ಎನ್‌ಸಿಇಆರ್‌ಟಿ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಎಂಬ ವಿಷಯವನ್ನು ಸೇರ್ಪಡೆಗೊಳಿಸಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಷಯವನ್ನು ಸ್ವಯಂಪ್ರೇರಿತ ಪ್ರಕರಣವಾಗಿ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಇದೊಂದು ಆಳವಾಗಿ ಬೇರೂರಿರುವ ಸಂಚು ಎಂದು ಬಣ್ಣಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ, ಪಠ್ಯಪುಸ್ತಕಗಳ ಕೇಸರೀಕರಣ ಹಾಗೂ ಇತಿಹಾಸ ತಿರುಚುವಿಕೆಯಂತಹ ಆರೋಪಗಳ ಬಗ್ಗೆಯೂ ಸರ್ವೋಚ್ಚ ನ್ಯಾಯಾಲಯ ಇದೇ ರೀತಿಯ ಬಿಗಿ ನಿಲುವು ತಾಳುವುದೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ಬಂದಿದೆ.
ನ್ಯಾಯಾಲಯದ ಘನತೆಗೆ ಚ್ಯುತಿ ತರುವಂತಹ ಪಠ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ವಿಚಾರಣೆ ವೇಳೆ ಹಲವು ಕಟು ಮಾತುಗಳನ್ನಾಡಿದೆ. “ಅವರು ಗುಂಡು ಹಾರಿಸಿದ್ದಾರೆ, ಅದರ ಪರಿಣಾಮವಾಗಿ ಇಂದು ನ್ಯಾಯಾಂಗಕ್ಕೆ ರಕ್ತಸ್ರಾವವಾಗುತ್ತಿದೆ” ಎಂದು ನ್ಯಾಯಾಲಯ ಖೇದ ವ್ಯಕ್ತಪಡಿಸಿತು. ಈ ಪಠ್ಯ ಸೇರ್ಪಡೆಯು ಆಕಸ್ಮಿಕವಲ್ಲ, ಬದಲಾಗಿ ನ್ಯಾಯಾಂಗದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಲೆಕ್ಕಾಚಾರದ ನಡೆ ಮತ್ತು ಆಳವಾದ ಸಂಚು ಎಂದು ಪೀಠ ಅಭಿಪ್ರಾಯಪಟ್ಟಿದೆ. ಈ ಕೃತ್ಯಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ಆಳವಾದ ತನಿಖೆಯ ಅಗತ್ಯವಿದ್ದು, ತಪ್ಪು ಮಾಡಿದವರು ತಲೆದಂಡ ತೆರಲೇಬೇಕು ಮತ್ತು ಈ ಪ್ರಕರಣವನ್ನು ಮುಚ್ಚಿಹಾಕುವುದಿಲ್ಲ ಎಂದು ಕಟುವಾಗಿ ಎಚ್ಚರಿಸಿದೆ.
ಈ ರೀತಿಯ ದುರ್ನಡತೆಯನ್ನು ತಡೆಯದಿದ್ದರೆ ಅದು ನ್ಯಾಯಾಂಗ ಕಚೇರಿಯ ಪಾವಿತ್ರ್ಯತೆಯನ್ನು ಹಾಳುಮಾಡುತ್ತದೆ; ಇದು ಉದ್ದೇಶಪೂರ್ವಕ ಕೃತ್ಯವಾದರೆ ನ್ಯಾಯದಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ ಹಾಗೂ ‘ಕ್ರಿಮಿನಲ್ ನ್ಯಾಯಾಂಗ ನಿಂದನೆ’ಯ ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಸಮ್ಮತ ಟೀಕೆಗಳನ್ನು ಹತ್ತಿಕ್ಕಲು ತಾನು ಉದ್ದೇಶಿಸಿಲ್ಲ ಎಂದಿರುವ ನ್ಯಾಯಾಲಯ, ಕಠಿಣ ಚರ್ಚೆಗಳು ಸಂಸ್ಥೆಯ ಜೀವಂತಿಕೆಗೆ ಸಹಾಯ ಮಾಡುತ್ತವೆ, ಆದರೆ ಎಳೆಯ ಮನಸ್ಸುಗಳಿಗೆ ಈ ವಯಸ್ಸಿನಲ್ಲಿ ಇಂತಹ ಪಕ್ಷಪಾತದ ನಿರೂಪಣೆಯನ್ನು ಒಡ್ಡಿಕೊಳ್ಳುವುದು ಅನುಚಿತ ಎಂದಿದೆ.
ಪಠ್ಯದಲ್ಲಿರುವ ವಿಚಾರಗಳು ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗದೆ, ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ, ಅಲ್ಲಿಂದ ಪೋಷಕರಿಗೆ ಹಾಗೂ ಇಡೀ ಸಮಾಜಕ್ಕೆ ಹರಡುತ್ತವೆ ಎಂಬ ಆತಂಕವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಸದ್ಯ ನ್ಯಾಯಾಲಯದ ಸೂಚನೆ ಮೇರೆಗೆ ವಿವಾದಿತ ಪಠ್ಯದ ವಿತರಣೆಯನ್ನು ನಿರ್ಬಂಧಿಸಲಾಗಿದ್ದು, ಡಿಜಿಟಲ್ ಹಾಗೂ ಭೌತಿಕ ಪ್ರತಿಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಆದೇಶಿಸಲಾಗಿದೆ.
ಇದನ್ನು ಓದಿದ್ದೀರಾ? ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು
ನ್ಯಾಯಾಂಗದ ಮೇಲಿನ ದಾಳಿಯನ್ನು ಸುಪ್ರೀಂ ಕೋರ್ಟ್ ಅತ್ಯಂತ ಕಟುವಾಗಿ ಮತ್ತು ನಿಷ್ಠುರವಾಗಿ ಖಂಡಿಸಿರುವುದು ಸ್ವಾಗತಾರ್ಹವಾದರೂ, ಇದೇ ವೇಳೆ ಶಿಕ್ಷಣ ತಜ್ಞರು, ವಿರೋಧ ಪಕ್ಷಗಳು ಹಾಗೂ ಕೆಲವು ವಿಮರ್ಶಕರು ಸರ್ಕಾರ ಮತ್ತು ನ್ಯಾಯಾಲಯದ ಮುಂದೆ ಮತ್ತೊಂದು ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಎನ್‌ಸಿಇಆರ್‌ಟಿ ಪಠ್ಯಕ್ರಮಗಳಲ್ಲಿ ಪಠ್ಯಪುಸ್ತಕಗಳ ಕೇಸರೀಕರಣ ಮಾಡಲಾಗುತ್ತಿದೆ ಮತ್ತು ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚಲಾಗುತ್ತಿದೆ.
ಇತಿಹಾಸದ ಪ್ರಮುಖ ಘಟ್ಟಗಳ ಕಡಿತ, ನಿರ್ದಿಷ್ಟ ಸಿದ್ಧಾಂತಗಳ ಹೇರಿಕೆ ಸೇರಿದಂತೆ ಹಲವು ವಿಷಯಗಳು ವ್ಯಾಪಕ ಸಾರ್ವಜನಿಕ ಚರ್ಚೆಗೆ ಕಾರಣವಾಗಿವೆ. ಶಿಕ್ಷಣ ವ್ಯವಸ್ಥೆಯಲ್ಲಿನ ಇಂತಹ ಬದಲಾವಣೆಗಳು ಎಳೆಯ ಮನಸ್ಸುಗಳ ಮೇಲೆ ಬೀರುವ ಪ್ರಭಾವದ ಬಗ್ಗೆಯೂ ಸುಪ್ರೀಂ ಕೋರ್ಟ್ ಇಷ್ಟೇ ಕಟುವಾಗಿ, ಬಿಗಿಯಾಗಿ ಮತ್ತು ನಿಷ್ಠುರವಾಗಿ ಪ್ರತಿಕ್ರಿಯಿಸುವುದು ಯಾವಾಗ ಎಂದು ಹಲವು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಯಾಗಿ ತನ್ನ ಘನತೆಯನ್ನು ಕಾಪಾಡಿಕೊಳ್ಳುವಲ್ಲಿ ಸುಪ್ರೀಂ ಕೋರ್ಟ್ ತೋರಿದ ಬದ್ಧತೆಯು, ಶಿಕ್ಷಣ ವ್ಯವಸ್ಥೆಯ ಮೂಲ ಸ್ವರೂಪ ಹಾಗೂ ನೈಜ ಇತಿಹಾಸವನ್ನು ಕಾಪಾಡುವ ವಿಷಯದಲ್ಲೂ ಪ್ರತಿಫಲಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.





