ಒಂದೇ ತಪ್ಪನ್ನು ಪದೇಪದೇ ಮಾಡುವವರನ್ನು ಕಾನೂನಿನ ಪರಿಭಾಷೆಯಲ್ಲಿ ‘ಹಬ್ಯುಚುವಲ್ ಅಫೆಂಡರ್’ (habitual offender) ಎನ್ನುತ್ತಾರೆ. ಕಲ್ಲಡ್ಕ ಭಟ್ ಅಂತಹ ‘ಅಪರಾಧ ಗೀಳು’ ಹೊಂದಿರುವ ವ್ಯಕ್ತಿ ಎಂಬುದು ಕಾನೂನು ಮತ್ತು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
“ಕರ್ನಾಟಕದ ಪ್ರಮುಖ ಅಥವಾ ಮಹಾನ್ ದ್ವೇಷಭಾಷಣಕಾರರು ಯಾರು?”- ಹೀಗೊಂದು ಪ್ರಶ್ನೆಯನ್ನು ನೀವು ಗ್ರೋಕ್, ಜೆಮಿನಿ, ಚಾಟ್‌ಜಿಪಿಟಿಯಂತಹ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ವೇದಿಕೆಗಳಲ್ಲಿ ಕೇಳಿದರೆ, ಥಟ್ಟನೆ ಸಂಘಪರಿವಾರದ ನಾಯಕರ ಒಂದು ಪಟ್ಟಿ ನಿಮ್ಮ ಕೈಗೆ ಸಿಗುತ್ತದೆ. ಎಐ ಹೆಕ್ಕಿ ಕೊಟ್ಟ ಹೆಸರುಗಳಲ್ಲಿ ‘ಕಲ್ಲಡ್ಕ ಪ್ರಭಾಕರ ಭಟ್’ ಮುಂಚೂಣಿಯಲ್ಲಿರುತ್ತಾರೆ!
ಕರ್ನಾಟಕದ ಮಹಾನ್ ದ್ವೇಷ ಭಾಷಣಕಾರ ಯಾರೆಂದು ಕೃತಕ ಬುದ್ಧಿಮತ್ತೆ (ಎಐ) ಹೇಳಬೇಕಿಲ್ಲ. ಸ್ವಂತ ಬುದ್ಧಿ ಇರುವ ಮತ್ತು ಕರ್ನಾಟಕದ ರಾಜಕಾರಣವನ್ನು ಸೂಕ್ಷ್ಮವಾಗಿ ನೋಡುವ ಯಾರಿಗಾದರೂ ಕಲ್ಲಡ್ಕ ಭಟ್ಟರ ವೃತ್ತಾಂತ ತಿಳಿಯದೆ ಇರುವುದಿಲ್ಲ. ಅಷ್ಟರ ಮಟ್ಟಿಗಿನ ದ್ವೇಷದ ಮಾತುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಅವರು ಆಡಿದ್ದಾರೆ.
ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಪದೇಪದೇ ಹೇಳಿಕೆ ನೀಡುತ್ತಿರುವ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಉದ್ದೀಪಿಸಲು ಸದಾ ಪ್ರಯತ್ನಿಸುವ ಕಲ್ಲಡ್ಕ ಭಟ್ ವಿರುದ್ಧ ಪ್ರಕರಣಗಳ ಮೇಲೆ ಪ್ರಕರಣಗಳಿವೆ. ಆದರೆ ತನ್ನ ಹಳೆಯ ಚಾಳಿಯನ್ನಂತೂ ಬಿಟ್ಟಿಲ್ಲ. ಒಂದೇ ತಪ್ಪನ್ನು ಪದೇಪದೇ ಮಾಡುವವರನ್ನು ಕಾನೂನಿನ ಪರಿಭಾಷೆಯಲ್ಲಿ ‘ಹಬ್ಯುಚುವಲ್ ಅಫೆಂಡರ್’ (habitual offender) ಎನ್ನುತ್ತಾರೆ. ಕಲ್ಲಡ್ಕ ಭಟ್ ಅಂತಹ ‘ಅಪರಾಧ ಗೀಳು’ ಹೊಂದಿರುವ ವ್ಯಕ್ತಿ ಎಂಬುದು ಕಾನೂನು ಮತ್ತು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಆದರೆ ಈ ವ್ಯಕ್ತಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಹೇಗೆ? ಎಂದು ಚಿಂತಿಸಬೇಕಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಉಪ್ಪಳಿಗೆಯಲ್ಲಿ ಇತ್ತೀಚೆಗೆ, ಅಂದರೆ ಅ.20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್ ದ್ವೇಷ ಭಾಷಣ ಮಾಡಿ, ಮತ್ತೆ ಚರ್ಚೆಗೆ ಬಂದರು. ಮುಸ್ಲಿಂ ಮಹಿಳೆಯರ ಕುರಿತು ತುಚ್ಛವಾಗಿ ಮಾತನಾಡಿರುವುದು ಬಲಪಂಥೀಯ ಯೂಟ್ಯೂಬ್ ಚಾನೆಲ್ ‘ಕಹಳೆ’ಯಲ್ಲಿ ಯಥಾವತ್ತು ಪ್ರಸಾರವಾಗಿತ್ತು.
ಇದನ್ನೂ ಓದಿರಿ: ಸಂಘಿಗಳು ತುಂಬಿರುವ ಕಾಂಗ್ರೆಸ್ಸಿನಲ್ಲಿ ಸಿದ್ದು- ಖರ್ಗೆ-ಹರಿಪ್ರಸಾದ್-ಜಾರಕಿಹೊಳಿ ಸೈದ್ಧಾಂತಿಕ ಬದ್ಧತೆ
“ಆಚೆ ಮನೆಯಲ್ಲಿ ಒಬ್ಬಳು ಬ್ಯಾರ್ದಿ ಇದ್ದಳು. ಅವಳು 6ನೇಯದ್ದು ಆಗಿ 7ನೇ ಮಗುವಿನ ಗರ್ಭಿಣಿಯಾಗಿದ್ದಳು. ಅವಳಿಗೆ ಯಾರಾದ್ರು ಕೇಳಿದ್ರಾ? ನೀನು ನಾಯಿ ಮರಿ ಹಾಕಿದ ಹಾಗೆ ಹಾಕ್ತಾ ಇದ್ದೀಯಾ ಎಂದು? ಅವರು ನಮ್ಮ ಮಕ್ಕಳು ಅಲ್ಲಾಹುವಿಗೋಸ್ಕರ ಎಂದು ಹೇಳ್ತಾರೆ. ನೀವೇನಾದರೂ ಮಹಾಲಿಂಗೇಶ್ವರನಿಗಾಗಿ ಮಕ್ಕಳನ್ನು ಮಾಡಿಕೊಳ್ತೀರಾ?” ಎಂದು ಕಲ್ಲಡ್ಕ ಭಟ್ ಪ್ರಚೋದಿಸಿದ್ದರು.
ಮುಂದುವರಿದು, “ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲದಲ್ಲಿ ಹಿಂದೂಗಳು ಗೆಲ್ಲಲು ಸಾಧ್ಯವೇ ಇಲ್ಲ. ಅಲ್ಲಿ ಖಾದರೇ ಗೆಲ್ಲೋದು. ಯಾಕೆಂದರೆ ಒಂದು ಲಕ್ಷದ ಹತ್ತು ಸಾವಿರ ವೋಟ್ ಬ್ಯಾರಿಗಳದ್ದೇ ಇದೆ. ಹಿಂದೂಗಳು 90 ಸಾವಿರ ಮಾತ್ರ ಇರೋದು. ನಮ್ಮನ್ನು ಸರ್ವನಾಶ ಮಾಡ್ತಾರೆ. ಹಾಗಾಗಿ ನಮ್ಮ ಮನೆಯಲ್ಲಿ 3ಕ್ಕಿಂತ ಕಡಿಮೆ ಮಕ್ಕಳು ಇರಬಾರದು” ಎಂದು ಮುಸ್ಲಿಂ ವಿರೋಧಿ ದ್ವೇಷ ಭಾಷಣ ಮಾಡಿದ್ದರು.
ಭಟ್ ವಿರುದ್ಧ ದಲಿತ ಮಹಿಳೆ, ಸಿಪಿಎಂ ಸಂಘಟಕಿ ಈಶ್ವರಿ ಪದ್ಮುಂಜ ಅವರು ನೀಡಿದ ದೂರಿನ ಅನ್ವಯ ಬಿಎನ್ಎಸ್ 79, 196, 299, 302, 3(5) ಅಡಿ ಪ್ರಕರಣ ದಾಖಲಾಗಿತ್ತು. ಅ.30ರಂದು ವಿಚಾರಣೆಗೆ ಹಾಜರಾಗುವಂತೆ ಭಟ್‌ಗೆ ಪೊಲೀಸರು ನೋಟಿಸ್ ನೀಡಿದ್ದರು. ಇದನ್ನ ಪ್ರಶ್ನಿಸಿ ಭಟ್, ಕೋರ್ಟ್ ಮೊರೆ ಹೋಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ 6ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಅರ್ಜಿ ಕೈಗೆತ್ತಿಕೊಂಡು, “ಮುಂದಿನ ವಿಚಾರಣೆವರೆಗೆ ಬಂಧನ ಸೇರಿದಂತೆ ಬಲವಂತದ ಕ್ರಮ ಬೇಡ” ಎಂದು ತಿಳಿಸಿ ವಿಚಾರಣೆಯನ್ನು ಅ.29ಕ್ಕೆ ಕೋರ್ಟ್ ಮುಂದೂಡಿತು. ಪದೇಪದೇ ದ್ವೇಷ ಭಾಷಣ ಮಾಡುವ ವ್ಯಕ್ತಿಗೆ ಈ ರೀತಿಯ ವಿನಾಯಿತಿ ಕೊಡುತ್ತಿರುವುದು ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಆತನ ದ್ವೇಷ ಭಾಷಣಗಳ ಪ್ರವೃತ್ತಿಯ ಕಡೆ, ಒಮ್ಮೆ ಕಣ್ಣುಹಾಯಿಸಿದರೆ, ಕಾನೂನಿನ ವಿನಾಯಿತಿಗಳು ಪ್ರಶ್ನಾರ್ಥವಾಗಿ ಉಳಿಯುತ್ತವೆ ಮತ್ತು ಸರ್ಕಾರ ಮಾಡುತ್ತಿರುವ ಸಡಿಲಿಕೆಗಳೂ ಕಾಣಿಲಾರಂಭಿಸುತ್ತವೆ.
ಮಕ್ಕಳಲ್ಲಿ ಕೋಮು ಭಾವನೆ ಪ್ರಚೋದನೆ
2019ರ ಡಿಸೆಂಬರ್ 16ರಂದು ವೈರಲ್ ಆದ ವಿಡಿಯೊ, ಕಲ್ಲಡ್ಕ ಭಟ್ ಬೆಳೆಸುತ್ತಿರುವ ವಿಷಮಯ ಪರಿಸರವನ್ನು ಅನಾವರಣ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿರುವ ಶ್ರೀ ರಾಮ ವಿದ್ಯಾಕೇಂದ್ರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ‘ಬಾಬ್ರಿ ಮಸೀದಿ ಧ್ವಂಸ’ ಪ್ರಹಸನವನ್ನು ಪ್ರದರ್ಶಿಸಲಾಗಿತ್ತು.
11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಗುಂಪು, ಬಾಬ್ರಿ ಮಸೀದಿ ದ್ವಂಸವನ್ನು ಮರುಸೃಷ್ಟಿಸುವ ‘ಪ್ರಹಸನ’ ಮಾಡಿತ್ತು. ನೂರಾರು ಮಕ್ಕಳು ಒಮ್ಮೆಲೆ ನುಗ್ಗಿ, ಮಸೀದಿಯ ಪ್ರತಿಕೃತಿಯನ್ನು ಧ್ವಂಸ ಮಾಡುವುದು ಮತ್ತು ನಂತರ ಆ ಜಾಗದಲ್ಲಿ ಶ್ರೀರಾಮ ಮೂರ್ತಿಯನ್ನು ಸ್ಥಾಪಿಸುವುದು ವಿಡಿಯೊದಲ್ಲಿ ಸೆರೆಯಾಗಿತ್ತು. “ಹನುಮ ಭಕ್ತರು, ಕೈಗೆ ಸಿಕ್ಕ ವಸ್ತುಗಳಿಂದ ಬಾಬ್ರಿ ಕಟ್ಟಡವನ್ನು ಧ್ವಂಸ ಮಾಡುತ್ತಾರೆ, ಬೋಲೋ ಶ್ರೀರಾಮ ಚಂದ್ರ ಕೀ- ಜೈ, ಬೋಲೋ ಭಾರತ್ ಮಾತಾಕಿ- ಜೈ, ಜೈ ಹನುಮಾನ್” ಎಂದು ಪ್ರಹಸನವನ್ನು ನಿರೂಪಣೆ ಮಾಡಲಾಗಿತ್ತು. ಇದೆಲ್ಲವೂ ವಿಡಿಯೊದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿರಿ: ಸಂಘಪರಿವಾರ ಹೇಳುವ ‘ಸಾಮರಸ್ಯ’ ಕೇವಲ ಬೂಟಾಟಿಕೆ; ಆರ್‌ಎಸ್‌ಎಸ್‌ನಲ್ಲಿ ಜಾತಿ ನೋವುಂಡ ದಲಿತನ ಅನುಭವ ಕಥನ
“ಇಂತಹ ನಾಟಕವನ್ನು ಪ್ರದರ್ಶಿಸುವುದು ತಪ್ಪಲ್ಲವೇ? ಸುಪ್ರೀಂಕೋರ್ಟ್ ನೀಡಿರುವ ಸೂಚನೆಗೆ ವಿರುದ್ಧವಲ್ಲವೇ?” ಎಂದು ಪ್ರಶ್ನಿಸಿದಾಗ, “ದಿ ನ್ಯೂಸ್ ಮಿನಿಟ್”ಗೆ ಭಟ್ ನೀಡಿದ ಪ್ರತಿಕ್ರಿಯೆ ಆತಂಕಕಾರಿಯಾಗಿತ್ತು. “ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿರುವುದನ್ನು ನಾನು ಒಪ್ಪುವುದಿಲ್ಲ. ತೀರ್ಪಿನಲ್ಲಿ ಉಲ್ಲೇಖಿತವಾದ ಅಂತಹ ಭಾಗವನ್ನು ನಾವು ಪ್ರಶ್ನಿಸಿದ್ದೇವೆ. ತೀರ್ಪಿನಲ್ಲಿ ಹೇಳಿರುವ ಎಲ್ಲವನ್ನೂ ನಾವು ಸ್ವೀಕರಿಸಲು ಸಾಧ್ಯವಿಲ್ಲ. ಇದು ಮಸೀದಿ ಅಲ್ಲ, ಕೇವಲ ಒಂದು ಕಟ್ಟಡ. ನಾವು ಐತಿಹಾಸಿಕ ಘಟನೆಯನ್ನು (ಪ್ರಹಸನದಲ್ಲಿ) ಚಿತ್ರಿಸಿದ್ದೀವಿ. ನಾವು ಜಲಿಯನ್ ವಾಲಾ ಬಾಗ್ ಅನ್ನು ಸಹ ಚಿತ್ರಿಸಿದ್ದೇವೆ. ಯಾರಾದರೂ ಅದನ್ನು ಎತ್ತಿ ತೋರಿಸಿದ್ದಾರೆಯೇ? ಇಂತಹ ನೂರಾರು ನಿದರ್ಶನಗಳಿವೆ. ನಮ್ಮ ದೇಶದಲ್ಲಿ ನಡೆದ ಅನ್ಯಾಯಗಳನ್ನು ನಾವು ತೋರಿಸಬೇಕಾಗಿದೆ” ಎಂದು ತಮ್ಮ ಶಾಲೆಯಲ್ಲಾದ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
“ಬಾಬರನ ಮಕ್ಕಳು ಯಾರು? ನಾವು ಮುಸ್ಲಿಮರನ್ನು ವಿರೋಧಿಸುವುದಿಲ್ಲ. ನಾವು ಭಯೋತ್ಪಾದಕರನ್ನು ವಿರೋಧಿಸುತ್ತೇವೆ” ಎನ್ನುವ ಭಟ್, ದಿನಬೆಳಗಾದರೆ ಈ ನೆಲದ ಮುಸಲ್ಮಾನರ ವಿರುದ್ಧ ವಿಷ ಉಗುಳುವುದು ಬಿಡುವುದಿಲ್ಲ.
ರಾಷ್ಟ್ರಧ್ವಜದ ಮೇಲೆ ಅಸಹನೆ
“ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜದ ಬದಲು, ಕೇಸರಿ ಧ್ವಜ ಹಾರಿಸುವ ಕಾಲ ಬರುತ್ತದೆ” ಎಂದು ಬಿಜೆಪಿ ಅಧಿಕಾರಾವಧಿಯಲ್ಲಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಇದನ್ನು ಕಲ್ಲಡ್ಕ ಭಟ್ ಸಮರ್ಥನೆ ಮಾಡಿದ್ದರು. 2022ರ ಮಾರ್ಚ್ 19ರಂದು ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಕಲ್ಲಡ್ಕ, “ಬರುವ ದಿನಗಳಲ್ಲಿ ತ್ರಿವರ್ಣಧ್ವಜಗಳನ್ನು ಬದಲಿಸುವವರೆಗೂ ನಾವು ಅದನ್ನು ಗೌರವಿಸಬೇಕು” ಎಂದಿದ್ದರು.
“ಈ ಹಿಂದೆ ಕೇಸರಿ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡುವ ಬಗ್ಗೆ ಸಮಸ್ಯೆಗಳಿದ್ದವು. ಆದರೆ ಯಾರಿಗೆ ಗೊತ್ತು? ಒಂದು ದಿನ ಕೇಸರಿ ಧ್ವಜವು ನಮ್ಮ ರಾಷ್ಟ್ರಧ್ವಜ ಆಗಬಹುದು. ತ್ರಿವರ್ಣ ಧ್ವಜಕ್ಕೂ ಮೊದಲು ನಮ್ಮಲ್ಲಿ ಬ್ರಿಟಿಷ್ ಧ್ವಜ ಇತ್ತು. ಚಂದ್ರನ ಚಿಹ್ನೆಯ ಹಸಿರು ಧ್ವಜ ಇತ್ತು. ಹಿಂದೂ ಸಮಾಜವು ಒಟ್ಟಿಗೆ ಬಂದರೆ ರಾಷ್ಟ್ರಧ್ವಜವನ್ನು ಬದಲಿಸಬಹುದು”- ಇದು ಪ್ರಭಾಕರ ಭಟ್ಟರ ಮಾತು. “2002ರವರೆಗೂ ಆರ್‌ಎಸ್ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿಯೇ ಇರಲಿಲ್ಲ. ರಾಷ್ಟ್ರಧ್ವಜಕ್ಕೆ ಗೌರವ ಕೊಡದ ಇವರು, ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ” ಎಂಬುದು ಹಳೆಯ ಚರ್ಚೆ.
ಇದೇ ವರ್ಷದ ಸೆಪ್ಟೆಂಬರ್ 6ರಂದು ಆಗಿರುವ ವರದಿಯ ಪ್ರಕಾರ, “ಹಿಂದೂ ಜನಸಂಖ್ಯೆ ಹೆಚ್ಚಾಗದಿದ್ದರೆ ಭಾರತವೂ ಪಾಕಿಸ್ತಾನದಂತೆಯೇ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದಿದ್ದರು ಪ್ರಭಾಕರ ಭಟ್. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಹಿಂದೂ ಸಂಸ್ಕೃತಿಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಪ್ರಯತ್ನಗಳಾಗುತ್ತಿವೆ ಎಂದು ಬಿಜೆಪಿಯೇತರ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದರು. ಆರ್‌ಎಸ್‌ಎಸ್ ಪಕ್ಷಾತೀತ ಸಂಘಟನೆ ಎನ್ನುವ ನಾಯಕರು, ಬಿಜೆಪಿಯೇತರ ಸರ್ಕಾರಗಳ ವಿರುದ್ಧ ವಿಷಕಾರುವುದು ನಿಲ್ಲಿಸುವುದಿಲ್ಲ.
‘ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಇರಲಿಲ್ಲ’
2023ರ ಡಿಸೆಂಬರ್ 24ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಸಂಕೀರ್ತನಾ ಯಾತ್ರೆಯನ್ನು ಆಯೋಜಿಸಿತ್ತು. ಅಲ್ಲಿ ಮಾತನಾಡಿದ್ದ ಕಲ್ಲಡ್ಕ ಭಟ್, “ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡಂದಿರು ಇರಲಿಲ್ಲ. ಮೋದಿ ಸರ್ಕಾರ ಪರ್ಮನೆಂಟ್ ಗಂಡಂದಿರನ್ನು ಕೊಟ್ಟಿತು” ಎಂದು ಅಸಹ್ಯಕರ ಹೇಳಿಕೆ ನೀಡಿದ್ದರು. ಹೋರಾಟಗಾರ್ತಿ ನಜ್ಮಾ ನಜೀರ್ ದೂರು ದಾಖಲಿಸಿದ ಬಳಿಕವಷ್ಟೇ ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ಓದಿರಿ: ಪ್ರಿಯಾಂಕ್ ಪರ ಕೆಬಿಜಿ ಪೋಸ್ಟ್: ಬಲಪಂಥೀಯ ಟೂಲ್‌ಕಿಟ್ ಪ್ರತಿಕ್ರಿಯೆ ಏನಿತ್ತು? – ತನಿಖಾ ವರದಿ
“ದೇಶವನ್ನು ಹಿಂದೂಗಳಿಂದ ಮಾತ್ರ ರಕ್ಷಿಸಬಹುದು. ಮುಸ್ಲಿಮರಿಗೆ ಹಲವು ದೇಶಗಳಿವೆ. ಆದರೆ ಹಿಂದೂಗಳಿಗೆ ಒಂದೇ ದೇಶವಿದೆ ಮತ್ತು ನಾವು ಅದಕ್ಕಾಗಿ ಹೋರಾಡಬೇಕಾಗಿದೆ. ಹಿಂದೂಗಳು ಕಡಿಮೆಯಾಗಿದ್ದರೆ, ಅವರು ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗುತ್ತಾರೆ” ಎಂದು ಆರೋಪಿಸಿದ್ದರು.
ಶ್ರೀರಂಗಪಟ್ಟಣ ಪಟ್ಟಣ ಪೊಲೀಸರು ಐಪಿಸಿ ಸೆಕ್ಷನ್ 354, 294, 509, 506, 153 (ಎ), 295, 295 (ಎ), 298 ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಿದ್ದರೆ, ಆಗಲೇ ಭಟ್ಟರನ್ನು ಹಿಡಿದು ಜೈಲಿಗೆ ಹಾಕಬಹುದಿತ್ತು. ಆದರೆ ಸುಮ್ಮನೆ ಬಿಟ್ಟು ಕೂತಿತು.
ಏಪ್ರಿಲ್ 29ರಂದು, ಕಾಸರಗೋಡು ಜಿಲ್ಲೆಯ ವೋರ್ಕಾಡಿ ಗ್ರಾಮದ ಶ್ರೀಮಾತಾ ಸೇವಾ ಆಶ್ರಮದಲ್ಲಿ ನಡೆದ ಸಭೆಯಲ್ಲಿ, ಪಹಲ್ಗಾಮ್ ದಾಳಿಯ ಕುರಿತು ಮಾತನಾಡುತ್ತಾ, “ಹಿಂದೂಗಳು ಕತ್ತಿ ಮತ್ತು ಚಾಕುಗಳನ್ನು ಹಿಡಿದುಕೊಳ್ಳಬೇಕು” ಎಂದಿದ್ದರು ಭಟ್.
ಪ್ರತಿಕಾರಕ್ಕೆ ಕರೆ
ಮಂಗಳೂರಿನಲ್ಲಿ ಕೊಲೆಯಾದ, ರೌಡಿಶೀಟರ್ ಸುಹಾಸ್ ಶೆಟ್ಟಿಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಕಲ್ಲಡ್ಕ ಭಟ್ ಆಡಿದ ಮಾತುಗಳು ಕೆಲವು ದಿನಗಳ ಬಳಿಕ ಪ್ರಕರಣ ದಾಖಲಿಸಲು ಕಾರಣವಾಗಿದ್ದವು. ಕರಾವಳಿಯಲ್ಲಿ ಕೋಮುಗಲಭೆ ಸೃಷ್ಟಿಸುವ ಸಂಚನ್ನು ಕಲ್ಲಡ್ಕ ಮಾತುಗಳು ರವಾನಿಸಿದ್ದವು.
ಸುಹಾಸ್ ಶೆಟ್ಟಿ ಅವರ ಸ್ಮರಣಾರ್ಥ ಮೇ 1ರಂದು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕವಲಪಡೂರು ಗ್ರಾಮದ ಮಧ್ವ ಪ್ಯಾಲೇಸ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಭೆ ಅದಾಗಿತ್ತು. ಸುಮಾರು 500 ಜನರ ಗುಂಪನ್ನು ಉದ್ದೇಶಿಸಿ ಮಾತನಾಡಿದ್ದ ಕಲ್ಲಡ್ಕ, “ಇದು ಭಾವನಾತ್ಮಕ ಸಂತಾಪ ಸಭೆಯಲ್ಲ, ಆದರೆ ಇದು ಸೇಡಿನ ಸಂತಾಪ ಸಭೆಯಾಗಿರಬೇಕು. ನೀವು ಕೇವಲ ಫೋಟೋಗೆ ಹೂವುಗಳನ್ನು ಅರ್ಪಿಸುವ ಮೂಲಕ ಹೊರನಡೆಯಲು ಸಾಧ್ಯವಿಲ್ಲ, ಇದು ಇಲ್ಲಿಗೆ ಕೊನೆಗೊಳ್ಳಲು ಸಾಧ್ಯವಿಲ್ಲ, ಇದು ಸಾವಿರಾರು ವರ್ಷಗಳ ಹೋರಾಟ” ಎಂದು ಪ್ರಚೋದನೆ ನೀಡಿದ್ದರು. ಬಿಎನ್‌ಎಸ್ ಸೆಕ್ಷನ್ 353(2)ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಮುದಾಯಗಳ ನಡುವಿನ ಶಾಂತಿಯನ್ನು ಭಂಗಗೊಳಿಸುವ ಕೃತ್ಯವೆಂದು ಆರೋಪಿಸಲಾಯಿತು.
ಪ್ರಕರಣ ದಾಖಲಾದ ನಂತರ, ಭಟ್ ಬಂಧನದ ಭಯದಿಂದ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು, “ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು” ಎಂದು ನಿರ್ದೇಶಿಸಿತು. “ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದು, ತನಿಖಾ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ” ಎಂದು ನ್ಯಾಯಾಲಯಕ್ಕೆ ಭಟ್ ತಿಳಿಸಿದ್ದರು. ಆದರೆ ಹಳೆಯ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ. ಹಿಂದಿನ ಪ್ರಕರಣಗಳನ್ನು ಗಂಭೀರವಾಗಿ ನ್ಯಾಯಾಂಗ ಪರಿಗಣಿಸುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, “ಬಲವಂತದ ಕ್ರಮ ಬೇಡ” ಎಂದಿರುವುದು ಚರ್ಚೆಗೆ ಆಸ್ಪದ ನೀಡಿದೆ.
ಇದನ್ನೂ ಓದಿರಿ: ಎಸ್.ಎಲ್ ಭೈರಪ್ಪ: ಜಾತಿವಾದಿ ಹೌದೋ ಅಲ್ಲವೋ? ಒಂದು ಸಮಾಜಶಾಸ್ತ್ರೀಯ ಅಧ್ಯಯನ
ನ್ಯಾಯಾಂಗದ ಮೇಲೆ ಆಪಾದಿಸುವುದಕ್ಕಿಂತ ಸರ್ಕಾರದ ಪ್ರತಿನಿಧಿಗಳು ಕೋರ್ಟ್‌ನಲ್ಲಿ ಹೇಗೆ ವಾದಿಸುತ್ತಾರೆಂದು ನಾವು ಗಂಭೀರವಾಗಿ ನೋಡಬೇಕು ಎನ್ನುತ್ತಾರೆ ಮಂಗಳೂರಿನ ವಕೀಲ, ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪಾಡಿ.

‘ಈದಿನ’ದ ಜೊತೆ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷದ ಕಾನೂನು ಘಟಕ ಏನು ಮಾಡುತ್ತಿದೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಾಂಗ್ರೆಸ್ ನಾಯಕರು ಎಷ್ಟರ ಮಟ್ಟಿಗೆ ದ್ವೇಷ ಭಾಷಣಗಳ ವಿರುದ್ಧ ಹೋರಾಟ ಮಾಡಿದ್ದಾರೆ? ತಾರ್ಕಿಕ ಅಂತ್ಯದತ್ತ ಯಾವುದಾದರೂ ಪ್ರಕರಣವನ್ನು ಕೊಂಡೊಯ್ದಿದ್ದಾರಾ? ನಾನು ಕಾಂಗ್ರೆಸ್ಸಿಗನಲ್ಲದಿದ್ದರೂ ಕಾಂಗ್ರೆಸ್‌ನ ಬೆಂಬಲಿಗನಾಗಿಯೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ಕೋರ್ಟ್ ನ್ಯಾಯ ತೀರ್ಮಾನ ಮಾಡುತ್ತದೆ. ಆದರೆ ಕಲ್ಲಡ್ಕ ಭಟ್ ಅವರ ಕೃತ್ಯಗಳ ಕುರಿತು ಸರ್ಕಾರ ಕೋರ್ಟ್‌ಗೆ ಸಶಕ್ತವಾಗಿ ತಿಳಿಸಬೇಕಲ್ಲವೇ? ವಿಳಂಬ ಮಾಡುವುದು ಏತಕ್ಕೆ? ಮಹೇಶ್ ಶೆಟ್ಟಿ ತಿಮರೋಡಿಯವರ ಗಡಿಪಾರಿನ ಪ್ರಶ್ನೆ ಬಂದಾಗ ಅಡ್ವೊಕೇಟ್ ಜನರಲ್ ಬಂದು ವಾದ ಮಂಡಿಸುತ್ತಾರೆ. ಪ್ರಭಾಕರ್ ಭಟ್ ವಿಚಾರದಲ್ಲಿ ಎಂದಾದರೂ ಅಡ್ವೊಕೇಟ್ ಜನರಲ್ ನಿಂತಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, “ಪ್ರಭಾಕರ ಭಟ್ಟರು ಹೇಗೆ ಬೆಳೆದರು ಎಂದು ಅವಲೋಕನ ಮಾಡಬೇಕು. ಒಬ್ಬನ ಮನೆಗೆ ಕಲ್ಲು ಬಿಸಾಕುವುದು ಏಕೆ? ಕೇಳುವವನಿದ್ದರೆ ಕಲ್ಲು ತೂರುತ್ತಿದ್ದರೆ? ಕಾಂಗ್ರೆಸ್ ಮೇಲೆ ದಾಳಿ ಮಾಡಿದರೂ ಇಲ್ಲಿನ ನಾಯಕರು ಮಾತನಾಡುವುದಿಲ್ಲ. ಮುಸ್ಲಿಮರು ಪ್ರಶ್ನೆ ಮಾಡಲು ಹೊರಟರೆ ನೂರೆಂಟು ಸವಾಲುಗಳಿವೆ. ಹಿಂದೂ- ಮುಸ್ಲಿಂ ಸಮಸ್ಯೆಯಾಗಿ ಚಿತ್ರಿತವಾಗುತ್ತದೆ ಎಂಬ ಭಯ ಅವರಿಗಿದೆ. ಮುಸ್ಲಿಮರು ಕೆಲವು ಸಂದರ್ಭದಲ್ಲಿ ಪ್ರತಿಭಟನೆ ಮಾಡಿದ್ದಾರೆ ನಿಜ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಪ್ರಭಾಕರ ಭಟ್ ಮಾತನಾಡುತ್ತಿರುವುದನ್ನು ಗಮನಿಸಬಹುದು. ಹೀಗಾಗಿ ಮುಸ್ಲಿಂ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪ್ರಶ್ನಿಸಬೇಕು. ಈಗ ಪ್ರಕರಣ ದಾಖಲಿಸಿದ್ದು- ಪದ್ಮಜಾ ಎಂಬ ದಲಿತ ಮಹಿಳೆ. ಎಸ್‌ಡಿಪಿಐ ಬಿಡಿ, ಕಾಂಗ್ರೆಸ್‌ನಲ್ಲಿರುವ ಮುಸ್ಲಿಮರು ಏನು ಮಾಡುತ್ತಿದ್ದಾರೆ?” ಎಂದು ಕೇಳುತ್ತಾರೆ.
“ಪ್ರಭಾಕರ ಭಟ್ ಜೊತೆ ಕಾಂಗ್ರೆಸ್ ನಾಯಕರು ವೇದಿಕೆ ಹಂಚಿಕೊಂಡಿರುವ ಫೋಟೋಗಳು ಇವೆ. ಇಲ್ಲಿ ಕಾಂಗ್ರೆಸ್‌ನ ನೈತಿಕ ಮಟ್ಟದ ಕುಸಿತ ಕಾಣುತ್ತದೆ. ಹೀಗಾಗಿ ತಾನು ಸೇಫ್ ಎಂದು ಪ್ರಭಾಕರ್ ಭಟ್‌ಗೆ ಅನಿಸುತ್ತದೆ. ಕಾಂಗ್ರೆಸ್‌ನವರು ಏನೂ ಮಾಡಲ್ಲ ಎಂಬುದು ಗೊತ್ತಾಗಿದೆ, ಜೊತೆಗೆ ಆರ್‌ಎಸ್‌ಎಸ್‌ನ ಸಂಘಟನಾ ಶಕ್ತಿಯೂ ಸೇರಿಕೊಂಡು, ಬಾಯಿಗೆ ಬಂದಂತೆ ಭಾಷಣ ಮಾಡುತ್ತಾರೆ. ಬಲವಂತದ ಕ್ರಮ ಬೇಡವಾಗಿದ್ದರೆ, ಚಾರ್ಜ್‌ಶೀಟ್ ಹಾಕಬಹುದಲ್ಲವೇ? ಎಷ್ಟು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ? ಚಾರ್ಜ್‌ಶೀಟ್ ಹಾಕಿದರೂ ದುರ್ಬಲಗೊಳಿಸಿರುತ್ತಾರೆ ಅಥವಾ ಬಿ ರಿಪೋರ್ಟ್ ಹಾಕುತ್ತಾರೆ. ಇದೇ ಕಲ್ಲಡ್ಕ ಭಟ್‌ಗೆ ಧೈರ್ಯ” ಎಂದು ಅಭಿಪ್ರಾಯಪಡುತ್ತಾರೆ ದಿನೇಶ್.
ಸೈದ್ಧಾಂತಿಕವಾಗಿ ಆರ್‌ಎಸ್‌ಎಸ್ ಪರಿವಾರವನ್ನು ಎದುರಿಸುವಲ್ಲಿ ಕಾಂಗ್ರೆಸ್ ತೋರುವ ಅಂಜುಬುರುಕತನ ಮತ್ತು ಅಹಿಂದ ರಾಜಕಾರಣವನ್ನು ಸಶಕ್ತವಾಗಿ ಕಟ್ಟುವಲ್ಲಿ ತೋರುತ್ತಿರುವ ನಿರಾಸಕ್ತಿ ‘ಭಟ್ಟ’ರಂತಹ ಕೋಮುದ್ವೇಷ ಭಾಷಣಕಾರರಿಗೆ ಭರಪೂರ ಅವಕಾಶ ಒದಗಿಸಿದೆ ಎಂಬುದಂತೂ ಸತ್ಯ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




