ಸತ್ಯವನ್ನು ಪ್ರಪಂಚಕ್ಕೆ ತೋರಿಸುವುದು ನಮ್ಮ ಉದ್ದೇಶವಾಗಿತ್ತು. ಈ ವರದಿಯ ಮೂಲಕ, ಅಲ್ಲಿನ ಜನರ ಕಷ್ಟಗಳನ್ನು, ಅವರ ಮಾತುಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ಇದು ಭಾವನಾತ್ಮಕ ಇರಬಹುದು. ಆದರೆ ಸತ್ಯಾಂಶದ ಮೇಲೆ ಆಧಾರಿತವಾದದ್ದು. ನಮ್ಮ ಸಮಾಜ ದುರ್ಬಲರ ಮೇಲೆ ತೋರುವ ಅನ್ಯಾಯ, ನಿರ್ಲಕ್ಷ್ಯಕ್ಕೆ ಇದು ಸ್ಪಷ್ಟ ಉದಾಹರಣೆ
ನಿನ್ನೆ ಕೋಗಿಲು ಲೇಔಟ್‌ಗೆ ಹೋದಾಗ, ಆ ಚಳಿಗಾಲದ ಗಾಳಿಯಲ್ಲಿ ಮಕ್ಕಳ ಅಳುವ ಧ್ವನಿ, ಮಹಿಳೆಯರ ಕಣ್ಣೀರು, ಮತ್ತು ಪುರುಷರ ನಿರಾಶೆ ನಮ್ಮನ್ನು ಭಾವುಕರನ್ನಾಗಿ ಮಾಡಿದವು. ಅದು ಒಂದು ಸ್ಥಳವಾಗಿರಲಿಲ್ಲ, ಅದು ಮನುಷ್ಯತ್ವದ ಪರೀಕ್ಷಾ ಕೇಂದ್ರವಾಗಿತ್ತು. ಅಲ್ಲಿ ನಾನು ಕಂಡದ್ದು ಕೇವಲ ಮನೆಗಳ ಧ್ವಂಸ ಮಾತ್ರವಲ್ಲ, ಬದುಕಿನ ಧ್ವಂಸ. ಸರ್ಕಾರದ ಭರವಸೆಗಳು ಅವಶೇಷಗಳ ನಡುವೆ ಸಮಾಧಿಯಾಗಿತ್ತು. ಮನೆಗಳನ್ನ ಕೆಡವಿದ ಮೇಲೆ, ಸರ್ಕಾರ “ಮನೆ ಕೊಡ್ತೀವಿ” ಅಂತ ಹೇಳಿತ್ತು. ಆದರೆ ಅಲ್ಲಿ ಉಳಿದದ್ದು ಚಳಿಯಲ್ಲಿ ನಡುಗುವ ದೇಹಗಳು, ಹಸಿವಿನಲ್ಲಿ ಒದ್ದಾಡುವ ಹೊಟ್ಟೆಗಳು, ಗಾಯಗೊಂಡ ಕಾಲುಗಳು, ಮತ್ತು ಭಯದಲ್ಲಿ ಮಡುಗಟ್ಟಿದ ಕಣ್ಣುಗಳು ಮಾತ್ರ.
ಈ ಸತ್ಯವನ್ನ ಪ್ರಪಂಚಕ್ಕೆ ತೋರಿಸುವುದು ನಮ್ಮ ಉದ್ದೇಶವಾಗಿತ್ತು. ಈ ಲೇಖನದ ಮೂಲಕ, ಅಲ್ಲಿನ ಜನರ ಕಷ್ಟಗಳನ್ನು, ಅವರ ಮಾತುಗಳನ್ನು ನಿಮ್ಮ ಮುಂದಿಡುತ್ತೇವೆ. ಇದು ಭಾವನಾತ್ಮಕ ಇರಬಹುದು, ಆದರೆ ಸತ್ಯಾಂಶದ ಮೇಲೆ ಆಧಾರಿತವಾದದ್ದು. ಇದು ನಮ್ಮ ಸಮಾಜದ ದುರ್ಬಲರ ಮೇಲಿನ ಅನ್ಯಾಯ.

ಕೋಗಿಲು ಲೇಔಟ್ ರಸ್ತೆಗಳು ಧೂಳುಮಯವಾಗಿತ್ತು. ಆದರೆ ಅದಕ್ಕಿಂತ ಹೆಚ್ಚು ನೋಯಿಸಿದ್ದು, ಅಲ್ಲಿನ ಜನರ ಪರಿಸ್ಥಿತಿ. ಸರ್ಕಾರದ ಬುಲ್ಡೋಜರ್‌ಗಳು ಅವರ ಮನೆಗಳನ್ನು ಕೆಡವಿ ಹಾಕಿದ ನಂತರ, ಅವರು ಈಗ ತಾತ್ಕಾಲಿಕ ಟೆಂಟ್‌ಗಳಲ್ಲಿ ಇನ್ನೊಂದಿಷ್ಟು ಮಂದಿ ಬಯಲಿನಲ್ಲಿ ಬದುಕುತ್ತಿದ್ದಾರೆ. ಚಳಿಯಲ್ಲಿ ಅವರ ದೇಹಗಳು ನಡುಗುತ್ತಿವೆ, ಮುಖಗಳಲ್ಲಿ ಭಯ ಮತ್ತು ನಿರಾಶೆ ಎದ್ದು ಕಾಣುತ್ತಿತ್ತು. ಮನುಷ್ಯತ್ವ ಇರುವ ಯಾರಾದರೂ ಅಲ್ಲಿಗೆ ಹೋದರೆ, ಕಣ್ಣುಗಳು ತೇವಗೊಳ್ಳದೇ ಇರಲು ಸಾಧ್ಯವೇ ಇಲ್ಲ. ಚಿಕ್ಕ ಚಿಕ್ಕ ಮಕ್ಕಳ ಚರ್ಮ ಚಳಿಗೆ ಸುಲಿದು ಹೋಗಿದೆ. ಅವರ ಕಾಲುಗಳಿಗೆ ಅಲ್ಲಲ್ಲೇ ಬಿದ್ದ ಕಲ್ಲುಗಳು ಮತ್ತು ಗಾಜುಗಳು ತಾಕಿ ಗಾಯಗಳಾಗಿತ್ತು. ನೋವಿನಿಂದಲೂ, ನಿರ್ಲಕ್ಷ್ಯದಿಂದಲೂ ರಕ್ತ ಹರಿಯುತ್ತಿತ್ತು. ಸರ್ಕಾರ ತನ್ನ ಹೊಣೆಗಾರಿಕೆಯನ್ನು ನೆನಪಿಸಿಕೊಂಡಿದೆಯೇ? ಬಡವರ ಕಣ್ಣೀರು ಸರ್ಕಾರಕ್ಕೆ ಕಾಣುತ್ತಿಲ್ಲವೇ?

8 ವರ್ಷದ ಬಾಲಕಿ ಬಯಲಿನಲ್ಲೇ ಶೌಚಕ್ಕೆ ಕುಳಿತಿದ್ದಳು. ಆಕೆದೇನಾದರೂ ತಪ್ಪಾ? ಇಲ್ಲ. ತಪ್ಪು ಅವಳನ್ನು ಈ ಪರಿಸ್ಥಿತಿಗೆ ತಳ್ಳಿದ ವ್ಯವಸ್ಥೆಯದು. ಒಂದು ಮಗು ಗೌರವವಿಲ್ಲದೆ ಬದುಕಬೇಕಾದ ಸ್ಥಿತಿ ಬಂದರೆ, ಅದು ಸಮಾಜದ ಸೋಲು. ಇದು ಯಾವ ರೀತಿಯ ನಾಗರಿಕತೆ? ಸರ್ಕಾರ ಇವರನ್ನು ಮನುಷ್ಯರೆಂದು ಭಾವಿಸುತ್ತದೆಯೇ? ಎಂಬ ಸಾಲು ಸಾಲು ಪ್ರಶ್ನೆಗಳು ನನ್ನ ತಲೆಯಲ್ಲಿ ಹಾದುಹೋಗುತ್ತಿತ್ತು.
ಅಲ್ಲಿನ ಜನರು ಹೇಳುತ್ತಾರೆ, ಒಂದು ಹೊತ್ತಿನ ಊಟಕ್ಕೂ ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ದಿನಕ್ಕೆ ಒಂದೇ ಹೊತ್ತು ಊಟ ಸಿಗುತ್ತಿದ್ರೆ, ಅದೂ ಕೆಲ ಸಂಘಟನೆಗಳು, ಎನ್‌ಜಿಒಗಳು ಕೊಡುವ ರೇಷನ್‌ನಿಂದ. “ಚಿಕ್ಕ ಚಿಕ್ಕ ಮಕ್ಕಳನ್ನ ಇಟ್ಟುಕೊಂಡು ನಾವು ಊಟಕ್ಕೆ ಏನು ಮಾಡಬೇಕು?” “ಚಳಿಯಲ್ಲಿ ಬದುಕುವುದು ಹೇಗೆ?” ಅನ್ನೋದು ಅವರು ನನಗೆ ಕೇಳಿದ ಮರುಪ್ರಶ್ನೆಯಾಗಿತ್ತು. “ಸರ್ಕಾರ ನಮ್ಮ ಬಗ್ಗೆ ಒಂದೇ ಕ್ಷಣವೂ ಯೋಚಿಸಿಲ್ಲ” ಅನ್ನೋದು ಅಲ್ಲಿನ ಜನರ ಒಟ್ಟಾರೆ ಮಾತು. ಮನೆ ಕೆಡವಿದ ಮೇಲೆ, ಕನಿಷ್ಠ ಒಂದೇ ಹೊತ್ತಿನ ಊಟಕ್ಕೂ ವ್ಯವಸ್ಥೆ ಮಾಡಿಲ್ಲ ಅನ್ನೋದು ಅವರ ಅಳಲು. ರಾಜ್ಯ ಸರ್ಕಾರಕ್ಕೆ ಬಡವರ ಹೊಟ್ಟೆ ಎಂದರೆ ಇಷ್ಟು ಅಗ್ಗವೇ?

ಅವರು ರಾತ್ರಿ ಮಲಗುವುದು ತೆರೆದ ಆಕಾಶದ ಕೆಳಗೆ. ಡಿಸೆಂಬರ್ 21ರಿಂದ ನೆಲಸಮ ನಡೆದ ನಂತರ, 150ಕ್ಕೂ ಹೆಚ್ಚು ಕುಟುಂಬಗಳು ಮನೆಯನ್ನ ಕಳೆದುಕೊಂಡಿದೆ. ಇದು ಕೇವಲ ಸರ್ಕಾರದ ನಿರ್ಲಕ್ಷ್ಯವಲ್ಲ, ಅಮಾನವೀಯತೆ. ಅವರು ಬಡವರು, ಕೆಲಸಗಾರರು, ಆದರೆ ಅವರ ಜೀವನವನ್ನು ಯೋಚಿಸದೇ ಮನೆಗಳನ್ನು ಕೆಡವಿದ್ದಾರೆ. ಒಂದೇ ಒಂದು ಹೊತ್ತಿನ ಊಟಕ್ಕೂ ವ್ಯವಸ್ಥೆ ಇಲ್ಲದಿದ್ದರೆ, ಇದು ಯಾವ ರೀತಿಯ ಸರ್ಕಾರ? ಇದು ಯಾವ “ಸ್ಮಾರ್ಟ್ ಸಿಟಿ”ಯ ಚಿತ್ರಣ?

ಕೋಗಿಲು ಜನರು ಮನೆ ಕಳೆದುಕೊಳ್ಳೋದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣವಾದರೆ, ಅಲ್ಲಿನ ಜನರ ಆತ್ಮಗೌರವವನ್ನ ಬಿಜೆಪಿ ಕಸಿದುಕೊಳ್ಳುತ್ತಿದೆ. ಇನ್ನೂ ವಿಪಕ್ಷ ನಾಯಕ ಆರ್ ಅಶೋಕ್ ಕೋಗಿಲು ಲೇಔಟ್‌ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸ್ಯಾಟಲೈಟ್ ಇಮೇಜ್‌ಗಳನ್ನು ತೋರಿಸಿ, “ಮನೆಗಳು ಇತ್ತೀಚಿನದು, ನೀವು ಬಾಂಗ್ಲಾದೇಶದವರು” ಎಂದು ಹೇಳಿದ್ದಾರೆ. ಆದರೆ ಅಲ್ಲಿನ ಜನರು ಹೇಳುವಂತೆ, ಅವರು ಭಾರತೀಯರು, ಡಾಕ್ಯುಮೆಂಟ್ಸ್ ಇದೆ. ಬಿಜೆಪಿಯ ಆರ್ ಅಶೋಕ್ ಅವರನ್ನು ಬಾಂಗ್ಲಾದೇಶದವರು ಎಂದು ಆರೋಪಿಸಿದ್ದು, ಅವರಿಗೆ ಬರಸಿಡಿಲು ಬಡಿದಂತಾಗಿದೆ. “ನಮ್ಮ ಬಳಿ ಎಲ್ಲಾ ಡಾಕ್ಯುಮೆಂಟ್ಸ್ ಇದೆ, ನಾವು ಭಾರತೀಯರು” ಎಂದು ಒಬ್ಬ ಮಹಿಳೆ ಎದೆ ತಟ್ಟಿ ಹೇಳಿದಳು. ಆಕೆಯ ಮಾತಿನಲ್ಲಿ ನೋವು ಇತ್ತು, ಕೋಪ ಇತ್ತು, ಅಪಮಾನ ಇತ್ತು. “ನಾವು ಭಾರತೀಯರು” ಅಂತ ಒಬ್ಬ ಮಹಿಳೆ ಎದೆ ತಟ್ಟಿ ಹೇಳುವ ಸ್ಥಿತಿ ಬಂದಿದ್ರೆ, ಆ ದೇಶ ಎಲ್ಲಿ ನಿಂತಿದೆ ಅನ್ನೋದನ್ನ ನಾವು ಕೇಳಿಕೊಳ್ಳಬೇಕು. ಇಲ್ಲಿ ಪ್ರಶ್ನೆ ಬರೋದು ದೇಶಭಕ್ತಿ ಅನ್ನೋದು ಬಡವನಿಗೆ ಅನ್ವಯಿಸಲ್ಲವೇ? ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತು ಪತ್ರ ಇವೆಲ್ಲಾ ಬಡವನ ಕೈಯಲ್ಲಿ ಇದ್ದರೂ, ಅವರು ಇನ್ನೂ ಸಂಶಯಾಸ್ಪದ ವ್ಯಕ್ತಿಗಳೇ? ಆರ್. ಅಶೋಕ್‌ರಂತಹ ನಾಯಕರು ಡಾಕ್ಯುಮೆಂಟ್ಸ್ ಚೆಕ್ ಮಾಡದೆಯೇ ಆರೋಪ ಮಾಡಿದ್ದು, ಅವರಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದು ಬರೀ ರಾಜಕೀಯ ಹೇಳಿಕೆಯಲ್ಲ, ಇದು ಮಾನವೀಯತೆ ಹಲ್ಲೆ.

ನಾಚಿಕೆಗೆಟ್ಟ ಸಂಗತಿ ಅಂದ್ರೆ ಕೆಲ ಮಾಧ್ಯಮಗಳ ವರ್ತನೆ. ಬಿಜೆಪಿ ಮತ್ತು ಕೆಲ ಮಾಧ್ಯಮಗಳು ಅವರನ್ನು ಬಾಂಗ್ಲಾದೇಶದವರು ಎಂದು ಕರೆದಿದ್ದು, ಅವರ ಜೀವನವನ್ನು ನರಕ ಮಾಡಿದೆ.
ಅಲ್ಲಿನ ಜನರು ಹೇಳುತ್ತಾರೆ, “ನಾವು ಬಾಂಗ್ಲಾದೇಶದಿಂದ ಬಂದಿದ್ದೇವೋ ಇಲ್ಲವೋ ಯಾವುದನ್ನೂ ಅರಿಯದ ಮಾಧ್ಯಮಗಳು, ನಮಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಸುಳ್ಳು ಆಶ್ವಾಸನೆ ಕೊಟ್ಟು, ನಮ್ಮ ಮಾತುಗಳನ್ನು ಕಟ್ ಮಾಡಿ ಎಡಿಟ್ ಮಾಡಿ ತೋರಿಸುತ್ತಿವೆ” ಅಂತ ಹೇಳುತ್ತಾರೆ. ಇದು ಕೇವಲ ವಂಚನೆ ಅಲ್ಲ, ಕೆಲ ಮಾಧ್ಯಮಗಳು ಮಾನವೀಯತೆಗೆ ಕೊಟ್ಟ ಹೊಡೆತ. ಇದು ಪತ್ರಿಕೋದ್ಯಮ ಅಲ್ಲ ಅಧಿಕಾರದ ಗುಲಾಮಗಿರಿ. “ಕೋಗಿಲು ಪ್ರದೇಶದಲ್ಲಿ ಪ್ರಧಾನವಾಗಿ ಮುಸ್ಲಿಂ ಕಮ್ಯೂನಿಟಿಯವರು ಇದ್ದರೂ, ಅವರು ಭಾರತೀಯರು” ಅಂತ ಹೇಳ್ತಾರೆ ಕೆಲ ಸಂಘಟನೆಗಳ ಮುಖ್ಯಸ್ಥರು. ಸ್ಯಾಟಲೈಟ್ ಇಮೇಜ್‌ಗಳು ಕನ್‌ಸ್ಟ್ರಕ್ಷನ್ ರೀಸೆಂಟ್ ಎಂದು ಹೇಳುತ್ತವೆ, ಆದರೆ ಅವರ ಡಾಕ್ಯುಮೆಂಟ್ಸ್ ಅನ್ನು ನೋಡದೇ ಆರೋಪ ಮಾಡುವುದು ಸರಿಯೇ? ತನಿಖೆಯಾದ ಮೇಲೆ ಅಲ್ಲವೇ ಸತ್ಯ ತಿಳಿಯುವುದು. ಇಂತಹ ಆರೋಪಗಳು ಅವರ ಗಾಯಕ್ಕೆ ಉಪ್ಪು ಸವರಿದಂತೆ.

ಈಗ ಪ್ರಶ್ನೆ ಬರೋದು, ಒಬ್ಬ ಬಡವನನ್ನ ಅಪರಾಧಿ ಮಾಡೋಕೆ ಎಷ್ಟು ಸಮಯ ಬೇಕು? ಒಬ್ಬ ನಿರಾಶ್ರಿತನನ್ನು ವಿದೇಶಿ ಮಾಡೋದು ಎಷ್ಟು ಸುಲಭ? ಅಂತ. ಅಲ್ಲಿನ ಜನರು ಕೇಳುತ್ತಿರೋದು ಏನು? ಇವರು ಅಪಾರ್ಟ್‌ಮೆಂಟ್ ಕೇಳ್ತಿಲ್ಲ, ಐಷಾರಾಮಿ ಜೀವನ ಕೇಳ್ತಿಲ್ಲ.

“ನಮಗೆ ಒಂದು ಖಾಲಿ ಜಾಗವನ್ನಾದರೂ ಕೊಡಿ ಸಾಕು. ಅಲ್ಲೇ ಜೋಪಡಿ ಕಟ್ಟಿಕೊಂಡು ಹೆಂಗೋ ಜೀವನ ಮಾಡ್ತೀವಿ” ಅನ್ನೋದು ಅವರ ಬೇಡಿಕೆ. ಬದುಕೋಕೆ ಒಂದು ತುಂಡು ನೆಲ. ಇಷ್ಟೇ ಇವರ ಬೇಡಿಕೆ. ಇಷ್ಟು ಸಣ್ಣ ಬೇಡಿಕೆಗೂ ಸರ್ಕಾರ ಬೆನ್ನು ತೋರಿಸಿದರೆ, ಈ ದೇಶದಲ್ಲಿ ಬಡವನಿಗೆ ಜಾಗ ಎಲ್ಲಿ? ಇದು ಬಡವರ ಮೇಲಿನ ಬುಲ್ಡೋಜರ್ ಪಾಲಿಟಿಕ್ಸ್? ಅವರು ಕೇವಲ ಬದುಕಲು ಬಯಸುತ್ತಾರೆ, ಆದರೆ ಸರ್ಕಾರ ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳುತ್ತಿದೆ. ಇದು ಕೇವಲ ಕೋಗಿಲು ಲೇಔಟ್‌ನ ಕಥೆ ಮಾತ್ರವಲ್ಲ, ನಮ್ಮ ಸಮಾಜದಲ್ಲಿ ಬಡವರ ಮೇಲೇ ನಡೆಯುತ್ತಿರುವ ಅನ್ಯಾಯದ ಕಥೆ. ಈ ದೇಶದಲ್ಲಿ ಮನುಷ್ಯತ್ವ ಇನ್ನೂ ಜೀವಂತ ಇದೆಯಾ ಅನ್ನೋದನ್ನ ಪ್ರಶ್ನಿಸತ್ತೆ ಕೋಗಿಲು ಲೇಔಟ್. ಇದು ರಾಜಕೀಯ ವಿಷಯ ಅಲ್ಲ. ಧರ್ಮದ ವಿಷಯ ಅಲ್ಲ. ಇದು ಮನುಷ್ಯತ್ವದ ವಿಷಯ. ಭಾರತದಲ್ಲಿ ಬಡವರಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳಬೇಡಿ.





