ಭಾರತದ ಬಾಲ ನ್ಯಾಯ ವ್ಯವಸ್ಥೆಯು ದಶಕಗಳಿಂದ ಸುಧಾರಣೆಯತ್ತ ಸಾಗುತ್ತಿದೆ. ಆದರೂ, ನ್ಯಾಯ ಅಥವಾ ನ್ಯಾಯದಾನದ ನಿರೀಕ್ಷೆಯಲ್ಲಿರುವ ಬಾಲಾಪರಾಧಿಗಳ ಸಂಖ್ಯೆ ಬೃಹತ್ ಪ್ರಮಾಣದಲ್ಲಿದೆ. ಇತ್ತೀಚೆಗೆ ಬಿಡುಗಡೆಯಾದ ‘ಇಂಡಿಯಾ ಜಸ್ಟಿಸ್ ರಿಪೋರ್ಟ್’ (ಜುವೆನೈಲ್ ಜಸ್ಟಿಸ್ ಬೋರ್ಡ್ಸ್ – IJR) ಅಂಕಿಅಂಶಗಳು ಆಘಾತಕಾರಿ ಸತ್ಯವನ್ನೂ, ಬಾಲ ನ್ಯಾಯ ವ್ಯವಸ್ಥೆಯ ದಾರುಣ ಚಿತ್ರಣವನ್ನೂ ಬಹಿರಂಗಪಡಿಸಿದೆ.
ಟಾಟಾ ಟ್ರಸ್ಟ್ ನೇತೃತ್ವದಲ್ಲಿ ನಡೆದ ‘ಇಂಡಿಯಾ ಜಸ್ಟಿಸ್ ರಿಪೋರ್ಟ್’ ಅಧ್ಯಯನವು 2022-2023ರ ಅವಧಿಯಲ್ಲಿ ದೇಶದ ಎಲ್ಲ 362 ಬಾಲ ನ್ಯಾಯ ಮಂಡಳಿಗಳಿಂದ (JJB) ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿದೆ. ತನ್ನ ವರದಿಯನ್ನು ‘ಜುವೆನೈಲ್ ಜಸ್ಟಿಸ್ ಅಂಡ್ ಚಿಲ್ಡ್ರನ್ ಇನ್ ಕಾನ್ಫ್ಲಿಕ್ಟ್ ವಿಥ್ ಲಾ: ಅ ಸ್ಟಡಿ ಆಫ್ ಕ್ಯಾಪಾಸಿಟಿ ಅಟ್ ದಿ ಫ್ರಂಟ್‌ಲೈನ್ಸ್’ (ಬಾಲ ನ್ಯಾಯ ಮತ್ತು ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು: ಮುಂಚೂಣಿ ಸಾಮರ್ಥ್ಯದ ಅಧ್ಯಯನ) ಎಂಬ ಹೆಸರಿನಲ್ಲಿ 2025ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದೆ.
ಈ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 50,000ಕ್ಕೂ ಹೆಚ್ಚು ಬಾಲಾಪರಾಧಿಗಳು ಕಾನೂನಿನೊಂದಿಗೆ ಸಂರ್ಘ ನಡೆಸುತ್ತಿದ್ದಾರೆ. ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಬಾಲ ನ್ಯಾಯ ಮಂಡಳಿಗಳ ಎದುರು ಬರೋಬ್ಬರಿ 55% ಪ್ರಕರಣಗಳ ವಿಚಾರಣೆ ಬಾಕಿ ಉಳಿದಿವೆ. ಇದು ಅಕ್ಷಯಶಃ ಬಾಲಾಪರಾಧಿಗಳ ಬಾಲ್ಯ ಮತ್ತು ಭವಿಷ್ಯವನ್ನು ಕತ್ತಲೆಗೆ ದೂಡಿದೆ.
2023ರ ಅಕ್ಟೋಬರ್ ವೇಳೆಗೆ ಭಾರತದಲ್ಲಿ ಬಾಲ ನ್ಯಾಯ ಮಂಡಳಿಗಳ ಎದುರು ಒಟ್ಟು 1,00,904 ಕೇಸುಗಳಿವೆ. ಅವುಗಳಲ್ಲಿ 55% (ಸುಮಾರು 55,500) ಬಾಕಿ ಉಳಿದಿವೆ. ಇದರಲ್ಲಿ 50,000ಕ್ಕೂ ಹೆಚ್ಚು ಮಕ್ಕಳು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಪ್ರತಿ ನ್ಯಾಯ ಮಂಡಳಿಗಳಲ್ಲಿ ಸರಾಸರಿ 154 ಪ್ರಕರಣಗಳು ಬಾಕಿ ಉಳಿದಿವೆ. 2023ರ ಕ್ರೈಂ ಇನ್ ಇಂಡಿಯಾ ವರದಿಯ ಪ್ರಕಾರ, 40,036 ಬಾಲಾಪರಾಧಿಗಳು ಬಂಧನದಲ್ಲಿದ್ದಾರೆ ಎಂಬುದನ್ನೂ ಅಧ್ಯಯನ ಗಮನಿಸಿದೆ.
ಗಮನಾರ್ಹವಾಗಿ, ಒಡಿಶಾದಲ್ಲಿ ಅತೀ ಹೆಚ್ಚು 83% ಪ್ರಕರಣಗಳು ಬಾಕಿ ಉಳಿದಿದ್ದರೆ, ಕರ್ನಾಟಕದಲ್ಲಿ ಅತೀ ಕಡಿಮೆ, ಅಂದರೂ 35% ಪ್ರಕರಣಗಳು ಬಾಕಿಯಿವೆ ಎಂದು ‘ಐಜೆಆರ್’ ವರದಿ ವಿವರಿಸಿದೆ.
ದೇಶದಲ್ಲಿನ ಒಟ್ಟು 780 ಜಿಲ್ಲೆಗಳ ಪೈಕಿ 705 (92%) ಜಿಲ್ಲೆಗಳಲ್ಲಿ ‘ಜೆಜೆಬಿ’ಗಳಿವೆ. ಆದರೆ, ಅವುಗಳಲ್ಲಿ 24% ಮಂಡಳಿಗಳು ಪೂರ್ಣ ಪೀಠವನ್ನೇ (ಮ್ಯಾಜಿಸ್ಟ್ರೇಟ್ ಮತ್ತು ಇಬ್ಬರು ಸಾಮಾಜಿಕ ಕಾರ್ಯಕರ್ತರು) ಹೊಂದಿಲ್ಲ. 30% ಜೆಜೆಬಿಗಳಲ್ಲಿ ಕಾನೂನು ಸೇವಾ ಘಟಕವೇ ಇಲ್ಲ. ಇವು ನ್ಯಾಯದಾನದ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿ ಉಳಿದಿವೆ. ಇಂತಹ ಕೊರತೆಗಳಿಂದಾಗಿ, ಮಕ್ಕಳು ಮೇಲ್ವಿಚಾರಣಾ ಗೃಹ (ಅಬ್ಸರ್ವೇಷನ್ ಹೋಮ್)ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಶಿಕ್ಷೆಯಂತಹ ಬದುಕು ದೂಡುತ್ತಿದ್ದಾರೆ.
ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ-2015ರ ಅಡಿಯಲ್ಲಿ ಬಾಲಾಪರಾಧಿಗಳಿಗೆ ಸುಧಾರಣೆ ಮತ್ತು ಪುನರ್ವಸತಿಗೆ ಒತ್ತು ನೀಡಬೇಕೆಂದು ಹೇಳುತ್ತದೆ. ಈ ಕಾಯ್ದೆ ಜಾರಿಯಾಗಿ 10 ವರ್ಷಗಳು ಕಳೆದರೂ, ವ್ಯವಸ್ಥೆಯು ಆಮೆಗತಿಯಲ್ಲಿ ಸಾಗುತ್ತಿದೆ. ದೇಶದಲ್ಲಿರುವ 128 ಬಾಲಾಪರಾಧಿ ಗೃಹಗಳಲ್ಲಿ ಕೇವಲ 28 ಸಂಸ್ಥೆಗಳು ಮಾತ್ರವೇ ವೈದ್ಯಕೀಯ ಅಧಿಕಾರಿಗಳನ್ನು ಒಳಗೊಂಡಿವೆ. ಹೆಚ್ಚಿನವು ವೈದ್ಯಕೀಯ ಸಿಬ್ಬಂದಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ, ಇತರ ಅಗತ್ಯ ಸೌಲಭ್ಯ ಒದಗಿಸಲು ಹಣಕಾಸಿನ ಕೊರತೆ, ಬಾಲ ಗೃಹಗಳಲ್ಲಿ ಸಿಬ್ಬಂದಿಗಳ ಕೊರತೆ, ಬಾಲ ಗೃಹಗಳ ನಿಯಮಿತ ಮೇಲ್ವಿಚಾರಣೆ ಕೊರತೆಯು ಬಾಲಾಪರಾಧಿಗಳ ಸುಧಾರಣೆ ಮತ್ತು ಪುನರ್ವಸತಿಗೆ ತೊಡಕಾಗಿವೆ ಎಂಬುದನ್ನು ಅಧ್ಯಯನ ಗಮನಿಸಿದೆ.
ಈ ಲೇಖನ ಓದಿದ್ದೀರಾ?: ಮನರೇಗಾ ಬದಲಿಗೆ ವಿಬಿ-ಜಿ ರಾಮ್ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?
“ವ್ಯವಸ್ಥೆಯ ದೌರ್ಬಲ್ಯಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ” ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಎಚ್ಚರಿದ್ದರೂ, ವ್ಯವಸ್ಥೆಯು ಎಚ್ಚೆತ್ತುಕೊಂಡಿಲ್ಲ. ಕಾನೂನಿನ ಪ್ರಕಾರ, ಬಾಲಾಪರಾಧಿಗಳ ವಿರುದ್ಧದ ಪ್ರಕರಣಗಳು 4ರಿಂದ 6 ತಿಂಗಳುಗಳ ಒಳಗೆ ಇತ್ಯಾರ್ಥವಾಗಬೇಕು. ಆದರೆ, ವಿಚಾರಣೆಗಳು ವರ್ಷಾನುಗಟ್ಟಲೆ ಎಳೆಯುತ್ತಿವೆ.
ಪರಿಣಾಮ, ಕುಟುಂಬಗಳಿಂದ ದೂರವಿದ್ದು, ದೀರ್ಘಕಾಲದಿಂದ ಬಾಲಾಪರಾಧಿ ಗೃಹಗಳಲ್ಲಿ ಉಳಿದಿರುವುದು, ನ್ಯಾಯದಾನಕ್ಕಾಗಿ ಕಾಯುವುದು ಬಾಲಾಪರಾಧಿಗಳನ್ನು ಮಾನಸಿಕ ಆಘಾತಕ್ಕೆ ಒಡ್ಡುತ್ತಿದೆ. ದೀರ್ಘಕಾಲೀನ ವಿಚಾರಣೆಯು ಆಪಾದಿತ ಮಕ್ಕಳಲ್ಲಿ ಭಯ, ಆತಂಕ ಹೆಚ್ಚಿಸುತ್ತಿದ್ದು, ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಚಾರಣೆ ಮತ್ತು ನ್ಯಾಯದಾನದ ವಿಳಂಬದಿಂದಾಗಿ ಮಕ್ಕಳು ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ. ಇದೆಲ್ಲವೂ, ಮಕ್ಕಳು ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಪುನರ್ವಸತಿಯೂ ಸಕಾಲಕ್ಕೆ ದೊರೆಯದ ಕಾರಣ, ಮಕ್ಕಳು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗುವಂತೆ ಮಾಡುತ್ತಿದೆ. ಸರಿಯಾದ ನೆರವು ದೊರೆಯದ ಕಾರಣ, ಅಪರಾಧ/ಆರೋಪಿ ಎಂಬ ಹಣೆಪಟ್ಟಿಯಿಂದ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವ ಮಕ್ಕಳು ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗುವಂತಹ ಅಪಾಯವೂ ಇದೆ.
ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ಮತ್ತು ನ್ಯಾಯದಾನದ ವಿಳಂಬದ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ವಕೀಲೆ ರಾಜಲಕ್ಷ್ಮಿ ಅಂಕಲಗಿ, “ನ್ಯಾಯದಾನದ ವಿಳಂಬಕ್ಕೆ ಮೂಲ ಕಾರಣ ಬಾಲಾಪರಾಧಗಳ ವಿಚಾರಣೆಗೆ ಪೂರ್ಣಪ್ರಮಾಣದ ನ್ಯಾಯಪೀಠವೇ ಇಲ್ಲ. ಜಿಲ್ಲೆಗಳ ಮೆಟ್ರೋಪಾಲಿಟನ್ ನ್ಯಾಯಾಧೀಶರು ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆ ಜೆಜೆಬಿಗೆ ತೆರಳಿ ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದಾಗಿ ವಿಚಾರಣೆಗಳು ತ್ವರಿತವಾಗಿ ಮುಗಿಯುವುದಿಲ್ಲ. ಜೆಜೆಬಿಗೆ ಪ್ರತ್ಯೇಕ ಪೂರ್ಣಪ್ರಮಾಣದ ನ್ಯಾಯಾಧೀಶರನ್ನು ನೇಮಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಅಪರಾಧವನ್ನು ಒಪ್ಪಿಕೊಂಡವರಿಗೆ ದಂಡ ವಿಧಿಸಿ, ಪ್ರಕರಣವನ್ನು ಮುಗಿಸುವ ಅವಕಾಶವೂ ಇದೆ. ಆದರೆ, ಇದು ದುರ್ಬಳಕೆಯಾಗುತ್ತಿದೆ. ಪ್ರಕರಣ ಮುಗಿಸಲೆಂದು ಅಪರಾಧವನ್ನು ಬಡ ಮಕ್ಕಳು ಒಪ್ಪಿಕೊಂಡುಬಿಡುತ್ತಾರೆ. ನಂತರದಲ್ಲಿ, ಅಂತಹ ಮಕ್ಕಳನ್ನೇ ಪೊಲೀಸರು ಇತರ ಪ್ರಕರಣಗಳಲ್ಲಿಯೂ ಅವರು ಭಾಗಿಯಾಗಿಲ್ಲದಿದ್ದರೂ ಆರೋಪಿಗಳಾಗಿ ಸೇರಿಸಿಬಿಡುವ ಖಯಾಲಿಯೂ ಇದೆ. ಇದು, ಮಕ್ಕಳ ಭವಿಷ್ಯವನ್ನು ನಾಶ ಮಾಡುತ್ತಿದೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಸುಧಾರಣಾ ಗೃಹಗಳೇ ಮಕ್ಕಳನ್ನು ಹಾಳುಮಾಡುತ್ತಿರುವ ನಿದರ್ಶನಗಳೂ ಇವೆ. ಇದೆಲ್ಲವೂ ಬದಲಾಗಬೇಕು. ಉತ್ತಮ ವ್ಯವಸ್ಥೆಯನ್ನು ರೂಪಿಸಬೇಕು” ಎಂದು ಹೇಳಿದ್ದಾರೆ.
ಯಾವುದೇ ದೇಶವು ತನ್ನ ಮಕ್ಕಳನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ಆ ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ವ್ಯವಸ್ಥೆಯು ಬಾಲಾಪರಾಧಿಗಳನ್ನು ಶಿಕ್ಷಿಸುವುದಲ್ಲ, ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಅದರಂತೆಯೇ, ನಡೆದುಕೊಳ್ಳುವ ಅಗತ್ಯವಿದೆ. ನ್ಯಾಯದಾನಕ್ಕಾಗಿ ಕಾಯುತ್ತಿರುವ ಮಕ್ಕಳ ಬಗ್ಗೆ ಸರ್ಕಾರಗಳು ಮತ್ತು ಸಮಾಜವು ಕಣ್ಣುತೆರೆಯಬೇಕಿದೆ. ಮಕ್ಕಳ ಬಾಲ್ಯವನ್ನು ರಕ್ಷಿಸದಿದ್ದರೆ ದೇಶದ ಭವಿಷ್ಯವೂ ಕತ್ತಲೆಗೆ ಜಾರುತ್ತದೆ. ಇದರ ಎಚ್ಚರ ಸಮಾಜಕ್ಕೂ, ಸರ್ಕಾರಕ್ಕೂ ಇರಬೇಕಿದೆ.




