ಅಂದ ಹಾಗೆ ಈಗ ಅಳುತ್ತಿರುವ ಕೇಜ್ರಿವಾಲ್ 2013 ರಲ್ಲಿ ಪ್ರಾಮಾಣಿಕರೂ, ಪ್ರಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿದ್ದ ಅಂದಿನ ಪ್ರಧಾನಿ ಮನಮೋಹನ ಸಿಂಗ್ ರನ್ನು ಭ್ರಷ್ಟಾಚಾರ ನಡೆಸುವವರಿಗೆ ನೆರವು ನೀಡುತ್ತಿದ್ದಾರೆಂಬಂತೆ ಬಾಯಿಗೆ ಬಂದಂತೆ ಮಾತನಾಡಿದ್ದ. ಅಷ್ಟೇ ಅಲ್ಲ ನಡೆಯದೇ ಇದ್ದ ಹಗರಣವನ್ನು ಲಕ್ಷಾಂತರ ಕೋಟಿ ಹಗರಣ ಎಂದು ಬಿಂಬಿಸಿ, ಜನರ ದಾರಿ ತಪ್ಪಿಸಿದ್ದ. ಅಂದು ಮನಮೋಹನ್ ಸಿಂಗ್ ಅವರು “ಯಾರೇ ನನ್ನ ಕುರಿತು ಏನೇ ಆರೋಪಿಸಿದರೂ ಇತಿಹಾಸ ತನಗೆ ನ್ಯಾಯ ಒದಗಿಸುತ್ತೆ ಎನ್ನುವ ನಂಬಿಕೆ ಇದೆ” ಎಂದಿದ್ದರು. ಈಗ ಆ ಮಾತು ದಿಟವಾಗಿದೆ.
ಮೊನ್ನೆ ಮಾಧ್ಯಮಗಳೆದುರು ಗಳಗಳನೆ ಕಣ್ಣೀರಧಾರೆ ಹರಿಸುತ್ತಾ ನಾನು ಭ್ರಷ್ಟಾಚಾರಿ ಅಲ್ಲ ಎಂದು ಕೋರ್ಟ್ ಹೇಳಿದೆ ಎನ್ನುತ್ತಿದ್ದ ದೆಹಲಿಯ ಮಾಜಿ ಸಿ.ಎಂ. ಅರವಿಂದ ಕೇಜ್ರಿವಾಲ್ ರನ್ನು ಕಂಡಾಗ ಮಾಡಿದ್ದುಣ್ಣೋ ಮಹಾರಾಯ ಎನ್ನುವ ನಾಣ್ನುಡಿ ನೆನಪಾಯಿತು. ಯುಪಿಎ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ, ನಕಲಿ ಹೋರಾಟಗಾರರ ನಾಟಕ ಕಂಪೆನಿ ಕಟ್ಟಿ, 2014 ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬರಲು ಪರೋಕ್ಷವಾಗಿ ಶ್ರಮಿಸಿದ್ದ ಈ ಅಳುಮುಂಜಿ ಕೇಜ್ರಿವಾಲ್ ಇಂದು ಹರಿಸಿದ್ದು ಪಶ್ಚಾತ್ತಾಪದ ಕಣ್ಣೀರು….! ನಿಜ ಅಂದು ಇದೇ ಬಿಜೆಪಿಯ ಸೂಚನೆಯಂತೆ ಇಡೀ ದೇಶದ ಜನಸಾಮಾನ್ಯರು ಮಾತ್ರವಲ್ಲದೇ ಪ್ರಜ್ಞಾವಂತರು ನಂಬುವಂತೆ ಪ್ರಹಸನ ಹೆಣೆದು, ಸ್ವತ: ಪಾತ್ರಧಾರಿಯಾಗಿದ್ದ ಈತ ತಾನು ಮಾಡಿದ ಪಾಪ ತನ್ನನ್ನೇ ಸುತ್ತಿಕೊಳ್ಳುವಂತಹ ದುರವಸ್ಥೆಯನ್ನು ಅನುಭವಿಸುತ್ತಿದ್ದಾನೆ ಎಂದರೆ ತಪ್ಪಾಗಲಾರದು…
ಹೌದು, ಅದು 2011ರಲ್ಲಿ ಪ್ರಾರಂಭಗೊಂಡ ಅಣ್ಣಾ ಹಜಾರೆ ಎನ್ನುವ ಸ್ವಘೋಷಿತ ಗಾಂಧಿವಾದಿಯ ಸತ್ಯಾಗ್ರಹದ ಕಾಲ. ಅದಾಗ ಡಾ.ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ಯುಪಿಎ ಸರಕಾರ ಅಸ್ತಿತ್ವದಲ್ಲಿದ್ದ ಕಾಲಘಟ್ಟ. ಮಹಾರಾಷ್ಟ್ರದ ಹಳ್ಳಿಯಲ್ಲಿದ್ದ ಅಣ್ಣಾ ಹಜಾರೆ ಡೆಲ್ಲಿಗೆ ಬಂದು ಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕೆಂದು ಪ್ರಾರಂಭಿಸಿದ ಹೋರಾಟ 2013ರ ವರೆಗೂ ಮುಂದುವರೆದಿತ್ತು. ಜಂತರ್ ಮಂತರ್ ನಲ್ಲಿ ಸತ್ಯಾಗ್ರಹ ಕುಳಿತ ಹಜಾರೆಯ ಅಕ್ಕಪಕ್ಕದಲ್ಲಿ ಸಮಯಸಾಧಕ ನಕಲಿ ಹೋರಾಟಗಾರರು ಬಂದು ಕುಳಿತರು. ನಿವೃತ್ತ ಐಎಫ್ ಎಸ್ ಅಧಿಕಾರಿ ಅರವಿಂದ ಕೇಜ್ರಿವಾಲ್, ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಸನ್ಯಾಸಿ ಮುಖವಾಡ ಹೊತ್ತ ಬ್ಯುಸಿನೆಸ್ ಮ್ಯಾನ್ ರಾಮ್ ದೇವ್ ಬಾಬಾ ಸೇರಿದಂತೆ ಹಲವಾರು ಮಂದಿ ಹೋರಾಟದ ಪ್ರಹಸನದಲ್ಲಿ ಪಾಲ್ಗೊಂಡರು. ತೆರೆಯ ಮರೆಯಲ್ಲಿದ್ದ ಬಿಜೆಪಿ ಕಾಂಗ್ರೆಸ್ ಅನ್ನು ಮಣಿಸಲು ಹೂಡಿದ ಷಡ್ಯಂತ್ರ ಇದಾಗಿತ್ತು ಎನ್ನುವುದು ಅನಂತರ ಅರಿವಿಗೆ ಬಂದ ವಿಚಾರ. ಕಾಮನ್ ವೆಲ್ತ್ ಗೇಮ್ಸ್ ದೆಹಲಿಯಲ್ಲಿ ನಡೆದಾಗ ಆಗಿದೆ ಎನ್ನಲಾದ ಭ್ರಷ್ಟಾಚಾರದ ಹಗರಣ, 2ಜಿ ಸ್ಪೆಕ್ಟ್ರಮ್ ಹಗರಣ, ಸ್ವಿಸ್ ಬ್ಯಾಂಕ್ ನಲ್ಲಿನ ಕಪ್ಪುಹಣದ ವಿಚಾರ ಹೀಗೆ ಸಾಲು ಸಾಲು ಹಗರಣಗಳ ಹೆಸರಿನಲ್ಲಿ ಲಕ್ಷಾಂತರ ಕೋಟಿ ಲೂಟಿಯಾಗಿದೆ ಎಂದೂ, ಅದಕ್ಕೆ ಕೇಂದ್ರ ಸರಕಾರವೇ ಹೊಣೆಯೆಂದೂ, ಮೇಧಾವಿಗಳಾಗಿದ್ದ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ರತ್ತ ಎಲ್ಲರೂ ಬೊಟ್ಟು ತೋರಿಸಿ ಬೇಕಾಬಿಟ್ಟಿ ಮಾತನಾಡತೊಡಗಿದರು.

ಈ ರಾಜಕೀಯ ಪ್ರೇರಿತವಾದ ಹೋರಾಟದ ಪ್ರಹಸನದಲ್ಲಿ ಈ ಕೇಜ್ರಿವಾಲ್ ಪಾತ್ರ ಮಹತ್ತರವಾದದ್ದು… ಇವರ ಹೋರಾಟ, ಮಾತು, ಆರೋಪಗಳ ಪ್ರತಿಫಲವಾಗಿ 2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರ ಕಳೆದುಕೊಂಡು ಬಿಜೆಪಿ ನೇತೃತ್ವದ ಎನ್ ಡಿ ಎ ಅಧಿಕಾರಕ್ಕೇರಿತು… ಅನಂತರ ಅಣ್ಣಾಹಜಾರೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದೆ ಮೌನಿಯಾದರು. ಇತ್ತ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿ ಕಟ್ಟಿ ದೆಹಲಿಯಲ್ಲಿ ಬಹುಮತ ಪಡೆದು ಸಿ.ಎಂ. ಆದರೆ ಅತ್ತ ಕಿರಣ್ ಬೇಡಿ ಬಿಜೆಪಿ ಸೇರಿ ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆದರು… ರಾಮ್ ದೇವ್ ಬಾಬಾ ತನ್ನ ಕಂಪೆನಿ ಪತಂಜಲಿಯ ಉತ್ಪನ್ನಗಳಿಗೆ ತೆರಿಗೆ ವಿನಾಯತಿ ಪಡೆದುಕೊಂಡರು… ಅವರೆಲ್ಲಾ ಮಾಡಿದ್ದ ಆರೋಪಗಳ ತನಿಖೆ ನಡೆದು ಹಗರಣಗಳ ಗಂಭೀರತೆಯೇ ಪ್ರಶ್ನಾರ್ಹವಾಗಿದ್ದಲ್ಲದೆ ಯಾವೊಬ್ಬ ಆರೋಪಿಯೂ ಅಪರಾಧಿ ಆಗಲಿಲ್ಲ. ಅತ್ತ ಸ್ವಿಸ್ ಬ್ಯಾಂಕ್ ನಿಂದ ಒಂದೇ ಒಂದು ರೂಪಾಯಿ ಮೋದಿ ಸರಕಾರದ ಅವಧಿಯಲ್ಲಿ ಭಾರತಕ್ಕೆ ತರುವುದು ಬಿಡಿ, ಸ್ವಿಸ್ ಬ್ಯಾಂಕ್ ನಲ್ಲಿನ ಕಪ್ಪುಹಣದ ಪ್ರಮಾಣ ಮತ್ತಷ್ಟು ಹೆಚ್ಚಾಯಿತು… ಹಾಗಾದರೆ ಇವರೆಲ್ಲಾ ಸೇರಿ ಮಾಡಿದ್ದು ಹೋರಾಟದ ಹೆಸರಿನಲ್ಲಿ ರಾಜಕೀಯದ ರಂಗಿನಾಟವಲ್ಲದೆ ಬೇರೆನಲ್ಲ…!
2014ರ ನಂತರ ದೇಶದಲ್ಲಿ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ನಾಲ್ಕು ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ವರ್ಷಗಟ್ಟಲೆ ನಡೆದ ರೈತ ಹೋರಾಟದಲ್ಲಿ ಈ ನಕಲಿ ಹೋರಾಟಗಾರರು ಭಾಗವಹಿಸಲಿಲ್ಲ, ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ಲೈಂಗಿಕ ಶೋಷಣೆ ಆಗಿದೆ ಎಂದು ದೆಹಲಿಯ ಬೀದಿಯಲ್ಲಿ ಪ್ರತಿಭಟಿಸುವಾಗ ಇವರಾರೂ ಬರಲಿಲ್ಲ…. ಇನ್ನು ಇತ್ತೀಚೆಗೆ ದೇಶದ ರೈತರ ಹಿತಾಸಕ್ತಿಯನ್ನು ಬಲಿಗೊಟ್ಟು ಟ್ರಂಪ್ ಗೆ ಹೆದರಿ ಅಮೇರಿಕಾ ಭಾರತ ವ್ಯಾಪಾರ ಒಪ್ಪಂದಕ್ಕೆ ಮೋದಿ ಸರಕಾರ ಸಹಿ ಹಾಕಿದಾಗಲೂ ಈ ಅವಕಾಶವಾದಿ ಹೋರಾಟಗಾರರು ಧ್ವನಿ ಎತ್ತಿಲ್ಲ… ಅಂದರೆ ಇವರೆಲ್ಲಾ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೇರಿಸಲು ಅವಿರತ ಪ್ರಯತ್ನಿಸಿದ ಮುಖವಾಡಧಾರಿಗಳು ಎನ್ನುವುದು ನಿಜ.
ಇನ್ನು ಈ ಕೇಜ್ರಿವಾಲ್ ದೆಹಲಿಯ ಸಿ.ಎಂ. ಆದ ಮೇಲೆ ಬಿಜೆಪಿಯ ಸಹಜ ಗುಣವಾದ “ನೆರವಾದವರನ್ನೇ ಮುಗಿಸುವ” ಪ್ರಯತ್ನ ಪ್ರಾರಂಭವಾಯಿತು. ಮೊದಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮೂಲಕ ಕಿರುಕುಳ ನೀಡತೊಡಗಿದರು. ದೆಹಲಿ ಸರಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ತಿಕ್ಕಾಟ ನ್ಯಾಯಾಲಯದ ಮೆಟ್ಟಿಲೇರುವ ವರೆಗೆ ಹೋಯಿತು. ಎರಡನೇ ಬಾರಿ ಕೇಜ್ರಿವಾಲ್ ಸಿ.ಎಂ. ಆಗುತ್ತಿದ್ದಂತೆ ಬಿಜೆಪಿಯ ತಾಳ್ಮೆಯ ಕಟ್ಟೆ ಒಡೆಯಿತು… ಹೇಗಾದರೂ ಮಾಡಿ ಆಪ್ ಸರಕಾರವನ್ನು ಅಧಿಕಾರದಿಂದ ಇಳಿಸಲು ಷಡ್ಯಂತ್ರ ರಚನೆಯಾಯಿತು. ಅದೇ ಅಬಕಾರಿ ಹಗರಣ, ಕೇಂದ್ರ ಸರಕಾರದ ಗುಲಾಮ ಸಂಸ್ಥೆ ಇಡಿ, ಸಿಬಿಐ ತಮ್ಮ ಕಾರ್ಯಾಚರಣೆ ಶುರು ಮಾಡಿದವು… ಅದರ ಪರಿಣಾಮವಾಗಿ ಮೊದಲು ಡಿಸಿಎಂ ಸಿಸೋಡಿಯಾ ಜೈಲು ಪಾಲಾದರೆ, ಸಿ.ಎಂ. ಕೇಜ್ರಿವಾಲ್ ಅಧಿಕಾರದಲ್ಲಿರುವಾಗಲೇ ಜೈಲುವಾಸ ಅನುಭವಿಸಿದರು. ಅಂತೂ 2025 ರಲ್ಲಿ ದೆಹಲಿಯಲ್ಲಿ ಚುನಾವಣೆ ನಡೆದಾಗ ಬಿಜೆಪಿ ವಾಮಮಾರ್ಗದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಸೋಲಿಸಿ, ಅಧಿಕಾರವನ್ನು ಪಡೆಯಲು ಯಶಸ್ವಿಯಾಯಿತು. ಈಗ ನ್ಯಾಯಾಲಯ ಅಬಕಾರಿ ಹಗರಣವೇ ಒಂದು ವಿಚಾರಣೆಗೆ ಯೋಗ್ಯವಲ್ಲದ ನಿರಾಧಾರ ವಿಚಾರ ಎಂದು ಕೇಜ್ರಿವಾಲ್ ಸೇರಿದಂತೆ 23 ಆರೋಪಿಗಳನ್ನು ನಿರ್ದೋಷಿಗಳೆಂದು ಖುಲಾಸೆಗೊಳಿಸಿದೆ. ಕೇಜ್ರಿವಾಲ್ ಹೊರಗೆ ಬಂದು ಕಣ್ಣೀರು ಹರಿಸಿ ತಾನು ಭ್ರಷ್ಟಾಚಾರಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ, ಮೋದಿ ಮತ್ತು ಶಾ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಬಡಬಡಾಯಿಸುತ್ತಿದ್ದಾರೆ.

ಕೇಜ್ರಿವಾಲ್ ಅಪರಾಧ ಎಸಗಿಲ್ಲ ಎಂಬುದು ಬಿಜೆಪಿಗೂ ಗೊತ್ತು, ಇಡಿ-ಸಿಬಿಐಗೂ ಗೊತ್ತಿತ್ತು. ಆದರೆ ಅಧಿಕಾರವನ್ನು ಕಸಿದುಕೊಳ್ಳಲು ಹೀಗೆ ನಡೆಯದ ಹಗರಣವನ್ನು ನಡೆದಿದೆ ಎಂದು ಬಿಂಬಿಸಿ, ಜನರು ನಂಬುವಂತೆ ಮಾಡಿ ಆಪ್ ಅನ್ನು ಸೋಲಿಸಿದ್ದಾರೆ ಮೋದಿ-ಶಾ. ಇದೇ ವಿಚಾರದಲ್ಲಿ ಮೋದಿ, ಶಾ ಸೇರಿದಂತೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಕೇಜ್ರಿವಾಲ್ ದೊಡ್ಡ ಕಳ್ಳ ಎಂದು ಚುನಾವಣಾ ಭಾಷಣದಲ್ಲಿ, ಮಾಧ್ಯಮಗಳ ಮುಂದೆ, ಚರ್ಚೆಯ ಸಂದರ್ಭದಲ್ಲಿ ಆರೋಪಿಸಿದ್ದರು. ಈಗ ಆರೋಪಿತರೆಲ್ಲ ನಿರಪರಾಧಿಗಳೆಂದು ನ್ಯಾಯಾಲಯ ಹೇಳಿದೆ. ಅಲ್ಲಿಗೆ ದೇಶದ ಪ್ರಧಾನಿ, ಗೃಹ ಸಚಿವರೂ ಕೂಡ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಅಂದ ಹಾಗೆ ಈಗ ಅಳುತ್ತಿರುವ ಕೇಜ್ರಿವಾಲ್ ಕುರಿತು ಕಿಂಚಿತ್ತೂ ಕರುಣೆ ತೋರಿಸುವ ಅವಶ್ಯಕತೆಯಿಲ್ಲ. ಇದೇ ಮನುಷ್ಯ 2013 ರಲ್ಲಿ ಪ್ರಾಮಾಣಿಕರೂ, ಪ್ರಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿದ್ದ ಅಂದಿನ ಪ್ರಧಾನಿ ಮನಮೋಹನ ಸಿಂಗ್ ರನ್ನು ಭ್ರಷ್ಟಾಚಾರ ನಡೆಸುವವರಿಗೆ ನೆರವು ನೀಡುತ್ತಿದ್ದಾರೆಂಬಂತೆ ಬಾಯಿಗೆ ಬಂದಂತೆ ಮಾತನಾಡಿದ್ದ. ಅಷ್ಟೇ ಅಲ್ಲ ನಡೆಯದೇ ಇದ್ದ ಹಗರಣವನ್ನು ಲಕ್ಷಾಂತರ ಕೋಟಿ ಹಗರಣ ಎಂದು ಬಿಂಬಿಸಿ, ಜನರ ದಾರಿ ತಪ್ಪಿಸಿದ್ದ. ಅಂದು ಮನಮೋಹನ್ ಸಿಂಗ್ ಅವರು “ಯಾರೇ ನನ್ನ ಕುರಿತು ಏನೇ ಆರೋಪಿಸಿದರೂ ಇತಿಹಾಸ ತನಗೆ ನ್ಯಾಯ ಒದಗಿಸುತ್ತೆ ಎನ್ನುವ ನಂಬಿಕೆ ಇದೆ” ಎಂದಿದ್ದರು. ಈಗ ಆ ಮಾತು ದಿಟವಾಗಿದೆ. ಪ್ರಾಮಾಣಿಕರ ಮೇಲೆ ಭ್ರಷ್ಟಾಚಾರದ ಮಸಿ ಎರಚಿದರೆ ಅದು ತನ್ನನ್ನೂ ಒಂದಲ್ಲ ಒಂದು ದಿನ ಬೆತ್ತಲಾಗಿ ನಿಲ್ಲಿಸುತ್ತೆ ಎಂಬಂತಾಗಿದೆ ಈ ಕೇಜ್ರಿವಾಲ್ ನ ಪ್ರಕರಣ. ಈತ ಒಬ್ಬ ವಿದ್ಯಾವಂತ ಮೋಸಗಾರ ಎಂದರೆ ತಪ್ಪಾಗಲಾರದು. ಏಕೆಂದರೆ ನಡೆಯದ ಹಗರಣವನ್ನು ಸುಳ್ಳು ಅಂಕಿಅಂಶದೊಂದಿಗೆ ಮುಗ್ದಜನರೆದುರು ವರ್ಷಗಟ್ಟಲೆ ಒದರಿ, ದೇಶದ ರಾಜಕೀಯವೇ ಬದಲಾಗುವಂತೆ ಮಾಡಿದವ. ಈಗ ಕೇಜ್ರಿವಾಲ್ ಮೋದಿ – ಶಾ ಕುರಿತು ಏನೇ ಆರೋಪ ಮಾಡಿದರೂ ಅವರನ್ನು ಏನೂ ಮಾಡಲಾಗದು ಮಾತ್ರವಲ್ಲ ಈತನ ಕಣ್ಣೀರಿನ ಪ್ರಹಸನವನ್ನು ಯಾರೂ ನಂಬಲಾರರು. ಈ ಪ್ರಸಂಗ ಗಮನಿಸಿದಾಗ ಕರ್ಮ ರಿಟರ್ನ್ಸ್ ಅನ್ನೋದು ಸುಳ್ಳಲ್ಲ ಅನ್ನಿಸುತ್ತದೆ.

ಡಾ ಸುಬ್ರಹ್ಮಣ್ಯ ಭಟ್, ಬೈಂದೂರು
ಬೈಂದೂರಿನಲ್ಲಿ ವೈದ್ಯರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನೂ ನಡೆಸುತ್ತಿದ್ದಾರೆ.




