ಖಾಸಗಿ ಆಸ್ಪತ್ರೆಗಳ ಲಾಬಿಯ ಗೋಜಿಲ್ಲದೆ ಹಲವಾರು ವರ್ಷಗಳ ಕಾಲ ಬಡ ಜನರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಾ ಬಂದ ಸರ್ಕಾರಿ ಆಸ್ಪತ್ರೆ ಕಿದ್ವಾಯಿ, ಸದ್ಯ 2011ರ ಬಳಿಕ ಸಾಕಷ್ಟು ವಿವಾದದಲ್ಲಿ ಸಿಲುಕಿದೆ. ಬಡ ಜನರಿಗೆ ನೆರಳಾಗಬೇಕಾದ, ಸೂಕ್ತ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯ ವ್ಯವಸ್ಥೆಯೇ ಸೂಕ್ತ ಚಿಕಿತ್ಸೆಯಿಲ್ಲದೆ ನಲುಗುವಂತಾಗಿದೆ. ಅಕ್ರಮ, ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ನಿರ್ದೇಶಕರನ್ನು ವಜಾಗೊಳಿಸಿ, ತಾತ್ಕಾಲಿಕ ನೇಮಕಾತಿಯನ್ನೂ ಮಾಡಲಾಗಿತ್ತು. ಆದರೆ, ಈ ಎಲ್ಲ ಅಸ್ಥಿರತೆಯಿಂದಾಗಿ ಕೊರಗಿದವರು ಕ್ಯಾನ್ಸರ್ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಲಾಗದ ಬಡ ಜನರು.
ಕಿದ್ವಾಯಿ ಆಸ್ಪತ್ರೆ 1973ರಲ್ಲಿ ಸ್ಥಾಪನೆಯಾಗಿದ್ದು, 1980ರಲ್ಲಿ ಸ್ವಾಯತ್ತ ಸಂಸ್ಥೆಯಾಗಿ ನೋಂದಾಯಿಸಲಾಗಿದೆ. ರಾಜ್ಯದಲ್ಲೇ ಮೊದಲು ಸ್ಥಾಪನೆಯಾದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಸರ್ಕಾರಿ ಆಸ್ಪತ್ರೆ ಕಿದ್ವಾಯಿ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಭಾಗದಿಂದ ಅರಸಿ ಬಂದವರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಾ ಬಂದ ಕಿದ್ವಾಯಿಯ ಮೊದಲ ನಿರ್ದೇಶಕರು ಡಾ. ಎಂ. ಕೃಷ್ಣ ಭಾರ್ಗವ. ಆದರೆ, ಕಾಲಕಳೆದಂತೆ ನಿರ್ದೇಶಕರು ಬದಲಾದಂತೆ ಕಿದ್ವಾಯಿಯಲ್ಲಿನ ವ್ಯವಸ್ಥೆಯೂ ಬದಲಾಗಿದೆ. ಶಾಲಾ-ಕಾಲೇಜು, ಇತರೆ ಆಸ್ಪತ್ರೆಗಳು ಖಾಸಗಿ ಸಂಸ್ಥೆಗಳ ನಡುವೆ ಅಪ್ಪಚ್ಚಿಯಾದಂತೆ 1989ರ ಬಳಿಕ ಕಿದ್ವಾಯಿ ಕೂಡಾ ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳ ದಾಳಿಗೆ ಗುರಿಯಾಯಿತು. ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಯಿತು.
ಕೃಷ್ಣ ಭಾರ್ಗವ ಅವರ ಆಡಳಿತದಲ್ಲಿ ಶಿಸ್ತಾಗಿ ನಡೆದು ಬಂದ ಕಿದ್ವಾಯಿ ಸದ್ಯ ಕಳೆದೊಂದು ವರ್ಷದಿಂದ ಓರ್ವ ನಿರ್ದೇಶಕರನ್ನು ಮೂರಕ್ಕೂ ಅಧಿಕ ತಿಂಗಳುಗಳ ಕಂಡಿಲ್ಲ. ಮ್ಯೂಸಿಕಲ್ ಚೇರ್‌ನಂತೆ ಯಾರು ಎದುರು ಕಂಡರೋ ಅವರು ಕೆಲ ಸಮಯ ಈ ಕುರ್ಚಿಯಲ್ಲಿ ಕೂತೆದ್ದು ಹೋಗುವಂತಾಗಿತ್ತು. 2024ರ ಫೆಬ್ರವರಿಯಲ್ಲಿ ಅವ್ಯವಹಾರ ಆರೋಪದಲ್ಲಿ ಡಾ. ವಿ. ಲೋಕೇಶ್ ಅವರನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿ, ಆ ಸ್ಥಾನಕ್ಕೆ ಡಾ. ಸೈಯದ್ ಅಲ್ತಾಫ್ ಅವರನ್ನು ನೇಮಿಸಲಾಗಿತ್ತು. ಈ ವೇಳೆಯಲ್ಲೇ ಐಎಎಸ್ ಅಧಿಕಾರಿ ಎನ್ ಮಂಜುಶ್ರೀ ಅವರನ್ನು ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು.
ಇದನ್ನು ಓದಿದ್ದೀರಾ? ಕಿದ್ವಾಯಿಯಲ್ಲಿ ಲೋಪದೋಷ ಸಾಬೀತು; ಹಾಲಿ ನಿರ್ದೇಶಕ ಡಾ. ವಿ. ಲೋಕೇಶ್ ವರ್ಗಾವಣೆ
ಇದಾದ ಬಳಿಕ ಒಂದು ವರ್ಷದ ಅವಧಿಯಲ್ಲಿಯೇ ಕಿದ್ವಾಯಿ ಮೂವರು ಪ್ರಭಾರ ನಿರ್ದೇಶಕರನ್ನು ಕಂಡಿದೆ. 2024ರ ಅಕ್ಟೋಬರ್‌ನಲ್ಲಿ ತೇಜಸ್ವಿನಿ ಬಿ, ಬಳಿಕ 2024ರ ಡಿಸೆಂಬರ್‌ನಲ್ಲಿ ರವಿ ಅರ್ಜುನ, 2025ರ ಜನವರಿಯಲ್ಲಿ ನವೀನ್ ಟಿ ನಿರ್ದೇಶಕರಾಗಿದ್ದಾರೆ. ಆಡಳಿತಾಧಿಕಾರಿಗಳನ್ನೂ ಕೂಡಾ ಪದೇ ಪದೇ ಬದಲಾಯಿಸಲಾಗಿದೆ. ಎನ್ ಮಂಜುಶ್ರೀ ಅವರ ಬಳಿಕ 2024ರ ಸೆಪ್ಟೆಂಬರ್‌ನಲ್ಲಿ ನವೀನ್ ಭಟ್ ವೈ, 2025ರ ಜುಲೈ ತಿಂಗಳಲ್ಲಿ ಅವಿನಾಶ್ ಮೆನನ್ ರಾಜೇಂದ್ರನ್ ಆಡಳಿತಾಧಿಕಾರಿಯಾಗಿದ್ದಾರೆ. ಪದೇ ಪದೇ ನಿರ್ದೇಶಕರು, ಆಡಳಿತಾಧಿಕಾರಿಗಳ ಬದಲಾವಣೆಯು ತೀವ್ರ ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು, ವಿರೋಧ ವ್ಯಕ್ತವಾಗಿತ್ತು. ಔಷಧಿಗಳ ಟೆಂಡರ್ ಮೊದಲಾದ ಪ್ರಮುಖ ಪ್ರಕ್ರಿಯೆಗಳು ಬಾಕಿಯಾಗಿದ್ದವು. ಇವೆಲ್ಲವುದರ ನಡುವೆ ಇದೀಗ ನಿರ್ದೇಶಕರಿಗೆ ಪೂರ್ಣಾಧಿಕಾರ ನೀಡಿ, ಆಡಳಿತಾಧಿಕಾರಿ ಸ್ಥಾನವನ್ನು ಹಿಂಪಡೆಯಲಾಗಿದೆ.
ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾದ ಸಂಸ್ಥೆಗಳಲ್ಲಿ ಒಂದು ಕಿದ್ವಾಯಿ
ಖಾಸಗೀಕರಣ ಎಂಬ ಪೆಡಂಭೂತ ದೇಶದ ಎಲ್ಲಾ ವಲಯಕ್ಕೂ ನುಗ್ಗಿದೆ. ಇದರ ಪರಿಣಾಮ ಹೆಚ್ಚಾಗಿ ಬೀರಿರುವುದು ಶಾಲಾ-ಕಾಲೇಜು, ಆಸ್ಪತ್ರೆ, ವಿಮೆ, ಟೆಲಿಕಾಂ ಮೊದಲಾದ ಕ್ಷೇತ್ರಗಳಲ್ಲಿ. ಸದ್ಯ ರಾಜ್ಯದಲ್ಲಿ ಅಲ್ಲಲ್ಲಿ ನಾಯಿಕೊಡೆಗಳಂತೆ ಖಾಸಗಿ ಶಾಲಾ-ಕಾಲೇಜುಗಳು ತಲೆ ಎತ್ತುತ್ತಿರುವಂತೆ ಖಾಸಗಿ ಆಸ್ಪತ್ರೆಗಳೂ ಕಾಣಿಸಿಕೊಳ್ಳುತ್ತಿವೆ. 1973ರಿಂದ 1989ರವರೆಗೆ ರಾಜ್ಯದಲ್ಲಿ ಇದ್ದಿದ್ದು ಒಂದೇ ಕ್ಯಾನ್ಸರ್ ಆಸ್ಪತ್ರೆ, ಅದು ಕಿದ್ವಾಯಿ. ಅದಾದ ಬಳಿಕ ಮೊದಲನೆಯಾಗಿ 1989ರಲ್ಲಿ ಸದ್ಯ HCG Oncology networkನ ಭಾಗವಾಗಿರುವ ಖಾಸಗಿ ಕ್ಯಾನ್ಸರ್ ಆಸ್ಪತ್ರೆ Bangalore Institute of Oncology ಸ್ಥಾಪನೆಯಾಗಿದ್ದು, ಅದಾದ ಬಳಿಕ ಒಂದೊಂದೇ ಖಾಸಗಿ ಸಂಸ್ಥೆಗಳು ತಲೆ ಎತ್ತಿ ಸದ್ಯ ನೂರಾರು ಸಂಸ್ಥೆಗಳಿವೆ. ಇವೆಲ್ಲವುದರ ನಡುವೆ ಕಿದ್ವಾಯಿ ಮೂಲೆಗುಂಪಾಗುತ್ತಿದೆ ಮತ್ತು ಖಾಸಗಿ ಲಾಬಿಗೆ ಮಣಿಯುವ ಸರ್ಕಾರದ ನಿರ್ಲಕ್ಷ್ಯಕ್ಕೂ ಒಳಗಾಗುತ್ತಿದೆ.
ಇದನ್ನು ಓದಿದ್ದೀರಾ? ಮಾಜಿ ಸಿಎಂ ಬೊಮ್ಮಾಯಿ ಸಂಬಂಧಿಯಿಂದ ಕಿದ್ವಾಯಿ ಸಂಸ್ಥೆಯಲ್ಲಿ ನೂರಾರು ಕೋಟಿ ಅಕ್ರಮ
ಸದ್ಯ ಕಿದ್ವಾಯಿಯಲ್ಲಿರುವ ಸಮಸ್ಯೆ ಒಂದೆರಡಲ್ಲ. ಕಳೆದೊಂದು ದಶಕಕ್ಕೂ ಅಧಿಕ ಕಾಲದಿಂದ ಕಿದ್ವಾಯಿ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿವೆ. ಹಣಕಾಸಿನ ಹಗರಣಗಳು, ಔಷಧ ಖರೀದಿ ಟೆಂಡರ್‌ಗಳಲ್ಲಿ ಅಕ್ರಮಗಳು, ಸಿಬ್ಬಂದಿ ಕೊರತೆ ಮತ್ತು ಆಡಳಿತಾತ್ಮಕ ದೋಷಗಳು -ಹೀಗೆ ಹಲವು ವರ್ಷಗಳಿಂದ ಕಿದ್ವಾಯಿ ಸುದ್ದಿಯಾಗುತ್ತಿದೆ. ಇವೆಲ್ಲವುದರಲ್ಲಿ ರಾಜಕೀಯ ಕೆಸರೆರಚಾಟವೂ ನಡೆದು ಹೋಗಿದೆ. ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮತ್ತೆ ಮರೀಚಿಕೆಯಾಗುತ್ತಲೇ ಸಾಗುತ್ತಿದೆ.
ಕಿದ್ವಾಯಿ ಎಂಬ ಅಕ್ರಮ, ಭ್ರಷ್ಟಾಚಾರ, ಗೊಂದಲ
2012ರಲ್ಲಿ ಕಿದ್ವಾಯಿ ಸಂಸ್ಥೆಯ ಆಂತರಿಕ ಘರ್ಷಣೆಯಿಂದಾಗಿ ನೇಮಕಾತಿಯೇ ವಿಳಂಬವಾಗಿತ್ತು. ಇದು ನೇರವಾಗಿಯೇ ರೋಗಿಗಳ ಮೇಲೆ ಪ್ರಭಾವ ಬೀರಿತ್ತು. ಅದಾದ ಬಳಿಕ ಆಗಾಗೇ ನೇಮಕಾತಿ ವಿಳಂಬ ಕಂಡುಬಂದಿತ್ತು. ಅದಾದ ಬಳಿಕ 2017ರಲ್ಲಿ ಕಿದ್ವಾಯಿ ನಿರ್ದೇಶಕ ಕೆ ಬಿ ಗುರುಪ್ಪಸ್ವಾಮಿ ವಿರುದ್ಧ ದೊಡ್ಡ ಮಟ್ಟದ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ತದನಂತರ 2023ರಿಂದ ನಿರಂತರವಾಗಿ ಕಿದ್ವಾಯಿ ಅಕ್ರಮಗಳು ಒಂದಾದ ಬಳಿಕ ಒಂದು ಹೊರಬೀಳುತ್ತಿದೆ. ಸಂಸ್ಥೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಭರ್ತಿಯಾಗದ ಹುದ್ದೆಗಳ ಬಗ್ಗೆ ಸಾಲು ಸಾಲು ವರದಿಗಳಾಗುತ್ತಿವೆ.
2023ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಔಷಧ ಖರೀದಿ, ಪೆಟ್ ಸ್ಕ್ಯಾನ್ ಟೆಂಡರ್‌ಗಳಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಅಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಎಎಸ್ ಅಧಿಕಾರಿ ನೇತೃತ್ವದ ತನಿಖಾ ಸಮಿತಿ ರಚಿಸಿದೆ. ಅದೇ ವರ್ಷ ನವೆಂಬರ್‌ನಲ್ಲಿ ಕೋವಿಡ್ ಸಂದರ್ಭದಲ್ಲಿ ಔಷಧ ಮತ್ತು ಉಪಕರಣಗಳ ಖರೀದಿ ವೇಳೆ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪವೂ ಕೇಳಿಬಂದಿದ್ದು, ಇವೆಲ್ಲವುದರ ತನಿಖೆ ನಡೆಯುತ್ತಿದೆ. ಈ ಎಲ್ಲಾ ವಿವಾದಗಳ ನಡುವೆ 2025ರ ಸೆಪ್ಟೆಂಬರ್‌ನಲ್ಲಿ ಅಚಾನಕ್ ಆಗಿ ಕಿದ್ವಾಯಿಗೆ ಲೋಕಾಯುಕ್ತರು ಭೇಟಿ ನೀಡಿದ್ದು, 618 ಹೊಸ ಪ್ರಕರಣಗಳಿದ್ದರೂ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇರುವುದು ಬಹಿರಂಗವಾಗಿದೆ. ಅನಾಮಿಕ ವ್ಯಕ್ತಿಯಿಂದ ಅವ್ಯವಹಾರ ಮತ್ತು ಅಕ್ರಮಗಳ ದೂರು ಬಂದ ಕಾರಣ ಈ ದಾಳಿ ನಡೆಸಲಾಗಿದ್ದು, ಆಡಳಿತಾತ್ಮಕ ದೋಷಗಳು ಬಹಿರಂಗಗೊಂಡಿದೆ.
ಇವೆಲ್ಲವುದರ ನಡುವೆಯೇ ನಿರ್ದೇಶಕರ ವಜಾ, ಅಭಾರಿ ನಿರ್ದೇಶಕರ ನೇಮಕ, ಪದೇ ಪದೇ ಬದಲಾವಣೆ ಎಲ್ಲವೂ ನಡೆದಿದೆ. ಈ ಎಲ್ಲಾ ನೇಮಕ-ವಜಾ ಆಟದಲ್ಲಿ ಬಳಲಿದ್ದು, ಕಿದ್ವಾಯಿ ಸೇವಾ ವ್ಯವಸ್ಥೆ ಎಂದರೆ ತಪ್ಪಾಗದು. ಸರಿಯಾದ ಸೌರ್ಕಯವಿಲ್ಲದೆ, ನರ್ಸ್ ಮೊದಲಾದ ಹುದ್ದೆಗಳಿಗೆ ನೇಮಕಾತಿ ಆಗದಿರುವ ಕಿದ್ವಾಯಿಯ ಅವ್ಯವಸ್ಥೆಯು ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ತಟ್ಟುತ್ತಿರುವುದು ಬಡ ರೋಗಿಗಳಿಗೆ. ಇವೆಲ್ಲವುದು ಮಾಧ್ಯಮಗಳ ವರದಿ ಮೂಲಕ ಮುನ್ನೆಲೆಗೆ ಬರುತ್ತಿದ್ದಂತೆ ಸದ್ಯ ಆಡಳಿತಾಧಿಕಾರಿ ಸ್ಥಾನವನ್ನು ತೆಗೆದುಹಾಕಿ, ನಿರ್ದೇಶಕರಿಗೆ ಪೂರ್ಣಾಧಿಕಾರ ನೀಡಿ ಆದೇಶವನ್ನು ಹೊರಡಿಸಲಾಗಿದೆ. ಇನ್ನಾದರೂ ಕಿದ್ವಾಯಿಯ ಸಮಸ್ಯೆಗಳು ತಕ್ಕಮಟ್ಟಿಗಾದರೂ ಸರಿಯಾಗಬಹುದೇ ಎಂಬುದನ್ನು ಕಾದುನೋಡಬೇಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




