ಸಿಬಿಐ, ಇ.ಡಿಗೆ ಚಾಟಿ ಬೀಸಿದ ‘ಎಂಟೆದೆಯ ಬಂಟ’ ನ್ಯಾಯಾಧೀಶ ಜಿತೇಂದ್ರ ಸಿಂಗ್

Date:

ಪ್ರಜಾಪ್ರಭುತ್ವದಲ್ಲಿ ತನಿಖಾ ಸಂಸ್ಥೆಗಳು ಮತ್ತು ಅಧಿಕಾರದ ದುರ್ಬಳಕೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರ ನಡೆ ನ್ಯಾಯಾಂಗದ ಮೇಲಿನ ಜನಸಾಮಾನ್ಯರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. “ತನಿಖೆಯು ಸತ್ಯವನ್ನು ಹೊರತರಬೇಕೇ ಹೊರತು, ತನಿಖಾ ವೈಫಲ್ಯಗಳನ್ನು ಮುಚ್ಚಿಹಾಕಲು ಬಳಸುವ ತಂತ್ರವಾಗಬಾರದು” ಎಂಬ ಅವರ ತೀಕ್ಷ್ಣ ಮಾತುಗಳು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ

ದೇಶದ ರಾಜಕೀಯ ಇತಿಹಾಸದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಹಾಗೂ ದೆಹಲಿಯ ಆಡಳಿತಾರೂಢ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ‘ದೆಹಲಿ ಅಬಕಾರಿ ನೀತಿ’ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ 23 ಜನರನ್ನು ದೋಷಮುಕ್ತಗೊಳಿಸಿರುವ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರ ಹೆಸರು ಇದೀಗ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ. ಕೇಂದ್ರೀಯ ತನಿಖಾ ದಳದ (ಸಿಬಿಐ) ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿ, 598 ಪುಟಗಳ ಐತಿಹಾಸಿಕ ತೀರ್ಪು ನೀಡಿರುವ ಅವರು, ನ್ಯಾಯಾಂಗ ವಲಯದಲ್ಲಿ ‘ಎಂಟೆದೆಯ ಬಂಟ’ ಎಂದೇ ಬಿಂಬಿತವಾಗುತ್ತಿದ್ದಾರೆ.

​ದೆಹಲಿಯ ಉನ್ನತ ನ್ಯಾಯಾಂಗ ಸೇವೆಯ (ಡಿಎಚ್‌ಜೆಎಸ್) ಹಿರಿಯ ಅಧಿಕಾರಿಯಾಗಿದ್ದ ಜಿತೇಂದ್ರ ಸಿಂಗ್ (ಜಿತೇಂದ್ರ ಪ್ರತಾಪ್ ಸಿಂಗ್), ಅಕ್ಟೋಬರ್ 2024ರಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಗೊಂಡರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವ ಇವರು, ಪ್ರಸ್ತುತ ನವದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಂಸದರು ಮತ್ತು ಶಾಸಕರ (ಎಂಪಿ/ಎಂಎಲ್‌ಎ) ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ, ಆಮಿಷಗಳಿಗೆ ಬಲಿಯಾಗದೆ, ಕೇವಲ ದಾಖಲೆಗಳು, ಸಾಕ್ಷ್ಯಾಧಾರಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಆಧಾರದ ಮೇಲೆ ವಸ್ತುನಿಷ್ಠವಾಗಿ ತೀರ್ಪು ನೀಡುವ ಅವರ ದಿಟ್ಟತನ ಈ ಪ್ರಕರಣದಲ್ಲಿ ಎದ್ದು ಕಾಣುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಿಬಿಐಗೆ ಚಾಟಿ ಏಟು

ಅಬಕಾರಿ ಪ್ರಕರಣದ ತೀರ್ಪಿನಲ್ಲಿ ನ್ಯಾಯಾಧೀಶರು ಕೇವಲ ಆರೋಪಿಗಳನ್ನು ಬಿಡುಗಡೆ ಮಾಡಿಲ್ಲ; ಬದಲಾಗಿ, ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳು ಹೇಗೆ ದಾರಿ ತಪ್ಪಿವೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಿಬಿಐ ತನಿಖೆಯನ್ನು “ಪೂರ್ವನಿಯೋಜಿತ ಮತ್ತು ನಾಟಕೀಯ” ಎಂದು ಬಣ್ಣಿಸಿರುವ ಅವರು, ಸಾಕ್ಷ್ಯಾಧಾರಗಳಿಲ್ಲದೆ, ಕೇವಲ ‘ಅಪ್ರೂವರ್’ (ಮಾಫಿ ಸಾಕ್ಷಿ) ಹೇಳಿಕೆಗಳನ್ನು ಅತಿಯಾಗಿ ಅವಲಂಬಿಸಿ ಪ್ರಕರಣ ದಾಖಲಿಸಿರುವುದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ‘ಮೇಲ್ನೋಟಕ್ಕೆ ಅಥವಾ ಸಣ್ಣ ಗುಮಾನಿಯನ್ನೂ’ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಮ್ಮ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.

​ಸರ್ಕಾರದ ನೀತಿಯೊಂದರ ವೈಫಲ್ಯವನ್ನೇ ‘ಕ್ರಿಮಿನಲ್ ಪಿತೂರಿ’ ಎಂದು ಪರಿಗಣಿಸಲಾಗದು ಎಂಬುದನ್ನು ಅವರು ಒತ್ತಿಹೇಳಿದ್ದಾರೆ. ಸಿಬಿಐ ಮಂಡಿಸಿದ ವಾದವನ್ನು “ಆರ್ಥಿಕವಾಗಿ ಅನಕ್ಷರಸ್ಥ”  ಎಂದು ಕರೆದಿರುವ ಅವರು, ತನಿಖಾಧಿಕಾರಿಯ ಕಾರ್ಯವೈಖರಿಯನ್ನು “ಸಾಂಸ್ಥಿಕ ದುರ್ನಡತೆ” ಎಂದು ಖಂಡಿಸಿದ್ದಾರೆ. ಕೇವಲ ಆರೋಪಿಗಳನ್ನು ಬಿಡುಗಡೆ ಮಾಡಿ ಸುಮ್ಮನಾಗದೆ, ಸಾಕ್ಷ್ಯಾಧಾರಗಳಿಲ್ಲದೆ ವಿನಾಕಾರಣ ಪ್ರಕರಣ ದಾಖಲಿಸಿದ ತನಿಖಾಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು ಮಾಡುವ ಮೂಲಕ ಜಿತೇಂದ್ರ ಸಿಂಗ್ ತಮ್ಮ ಖಚಿತ ನಿಲುವನ್ನು ಪ್ರದರ್ಶಿಸಿದ್ದಾರೆ. ಜೊತೆಗೆ, ತನಿಖಾ ಸಂಸ್ಥೆಗಳು ಬಳಸಿದ ‘ಸೌತ್ ಗ್ರೂಪ್’  ಎಂಬ ಪದಪ್ರಯೋಗವನ್ನೂ ಆಕ್ಷೇಪಿಸಿರುವ ಅವರು, “ಆರೋಪಿಗಳನ್ನು ಕಳಂಕಿತ ಪದಗಳಿಂದ ಕರೆಯಬಾರದು, ನ್ಯಾಯಾಲಯದ ಭಾಷೆ ಸದಾ ತಟಸ್ಥವಾಗಿರಬೇಕು” ಎಂದು ಕಟ್ಟುನಿಟ್ಟಿನ ಪಾಠ ಮಾಡಿದ್ದಾರೆ.

ಇದನ್ನು ಓದಿದ್ದೀರಾ? ​ಎಪ್‌ಸ್ಟೀನ್‌ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ

ಪ್ರಜಾಪ್ರಭುತ್ವದಲ್ಲಿ ತನಿಖಾ ಸಂಸ್ಥೆಗಳು ಮತ್ತು ಅಧಿಕಾರದ ದುರ್ಬಳಕೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರ ನಡೆ ನ್ಯಾಯಾಂಗದ ಮೇಲಿನ ಜನಸಾಮಾನ್ಯರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. “ತನಿಖೆಯು ಸತ್ಯವನ್ನು ಹೊರತರಬೇಕೇ ಹೊರತು, ತನಿಖಾ ವೈಫಲ್ಯಗಳನ್ನು ಮುಚ್ಚಿಹಾಕಲು ಬಳಸುವ ತಂತ್ರವಾಗಬಾರದು” ಎಂಬ ಅವರ ತೀಕ್ಷ್ಣ ಮಾತುಗಳು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ವಸ್ತುನಿಷ್ಠತೆ, ಸಾಂವಿಧಾನಿಕ ಹಕ್ಕುಗಳ ರಕ್ಷಣೆ, ಕಾನೂನಿನ ಆಳ್ವಿಕೆ ಹಾಗೂ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವರು ನೀಡುತ್ತಿರುವ ಆದ್ಯತೆ, ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಒಂದು ಹೊಸ ಭರವಸೆಯಾಗಿದೆ.

ಹಿಂದಿನ ದಿಟ್ಟ ತೀರ್ಪುಗಳು

ಜಿತೇಂದ್ರ ಸಿಂಗ್ ಅವರು ನ್ಯಾಯಪರವಾದ ತೀರ್ಪುಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ತಮ್ಮ ವೃತ್ತಿಜೀವನದುದ್ದಕ್ಕೂ ಅವರು ಪಕ್ಷಪಾತರಹಿತ ನಿಲುವನ್ನು ಪ್ರದರ್ಶಿಸಿದ್ದಾರೆ:

ಅಮಾನತುಲ್ಲಾ ಖಾನ್ ಪ್ರಕರಣ: ನವೆಂಬರ್ 2024ರಲ್ಲಿ, ದೆಹಲಿ ವಕ್ಫ್ ಬೋರ್ಡ್ ನೇಮಕಾತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಚಾರ್ಜ್‌ಶೀಟ್ ಅನ್ನು, ಕಾಯ್ದೆಯ ಅಡಿ ಸೂಕ್ತ ಪೂರ್ವಾನುಮತಿ ಇಲ್ಲದ ಕಾರಣಕ್ಕೆ ತಿರಸ್ಕರಿಸಿ, ಆಪ್ ಶಾಸಕ ಅಮಾನತುಲ್ಲಾ ಖಾನ್ ಬಿಡುಗಡೆಗೆ ಆದೇಶಿಸಿದ್ದರು.

ಸತ್ಯೇಂದ್ರ ಜೈನ್ v/s ಬಾನ್ಸುರಿ ಸ್ವರಾಜ್: ಆಪ್ ನಾಯಕ ಸತ್ಯೇಂದ್ರ ಜೈನ್ ಅವರು ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸುವಾಗಲೂ, “ತನಿಖಾ ಸಂಸ್ಥೆಗಳು ನೀಡುವ ಮಾಹಿತಿಯು ನಿಖರವಾಗಿರಬೇಕು, ಸತ್ಯಕ್ಕೆ ದೂರವಾದ ಹಾಗೂ ಸನ್ಸೇಷನಲ್ ಆಗಿರಬಾರದು” ಎಂದು ತನಿಖಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದರು.

ಭನ್ವರ್ ಜಿತೇಂದ್ರ ಸಿಂಗ್ ಪ್ರಕರಣ: ಕಾಂಗ್ರೆಸ್ ನಾಯಕ ಭನ್ವರ್ ಜಿತೇಂದ್ರ ಸಿಂಗ್ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ಬದಿಗೊತ್ತಿ, ಅವರ ವಿರುದ್ಧ ಪ್ರಕರಣ ದಾಖಲಿಸಲು ಆಧಾರಗಳಿವೆ ಎಂದು ತಿಳಿಸಿ, ಮರುಪರಿಶೀಲಿಸುವಂತೆ ಆದೇಶಿಸಿದ್ದರು. ​

ಬಾನ್ಸುರಿ ಸ್ವರಾಜ್ ಪ್ರಕರಣ: ತನಿಖಾ ಸಂಸ್ಥೆಗಳ ಹೊಣೆಗಾರಿಕೆಗೆ ಎಚ್ಚರಿಕೆ
ಜುಲೈ 2025ರಲ್ಲಿ, ಆಪ್ ನಾಯಕ ಸತ್ಯೇಂದ್ರ ಜೈನ್ ಅವರ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕಿ ಬಾನ್ಸುರಿ ಸ್ವರಾಜ್ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಧೀಶ ಜಿತೇಂದ್ರ ಸಿಂಗ್ ವಜಾಗೊಳಿಸಿದರು. ಬಾನ್ಸುರಿ ಅವರ ಹೇಳಿಕೆಯು ಜಾರಿ ನಿರ್ದೇಶನಾಲಯ (ಇ.ಡಿ) ಜೂನ್ 2022ರಲ್ಲಿ ಮಾಡಿದ್ದ ಟ್ವೀಟ್‌ನ ಪ್ರತಿಧ್ವನಿಯಾಗಿದೆಯೇ ಹೊರತು, ಜೈನ್ ಅವರ ಮಾನಹಾನಿ ಮಾಡುವ ಯಾವುದೇ ಸ್ವತಂತ್ರ ದುರುದ್ದೇಶವನ್ನು ಹೊಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಇದೇ ವೇಳೆ ಇ.ಡಿಯಂತಹ ತನಿಖಾ ಸಂಸ್ಥೆಗಳಿಗೆ ಕಟುವಾದ ಎಚ್ಚರಿಕೆ ನೀಡಿದ ನ್ಯಾಯಾಧೀಶರು, “ಸಂಸ್ಥೆಗಳು ನೀಡುವ ಮಾಹಿತಿಯು ನಿಖರ ಹಾಗೂ ವಿಶ್ವಾಸಾರ್ಹವಾಗಿರಬೇಕು. ಸತ್ಯಗಳನ್ನು ತಪ್ಪಾಗಿ ಅಥವಾ ಕೇವಲ ಕುತೂಹಲ ಕೆರಳಿಸುವಂತೆ ಬಿಂಬಿಸುವುದು ಅಧಿಕಾರದ ದುರ್ಬಳಕೆಯಾಗುತ್ತದೆ ಹಾಗೂ ಸಂವಿಧಾನದ 21ನೇ ವಿಧಿಯಡಿ ಇರುವ ವ್ಯಕ್ತಿಯ ‘ಪ್ರತಿಷ್ಠೆಯ ಹಕ್ಕಿನ’ ಉಲ್ಲಂಘನೆಯಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

​ಡಿ.ಕೆ. ಶಿವಕುಮಾರ್ ಪ್ರಕರಣ: ನ್ಯಾಯಾಲಯದ ಘನತೆ ಎತ್ತಿಹಿಡಿದ ನಡೆ
ನವೆಂಬರ್ 2024ರಲ್ಲಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ವೇಳೆ ಇ.ಡಿ ಪರ ವಕೀಲರೊಬ್ಬರು ನ್ಯಾಯಾಧೀಶರನ್ನು ಉದ್ದೇಶಿಸಿ ನಿಂದನಾತ್ಮಕವಾಗಿ ಹಾಗೂ ಜೋರು ಧ್ವನಿಯಲ್ಲಿ ಮಾತನಾಡಿದ್ದರು. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಜಿತೇಂದ್ರ ಸಿಂಗ್ ಅವರು, ನ್ಯಾಯಾಲಯದ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಇ.ಡಿಯ ‘ವಿಶೇಷ ನಿರ್ದೇಶಕರಿಗೆ’ ಮುಂದಿನ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರು. ನ್ಯಾಯಾಲಯದ ಈ ಕಠಿಣ ನಡೆಯ ಬೆನ್ನಲ್ಲೇ ಎಚ್ಚೆತ್ತ ಜಾರಿ ನಿರ್ದೇಶನಾಲಯವು, ಕೇವಲ ಎರಡೇ ದಿನಗಳಲ್ಲಿ “ತಮ್ಮ ವಕೀಲರ ನಡವಳಿಕೆ ಹಾಗೂ ಸುಳ್ಳು ಸಲ್ಲಿಕೆಗಳ ಕುರಿತು ಅವರಿಗೆ ವಿಶೇಷ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುವುದು” ಎಂದು ನ್ಯಾಯಾಲಯಕ್ಕೆ ಭರವಸೆ ನೀಡಬೇಕಾಯಿತು.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...