ಗ್ರಹಣ ಹಿಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ: ʻಬಿಫೆಸ್‌ʼ ಅಂತಾರಾಷ್ಟ್ರೀಯ ಚಿತ್ರೋತ್ಸವ ಎಂಬ ಗೊಂದಲದ ಗೂಡು

Date:

ಕರ್ನಾಟಕ ಚಲನಚಿತ್ರರಂಗದಲ್ಲಿ ಒಂದು ಅಕಾಡೆಮಿಕ್‌ ವಾತಾವರಣ ರೂಪಿಸಿ, ಅಲ್ಲಿ ಚಿತ್ರರಂಗ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹದಿನೈದು ವರ್ಷಗಳ ಹಿಂದೆ ಕಂಡುಕೊಂಡ ದಾರಿ; ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆ. ಆದರೆ ಇಂದು ಅಲ್ಲಿ ಅಕಾಡೆಮಿಕ್‌ ವಾತಾವರಣವೇ ಇಲ್ಲದೆ, ಕೇವಲ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ಯೋಜಿಸಲಾಗಿರುವ ಸಂಸ್ಥೆಯಂತೆ ಕಾಣುತ್ತಿದೆ. ಈ ಅಕಾಡೆಮಿಯನ್ನು ಸರ್ಕಾರ ಗ್ರಹಣ ಮುಕ್ತಮಾಡಬೇಕಿದೆ

ಗೋವಾದಲ್ಲಿ ದೇಶದ ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್‌ 20ರಿಂದ ಆರಂಭವಾಗಿದೆ. ಈ 56ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ನವೆಂಬರ್‌ 28ರ ವರೆಗೆ ಅಂದರೆ ಒಂಭತ್ತು ದಿನಗಳ ಕಾಲ ನಡೆಯಲಿದೆ. ವಿಶ್ವದ ಮೂಲೆಮೂಲೆಯಿಂದ ಚಿತ್ರವನ್ನು ಪ್ರೀತಿಸುವ ಮಂದಿ, ಚಿತ್ರೋದ್ಯಮಿಗಳು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಲಾವಿದರು, ಚಿತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಂಶೋಧಕರು, ಪಂಡಿತರು ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 81 ದೇಶಗಳ 240 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಜಪಾನ್‌, ಚಿತ್ರೋತ್ಸದ ಕೇಂದ್ರ ರಾಷ್ಟ್ರವಾಗಿದ್ದು, ಆ ದೇಶದ ಆರು ಚಿತ್ರಗಳಲ್ಲದೆ ಸ್ಪೇನ್‌ ಮತ್ತು ಆಸ್ಟ್ರೇಲಿಯಾ ದೇಶಗಳ ಚಿತ್ರಗಳ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರೋತ್ಸವದಲ್ಲಿ 44 ವಿದೇಶಿ ಮತ್ತು 13 ಭಾರತೀಯ ಸಿನಿಮಾಗಳ ಮೊದಲ (ಪ್ರೀಮಿಯರ್‌) ಪ್ರದರ್ಶನಗಳು ನಡೆಯಲಿವೆ. ಉದ್ಘಾಟನೆಯ ನಂತರ ಪಣಜಿ, ಮಡಗಾಂವ್‌, ಪೊರ್ವರಿಂಗಳ ಹದಿಮೂರು ತೆರೆಗಳಲ್ಲಿ ಬ್ರೆಜಿಲ್‌ ದೇಶದ, ಗೇಬ್ರಿಯಲ್‌ ಮಸ್ಕಾರೊ ನಿರ್ದೇಶನದ ʼದಿ ಬ್ಲೂ ಟ್ರಯಲ್‌ʼ ಚಿತ್ರ ಪ್ರದರ್ಶನಗೊಳ್ಳಲಿದೆ.‌

ಕರ್ನಾಟಕದ ಐದು ಚಿತ್ರಗಳು ಹಾಗೂ ನಿಹಲಾನಿಯ ʻಪಾರ್ಟಿʼ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ʻವನ್ಯʼ (ನಿ:ದೇವೇಂದ್ರ ಬಡಿಗೇರ್‌), ʼಸು ಫ್ರಮ್‌ ಸೋʼ (ನಿ:ಪ್ರಕಾಶ್‌ ಜೆ ಪಿ ತುಮಿನಾಡ್‌) ಮತ್ತು ತುಳು ಭಾಷೆಯ ʼಇಂಬುʼ (ನಿ:ಶಿವಧ್ವಜ್‌ ಶೆಟ್ಟಿ) ಸೇರಿದಂತೆ ಒಟ್ಟು 20 ಕಥಾಚಿತ್ರಗಳು ಮತ್ತು 20 ನಾನ್‌ಫೀಚರ್‌ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ತಮಿಳಿನ ʻಅಮರನ್‌ʼ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿದ್ದು, ಅದು ಸ್ಪರ್ಧಾ ವಿಭಾಗದಲ್ಲೂ ಸ್ಥಾನ ಪಡೆದಿದೆ. ಈ ವಿಭಾಗದಲ್ಲಿ 15 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಚಿತ್ರೋತ್ಸವದಲ್ಲಿ ಕರ್ನಾಟಕದ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ನಲ್ಲಿ ಕಲಿತ ವಿಶ್ವವಿಖ್ಯಾತ ಸಿನಿಮಾ ದಿಗ್ದರ್ಶಕ ಗೋವಿಂದ್‌ ನಿಹಲಾನಿ ಅವರು 1984ರಲ್ಲಿ ನಿರ್ದೇಶಿಸಿದ ಕ್ಲಾಸಿಕ್‌ ಚಿತ್ರ ʻಪಾರ್ಟಿʼ ಪ್ರದರ್ಶನಗೊಳ್ಳಲಿರುವುದು ಹೆಮ್ಮೆ ಪಡುವಂಥ ವಿಷಯ. ನಿಹಲಾನಿ ಹಲವು ಕನ್ನಡ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ಗೋವಾ ಚಿತ್ರೋತ್ಸವ ಹಾಗೂ ಬಿಫೆಸ್

ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಬಗ್ಗೆ ಬರೆಯುವಂಥ ವಿಶೇಷವೇನಿಲ್ಲ. ಕಳೆದ ಐವತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಚಿತ್ರ ಪರಂಪರೆ ಇದು. ದೇಶದ ಬೇರೆ ಬೇರೆ ನಗರಗಳಲ್ಲಿ ನಡೆಯುತ್ತಿದ್ದ, ಭಾರತದ ಈ ಪ್ರತಿಷ್ಠಿತ ಚಲನಚಿತ್ರೋತ್ಸವ 2004ರಿಂದ ಗೋವಾದಲ್ಲಿ ಪ್ರತಿವರ್ಷ ಇದೇ ದಿನಗಳಲ್ಲಿ ನಡೆಯುತ್ತದೆ. ಈ ಚಿತ್ರೋತ್ಸವಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅನೇಕ ಮಂದಿ ಭಾಗವಹಿಸುತ್ತಿದ್ದಾರೆ. ಅವರ ಉದ್ದೇಶ, ಪ್ರತಿವರ್ಷ ತಾವು ನಡೆಸುವ ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (ಬಿಫೆಸ್)‌ ನ ಸಂಘಟನೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು. ಅಕಾಡೆಮಿಯ ಪ್ರತಿನಿಧಿಗಳು ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವವೂ ಸೇರಿದಂತೆ ಪ್ರತಿವರ್ಷ ಮೇ ತಿಂಗಳಲ್ಲಿ ನಡೆಯುವ ಫ್ರಾನ್ಸ್‌ ನ ಕಾನ್‌ ನಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ಕೂಡ ಭಾಗಿಯಾಗಿ, ಒಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಘಟಿಸುವುದು ಹೇಗೆಂದು ಅಧ್ಯಯನ ಮಾಡಲು ತೆರಳುತ್ತಾರೆ ಎಂಬುದು ಒಂದು ನಂಬಿಕೆ.

ಕಲಿಕೆಯ ಕೊರತೆ

ಆದರೆ ಇಷ್ಟು ವರ್ಷ ಕಳೆದರೂ, ಒಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಮಾದರಿಯಲ್ಲಿ ನಡೆಸುವುದನ್ನು ಹೇಗೆಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಕಲಿತಂತೆ ಕಾಣುತ್ತಿಲ್ಲ. ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವ ಚಿತ್ರಗಳ ಆಯ್ಕೆಯ ಗುಣಮಟ್ಟವನ್ನು ಕಲಾತ್ಮಕ ನಿರ್ದೇಶಕರ ತಂಡ ಕೊನೆಯ ಕ್ಷಣದಲ್ಲಿ ಪರವಾನಗಿ ಸಿಕ್ಕರೂ, ಹೇಗೋ ಕಾಯ್ದುಕೊಂಡು ಬರುತ್ತಿದ್ದಾರೆ. ಆದರೆ ಉಳಿದ ವಿಭಾಗಗಳ ಸಂಘಟನೆ, ಕನ್ನಡ ಚಿತ್ರಗಳ ಆಯ್ಕೆಯಲ್ಲಿ ಗೊಂದಲ ಕೊನೆಯ ಕ್ಷಣದವರೆಗೂ ಚಿತ್ರೋತ್ಸವ ಸಂಘಟಕ-ಸಂಸ್ಥೆ ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಕಾಡುತ್ತಲೇ ಇರುತ್ತದೆ. ಇದಕ್ಕೆ ಮತ್ತೊಂದು ಕಾರಣ, ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆಗಳಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತಿತರ ಸಂಸ್ಥೆಗಳನ್ನು ಓಲೈಸಲೇಬೇಕಾದ ಅನಿವಾರ್ಯ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯ ಮಂಡಳಿಗಳಿಗೆ ಇರುತ್ತದೆ. ಒಟ್ಟಾರೆಯಾಗಿ ಒತ್ತಡದಲ್ಲಿ ಅಕಾಡೆಮಿ ಕೆಲಸ ಮಾಡಬೇಕಾದ ಸಂದರ್ಭಗಳೇ ಹೆಚ್ಚು.

SUCHITRA NEW3 1z

ಬಿಫೆಸ್-ಸುಚಿತ್ರ ಕೊಡುಗೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Biffes-ಬಿಫೆಸ್)‌ ಈ ಹೆಸರಿನಲ್ಲಿ ಸರಿಯಾಗಿ ಆರಂಭವಾದದ್ದು 2009ರಲ್ಲಿ. ಅಂದರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಆರಂಭವಾದಂದಿನಿಂದ. ಅದಕ್ಕೆ ಮುನ್ನ ಈ ಚಿತ್ರೋತ್ಸವವನ್ನು ಸುಚಿತ್ರ ಚಲನಚಿತ್ರ ಅಕಾಡೆಮಿ 2006ರಿಂದ ನಡೆಸಿಕೊಂಡು ಪ್ರತಿವರ್ಷ ನಡೆಸಿಕೊಂಡು ಬರುತ್ತಿತ್ತು. 2009ರಲ್ಲಿ ಅಕಾಡೆಮಿ ಸ್ಥಾಪನೆಯಾದ ನಂತರ ಟಿ.ಎಸ್.‌ ನಾಗಾಭರಣ ಅವರ ಪ್ರಯತ್ನದಿಂದಾಗಿ ಚಿತ್ರೋತ್ಸವ ಸರ್ಕಾರದ ಸುಪರ್ದಿಗೆ, ಅದೂ ಕೂಡ ಅಕಾಡೆಮಿಯ ಅತಿಮುಖ್ಯ ಕಾರ್ಯಕ್ರಮವಾಯಿತು. 2006ರಲ್ಲಿ ನಡೆದದ್ದು ಮೊದಲ ಬಿಫೆಸ್‌ ಎನ್ನುವುದಾದರೆ, ಬರಲಿರುವುದು ಅಥವಾ ನಡೆಯಲಿರುವುದು 17ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ. ಚಿತ್ರೋತ್ಸವ ನಡೆಯಲು ಇನ್ನು ಕೇವಲ ನಾಲ್ಕು ತಿಂಗಳು ಉಳಿದಿದ್ದರೂ, ಚಿತ್ರೋತ್ಸವ ನಡೆಯುವ ದಿನಾಂಕ ಇನ್ನು ಖಚಿತವಾಗಿಲ್ಲ. ಕಲಾತ್ಮಕ ನಿರ್ದೇಶಕರ ಆಯ್ಕೆಯಾಗಿಲ್ಲ. ಹಾಗಿದ್ದಾಗ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಡೆಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗುತ್ತದೆ.

ಬಿಫೆಸ್‌ ಗೆ ಸರ್ಕಾರದ ಅನುದಾನ ಬಿಡುಗಡೆಯ ಪ್ರಶ್ನೆ

ಕರ್ನಾಟಕ ಸರ್ಕಾರ 2006ರಿಂದ ನಡೆಯುತ್ತಿದ್ದ ಈ ಬಿಫೆಸ್ ಅನ್ನು 2009ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಒಪ್ಪಿಸಲಾಯಿತು. ಆದರೆ ಈಗ  ಅಕಾಡೆಮಿ ಚಿತ್ರೋತ್ಸವವನ್ನು ನಡೆಸುತ್ತಿರುವ ರೀತಿ ತೃಪ್ತಿದಾಯಕವಾಗಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಮತ್ತೆ ಬಿಫೆಸ್‌ ಅನ್ನು ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. (Department of Information and Public Relations) ತನ್ನ ಸುಪರ್ದಿಗೇ  ತೆಗೆದುಕೊಳ್ಳಬೇಕು. ಎಂಬ ಅಭಿಪ್ರಾಯ ದಟ್ಟವಾಗಿ ಕೇಳಿ ಬರುತ್ತಿದೆ. ಅಕಾಡೆಮಿಯ ಅಧ್ಯಕ್ಷ ಹುದ್ದೆ ಖಾಲಿ ಇದ್ದ ಸಂದರ್ಭದಲ್ಲಿ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ಚಿತ್ರೋತ್ಸವವನ್ನು ನಡೆಸಿರುವುದರಿಂದ, ಈಗಲೂ ಚಿತ್ರೋತ್ಸವದ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ನಡೆಸಲಿ ಎಂಬ ವಾದಗಳು ಹುಟ್ಟಿಕೊಂಡಿವೆ. ಈ ವಾದಕ್ಕೆ ಮತ್ತೊಂದು ಕಾರಣವೆಂದರೆ, ಚಿತ್ರೋತ್ಸವಕ್ಕೆಂದು ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದರೂ, ಅದನ್ನು ಪಡೆದುಕೊಳ್ಳಲು ಅಕಾಡೆಮಿ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯನ್ನೇ ಅವಲಂಬಿಸಬೇಕಾಗಿದೆ. ಆದರೆ, ಸರ್ಕಾರ ಆಗಾಗ ಮಾಹಿತಿ ಮತ್ತು ಸಾರ್ವಜನಿಕ ಇಲಾಖೆಯ ಕಾರ್ಯದರ್ಶಿಯನ್ನು ಬದಲಿಸುವುದರಿಂದ, ಅವರಿಗೆ ಹೊಸದಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ತಿಳಿದುಕೊಂಡು ಕೆಲಸ ಮಾಡಲು ಸ್ವಲ್ಪ ಕಾಲವೇ ಹಿಡಿಯುತ್ತದೆ. ಇದಲ್ಲದೆ ಬಿಫೆಸ್‌ ಗಾಗಿ ಮೀಸಲಿಟ್ಟ ಹಣವನ್ನು ಆರ್ಥಿಕ ಇಲಾಖೆಯಿಂದ ಪಡೆಯುವುದು ಅಕಾಡೆಮಿಗೆ ದೊಡ್ಡ ಸಾಹಸವಾಗಿದೆ. ಈಗಿರುವ ಕಾರ್ಯದರ್ಶಿ ಅವರು ಸಿನಿಮಾಸಕ್ತಿ ಇರುವುದರಿಂದ ಕಳೆದ ಬಾರಿ ಹೆಚ್ಚು ಕಷ್ಟವಾಗಲಿಲ್ಲ ಎಂದು ಅಕಾಡೆಮಿಯ ಮೂಲಗಳು ಒಪ್ಪಿಕೊಳ್ಳುತ್ತವೆ. ಅಲ್ಲದೆ ಕಾರ್ಯದರ್ಶಿ ಸ್ವತಃ ಚಿತ್ರೋತ್ಸವಕ್ಕೆ ಬಂದು ನಿಂತು, ಸಿನಿಮಾಗಳನ್ನು ವೀಕ್ಷಿಸಿ, ಜನಮನ್ನಣೆಗಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಈ ವರ್ಷವೂ ಅವರು ಸ್ವತಃ ಚಿತ್ರೋತ್ಸವದ ಬಗ್ಗೆ ಆಸಕ್ತಿ ತೆಗೆದುಕೊಂಡಿದ್ದಾರೆ. ಚಿತ್ರೋತ್ಸವದ ಸಿದ್ಧತೆ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಅಕಾಡೆಮಿ ಮೂಲಗಳು ಹೇಳುತ್ತವೆ.

ಬಿಫೆಸ್‌ ಗೆ ಅಂತಾರಾಷ್ಟ್ರೀಯ ಮನ್ನಣೆ

ಈ ಬಿಫೆಸ್‌ಗೆ ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಸಂಘಟನೆಗಳ ಒಕ್ಕೂಟ (International Federation of Film Producers ́ Association-FIAPF) ಮಾನ್ಯತೆ ನೀಡಿದೆ. ಇದು ಹಲವು ವರ್ಷಗಳ ಕಾಲ ಬಿಫೆಸ್‌ ನ ಬಗ್ಗೆ ಪ್ರೀತಿ ಬೆಳೆಸಿಕೊಂಡಿರುವ ಮಂದಿ ಪಟ್ಟಿರುವ ಶ್ರಮದ ಫಲ. ಪ್ರಪಂಚದಲ್ಲಿ ಸದ್ಯಕ್ಕೆ ಸುಮಾರು ಐದು ಸಾವಿರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುತ್ತವೆ. ಆ ಪೈಕಿ ನಲುವತ್ತಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಮಾತ್ರ ಈ ಮನ್ನಣೆ ಇದೆ. ಅದರಲ್ಲಿ ಈಗ ಬಿಫೆಸ್‌ ಕೂಡ ಒಂದು. ಬಿಫೆಸ್‌ ಗೆ ಈ ಮಾನ್ಯತೆ ದೊರೆತಿರುವುದು 2022ರಲ್ಲಿ. ಅಲ್ಲಿಯವರೆಗೆ ಬಿಫೆಸ್ ಮಾನ್ಯತೆ ಇಲ್ಲದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವಾಗಿತ್ತು.

Bengaluru International Film Festival ೧

ಅಂತಾರಾಷ್ಟ್ರೀಯ ಮಾನ್ಯತೆ ಉಳಿಸಿಕೊಳ್ಳಲು ಶತ ಪ್ರಯತ್ನ

ಈ ಮನ್ನಣೆ ನೀಡಬೇಕಾದರೆ, ಬಿಫೆಸ್ ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಸಂಘಟನೆಗಳ ಒಕ್ಕೂಟ (International Federation of Film Producers ́ Association-FIAPF) ನ ಹಲವಾರು ನಿಯಮಗಳನ್ನು ಪಾಲಿಸಬೇಕು. ಮೊದಲನೆಯದು ವರ್ಷದ ಖಚಿತವಾದ ದಿನದಲ್ಲೇ ಚಿತ್ರೋತ್ಸವ ನಡೆಯಬೇಕು. ಅಂದರೆ Calender of events ನ ಕಟ್ಟುನಿಟ್ಟಾಗಿ ಅನುಸರಿಸಬೇಕು. ಏಕೆಂದರೆ, ಪ್ರಪಂಚದಾದ್ಯಂತ ನಲವತ್ತಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುವುದರಿಂದ ಇಡೀ ವರ್ಷ ಆಯಾ ಖಚಿತವಾದ Calender of events ಪ್ರಕಾರ ಚಿತ್ರೋತ್ಸವ ನಡೆಯದಿದ್ದರೆ, ಒಂದು ಚಿತ್ರೋತ್ಸವದಿಂದ ಮತ್ತೊಂದು ಚಿತ್ರೋತ್ಸವಕ್ಕೆ ಚಿತ್ರಗಳು ತೆರಳುವುದರಿಂದ ಒಳ್ಳೆಯ ಚಿತ್ರಗಳನ್ನು ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲ. ಅಂತಾರಾಷ್ಟ್ರೀಯ ಮಟ್ಟದ ನಟರು, ನಿರ್ದೇಶಕರು, ವಿಮರ್ಶಕರು, ಅತಿಥಿಗಳು ಬಿಫೆಸ್ ಗೆ ಬರಲು ಸಾಧ್ಯವಾಗುವುದಿಲ್ಲ. ಆದರೆ ವಿಷಾದದ ಸಂಗತಿಯೆಂದರೆ, ಮಾನ್ಯತೆ ಪಡೆದಂದಿನಿಂದ FIAPF ಈ ಷರತ್ತನ್ನು ನೆನಪಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಅಕಾಡೆಮಿಯಾಗಲಿ, ಸರ್ಕಾರವಾಗಲಿ ಇದರ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಆಕಸ್ಮಾತ್‌ ಬಿಫೆಸ್‌ FIAPF ನ ಷರತ್ತುಗಳನ್ನು ಪಾಲಿಸದಿದ್ದರೆ, ಅದರಿಂದ ಬಹು ಕಷ್ಟದಿಂದ ದೊರಕಿರುವ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಬಿಫೆಸ್‌ ಕಳೆದುಕೊಳ್ಳುವ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗುವುದಿಲ್ಲ. ಕಳೆದ ವರ್ಷದ ಅಕಾಡೆಮಿಯ ನಡವಳಿಕೆಯ ಬಗ್ಗೆ  FIAPF ಅಸಮಾಧಾನ ವ್ಯಕ್ತಪಡಿಸಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಅಂತಾರಾಷ್ಟ್ರೀಯ ಚಲನಚಿತ್ರ ನಿರ್ದೇಶನಾಲಯ

ಒಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಬೇಕೆಂದರೆ, ಕನಿಷ್ಠ ಒಂಭತ್ತು ತಿಂಗಳ ತಯಾರಿ ಬೇಕು. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ (Department of Information and Broadcasting) ತನ್ನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ Directorate of International Film Festival (ಅಂತಾರಾಷ್ಟ್ರೀಯ ಚಲನಚಿತ್ರ ನಿರ್ದೇಶನಾಲಯ) ವಿಭಾಗವನ್ನು ಆರಂಭದಿಂದಲೇ ಚಾಲ್ತಿಯಲ್ಲಿಟ್ಟಿದೆ. ಈ Directorate of International Film Festival ವರ್ಷವಿಡೀ ಕಾರ್ಯತತ್ಪರವಾಗಿರುತ್ತದೆ. ಈ ಕಾರಣದಿಂದಾಗಿ ಜಗತ್ತಿನ ಶ್ರೇಷ್ಠ ಚಿತ್ರಗಳು ಈ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವೀಕ್ಷಿಸಲು, ಭಾರತದ ಮುಲೆಮೂಲೆಗಳಿಂದ ಸಾವಿರಾರು ಸಿನಿಮಾ ಮಂದಿ ಆಗಮಿಸುತ್ತಾರೆ. ಗೋವಾದಲ್ಲಿ ಒಂಭತ್ತು ದಿನಗಳ ಕಾಲ ಸಿನಿಮಾ ಹಬ್ಬವೇ ನಡೆಯುತ್ತದೆ. 

ಕನಿಷ್ಠ ಆರು ತಿಂಗಳ ತಯಾರಿ

ಬಿಫೆಸ್‌ 2026ರ ಸಂಚಿಕೆ ಜನವರಿಯಲ್ಲಿ ನಡೆಯಬೇಕಾದರೆ, ಕನಿಷ್ಠ ಆರು ತಿಂಗಳ ತಯಾರಿಯಾದರೂ ಬೇಕು. ಆದರೆ ಆ ಲೆಕ್ಕಕ್ಕೆ ಬಿಫೆಸ್ ಗೆ ಉಳಿದಿರುವುದು ಹೆಚ್ಚೆಂದರೆ ಮೂರು ತಿಂಗಳು. ನಂದಿನಿ ಲೇಔಟ್‌ ನಲ್ಲಿರುವ ಅಕಾಡೆಮಿ ಕಟ್ಟಡದಲ್ಲಿ Biffes Cell (ಬಿಫೆಸ್‌ ಕೋಶ) ಎಂಬ ವಿಭಾಗವಿದೆ. ಇತ್ತೀಚೆಗೆ ʼಈ ದಿನ.ಕಾಮ್‌ʼ ಪರವಾಗಿ ಅಕಾಡೆಮಿಗೆ ಭೇಟಿಕೊಟ್ಟಾಗ ಅಲ್ಲಿ ಕೇವಲ ಮೂರನೇ ದರ್ಜೆಯ ನೌಕರರನ್ನು ಹೊರತು ಪಡಿಸಿದರೆ, ಬೇರೆ ಯಾರೂ ಕಾಣಿಸಲಿಲ್ಲ. ಹಾಗೆಂದು ಇಡೀ ಅಕಾಡೆಮಿಯ ಅಧ್ಯಕ್ಷರು ಸದಸ್ಯರು ಗೋವಾಕ್ಕೇನೂ ಹೋಗಿಲ್ಲ. Biffes cell ನಲ್ಲಿ ಯಾವುದೇ ರೀತಿಯ ಚಟುವಟಿಕೆಯೂ ಕಾಣಿಸಿಲ್ಲ. ಕಳೆದ ವರ್ಷಗಳಲ್ಲಿ ಕಲಾತ್ಮಕ ನಿರ್ದೇಶಕರಾಗಿ ದುಡಿದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು, ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಕಲಾತ್ಮಕ ನಿರ್ದೇಶಕರ ಸಂಪರ್ಕದಲ್ಲಿದ್ದ ಕಾರಣ, ಹೇಗೋ ಚಿತ್ರಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಾಗದಂತೆ, ಉತ್ತಮ ಚಿತ್ರಗಳನ್ನೇ ಪ್ರೇಕ್ಷಕರಿಗೆ ತೋರಿಸಿದರು. ಹಾಗೆಂದು ಕಲಾತ್ಮಕ ನಿರ್ದೇಶಕರನ್ನು taken for granted ಆಗಬಾರದು. ಒಂದು ಗಟ್ಟಿಯಾದ ವ್ಯವಸ್ಥೆ ಇರಲೇಬೇಕು. ಯಾರಿರಲಿ, ಯಾರಿಲ್ಲದಿರಲಿ, ಚಿತ್ರೋತ್ಸವ ನಡೆಸಲು ಸರ್ಕಾರ, ಅಕಾಡೆಮಿ ಸಿದ್ಧವಿರಬೇಕು. ಅಂಥ ವ್ಯವಸ್ಥೆ ನಿರ್ಮಾಣವಾಗಬೇಕು. ಆದರೆ ಅಕಾಡೆಮಿಯಾಗಲಿ, ಸರ್ಕಾರವಾಗಲಿ ಇದರ ಬಗ್ಗೆ ಗಮನ ಹರಿಸಿದಂತಿಲ್ಲ. ಕಳೆದ ಸಂಚಿಕೆಯಲ್ಲಿ ಪ್ರೇಕ್ಷಕರೂ ಸಂತೋಷಗೊಂಡರು ನಿಜ, ಆದರೆ, ಬಿಫೆಸ್‌ ಗೆ ಬರಬೇಕಿದ್ದ ಹಲವಾರು ಮಂದಿ ಚಿತ್ರ ನಿರ್ದೇಶಕರು ಚಿತ್ರೋತ್ಸವಕ್ಕೆ ಬರಲು ಸಾಧ್ಯವೇ ಆಗಲಿಲ್ಲ.

ಉದ್ಘಾಟನೆಯಲ್ಲಿ ರಾಜಕಾರಣಿಗಳ ದರ್ಬಾರು

ಬೇರೆ ದೇಶಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ calendar of events ಮೊದಲೇ ತೀರ್ಮಾನವಾಗಿರುವುದರಿಂದ ಉದ್ಘಾಟನೆಗೆ ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಸಕು ಕಲಾವಿದರು ಆಗಮಿಸಿ ಚಿತ್ರೋತ್ಸವಕ್ಕೆ ಕಳೆ ಕಟ್ಟುತ್ತಾರೆ. ಬಿಫೆಸ್‌ ನಲ್ಲಿ ಕೊನೆಯ ಕ್ಷಣದವರೆಗೂ, ಉದ್ಘಾಟಕರಿಗಾಗಿ ಹುಡುಕಾಟ ನಡೆದೇ ಇರುತ್ತದೆ. ಇದೊಂದು ದುರಂತ. ಬಿಫೆಸ್‌ ಉದ್ಘಾಟನೆಯಲ್ಲಿ ರಾಜಕಾರಣಿಗಳದೇ ಮೇಲುಗೈ ಆಗಿ, ಚಿತ್ರೋತ್ಸವದ ಗುಣಮಟ್ಟವನ್ನೇ ಸಂಶಯಿಸುವಂಥ ವಾತಾವರಣ ನಿರ್ಮಾಣವಾಗುತ್ತದೆ. ಇದಕ್ಕಾಗಿ ಕೋಟಿಗಟ್ಟಲೆ ಹಣ ಕೂಡ ವ್ಯಯಮಾಡಲಾಗುತ್ತದೆ. ಅದು ತೆರಿಗೆದಾರರ ಹಣವಲ್ಲವೇ? ಅದರ ದುರೂಪಯೋಗ ಕೂಡ ತಪ್ಪಲ್ಲವೇ? ಈ ಪ್ರಶ್ನೆ ಯಾರನ್ನೂ ಕಾಡಿದಂತೆ ಕಾಣಿಸುತ್ತಿಲ್ಲ. 

BIFS 08

ಬಿಫೆಸ್‌ ನಡೆಸಲು ಆರು ತಿಂಗಳ ತಯಾರಿ ಬೇಕು ಎಂದು ಮೊದಲೇ ಸೂಚಿಸಲಾಗಿದೆ. ಅಂದರೆ, ಚಿತ್ರೋತ್ಸವದ ಆರು ತಿಂಗಳ ಮೊದಲೇ ಕಲಾತ್ಮಕ ನಿರ್ದೇಶಕರ ನೇಮಕ ಮಾಡಿ, ಸರ್ಕಾರ ಆದೇಶ ಹೊರಡಿಸಬೇಕಾಗುತ್ತದೆ. ಅವರು ತಮ್ಮ ತಂಡದ ನೆರವಿನಿಂದ ಜಗತ್ತಿನ ವಿವಿಧ ರಾಷ್ಟ್ರಗಳಿಂದ ಚಿತ್ರ, ಅದರ ನಿರ್ದೇಶಕರನ್ನು ಹುಡುಕಿ, ಸಂಪರ್ಕಿಸಿ ಅವರು ಚಿತ್ರೋತ್ಸವದಲ್ಲಿ ಭಾಗವಹಿಸುವಂತೆ ಮಾಡಬೇಕು. ಮೇ ತಿಂಗಳಲ್ಲಿ ಕಾನ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೋಗಿ ಬಂದ ಅಕಾಡೆಮಿ ಪ್ರತಿನಿಧಿಗಳಿಗೆ ಇವೆಲ್ಲದರ ಅರಿವಿದೆ. ಆದರೆ, ಮೇ ತಿಂಗಳಿಂದ ಆರು ತಿಂಗಳಾದರೂ, ಯಾರೂ, ಈ ಬಗ್ಗೆ ಚಿಂತಿಸಿದಂತೆ ಕಾಣುತ್ತಿಲ್ಲ. ಹಾಗಾದರೆ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರ ಕರ್ತವ್ಯವೇನು? ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ. 

ಅಕಾಡೆಮಿ ರೂಪುಗೊಂಡಿದ್ದು

ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಗೆ ಒಂದು ಇತಿಹಾಸವಿದೆ. ತೊಂಭತ್ತರ  ದಶಕದಲ್ಲಿ ಕನ್ನಡ ಚಿತ್ರರಂಗದ ಅಭ್ಯುದಯಕ್ಕಾಗಿ ಸರ್ಕಾರವು ಪತ್ರಕರ್ತ ವಿ.ಎನ್.‌ ಸುಬ್ಬರಾವ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರೂಪಿಸಿತು. ಆ ಸಮಿತಿ ಇಡೀ ದಕ್ಷಿಣ ಭಾರತದ ಸಿನಿಮಾ ತಯಾರಿಸುವ ರಾಜ್ಯಗಳನ್ನು ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಕರ್ನಾಟಕದ ಪರಿಸ್ಥಿತಿಗೆ ಹೊಂದುವಂಥ ವಿಸ್ತೃತ ವರದಿಯೊಂದನ್ನು 1994ರಲ್ಲಿ ನೀಡಿತು. ಈ ಸಮಿತಿ ಮಾಡಿದ ಶಿಫಾರಸ್ಸುಗಳ ಪೈಕಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸ್ಥಾಪನೆಯೂ ಒಂದು. ಆದರೆ ನಮ್ಮ ರಾಜ್ಯ ಸರ್ಕಾರ ಅಂಗೀಕರಿಸಿದ ಸುಬ್ಬರಾವ್‌ ಸಮಿತಿ ಸಬ್ಸಿಡಿ (ಸಹಾಯಧನ)ದ ಬಗ್ಗೆ ಹೆಚ್ಚಿನ ಗಮನ ಹರಿಸಿದಂತೆ ಕಾಣುತ್ತಿದೆ. ಆದರೆ ಈ ಸಮಿತಿಯ ಶಿಫಾರಸ್ಸುಗಳನ್ನು ಗಮನಿಸಿದ ನೆರೆಯ ಕೇರಳ ರಾಜ್ಯ ತಾನು ಕೇರಳ ಚಲನಚಿತ್ರ ಅಕಾಡೆಮಿ ಸ್ಥಾಪಿಸಿಕೊಂಡಿತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಂತಿಮವಾಗಿ ಸ್ಥಾಪನೆಯಾದದ್ದು ಸುಬ್ಬರಾವ್‌ ಸಮಿತಿ ವರದಿ ನೀಡಿದ ಹದಿನೈದು ವರ್ಷದ ನಂತರ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಟಿ.ಎಸ್.‌ ನಾಗಾಭರಣ ಅಧ್ಯಕ್ಷರಾದರು. ಆಗ ಬಿಫೆಸ್‌ನ್ನು ಸರ್ಕಾರದಿಂದ ಅಕಾಡೆಮಿಗೆ ವರ್ಗಾಯಿಸಿದ್ದೇ ಅಲ್ಲದೆ, ಆ ವರ್ಷ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಐದು ಕೋಟಿ ಹಣವನ್ನು ನೀಡಿದರು ಎಂದು ಸುಚಿತ್ರಾ ಅಕಾಡೆಮಿಯನ್ನು ಮುನ್ನಡೆಸಿದ ಎಚ್.‌ ಎನ್.‌ ನರಹರಿರಾವ್‌ ನೆನಪಿಸಿಕೊಳ್ಳುತ್ತಾರೆ.

ಕಳೆದ ಕೆಲವು ವರ್ಷಗಳ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಡವಳಿಕೆ ಕಂಡರೆ ಅಕಾಡೆಮಿ ರಾಜಕೀಯ ಕಾರಣಗಳಿಗಾಗಿ, ರಾಜಕೀಯ ಪಕ್ಷಗಳ ಅತೃಪ್ತ ಕಾರ್ಯಕರ್ತರನ್ನು ರಮಿಸುವ ಗಂಜಿಕೇಂದ್ರವಾಗಿರುವಂತೆ ಕಾಣಿಸುತ್ತಿದೆ. ಹಿಂದಿನ ಕೆಲವು ಅಧ್ಯಕ್ಷರು, ನಾಗಾಭರಣ, ಎಸ್.‌ ವಿ. ರಾಜೇಂದ್ರಸಿಂಗ್‌ ಬಾಬು, ನಾಗತಿಹಳ್ಳಿ ಚಂದ್ರಶೇಖರ್‌ ಮುಂತಾದವರು ಇರುವುದಾದರೂ ಗೊತ್ತಾಗುತ್ತಿತ್ತು. ಅಕಾಡೆಮಿಯು ಅಕಾಡೆಮಿಕ್‌ ಅದ ಕೆಲಸಗಳನ್ನು ಮಾಡುತ್ತಿದ್ದವು. ಅವರಿಗೆ ನೆರವಾಗಲು, ಜಗನ್ನಾಥ್‌ ಪ್ರಕಾಶ್‌ರಂಥ ರಿಜಿಸ್ಟ್ರಾರ್‌ಗಳಿದ್ದರು. ಈಗ ಸಾಧುಕೋಕಿಲ ಅವರ ಅವಧಿಯಲ್ಲಿ ಕಾಣುತ್ತಿರುವುದು ಅವರ ಬೀಗ ಹಾಕಿದ ಕೊಠಡಿ ಮಾತ್ರ. ಬಿಫೆಸ್‌ ಒಂದರ್ಥದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ Flagship Project. ಕಳೆದ ಕೆಲವು ವರ್ಷಗಳಿಂದ ಅಕಾಡೆಮಿ ಶ್ರದ್ಧೆಯಿಂದ ನಡೆಸುತ್ತಿರುವ ಒಂದೇ ಕಾರ್ಯಕ್ರಮವೆಂದರೆ ಅದು, ಬಿಫೆಸ್‌ ಮಾತ್ರ. ಏಕೆ? ಎಂದು ಪ್ರತ್ಯೇಕವಾಗಿ ಹೇಳಬೇಕಾಗೇನೂ ಇಲ್ಲ. ಅಕಾಡೆಮಿಗೆ ಈ ಚಲನಚಿತ್ರೋತ್ಸವಕ್ಕೆ ಸರ್ಕಾರ ಬೇರೆಯದೇ ಹಣವನ್ನು ಮೀಸಲಿಟ್ಟು ಕೊಡುತ್ತದೆ. ಆದರೆ ಸರ್ಕಾರದಿಂದ ಈ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲು, ಅಕಾಡೆಮಿ ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಇಷ್ಟೆಲ್ಲ ಆಗಿ ಬಿಫೆಸ್‌ನ್ನು ಯಶಸ್ವಿಯಾಗಿ ನಡೆಸುವುದೆಂದರೆ ಅದೊಂದು ಸವಾಲೇ ಸರಿ.

ಇದನ್ನೂ ಓದಿ ನಾವು ಸ್ವತಃ ಸಮಸ್ಯೆಗಳನ್ನು ಸೃಷ್ಟಿಸಿ ಅವುಗಳಿಗೆ ಪರಿಹಾರ ಹುಡುಕುವ ಪ್ರಾಣಿಗಳು -ಶುಭಾಂಶು ಶುಕ್ಲಾ

ಸರ್ಕಾರ ಕೂಡಲೇ ಯೋಚಿಸಬೇಕಿರುವ ಸಂಗತಿಯೆಂದರೆ, ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸೂಕ್ತ ಚಿಕಿತ್ಸೆ ನಡೆಸುವುದು ಮತ್ತು ಉಳಿದ ಅಕಾಡೆಮಿಗಳ ಹಾಗೆ ಅಕಾಡೆಮಿಕ್‌ ಕಾರ್ಯಕ್ರಮಗಳನ್ನು ನಡೆಸುವಂಥ ವಾತಾವರಣ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿಯೂ ನಿರ್ಮಿಸಿವುದು. ಹಾಗೂ ಬಿಫೆಸ್‌ಗೆ ಅತಿ ಕಷ್ಟದಿಂದ ದಕ್ಕಿರುವ (International Federation of Film Producers ́ Association-FIAPF) ನ ಹಲವಾರು ನಿಯಮಗಳನ್ನು ಪಾಲಿಸಿ ಅದನ್ನು ಉಳಿಸಿಕೊಳ್ಳುವುದು. ಹಾಗಾದಾಗ ಮಾತ್ರ, ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸಿದ್ದಕ್ಕೆ, ಬಿಫೆಸ್‌ ಅನ್ನು ಅಕಾಡೆಮಿ ಮಡಿಲಿಗೆ ಹಾಕಿದ್ದಕ್ಕೆ ಅರ್ಥ ಬರುತ್ತದೆ. ಕೇವಲ ನಟ್‌ ಮತ್ತು ಬೋಲ್ಟ್ ಗಳನ್ನು ಬಿಗಿ ಮಾಡಿದರೆ ಸಾಲದು, ಚಿತ್ರರಂಗದ ತಿಳಿವಳಿಕೆ ಇರುವವರು. ಚಿತ್ರರಂಗದ ಮುಂದಿನ ದಿನಗಳನ್ನು ನೋಡುವ ದೂರದೃಷ್ಟಿಯುಳ್ಳವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಮಾತ್ರ, ಅಕಾಡೆಮಿಯನ್ನು ಗ್ರಹಣಮುಕ್ತ ಮಾಡಲು ಸಾಧ್ಯ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...