ಎಂದು ಬಯಸುತ್ತಾ. ‘ನನ್ನ ಕನಸಿನ ಭಾರತವು ಒಂದು ಧರ್ಮವನ್ನು ಅಂದರೆ ಪೂರ್ತಿಯಾಗಿ ಹಿಂದೂ, ಅಥವಾ ಪೂರ್ತಿಯಾಗಿ ಕ್ರಿಶ್ಚಿಯನ್, ಅಥವಾ ಪೂರ್ತಿಯಾಗಿ ಮುಸಲ್ಮಾನ್ ಧರ್ಮವನ್ನು ಬೆಳೆಸುವುದನ್ನು ನಾನು ನಿರೀಕ್ಷಿಸಲಾರೆ. ಎಲ್ಲ ಧರ್ಮಗಳು ಒಂದರ ಪಕ್ಕದಲ್ಲಿ ಇನ್ನೊಂದು, ಒಂದರೊಡನೆ ಇನ್ನೊಂದು ಕೆಲಸ ಮಾಡುತ್ತ ಪೂರ್ತಿಯಾಗಿ ಸಹಿಷ್ಣುವಾಗಿರಬೇಕು ಎಂದು ನಾನು ಇಷ್ಟಪಡುತ್ತೇನೆ’ ಎನ್ನುತ್ತಾರೆ.

ಮತೀಯ ದ್ವೇಷದ ಗೋಡೆಗಳನ್ನು ಕೆಡವಿ, ಮತ್ತೆ ಸಾಮರಸ್ಯದ ಸೇತುವೆಗಳನ್ನು ಕಟ್ಟುವ ಅವಶ್ಯಕತೆ ಇಂದು ದಕ್ಷಿಣ ಕನ್ನಡ ಜಿಲ್ಲೆಗಿದೆ. ಅದನ್ನು ಸಾಧಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿ ಇರುವವರು ಮತೀಯ ದ್ವೇಷಕ್ಕೆ ಪ್ರಾಣ ಕಳೆದುಕೊಂಡ ಅಮಾಯಕರ ತಾಯಂದಿರು. ಮಕ್ಕಳನ್ನು ಕಳೆದುಕೊಂಡು ಮಡಿಲು ಬರಿದಾಗಿಸಿಕೊಂಡ ದುಲೈಖಾ, ವಾರಿಜಾ ಕೋಟ್ಯಾನ್ ಮತ್ತು ಸಾರಮ್ಮ ಕರಾವಳಿ ಪಾಲಿಗೆ ಮಾದರಿ ತಾಯಂದಿರು. ಅಗಾಧ ನೋವಿನ ನಡುವೆಯೂ ಅವರು ಆಡುತ್ತಿರುವ ಪ್ರೀತಿ ಮತ್ತು ಸೌಹಾರ್ದತೆಯ ಮಾತುಗಳು, ಧರ್ಮಾಂಧತೆಯ ಅಮಲಿನಲ್ಲಿರುವವರ ಹೃದಯಗಳನ್ನು ತಟ್ಟಬೇಕಾಗಿದೆ.

‘ಕೊಲೆಯಾದ ವ್ಯಕ್ತಿ ಹಿಂದೂ ಆಗಲಿ, ಮುಸ್ಲಿಂ ಆಗಲಿ, ಅವರ ರಕ್ತದ ಬಣ್ಣ ಒಂದೇ ಅಲ್ಲವೇ? ಆ ಮಕ್ಕಳ ತಾಯಂದಿರ ಕಣ್ಣೀರಿನ ಬಣ್ಣದಲ್ಲಿ ವ್ಯತ್ಯಾಸವಿದೆಯೇ?’ ಎಂಬ ಅವರ ಮಾತುಗಳಲ್ಲಿ ಧರ್ಮ, ಜಾತಿ, ಮತ್ತು ರಾಜಕೀಯ ಸಿದ್ಧಾಂತಗಳ ಎಲ್ಲೆ ಮೀರಿ ಮಾನವೀಯತೆಯನ್ನು ಎತ್ತಿಹಿಡಿಯುವ ಪ್ರಬಲ ಸಂದೇಶವಿದೆ. ಅವರ ಕಣ್ಣೀರಿನ ಪ್ರತಿ ಹನಿಯಲ್ಲೂ, ಶಾಂತಿ ಮತ್ತು ಸಹಬಾಳ್ವೆಯ ಆಳವಾದ ಆಶಯ ಅಡಗಿದೆ. ದ್ವೇಷದ ವಿಷ ಬೀಜ ಬಿತ್ತುವವರಿಗೆ, ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವವರಿಗೆ ಮತ್ತು ಸಮಾಜವನ್ನು ವಿಭಜಿಸುವವರಿಗೆ ಈ ತಾಯಂದಿರ ನೋವು ಅರ್ಥವಾದರೆ ಬಹುಶಃ ಕರಾವಳಿಯ ಮತೀಯ ಪ್ರತೀಕಾರದ ದಾಹಕ್ಕೆ ಪೂರ್ಣವಿರಾಮ ಬೀಳಬಹುದು.

WhatsApp Image 2026 02 08 at 10.23.43 PM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...