ರಾಜ್ಯದ ಕಾಂಗ್ರೆಸ್ ಸರ್ಕಾರವು ‘ಪಾನೀಯದಲ್ಲಿನ ಆಲ್ಕೋಹಾಲ್’ (Alcohol-in-Beverage – AIB) ಆಧಾರಿತ ಅಬಕಾರಿ ಸುಂಕ ನೀತಿಯನ್ನು ಪರಿಚಯಿಸಿದೆ. ಎಐಬಿ ತೆರಿಗೆ ಪದ್ದತಿ ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯವೂ ಕರ್ನಾಟಕವೇ ಆಗಲಿದೆ.
ಮಾರ್ಚ್ 6ರಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ, “ಮದ್ಯದ ಬೆಲೆ ನಿಗದಿ ಮೇಲಿನ ಸರ್ಕಾರದ ನಿಯಂತ್ರಣವನ್ನು ಹೊಸ ನೀತಿಯು ರದ್ದುಗೊಳಿಸುತ್ತದೆ. ರಾಜ್ಯ ಸರ್ಕಾರವು ಹೆಚ್ಚಿನ ಆದಾಯವನ್ನು ಕ್ರೋಢೀಕರಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ಡಿಸ್ಟಿಲರ್‌ಗಳೇ (ಮದ್ಯ ತಯಾರಕರು) ತಮ್ಮ ಉತ್ಪನ್ನಗಳು ಯಾವ ಸ್ಲ್ಯಾಬ್‌ಗಳ ಅಡಿಯಲ್ಲಿ ಬರಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ” ಎಂದು ವಿವರಿಸಿದ್ದಾರೆ.
“ಎಐಬಿ ನೀತಿಯು ಆಲ್ಕೋಹಾಲ್ ತೆರಿಗೆ ವಿಧಿಸಲು ಜಾಗತಿಕವಾಗಿ ಮಾನ್ಯತೆ ಪಡೆದ ಅತ್ಯುತ್ತಮ ಮಾನದಂಡವಾಗಿದೆ. ಏಕೆಂದರೆ, ಇದು ನೇರವಾಗಿ ಆಲ್ಕೋಹಾಲ್ ಅಂಶವನ್ನೇ ಗುರಿಯಾಗಿಸುತ್ತದೆ. ಇದರರ್ಥ, ಒಂದು ಮದ್ಯದ ಬ್ರಾಂಡ್‌ನಲ್ಲಿರುವ ಆಲ್ಕೋಹಾಲ್ ಪ್ರಮಾಣವು ಅದರ ಮೇಲೆ ವಿಧಿಸುವ ಸುಂಕವನ್ನು ನಿರ್ಧರಿಸುತ್ತದೆ. ಇದು ಪ್ರಸ್ತುತ ಇರುವ ತೆರಿಗೆ ಪದ್ಧತಿಯನ್ನು ಕೊನೆಗೊಳಿಸಲಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ ಮದ್ಯದ ಉತ್ಪನ್ನಗಳು 16 ಸ್ಲ್ಯಾಬ್‌ಗಳ ಅಡಿಯಲ್ಲಿ ಬರುತ್ತವೆ. ಮದ್ಯ ತಯಾರಕರು ನಿರ್ಧರಿಸುವ ‘ಘೋಷಿತ ಬೆಲೆ’ ಆಧಾರದ ಮೇಲೆ ಉತ್ಪನ್ನವನ್ನು ನಿರ್ದಿಷ್ಟ ಸ್ಲ್ಯಾಬ್‌ಗೆ ಸೇರಿಸಲಾಗುತ್ತಿತ್ತು. ಸರ್ಕಾರವು ವಿಧಿಸುವ ‘ಹೆಚ್ಚುವರಿ ಅಬಕಾರಿ ಸುಂಕ’ವು (AED) ಪ್ರತಿ ಲೀಟರ್ ಉತ್ಪನ್ನದ ಬೆಲೆಯನ್ನು ಅವಲಂಬಿಸಿತ್ತು. ಇದರಿಂದಾಗಿ ಪ್ರೀಮಿಯಂ (ದುಬಾರಿ) ಮದ್ಯದ ಬೆಲೆಗಳು ತುಂಬಾ ಹೆಚ್ಚಾಗಿದ್ದವು.
ಈಗ ಪರಿಚಯಿಸಲಾಗಿರುವ ಹೊಸ ನೀತಿಯು, ಮದ್ಯದ ಬೆಲೆಯನ್ನು ನಿಯಂತ್ರಿಸುವುದರ ಜೊತೆಗೆ, ಸರ್ಕಾರಕ್ಕೆ ಆಧಾರ ತಂದುಕೊಡುತ್ತದೆ ಎಂದು ಸರ್ಕಾರ ನಂಬಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಅಬಕಾರಿ ಸುಂಕ ಸಂಗ್ರಹಕ್ಕೆ ಸಂಬಂಧಿಸಿದ ಸ್ಲ್ಯಾಬ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಸರ್ಕಾರ ಯೋಜಿಸಿದೆ. 2026-27ರ ಹಣಕಾಸು ವರ್ಷದಲ್ಲಿ, ಸರ್ಕಾರವು ಹಲವಾರು ಸ್ಲ್ಯಾಬ್‌ಗಳನ್ನು ವಿಲೀನಗೊಳಿಸಿ ಅವುಗಳ ಸಂಖ್ಯೆಯನ್ನು 16ರಿಂದ ಎಂಟಕ್ಕೆ ಇಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಕುರಿತಾದ ಅಧಿಸೂಚನೆಯು ಮುಂದಿನ ವಾರದಲ್ಲಿ ಹೊರಬೀಳುವ ಸಾಧ್ಯತೆಯಿದೆ.
“ನಾವು ಹೊಸ ನೀತಿಯನ್ನು ಒಂದೇ ಬಾರಿಗೆ ಜಾರಿಗೊಳಿಸಲು ಸಾಧ್ಯವಿಲ್ಲ. ಏಕೆಂದರೆ, ಅದು ಪ್ರತಿಕೂಲ ಪರಿಣಾಮ ಬೀರಬಹುದು. ನಾವು ಇದನ್ನು ಹಂತ ಹಂತವಾಗಿ ಜಾರಿಗೊಳಿಸುತ್ತೇವೆ” ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
“ಪ್ರಸ್ತುತ, ಕಡಿಮೆ ಬೆಲೆಯ ಮ್ಯಾಕ್‌ಡೋವೆಲ್ಸ್ ಮತ್ತು ಹೆಚ್ಚಿನ ಬೆಲೆಯ ಬ್ಲೂ ಲೇಬಲ್‌ನಂತಹ ಮದ್ಯಗಳಿಗೆ ವಿಧಿಸುವ ಸುಂಕವು ಅವುಗಳ ಘೋಷಿತ ಬೆಲೆಯ ಆಧಾರದ ಮೇಲೆ ಭಿನ್ನವಾಗಿರುತ್ತದೆ. ಆದರೆ, ಇವೆರಡರಲ್ಲೂ 42%ರಷ್ಟು ಆಲ್ಕೋಹಾಲ್ ಇರುತ್ತದೆ. ಹೊಸ ಪದ್ಧತಿಯಲ್ಲಿ, ಘೋಷಿತ ಬೆಲೆಯನ್ನು ಪರಿಗಣಿಸದೆ ಇವೆರಡಕ್ಕೂ ಒಂದೇ ರೀತಿಯ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುತ್ತದೆ” ಎಂದು ಅವರು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?
ಮದ್ಯದ ಮೇಲೆ ವಿಧಿಸುವ ಅಬಕಾರಿ ಸುಂಕದಿಂದ ಕರ್ನಾಟಕವು ಗಣನೀಯ ಆದಾಯವನ್ನು ಪಡೆಯುತ್ತದೆ. 2026-27ರ ಹಣಕಾಸು ವರ್ಷದಲ್ಲಿ ಸರ್ಕಾರವು 45,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹಾಕಿಕೊಂಡಿದೆ. ಈ ಬದಲಾವಣೆಯು ಆದಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲವಾದರೂ, ಎಐಬಿ ಆಧಾರಿತ ಸುಂಕವು ಸಂಪೂರ್ಣವಾಗಿ ಜಾರಿಯಾದ ನಂತರ ಆದಾಯದಲ್ಲಿ ಬದಲಾವಣೆಯಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
“ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಸುಮಾರು 60%ರಷ್ಟು ಅಬಕಾರಿ ಆದಾಯವು ಮೊದಲ ಕೆಲವು ಸ್ಲ್ಯಾಬ್‌ಗಳಿಂದ (ಅಗ್ಗದ ಮದ್ಯ) ಬರುತ್ತದೆ. ಅಗ್ಗದ ಮದ್ಯದ ಮೇಲಿನ ಸುಂಕವು ಆದಾಯದ ಬಹುಪಾಲು ಪಾಲನ್ನು ನೀಡುತ್ತಿತ್ತು. ಇನ್ನೊಂದೆಡೆ, ಪ್ರೀಮಿಯಂ ಮದ್ಯವು ಹೆಚ್ಚಿನ ಆದಾಯವನ್ನು ನೀಡುತ್ತಿರಲಿಲ್ಲ ಮತ್ತು ಹೆಚ್ಚಿನ ಬೆಲೆಯಿಂದಾಗಿ ಅದರ ಮಾರಾಟವೂ ಕುಸಿದಿತ್ತು” ಎಂದು ಅಧಿಕಾರಿಗಳು ವಿವರಿಸಿದ್ದಾರೆ.
“ಎಐಬಿ ಸುಂಕವು ಪ್ರೀಮಿಯಂ ಮದ್ಯದ ಮಾರಾಟವನ್ನು ಹೆಚ್ಚಿಸಲಿದೆ. ಇದರಿಂದ ಆ ವಿಭಾಗದಿಂದ ಆದಾಯ ಹೆಚ್ಚಾಗಲಿದೆ ಎಂಬುದು ನಮ್ಮ ನಿರೀಕ್ಷೆ. ಪ್ರೀಮಿಯಂ ಮದ್ಯದ ಬೆಲೆಗಳಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ವಿವಿಧ ಬೆಲೆ ಸ್ಲ್ಯಾಬ್‌ಗಳನ್ನು ವಿಲೀನಗೊಳಿಸುವುದರಿಂದ ಮದ್ಯದ ದರಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಹೊಸ ಸ್ಲ್ಯಾಬ್ ರಚನೆಯ ಅಧಿಸೂಚನೆ ಹೊರಬಂದ ನಂತರವೇ ಸ್ಪಷ್ಟವಾಗಲಿದೆ” ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.




