ಕುಂದಾಪ್ರ ಕನ್ನಡವನ್ನು ಕೆಲವರು ಕುಂದಗನ್ನಡ, ಇನ್ನು ಕೆಲವರು ಕೋಟಾ ಕನ್ನಡ ಎಂದು ಕರೆಯುವುದಿದೆ. ಆದರೆ, ಕುಂದಾಪ್ರ ಕನ್ನಡ ಎಂಬ ಹೆಸರಿಗೆ ಹೋಲಿಸಿದರೆ ಕುಂದಗನ್ನಡ ಮತ್ತು ಕೋಟಾ ಕನ್ನಡ ಎಂಬ ಹೆಸರುಗಳು ತೀರಾ ಚಿಕ್ಕ ವ್ಯಾಪ್ತಿಯನ್ನು ಹೊಂದಿರುವುದು ಮಾತ್ರವಲ್ಲ, ಅವು ಕೃತಕವೂ ಹೌದು. ಕುಂದಗನ್ನಡ ಎನ್ನುವುದು ಹತ್ತು ಹದಿನೈದು ವರ್ಷಗಳ ಈಚೆಗೆ ಕೆಲವು ಪಂಡಿತರು ಟಂಕಿಸಿದ ಹೆಸರು. ಯಾವುದೇ ಒಂದು ಭಾಷೆಯನ್ನು ಜೀವಂತವಾಗಿಡುವವರು ದಿನನಿತ್ಯ ಆ ಭಾಷೆಯನ್ನಾಡುವ ಜನಸಾಮಾನ್ಯರೇ ವಿನಃ ಭಾಷಾ ಪಂಡಿತರಲ್ಲ.
ಕುಂದಾಪ್ರ ಕನ್ನಡ-ಹೆಸರೇ ಹೇಳುವಂತೆ `ಕುಂದಾಪ್ರ ಕನ್ನಡ’ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಪರಿಸರದ ಭಾಷೆ. ಅವಿಭಾಜ್ಯ ಕುಂದಾಪುರ ತಾಲೂಕು ಈಗ ಕುಂದಾಪುರ ಮತ್ತು ಬೈಂದೂರು ಎಂಬ ಎರಡು ತಾಲೂಕುಗಳಾಗಿವೆ. ಹಾಗಾಗಿ ಕುಂದಾಪ್ರ ಕನ್ನಡ ಈಗ ಈ ಎರಡು ತಾಲೂಕುಗಳ ಭಾಷೆಯಾಗಿದೆ. ಆದರೂ ಇದರ ವ್ಯಾಪ್ತಿ ಬಹಳ ಚಿಕ್ಕದು- ಉಡುಪಿ ಕಲ್ಯಾಣಪುರ ಹೊಳೆಯಿಂದೀಚೆ ಬೈಂದೂರು ದಾಟಿ ಶಿರೂರು ಭಟ್ಕಳ ತನಕ. ಇಷ್ಟು ಚಿಕ್ಕ ಭೌಗೋಳಿಕ ವ್ಯಾಪ್ತಿಯಲ್ಲೂ ಇದು ಹೊಂದಿರುವ ವೈವಿಧ್ಯತೆ, ಭಿನ್ನತೆ ಅಚ್ಚರಿ ಹುಟ್ಟಿಸುತ್ತದೆ.
ಯಕ್ಷಗಾನ, ತಾಳಮದ್ದಳೆ, ಹೂವಿನಕೋಲು, ದಲ್ಲೋರಿ, ನಾಗಮಂಡಲ, ಹೌದೇರಾಯನ ಓಲಗ, ಕೇಣ್ ಕೇಣ್ ಕನ್ನಡಿಯ, ಕೋಲಾಟ, ಹುಲಿಹಾಡು, ಶೋಭಾನೆ ಹಾಡು, ಭತ್ತ ಕುಟ್ಟವ ಹಾಡು, ಪಾಣರ ಆಟ, ಕಾಡ್ಯನಾಟ ಮೊದಲಾದವುಗಳಿಂದ ಶ್ರೀಮಂತವಾದ ಭಾಷೆ. ವರ್ಷದ ಹನ್ನೆರಡು ತಿಂಗಳಿಗೂ ತನ್ನದೇ ಆದ ಹೆಸರುಗಳನ್ನು ಹೊಂದಿದೆ. ಪ್ರತೀ 20 ಕಿ.ಮೀ.ಗೆ ಭಾಷೆ ಬದಲಾಗುತ್ತದೆ ಎಂದು ಭಾಷಾತಜ್ಞರು ಹೇಳುತ್ತಾರೆ. ಆದರೆ, ಕುಂದಾಪ್ರಕನ್ನಡ ಪ್ರತೀ ಎರಡು ಕಿಮಿಗೆ ತನ್ನ ಲಕ್ಷಣವನ್ನು ಬದಲಾಯಿಸುತ್ತದೆ! ಹಾಗಾಗಿಯೇ ಬಾರಕೂರಿನ ಕನ್ನಡಕ್ಕಿಂತ ಕೋಟಾ, ಕೋಟೇಶ್ವರ ಕನ್ನಡ ಭಿನ್ನವಾದುದು. ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ ಕನ್ನಡದಂತೆ ನಾವುಂದ, ಉಪ್ಪುಂದ, ಬೈಂದೂರು ಕನ್ನಡವಿಲ್ಲ ಮತ್ತು ಜಾತಿ ಜಾತಿಗಳಲ್ಲೂ ಇದರ ವೈವಿಧ್ಯತೆಯನ್ನು ಕಾಣಬಹುದು.
ಕುಂದಾಪ್ರ ಕನ್ನಡದ ದನಿ, ಪದರಚನೆಯನ್ನು ಪರಿಶೀಲಿಸಿದರೆ ಇದರಲ್ಲಿ ಗಾಢವಾದ ಹಳಗನ್ನಡದ ಛಾಯೆ ಮೇಲು ನೋಟಕ್ಕೇ ಸ್ಪಷ್ಟವಾಗಿ ಕಾಣಿಸುತ್ತದೆ. ಹಳೆಗನ್ನಡದ ಹಲವಾರು ಭಾಷಾ ಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇನ್ನೂ ಜೀವಂತವಾಗಿವೆ. ತಾಯಿಯನ್ನು ಅಬಾ' ಎಂದು ಕರೆಯುತ್ತೇವೆ. ಬಿಂದು ಸಹಿತ ಪ್ರಯೋಗಗಳು ಇನ್ನೂ ಜೀವಂತವಾಗಿವೆ-ಸೌತೆಗೆ ಚೌಂತಿ ಅನ್ನುತ್ತೇವೆ; ದಾಟು ಅನ್ನಬೇಕಾದರೆ ದಾಂಟ್ ಅನ್ನುತ್ತೇವೆ. ಇದರೊಂದಿಗೆ ಕುಂದಾಪುರ ಪರಿಸರದ ಜೀವನಕ್ರಮದಲ್ಲಿ ಹುಟ್ಟಿಕೊಂಡ ಪದಗಳು ಸೇರಿ ತನ್ನದೇ ಆದ ಒಂದು ವಿಶಿಷ್ಟ ರೂಪ ಪಡೆದು,ಕುಂದಾಪ್ರ ಕನ್ನಡ’ವಾಗಿದೆ ಎಂದು ಸರಳವಾಗಿ ಹೇಳಬಹುದು.
ಎಲ್ಲಕ್ಕೂ ಮಿಗಿಲಾಗಿ, ಕುಂದಾಪ್ರ ಕನ್ನಡದ ಎದ್ದು ಕಾಣಿಸುವ ಲಕ್ಷಣವೆಂದರೆ, ಪದಗಳನ್ನು ಕುಗ್ಗಿಸುವ ಕ್ರಮ. ಗ್ರಾಂಥಿಕ ಅಥವಾ ಮುಖ್ಯವಾಹಿನಿಯ ಕನ್ನಡದ ಯಾವುದೇ ಪದವಾದರೂ ಸರಿ, ಅದು ಕುಂದಾಪ್ರ ಕನ್ನಡದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸಣ್ಣದಾಗುತ್ತದೆ. ಉದಾ: ಹೋಗಬೇಕು ಎಂಬ ನಾಲ್ಕು ಅಕ್ಷರಗಳ ಪದ ಕುಂದಾಪ್ರ ಕನ್ನಡದಲ್ಲಿ ಹೊಯ್ಕ್' ಎಂದಾಗುತ್ತದೆ; ಬರಬೇಕು ಎಂಬುದುಬರ್ಕ್’ ಆಗುತ್ತದೆ. ಮೀಯಬೇಕು ಎಂಬುದು ಮೀಯ್ಕ್' ಆಗುತ್ತದೆ. ಈ ಕಾರಣಕ್ಕೇ ಕುಂದಾಪ್ರ ಕನ್ನಡವನ್ನುಹೊಯ್ಕ್ ಬರ್ಕ್ ಕನ್ನಡ’ ಎಂದು ತಮಾಷೆ ಮಾಡುವುದೂ ಇದೆ. ಈ ವಿಷಯವಾಗಿ ಕುಂದಾಪ್ರ ಕನ್ನಡದಲ್ಲೊಂದು ಕ್ಲಾಸಿಕ್ ಜೋಕ್ ಇದೆ. ಕುಂದಾಪುರದೊಂದು ಶಾಲೆಗೆ ಹೊರ ಪ್ರದೇಶದವರೊಬ್ಬರು ಹೊಸ ಟೀಚರ್ ಬರುತ್ತಾರೆ. ಅವರು ಮಕ್ಕಳಿಗೆ ಯಾವುದೋ ಒಂದು ಹೋಮ್ ವರ್ಕ್ ಕೊಟ್ಟು, ಮರುದಿನವೇ ಅದನ್ನು ಬರೆದುಕೊಂಡು ಬರಬೇಕು ಎಂದು ತರಗತಿಗೆ ಹೇಳುತ್ತಾರೆ. ಆಗ ಒಬ್ಬಳು ಹುಡುಗಿ ಎದ್ದು ನಿಂತು, ಟೀಚರ್, ಇದ್ನ ನಾಳಿಯೇ ಬರ್ಕ ಬರ್ಕಾ...?' ಎಂದು ರಾಗವಾಗಿ ಕೇಳುತ್ತಾಳೆ. ಟೀಚರಿಗೆ ಅವಳು ಹೇಳಿದಬರ್ಕ ಬರ್ಕ’ ಅಂದರೆ ಏನೆಂದು ಅರ್ಥವಾಗದೆ ಮುಖ ಮುಖ ನೋಡುತ್ತಾರೆ. ಆಗ ಬೆಲ್ಲ್ ಆಗುತ್ತದೆ. ಸ್ಟಾಫ್ ರೂಮಿಗೆ ಬಂದ ಆ ಟೀಚರ್ ಸಹೋದ್ಯೋಗಿಯೊಬ್ಬರನ್ನು, ಬರ್ಕ ಬರ್ಕ ಅಂದ್ರೆ ಏನು ಮಾರಾಯ್ರೇ?' ಎಂದು ಕೇಳಿದಾಗ, ಅವರುಹಾಗಂದರೆ `ಬರೆದುಕೊಂಡು ಬರಬೇಕೇ?’ ಅಂತ ಎಂದು ಅದರ ಅರ್ಥ ಹೇಳುತ್ತಾರೆ.
ಚಿಕ್ಕ ಭೌಗೋಳಿಕ ವ್ಯಾಪ್ತಿಯಲ್ಲಿ ಉಸಿರಾಡುವ ಈ ಕುಂದಾಪ್ರ ಕನ್ನಡ ಮೊದಲಿನಿಂದಲೂ ಮುಂಬೈ, ಗುಜರಾತಿನೊಂದಿಗೆ ವ್ಯಾಪಾರ ಸಂಬಂಧ ಹೊಂದಿ, ಯಾವ ಮಡಿಮೈಲಿಗೆಯನ್ನೂ ಹತ್ತಿರ ಬರಗೊಡದೆ ಆರ್ಥಿಕ ಏಳಿಗೆಯ ಜೊತೆ ತನ್ನ ಭಾಷಾ ಏಳಿಗೆಯನ್ನೂ ಮಾಡಿಕೊಂಡಿದೆ. ಕುಂದಾಪುರ ಮತ್ತು ಕುಂದಾಪುರಕ್ಕೂ ಮಿಗಿಲಾಗಿ, ಗಂಗೊಳ್ಳಿ ಹಿಂದೆ ಮತ್ತು ಈಗಲೂ, ಒಂದು ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿದೆ. ಹಿಂದೆ ಇಲ್ಲಿನ ವ್ಯಾಪಾರಿಗಳು ದೊಡ್ಡ ಗಾತ್ರದ ಹಾಯಿ ಹಡಗುಗಳಲ್ಲಿ ಮಂಗಳೂರು ಹಂಚುಗಳನ್ನು ತುಂಬಿಕೊಂಡು ಮುಂಬೈ, ಗುಜರಾತಿಗೆ ಹೋಗುತ್ತಿದ್ದರು. ಒಂದೊಂದು ಹಡಗುಗಳಲ್ಲಿ 25-30 ಜನ ಕೆಲಸಗಾರರಿರುತ್ತಿದ್ದರು. ಅವರಲ್ಲಿ ಹೆಚ್ಚಿನವರು ಶಿರೂರು, ಭಟ್ಕಳದ ನವಾಯತಿ ಮುಸ್ಲಿಮರು. ಹೀಗೆ ಹಂಚುಗಳನ್ನು ತುಂಬಿಕೊಂಡು ಮುಂಬೈ, ಗುಜರಾತಿಗೆ ಹೋದವರು ವಾಪಾಸ್ ಬರುವಾಗ ಅಲ್ಲಿಂದ ಗುಜರಾತಿ, ಮರಾಟಿ, ಹಿಂದಿ, ಪರ್ಷಿಯನ್, ದಕ್ಕಣಿ ಶಬ್ದಗಳನ್ನು ತರುತ್ತಿದ್ದರು.

ಹಾಗೆಯೇ, ಪೋರ್ಚುಗೀಸರ ಕಾಲದಲ್ಲಿ ಗೋವಾ-ಮುಂಬೈ ಪ್ರದೇಶದಿಂದ ವಲಸೆ ಬಂದ ಕೊಂಕಣಿಗರು ಎಂಬ ವ್ಯಾಪಾರಿ ಸಮುದಾಯ, ಖಾರ್ವಿ ಎಂಬ ಮೀನುಗಾರಿಕೆ ನಡೆಸುವ ಜನಾಂಗ, ಕುಡುಬಿ ಎಂಬ ಮರಾಟಿ ಭಾಷಿಕ ಜನಾಂಗ ಹಾಗೂ ಆಗಾಗ್ಗೆ ಧಾಳಿ ಮಾಡುತ್ತಿದ್ದ ಮರಾಟ ಸೈನಿಕರೂ ಕುಂದಾಪ್ರ ಕನ್ನಡಕ್ಕೆ ತಮ್ಮದೇ ಆದ ಪದಗಳ ಬಳುವಳಿಯನ್ನು ನೀಡಿದ್ದಾರೆ. ಹಾಗಾಗಿಯೇ, ಕುಂದಾಪ್ರಕನ್ನಡದಲ್ಲಿ ಮರಾಠಿ, ಹಿಂದಿ, ಪರ್ಷಿಯನ್, ಅರೆಬಿಕ್, ಹಿಂದೂಸ್ತಾನಿ, ನವಾಯತಿ ಶಬ್ದಗಳು ಯತೇಚ್ಚ ಕಾಣ ಸಿಗುತ್ತವೆ. ಕಲಾಸಿ, ತಂಡೇಲ, ಚಂಪ್ಪನ್ನ್ ಚೂರ್, ಸರ್ಪೀಟ್, ಬುರ್ನಾಸ್, ಗೋಸಾಯಿ, ಹರ್ಕತ್, ಫಾಯ್ದಿ, ಬುರ್ನಾಸ್, ನಸೀಪ್, ಲಗಾಡಿ ಮೊದಲಾದ ಅಸಂಖ್ಯ ಪರಭಾಷಾ ಪದಗಳು ಕುಂದಾಪ್ರ ಕನ್ನಡಕ್ಕೆ ವಿಶಿಷ್ಟವಾದ ಸೊಬಗನ್ನು ನೀಡಿವೆ. ಕಲಾಸಿ ಅಂದರೆ ದೋಣಿಯಲ್ಲಿ ಕೆಲಸ ಮಾಡುವವ, ತಂಡೇಲ ಅಂದರೆ ದೋಣಿ ಕೆಲಸಗಾರರ ನಾಯಕ, ಹರ್ಕತ್ ಅಂದರೆ ಅಗತ್ಯ, ಚಪ್ಪನ್ನ್ ಚೂರ್ ಅಂದರೆ 56 ಚೂರು, ಫಾಯ್ದಿ ಅಂದರೆ ಲಾಭ, ಬುರ್ನಾಸ್ ಅಂದರೆ ಕೆಟ್ಟದ್ದು, ಸರ್ಪೀಟ್ ಅಂದರೆ ನೇರ. ಈ ಶಬ್ದ ಇಂಗ್ಲಿಷಿನ `ಶ್ಯೂರ್‍ಫೀಟ್’ ಶಬ್ದದ ಕುಂದಾಪ್ರ ಕನ್ನಡ ರೂಪ.
ಒಣಮೆಣಸು ಅಥವಾ ಕೆಂಪು ಮೆಣಸಿಗೆ ಕುಂದಾಪ್ರ ಕನ್ನಡದಲ್ಲಿ ಗ್ವಾಯ್ ಕೋಡ್ ಅಂತ ಹೆಸರು. ಇಲ್ಲಿ ಗ್ವಾಯ್ ಅಂದರೆ ಗೋವೆ, ಅಂದರೆ ಗೋವಾ. ಕೆಂಪು ಮೆಣಸು ನಮಗೆ ಬಂದದ್ದು ಗೋವಾದಿಂದ. ಗೋವಾದಿಂದ ಬಂದ ಕೋಡು ಆದ್ದರಿಂದ ಗ್ವಾಯ್ ಕೋಡ್. ಭಾರತಕ್ಕೆ ಕೆಂಪು ಮೆಣಸನ್ನು ತಂದವರು ಪೋರ್ಚುಗೀಸರು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅದೇ ರೀತಿಯಲ್ಲಿ, ಗ್ವಾಯ್ ಹಣ್ಣ್, ಗ್ವಾಯ್ ಬೀಜ. ಅಂದರೆ, ಗೇರು ಹಣ್ಣು ಮತ್ತು ಗೇರು ಬೀಜ. ಇಷ್ಟೇ ಅಲ್ಲ, ಕೊಂಕಣಿ, ತುಳು, ಮಲಯಾಳಿ, ತಮಿಳು, ಇಂಗ್ಲಿಷ್ ಮೊದಲಾಗಿ ತಾನು ಸಂಪರ್ಕಕ್ಕೆ ಬಂದ ಹತ್ತು ಹಲವು ಭಾಷೆಗಳ ಶಬ್ದಗಳನ್ನೂ ತನ್ನದಾಗಿಸಿಕೊಂಡು ಕುಂದಾಪ್ರ ಕನ್ನಡ ತನ್ನ ಸೊಬಗು ಮತ್ತು ಪದ ಸಂಪತ್ತನ್ನು ಹೆಚ್ಚಿಸಿಕೊಂಡಿದೆ.
ಕುಂದಾಪ್ರ ಕನ್ನಡ ಮೂಲತಃ ಶ್ರಮಸಂಸ್ಕೃತಿಯ ಜನ ಸಾಮಾನ್ಯರ ಆಡುಭಾಷೆ. ಅಂತೆಯೇ ಇದರಲ್ಲಿ ಹೇಳಿಕೊಳ್ಳುವಂತಹ ದೊಡ್ಡ ದೊಡ್ಡ ಲಿಖಿತ ಸಾಹಿತ್ಯಗಳೇನಿಲ್ಲ. ಆದರೆ, ಕುಂದಾಪ್ರ ಕನ್ನಡ ಪ್ರದೇಶದಿಂದ ಬಹಳ ದೊಡ್ಡ ಸಂಖ್ಯೆಯಲ್ಲಿ ಸಾಹಿತಿಗಳು, ಕವಿಗಳು, ಕಲಾವಿದರು, ಸಿನಿಮಾ ನಿರ್ದೇಶಕರು, ಸಿನಿಮಾ ತಾರೆಯರು, ಸಿನಿಮಾ ನಿರ್ದೇಶಕರು, ಸಂಗೀತ ನಿರ್ದೇಶಕರು, ಕ್ರೀಡಾಪಟುಗಳು, ಪತ್ರಕರ್ತರು, ನಾಟಕಕಾರರು, ವ್ಯಂಗ್ಯ ಚಿತ್ರಕಾರರು, ಉದ್ಯಮಿಗಳು ಬಂದಿದ್ದಾರೆ. ಕನ್ನಡದ ಪ್ರಪ್ರಥಮ ಕಾದಂಬರಿ ಬರೆದ ಪಡುಕೋಣೆ ರಮಾನಂದ ರಾಯರು, ಗುಲ್ವಾಡಿ ವೆಂಕಟರಾವ್, ಗೋಪಾಲಕೃಷ್ಣ ಅಡಿಗ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತ, ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ, ಹಿಂದಿ ನಟ/ನಿರ್ದೇಶಕ ದಿ. ಗುರು ದತ್ತ್, ಸಂಗೀತಂ ಶ್ರೀನಿವಾಸ್, ರವಿ ಬಸ್ರೂರ್, ನಟ/ನಿರ್ದೇಶಕ ಕಾಶಿನಾಥ್, ಉಪೇಂದ್ರ, ರಿಷಭ್ ಶೆಟ್ಟಿ, ಸ್ವಾತಂತ್ರ್ಯ ಹೋರಾಟಗಾರ್ತಿ ದಿ. ಉಮಾಬಾಯೀ ಕುಂದಾಪುರ, ಮಾಜೀ ಆಲ್ ಇಂಗ್ಲೆಂಡ್ ಬಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಐಸಿಐಸಿಐ ಬ್ಯಾಂಕ್ ಸ್ಥಾಪಕ ಕೆ ವಿ ಕಾಮತ್, ಸುಖಸಾಗರ ಗ್ರೂಪ್ ಆಪ್ ಹೋಟೆಲಿನ ದಿ. ಸುರೇಶ ಪೂಜಾರಿ ಮೊದಲಾದವರು ಕುಂದಾಪುರದವರು.

ಕುಂದಾಪ್ರ ಕನ್ನಡವೋ? ಕುಂದಗನ್ನಡವೋ? ಕೋಟಾ ಕನ್ನಡವೋ?
ಕುಂದಾಪ್ರ ಕನ್ನಡವನ್ನು ಕೆಲವರು ಕುಂದಗನ್ನಡ, ಇನ್ನು ಕೆಲವರು ಕೋಟಾ ಕನ್ನಡ ಎಂದು ಕರೆಯುವುದಿದೆ. ಆದರೆ, ಕುಂದಾಪ್ರ ಕನ್ನಡ ಎಂಬ ಹೆಸರಿಗೆ ಹೋಲಿಸಿದರೆ ಕುಂದಗನ್ನಡ ಮತ್ತು ಕೋಟಾ ಕನ್ನಡ ಎಂಬ ಹೆಸರುಗಳು ತೀರಾ ಚಿಕ್ಕ ವ್ಯಾಪ್ತಿಯನ್ನು ಹೊಂದಿರುವುದು ಮಾತ್ರವಲ್ಲ, ಅವು ಕೃತಕವೂ ಹೌದು. ಕುಂದಗನ್ನಡ ಎನ್ನುವುದು ಹತ್ತು ಹದಿನೈದು ವರ್ಷಗಳ ಈಚೆಗೆ ಕೆಲವು ಪಂಡಿತರು ಟಂಕಿಸಿದ ಹೆಸರು. ಯಾವುದೇ ಒಂದು ಭಾಷೆಯನ್ನು ಜೀವಂತವಾಗಿಡುವವರು ದಿನನಿತ್ಯ ಆ ಭಾಷೆಯನ್ನಾಡುವ ಜನಸಾಮಾನ್ಯರೇ ವಿನಃ ಭಾಷಾ ಪಂಡಿತರಲ್ಲ. ಕುಂದಗನ್ನಡ ಎನ್ನುವುದು ಇಲ್ಲಿನ ಕೆಲವು ಪಂಡಿತರು ಹಾಗೂ ಶಿಕ್ಷಿತರ ಬಾಯಲ್ಲಿದೆಯೇ ವಿನಃ ಇಲ್ಲಿನ ಜನಸಾಮಾನ್ಯರಲ್ಲಿಲ್ಲ. ಅಲ್ಲದೆ, `ಕುಂದ ನಗರಿ’ ಎಂಬುದು ಬೆಳಗಾವಿಯ ಇನ್ನೊಂದು ಹೆಸರಾಗಿರುವ ಹಿನ್ನೆಲೆಯಲ್ಲಿ ಕುಂದಗನ್ನಡ ಎಂಬ ಹೆಸರು ಹೊರಗಿನವರಲ್ಲಿ ಗೊಂದಲ ಹುಟ್ಟಿಸುವ ಸಾಧ್ಯತೆಯೂ ಇದೆ.
ಕೋಟಾ ಕನ್ನಡ'ದ ವ್ಯಾಪ್ತಿ ಇನ್ನೂ ಸೀಮಿತವಾದುದು. ಕುಂದಾಪುರ ಎನ್ನುವುದು ಒಂದು ತಾಲೂಕಾದರೆ, ಕೋಟ ಎನ್ನುವುದು ಒಂದು ಮಾಗಣೆ ಅಥವಾ ಊರು, ಅಷ್ಟೇ. ಮತ್ತು, ಈ ಹೆಸರನ್ನು ಕೊಟ್ಟವರು ಸ್ಥಳೀಯರೂ ಅಲ್ಲ. ಬದಲಿಗೆ, ಮೈಸೂರು, ಬೆಂಗಳೂರಿನ ಜನ! ಹಿಂದೆ, ಅಂದರೆ ಕೆಲವು ದಶಕಗಳ ಹಿಂದೆ, ಕೋಟಾದ ಕೆಲವರು ಮೈಸೂರು ಹಾಗೂ ಬೆಂಗಳೂರಿನಲ್ಲಿ ಹೋಟೆಲುಗಳನ್ನು ತೆರೆದು, ವ್ಯಾಪಾರ ಮಾಡಲು ಶುರು ಮಾಡಿದಾಗ ಅಲ್ಲಿನ ಗ್ರಾಹಕರು ಹಾಗೂ ಇತರರು ಕೋಟಾ ಮೂಲದ ಇವರು ಮಾತಾಡುವ, ತಮ್ಮ ಕನ್ನಡಕ್ಕಿಂತ ಭಿನ್ನವಾಗಿ ಕೇಳಿಸುವ ಕನ್ನಡಕ್ಕೆಕೋಟಾ ಕನ್ನಡ’ ಎಂದು ಹೆಸರಿಸಿದರು.
`ಕುಂದಾಪ್ರ ಕನ್ನಡ’ ಎನ್ನುವುದು ಯಾರೇ ಕೊಟ್ಟ ಹೆಸರಾಗಲೀ, ಟಂಕಿಸಿದ ಹೆಸರಾಗಲೀ ಅಲ್ಲ. ಬದಲಿಗೆ, ಅದು ಕುಂದಾಪುರದ ಜನಸಾಮಾನ್ಯರ ಬಾಯಲ್ಲಿ ತಾನೇ ತಾನಾಗಿ ಹುಟ್ಟಿಕೊಂಡ ಸಹಜ ಹೆಸರು. ಈವರೆಗೂ ಕುಂದಾಪ್ರ ಕನ್ನಡವನ್ನು ಜೀವಂತವಾಗಿಟ್ಟವರು ಮತ್ತು ಮುಂದೆಯೂ ಇದನ್ನು ಜೀವಂತವಾಗಿಡುವವರು ಇದೇ ಜನಸಾಮಾನ್ಯರು.
ಹಾಸ್ಯಗಾರರ ಭಾಷೆಯಲ್ಲ!
ಇತ್ತೀಚಿನ ಕೆಲವು ವರ್ಷಗಳಿಂದ ಕುಂದಾಪ್ರ ಕನ್ನಡ ಸ್ಥಳಿಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಸದ್ದು ಮಾಡುತ್ತಿದೆ. ಕುಂದಾಪ್ರ ಕನ್ನಡ ನಿಘಂಟು' ಎಂಬ ಹತ್ತೂವರೆ ಸಾವಿರ ಕುಂದಾಪ್ರ ಕನ್ನಡ ಪದ ಹಾಗೂ ಸಾವಿರಾರು ನುಡಿಗಟ್ಟುಗಳ ಒಂದು ಶಬ್ದಕೋಶದ ರಚನೆಯಾಗಿದೆ. ಈ ವರ್ಷದ ಜನವರಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿಕುಂದಾಪ್ರ ಕನ್ನಡ ಅಧ್ಯಯನ ಪೀಠ’ದ ಸ್ಥಾಪನೆಯಾಗಿದೆ. ಕುಂದಾಪ್ರ ಕನ್ನಡ ಅಕಾಡೆಮಿ ರಚನೆಯ ಬೇಡಿಕೆ ಮುಂದುವರಿದಿದೆ. ಹಲವಾರು ಕುಂದಾಪ್ರ ಕನ್ನಡ ಫೇಸ್ ಬುಕ್ ಹಾಗೂ ವಾಟ್ಸಾಪ್ ಗ್ರೂಪ್‍ಗಳು ಹುಟ್ಟಿಕೊಂಡಿವೆ. ಹಿಂದೆ ಸಾರ್ವಜನಿಕವಾಗಿ ಕುಂದಾಪ್ರ ಕನ್ನಡ ಮಾತಾಡಲು ಕೀಳರಿಮೆ ತೋರಿಸುತ್ತಿದ್ದವರೂ ಈಗ ಕುಂದಾಪ್ರ ಕನ್ನಡದಲ್ಲಿ ಸಂಕೋಚವಿಲ್ಲದೆ ಮಾತಾಡುತ್ತಿದ್ದಾರೆ.
ಕೆಲವು ವರ್ಷಗಳಿಂದೀಚೆ `ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ‘ಯ ಹೆಸರಲ್ಲಿ ಕುಂದಾಪ್ರ ಕನ್ನಡ ಪರಿಸರದ ಆಟೋಟಗಳು, ಅಡುಗೆ ರುಚಿಗಳು, ಗಾದೆ ಸ್ಪರ್ಧೆಗಳು, ಗತಕಾಲದ ನಡವಳಿಕೆಗಳ ನೆನಪುಗಳನ್ನು ಜೀವಂತವಿಡುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ವ್ಯಾಪಕವಾಗುತ್ತಿವೆ. ಕುಂದಾಪ್ರ ಕನ್ನಡ ಮಾತಾಡುವ ಯುವ ಜನಾಂಗ ಈಗಿನ ಇಂಟರ್‍ನೆಟ್ ಯುಗದಲ್ಲಿ ಇತ್ತೀಚಿನ ದಿನಗಳಲ್ಲಿ ತಲೆ ಎತ್ತಿದ ವಿವಿಧ ರೀತಿಯ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಕುಂದಾಪ್ರ ಕನ್ನಡದಲ್ಲಿ ರೀಲ್ಸ್‍ಗಳನ್ನು ಮಾಡಿ ಯೂಟ್ಯೂಬ್, ಫೇಸ್ ಬುಕ್, ವಾಟ್ಸಾಪ್, ಎಕ್ಸ್ ಮೊದಲಾದೆಡೆ ಹರಿಯ ಬಿಟ್ಟು, ಕುಂದಾಪ್ರ ಕನ್ನಡಕ್ಕೆ ದೊಡ್ಡ ಗಾತ್ರದಲ್ಲಿ ಡಿಜಿಟಲ್ ವೇದಿಕೆಗಳನ್ನು ನಿರ್ಮಿಸುತ್ತಿದ್ದಾರೆ. ಇದು ಶ್ಲಾಘನೀಯ ಪ್ರಯತ್ನವೇ. ಏಕೆಂದರೆ, ಇಂದು ಯಾವುದೇ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಅದು ಡಿಜಿಟಲ್ ವೇದಿಕೆಗೆ ಬರಲೇಬೇಕಾದ ಅನೀವಾರ್ಯ ಪರಿಸ್ಥಿತಿಯ ನಿರ್ಮಾಣವಾಗಿದೆ.

ಆದರೆ, ಈ ರೀಲ್ಸ್‌ಗಳಲ್ಲಿ ಬಹುತೇಕವು ಅತಿ ಎಂಬಂತೆ ತಮಾಷೆಯ ವಿಷಯಗಳನ್ನು ಆರಿಸಿಕೊಳ್ಳುತ್ತಿರುವುದರಿಂದ ಹೊರಗಿನವರಿಗೆ ಮಾತ್ರವಲ್ಲ ಕುಂದಾಪ್ರ ಕನ್ನಡ ಭಾಷಿಕರಿಗೂ ಇದು ಹಾಸ್ಯಗಾರರ ಭಾಷೆಯೋ ಎಂಬಂತೆ ಭಾಸವಾಗುವಂತಾಗಿದೆ. ಆರಿಸಿಕೊಳ್ಳುವ ವಿಷಯಗಳ ಜೊತೆ ರೀಲ್ಸ್ ಹಾಗೂ ಯೂಟ್ಯೂಬ್ ವಿಡಿಯೋಗಳಲ್ಲಿ ವಿಷಯಗಳನ್ನು ನಿರೂಪಿಸುವ ರೀತಿ, ಬಳಸುವ ಪದಗಳು, ಅವುಗಳಲ್ಲಿ ಕಾಣಿಸಿಕೊಳ್ಳುವವರ ಆಂಗಿಕ ಅಭಿನಯ ಮೊದಲಾದವು ಹಾಸ್ಯಕ್ಕೆ ಹೆಚ್ಚು ಒತ್ತು ನೀಡುವಂತಿರುತ್ತವೆಯೇ ವಿನಃ ಕುಂದಾಪ್ರ ಕನ್ನಡದ ನೈಜ ಸತ್ವವನ್ನು ತೋರಿಸುವಂತಿರುವುದಿಲ್ಲ.
ಇದನ್ನೂ ಓದಿ ಅತ್ಯಾಚಾರಕ್ಕೆ ಮರಣದಂಡನೆ; ಪಶ್ಚಿಮ ಬಂಗಾಳದ ಮಸೂದೆಗೆ ಕೇಂದ್ರದ ತಕರಾರೇನು?
ಎಲ್ಲಾ ಭಾಷೆಗಳಂತೆಯೇ ಕುಂದಾಪ್ರ ಕನ್ನಡವೂ ಹಾಸ್ಯವೂ ಸೇರಿ ಎಲ್ಲಾ ರಸಗಳನ್ನು ಸಮೃದ್ಧವಾಗಿ ಹೊಂದಿರುವ ಒಂದು ಪ್ರಬುದ್ಧ ಭಾಷೆ. ಇದರಲ್ಲಿನ ಕೆಲವು ನುಡಿಗಟ್ಟುಗಳನ್ನು ನೋಡಿದರೆ ಇದರ ಸತ್ವದ ಆಳ, ವ್ಯಾಪ್ತಿ ಸ್ಪಷ್ಟವಾಗುತ್ತದೆ-ಓಡ್ವೊನ್ ಸೋತಷ್ಟೇ ಬೆರ್ಸೋನೂ ಸೋಲ್ತ (ಓಡುವವನು ಸೋತಷ್ಟೇ ಓಡಿಸುವವನೂ ಸೋಲುತ್ತಾನೆ)'.ಹಡ್ಗ್ ತುಂಬುಕ್ ಹೋದನ್ ಬಂದ, ಹೊಟ್ಟಿ ತುಂಬುಕ್ ಹೋದನ್ ಬರ್ಲಿಲ್ಲ (ಹಡಗು ತುಂಬಲು ಹೋದವನು ಬಂದ, ಹೊಟ್ಟೆ ತುಂಬಿಸಿಕೊಳ್ಳಲು ಹೋದವನು ಇನ್ನೂ ಬರಲಿಲ್ಲ)’. `ಬಂದ್ ಬಂದರ್ ಮಾತ್ ಕೇಂಡ್ ಬಂದ್ ಮಗು ಒಳ್ಗ್ ಹೋಯ್ತ್ ಅಂಬ್ರ್ (ಬಂದ ಬಂದವರ ಮಾತು ಕೇಳಿ ಹೊರಕ್ಕೆ ಬಂದ ಮಗು ಒಳಕ್ಕೆ ಹೋಯಿತಂತೆ)’. ಇವುಗಳು ಕುಂದಾಪ್ರ ಕನ್ನಡದ ಸತ್ವದ ಕೆಲವು ಝಳಕುಗಳಷ್ಟೇ.
ಪ್ರಾದೇಶಿಕ ಭಾಷೆ
ಕುಂದಾಪ್ರ ಕನ್ನಡ ಕುಂದಾಪುರ ಹಾಗೂ ಬೈಂದೂರು ಪರಿಸರದ ಎಲ್ಲಾ ಜಾತಿ, ಸಮುದಾಯಗಳ ಪ್ರಾತಿನಿಧಿಕ ಭಾಷೆ. ಕುಂದಾಪ್ರ ಕನ್ನಡ ಮಾತಾಡುವ ವಿವಿಧ ಜಾತಿಗಳಲ್ಲಿ ಭಾಷಾ ವೈವಿಧ್ಯತೆ ಇದ್ದರೂ ಆ ವೈವಿಧ್ಯತೆ ಕುಂದಾಪ್ರ ಕನ್ನಡದ ವ್ಯಾಪ್ತಿ ಹಾಗೂ ಸೌಂದರ್ಯವನ್ನು ಹೆಚ್ಚಿಸಿದೆಯೇ ವಿನಃ ಈ ಭಾಷೆಯ ಜಾತಿವಾರು ವಿಂಗಡನೆಗೆ ಕಾರಣವಾಗಿಲ್ಲ. ಎಷ್ಟೆಂದರೆ, ಇಲ್ಲಿನ ಜಾತಿ ಸಂಘ ಸಂಸ್ಥೆಗಳು ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಿದರೂ ಅದು ಆ ಜಾತಿಗೆ ಸೀಮಿತವಾಗಿ ಉಳಿಯದೆ ಇಡೀ ಭಾಷೆಗೆ ಸೊಬಗು ನೀಡುವಂತಿರುತ್ತದೆ. ಅಂದರೆ, ಕುಂದಾಪ್ರ ಕನ್ನಡ ಯಾವುದೇ ಒಂದು ಧರ್ಮ ಜಾತಿಗೆ ಸಿಮೀತವಾದ ಭಾಷೆಯಲ್ಲ. ಅದು ಇಲ್ಲಿನ ಸರ್ವ ಜನಾಂಗಗಳ ಸುಂದರ ತೋಟವಾಗಿ ನಳನಳಿಸುವ ಭಾಷೆ.
ಇದನ್ನೂ ಓದಿ ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ, ಸತ್ಯ ಸುದ್ದಿಯ ಪ್ರಸಾರ ಮುಂದುವರಿಸುತ್ತೇವೆ: ಡಿಜಿಟಲ್ ಮಾಧ್ಯಮಗಳ ನಿರ್ಣಯ
ಆದರೆ, ಈಗಿನ ದಿನಗಳಲ್ಲಿ ಕೋಮುವಾದವೇ ಬಂಡವಾಳವಾಗಿರುವ ರಾಜಕೀಯ ಪಕ್ಷಗಳು `ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯಂತಹ ಭಾಷಾ-ಸಾಂಸ್ಕೃತಿಕ ಆಚರಣೆಯನ್ನೂ ತಮ್ಮ ಮತ ಭೇಟೆಗಾಗಿ ಹೈಜಾಕ್ ಮಾಡುತ್ತಿವೆ. ಹಾಗೆಯೇ, ಕೆಲವು ಜಾತಿಗಳು ತಾವಷ್ಟೇ ಕುಂದಾಪ್ರ ಕನ್ನಡದ ವಾರಸುದಾರರು ಎಂಬಂತಹ ಒಂದು ಸಂಕುಚಿತ ವಾತಾವರಣವನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿವೆ. ಒಂದು ಜಾತಿ ಸಂಘ ನೇರವಾಗಿ ತನ್ನ ಜಾತಿಯ ಮಿತಿಯಲ್ಲಿ ಕುಂದಾಪ್ರ ಕನ್ನಡ ಆಚರಣೆಯನ್ನು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕುಂದಾಪ್ರಕನ್ನಡವನ್ನು ಒಂದು ಸಾರ್ವಜನಿಕ ಕಾರ್ಯಕ್ರಮವಾಗಿ ಆಚರಿಸುವ ಸಂಘ ಸಂಸ್ಥೆಗಳು ಯಾವುದೇ ಒಂದು ಜಾತಿಯವರನ್ನು ಮಾತ್ರವೇ ಸಂಘಟಕರಾಗಿಯೋ, ಅತಿಥಿಗಳಾಗಿಯೋ ಅಥವಾ ಸನ್ಮಾನಿತರಾಗಿಯೋ ಹೆಚ್ಚು ಸಂಖ್ಯೆಯಲ್ಲಿರುವಂತೆ ನೋಡಿಕೊಂಡು ತೋರಿಕೆಗೆ ಒಬ್ಬಿಬ್ಬರು ಅನ್ಯ ಜಾತಿಯವರನ್ನು ಸೇರಿಸಿಕೊಳ್ಳುವುದು ಕುಂದಾಪ್ರ ಕನ್ನಡದ ಮೂಲ ಆಶಯಕ್ಕೇ ವಿರುದ್ಧವಾದ ನಡವಳಿಕೆ. ಹಾಗಾಗದಂತೆ ನೋಡಿಕೊಳ್ಳುವುದೇ ಈ ಭಾಷೆಗೆ ಸಲ್ಲಿಸುವ ನಿಜವಾದ ಗೌರವ. ಏಕೆಂದರೆ, ಧರ್ಮ ಮತ್ತು ಜಾತಿಗಳು ಮನುಷ್ಯರನ್ನು ವಿಭಜಿಸುವ ಜೀವ ವಿರೋಧಿ ಗುರುತುಗಳಾದರೆ, ಭಾಷೆ ಜಾತಿ ಧರ್ಮಗಳನ್ನು ಮೀರಿ ಮನುಷ್ಯರನ್ನು ಒಂದುಗೂಡಿಸುವ ಜೀವ ಸೆಲೆ.

ಪಂಜು ಗಂಗೊಳ್ಳಿ
ಮುಂಗಾರು ಪತ್ರಿಕೆಯ ಮೂಲಕ ವ್ಯಂಗ್ಯಚಿತ್ರಕಾರ ವೃತ್ತಿ ಆರಂಭ. ನಂತರ ಲಂಕೇಶ್ ವಾರಪತ್ರಿಕೆಯಲ್ಲಿ ಸ್ವಲ್ಪಕಾಲ, ಬಳಿಕ ಮುಂಬೈನಲ್ಲಿ ಪ್ರೀತೀಶ್ ನಂದಿ ಸಂಪಾದಕತ್ವದ 'ದಿ ಸಂಡೇ ಅಬ್ಸರ್ವರ್' ಪತ್ರಿಕೆಯಲ್ಲಿ, 23 ವರ್ಷಗಳಿಂದ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿದ್ಧಾರೆ.




