ನಾಡಿನ ಹಲವಾರು ಸಾಹಿತಿಗಳು ʼಕಸಾಪ ಉಳಿಸಿ ಅಭಿಯಾನʼವನ್ನು ಕೈಗೊಂಡಿದ್ದರು. ಮಹೇಶ್ ಜೋಶಿಯವರ ಸರ್ವಾಧಿಕಾರ ಧೋರಣೆ, ಬೇಕಾಬಿಟ್ಟಿ ಬೈಲಾ ತಿದ್ದುಪಡಿ, ಪರಿಷತ್ತಿನ ಹಣಕಾಸಿನ ಅವ್ಯವಹಾರದ ತನಿಖೆ ನಡೆಸಬೇಕು ಹಾಗೂ ಜೋಶಿಯನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಲು ಸಮಾನ ಮನಸ್ಕರು ಮಂಡ್ಯದಲ್ಲಿ ಮೇ 17 ರಂದು ಸಮಾವೇಶ ನಡೆಸಿದ್ದರು.
ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಹಾಗೂ ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ 1915 ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಈಗ ನೂರಾ ಹತ್ತು ವರ್ಷಗಳನ್ನು ದಾಟುತ್ತಿದೆ. ಸಾಹಿತ್ಯ ಚಟುವಟಿಕೆಗಳ ಮೂಲಕ ಜನರ ಗಮನ ಸೆಳೆಯಬೇಕಾದ ಕಸಾಪ, ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯೇತರ ಕಾರಣಗಳಿಗೆ ಅಂದರೆ ಹಣದ ದುರುಪಯೋಗ ಹಾಗೂ ಅಧಿಕಾರದ ದುರ್ಬಳಕೆಯಿಂದ ಸುದ್ದಿಯಲ್ಲಿತ್ತು.
ಕನ್ನಡ ಭಾಷೆ, ಸಾಹಿತ್ಯ, ಜನಪದ ಸಂಸ್ಕೃತಿಯ ರಕ್ಷಣೆಯ ಮಹಾದಾಸೆಯಿಂದ ಆರಂಭವಾದ ಸಂಸ್ಥೆ, ಅದಕ್ಕೆ ವಿರುದ್ಧವಾದ ಕಾರಣಗಳಿಂದ ಹಲವಾರು ವಿಚಾರಗಳನ್ನು ಎದುರಿಸಬೇಕಾಗಿ ಬಂತು. ಈ ವಿಚಾರಗಳ ಹಿನ್ನೆಯಲ್ಲಿ, ಹಣ ಹಾಗೂ ಅಧಿಕಾರ ದುರ್ಬಳಕೆ ಸೇರಿ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಕಸಾಪಗೆ ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ. ಎಂ. ಗಾಯತ್ರಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶದ ಬೆನ್ನಲ್ಲೇ ಕೆ ಎಂ ಗಾಯತ್ರಿ ಅವರು ಕಸಾಪ ಕೇಂದ್ರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದ್ದಾರೆ. ಕಸಾಪದಲ್ಲಿ ಹಣಕಾಸಿನ ಅವ್ಯವಹಾರ ಹಾಗೂ ಅಧಿಕಾರ ದುರ್ಬಳಕೆಯ ಆರೋಪಗಳ ವಿಚಾರಣೆಗೆ ಸಂಬಂಧಿಸಿದಂತೆ ಸಹಕಾರ ಇಲಾಖೆ ಕಳೆದ ಜುಲೈನಲ್ಲಿ ಆದೇಶ ಹೊರಡಿಸಿ ವಿಚಾರಣಾಧಿಕಾರಿಯನ್ನು ನೇಮಕ ಮಾಡಿತ್ತು. ವಿಚಾರಣೆಗೆ ಸಂಬಂಧಿಸಿದಂತೆ ಕಸಾಪದವರು ನಿಗದಿತ ಕಾಲಾವಧಿಯಲ್ಲಿ ಹಾಜರಾಗದಿರುವುದು, ಅಗತ್ಯ ದಾಖಲಾತಿಗಳನ್ನು ಒದಗಿಸದಿರುವ ಕಾರಣ ನೀಡಿ ಆಡಳಿತಾಧಿಕಾರಿ ನೇಮಿಸುವಂತೆ ಸಹಕಾರ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಶಿಫಾರಸು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆ ಎಂ ಗಾಯತ್ರಿ ಅವರನ್ನು ನೇಮಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಪ್ರಸ್ತುತ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ. ಮುಂದಿನ ಮೂರು ತಿಂಗಳವರೆಗೆ ಅಥವಾ ಕಸಾಪದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಗಿಯುವವರೆಗೆ ಆಡಳಿತಾಧಿಕಾರಿಯಾಗಿ ಗಾಯತ್ರಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಸರ್ಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶ ಬಹುಜನರ ಹೋರಾಟಕ್ಕ ಸಂದ ಜಯ. ಕಸಾಪಗೆ ಆಡಳಿತಾಧಿಕಾರಿಯ ನೇಮಕ ಸಮಾನಮನಸ್ಕರು ನಡೆಸಿದ ಹೋರಾಟದ ಜಯ ಎಂದು ಹಲವು ಜನರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತುತ ಅಧ್ಯಕ್ಷರಾದ ಮಹೇಶ್ ಜೋಶಿ ಅವರು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೆಚ್ಚದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಹಾಗೂ ಅವರ ಆಡಳಿತ ವೈಖರಿಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ನಾಡಿನ ಹಲವಾರು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದರು. ಪಕ್ಷ ರಾಜಕಾರಣವನ್ನು ಬಳಸಿಕೊಂಡು ಕನ್ನಡ ಸಾಹಿತ್ಯದ ಸಾಂಸ್ಕೃತಿಕ ವಾತಾವರಣವನ್ನು ಮಾಲಿನ್ಯಗೊಳಿಸಿದ್ದಾರೆ. ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯದ ಸೂಕ್ಷ್ಮತೆ, ಸಾಂಸ್ಕೃತಿಕ ಸಂವೇದನಾಶೀಲತೆ ಮರೆತು ವರ್ತಿಸುತ್ತಿದ್ದಾರೆ. ಕನ್ನಡ ಭಾಷೆ ಹಾಗೂ ಕನ್ನಡ ನಾಡಿಗೆ ಧಕ್ಕೆ ತಂದಿದ್ದಾರೆ ಎಂದು ಸಾಹಿತಿ ಎಸ್ ಜಿ ಸಿದ್ದರಾಮಯ್ಯನವರು ಆರೋಪ ಮಾಡಿದ್ದರು.
ಮಹೇಶ್ ಜೋಶಿ ಅವರು ಕಸಾಪ ನಡೆಸುವ ಚುನಾವಣೆ ಸಂದರ್ಭದಲ್ಲಿ ಹಾಗೂ ತಮಗೆ ಇಷ್ಟ ಬಂದಂತೆ ಬೈಲಾ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದವರಿಗೆ ನೋಟಿಸ್ ಜಾರಿ ಮಾಡುತ್ತಾ, ಅವರ ವಿರುದ್ಧ ಮೊಕದ್ದಮೆ ಹೂಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ರಾಜ್ಯದ ಸಾಹಿತ್ಯಿಕ ಚಟುವಟಿಕೆಗಳಿಗೆ ಭಾರೀ ಹಿನ್ನಡೆ ಉಂಟಾಗುತ್ತಿದೆ ಎಂದು ಸಾಹಿತಿ ಪ್ರೊ.ಬಿ. ಜಯಪ್ರಕಾಶಗೌಡ ಅವರು ಆರೋಪಿಸಿದ್ದರು.
ನಾಡಿನ ಹಲವಾರು ಸಾಹಿತಿಗಳು “ಕಸಾಪ ಉಳಿಸಿ ಅಭಿಯಾನ”ವನ್ನು ಕೈಗೊಂಡಿದ್ದರು. ಮಹೇಶ್ ಜೋಶಿಯ ಸರ್ವಾಧಿಕಾರ, ಬೈಲಾ ತಿದ್ದುಪಡಿಯ ವಿಚಾರ, ಪರಿಷತ್ತಿನ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ಹಾಗೂ ಮಹೇಶ್ ಜೋಶಿಯನ್ನು ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸಿ ಎಂದು ರಾಜ್ಯದ ಎಲ್ಲ ಸಮಾನ ಮನಸ್ಕರು ಮಂಡ್ಯದಲ್ಲಿ ಮೇ 17 ರಂದು ಸಮಾವೇಶ ನಡೆಸಿದ್ದರು. ಈ ಸಮಾವೇಶಕ್ಕೆ ಮುಖ್ಯಮಂತ್ರಿ ಚಂದ್ರು, ಮುದ್ದುಕೃಷ್ಣ, ಹಂಪಾ ನಾಗರಾಜಯ್ಯ, ಪ್ರೊ.ಜಿ.ಎಸ್. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಕನ್ನಡ ಸಾಹಿತ್ಯಾಸಕ್ತರು ಆಗಮಿಸಿದ್ದರು. ಜೋಶಿಯವರ ಸರ್ವಾಧಿಕಾರದ ವಿರುದ್ಧ ದೊಡ್ಡ ಪ್ರತಿರೋಧವನ್ನು ತೋರಿಸಿದ್ದರು.
ಸಂಪುಟದರ್ಜೆ ಸ್ಥಾನಮಾನ ವಾಪಸ್ ಪಡೆದ ಸರ್ಕಾರ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ಈ ಹಿಂದೆ ಇದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2023 ರಲ್ಲಿ ಸಚಿವ ಸ್ಥಾನಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಎಲ್ಲ ಸೌಲಭ್ಯಗಳನ್ನು ನೀಡಿ ಆದೇಶಿಸಿತ್ತು. ಅದರಂತೆ ಸಚಿವರಿಗೆ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಹೇಶ್ ಜೋಶಿ ಪಡೆಯುತ್ತಿದ್ದರು. ಈ ಹಿಂದೆ ಅಧ್ಯಕ್ಷರಾದ ಯಾರೂ ಪಡೆಯದ ಸಚಿವ ಸ್ಥಾನವನ್ನು ಮಹೇಶ್ ಜೋಶಿ ಪಡೆದು ಕಸಾಪದ ಅಧ್ಯಕ್ಷ ಸ್ಥಾನದ ಘನತೆಗೆ ಧಕ್ಕೆ ತರುತ್ತಿದ್ದಾರೆ. ಇವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕೋರಿ ಕೆಲವು ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.
ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಅವರಿಗೆ ನೀಡಿದ್ದ ಸಚಿವ ಸ್ಥಾನಮಾನವನ್ನು ಹಿಂಪಡೆದು ಈ ಕೂಡಲೇ ಜಾರಿಗೆ ಬರುವಂತೆ 2025 ಮೇ 31 ರಂದು ಅಧಿಕೃತ ಆದೇಶವನ್ನು ಹೊರಡಿಸಿತು. ಡಾ. ಮಹೇಶ್ ಜೋಶಿ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ಸವಲತ್ತುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ-2 ಬಾಣದರಂಗಯ್ಯ ಎನ್.ಆರ್. ಅವರು ಆದೇಶ ಹೊರಡಿಸಿದ್ದರು.
ಹೇಳದೆ ಕೇಳದೆ ಸದಸ್ಯ ಸ್ಥಾನ ಕೈಬಿಡುವ ಉದ್ಧಟತನ
ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ವಿರುದ್ಧ ಮಾತನಾಡಿದರೆ, ಮಾತನಾಡಿದವರ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟ ಹಲವು ಉದಾಹರಣೆಗಳು ಇವೆ. ಡಾ.ವಸುಂಧರಾ ಭೂಪತಿ ಅವರ ಅಜೀವ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿತ್ತು. ಅದೇ ರೀತಿ ಬರಹಗಾರರಾದ ಜಾಣಗೆರೆ ವೆಂಕಟರರಾಮಯ್ಯ ಅವರ ಕಸಾಪ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿತ್ತು. ಇದರ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್ತು ಯಾವುದಾದರೂ ಸಭೆಗಳನ್ನು ನಡೆಸಿದರೆ, ಸದಸ್ಯರಲ್ಲದವರು ಬರುವಂತಿಲ್ಲ ಎಂದು ಆದೇಶಿಸಲಾಗಿತ್ತು.
ಮಹೇಶ್ ಜೋಶಿ ಅವರು ಅಧ್ಯಕ್ಷರಾದ ಬಳಿಕ, ಅವರ ಸರ್ವಾಧಿಕಾರಿ ಧೋರಣೆ ಬಗ್ಗೆ ಮಾತನಾಡಿದರೆ, ಅದರಲ್ಲೂ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೆ, ಸಂವಿಧಾನ ಬಾಹಿರವಾಗಿ ಅವರ ಸದಸ್ಯತ್ವವನ್ನು ಕೈಬಿಡಲಾಗುತ್ತಿತ್ತು. ಇದು ಮಹೇಶ್ ಜೋಶಿ ಅವರ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿಯಂತಿತ್ತು.
ಬಾಡೂಟಕ್ಕೆ ಬೇಡಿಕೆ, ಅಧ್ಯಕ್ಷರ ಬ್ರಾಹ್ಮಣಿಕೆ
ಕಳೆದ ವರ್ಷ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೆ ಮಾಂಸಹಾರವೂ ಕೊಡಬೇಕು ಎಂದು ಒಂದಷ್ಟು ಸಮಾನ ಮನಸ್ಕರು ಒತ್ತಾಯ ಮಾಡಿದ್ದರು. ಇದಕ್ಕೆ ಕಾರಣ ಸಮ್ಮೇಳನದಲ್ಲಿ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸಿದವರಿಗೆ ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ ಎಂಬ ನಿಯಮವನ್ನು ಪರಿಷತ್ತು ಹೊರಡಿಸಿತ್ತು. ಮದ್ಯ ಮತ್ತು ತಂಬಾಕು ನಿಷೇಧಿಸುವುದನ್ನು ಸ್ವಾಗತಿಸಿದ ಹಲವಾರು ಜನರು, ಮಾಂಸಾಹಾರ ನಿಷೇಧವನ್ನು ವಿರೋಧಿಸಿದರು.
ಮಿಶ್ರಾಹಾರಿಗಳ ಪ್ರೀತಿಯ ಖಾದ್ಯವಾಗಿರುವ ಮೀನು, ಕೋಳಿ, ಮೊಟ್ಟೆಗಳು ಯಾಕಿಲ್ಲ ಎನ್ನುವ ಪ್ರಶ್ನೆ, ಸಮ್ಮೇಳನದ ಆರಂಭಕ್ಕೂ ಮುನ್ನ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಮೊದಲು ಸಮ್ಮೇಳನದ ಅಧ್ಯಕ್ಷರ ನೇಮಕದಲ್ಲಿ ಭಾರೀ ಗೊಂದಲ ಸೃಷ್ಟಿಸಿದ್ದ ಪರಿಷತ್ತಿನ ಅಧ್ಯಕ್ಷರು, ನಂತರ ಊಟದ ವಿಚಾರದಲ್ಲಿ ಸಾಕಷ್ಟು ವಿವಾದಕ್ಕೀಡಾದರು.
ಇದನ್ನೂ ಓದಿ ದ್ವಿಭಾಷಾ ನೀತಿ ಅಳವಡಿಕೆ – ರಾಜ್ಯೋತ್ಸವದಂದು ಘೋಷಿಸಲು ಸಿಎಂಗೆ ಮನವಿ
ಎಚ್.ವಿ.ನಂಜುಂಡಯ್ಯರಿಂದ, ಕಂಠೀರವ ನರಸಿಂಹರಾಜ ಒಡೆಯರ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪ್ರೊ.ಎ.ಎನ್.ಮೂರ್ತಿರಾವ್, ಡಾ.ಹಂಪ ನಾಗರಾಜಯ್ಯ, ಗೊ.ರು.ಚನ್ನಬಸಪ್ಪ, ಪ್ರೊ.ಚಂದ್ರಶೇಖರ್ ಪಾಟೀಲ್ ಸೇರಿದಂತೆ ಹಲವಾರು ಸಾಹಿತಿಗಳು ಅಧ್ಯಕ್ಷರುಗಳಾಗಿ ಕಟ್ಟಿಬೆಳೆಸಿದ ಸಾಹಿತ್ಯ ಪರಿಷತ್ತು, ಸಾಹಿತ್ಯೇತರ ವಿಚಾರಕ್ಕೆ ಸುದ್ದಿಯಾಗಿದ್ದು, ನಾಡಿನ ಪ್ರಜ್ಞಾವಂತ ಜನರಿಗೆ, ಹಲವಾರು ಸಾಹಿತಿಗಳಿಗೆ ಬೇಸರ ತಂದಿದೆ.
ಸತ್ಯಕ್ಕೆ ಸಂದ ಜಯ
“ಕಸಾಪದ ಹಿರಿಯ ಸದಸ್ಯರು ಸಂಘಟಿತರಾಗಿ ನಡೆಸಿದ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಆದರೆ, ತನಿಖೆ ಸಂಪೂರ್ಣಗೊಂಡು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು. ಆಡಳಿತಾಧಿಕಾರಿಯನ್ನು ನೇಮಿಸುವ ದಿಟ್ಟ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಗೆ ಸ್ಪರ್ಧೆ ಮಾಡುವ ಎಲ್ಲರಿಗೂ ಇದೊಂದು ಪಾಠವಾಗಲಿ. ಸರ್ವಾಧಿಕಾರಿ ಮನೋಭಾವ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದಲ್ಲಿ ಸಾಮಾನ್ಯ ಸದಸ್ಯರೂ ಸುಮ್ಮನಿರುವುದಿಲ್ಲ” ಎಂದು ಡಾ ವಸುಂಧರಾ ಭೂಪತಿ ಈ ದಿನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮಹೇಶ್ ಜೋಶಿ ಅಕ್ರಮಗಳ ತನಿಖೆಯಾಗಲಿ
“ನಮ್ಮ ʼಕಸಾಪ ಉಳಿಸಿʼ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರಕ್ಕೆ ಧನ್ಯವಾದಗಳು. ಆಡಳಿತಾಧಿಕಾರಿ ನೇತೃತ್ವದಲ್ಲಿ ಮಹೇಶ್ ಜೋಶಿ ಅವರ ಅಕ್ರಮಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಪರಿಷತ್ತಿಗೆ ಶುದ್ಧ ಮನಸ್ಸಿನ ಸಾಹಿತಿ ಗೆದ್ದು ಬರುವಂತಾಗಲಿ. ಆಗಲೇ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದಂತಾಗುತ್ತದೆ” ಎಂದು ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಒತ್ತಾಯಿಸಿದ್ದಾರೆ.





