'ಕೇರಳ ಕುಂಭಮೇಳ'ವು ಧಾರ್ಮಿಕ ನಂಬಿಕೆಯ ಸ್ವಾಭಾವಿಕ ಅಭಿವ್ಯಕ್ತಿಯಾಗಿದ್ದರೆ ಸಮಾಜ ಅದನ್ನು ಸ್ವೀಕರಿಸಬಹುದು. ಆದರೆ, ಅದು ಚುನಾವಣಾ ಲಾಭಕ್ಕಾಗಿ, ಹಿಂದುತ್ವ ರಾಜಕಾರಣವನ್ನು ಕೇರಳದ ನೆಲೆಗೆ ಬೇರೂರಿಸಲು ಬಳಸುವ ಉಪಕರಣವಾಗಿದ್ದರೆ, ಅದು ಪ್ರಶ್ನೆಗೆ ಒಳಪಡಲೇಬೇಕು. ಧರ್ಮವನ್ನು ರಾಜಕೀಯ ಆಯುಧವಾಗಿಸುವ ಯಾವುದೇ ಪ್ರಯತ್ನವೂ ಪ್ರಜಾಸತ್ತಾತ್ಮಕ ಹಾಗೂ ಪ್ರಗತಿಪರ ಸಮಾಜಕ್ಕೆ ಅಪಾಯಕಾರಿ ಎಂಬುದನ್ನು ಮರೆಯಬಾರದು.
ಜನರ ಮೌಢ್ಯ, ಪಾಪ-ಪುಣ್ಯಗಳೆಂಬ ಭಯವನ್ನೇ ಬಂಡವಾಳ ಮಾಡಿಕೊಂಡಿರುವವರು ಧರ್ಮದ ದಂಧೆ ಶುರುಮಾಡಿದ್ದಾರೆ. ಗಂಗೆ ಮತ್ತು ತ್ರಿವೇಣಿ ಸಂಗಮದಲ್ಲಿ ಮೂರು ಬಾರಿ ಮುಳುಗಿ ಎದ್ದರೇ ಪಾಪ ತೊಳೆದು ಹೋಗಿ ಪುಣ್ಯ ಲಭಿಸುತ್ತದೆ ಎಂಬ ಭ್ರಾಂತಿಯನ್ನು ಹಬ್ಬಿಸಿದ್ದಾರೆ. ಇದೇ ಭ್ರಾಂತಿಯ ಬಂಡವಾಳದಲ್ಲಿ ಕುಂಭಮೇಳ ಎಂಬ ಅದ್ಧೂರಿ ಕಾರ್ಯಕ್ರಮ ನಡೆಸುತ್ತಾರೆ. ಇದರ ಭಾಗವಾಗಿಯೇ ಕಳೆದ ವರ್ಷ(2025) ಜನವರಿ 13ರಿಂದ ಫೆಬ್ರುವರಿ 26ರವರೆಗೆ 45 ದಿನಗಳ ಕಾಲ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳವೂ ನಡೆಯಿತು. 144 ವರ್ಷಕ್ಕೊಮ್ಮೆ ನಡೆಯುತ್ತದೆ ಎಂದು ಹೇಳಲಾದ ಆ ಮಹಾ ಕುಂಭಮೇಳದಲ್ಲಿ ಐವತ್ತು ಕೋಟಿ ಜನ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ, ಪುಣ್ಯ ಅರಸಿ ಅಲ್ಲಿಗೆ ಹೋದವರು ಕಾಲ್ತುಳಿತಕ್ಕೆ ತುತ್ತಾಗಿ ಕನಿಷ್ಠ 82 ಜನ ಸಾವನ್ನಪ್ಪಿದ್ದಾರೆ. ಆದರೆ, ಸಾವುಗಳ ಸಂಖ್ಯೆ 37 ಎಂದು ಯೋಗಿ ಸರ್ಕಾರ ವಾದಿಸುತ್ತಿದೆ. ಮಹಾಕುಂಭಮೇಳಕ್ಕೆ ತೆರಳಿದ್ದ 900 ಮಂದಿ ಇಂದಿಗೂ ಕೂಡಾ ಪತ್ತೆಯಾಗಿಲ್ಲ. ಇದೆಲ್ಲವೂ ಕೂಡ ಬಿಜೆಪಿಯ ರಾಜಕೀಯ ತಂತ್ರವೆಂದೇ ಹೇಳಲಾಗುತ್ತದೆ. ಇದೀಗ, ಇಂತಹದೇ ಮತ್ತೊಂದು ರಾಜಕೀಯ ತಂತ್ರವನ್ನು ಹೆಣೆಯಲು ಬಿಜೆಪಿ ಸಜ್ಜಾಗಿದ್ದು, ಚುನಾವಣಾ ಹೊಸ್ತಿಲಿನಲ್ಲಿರುವ ಕೇರಳದ ಕಡೆಗೆ ತನ್ನ ದೃಷ್ಟಿ ಹಾಯಿಸಿದೆ.
ಹೌದು, ಕೇರಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೇರಳ ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕುಂಭಮೇಳ ಆಯೋಜಿಸಲು ಮುಂದಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ತಿರುನವಾಯದಲ್ಲಿರುವ ನವ ಮುಕುಂದ ದೇವಾಲಯದ ಸ್ನಾನದ ಘಾಟ್‌ಗಳಲ್ಲಿ ಈ ಹಿಂದೆ 12ವರ್ಷಕ್ಕೊಮ್ಮೆ ನಡೆಸುತ್ತಿದ್ದ ಉತ್ಸವ 18ನೇ ಶತಮಾನದಲ್ಲಿಯೇ ನಿಂತಿತ್ತು. ಆ ಬಳಿಕ 2016ರಿಂದ ನದಿ ಪೂಜೆ ಮತ್ತು ಸಾಂಸ್ಕ್ರತಿಕ ಆಚರಣೆಗಳನ್ನ ಮಾಡತೊಡಗಿದರು. ಈ ಹಿಂದೆ ನಡೆಯುತ್ತಿದ್ದ ಸಾಮಾನ್ಯ ಉತ್ಸವಕ್ಕೆ ಇದೀಗ ‘ಕುಂಭಮೇಳ‘ ಎಂದು ಹೆಸರಿಟ್ಟು ಮತ್ತೆ ಧರ್ಮದ ಹೆಸರಿನಲ್ಲಿ ಹೊಸ ರಾಜಕೀಯ ಹುಟ್ಟುಹಾಕುವತ್ತ ಹಿಂದುತ್ವ ರಾಜಕಾರಣ ದಾಪುಗಾಲಿಡುತ್ತಿದೆ.
ಮುಗಿದು ಹೋದ ಅಧ್ಯಾಯವನ್ನು ಕೆದಕಿ, ಮರುಜೀವ ನೀಡುತ್ತಿರುವ ಇವರ ಆಟಗಳನ್ನ ನೋಡಿದರೇ ಇದು ಧಾರ್ಮಿಕ ಆಚರಣೆಯೋ ಅಥವಾ ಹಿಂದುತ್ವ ರಾಜಕಾರಣದ ಪ್ರಯತ್ನವೋ ಎಂಬ ಅನುಮಾನ ಹುಟ್ಟುತ್ತದೆ.

ಘಾಟ್‌ಗಳ ಪಕ್ಕದಲ್ಲಿ ಹರಿಯುವ ‘ದಕ್ಷಿಣ ಗಂಗಾ’ ಎಂದೂ ಕರೆಯಲ್ಪಡುವ ಭಾರತಪುಳ ನದಿಯಲ್ಲಿ ಹಲವರು ಮುಳುಗಿ ಎಳುತ್ತಿದ್ದಾರೆ. ಜನವರಿ 18ರಂದು ಆರಂಭವಾಗಿರುವ ಈ ಕುಂಭಮೇಳ ಫೆಬ್ರವರಿ 3ರಂದು ಕೊನೆಗೊಳ್ಳಲಿದೆ. ಮಲಪ್ಪುರಂ ಜಿಲ್ಲೆಯ ತಿರುನವಾಯ ನವ ಮುಕುಂದ ದೇವಾಲಯದ ಮುಂದೆ ಭಾರತಪುಳ ನದಿಯ ದಡದಲ್ಲಿ ನಡೆಯಲಿದೆ.
18 ದಿನಗಳ ಮೇಳಕ್ಕಾಗಿ ಹತ್ತಾರು ಸಾವಿರ ಜನರು ಘಾಟ್‌ಗಳಿಗೆ ತೆರಳುತ್ತಿದ್ದಾರೆ. ಭಕ್ತರು ಪವಿತ್ರ ಸ್ನಾನವನ್ನು ಮಾಡುವಾಗ 24 ಗಂಟೆಗಳ ಕಾಲ ವೇದ ಮಂತ್ರಗಳು ಪ್ರತಿಧ್ವನಿಸುತ್ತವೆ. ಸಂಜೆಯ ಹೊತ್ತಿಗೆ, ವಾರಣಾಸಿಯ ದಶಾಶ್ವಮೇಧ ಘಾಟ್‌ನಲ್ಲಿ ಪ್ರಸಿದ್ಧ ಗಂಗಾ ಆರತಿಯನ್ನು ನಡೆಸಲಾಗುತ್ತದೆ. ನೀಲ ಆರತಿ ಮಾಡುವ ಕಾಶಿ ವಿಶ್ವನಾಥ ದೇವಾಲಯದ ಪುರೋಹಿತರು ಸೇರಿದಂತೆ ಕೇಸರಿ ವಸ್ತ್ರ ಧರಿಸಿದ ಸಾಧುಗಳು ಇರುತ್ತಾರೆ.
ಹಿಂದುತ್ವ ಆಚರಣೆಯ ರೂವಾರಿ ಮಾತಾ ಅಮೃತಾನಂದಮಯಿ ಈ ಮೇಳದ ಮುಖ್ಯ ಪೋಷಕಿ. ಕೇರಳ ದೇವಸ್ವಮ್ ಮಂತ್ರಿ ಮತ್ತು ಸಿಪಿಐ ಎಂ ನಾಯಕ ವಿ.ಎನ್. ವಾಸವನ್ ಈ ಆಚರಣೆಯ ಪ್ರಧಾನ ಪೋಷಕರಲ್ಲೊಬ್ಬರು.
ಈ ಮೇಳದ ಪ್ರಮುಖ ಪ್ರೇರಕರು ಸ್ವಾಮಿ ಆನಂದವಂ ಭಾರತಿ, ಇವರು ಸಿಪಿಐ(ಎಂ) ವಿದ್ಯಾರ್ಥಿ ವಿಭಾಗ ಎಸ್ಎಫ್ಐ (ಭಾರತೀಯ ವಿದ್ಯಾರ್ಥಿ ಒಕ್ಕೂಟ)ದ ಮಾಜಿ ನಾಯಕರಾಗಿದ್ದು, ಈಗ ವಾರಣಾಸಿ ಮೂಲದ ಶ್ರೀ ಪಂಚ ದಶನಂ ಜುನಾ ಅಖಾಡದ ಹಿರಿಯ ಸನ್ಯಾಸಿಯಾಗಿದ್ದಾರೆ.

“ತಿರುನವಾಯದಲ್ಲಿ ಈ ಹಿಂದೆ ಅಸ್ತಿತ್ವದಲ್ಲಿರುವ ಸಂಸ್ಕ್ರತಿ ಮತ್ತು ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ. ಕೇರಳದಲ್ಲಿ ನಾನಾ ಕಾರಣಗಳಿಂದ ಹಿಂದಕ್ಕೆ ತಳ್ಳಲ್ಪಟ್ಟಿದ್ದ ಹಿಂದೂ ಧರ್ಮ ಮತ್ತು ಧರ್ಮದ ಆಚರಣೆ ಈಗ ಪುನರುಜ್ಜೀವನವಾಗಿದೆ. ಈ ಉತ್ಸವದಲ್ಲಿ ಮಹಾಕುಂಭಮೇಳದ ಎಲ್ಲ ಆಚರಣೆಗಳನ್ನು ಜಾರಿಗೆ ತಂದಿದ್ದೇವೆ. ಸಾವಿರಾರು ಸಾಧುಗಳು ಈಗಾಗಲೇ ಇಲ್ಲಿದ್ದಾರೆ. ಇದ್ದರೂ ಇನ್ನೂ ಸುಮಾರು 750ಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆಯಿದೆ” ಎಂದು ಆನಂದವಂ ಭಾರತಿ ಹೇಳಿದ್ದಾರೆ.
“ಸನಾತನ ಧರ್ಮವನ್ನು ಎತ್ತಿಹಿಡಿಯುವಲ್ಲಿ ಹಿಂದುಳಿದಿರುವ ಕೇರಳದ ದಿಕ್ಕನ್ನೇ ಈ ಕುಂಭಮೇಳ ಬದಲಾಯಿಸಲಿದೆ” ಎಂದು ಸ್ವಾಮಿ ಮುಕುಂದಾನಂದಗಿರಿ ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ದಲಿತ ನಾಯಕಿ ದಲಿತರಿಗೇ ವಿರುದ್ಧವಾಗಿ ವರ್ತಿಸುತ್ತಿರುವುದೇಕೆ?
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಿ.ಪಿ. ಅನಿಲ್, “ಕುಂಭಮೇಳವನ್ನು ನಾವು ವಿರೋಧಿಸುವುದಿಲ್ಲ, ಹಾಗಂತ, ಬೆಂಬಲಿಸುವುದೂ ಇಲ್ಲ. ಈ ಕಾರ್ಯಕ್ರಮವನ್ನು ಕೋಮು ಆಧಾರದ ಮೇಲೆ ಬಳಸಿಕೊಳ್ಳಲು ಯಾವುದೇ ಪ್ರಯತ್ನ ನಡೆದರೆ, ನಮ್ಮ ಪಕ್ಷವು ಮಧ್ಯಪ್ರವೇಶಿಸುತ್ತದೆ” ಎಂದು ಎಚ್ಚರಿಕೆಯ ಮಾತನಾಡಿದ್ದಾರೆ.
ಈಗಾಗಲೇ, ಕುಂಭಮೇಳ ಆಯೋಜಕರ ವಿರುದ್ಧ ನದಿಯ ಮೇಲಿನ ಅತಿಕ್ರಮಣ, ಪರಿಸರ ಹಾನಿ ಆರೋಪಗಳೂ ಕೇಳಿಬಂದಿವೆ. ತಿರುನವಾಯ ಗ್ರಾಮ ಅಧಿಕಾರಿಗಳು ನೋಟಿಸ್ ಕೂಡ ಹೊರಡಿಸಿದ್ದರು. ಆದರೆ, ಇದನ್ನ ಲೆಕ್ಕಿಸದೆಯೇ ಆಯೋಜಕರು ಕುಂಭಮೇಳದಲ್ಲಿ ಮೀಯುತ್ತಿದ್ದಾರೆ.

ಅಂದಹಾಗೆ, ತಿರುನವಾಯದಲ್ಲಿರುವ ಭಾರತಪುಳ ದಡವು ಎರಡು ಸ್ಥಳೀಯ ರಾಜರಾದ ಝಮೋರಿನ್ ಮತ್ತು ವಲ್ಲುವಕೋಣತಿರಿ ನಡುವಿನ ರಕ್ತಸಿಕ್ತ ಯುದ್ಧಗಳಿಗೆ ಸಾಕ್ಷಿಯಾಗಿತ್ತು. ಆ ಕದನಗಳನ್ನು ಗುರುತಿಸಲು 18ನೇ ಶತಮಾನದ ಅಂತ್ಯದವರೆಗೂ ಪ್ರತಿ 12 ವರ್ಷಗಳಿಗೊಮ್ಮೆ ಮಾಮಂಕಂ ಅಥವಾ ಮಹಾಮಾಘಂ ನಡೆಸಲಾಗುತ್ತಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಆ ಉತ್ಸವಗಳು ಕಳೆದ 200ಕ್ಕೂ ಹೆಚ್ಚು ವರ್ಷಗಳಿಂದ ನಡೆದಿರಲಿಲ್ಲ.
2016ರಲ್ಲಿ ದೇವಾಲಯದ ಪ್ರಧಾನ ಅರ್ಚಕರು ಪ್ರಾಚೀನ ಮಹಾಮಾಘಂ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಭಾಗವಾಗಿ ಭಾರತಪುಳದಲ್ಲಿ ನದಿ ಪೂಜಾ ವಿಧಿಗಳನ್ನು ಪ್ರಾರಂಭಿಸಿದ್ದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹೊರತುಪಡಿಸಿ, ಈ ಆಚರಣೆಗಳು ನಿಯಮಿತವಾಗಿ ಮುಂದುವರೆದಿದ್ದವು. 2016ರಲ್ಲಿ, ನವ ಮುಕುಂದ ದೇವಾಲಯದಲ್ಲಿ ಮಾಘ ಮಾಸದಲ್ಲಿ ಸರಳವಾಗಿ ನದಿ ಪೂಜೆ ನಡೆಸಲಾಗಿತ್ತು. ಆ ಮೂಲಕ, ಮಾಮಂಕಂ ಅನ್ನು ನೆನಪಿಸಲಾಗಿತ್ತು. ಈಗ, ಬಿಜೆಪಿ ಸರ್ಕಾರವು ತನ್ನ ಮತ ಬ್ಯಾಂಕ್‌ಗಾಗಿ ಭಾರತಪುಳ ನದಿ ತೀರದ ಪೂಜೆಯನ್ನು ಮಹಾ ಕುಂಭಮೇಳವಾಗಿ ಪರಿವರ್ತಿಸಲು ಮುಂದಾಗಿದೆ.
ಮಧ್ಯ ಕೇರಳದ ಮೂಲಕ 209 ಕಿ.ಮೀ. ಹರಿಯುವ ಭಾರತಪುಳ ನದಿ, ಶತಮಾನಗಳಿಂದ ಭತ್ತದ ಕೃಷಿ ಮತ್ತು ಮಸಾಲೆ ಉತ್ಪಾದನೆಯ ಕೇಂದ್ರಬಿಂದುವಾಗಿದೆ. ಗಮನಾರ್ಹವಾಗಿ, ಚೇರ ರಾಜವಂಶದ ಅವಧಿಯಲ್ಲಿ ನದಿಯ ನೌಕಾಯಾನವು ಮಲಬಾರ್ ಕರಾವಳಿಗೆ ಸಂಪತ್ತು ಮತ್ತು ವಿಶ್ವಮಾನವತೆಯನ್ನು ತಂದುಕೊಟ್ಟಿತು. ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕ ಹೊಂದಿತ್ತು. ಅಂತಾರಾಷ್ಟ್ರೀಯ ಬಂದರುಗಳಿಗೆ ಮಸಾಲೆಗಳು, ದಂತ ಮತ್ತು ರತ್ನಗಳನ್ನು ರಫ್ತು ಮಾಡಲು ಅನುಕೂಲ ಮಾಡಿಕೊಟ್ಟಿತ್ತು.
ಪ್ರಸ್ತುತ, ಸಾವಿರಾರು ಹೆಕ್ಟೇರ್ ಪ್ರದೇಶದ ಕೃಷಿಗೆ ನೀರೊದಗಿಸುವ ಈ ನದಿ ತನ್ನ ಹರಿವಿನ ಉದ್ದಕ್ಕೂ ಅನಿಯಂತ್ರಿತ ಮರಳು ಗಣಿಗಾರಿಕೆ, ತ್ಯಾಜ್ಯ ಸುರಿಯುವಿಕೆ, ಅವೈಜ್ಞಾನಿಕ ನಿರ್ಮಾಣ ಮತ್ತು ಅರಣ್ಯನಾಶದಿಂದಾಗಿ ಈಗಾಗಲೇ ಅತಿಯಾದ ಶೋಷಣೆಗೆ ಒಳಗಾಗಿದೆ.

ಈಗ, ಕುಂಭಮೇಳದ ಕೊಳಕನ್ನೂ ಹೊರಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಲಕ್ಷಾಂತರ ಜನರು ಗಂಗಾ ನದಿಯಲ್ಲಿ ಮುಳುಗಿ ಎದ್ದಿದ್ದಾರೆ. ಆದರೆ, ಈ ನೀರು ಅತಿಯಾದ ಮಲದ ಬ್ಯಾಕ್ಟೀರಿಯಾ ಮತ್ತು ತ್ಯಾಜ್ಯದಿಂದಾಗಿ ಕಲುಷಿತಗೊಂಡಿದ್ದು, ಸ್ನಾನಕ್ಕೆ ಈ ನೀರು ಯೋಗ್ಯವಾಗಿಲ್ಲವೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿಗಳು ಹೇಳಿವೆ. 55 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರೂ, ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆಂಬ ಆರೋಪಗಳಿವೆ. ಹೀಗಿರುವಾಗ, ಕೇರಳದಲ್ಲಿ ನಡೆಯುತ್ತಿರುವ ಈ ಕುಂಭಮೇಳ ನದಿ ನೀರಿಗೆ ಸಂಚಕಾರ ತುರುವುದರಲ್ಲಿ ಸಂಶಯವೇ ಇಲ್ಲ.
ಕೇರಳದಲ್ಲಿ ರಾಜಕೀಯ ಲಾಭದಾಸೆಗೆ ಧರ್ಮದ ಪುನರುಜ್ಜೀವನ ಎಂದು ಹೇಳಿ ನದಿ ಪರಿಸರ ಹಾಳು ಮಾಡುವತ್ತ ಸಾಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸುರಕ್ಷಿತವಾಗಿ ಕೈಗೊಳ್ಳಲು ಪರಿಸರ ಜವಾಬ್ದಾರಿ ಎಂಬ ಮೂಲಭೂತ ತತ್ವದ ಅಗತ್ಯವಿದೆ. ಈ ರೀತಿ ಧಾರ್ಮಿಕ ಆಚರಣೆಗಳನ್ನ ಮಾಡುವ ಮೊದಲು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಪುನರುಜ್ಜೀವನ ಯಾರಿಗಾಗಿ? ನದಿ ಸತ್ತರೆ, ನಾವು ಪುನರುಜ್ಜೀವನಗೊಳಿಸುತ್ತಿರುವುದು ನಿಖರವಾಗಿ ಏನನ್ನ?
ತಿರುನವಾಯದ ಇತಿಹಾಸದಲ್ಲಿ ನಡೆದ ಮಾಮಾಂಕಂ ಮೇಳವು ಧಾರ್ಮಿಕ ಶ್ರದ್ಧೆಯ ಉತ್ಸವಕ್ಕಿಂತ ರಾಜಕೀಯ ಪ್ರಭುತ್ವದ ಘೋಷಣೆಯಾಗಿತ್ತು. ಸಾಮೂರಿ ಮತ್ತು ವಳ್ಳುವಕೋನಾತಿರಿ ಎಂಬ ಸ್ಥಳೀಯ ರಾಜವಂಶಗಳ ನಡುವಿನ ಅಧಿಕಾರ ಸಂಘರ್ಷ ಈ ಮೇಳದ ಹೃದಯವಾಗಿತ್ತು. ಯುದ್ಧ ಮತ್ತು ಆತ್ಮಾಹುತಿಯ ಮೂಲಕ ಶಕ್ತಿಯನ್ನು ಪ್ರದರ್ಶಿಸಲಾಗುತ್ತಿತ್ತು. ನವಮುಕುಂದ ದೇವಸ್ಥಾನ ಹಾಗೂ ಭಾರತಪುಳ ನದಿ ಮೇಳದ ಕೇಂದ್ರವಾಗಿದ್ದರೂ, ಧರ್ಮವು ಅಲ್ಲಿ ಪ್ರಧಾನವಾಗಿರಲಿಲ್ಲ; ಅದು ರಾಜಕೀಯ ಹೋರಾಟಕ್ಕೆ ಹಿನ್ನೆಲೆಯಾಗಿ ಮಾತ್ರ ಬಳಕೆಯಾಗಿತ್ತು. ಇಂತಹ ಇತಿಹಾಸ ಹೊಂದಿರುವ ಸ್ಥಳದಲ್ಲಿ ಇಂದು ಕುಂಭಮೇಳ ಮಾದರಿಯ ಧಾರ್ಮಿಕ ಉತ್ಸವವನ್ನು ಪುನರ್ ರಚಿಸುವುದು ಕೇವಲ ಸಾಂಸ್ಕೃತಿಕ ಪುನರುಜ್ಜೀವನವೋ, ಅಥವಾ ಇತಿಹಾಸದಲ್ಲೇ ಅಧಿಕಾರದ ಸಂಕೇತವಾಗಿದ್ದ ಸ್ಥಳವನ್ನು ಮತ್ತೆ ಗುರುತು ರಾಜಕಾರಣದ ವೇದಿಕೆಯಾಗಿಸುವ ಪ್ರಯತ್ನವೋ ಎಂಬ ಪ್ರಶ್ನೆಯನ್ನು ಎತ್ತುತ್ತದೆ.

ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಬಿಜೆಪಿ ಕೇರಳದಲ್ಲಿ ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಲು ಹಿಂದುತ್ವದ ಕಾರ್ಡ್ ಬಳಸುತ್ತಿದೆ. ಉತ್ತರ ಭಾರತದಲ್ಲಿ ಪ್ರಯೋಗಿಸಿದ ಧಾರ್ಮಿಕ ಧ್ರುವೀಕರಣದ ಮಾದರಿಯನ್ನು ಕೇರಳದಲ್ಲೂ ಜಾರಿಗೆ ತರುವ ಪ್ರಯತ್ನವಾಗಿ ಕೇರಳ ಕುಂಭಮೇಳ ನಡೆಸುತ್ತಿದೆ. ಧರ್ಮವನ್ನು ಸಾಂಸ್ಕೃತಿಕ ಆಚರಣೆಯಿಂದ ಹೊರತೆಗೆದು, ರಾಜಕೀಯ ಗುರುತಾಗಿ ರೂಪಿಸುವುದೇ ಈ ಕಾರ್ಯತಂತ್ರದ ಮೂಲ ಉದ್ದೇಶವೆಂಬ ಟೀಕೆಯೂ ಇದೆ.
ಇಂತಹ ಪ್ರಯತ್ನಗಳು ಕೇರಳದ ಬಹುಧರ್ಮ, ಬಹುಸಂಸ್ಕೃತಿ ಸಹಬಾಳ್ವೆಗೆ ಸವಾಲಾಗಬಹುದು. ಕೇರಳವು ಹಿಂದು–ಮುಸ್ಲಿಂ–ಕ್ರೈಸ್ತ ಸಮುದಾಯಗಳ ನಡುವೆ ಸೌಹಾರ್ದತೆಯನ್ನು ಉಳಿಸಿಕೊಂಡ ರಾಜ್ಯ. ಇಲ್ಲಿ ಧಾರ್ಮಿಕ ಹಬ್ಬಗಳು ಪರಸ್ಪರ ಗೌರವದೊಂದಿಗೆ ಆಚರಿಸಲ್ಪಡುತ್ತವೆ. ಆದರೆ, ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತವನ್ನು ಬಲಪಡಿಸಲು ಧಾರ್ಮಿಕ ಮಹೋತ್ಸವಗಳನ್ನು ಬಳಸಿದರೆ, ಅದು ಸಮಾಜದಲ್ಲಿ ಅನಗತ್ಯ ಧ್ರುವೀಕರಣಕ್ಕೆ ದಾರಿ ಮಾಡಿಕೊಡುವ ಅಪಾಯವಿದೆ.
ಅಂತಿಮವಾಗಿ, ‘ಕೇರಳ ಕುಂಭಮೇಳ’ವು ಧಾರ್ಮಿಕ ನಂಬಿಕೆಯ ಸ್ವಾಭಾವಿಕ ಅಭಿವ್ಯಕ್ತಿಯಾಗಿದ್ದರೆ ಸಮಾಜ ಅದನ್ನು ಸ್ವೀಕರಿಸಬಹುದು. ಆದರೆ, ಅದು ಚುನಾವಣಾ ಲಾಭಕ್ಕಾಗಿ, ಹಿಂದುತ್ವ ರಾಜಕಾರಣವನ್ನು ಕೇರಳದ ನೆಲೆಗೆ ಬೇರೂರಿಸಲು ಬಳಸುವ ಉಪಕರಣವಾಗಿದ್ದರೆ, ಅದು ಪ್ರಶ್ನೆಗೆ ಒಳಪಡಲೇಬೇಕು. ಧರ್ಮವನ್ನು ರಾಜಕೀಯ ಆಯುಧವಾಗಿಸುವ ಯಾವುದೇ ಪ್ರಯತ್ನವೂ ಪ್ರಜಾಸತ್ತಾತ್ಮಕ ಹಾಗೂ ಪ್ರಗತಿಪರ ಸಮಾಜಕ್ಕೆ ಅಪಾಯಕಾರಿ ಎಂಬುದನ್ನು ಮರೆಯಬಾರದು.




