ಮುರಿದು ಬಿದ್ದ ಮನೆಗಳು, ಮಣ್ಣಿನಲ್ಲಿ ಆಟವಾಡುತ್ತಿದ್ದ ಮಕ್ಕಳು, ಇಟ್ಟಿಗೆ ಬಿದ್ದ ಜಾಗದಲ್ಲೇ ಟಾರ್ಪಲ್ ಕಟ್ಟಿಕೊಂಡಿರುವುದು, ಮೂರು ಇಟ್ಟಿಗೆಗಳನ್ನು ಜೋಡಿಸಿ ನೀರು ಕಾಯಿಸುತ್ತಿದ್ದ ಜನರು, ಒಂದು ತಿಂಗಳ ಮಗುವನ್ನು ಎತ್ತಿಕೊಂಡು ಟಾರ್ಪಲ್ ಕೆಳಗೆ ಕೂತಿದ್ದ ತಾಯಿ, ಸುಡು ಸುಡು ಬಿಸಿಲಿನಲ್ಲಿ ನೆರಳಿಗಾಗಿ ಹವಣಿಸುತ್ತಿದ್ದ ಜನ. ಇವೆಲ್ಲವೂ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳು.
ಕೋಗಿಲು ಗ್ರಾಮದಲ್ಲಿ 14 ಎಕರೆ 36 ಗುಂಟೆ ವಿಸ್ತೀರ್ಣದ ಪಾಲಿಕೆ ಜಾಗದಲ್ಲಿ 180 ಮನೆಗಳನ್ನು ಆಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ ಎಂದು ಶನಿವಾರದಂದು (ಡಿ.20) ನೆಲಸಮಗೊಳಿಸಲಾಗಿತ್ತು. ಬಂಡೆ ಕ್ವಾರಿ ಪ್ರದೇಶವಾದ ಈ ಜಾಗವನ್ನು ಒಂಬತ್ತು ವರ್ಷಗಳ ಹಿಂದೆಯೇ ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ ಆಗಿನ ಬಿಬಿಎಂಪಿ ಹಸ್ತಾಂತತರಿಸಿತ್ತು. ಯಲಹಂಕ ಹೋಬಳಿ ಸರ್ವೆ ನಂ.99ಕ್ಕೆ ಒಳಪಡುವ ಜಾಗದಲ್ಲಿ ಕಳೆದ 25-30 ವರ್ಷಗಳಿಂದ ಮನೆಯನ್ನು ಕಟ್ಟಿಕೊಂಡು ನೆಲಸಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.

ಮನೆ ನೆಲಸಮಗೊಳಿಸಿ ಇವತ್ತಿಗೆ ಹತ್ತು ದಿನವಾದರೂ ಸಂತ್ರಸ್ತರ ಪರಿಸ್ಥಿತಿ ಬದಲಾಗಿಲ್ಲ. ಇಷ್ಟು ದಿನದವರೆಗೂ ಕೆಲವೊಂದು ಸಂಘ-ಸಂಸ್ಥೆಗಳು, ಎನ್‌ಜಿಒಗಳು ಊಟದ ವ್ಯವಸ್ಥೆಯನ್ನು ಮಾಡಿವೆ. ಆದರೆ ಸರ್ಕಾರ ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವಂತೆ ಕಾಣುತ್ತಿದೆ.
ಇದನ್ನೂ ಓದಿ : ಕೋಗಿಲು ಗೆ ‘ಸರ್ಕಾರಿ ಬೇಲಿ’ : ನಿವಾಸಿಗಳೊಡನೆ ಮಾತಿನ ಚಕಮಕಿ
ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಿಂದ ಉದ್ಯೋಗ ಹರಸಿ ಬಂದವರಲ್ಲಿ ಕೆಲವರು ಈ ಜಾಗದಲ್ಲಿ ನೆಲೆಸಿದ್ದರು. ಊರೂರು ತಿರುಗುತ್ತಾ ಖವ್ವಾಲಿ ಹಾಡುತ್ತ ಬಿಕ್ಷೆ ಬೇಡುತ್ತಿದ್ದ ದರ್ವೇಶಿ ಫಕೀರರೇ ಹೆಚ್ಚಾಗಿ ನೆಲೆಸಿರುವುದರಿಂದ ಇದಕ್ಕೆ ಫಕೀರ್ ಕಾಲೋನಿ ಎಂದೂ ಕರೆಯಲಾಗುತ್ತದೆ. ಆ ಜಾಗದ ಪಕ್ಕದಲ್ಲಿ ಫಕೀರರಲ್ಲದ ಮುಸ್ಲಿಂಮರು, ಪರಿಶಿಷ್ಟ ಜಾತಿ ಸಮುದಾಯದವರು ಮತ್ತು ಒಂದು ಮನೆ ಮಾತ್ರ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಇದ್ದಾರೆ. ಇದನ್ನು ವಸೀಂ ಲೇಔಟ್ ಎಂದು ಹೆಸರಿಸಲಾಗಿದೆ. ನೆಲಸಮಗೊಳಿಸುವ ವೇಳೆ ಎರಡೂ ಜಾಗದಲ್ಲಿ 180 ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ರಾಜಕೀಯ ವಿವಾದ ಸ್ಥಳವಾದ ಕೋಗಿಲು
ಡಿ.20 ನೆಲಸಮಗೊಳಸಿದ ನಂತರ ಯಾರು ತುಟಿ ಬಿಚ್ಚದೆ ಇದ್ದಾಗ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್ ಸಾಕಷ್ಟು ಚರ್ಚೆ ಹುಟ್ಟುಹಾಕುತ್ತದೆ. ‘ಕರ್ನಾಟಕ ಕಾಂಗ್ರೆಸ್ ಸರ್ಕಾರ “ಬುಲ್ಡೋಜರ್ ರಾಜ್” ನಿರ್ಮಾಣ ಮಾಡಲು ಹೊರಟಿದೆ ಎಂದು ಆರೋಪಿಸಿದ್ದರು. “ಸಂಘ ಪರಿವಾರ ಮಾಡುತ್ತಿದ್ದ ರೀತಿಯಲ್ಲಿ ಉದ್ದೇಶ ಪೂರ್ವಕವಾಗಿ ಮುಸ್ಲಿಂಮರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ, ಸಾಂವಿಧಾನಿಕ ಮೌಲ್ಯಗಳನ್ನು ಮತ್ತು ಮಾನವ ಬದುಕುವ ಘನತೆಯನ್ನು ಕಿತ್ತುಕೊಳ್ಳಲು ಹೊರಟಿದೆ” ಎಂದು ಆರೋಪಿಸಿದ್ದರು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಬುಲ್ಡೋಜರ್ ನ್ಯಾಯಕ್ಕೂ, ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರವಿದೆ. ಪಿಣರಾಯಿ ವಿಜಯನ್ ಅವರು ವಾಸ್ತವ ಸಂಗತಿಗಳ ಅರಿವಿಲ್ಲದೆ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ” ಎಂದು ತಿರುಗೇಟು ಕೊಟ್ಟಿದ್ದರು.

ಕೇರಳ ಶಾಸಕ ಜಲೀಲ್ ಅವರು ಸಂತ್ರಸ್ತರನ್ನು ಭೇಟಿ ಮಾಡಿ “ಇಲ್ಲಿನ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀತಿಯನ್ನು ಅನುಸರಿಸುತ್ತಿದೆ. ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಬುಲ್ಡೋಜರ್ ನೀತಿ ಪ್ರಯೋಗಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೆ ಕೇರಳದ ಜನರು, ಸಂಘ-ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಇದರ ನಡುವೆ ಡಿವೈಎಫ್‌ಐ ಸಂಘಟನೆಯ ಮುಖಂಡರು ಸ್ಥಳಕ್ಕೆ ಬಂದು ಸಂತ್ರಸ್ತರನ್ನು ಭೇಟಿ ಮಾಡಿ ನೆರವಿನ ಭರವಸೆ ನೀಡಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸಹ ಭೇಟಿ ನೀಡಿ ಇದು ಸರ್ಕಾರಿ ಜಾಗವಾಗಿದ್ದು ಇದೇ ಸ್ಥಳದಲ್ಲಿ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ಒಂದೊಂದು ಮನೆಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನೆನ್ನೆ (ಡಿ.28) ಸ್ಥಳಕ್ಕೆ ಬೇಟಿ ನೀಡಿದ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿ, “ಕೇರಳ ಸಿಎಂ ಸೇರಿದಂತೆ ಕಮ್ಯೂನಿಸ್ಟ್ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಕ್ಷ ಸೋಲುವ ಭಯದಿಂದ ಅಲ್ಪಸಂಖ್ಯಾತರಿಗೆ ಕರುಣೆ ತೋರಿಸುವ ನೆಪದಲ್ಲಿ ಮಾತನಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ವಿರೋಧ ಪಕ್ಷದ ನಾಯಕ ಆರ್ ಅಶೋಕ್ “ಕಾಂಗ್ರೆಸ್ ನಾಡ ದ್ರೋಹಿ” ಎಂದು ಕಿಡಿಕಾರಿದ್ದರು. “ ಕರ್ನಾಟಕವನ್ನು ಕೇರಳ ಸರ್ಕಾರ ಆಳ್ವಿಕೆ ಮಾಡುತ್ತಿದೆಯೇ ಅಥವಾ ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ಕೆ.ಸಿ. ವೇಣುಗೋಪಾಲ್ ನಡೆಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಕಮ್ಯೂನಿಸ್ಟ್ V/S ಕಾಂಗ್ರೆಸ್
ಕೋಗಿಲು ಗ್ರಾಮದಲ್ಲಿ ನೆಲಸಮಗೊಳಿಸಿದ 180 ಮನೆಗಳ ಜನರು ಬೀದಿಪಾಲಾಗಿದ್ದಾರೆ. ಪರಿಹಾರಕ್ಕಾಗಿ ಯೋಚಿಸಬೇಕಾದ ರಾಜಕಾರಣಿಗಳು ರಾಜಕೀಯ ಮಾಡುತ್ತಿದ್ದಾರೆ. ಬುಲ್ಡೋಜರ್ ನ್ಯಾಯದ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಕೇರಳ ಸಿಎಂ ಹೇಳಿದರೇ, ಅದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪ್ರತಿಕ್ರಿಯಿಸಿ, ಕಮ್ಯುನಿಸ್ಟರು ನಮ್ಮ ರಾಜ್ಯದ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ನಮ್ಮ ರಾಜ್ಯಕ್ಕೆ ಸಂಬಂಧ ಪಟ್ಟ ವಿಚಾರವನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.
ಇಬ್ಬರ ಜಗಳದಲ್ಲಿ ಕೂಸು ಬಡವವಾಯ್ತು ಅಂದ ಹಾಗೆ, ಕರ್ನಾಟಕ ಮತ್ತು ಕೇರಳ ರಾಜಕಾರಣದ ವಿಚಾರದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಬಡವಾಗುತ್ತಿದ್ದಾರೆ.
“ಇದರಲ್ಲಿ ನಮಗೆ ವಿಶೇಷ ಆಸಕ್ತಿ ಇಲ್ಲ. ಕೇರಳದಲ್ಲಿ ಚುನಾವಣೆ ಬರುತ್ತಿರುವ ಕಾರಣಕ್ಕೆ ಕಮ್ಯೂನಿಸ್ಟ್ ಪಕ್ಷದವರು ಆಸಕ್ತಿ ವಹಿಸುತ್ತಿದ್ದಾರೆ. ಮನಷ್ಯತ್ವದ ಆಧಾರದ ಮೇಲೆ ನಾವು ನಡೆದುಕೊಳ್ಳುತ್ತಿದ್ದೇವೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಪುನರುಚ್ಚರಿಸಿದ್ದಾರೆ.
ಕೇರಳ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು, ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಸೂಚಿಸಿದ್ದರು. ಕೇರಳದಲ್ಲಿನ ಮತ ಬ್ಯಾಂಕ್ ನ ಮೇಲಿನ ಕಣ್ಣು ಪಿಣರಾಯಿ ಹಾಗೂ ವೇಣುಗೋಪಾಲ್ ಅವರ ಮಧ್ಯದ ಜಗಳವಾಗಿ ಪರಿವರ್ತಿತವಾಗಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.

“ಬೆಂಗಳೂರು ಉಸ್ತುವಾರಿ ಸಚಿವರಾದ ಡಿ ಕೆ ಶಿವಕುಮಾರ್ ಸೂಚನೆ ಇಲ್ಲದೆ ಕೋಗಿಲು ಬುಲ್ಡೋಜರ್ ಕಾರ್ಯಾಚರಣೆ ನಡೆಯಲು ಸಾಧ್ಯವೇ ಇರಲಿಲ್ಲ. ಬೆಂಗಳೂರು ಅಂದರೆ ಕೋಟ್ಯಾಧೀಶರು, ಉದ್ಯಮ ದಿಗ್ಗಜರು, ಕಾರ್ಪೊರೇಟ್ ಧಣಿಗಳು ಅಷ್ಟೆ ಅಲ್ಲ, ಅಲ್ಲಿ ಶ್ರಮಿಕರು, ಬಡವರು, ಜನಸಾಮಾನ್ಯರು ಎಲ್ಲರೂ ಇದ್ದಾರೆ. ಅವರನ್ನೆಲ್ಲ ಮರೆತು, ಕಡೆಗಣಿಸಿ, ಶೋಷಣೆಗೆ ಒಳಪಡಿಸಿ ಅಭಿವೃದ್ದಿ ಎಂದು ಮಾತಾಡುವದು ಅಮಾನವೀಯತೆ, ಪ್ರಜಾಪ್ರಭುತ್ವಕ್ಕೆ ಸಲ್ಲದ ನಡವಳಿಕೆ. ಪಿಣರಾಯಿ ವಿಜಯನ್ ಹಾಗು ಕಮ್ಯುನಿಸ್ಟರ ವಿರುದ್ದ “ಅಲ್ಪ ಸಂಖ್ಯಾತರ ಓಲೈಕೆ, ಚುನಾವಣಾ ಗಿಮಿಕ್” ಎಂದು ಆರೋಪಿಸುವುದು ಹಾಸ್ಯಾಸ್ಪದ” ಎಂದು ಸಿಪಿಎಂ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶವ್ಯಕ್ತಪಡಿಸಿದ್ದಾರೆ.
ಮುಂದುವರೆದು “ಮಾನ್ಯ ಶಿವಕುಮಾರ್ ಅವರೇ, ನೀವು ನಡೆಸಿದ ಬುಲ್ಡೋಜರ್ ಕಾರ್ಯಾಚರಣೆ ನ್ಯಾಯಯುತ ಅಂತಾದರೆ, ಸಂತ್ರಸ್ತರ ಬಳಿಗೆ ನೀವು ಯಾಕೆ ಹೋದಿರಿ, ಪುನರ್ವಸತಿಯ ಮಾತು ಆಡುತ್ತಿರುವುದು ಯಾಕೆ ? ಜನಪ್ರತಿನಿಧಿಯಾದವರು ಜನರ ಮುಂದೆ ವಿನೀತವಾಗಿ ಇದ್ದರೆ ಚೆಂದ, ಠೇಂಕಾರದ ನಡೆಯಿಂದ ಕೊನೆಗೆ ಮುಗ್ಗರಿಸಲೆ ಬೇಕು. ಕಮ್ಯುನಿಸ್ಟರದ್ದು “ಅಲ್ಪಸಂಖ್ಯಾತರ ಓಲೈಕೆ” ಎಂದು ಆರೋಪಿಸಿದ್ದೀರಿ. ಇದು ಬಿಜೆಪಿಯ ಕೋಮುವಾದದ ಭಾಷೆ. ತಪ್ಪುಗಳನ್ನು ತಿದ್ದಿಕೊಳ್ಳಿ” ಎಂದು ತಿಳಿಸಿದ್ದಾರೆ.
ಅರ್ಹರಿಗೆ “ಸರ್ಕಾರಿ” ಮನೆ
ಚರ್ಚೆಯ ಕಾವನ್ನು ಅರಿತ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ಥಳಕ್ಕೆ ಬೇಟಿ ನೀಡಿ ಬೇರೆ ಕಡೆ ಮನೆ ಕೊಡುವ ಭರವಸೆಯನ್ನು ಕೊಟ್ಟಿದ್ದರು. ಅಲ್ಲಿಗೆ ಮುಗಿಯದ ಚರ್ಚೆ, ಸೋಮವಾ(ಡಿ.29) ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ, ಅದೇ ದಿನ ಸಂಜೆ ಪತ್ರಿಕಾಗೋಷ್ಠಿ ಮಾಡಿ ಅರ್ಹರಿಗೆ ಮನೆ ಕೊಡುವ ಮಾತನ್ನು ಆಡಿದ್ದಾರೆ.
ಅರ್ಹರು ಯಾರು ಎಂದು ಪರೀಶಿಲಿಸಿ ಎರಡು ದಿನದಲ್ಲಿ, ಜನವರಿ 1 ರಂದು ಮನೆ ಹಂಚಿಕೆ ಮಾಡುವ ಜವಾಬ್ದಾರಿಯನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನೀಡಲಾಗಿದೆ. ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂದು ಹೇಳಿದರು.

“ಕೋಗಿಲು ಬಡವಾಣೆಯಲ್ಲಿ ಮನೆಕಳೆದುಕೊಂಡ ಅರ್ಹರಿಗೆ ಬೈಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ತಲಾ ₹11.20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಹಂಚಿಕೆ ಮಾಡಲಾಗುವುದು” ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಸಾಮಾನ್ಯವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಬ್ಸಿಡಿ ಲಭ್ಯವಿದೆ, ಜೊತೆಗೆ ಜಿಬಿಎ ಇಂದ ಪ್ರತಿ ಮನೆಗೆ 5 ಲಕ್ಷ ರೂಪಾಯಿ ನೀಡುವಂತೆ ಸೂಚಿಸಿದ್ದೇನೆ. ಸಾಮಾನ್ಯ ವರ್ಗದವರಿಗೆ ಸಹಾಯಧನ ಸೇರಿ 8 ಲಕ್ಷದ 70 ಸಾವಿರ ರೂಪಾಯಿ ಬರುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 9.50 ಲಕ್ಷ ಸಿಗುತ್ತದೆ. ಸಾಮಾನ್ಯ ವರ್ಗದವರಿಗೆ 2.5 ಲಕ್ಷವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 1.70 ಲಕ್ಷ ಸಾಲ ನೀಡಲಾಗುತ್ತದೆ. ಜಮೀರ್ ಅಹ್ಮದ್ ಖಾನ್ ಅವರು ಸಾಲ ಕೊಡಿಸುವುದಾಗಿ ಹೇಳಿದ್ದಾರೆ” ಎಂದು ಹೇಳಿದರು.
“ನಾಳೆ, ನಾಡಿದ್ದು ಎರಡು ದಿನ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಜನವರಿ 1ರಂದು ಹೊಸ ವರ್ಷ ಪ್ರಾರಂಭದ ದಿನ ಇವರಿಗೆ ವಾಸಕ್ಕೆ ಮನೆಯನ್ನು ಒದಗಿಸಿಕೊಡುವ ಜವಾಬ್ದಾರಿಯನ್ನು ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಲಾಗಿದೆ. ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ, ಮಾನವೀಯತೆ ದೃಷ್ಟಿಯಿಂದ ಅವರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. 1 ಲಕ್ಷ ಮನೆಗಳನ್ನು ನಾವು ಕಟ್ಟಿಸಿರುವುದೇ ಬಡವರಿಗೆ ಸೂರು ಒದಗಿಸಿಕೊಡಲೆಂದು” ಎಂದು ಹೇಳಿದರು.
ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡುವುದು ಇದೊಂದು ಪ್ರಕರಣಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಗೆರೆ ಎಳೆದಿದ್ದಾರೆ.





