ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ

Date:

ಲಡಾಖ್‌ಗೆ ರಾಜ್ಯವೊಂದರ ಸ್ಥಾನಮಾನ ಆಗ್ರಹದ ಆಂದೋಲನವನ್ನು ತೆರೆಮರೆಯಲ್ಲಿ ಅದೆಷ್ಟೋ ನಾಯಕರು ನಿರಂತರವಾಗಿ ಕಟ್ಟಿಬೆಳೆಸುತ್ತಿದ್ದಾರೆ, ತಮ್ಮ ಸಂಪೂರ್ಣ ಜೀವನವನ್ನೇ ಲಡಾಖಿಗಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಅಂತಹ ದಿಟ್ಟ ಹೋರಾಟಗಾರರಲ್ಲಿ ಒಬ್ಬರು ಸಜ್ಜಾದ್ ಕಾರ್ಗಿಲಿ. ಅವರ ಖ್ಯಾತಿ, ಜನಪ್ರಿಯತೆಯನ್ನು ಪ್ರತ್ಯಕ್ಷವಾಗಿ ಕಂಡಿತು 'ಈ ದಿನ.ಕಾಂ '. 'ತಮ್ಮ ಅಸ್ತಿತ್ವ-ಅಸ್ಮಿತೆಗಳು ಅಪಾಯದಲ್ಲಿವೆ ಎಂದು ಬೌದ್ಧರು-ಮುಸ್ಲಿಮರಿಗೆ ಮನವರಿಕೆಯಾಗಿ ಒಗ್ಗಟ್ಟಾಗಿದ್ದಾರೆ' ಎನ್ನುತ್ತಾರೆ ಕಾರ್ಗಿಲಿ.

ಲಡಾಖ್‌ ರಾಜ್ಯತ್ವ ಹೋರಾಟ ಎಂದಾಗ ಸಾಮಾನ್ಯವಾಗಿ ಎಲ್ಲರ ಕಣ್ಮುಂದೆ ಬರುವುದು ಪರಿಸರವಾದಿ, ‘ಥ್ರೀ ಇಡಿಯಟ್ಸ್’ ಸಿನಿಮಾಕ್ಕೆ ಸ್ಪೂರ್ತಿಯಾದ ಸೋನಮ್ ವಾಂಗ್‌ಚುಕ್. ಆದರೆ ತೆರೆಮರೆಯಲ್ಲಿ ಅದೆಷ್ಟೋ ನಾಯಕರುಗಳು ನಿರಂತರವಾಗಿ ಈ ಆಂದೋಲನವನ್ನು ಕಟ್ಟಿಬೆಳೆಸುತ್ತಿದ್ದಾರೆ, ತಮ್ಮ ಸಂಪೂರ್ಣ ಜೀವನವನ್ನೇ ಲಡಾಖಿಗಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಅಂತಹ ದಿಟ್ಟ ಹೋರಾಟಗಾರರಲ್ಲಿ ಒಬ್ಬರು ಸಜ್ಜಾದ್ ಕಾರ್ಗಿಲಿ. ಅವರ ಖ್ಯಾತಿ, ಜನಪ್ರಿಯತೆಯನ್ನು ಪ್ರತ್ಯಕ್ಷವಾಗಿ ಕಂಡವರು ನಾವು. ಶ್ರೀನಗರದಿಂದ ಹಿಡಿದು ಚೀನಾ-ಭಾರತ ಗಡಿಭಾಗದವರೆಗೂ ಸಜ್ಜಾದ್ ಅವರನ್ನು ಕಂಡು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಮಾತನಾಡಿದವರು ಹಲವು ಮಂದಿ. ಸಣ್ಣ ಅಂಗಡಿಯ ನೌಕರರಿಂದ ಹಿಡಿದು ಸಿಆರ್‌ಪಿಎಫ್‌ ಯೋಧರವರೆಗೂ ಸಜ್ಜಾದ್ ಅವರನ್ನು ಕಂಡು ನಗುಮುಖದಿಂದ ಮಾತನಾಡಿಸುತ್ತಿದ್ದರು. ಇವೆಲ್ಲವನ್ನೂ ನೋಡಿದ ವಿವಿಧ ರಾಜ್ಯಗಳ ನಮ್ಮ ನಿಯೋಗದಲ್ಲಿದ್ದ ಕೆಲವರು ಅಚ್ಚರಿಗೊಂಡಿದ್ದು ನಿಜ.

ಸಜ್ಜಾದ್ ಅವರನ್ನು ಹಲವು ವರ್ಷಗಳಿಂದ ಬಲ್ಲ ಚಳವಳಿಗಾರರು “ಸಜ್ಜಾದ್ ಜೊತೆ ಹೋಗುವುದಾದರೆ ನಮ್ಮ ಟೈಮ್‌ ಟೇಬಲ್‌ನಲ್ಲಿ 30 ನಿಮಿಷ ಹೆಚ್ಚುವರಿ ವ್ಯಯವಾಗುವುದು ಖಂಡಿತ. ಸಜ್ಜಾದ್‌ಗಾಗಿ ಅರ್ಧ ಗಂಟೆ ನಿಗದಿಪಡಿಸಿರಬೇಕು” ಎಂದು ಹೇಳಿದರೆ, ಈ ಜನಪ್ರಿಯತೆ ಬಗ್ಗೆ ತಿಳಿಯದ ನಾವುಗಳು ನಿಬ್ಬೆರಗಾದೆವು. ಲಡಾಖ್ ಹೋರಾಟ ವಿಚಾರದಲ್ಲಿ ದೇಶದ ಇತರೆ ರಾಜ್ಯಗಳಲ್ಲಿ ಹೆಚ್ಚು ಹೆಸರುವಾಸಿಯಾಗದಿದ್ದರೂ ಸ್ಥಳೀಯವಾಗಿ ಜನಮೆಚ್ಚುವ ನಾಯಕ, ತೀರಾ ಬಡ ಕುಟುಂಬಕ್ಕೆ ಸೇರಿದವರು ಸಜ್ಜಾದ್ ಕಾರ್ಗಿಲಿ.

ಸಜ್ಜಾದ್ ಹುಸೈನ್ ಕಾರ್ಗಿಲಿ, ಕಾರ್ಗಿಲ್‌ ಜಿಲ್ಲೆಯ ಕಾಕ್‌ಸರ್‌ನಲ್ಲಿ 1982ರ ಮಾರ್ಚ್ 12ರಂದು ಜನಿಸಿದವರು. ಕಾಕ್‌ಸರ್ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ಸಣ್ಣ ಹಳ್ಳಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಾರ್ಗಿಲ್‌ನಲ್ಲೇ ಪಡೆದ ಸಜ್ದ್, ತಮ್ಮ ಪದವಿ ಶಿಕ್ಷಣವನ್ನು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮುಗಿಸಿದ್ದಾರೆ. ಬಳಿಕ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಮಾನವ ಹಕ್ಕುಗಳು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ವಿವಾಹಿತರಾದ ಸಜ್ಜಾದ್ ಅವರಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ -1 | ಶಿಖರಗಳ ನಡುವೆ ಸಾಗಿದಷ್ಟು ಸಿಕ್ಕಿದ್ದು ನೆಮ್ಮದಿ

ಪತ್ರಕರ್ತರಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಸಜ್ಜಾದ್, ಸರ್ಕಾರಗಳ ಜನವಿರೋಧಿ ನಿಲುವುಗಳ ವಿರುದ್ಧವಾಗಿ ನಿರಂತರವಾಗಿ ಹೋರಾಟ ಸಂಘಟಿಸುತ್ತಾ ಬಂದವರು. 2019ರಲ್ಲಿ ಲಡಾಖ್ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಜ್ಜಾದ್ ಅವರು, ಬಿಜೆಪಿಗೆ ತಲೆಬಿಸಿಯಾಗಿದ್ದು ನಿಜ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಮ್‌ಯಂಗ್ ತ್ಸೆರಿಂಗ್ ಎದುರು ಪರಾಭವಗೊಂಡರೂ, ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು. ಬಿಜೆಪಿ 42,914 ಮತಗಳನ್ನು ಪಡೆದರೆ, ಸಜ್ಜಾದ್ ಸ್ವತಂತ್ರ ಅಭ್ಯರ್ಥಿಯಾಗಿ 31,984 ಮತಗಳನ್ನು ಪಡೆದಿದ್ದರು. 2024ರ ಲೋಕಸಭಾ ಚುನಾವಣೆ ವೇಳೆಗೆ ಚುನಾವಣೆ ಕಣಕ್ಕೆ ಇಳಿಯದೆ ಸ್ವಂತಂತ್ರ ಅಭ್ಯರ್ಥಿ ಮೊಹಮ್ಮದ್ ಹನೀಫಾ ಅವರಿಗೆ ಬೆಂಬಲ ನೀಡಿದ್ದಾರೆ. ಅಷ್ಟರಲ್ಲೇ ಬಿಜೆಪಿ ಲಡಾಖ್‌ನಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡು ಬರೀ 31,956 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದೆ. ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ಹನೀಫಾ 65,259 ಮತಗಳೊಂದಿಗೆ ಗೆಲುವು ಕಂಡಿದ್ದಾರೆ.

sandeep sajjad
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸಂದೀಪ್ ಪಾಂಡೆ ಜೊತೆ ಚರ್ಚಿಸುತ್ತಿರುವ ಸಜ್ಜಾದ್ ಕಾರ್ಗಿಲಿ Photo: Mahesh Pandey

ಸಜ್ಜಾದ್ ಸದ್ಯ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್‌ನ ಹಿರಿಯ ಸದಸ್ಯರಾಗಿದ್ದು ಲಡಾಖ್ ರಾಜ್ಯತ್ವ ಸಂಬಂಧಿತ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಲಡಾಖ್ ಜನರ ಸಮಸ್ಯೆ ಬರೀ ಲಡಾಖಿಗಳಿಗೆ ಸೀಮಿತವಾಗಿದ್ದರೆ ಸಾಲದು ಇವು ದೇಶದ ವಿವಿಧ ರಾಜ್ಯಗಳ ಪ್ರಗತಿಪರ, ಜನಪರ ಹೋರಾಟಗಾರರಿಗೆ ತಲುಪಬೇಕು, ಇತರೆ ಹೋರಾಟಗಾರರ ಬೆಂಬಲದೊಂದಿಗೆ ಮಾತ್ರ ಈ ಚಳವಳಿಯನ್ನು ಮುನ್ನಡೆಸಲು ಸಾಧ್ಯ ಎಂಬ ನಿಲುವನ್ನು ಹೊಂದಿರುವವರು ಸಜ್ಜಾದ್. ಲಡಾಖ್ ಸಮಸ್ಯೆಯನ್ನು ಕರ್ನಾಟಕದ ಕನ್ನಡಿಗರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಜನರಿಗೆ ತಲುಪಿಸುವ ನಿಟ್ಟಿನಲ್ಲಿಯೇ ನಿಯೋಗವನ್ನು ಲಡಾಖ್‌ಗೆ ಕರೆಸಿಕೊಂಡಿದ್ದಾರೆ. ಇತರೆ ರಾಜ್ಯಗಳ ಹೋರಾಟಗಾರರು ಸೇರಿದರೆ ಈ ಚಳವಳಿ ರಾಜಕೀಯ ಬಣ್ಣ ಪಡೆಯುತ್ತದೆ ಎಂದುಕೊಂಡಿರುವ ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್‌ನ ನಾಯಕರುಗಳನ್ನು ತಾವಾಗಿಯೇ ಒಪ್ಪಿಸಿ ಹೋರಾಟವನ್ನು ದೇಶಾದ್ಯಂತ ಮುನ್ನಡೆಸುವ ಯತ್ನ ಮಾಡುತ್ತಿದ್ದಾರೆ.

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್‌ಚುಕ್‌ ಮೇಲೆ ಕೇಂದ್ರದ ಕೆಂಗಣ್ಣೇಕೆ?

Understanding Ladakh ಎಂಬ ಕಾರ್ಯಕ್ರಮ ರೂಪಿಸಿಕೊಂಡು ದೇಶದ ಎಂಟು ರಾಜ್ಯಗಳಿಂದ ಹೊರಟ ನಮ್ಮ 14 ಜನರ ನಿಯೋಗ ಪ್ರತಿದಿನ 200-300 ಕಿಲೋ ಮೀಟರ್ ಸಂಚಾರ ನಡೆಸಬೇಕಾಗಿತ್ತು. ನಮ್ಮ ಬೆಂಗಳೂರು, ಮೈಸೂರು ಹೆದ್ದಾರಿಗಳಲ್ಲಿ ಸಾಗಿದಂತಲ್ಲ ಈ ಸಂಚಾರ. ವಾಹನದಲ್ಲಿ ಒಂದು ತೀವ್ರ ತುದಿಗೆ ಕುಳಿತ ನಾವು ಒಂದೆಡೆ ಸರಿಯುವಷ್ಟರಲ್ಲಿ ಇನ್ನೊಂದು ತಿರುವು ಬಂದು ನಮ್ಮನ್ನು ಇನ್ನೊಂದು ದಿಕ್ಕಿಗೆ ವಾಲುವಂತೆ ಮಾಡುತ್ತಿತ್ತು. ವಾಹನದಿಂದ ಹೊರ ಮುಖ ಹಾಕಿ ಕಿರುದಾದ ದಾರಿಯನ್ನು ನೋಡಿ ಆತಂಕ ಪಟ್ಟವರೂ ನಮ್ಮ ತಂಡದಲ್ಲಿದ್ದರು. ಇದರೊಂದಿಗೆ ತಿರುವುಗಳು ನಮ್ಮ ಹೊಟ್ಟೆಯೊಂದಿಗೆ ಆಟವಾಡುತ್ತಿತ್ತು, ವಾಂತಿ ಬಂದಂತಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ತಾವು ಓರ್ವ ನಾಯಕ ಎಂಬುದನ್ನು ಮರೆತು ನಮ್ಮೊಂದಿಗೆ ಬೆರೆತು ತಮ್ಮ ಮಧುರವಾದ ಧ್ವನಿಯೊಂದಿಗೆ ಹಾಡಿ ರಂಜಿಸಿದ ಅಪರೂಪದ ಆತ್ಮೀಯ ನಾಯಕ ಸಜ್ಜಾದ್. ಜೊತೆಗೆ ಪ್ರಯಾಣದುದ್ದಕ್ಕೂ ನಮ್ಮ ಜ್ಞಾನ ವೃದ್ಧಿಸುವ ಹಲವು ವಿಚಾರಗಳ ಚರ್ಚೆಯನ್ನೂ ನಡೆಸಿದ್ದರು.

sajjad singing
ಲೇಹ್‌ ಪ್ರತಿಭಟನಾ ಸ್ಥಳದಲ್ಲಿ ಹಾಡುತ್ತಿರುವ ಸಜ್ಜಾದ್ ಕಾರ್ಗಿಲಿ PHOTO: Eedina.com

ಸಜ್ಜಾದ್ ಕಾರ್ಗಿಲಿ ಅವರು ಈದಿನ ಡಾಟ್‌ ಕಾಮ್‌ಗೆ ನೀಡಿದ ಸಂದರ್ಶನ ಈ ಕೆಳಗಿದೆ:

ನಿಮ್ಮ ಹೋರಾಟದ ಬದುಕು, ಪ್ರಸ್ತುತ ಲಡಾಖ್‌ನ ಬೇಡಿಕೆಗಳ ಬಗ್ಗೆ ನಿಮ್ಮ ದೃಷ್ಟಿಕೋನವೇನು?

ಜಮ್ಮು ಕಾಶ್ಮೀರದಿಂದ ಬೇರ್ಪಟ್ಟ ಬಳಿಕ ಲಡಾಖ್ ಹಲವು ಸವಾಲುಗಳನ್ನು ಎದುರಿಸಿವೆ. 370 ವಿಧಿ ರದ್ದು ಮಾಡುವ ಮೂಲಕ ಲಡಾಖ್ ಜನರ ಹಕ್ಕನು ಕಸಿಯಲಾಯಿತು. ಲಡಾಖ್‌ ಅನ್ನು ಶಾಸಕಾಂಗ ಇಲ್ಲದ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ಲಡಾಖಿಗಳಾದ ನಮಗಿದ್ದ ಭೂಮಿಯ ಹಕ್ಕನ್ನೂ ಕಸಿಯಲಾಗಿದೆ. ಆದ್ದರಿಂದ ನಾವು ಇಂದಿಗೂ ಆಗಸ್ಟ್ 5 ಅನ್ನು(2019ರ ಆಗಸ್ಟ್ 5ರಂದು 370 ವಿಧಿ ರದ್ದು ಮಾಡಲಾಗಿದೆ) ದ್ರೋಹದ ದಿನವನ್ನಾಗಿ ಪರಿಗಣಿಸುತ್ತೇವೆ. ಸದ್ಯ ಮುಸ್ಲಿಮರು ಅಧಿಕವಾಗಿರುವ ಜಿಲ್ಲೆಯಾದ ಕಾರ್ಗಿಲ್ ಮತ್ತು ಬೌದ್ದರು ಹೆಚ್ಚಾಗಿರುವ ಜಿಲ್ಲೆಯಾದ ಲೇಹ್‌ನ ಜನರು ಒಗ್ಗಟ್ಟಾಗಿ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಲಡಾಖ್‌ಗೆ ರಾಜ್ಯತ್ವ, ಆರನೇ ಪರಿಚ್ಛೇದಕ್ಕೆ ಲಡಾಖ್ ಸೇರ್ಪಡೆ, ಸಾರ್ವಜನಿಕ ಸೇವಾ ಆಯೋಗ(ಪಿಎಸ್‌ಎ) ರಚನೆ, ಲೇಹ್ ಮತ್ತು ಕಾರ್ಗಿಲ್‌ಗೆ ತಲಾ ಒಂದು ಲೋಕಸಭೆ ಸ್ಥಾನ ನೀಡಬೇಕು ಎಂಬ ಆಗ್ರಹದೊಂದಿಗೆ ಹೋರಾಟ ಮುಂದುವರೆಸಿದ್ದೇವೆ.

ಪ್ರಜಾಪ್ರಭುತ್ವ ಅತ್ಯಾವಶ್ಯಕ, ನಮ್ಮ ರಾಜ್ಯ-ಕೇಂದ್ರ ಸರ್ಕಾರಿ ವ್ಯವಸ್ಥೆಯನ್ನು ಬಲಪಡಿಸಲು ಪ್ರಜಾಪ್ರಭುತ್ವ ಮುಖ್ಯ ಎಂಬುದು ನಿಮಗೆ ತಿಳಿದಿದೆ. ಆದರೆ ದುರುದೃಷ್ಟವಶಾತ್ ಆಗಸ್ಟ್ 5ರಂದು ಭಾರತ ಸರ್ಕಾರ ನಮ್ಮ ಈ ಗುರುತನ್ನು, ನಮ್ಮ ಪ್ರಾತಿನಿಧ್ಯವನ್ನು ಕಸಿದುಕೊಂಡಿದೆ. ಇದು ನಮ್ಮ ಹಕ್ಕಿಗಾಗಿ ನಾವು ಹೋರಾಡುವಂತಾಗಿದೆ. ಕಳೆದ ಆರು ವರ್ಷಗಳಿಂದ ಲಡಾಖ್‌ನಲ್ಲಿ ಯಾವುದೇ ಗೆಜೆಟೆಡ್ ಹುದ್ದೆಯ ನೇಮಕಾತಿ ನಡೆದಿಲ್ಲ. ನಿರುದ್ಯೋಗ ಹೆಚ್ಚಾಗುತ್ತಿದೆ. ಲಡಾಖ್ ಕಾಲೇಜುಗಳಲ್ಲಿ ಸ್ಥಳೀಯರಲ್ಲದವರನ್ನು ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ನೇಮಿಸಲಾಗುತ್ತಿದೆ. ನಮಗೆ ಸಾಂವಿಧಾನಿಕವಾಗಿ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ನಿಮಗೆ ತಿಳಿದಿರುವಂತೆ ನಮ್ಮ ಆರ್ಥಿಕತೆ, ಪರಿಸರ, ಹವಾಮಾನ ದುರ್ಬಲವಾಗಿದೆ, ಹಿಮಚಾದರಗಳು ಕರಗುತ್ತಿವೆ. ಈ ವರ್ಷದಲ್ಲಿ ನಾವು ಜಮ್ಮು, ಹಿಮಾಚಲ ಪ್ರದೇಶ, ಲಡಾಖ್‌ನ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಹವಾಮಾನ ವೈಪರೀತ್ಯಗಳನ್ನು ಕಂಡಿದ್ದೇವೆ. ದುರದೃಷ್ಟವಶಾತ್ ಸರ್ಕಾರ ಯಾವುದೇ ಹವಾಮಾನ ನೀತಿಯನ್ನು ಹೊಂದಿಲ್ಲ.

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-3 | ಬೌದ್ಧರು, ಮುಸ್ಲಿಮರನ್ನು ಒಂದು ಮಾಡಿದೆ ಅಸ್ಮಿತೆಯ ಹೋರಾಟ: ಬಿಜೆಪಿ ಕುತಂತ್ರಕ್ಕಿಲ್ಲ ಆಸ್ಪದ

ಲೇಹ್ -ಲಡಾಖ್‌ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿ(ಎಲ್ಎಚ್‌ಡಿಸಿ) ಚುನಾವಣೆಯಲ್ಲಿ ಲಡಾಖ್‌ ಅನ್ನು ಆರನೇ ಪರಿಚ್ಚೇದಕ್ಕೆ ಸೇರಿಸುವ ಭರವಸೆ ನೀಡಿದ್ದಕ್ಕೇ ಚುನಾವಣೆ ಗೆದ್ದಿತ್ತು ಬಿಜೆಪಿ . ಆದರೆ ಈವರೆಗೂ ತನ್ನ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಲಡಾಖ್‌ನ ಜನರು ಪದೇ ಪದೇ ಸರ್ಕಾರಕ್ಕೆ ಈ ಬಗ್ಗೆ ನೆನಪಿಸುತ್ತಿದ್ದಾರೆ. ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವರಾಗಿದ್ದ ಅರ್ಜುನ್ ಮುಂಡಾ ಅವರೂ ಲಡಾಖ್‌ಗೆ ಆರನೇ ಪರಿಚ್ಚೇದದ ಭರವಸೆ ನೀಡಿದರು. ಸಮಿತಿ ಕೂಡಾ ಈ ಬೇಡಿಕೆಯನ್ನು ಶಿಫಾರಸು ಮಾಡಿದೆ. ಆದರೆ ಯಾವ ಬೇಡಿಕೆಯನ್ನು ಈಡೇರಿಸಿಲ್ಲ. ಆದರಿಂದಾಗಿ ಲಡಾಖಿಗಳು ತೀವ್ರ ಹವಾಮಾನ ವೈಪರೀತ್ಯಗಳ ನಡುವೆಯೂ ಪ್ರತಿಭಟನೆಗೆ ಇಳಿಯಬೇಕಾದ ಸ್ಥಿತಿ ಉಂಟಾಗಿದೆ. ಸದ್ಯ ನಮ್ಮ ಪರಿಸರವಾದಿ, ಲೇಹ್ ಅಪೆಎಕ್ಸ್ ಬಾಡಿಯ ಭಾಗವಾಗಿರುವ ಸೋನಮ್ ವಾಂಗ್‌ಚುಕ್ ಅವರು 35 ದಿನಗಳ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ನಮ್ಮ ಈ ಹೋರಾಟಕ್ಕೆ ಗೆಲುವು ಸಿಗುತ್ತದೆ ಎಂಬ ಭರವಸೆ ನಮಗಿದೆ. ಎಂಟು ರಾಜ್ಯಗಳ 14 ಮಂದಿಯ ನಿಯೋಗವು ಲಡಾಖ್ ಹೋರಾಟದ ಭಾಗವಾಗಿರುವುದಾಗಿ ಘೋಷಿಸಿದ್ದಾರೆ. ಸರ್ಕಾರ ನಮ್ಮನ್ನು ಮೂಲೆಪಾಲು ಮಾಡಿ ಅಂಚಿಗೆ ತಳ್ಳಿದೆ, ನಮ್ಮ ಬೇಡಿಕೆಗಳನ್ನು ಕನಿಷ್ಠ ಪಕ್ಷ ಕೇಳಿಸಿಕೊಳ್ಳುತ್ತಲೂ ಇಲ್ಲ. ಲಡಾಖ್‌ ಜನರ ಪ್ರತಿನಿಧಿಯಾಗಿ ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ನಾನೂ ಭಾಗಿಯಾಗಿದ್ದೆ. ಆದರೆ ಮಾತುಕತೆ ವಿಫಲವಾಗಿದೆ. ಈವರೆಗೆ 10ಕ್ಕೂ ಅಧಿಕ ಸಭೆಯಲ್ಲಿ ಹಾಜರಾಗಿದ್ದೇನೆ. ಸರ್ಕಾರ ಇನ್ನು ಮುಂದಾದರೂ ನಮ್ಮ ಪ್ರಾಮುಖ್ಯತೆಯನ್ನು ಅರಿತುಕೊಳ್ಳುತ್ತದೆ ಎಂದು ಭಾವಿಸಿದ್ದೇನೆ. ದೇಶದಲ್ಲಿ ಯಾವುದೇ ಸಮಸ್ಯೆ ಉಂಟಾದಾಗ ಲಡಾಖ್‌ನ ಜನರು ದೇಶದ ಪರವಾಗಿ, ಭಾರತೀಯ ಸೇನೆ ಪರವಾಗಿ ನಿಂತಿದ್ದಾರೆ. ಆದರೆ ಲಡಾಖ್ ಜನರ ವಿಚಾರ ಬಂದಾಗ ಭಾರತ ಸರ್ಕಾರ ಲಡಾಖಿಗಳ ಕೈಬಿಡುತ್ತದೆ. ಲಡಾಖ್ ಜನರ ಪರವಾಗಿ ನಿಲ್ಲುವಂತೆ, ಲಡಾಖ್ ಜನರಿಗೆ ಸಹಾಯ ಮಾಡುವಂತೆ ನಾನು ದೇಶದ ಎಲ್ಲ ಜನರಲ್ಲಿ ಮನವಿ ಮಾಡುತ್ತೇನೆ.

ಬಿಜೆಪಿ ಸರ್ಕಾರವೇ ಲಡಾಖ್‌ ಅನ್ನು ಆರನೇ ಪರಿಚ್ಚೇದಕ್ಕೆ ಸೇರಿಸುವ ಭರವಸೆಯನ್ನು ನೀಡಿದೆ. ಈಗ ಸರ್ಕಾರ ಯಾಕೆ ಹಿಂಜರಿಯುತ್ತಿರಬಹುದು?

ಬಿಜೆಪಿ ಯಾವಾಗಲೂ ಚೇಲ/ಚಮ್ಚಗಳ ಬಂಡವಾಳವಾದ (Crony Capitalism) ಪರವಾಗಿ ನಿಂತ ಪಕ್ಷ.. ಲಡಾಖ್‌ನ ಆರ್ಥಿಕತೆ ದುರ್ಬಲವಾಗಿದ್ದರೂ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶ. 2019ರ ಆಗಸ್ಟ್ 5ರವರೆಗೂ ಇವು ಪರರ ಪಾಲಾಗಿರಲಿಲ್ಲ. 370ನೇ ವಿಧಿ ರದ್ದಾದ ಬಳಿಕ ಇದೀಗ ಸಂಪನ್ಮೂಲಗಳು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ನೇಮಿಸಿರುವ ಉಪರಾಜ್ಯಪಾಲರ ಹತೋಟಿಯಲ್ಲಿದೆ. ಇವರು ಲಡಾಖ್‌ನ ಧ್ವನಿಯೇನಲ್ಲ. ಹಾಗಾಗಿ ಬಂಡವಾಳಶಾಹಿಗಳ ಅಜೆಂಡಾಕ್ಕಾಗಿ ಲಡಾಖ್ ಅನ್ನು ಬಳಸಲಾಗುತ್ತಿದೆ. ನಾವು ಯಾವುದೇ ಸಂಸ್ಥೆಯ ವಿರುದ್ಧ ಮಾತನಾಡಿದರೂ ದೇಶದ ವಿರುದ್ಧ ಮಾತನಾಡಿದಂತೆ ಬಿಂಬಿಸಲಾಗುತ್ತದೆ. ಸರ್ಕಾರ ಈ ಬಂಡವಾಳಶಾಹಿ ಸಂಸ್ಥೆಗಳೇ ದೇಶ ಅಂದುಕೊಂಡಿದೆ. ಈ ಸಂಸ್ಥೆಗಳು ದೇಶವಲ್ಲ ಎಂಬುದನ್ನು ನಾವು ಸರ್ಕಾರಕ್ಕೆ ನೆನಪಿಸಬೇಕಾಗಿದೆ. ನಮ್ಮ ಸಂಪನ್ಮೂಲದ ದುರ್ಬಳಕೆ ಮಾಡಲು ಲಡಾಖಿಗಳಾದ ನಾವು ಎಂದಿಗೂ ಬಿಡಲ್ಲ. ನಾವು ಅಭಿವೃದ್ಧಿಯ ವಿರೋಧಿಗಳಲ್ಲ, ಆದರೆ ನಮಗೆ ಸುಸ್ಥಿರ ಅಭಿವೃದ್ಧಿ ಬೇಕು. ಲಡಾಖ್ ಜನರ ವಿಶ್ವಾಸ, ಒಪ್ಪಿಗೆ ಪಡೆದ ನಂತರವೇ ಇಂತಹ ಅಭಿವೃದ್ಧಿ ಕಾರ್ಯಗಳು ನಡೆಯಬೇಕು.

ಇದನ್ನು ಓದಿದ್ದೀರಾ? ಲಡಾಖ್‌ ಗ್ರೌಂಡ್ ರಿಪೋರ್ಟ್ ಸರಣಿ-4 | ಲಡಾಖಿನ ವಿದ್ಯಾರ್ಥಿಗಳ ಅಳಲು ಕೇಳುವವರಾರು?

20250914 230511
ಸಜ್ಜಾದ್ ಕಾರ್ಗಿಲಿ ಜೊತೆ ಜಾಗೃತ ಕರ್ನಾಟಕದ ಪೂರ್ಣಿಮಾ ಬಿಸಿನೀರ್, ಹಿರಿಯ ಪತ್ರಕರ್ತೆ ಮಣಿಮಾಲ, ಈದಿನ ಪ್ರತಿನಿಧಿ ಮಯೂರಿ ಬೋಳಾರ್ Photo: Sandeep Pandey

ಲೇಹ್ ಜನರು ಕೇಂದ್ರಾಡಳಿತ ಪ್ರದೇಶದ ಪರವಾಗಿದ್ದರು, ಕಾರ್ಗಿಲ್ ಜನರು ವಿರುದ್ಧವಾಗಿದ್ದರು. ಆದರೆ ಈಗ ಲೇಹ್‌ನ ಜನರೂ ರಾಜ್ಯತ್ವದ ಬೇಡಿಕೆ ಇಡುತ್ತಿದ್ದಾರೆ. ಈ ಬದಲಾವಣೆಗೆ ಕಾರಣವೇನು?

ಕೇಂದ್ರಾಡಳಿತ ಪ್ರದೇಶ ಬಂದರೆ ಎಲ್ಲಾ ಆಡಳಿತವೂ ಲಡಾಖಿಗಳ ಕೈ ಸೇರುತ್ತದೆ ಎಂಬ ತಪ್ಪು ಕಲ್ಪನೆ ಲಡಾಖ್ ಜನರಲ್ಲಿತ್ತು. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಲಡಾಖ್ ವಿಚಾರದಲ್ಲಿ ತಾರತಮ್ಯ ಮಾಡುತ್ತದೆ ಎಂಬ ಆರೋಪ ಲಡಾಖಿಗಳದ್ದಾಗಿತ್ತು. ಈ ಹಿಂದಿನ ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಲಡಾಖಿಗಳಿಗೆ ಕೆಲವು ಮೀಸಲಾತಿಯಾದರೂ ಇತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿ ಕೆಳ ತಳ್ಳಲಾಗಿದೆ. ಲೇಹ್‌ನ ಜನರಿಗೆ ಈಗ ವಾಸ್ತವ ಸ್ಥಿತಿಯ ಅರಿವಾಗಿದೆ. ಪ್ರಸ್ತುತ ನಮ್ಮ ಅಸ್ತಿತ್ವ ಅಪಾಯದಲ್ಲಿದೆ ಎಂಬ ಅಭದ್ರತೆ ಜನರಲ್ಲಿದೆ. ಕಾರ್ಗಿಲ್ ಜನರಿಗೆ ಈ ಬಗ್ಗೆ ಮೊದಲೇ ಒಂದು ಅರಿವಿತ್ತು, ಆದ್ದರಿಂದಾಗಿ ನಾವು ಕೇಂದ್ರಾಡಳಿತ ಪ್ರದೇಶವನ್ನಾಗಿಸುವುದನ್ನು ವಿರೋಧಿಸಿದ್ದೆವು.

370 ವಿಧಿ ರದ್ದತಿಗೂ ಮುನ್ನ ಬೌದ್ದರು ಮತ್ತು ಮುಸ್ಲಿಮರು ಒಂದಾಗಿರಲಿಲ್ಲ. ಈಗ ಒಗ್ಗಟ್ಟಾಗಿದ್ದಾರೆ. ಅದಕ್ಕೆ ಮೂಲ ಕಾರಣ ಏನಾಗಿರಬಹುದು?

ಜನರಿಗೆ ತಮ್ಮ ಅಸ್ತಿತ್ವ ಅಪಾಯದಲ್ಲಿದೆ, ನಾವು ನಮ್ಮ ಧ್ವನಿ ಕಳೆದುಕೊಂಡಿದ್ದೇವೆ, ಕಾನೂನು ರಕ್ಷಣೆ ಇಲ್ಲ ಎಂದು ತಿಳಿದಾಗ ಖಂಡಿತವಾಗಿಯೂ ಜೊತೆಯಾಗುತ್ತಾರೆ. ನಮ್ಮ ಸಂಸ್ಕೃತಿ, ಭಾಷೆ, ಇತಿಹಾಸ, ಸಂಪ್ರದಾಯ ಒಂದೇ ಆಗಿದೆ. ನಮ್ಮಲ್ಲಿ ಧರ್ಮಗಳು ಮಾತ್ರ ಬೇರೆ ಬೇರೆಯಿದೆ. ಲಡಾಖ್ ಹೇಗಿತ್ತೋ ಆ ಸ್ಥಾನ ಇಲ್ಲ ಎಂದಾಗ ನಮ್ಮಲ್ಲಿ ವೈರುದ್ಯವೇಕೆ? ಶೀತಲ ಸಮರದಂತಹ ಸಂಬಂಧವೇಕೆ? ಎರಡೂ ಧರ್ಮದ ನಾಯಕರಿಗೆ ನಮ್ಮ ಅಸ್ತಿತ್ವ ಅಪಾಯದಲ್ಲಿದೆ ಎಂದು ತಿಳಿದ ಬಳಿಕ ನಾವೆಲ್ಲರೂ ಜತೆಯಾದೆವು. ಒಗ್ಗಟ್ಟಾಗಿ ಚರ್ಚಿಸಿ ನಾಲ್ಕು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟೆವು.

ಕೇಂದ್ರ ಸರ್ಕಾರ ಸೋನಮ್ ವಾಂಗ್‌ಚುಕ್ ಮತ್ತು ಕೆಡಿಎ, ಎಲ್‌ಎಬಿ ನಾಯಕರ ಮೇಲೆ ಒತ್ತಡ ಹೇರುತ್ತಿದೆ ಎಂದು ನಿಮಗನಿಸುತ್ತಿದೆಯೇ?

ಸರ್ಕಾರ ಒತ್ತಡ ಹೇರುವ ಕೆಲಸವನ್ನು ಮಾಡುತ್ತಿದೆ. ಆದರೆ ನಾವು ಈಗ ಪರಿವರ್ತನೆ ಘಟ್ಟದಲ್ಲಿದ್ದೇವೆ. ಇದು ಐತಿಹಾಸಿಕ ಸಮಯ. ಈ ವೇಳೆ ನಾವು ಒತ್ತಡಕ್ಕೆ ಮಣಿದರೆ ಅದು ಜನರಿಗೆ ಎಸಗುವ ದ್ರೋಹ. ಕೇಂದ್ರ ಸರ್ಕಾರ ಭೂಮಿಯನ್ನು ಹಿಂಪಡೆಯುವುದು ಸೇರಿದಂತೆ (ಸೋನಮ್ ವಾಂಗ್‌ಚುಕ್ ಅವರ ಶಿಕ್ಷಣ ಸಂಸ್ಥೆಗೆ ಭೂಮಿ ನಿರಾಕರಣೆ) ಮೊದಲಾದ ಕೃತ್ಯಗಳ ಮೂಲಕ ನಮ್ಮ ಮೇಲೆ ಒತ್ತಡ ಹಾಕುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತದೆ. ಈ ಬಗ್ಗೆ ನಮಗೆ ತಿಳಿದಿದೆ. ಆದರೆ ಈ ಒತ್ತಡ ತಂತ್ರಗಳು ನಮ್ಮ ಚಳವಳಿಗೆ ಯಾವುದೇ ಪ್ರಭಾವ ಬೀರುವುದಿಲ್ಲ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...