ಪ್ರಿಯಾಂಕ್ ಖರ್ಗೆ ಅವರ ಮೇಲಾದ ವೈಯಕ್ತಿಕ ನಿಂದನೆಗಳನ್ನು ಖಂಡಿಸಿ ಕೃಷ್ಣ ಬೈರೇಗೌಡರು ಫೇಸ್‌ಬುಕ್ ಪೋಸ್ಟ್ ಹಾಕಿದ ಕೂಡಲೇ, 'ಕೃತಕ ಅಭಿಪ್ರಾಯ' ಸೃಷ್ಟಿಸಲು ಆರ್‌ಎಸ್‌ಎಸ್ ಯತ್ನಿಸಿದೆ. ಸಂಘಪರಿವಾರದ ಕಾರ್ಯವಿಧಾನ ಕುರಿತು 'ಈದಿನ ಡಾಟ್ ಕಾಮ್' ನಡೆಸಿದ ಅಧ್ಯಯನ ವರದಿ ಇಲ್ಲಿದೆ.
“ಸಂಪುಟ ಸಹೋದ್ಯೋಗಿ, ಮಿತ್ರ ಶ್ರೀ ಪ್ರಿಯಾಂಕ್ ಖರ್ಗೆಯವರನ್ನು ನಿಂದಿಸುವುದು ಮತ್ತು ಅವರ ಕುಟುಂಬಸ್ಥರ ಮೇಲೆ ಅಸಭ್ಯವಾಗಿ ದಾಳಿ ನಡೆಸುತ್ತಿರುವುದು ಖಂಡನೀಯ. ಅವರ ಜೊತೆಗೆ ನಾವೆಲ್ಲರೂ ಇದ್ದೇವೆ. ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಡೆಸುವ, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಯಾವುದೇ ಸಂಘಟನೆಗಳಿಗೆ ಸರ್ಕಾರಿ ಜಾಗ ಬಳಸಿಕೊಳ್ಳಲು ಅವಕಾಶ ಇರಬಾರದು. ಬಿಜೆಪಿ ಪರಿವಾರದವರು ಸಾರ್ವಜನಿಕ ವಾಗ್ವಾದದ ಮಟ್ಟವನ್ನು ಬಹಳ ಕೀಳುಮಟ್ಟಕ್ಕೆ ಇಳಿಸಿದ್ದಾರೆ. ಅದರ ಭಾಗವಾಗಿಯೇ ಪ್ರಿಯಾಂಕ್ ಖರ್ಗೆಯವರನ್ನು ಫೋನಿನ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಕೊಡುವುದು, ನಿಂದಿಸುವುದು ಹಾಗೂ ಟ್ರೋಲ್ ಮಾಡುವುದು ಸಭ್ಯತೆಯಲ್ಲ..”
ಸಚಿವ ಕೃಷ್ಣ ಬೈರೇಗೌಡ ಅವರು ಅಕ್ಟೋಬರ್ 16ರ ಸಂಜೆ 7ರ ವೇಳೆಗೆ ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್ ಇದಾಗಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿ, ಅಶ್ಲೀಲವಾಗಿ ನಿಂದಿಸಿರುವುದನ್ನು ಖಂಡಿಸಿ, ಕೃಷ್ಣ ಬೈರೇಗೌಡರು ಪ್ರತಿಕ್ರಿಯಿಸಿದ್ದೇ ತಡ, ವಿಚಿತ್ರಕಾರಿಯಾದ ಕಮೆಂಟ್‌ಗಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರಲಾರಂಭಿಸಿದವು.
ಕಮೆಂಟ್ ಮಾಡುತ್ತಿದ್ದವರ ವರ್ತನೆಗಳು ಆಶ್ಚರ್ಯಕರವಾಗಿಯೂ ಅನುಮಾನಾಸ್ಪದವಾಗಿಯೂ ಇದ್ದವು. ಈ ಪ್ರತಿಕ್ರಿಯೆಗಳನ್ನು ನೋಡಿ, “ಅರೆ, ಆರ್‌ಎಸ್‌ಎಸ್‌ನವರು ನನ್ನ ಪರವಾಗಿದ್ದಾರೆ. ನಾನು ಪ್ರಿಯಾಂಕ್ ಖರ್ಗೆ ಪರವಾಗಿ ಮಾತನಾಡುವುದನ್ನು ಬಯಸುವುದಿಲ್ಲವಷ್ಟೇ. ನನ್ನ ಪರ ಇರುವವರನ್ನು ವಿರೋಧಿಗಳನ್ನಾಗಿ ಮಾಡಿಕೊಳ್ಳಬೇಕೆ?” ಎಂದು ಒಂದು ಕ್ಷಣ ಕೃಷ್ಣಬೈರೇಗೌಡರಿಗೂ ಅನಿಸುವಂತಿದ್ದವು. ಆದರೆ ಇಲ್ಲಿ ಕಮೆಂಟ್ ಮಾಡಿರುವವರ ಮೂಲಗಳನ್ನು ಹುಡುಕುತ್ತಾ ಹೊರಟಾಗ, “ಕೃತಕ ಅಭಿಪ್ರಾಯ ಸೃಷ್ಟಿ”ಯ ಟೂಲ್‌ಕಿಟ್ ಹೇಗೆ ವ್ಯವಸ್ಥಿತವಾಗಿ ಕೆಲಸ ಮಾಡಿದೆ ಎಂಬುದು ಬೆಳಕಿಗೆ ಬರುತ್ತದೆ. ಪೋಸ್ಟ್‌ಗೆ ಬಂದಿರುವ ಕಮೆಂಟ್‌ಗಳ ಅಸಲಿಯತ್ತನ್ನು ಬೆತ್ತುಹತ್ತಿದ ‘ಈದಿನ ಡಾಟ್ ಕಾಮ್’ಗೆ ಕೆಲವು ಸಂಗತಿಗಳು ಗೊತ್ತಾದವು. “ಇದು ಸಂಘಪರಿವಾರದ ವ್ಯವಸ್ಥಿತ ಸಂಚು” ಎಂದು ಸ್ಪಷ್ಟವಾಯಿತು.

ಈ ಸುದ್ದಿ ಬರೆಯುವ ವೇಳೆಗೆ 104 ಕಮೆಂಟ್‌ಗಳು ಸದರಿ ಪೋಸ್ಟ್‌ಗೆ ಬಂದಿದ್ದು, ರಿಪ್ಲೆ ಕಮೆಂಟ್ಸ್ ಮತ್ತು ಒಂದೇ ಖಾತೆಯಿಂದ ಬಂದಿರುವ ಪುನರಾವರ್ತಿತ ಪ್ರತಿಕ್ರಿಯೆಗಳನ್ನು ಹೊರತುಪಡಿಸಿ, 74 ಖಾತೆಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ‘ಈದಿನ ಡಾಟ್ ಕಾಮ್’ ಮಾಡಿದೆ. ಇವುಗಳ ಪೈಕಿ 32 ಪ್ರೊಫೈಲ್ ಅನುಮಾನಾಸ್ಪದವಾಗಿವೆ. ಇವುಗಳು ಬಿಜೆಪಿ ಮತ್ತು ಸಂಘಪರಿವಾರದ ಟೂಲ್‌ಕಿಟ್‌ನ ಭಾಗವಾಗಿರಬಹುದು ಎಂದು ಮೇಲುನೋಟಕ್ಕೆ ಅನಿಸುತ್ತದೆ.
ಇದನ್ನೂ ಓದಿರಿ: RSS- ನೂರು ವರ್ಷಗಳು : ಬಿಟ್ಟರೂ ಬಿಡದ ತಾತ್ವಿಕ ಪ್ರಶ್ನೆಗಳು
“ಹಿಡನ್ ಅಜೆಂಡಾಗಳಿಗಾಗಿ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿ, ಅಲ್ಲಿ ಕೆಲವು ಬಾಡಿಗೆ ಕಮೆಂಟುದಾರರನ್ನು ಸೇರಿಸಿ, ನರೇಟಿವ್‌ವೊಂದನ್ನು ಅವರ ಕೈಗಿಡಲಾಗುತ್ತದೆ. ಆ ನರೇಟಿವ್‌ಗೆ ತಕ್ಕಂತೆ ಕೃತಕ ಅಭಿಪ್ರಾಯ ಸೃಷ್ಟಿಯ ಕೆಲಸ ನಡೆಯುತ್ತದೆ. ಇದಕ್ಕೆ ಇಂತಿಷ್ಟು ಹಣವನ್ನೂ ಪರಿವಾರ ಪಾವತಿಸುತ್ತದೆ. ಸಾಮಾನ್ಯವಾಗಿ ಒಂದು ಕಮೆಂಟ್‌ಗೆ ಎರಡು ರೂಪಾಯಿ ಕೊಡಲಾಗುತ್ತದೆ” ಎಂಬ ಆರೋಪಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಚಾಲ್ತಿಯಲ್ಲಿದ್ದು, ಕೃಷ್ಣ ಬೈರೇಗೌಡರಿಗೆ ಪ್ರತಿಕ್ರಿಯಿಸಿದ ಅನೇಕರು ‘ಟೂಲ್‌ಕಿಟ್‌ನ ಸದಸ್ಯರಿರಬಹುದು’ ಎಂದು ಅನುಮಾನಿಸಲು ಅವಕಾಶವಿದೆ.
ಕೃಷ್ಣ ಅವರಿಗೆ ಕಮೆಂಟ್ ಮಾಡಿರುವ ಬಹುತೇಕರು, “ನೀವು ಒಳ್ಳೆಯವರು, ನಿಮಗೆ ನಮ್ಮ ಬೆಂಬಲವಿದೆ. ಆದರೆ ನೀವು ಖರ್ಗೆಯವರನ್ನು ಸಮರ್ಥಿಸಬೇಡಿ, ಅವರು ಕೆಟ್ಟವರು” ಎಂಬ ನರೇಟಿವ್ ಹರಿಬಿಟ್ಟಿದ್ದಾರೆ. ಇದರ ಹಿಂದೆ ಸಂಘಪರಿವಾರದ ವ್ಯವಸ್ಥಿತ ಸಂಚು ಇದ್ದು, ಪ್ರಿಯಾಂಕ್ ಅವರ ಜೊತೆ ಕಾಂಗ್ರೆಸ್‌ನ ಯಾರೊಬ್ಬರೂ ಇಲ್ಲ ಎಂದು ಬಿಂಬಿಸುವ ವಿಕೃತ ಪ್ರಯತ್ನ ನಡೆದಿದೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.
ಸಂಘಪರಿವಾರವು ತಂತ್ರಗಾರಿಕೆಯನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ತಿಳಿಯಲು ಅಲ್ಲಿ ಬಂದಿರುವ ಕಮೆಂಟ್‌ಗಳು ಸಾಕಾಗುತ್ತವೆ. ಕೆಲವು ಕಮೆಂಟ್‌ಗಳು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರೆ, ಬಹುತೇಕ ಕಮೆಂಟ್‌ಗಳು ಕೃಷ್ಣರನ್ನು ಹೊಗಳಿ, ಪ್ರಿಯಾಂಕ್‌ರನ್ನು ತೆಗಳಲು ಸೀಮಿತವಾಗಿವೆ. ಒಂದೇ ತತ್ವ, ಒಂದೇ ಪಕ್ಷ, ಒಂದೇ ಸಂಸ್ಕೃತಿ, ಒಂದೇ ಅಭಿಪ್ರಾಯವಿರುವ ಕಮೆಂಟ್! ವಿದ್ಯಮಾನವೊಂದರ ಸುತ್ತ ಸೂಚಿತ ಪ್ಯಾಟರ್ನ್ ಸೃಷ್ಟಿಸಿದ ಬಳಿಕ, ಸಂಘಪರಿವಾರವನ್ನು ನಂಬುವ ಇತರರೂ ಸ್ವಯಂಪ್ರೇರಿತವಾಗಿ ಅದೇ ನರೇಟಿವ್‌ಗೆ ಪ್ರೇರೇಪಿತರಾಗಿ ಪ್ರತಿಕ್ರಿಯಿಸತೊಡಗುತ್ತಾರೆ. ಕೃಷ್ಣಬೈರೇಗೌಡರ ಪೋಸ್ಟ್ ವಿಚಾರದಲ್ಲೂ ಆಗಿರುವುದು ಇದೇ.
ಪ್ರಿಯಾಂಕ್‌ರನ್ನು ತೆಗಳಿ, ಕೃಷ್ಣರನ್ನು ಹೊಗಳಿರುವಂತಹ ನಕಲಿ ಅಥವಾ ಲಾಕ್ ಆಗಿರುವ 32 ಖಾತೆಗಳನ್ನು ಈದಿನ ಗುರುತಿಸಿದೆ. ಬಹುತೇಕ ನಕಲಿ ಖಾತೆಗಳಲ್ಲಿ ಕಡಿಮೆ ಸಂಖ್ಯೆಯ ಫ್ರೆಂಡ್ಸ್ ಇರುವುದು ಕಂಡುಬಂದಿದೆ. ಸಾಮಾನ್ಯವಾಗಿ ನಕಲಿ ಖಾತೆಗಳು ‘ಪ್ರೊಫೈಲ್ ಲಾಕ್’ ಸ್ವರೂಪದಲ್ಲಿರುತ್ತವೆ. ಲಾಕ್ ಆದ ಪ್ರೊಫೈಲ್‌ಗಳೆಲ್ಲವೂ ನಕಲಿ ಅಲ್ಲವಾದರೂ ಅವುಗಳು ಕಮೆಂಟ್‌ಗಳಲ್ಲಿ ವ್ಯಕ್ತಪಡಿಸುವ ವಿಚಾರಗಳು, ಬಳಸುವ ಭಾಷೆ ಅನುಮಾನಗಳನ್ನು ಮೂಡಿಸುತ್ತವೆ. ಮುಖವಾಡ ಧರಿಸಿದವರಿಗೆ ಮಾತ್ರ ಕಾನೂನಿನ ಭಯ ಇರುವುದಿಲ್ಲ. ಅಂತಹ 32 ಖಾತೆಗಳಿಂದ ಆಯ್ದ ಕೆಲವು ಕಮೆಂಟ್‌ಗಳನ್ನೇ ನೋಡಿರಿ:

Kg basavaraj ಎಂಬ ಖಾತೆಯ ಪ್ರತಿಕ್ರಿಯೆ ಹೀಗಿದೆ: “ನಿಮ್ಮಂತ ಒಳ್ಳೆಯ ವ್ಯಕ್ತಿಗಳು ಇಂಥ ವಿಚಾರಕ್ಕೆ ತಲೆ ಹಾಕಬಾರದು. ಏಕೆಂದರೆ ಆರ್ ಎಸ್ ಎಸ್ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ”.
ಈ ಪ್ರೊಫೈಲ್ ಪರೀಕ್ಷಿಸಲಾಯಿತು. ಇದು 2023ರಲ್ಲಿ ರಚನೆಯಾಗಿದ್ದು, 23 ಜನ ಸ್ನೇಹಿತರಷ್ಟೇ ಇದ್ದಾರೆ. ಪ್ರೊಫೈಲ್‌ನಲ್ಲಿ ದೇವರ ವಿಗ್ರಹವಿದೆ. ಇನ್ನುಳಿದಂತೆ ಯಾವುದೇ ಪೋಸ್ಟ್ ಕಂಡುಬರುವುದಿಲ್ಲ.
***
ಇದನ್ನೂ ಓದಿರಿ: Rss 100 ವರ್ಷ | ಮುಂದಿನ ಕಾರ್ಯಕ್ರಮಗಳೇನು ಗೊತ್ತೇ?
Ramesh Nlm: “ಹಾಸನಾಂಬ ದೇವರ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದೀರ, ಅದಕ್ಕೆ ಅಭಿನಂದನೆಗಳು. ಆದರೆ ದೊಡ್ಡ ಖರ್ಗೆ ಮೆಚ್ಚಿಸಲಿಕ್ಕೆ ಮರಿ ಖರ್ಗೆ ಹೊಗೊಳೋದು ಬೇಡವಾಗಿತ್ತು.”
ಸದರಿ ವ್ಯಕ್ತಿಯ ಪ್ರೊಫೈಲ್ ಲಾಕ್ ಆಗಿದ್ದು, 490 ಫ್ರೆಂಡ್ಸ್ ಇದ್ದಾರೆ.

Vijaya Kumara N S: “ಸಾರ್, ನಿಮ್ಮ ಮೇಲೆ ಅಪಾರ ಗೌರವ ಇದೆ, ಆ ನಿಷ್ಪ್ರಯೋಜಕರ ಪರ ನಿಮ್ಮ ನಿಲುವು ಬೇಜಾರಿನ ಸಂಗತಿ.”
-ಈ ಪ್ರೊಫೈಲ್ ಲಾಕ್ ಆಗಿದೆ. ನಕಲಿ ಇರಬಹುದೆಂಬ ಅನುಮಾನ ಹುಟ್ಟಿಸುತ್ತದೆ.
***
Basava Basava : “ದಿನ ಬೆಳಗಾದ್ರೆ ದ್ವೇಷ ಬೀಜ ಬಿತ್ತುವ loudspeaker ಕೂಡ ban ಮಾಡಬೇಕು ಸರ್”
-ಇದು ಫೇಕ್ ಅಕೌಂಟ್ ಎಂದು ಮೇಲುನೋಟಕ್ಕೆ ಕಾಣುತ್ತದೆ.
***
Muralidhar Singanamalli: “ಇಂತಹ ಹೇಳಿಕೆಯನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ.”
ಪ್ರೊಫೈಲ್ ಲಾಕ್ ಆಗಿದೆ.
***
Vidyadheesh Sondur: “ಕೃಷ್ಣೇಗೌಡರೇ ನೀವು ಸಹ ಮೂರ್ಖರ ಗುಂಪಿಗೆ ಸೇರುತ್ತೀರಿ ಅಂತ ಅಂದುಕೊಂಡಿಲ್ಲ.”
ಪ್ರೊಫೈಲ್ ಲಾಕ್ ಆಗಿದೆ, 459 ಫ್ರೆಂಡ್ಸ್ ಇದ್ದಾರೆ.
***

Kumar Gangadhar: “ಸರ್, ನಿಮ್ಮ ಕಾರ್ಯವೈಖರಿಯನ್ನು ಎಲ್ಲರೂ ಒಪ್ಪುತ್ತಾರೆ. ನಿಮ್ಮ ಬಗ್ಗೆ ಎಲ್ಲರಿಗೂ ಹೆಚ್ಚಿನ ಗೌರವವಿದೆ. ನಿಮ್ಮಿಂದ ಇಂತಹ ಹೇಳಿಕೆಯ ಅವಶ್ಯಕತೆ ಇರಲಿಲ್ಲ. ನೀವು ಜನ ಮೆಚ್ಚಿದ ನಾಯಕ. ಜನ ಮೆಚ್ಚಿದ ನಾಯಕರಾಗಿಯೇ ಇರಿ.”
ಪ್ರೊಫೈಲ್ ಲಾಕ್ ಆಗಿದೆ, 973 ಜನ ಸ್ನೇಹಿತರಿದ್ದಾರೆ.

Ramesh S Kannur: “ಈ ಸರ್ಕಾರದಲ್ಲಿ ನಾನು ಮೆಚ್ಚುವಂತಹ ಸಚಿವರು ನೀವು sir. ಈ ದೇಶದ ಅಖಂಡತೆ, ದೇಶ ಪ್ರೇಮದ ಬಗ್ಗೆ ದೇಶದಲ್ಲಿ ಪ್ರಕೃತಿ ವಿಕೋಪ ದುರಂತಗಳು ಆದಾಗ ಈ ನಮ್ಮೆಲ್ಲರ ಹೆಮ್ಮೆಯ RSS ಸಂಸ್ಥೆ ಮುಂದೆ ನಿಂತು ಸೇವೆ ಮಾಡಿದೆ. ಇಂತಹ ಸಂಸ್ಥೆಯನ್ನು ನಿಷೇಧ ಮಾಡುವ ಬಗ್ಗೆ ಮಾತಾಡೋದು ತಪ್ಪು ಅಲ್ವಾ ಸರ್.”
ಈ ಖಾತೆಯು ಫೇಕ್ ಅಕೌಂಟ್ ಗುಣಲಕ್ಷಣಗಳನ್ನು ಹೊಂದಿದೆ. 1300 ಜನ ಫಾಲೋ ಮಾಡುತ್ತಿದ್ದಾರೆ.

ಕೆಲವು ಲಾಕ್ ಪ್ರೊಫೈಲ್‌ಗಳು ಕಾಂಗ್ರೆಸ್ ಪಕ್ಷವನ್ನು, ಖರ್ಗೆಯವರನ್ನು ಕೆಟ್ಟದಾಗಿ ನಿಂದಿಸಿದ್ದರೂ, ಕೃಷ್ಣರಿಗೆ ಗೌರವಯುತವಾಗಿಯೇ ಸಂಬೋಧಿಸಿರುವುದನ್ನು ಗುರುತಿಸಬಹುದು.
ಲಾಕ್ ಆಗಿರದ, ಕಾಂಗ್ರೆಸ್ ವಿರೋಧಿ ಹಾಗೂ ಸಂಘಪರಿವಾರ ಬೆಂಬಲಿತ 25 ಅಸಲಿ ಅಕೌಂಟ್ಗಳಿಂದಲೂ ಕಮೆಂಟ್ಗಳು ಬಂದಿವೆ. ಅಥವಾ ನಕಲಿ ಖಾತೆಗಳ ನರೇಟಿವ್ಗಳಿಂದ ಕೆಲವರು ಪ್ರೇರೇಪಿತರಾದಂತೆಯೂ ಕಾಣುತ್ತದೆ.
ಇದನ್ನೂ ಓದಿರಿ: ಆರ್‌ಎಸ್‌ಎಸ್ ಬಗ್ಗೆ ‘ಕೋಟ’ ಲೇಖನ; ಅಸಲಿ ಸಂಗತಿ ಬಿಚ್ಚಿಟ್ಟು ದೇವನೂರು ತಿರುಗೇಟು
“ಸಾರ್ ರಾಜ್ಯದ ಜನತೆಗೆ ನಿಮ್ಮ ಬಗ್ಗೆ ಅಪಾರವಾದ ನಂಬಿಕೆ ಗೌರವ ಪ್ರೀತಿ ವಿಶ್ವಾಸ ಇದೆ. ನಿಮ್ಮ ಸರ್ಕಾರದ ಯಾವುದೇ ಮಂತ್ರಿ, ಶಾಸಕರ ಮಾತಿಗೆ ದಯವಿಟ್ಟು ಡಿಫೆಂಡ್ ಮಾಡಿಕೊಳ್ಳ ಬೇಡಿ ಸಾರ್. ಪಕ್ಷಾತೀತವಾಗಿ ನೀವೂ ಎಲ್ಲರಿಗೂ ಒಳ್ಳೆಯ ಪ್ರಬುದ್ಧ ವ್ಯಕ್ತಿ ಇದ್ದೀರಿ. ಆದ್ದರಿಂದ ಯಾರಿಂದಲೋ ನಿಮ್ಮ ವ್ಯಕ್ತಿತ್ವ ನೀವು ಕಳೆದುಕೊಳ್ಳಬಾರದು” ಎಂದು ಕಮೆಂಟ್ ಮಾಡಿರುವ Shashi Kumar ಎಂಬವರನ್ನು ‘ಮೆಸೇಂಜರ್’ ಮೂಲಕ ಸಂಪರ್ಕಿಸಿ ‘ಈದಿನ ಡಾಟ್ ಕಾಮ್’ ಮಾತನಾಡಿಸಿದೆ.
































“ನನ್ನ ಖಾತೆಯು ನಕಲಿಯಲ್ಲ. ಆದರೆ ನಾನು ಪ್ರಿಯಾಂಕ್ ಖರ್ಗೆಯವರ ವಿರೋಧಿಯಲ್ಲ. ದೇಶಕ್ಕೆ ಒಳಿತು ಮಾಡುವ ವಿಚಾರವನ್ನು ರಾಹುಲ್ ಗಾಂಧಿಯವರು ಮಾಡಿದರೂ ಅದನ್ನು ಶೇರ್ ಮಾಡುತ್ತೇನೆ. ಮೋದಿ ಮಾಡಿದರೂ ಶೇರ್ ಮಾಡುತ್ತೇನೆ. ಮಲ್ಲಿಕಾರ್ಜನ ಖರ್ಗೆಯವರ ಮೇಲೆ ನನಗೆ ಭಾರೀ ಅಭಿಮಾನ. ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯಲ್ಲಿ ಹೆಚ್ಚಿನ ಕೆಲಸ ಮಾಡಬೇಕೆಂದಷ್ಟೇ ನನ್ನ ಒತ್ತಾಯ. ಅದಕ್ಕೆ ಹೊರತಾಗಿ ಅವರ ಮೇಲೆ ನಡೆಯುತ್ತಿರುವ ವೈಯಕ್ತಿಕ ನಿಂದನೆ, ದಾಳಿಗೆ ನನ್ನ ಖಂಡನೆ ಇದೆ. ಅವರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬುದನ್ನು ವಿರೋಧಿಗಳು ಮರೆಯಬಾರದು. ಯಾವುದೇ ಸಂಘಟನೆ ಕಾನೂನಿನ ಅಡಿ ಅವಕಾಶ ಪಡೆದೇ ತಮ್ಮ ಕಾರ್ಯಕ್ರಮಗಳನ್ನು ಮಾಡಬೇಕು” ಎನ್ನುತ್ತಾರೆ ಕಮೆಂಟುದಾರ ಶಶಿಕುಮಾರ್.
ಹೀಗೆ ಇನ್ನೂ ಕೆಲವು ಅಕೌಂಟ್ಗಳ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಗಿದ್ದು, ಅನೇಕರು ಸಂಪರ್ಕಕ್ಕೆ ಲಭ್ಯವಾಗಿಲ್ಲ. ಆದರೆ, ಒಂದು ಕಡೆ ಫೇಕ್ ಅಕೌಂಟ್‌ಗಳ ಮೂಲಕ, ಇನ್ನೊಂದೆಡೆ ನೇರವಾಗಿಯೇ ಹಿಂದುತ್ವ ಬೆಂಬಲಿತ ವ್ಯಕ್ತಿಗಳು ಈ ನರೇಟಿವ್ನಲ್ಲಿ ಭಾಗಿಯಾಗಿರುವುದಂತೂ ಸ್ಪಷ್ಟ.
ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಮಟ್ಟಹಾಕಲು ಸಂಘಪರಿವಾರ ಮೊದಲಿನಿಂದಲೂ ಇಂತಹ ತಂತ್ರ ಮತ್ತು ಕುತಂತ್ರಗಳನ್ನು ಬಳಸುತ್ತಿದೆ ಎನ್ನುತ್ತಾರೆ ಸಂಘಪರಿವಾರದ ಮಾಜಿ ನಾಯಕ, ಹಾಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಸುಧೀರ್ ಕುಮಾರ್ ಮುರೊಳ್ಳಿ.
ಇದನ್ನೂ ಓದಿರಿ: RSS – ಸಂಶಯಾಸ್ಪದ ಮತ್ತು ಅಕ್ರಮ ಅಸ್ತಿತ್ವದ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?
‘ಈದಿನ’ದ ಜೊತೆ ಮಾತನಾಡಿದ ಅವರು, “ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳ ಬಗ್ಗೆ ಆರ್‌ಎಸ್‌ಎಸ್‌ಗೆ ಅಸಹನೆ ಇದೆ. ಅವರೊಂದಿಗೆ ಮೈತ್ರಿಯಲ್ಲಿರುವ ಜೆಡಿಎಸ್ ಪಕ್ಷವನ್ನೂ ಹೇಗೆ ಮುಗಿಸಬಹುದು ಎಂದು ಸಂಚು ರೂಪಿಸುತ್ತಾರೆ. ಅವರು ಎಂದಿಗೂ ತಮ್ಮದೇ ಬೇರೆಯ ವಿಚಾರ ಬಿತ್ತಲು ಯತ್ನಿಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಪರ್ಯಾಯವಾಗಿ ಅಖಿಲ ಭಾರತ ಸಾಹಿತ್ಯ ಪರಿಷತ್ ಕಟ್ಟುತ್ತಾರೆ. ಸಂಸ್ಕೃತ ಮತ್ತು ಹಿಂದಿ ಸಾಹಿತ್ಯವನ್ನು ವೈಭವೀಕರಿಸುತ್ತಾರೆ. ಉಳಿದ ಭಾಷೆಗಳು ಹಿಂದಿ, ಸಂಸ್ಕೃತದ ಅಧೀನ ಎಂದು ಪ್ರತಿಪಾದಿಸುತ್ತಾರೆ. ಆರ್‌ಎಸ್‌ಎಸ್‌ನ ಬಳಿ ಎಲ್ಲ ವ್ಯವಸ್ಥೆಗೂ ಒಂದು ಪರ್ಯಾಯ ಚಿಂತನೆ ಇದ್ದೇ ಇರುತ್ತದೆ. ಅದು ಪ್ರಿಯಾಂಕ್ ಖರ್ಗೆ ವಿಚಾರದಲ್ಲೂ ನಡೆದಿದೆ. ಕೃಷ್ಣಬೈರೇಗೌಡ ಅವರು ಜಾತ್ಯತೀತ ನಾಯಕರಾದರೂ ಅವರು ಕರ್ನಾಟಕದ ಪ್ರಭಾವಿ ಸಮುದಾಯವೊಂದನ್ನು ಪ್ರತಿನಿಧಿಸುತ್ತಾರೆ. ಆ ಸಮುದಾಯದ ದನಿಯು ಪ್ರಿಯಾಂಕ್ ಖರ್ಗೆಯವರನ್ನು ಬೆಂಬಲಿಸಬಾರದೆಂಬ ಕಾರಣಕ್ಕಾಗಿ ಕೃಷ್ಣ ಬೈರೇಗೌಡರನ್ನು ಹೊಗಳುವ ಕೆಲಸ ಮಾಡುತ್ತಾರೆ. ನಾಳೆ ಕೃಷ್ಣ ಬೈರೇಗೌಡರು ಚುನಾವಣಾ ಕಣದಲ್ಲಿದ್ದಾಗ, ಅವರನ್ನು ಸೋಲಿಸುವುದು ಹೇಗೆಂದು ಆರ್‌ಎಸ್‌ಎಸ್‌ನವರು ಸಂಚು ಮಾಡುತ್ತಾರೆ” ಎಂದು ಎಚ್ಚರಿಸಿದರು.

“ಇಂತಹ ಸಂದರ್ಭದಲ್ಲಿ ಇಡೀ ಪಕ್ಷವು ಪ್ರಿಯಾಂಕ್ ಖರ್ಗೆ ಪರ ಇರಬೇಕು. ಸಂಘಪರಿವಾರದ ಎದುರು ಕಾಂಗ್ರೆಸ್ ಮುಖಾಮುಖಿಯಾದ ದಿನವು ಪಕ್ಷಕ್ಕೆ ಹೆಮ್ಮೆಯ ಸಂಗತಿಯಾಗುತ್ತದೆ. ಆರ್‌ಎಸ್‌ಎಸ್‌ನೊಂದಿಗೆ ಸಂಘಟನಾತ್ಮಕ, ಸೈದ್ಧಾಂತಿಕ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನೆಯಾಗಬೇಕು. ಕಾಂಗ್ರೆಸ್ ಪಕ್ಷವು ಹಿಂದೂ ಧರ್ಮದ ಆಧ್ಯಾತ್ಮಿಕತೆಯನ್ನು ಪ್ರತಿಪಾದಿಸಿದರೆ, ಆರ್‌ಎಸ್‌ಎಸ್ ಹಿಂದೂ ಧರ್ಮದಲ್ಲಿರುವ ಮೌಢ್ಯವನ್ನು ಪ್ರತಿನಿಧಿಸುತ್ತದೆ. ಆರ್‌ಎಸ್‌ಎಸ್ ಎಂದಿಗೂ ಹಿಂದೂಧರ್ಮದ ಜೀವನ ಪದ್ಧತಿಯ ಪರವಾಗಿ ಇಲ್ಲ” ಎಂದು ವಿವರಿಸಿದರು.
“ಪ್ರಿಯಾಂಕ್ ಖರ್ಗೆಯವರು ಸೃಷ್ಟಿ ಮಾಡಿರುವ ಚರ್ಚೆಯು ಪ್ರವಾಹದ ಗೇಟ್ ಓಪನ್ ಮಾಡಿದೆ. ಹೀಗಾಗಿ ಕೃತಕ ಅಭಿಪ್ರಾಯವನ್ನು ಸೃಷ್ಟಿ ಮಾಡಲಾಗುತ್ತಿದೆ. ಸಂಘಪರಿವಾರದ ಅಪಪ್ರಚಾರಿ ಗ್ಯಾಂಗ್ (ಐಟಿ ಸೆಲ್) ಸಕ್ರಿಯವಾಗಿದೆ. ಪ್ರಿಯಾಂಕ್ ಹುಟ್ಟು ಹಾಕಿರುವ ಚರ್ಚೆಯಿಂದಾಗಿ ಅಕ್ಷರಶಃ ಸಂಘಪರಿವಾರ ಪ್ಯಾನಿಕ್ ಆಗಿದೆ. ಹೀಗಾಗಿ ಮುಖವಾಡ ಧರಿಸಿಕೊಂಡು ಬಂದು ಪ್ರತಿಕ್ರಿಯಿಸುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ ಕಾನೂನು ಘಟಕದ ಕಾರ್ಯಾಧ್ಯಕ್ಷ ಸೂರ್ಯ ಮುಕುಂದರಾಜ್ ‘ಈದಿನ’ಕ್ಕೆ ಪ್ರತಿಕ್ರಿಯಿಸಿ, “ಸಂಘಪರಿವಾರಕ್ಕೆ ಒಂದು ಮುಖವಿಲ್ಲ. ಅದೊಂದು ಮುಖೇಡಿ ಸಂಘಟನೆ. ಖರ್ಗೆಯವರ ಕುಟುಂಬದ ವಿರುದ್ಧ ಸಂಘಪರಿವಾರ ಕುತಂತ್ರಗಳನ್ನು ಮಾಡುತ್ತಲೇ ಬಂದಿದೆ. ಕಾರಣ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿಯೇ ಆರ್‌ಎಸ್‌ಎಸ್‌ಗೆ ತಿರುಗೇಟು ನೀಡಿದ್ದರು. ಅಂದಿನಿಂದಲೂ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಟಾರ್ಗೆಟ್ ಆಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಿಯಾಂಕ್ ಖರ್ಗೆಗೆ ಬೆಂಬಲವಿಲ್ಲ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ವಾಸ್ತವದಲ್ಲಿ ಬಾಯಿ ಮಾತಿಗಿಂತ ಕ್ರಿಯೆಯ ಮೂಲಕ ಇಡೀ ಸರ್ಕಾರ ಅವರ ಪರವಾಗಿದೆ. ಪ್ರಿಯಾಂಕ್ ಅವರು ಮಾಡಿರುವ ಮನವಿಗೆ ಕ್ಯಾಬಿನೆಟ್‌ನ ಯಾವುದೇ ಸಚಿವರು ವಿರೋಧಿಸಲಿಲ್ಲ. ಬದಲಾಗಿ ಅವರ ಜೊತೆ ನಿಂತಿದ್ದಾರೆ” ಎಂದರು.

“ಪ್ರಿಯಾಂಕ್ ಅವರ ಮೇಲಿನ ದಾಳಿಯನ್ನು ಕೃಷ್ಣ ಬೈರೇಗೌಡರು ಖಂಡಿಸಿದ ಕೂಡಲೇ, ‘ನೀವು ವಿಚಾರಕ್ಕೆ ತಲೆಹಾಕಬೇಡಿ’ ಎಂದು ಬೈರೇಗೌಡರಿಗೆ ಹೇಳುತ್ತಿರುವುದು ಏತಕ್ಕೆ? ಪ್ರಿಯಾಂಕ್ ಮೇಲಿನ ದ್ವೇಷವನ್ನು ಖಂಡಿಸಿದ್ದಾರೆಂದರೆ, ಅವರು ಆರ್‌ಎಸ್‌ಎಸ್ ವಿರುದ್ಧ ನಿಲುವು ತಾಳಿದ್ದಾರೆಂದು ಅರ್ಥ. ಹೀಗಿರುವ ಕೃಷ್ಣ ಅವರು ಆರ್‌ಎಸ್‌ಎಸ್ ನಿಲುವನ್ನು ವಿರೋಧಿಸಿಲ್ಲ ಎಂದು ಸಂಘಪರಿವಾರ ಬಿಂಬಿಸಲು ಯತ್ನಿಸುವುದು ಕೇವಲ ಬೂಟಾಟಿಕೆ” ಎಂದು ವ್ಯಂಗ್ಯವಾಡಿದರು.
“ನಾವು ಸದಾ ಸೌಮ್ಯವಾಗಿ ಇರುತ್ತೇವೆ, ಚರ್ಚೆಗೆ ಆಸ್ಪದ ಕೊಡುತ್ತೇವೆ ಎನ್ನುವ ಆರ್‌ಎಸ್‌ಎಸ್‌ನವರು ತಮ್ಮ ವಿರೋಧಿಗಳ ವಿರುದ್ಧ ಫೇಕ್ ಅಕೌಂಟ್‌ಗಳ ಮೂಲಕ ಬಂದು ಕೆಟ್ಟದ್ದಾಗಿ ನಿಂದಿಸುತ್ತಾರೆ. ಇದು ಸಾಕಷ್ಟು ಸಂದರ್ಭದಲ್ಲಿ ಬಯಲಾಗಿರುವ ಸಂಗತಿ. ಆರ್‌ಎಸ್‌ಎಸ್‌ನವರಿಗೆ ಭಯ ಹುಟ್ಟಿದೆ. ಹೀಗಾಗಿಯೇ ಈ ರೀತಿ ವರ್ತಿಸುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿರಿ: ಆರ್‌ಎಸ್‌ಎಸ್ – ತಾಲಿಬಾನ್: ಒಂದೇ ನಾಣ್ಯದ ಎರಡು ಮುಖಗಳಲ್ಲವೇ?
“ಅನೇಕ ಕಾಂಗ್ರೆಸ್ಸಿಗರು ಎಲ್ಲ ಕಡೆ ಮಾತನಾಡುತ್ತಿದ್ದಾರೆ. ಆದರೆ ಮಾಧ್ಯಮಗಳು ಅದನ್ನು ಪ್ರಕಟಿಸುತ್ತಿಲ್ಲ. ಇನ್ನೊಂದೆಡೆ ಮಾಧ್ಯಮಗಳ ಚರ್ಚೆಗಳಿಗೆ ಬಿಜೆಪಿ ವಕ್ತಾರರು ಬರಲು ಹಿಂದೇಟು ಹಾಕುತ್ತಿದ್ದಾರೆ. ಆರ್‌ಎಸ್‌ಎಸ್ ಹುಳುಕು ಹೆಚ್ಚು ಚರ್ಚೆಯಾದಷ್ಟು ಅವರಿಗೆ ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ” ಎಂದು ಹೇಳಿದರು.
ಒಬ್ಬರಿಗೊಬ್ಬರನ್ನು ಎತ್ತಿಕಟ್ಟುವ ಆರ್‌ಎಸ್‌ಎಸ್
ಆರ್‌ಎಸ್‌ಎಸ್‌ನ ಆಳ ಅಗಲ ಬಲ್ಲ, ಹಲವು ವರ್ಷ ಸಂಘಪರಿವಾರದ ಸಖ್ಯದಲ್ಲಿದ್ದು ಹೊರಬಂದಿರುವ ಯುವ ರಾಜಕಾರಣಿಯೊಬ್ಬರು ಹೆಸರು ಉಲ್ಲೇಖಿಸಲಿಚ್ಛಿಸದೆ ಪ್ರತಿಕ್ರಿಯಿಸಿ, “ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವುದು ಸಂಘಪರಿವಾರದ ತಂತ್ರಗಾರಿಕೆ. ಇತಿಹಾಸದುದ್ದಕ್ಕೂ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ. ಗಾಂಧಿ ವಿರುದ್ಧ ಸುಭಾಷ್ ಚಂದ್ರ ಬೋಸ್ ಅವರನ್ನು ಎತ್ತಿಕಟ್ಟಿ ಕತೆಗಳನ್ನು ಕಟ್ಟುತ್ತಾರೆ. ಇಂದಿರಾ ಗಾಂಧಿಯವರ ವಿರುದ್ಧ ಲಾಲ್‌ದ್ದೂರ್ ಶಾಸ್ತ್ರಿಯವರನ್ನು ನಿಲ್ಲಿಸುತ್ತಾರೆ. ನೆಹರೂ ವಿರುದ್ಧ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಹೊಗಳುತ್ತಾರೆ. ಈಗ ಪ್ರಿಯಾಂಕ್ ಖರ್ಗೆಯವರ ವಿರುದ್ಧ, ಕೃಷ್ಣಬೈರೇಗೌಡರನ್ನು ಎತ್ತಿಕಟ್ಟುವ ಹುನ್ನಾರ ಮಾಡುತ್ತಿದ್ದಾರೆ” ಎಂದು ವಿಶ್ಲೇಷಿಸಿದರು.
ಮಾಧುಸ್ವಾಮಿ- ನಳಿನಿ ಪ್ರಕರಣ
ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ಸಚಿವರಾಗಿದ್ದ ಜೆ.ಸಿ. ಮಾದುಸ್ವಾಮಿಯವರು ರೈತ ಮಹಿಳೆ, ಹೋರಾಟಗಾರ್ತಿ ನಳಿನಿ ಅವರನ್ನು ‘ರಾಸ್ಕಲ್’ ಎಂದು ನಿಂದಿಸಿ, ಭಾರೀ ಟೀಕೆಗೆ ಒಳಗಾಗಿದ್ದರು. ಮೊದಲೆರಡು ದಿನ ರೈತ ಹೋರಾಟಗಾರ್ತಿಗೆ ಸಿಕ್ಕ ಬೆಂಬಲ ನೋಡಿ ಬೆಚ್ಚಿದ್ದ ಬಿಜೆಪಿ ಐಟಿ ಸೆಲ್, ನಂತರದಲ್ಲಿ ಬೇರೊಂದು ತಂತ್ರಗಾರಿಕೆಯ ಮೂಲಕ ನಳಿನಿಯವರ ಚಾರಿತ್ರ್ಯವಧೆ ಮಾಡಲು ಯತ್ನಿಸಿತ್ತು. 2020ರ ಮೇ 20ರಂದು ನಡೆದ ಘಟನೆ ಮತ್ತು ಆನಂತರ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮಾಡಿದ ಪಿತೂರಿಗಳ ಕುರಿತು ಸಾಮಾಜಿಕ ಕಾರ್ಯಕರ್ತ ಅನಿಲ್ ಚಿಕ್ಕದಾಳವಟ್ಟ ಮತ್ತು ಡಾ.ಎಚ್.ವಿ. ವಾಸು ಅವರು ಅಧ್ಯಯನ ಮಾಡಿದ್ದರು. ನಳಿನಿಯವರ ವಿವಿಧ ಫೋಟೋಗಳನ್ನು ಬಳಸಿ, ಆಕೆಯನ್ನು ಹಿಂದೂ ವಿರೋಧಿ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಸಂಘಪರಿವಾರ ಮಾಡಿತ್ತು. ಇದನ್ನು ನೆನಪಿಸಿಕೊಳ್ಳುವ ಎಚ್.ವಿ.ವಾಸು ಅವರು, “ಮಾತುಬಲ್ಲಂತ ಸಮುದಾಯಗಳು ಬಿಜೆಪಿಯ ಜೊತೆಯಲ್ಲಿದ್ದು, ಅವುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆರ್ಭಟಿಸುತ್ತವೆ. ನಾವು ವಾಟ್ಸ್ಯಾಪ್ ಗ್ರೂಪ್‌ಗಳನ್ನೂ ಅಧ್ಯಯನ ಮಾಡಿದ್ದೇವೆ. ವಾಟ್ಸ್ಯಾಪ್‌ಗಳಲ್ಲಿ ಕನಿಷ್ಠ ನಾಲ್ಕೈದು ಜನ ಇದ್ದು, ಸಂಘಪರಿವಾರದ ಸಂಗತಿಗಳನ್ನು ಹರಿಯಬಿಡುತ್ತಾರೆ. ಅವುಗಳಿಗೆ ಯಾರಾದರೂ ಕೌಂಟರ್ ಮಾಡಿದರೆ, ಅವುಗಳನ್ನೂ ವ್ಯವಸ್ಥಿತವಾಗಿ ದಮನ ಮಾಡಲು ಯತ್ನಿಸುತ್ತಾರೆ. ಗ್ರೂಪ್‌ನಲ್ಲಿ ಯಾರಾದರೂ ಕೌಂಟರ್ ಮಾಡಿದರೆ, ಅವುಗಳಿಗೆ ಉತ್ತರ ಕೊಡಲು ಆಗದಿದ್ದಾಗ, ಗುಡ್ ಮಾರ್ನಿಂಗ್ ಪೋಸ್ಟರ್‌ಗಳು, ಗುಡ್‌ನೈಟ್ ಪೋಸ್ಟರ್‌ಗಳು, ಕೋಟ್ಸ್‌ಗಳು- ಇತ್ಯಾದಿ ಕಸತಂದು ಸುರಿದು ಚರ್ಚೆಯನ್ನು ಹಿಂದಕ್ಕೆ ತಳ್ಳುವ ಪ್ರಯತ್ನ ಮಾಡುತ್ತಾರೆ. ಎಲ್ಲ ವೃತ್ತಿಪರರ ವಾಟ್ಸ್ಯಾಪ್ ಗ್ರೂಪ್‌ಗಳಲ್ಲೂ ಇಂಥವರು ಸೇರಿಕೊಂಡಿರುತ್ತಾರೆ. ಹೀಗೆಯೇ ಫೇಸ್‌ಬುಕ್‌ನಲ್ಲಿ ಫೇಕ್ ಅಕೌಂಟ್‌ಗಳ ಮೂಲಕ ಕೆಲಸ ಮಾಡುತ್ತಾರೆ. ಸುರಕ್ಷತೆಯ ಕಾರಣಕ್ಕೆ ಮಹಿಳೆಯರು ಪ್ರೊಫೈಲ್ ಲಾಕ್ ಮಾಡಿಕೊಳ್ಳುತ್ತಾರೆಂದು ಭಾವಿಸಬಹುದು. ಆದರೆ ಗಂಡಸರು ಯಾಕೆ ಪ್ರೊಫೈಲ್ ಲಾಕ್ ಮಾಡಿಕೊಂಡು, ಎಲ್ಲ ಕಡೆ ಕಮೆಂಟ್ ಮಾಡುತ್ತಾ ಇರುತ್ತಾರೆ. ಈ ಕಾರ್ಯ ವಿಧಾನವನ್ನು ಅರ್ಥಮಾಡಿಕೊಳ್ಳಬೇಕು” ಎನ್ನುತ್ತಾರೆ.
ಕೃಷ್ಣಬೈರೇಗೌಡರ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳು ‘ಕೃತಕ ಅಭಿಪ್ರಾಯ ಸೃಷ್ಟಿ’ಯ ಝಲಕ್‌ಗೆ ಉದಾಹರಣೆಯಾಗಿ ನಿಂತಿವೆ. ಬಹುದೊಡ್ಡ ಐಟಿ ಸೆಲ್ ಪಡೆಯನ್ನು ಹೊಂದಿರುವ ಸಂಘಪರಿವಾರ, ಯಾರ್ಯಾರಿಗೆ ಯಾವ ಖೆಡ್ಡಾ ತೋಡಲು ಯತ್ನಿಸುತ್ತಿದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕಷ್ಟೇ.
ಅಂದಹಾಗೆ ಕೃಷ್ಣ ಬೈರೇಗೌಡರ ಪೋಸ್ಟ್‌ಗೆ ಪ್ರತಿಕ್ರಿಯಿಸಿದವರ ಪೈಕಿ ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಬೆಂಬಲಿಸಿದ 12 ಅಸಲಿ ಮತ್ತು 4 ನಕಲಿ ಅಕೌಂಟ್‌ಗಳು ಸೇರಿವೆ!

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




