ಜ್ಯೋತಿ ಜಗತಾಪ್ ಮಾತ್ರವಲ್ಲ ದೇಶದಲ್ಲಿ ಹಲವು ಹೋರಾಟಗಾರರು ಯುಎಪಿಎ ಕಾಯ್ದೆಯಡಿಯಲ್ಲಿ ಸಿಲುಕಿ ಜೈಲಿನಲ್ಲಿದ್ದಾರೆ. ಇನ್ನೆಷ್ಟೋ ಮಂದಿ ವಿಚಾರಣೆಯೂ ಇಲ್ಲದೆ, ಅತ್ತ ಜಾಮೀನೂ ಇಲ್ಲದೆ ಜೀವನದ ಬಹುಪಾಲು ಜೈಲಿಗೆ ಮುಡಿಪಿಡುವಂತಾಗಿದೆ. ಇನ್ನೂ ಕೆಲವರು ಹಲವು ವರ್ಷಗಳ ಜೈಲಲ್ಲಿ ಕಳೆದು ಬಳಿಕ ನಿರಪರಾಧಿಗಳಾಗಿ ಹೊರಬಂದಿದ್ದಾರೆ.
ಎಲ್ಗಾರ್ ಪರಿಷದ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಸುಮಾರು ಐದು ವರ್ಷಗಳಿಂದ ಜೈಲಿನಲ್ಲಿದ್ದ ಸಾಮಾಜಿಕ ಹೋರಾಟಗಾರ್ತಿ, ಗಾಯಕಿ ಜ್ಯೋತಿ ಜಗತಾಪ್ ಅವರಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ರಾಜಕೀಯ ಲಾಭಕ್ಕಾಗಿ ಕೋಮು ದ್ವೇಷ ಭಾಷಣ, ಪ್ರಚೋದನಕಾರಿ ಭಾಷಣ ಮಾಡಿದ ಅದೆಷ್ಟೋ ಮಂದಿ ಕನಿಷ್ಠ ವಿಚಾರಣೆಗೂ ಒಳಗಾಗದೆ ಇರುವಾಗ, ಪ್ರಚೋದನಕಾರಿ ಭಾಷಣದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) (UAPA) ಕಾಯ್ದೆಯಡಿ ಬಂಧನಕ್ಕೊಳಗಾಗಿ ಹಲವು ವರ್ಷಗಳ ಕಾಲ ಸೆರೆವಾಸ ಕಂಡವರಲ್ಲಿ ಜ್ಯೋತಿ ಜಗತಾಪ್ ಕೂಡಾ ಒಬ್ಬರು.
“ತನ್ನ ಕಕ್ಷಿದಾರರು ಐದು ವರ್ಷಗಳಿಂದಲೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ” ಎಂದು ಹಿರಿಯ ನ್ಯಾಯವಾದಿ ಅಪರ್ಣಾ ಭಟ್ ಅವರು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದ ಬಳಿಕ ಜಗತಾಪ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಜಗತಾಪ್ ಮಾತ್ರವಲ್ಲ ಇನ್ನು ಅದೆಷ್ಟೋ ಮಂದಿ ಹೋರಾಟಗಾರರು ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಜೈಲುಪಾಲಾಗಿದ್ದಾರೆ. ಯುಎಪಿಎ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ದಲಿತ ಅಸ್ಮಿತೆಯ ಕತೆಯನ್ನು ಬಲ್ಲಿರಾ?
ಹೋರಾಟಗಾರ್ತಿ ಜ್ಯೋತಿ ಜಗತಾಪ್ ಯಾರು?
ಗಾಯಕಿ, ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಜಗತಾಪ್ ಅವರು 2007ರಿಂದ ಕಬೀರ್ ಕಲಾ ಮಂಚ್ (KKM) ನ ಎಂಬ ಸಾಂಸ್ಕೃತಿಕ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ಮಹಾರಾಷ್ಟ್ರದ ಸಾಸ್ವಾದ್ ವಾಘೈರ್ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜಗತಾಪ್ ಅವರು ಕಾಲೇಜು ದಿನಗಳಿಂದಲೇ ಮಹಿಳಾ ಸಮಸ್ಯೆಗಳ ವಿರುದ್ಧ ಮತ್ತು ದಲಿತರ ಮೇಲೆ ನಡೆಯುವ ಜಾತಿ ದೌರ್ಜನ್ಯದ ವಿರುದ್ಧವಾಗಿ ನಡೆದ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ ಶಿಕ್ಷಣ ಪೂರ್ಣವಾದ ಬಳಿಕ ಹಲವು ಎನ್‌ಜಿಒಗಳಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಹಾಗೆಯೇ ಹಾಡು ಹಾಗೂ ರಂಗ ಪ್ರದರ್ಶನಗಳ ಮೂಲಕವೇ ಸಾಮಾಜಿಕ ಮತ್ತು ಮಾನವ ಹಕ್ಕುಗಳ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಎಲ್ಗಾರ್ ಪರಿಷತ್ ಕಾರ್ಯಕ್ರಮದಲ್ಲೂ ಜನಜಾಗೃತಿ ಹಾಡುಗಳನ್ನು ಹಾಡಿದ್ದರು, ಘೋಷಣೆಗಳನ್ನು ಕೂಗಿದ್ದರು. ಇದನ್ನೇ ಪ್ರಚೋದನಕಾರಿ ಎಂದು ಹೇಳಿಕೊಂಡು ಬರೋಬ್ಬರಿ ಐದು ವರ್ಷಗಳ ಕಾಲ ಹೋರಾಟಗಾರ್ತಿಯನ್ನು ಜೈಲಿಗೆ ತಳ್ಳಲಾಗಿದೆ.
ಏನಿದು ಎಲ್ಗಾರ್ ಪರಿಷತ್ ಪ್ರಕರಣ?
2017ರ ಡಿಸೆಂಬರ್ 31ರಂದು ಪುಣೆಯ ಶಿನಿವಾರವಾಡದಲ್ಲಿ ದಲಿತ ಸಂಘಟನೆಗಳು ‘ಎಲ್ಗಾರ್ ಪರಿಷತ್’ ಎಂಬ ಸಮಾವೇಶವನ್ನು ಆಯೋಜಿಸಿದ್ದವು. ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಜಿ. ಕೋಲ್ಸೆ-ಪಾಟೀಲ್ ಮತ್ತು ಪಿ.ಬಿ. ಸಾವಂತ್ ಇದರ ಮುಖ್ಯ ಆಯೋಜಕರಾಗಿದ್ದಾರೆ. ಈ ಸಮಾವೇಶದ ಮರುದಿನ 2018ರ ಜನವರಿ 1ರಂದು ಪುಣೆ ಬಳಿಯ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ನಡೆದಿದ್ದು ಓರ್ವ ಸಾವನ್ನಪ್ಪಿದ್ದ, ಹಲವರು ಗಾಯಗೊಂಡಿದ್ದರು.
ಈ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಮತ್ತು ಘೋಷಣೆಗಳೇ ಈ ಹಿಂಸಾಚಾರಕ್ಕೆ ಕಾರಣ ಎಂದು ಪುಣೆ ಪೊಲೀಸರು ಆರೋಪಿಸಿದ್ದರು. ಹಾಗೆಯೇ ಈ ಸಮಾವೇಶಕ್ಕೆ ನಿಷೇಧಿತ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಹಣಕಾಸು ನೆರವು ನೀಡಿದೆ ಮತ್ತು ಆಯೋಜಿಸಿದೆ ಎಂದು ಪ್ರತಿಪಾದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ ಧಾವಳೆ, ಶೋಮಾ ಸೇನ್, ರೋನಾ ವಿಲ್ಸನ್, ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೀರಾ, ಗೌತಮ್ ನವಲಖಾ, ಆನಂದ್ ತೇಲ್ತುಂಬ್ಡೆ, ಪಿ. ವರವರ ರಾವ್, ಜ್ಯೋತಿ ಜಗತಾಪ್, ಮಹೇಶ್ ರಾವುತ್, ಫಾದರ್ ಸ್ಟಾನ್ ಸ್ವಾಮಿ ಸೇರಿದಂತೆ ಹಲವು ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರರು, ವಕೀಲರು, ಲೇಖಕರು ಮತ್ತು ಶಿಕ್ಷಣ ತಜ್ಞರನ್ನು ಬಂಧಿಸಲಾಗಿತ್ತು.
ಇದನ್ನು ಓದಿದ್ದೀರಾ? ಬೀದರ್ | ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ್ ಯುದ್ದ ವಿಶ್ವಕ್ಕೆ ಮಾದರಿ: ಶಿವರಾಜ ಕುದುರೆ
ಈ ಪೈಕಿ ಜ್ಯೋತಿ ಜಗತಾಪ್, ರೋನಾ ವಿಲ್ಸನ್, ಸುಧೀರ್ ಧಾವಳೆ, ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೀರಾ, ಗೌತಮ್ ನವಲಖಾ ಮತ್ತು ಆನಂದ್ ತೇಲ್ತುಂಬ್ಡೆ ಅವರಿಗೆ ಜಾಮೀನು ಲಭಿಸಿದೆ. 84 ವರ್ಷದ ಬುಡಕಟ್ಟು ಹಕ್ಕುಗಳ ಕಾರ್ಯಕರ್ತರಾದ ಫಾದರ್ ಸ್ಟಾನ್ ಸ್ವಾಮಿ ಅವರು 2021ರಲ್ಲಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ನಿಧನರಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಹಲವು ಆರೋಪಿಗಳು ಇನ್ನೂ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿಯೇ ಇದ್ದಾರೆ.
ಜ್ಯೋತಿ ಮಾತ್ರವಲ್ಲ ಹಲವು ಹೋರಾಟಗಾರರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಇದೇ ರೀತಿ ಅತ್ತ ವಿಚಾರಣೆಯೂ ಇಲ್ಲದೆ ಇತ್ತ ಬಿಡುಗಡೆಯೂ ಇಲ್ಲದೆ ಜೈಲಿನಲ್ಲೇ ಹಲವು ವರ್ಷಗಳಿಂದ ಕಳೆಯುತ್ತಿದ್ದಾರೆ. ಹೋರಾಟಗಾರರಾದ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಫಾ-ಉರ್-ರೆಹಮಾನ್, ಆಥರ್ ಖಾನ್, ಮೊಹಮ್ಮದ್ ಸಲೀಮ್ ಖಾನ್, ಶಾದಾಬ್ ಅಹ್ಮದ್ ಇನ್ನೂ ಜೈಲಿನಲ್ಲಿದ್ದಾರೆ. ಅದರಲ್ಲೂ ಬಹುತೇಕ ಮುಸ್ಲಿಮರನ್ನೇ ಸರ್ಕಾರ ಗುರಿಯಾಗಿಸಿಕೊಂಡಿರುವುದು ಕಂಡುಬರುತ್ತದೆ.
ಈ ಎಲ್ಲ ಪ್ರಕರಣಗಳು ಸದ್ಯ ಯುಎಪಿಎ ಕಾಯ್ದೆಯ ಸವಾಲಿನ ಬಗ್ಗೆ ಪ್ರಶ್ನೆ ಸೃಷ್ಟಿಸಿದೆ. ಈ ಹಿಂದೆಯೇ ಯುಎಪಿಎ ಬಗ್ಗೆ ಹಲವು ತಜ್ಞರುಗಳು ಎಚ್ಚರಿಕೆ ನೀಡಿದ್ದರು. “ಈ ಕಾಯ್ದೆಯು ಸಹಜ ನ್ಯಾಯದ ಪರಿಕಲ್ಪನೆಗಳನ್ನು ತಲೆಕೆಳಗು ಮಾಡುತ್ತದೆ” ಎಂದು ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಖಾ ಹೇಳಿದ್ದರು. ಈ ಹೇಳಿಕೆ ನೀಡಿದ ಬಳಿಕ ಸ್ವತಃ ಅವರನ್ನೇ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ.
ಆಕ್ಸ್‌ಫರ್ಡ್ ಹ್ಯೂಮನ್ ರೈಟ್ಸ್ ಹಬ್‌ನಲ್ಲಿ ಹೋರಾಟಗಾರ ರೊಂಗೀತ್ ಪೊದ್ದಾರ್ “2019ರ ಯುಎಪಿಎ ತಿದ್ದುಪಡಿಯು ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೆ ಜನರನ್ನು ಭಯೋತ್ಪಾದಕರು ಎಂದು ಗುರುತಿಸಲು ಅವಕಾಶ ನೀಡಿದೆ ಎಂದು ಟೀಕಿಸಿದ್ದಾರೆ. ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ್ ಸೇರಿದಂತೆ ಹಲವರು, “ಪೋಟಾ ಕಾನೂನುಗಳ ದುರ್ಬಳಕೆಯನ್ನು ನಿಲ್ಲಿಸಲು ಯುಎಪಿಎ ತರಲಾಯಿತು. ಆದರೆ ಆ ಕಾನೂನೇ ದುರ್ಬಳಕೆಯಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರುಗಳೂ ಯುಎಪಿಎ ಕಾನೂನನ್ನು ಟೀಕಿಸಿದ್ದಾರೆ. ಈ ಕಾನೂನು ಸ್ಪಷ್ಟವಾದ ಭಯೋತ್ಪಾದನೆಯ ವ್ಯಾಖ್ಯಾನವಿಲ್ಲದೆ, ದೀರ್ಘಕಾಲದವರೆಗೆ ವಿಚಾರಣೆಯಿಲ್ಲದೆ ಬಂಧನಕ್ಕೆ ಅವಕಾಶ ನೀಡುತ್ತವೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ ಎಂದು ಎಚ್ಚರಿಸಿದ್ದರು. ಇನ್ನು ಈ ಕಾಯ್ದೆಯ ದುರುಪಯೋಗ ಹೇಗೆ ಸುಗಮವಾಗಿ ನಡೆಯತ್ತಿದೆ ಎಂಬುದಕ್ಕೆ “ಸ್ಟಾನ್ ಸ್ವಾಮಿ ಕಸ್ಟಡಿ ಸಾವೇ ದುರಂತ ಮತ್ತು ಭಯಾನಕ ಉದಾಹರಣೆ” ಎಂದು ಮಾನವ ಹಕ್ಕುಗಳ ರಕ್ಷಣೆಗಾಗಿ ಜಾಗತಿಕವಾಗಿ ಕಾರ್ಯನಿರ್ವಹಿಸುವ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ.
ಇದನ್ನೂ ಓದಿ ಯುಗಧರ್ಮ | ಅಸ್ಸಾಂ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಚುನಾವಣಾ ಆಯೋಗ ಹಿಂದೆ ಸರಿದಿದ್ದು ಏಕೆ?
ಹೀಗೆ ರಾಜಕೀಯಕ್ಕೆ ಈ ಕಾಯ್ದೆಯನ್ನು ಬಳಸುವ ಸಾಧ್ಯತೆಗಳಿವೆ ಎಂದು ಹಲವು ತಜ್ಞರುಗಳು ಹೇಳಿದ್ದರು. ಆದರೆ ಇಂದದು ಸಾಧ್ಯತೆಯಾಗಿ ಉಳಿಯದೆ ವಾಸ್ತವವಾಗಿದೆ. ಯುಎಪಿಎ ಅನ್ನು ದೇಶದಲ್ಲಿ ಭಯೋತ್ಪಾದನೆ ವಿರುದ್ಧ ಪ್ರಬಲ ಕಾನೂನು ಎಂದು ಪರಿಗಣಿಸಲಾಗಿದ್ದರೂ ನಿರಂತರವಾಗಿ ಈ ಕಾಯ್ದೆ ರಾಜಕೀಯ ದುರ್ಬಳಕೆಗೆ ಒಳಗಾಗುತ್ತಿದೆ. ಪ್ರಚೋದನಕಾರಿ ಭಾಷಣ ಮಾಡಿ ಗಲಭೆಗೆ ಕಾರಣವಾದ ನಿತೇಶ್ ರಾಣೆ, ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ, ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರುಗಳು ರಾಜರೋಷವಾಗಿ ಓಡಾಡುತ್ತಿದ್ದಾರೆ. ಆದರೆ ಜನ ಪರವಾಗಿ, ಸರ್ಕಾರದ ಕ್ರಮಗಳ ವಿರುದ್ಧವಾಗಿ ಧ್ವನಿ ಎತ್ತಿದವರು ಹಲವು ವರ್ಷಗಳಿಂದ ಜೈಲಿನಲ್ಲಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




