ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದ ವೇಳೆ, ಪ್ರತಿಭಟನೆಯನ್ನು ಹತ್ತಿಕ್ಕಲು ರೈತರ ಮೇಲೆ ಅಶಿಶ್ ಮಿಶ್ರಾ ಅವರ ಒಡೆತನದ ಮಹೀಂದ್ರಾ SUV ಕಾರು ಹಾಗೂ ಅವರ ಬೆಂಗಾವಲು ಪಡೆ ವಾಹನಗಳನ್ನು ಹತ್ತಿಸಲಾಯಿತ್ತು.
ಮೋದಿ ಸರ್ಕಾರದ ಮೂರು ರೈತವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಒಂದೂವರೆ ವರ್ಷ ಕಾಲ ನಡೆದ ಐತಿಹಾಸಿಕ ಪ್ರತಿಭಟನೆ, ಮೋದಿಯವರನ್ನು ಮಣಿಸಿ ಕಾಯ್ದೆ ವಾಪಸ್ ಪಡೆದ ನಂತರವೇ ಕೊನೆಗೊಂಡಿತ್ತು. ಈ ಸುದೀರ್ಘ ಕಾಲ ನಡೆದ ಪ್ರತಿಭಟನೆಯಲ್ಲಿ ಏಳುನೂರಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದರು. ಅನೇಕ ನೋವಿನ ಘಟನೆಗಳಿಗೆ ಈ ಪ್ರತಿಭಟನೆ ಸಾಕ್ಷಿಯಾಗಿದೆ. ಅದರಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ 2021 ಅಕ್ಟೋಬರ್ 3 ರಂದು ರೈತ ಪ್ರತಿಭಟನಕಾರರ ಮೇಲೆ ಕಾರು ಹತ್ತಿಸಿ ಎಂಟು ಜನರನ್ನು ಕೊಂದ ಪ್ರಕರಣವೂ ಒಂದು. ಆಗಿನ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಠೇನಿ ಅವರ ಮಗ ಹಾಗೂ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹತ್ತಿಸಿದ್ದ. ಜೈಲಿನಲ್ಲಿರುವ ಆತನಿಗೆ ಇದೇ ಡಿಸೆಂಬರ್ 2 ರಿಂದ 31 ರವರೆಗೆ ಹುಟ್ಟೂರಿಗೆ ಹೋಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಘಟನೆಯಲ್ಲಿ ನಾಲ್ವರು ರೈತರು, ಒಬ್ಬರು ಪತ್ರಕರ್ತ, ಕಾರು ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದರು. ಕಾರು ಮೊದಲು ರೈತರ ಮೇಲೆ ಹತ್ತಿದ ನಂತರ ಹಿಂಸೆ ಭುಗಿಲೆದ್ದಿತು.
ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರಾ ಅವರ ಮಗಳು ಪಿಯುಸಿ ಓದುತ್ತಿದ್ದಾರೆ. ಅವರ ಮಗಳಿಗೆ ಇದೇ ಡಿಸೆಂಬರ್ 25 ರಿಂದ 31 ರವರೆಗೆ ವಾರ್ಷಿಕ ಪರೀಕ್ಷೆ ಇದೆ. ಪರೀಕ್ಷೆಗೂ ಮುನ್ನ ಮಗಳ ಜೊತೆ ಇರಲು ಅನುಮತಿ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಮಿಶ್ರಾ ಪರ ವಕೀಲ ಸಿದ್ಧಾರ್ಥ್ ದವೆ ಅವರ ವಾದವನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರ ಪೀಠವು ‘ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಮತ್ತು ಜಾಮೀನು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸೂಚಿಸಿ ಅನುಮತಿ ನೀಡಲಾಗಿತ್ತು.
ಇದನ್ನೂ ಓದಿ : ಉಡುಪಿ | ಲಖೀಂಪುರ ಖೇರಿ ರೈತ ಪ್ರಕರಣ; ಸಚಿವ ಅಜಯ್ ಮಿಶ್ರಾ ವಜಾಕ್ಕೆ ಸಿಐಟಿಯು ಆಗ್ರಹ
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದ ವೇಳೆ, ಪ್ರತಿಭಟನೆಯನ್ನು ಹತ್ತಿಕ್ಕಲು ರೈತರ ಮೇಲೆ ಅಶಿಶ್ ಮಿಶ್ರಾ ಅವರ ಒಡೆತನದ ಮಹೀಂದ್ರಾ SUV ಕಾರು ಹಾಗೂ ಅವರ ಬೆಂಗಾವಲುಪಡೆ ವಾಹನಗಳನ್ನು ಹತ್ತಿಸಿದ್ದರು. ಆನಂತರ ಹಿಂಸಾಚಾರ ನಡೆದಿತ್ತು. ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿತ್ತು.
ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣದ ದಾಖಲಿಸಬೇಕು ಎಂದು ‘ಚೀಫ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್’ಗೆ ಎಸ್ಐಟಿ ಮನವಿ ಮಾಡಿತ್ತು. 2021 ಡಿಸೆಂಬರ್ ವೇಳೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ 279 (ಅಜಾಗರೂಕತೆಯಿಂದ ವಾಹನ ಚಾಲನೆ), 338(ನಿರ್ಲಕ್ಷ್ಯದಿಂದ ಗಂಭೀರ ಗಾಯ ಮಾಡುವುದು) ಹಾಗೂ 340 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾಗುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದರ ನಂತರ ಬದಲಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಬೇಕು ಎಂದು ಎಸ್ಐಟಿ ಹೇಳಿತ್ತು.

ಘಟನೆ ನಡೆದು ಆರು ದಿನದ ನಂತರ ಆಶಿಶ್ ಮಿಶ್ರಾ ಮತ್ತು ಆತನ ಜೊತೆ ಇದ್ದ ಪ್ರಮುಖ ಆರೋಪಿಗಳನ್ನು ಬಂಧಿಸಲಾಯಿತು. ಜನವರಿ 25, 2023ರಂದು ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳೊಂದಿಗೆ ಎಂಟು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು.
ಇದೇ ಅಕ್ಟೋಬರ್ 9, 2025ರಂದು ಲಖಿಂಪುರ ಖೇರಿ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಆಶಿಶ್ ಮಿಶ್ರಾ ಮೇಲೆ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 195 ಎ (ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವಾಹನ ಡಿಕ್ಕಿ ಹೊಡೆದು ಗಾಯಗೊಂಡ ಪ್ರತಿಭಟನಾ ನಿರತ ರೈತರಲ್ಲಿ ತಾನೂ ಒಬ್ಬ ಎಂದು ಸಾಕ್ಷಿ ದೂರುದಾರ ಬಲ್ಜಿಂದರ್ ಸಿಂಗ್ ಹೇಳಿಕೊಂಡಿದ್ದರು. ಅಜಯ್ ಮಿಶ್ರಾ ಅವರ ಆಪ್ತರು ಸಾಕ್ಷಿ ಹೇಳದಂತೆ ಸಿಂಗ್ ಅವರಿಗೆ ಬೆದರಿಸಿದ್ಧಾರೆ. ಸಿಂಗ್ ತಮ್ಮ ಫೋನಿನಲ್ಲಿ ನಡೆದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಇದರ ಆಧಾರದ ಮೇಲೆ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಆಶಿಶ್ ಮಿಶ್ರಾ ಅವರ ತಂದೆ ಅಜಯ್ ಮಿಶ್ರಾ ಠೇನಿ ಅವರು ಲಖಿಂಪುರ ಖೇರಿಯ ಬಿಜೆಪಿ ಸಂಸದರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ವಿರುದ್ಧ ಸೋತರು.
ಲಖಿಂಪುರ ಹಿಂಸಾಚಾರದ ಘಟನೆ?
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಠೇನಿ ಅವರು ಸರಕಾರಿ ಯೋಜನೆಗಳಿಗೆ ಅಡಿಪಾಯ ಹಾಕಲು ಲಖಿಂಪುರ ಖೇರಿಗೆ ಭೇಟಿ ನೀಡಬೇಕಿತ್ತು.
ಕೇಂದ್ರ ಸರ್ಕಾರ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದವು. 3 ಆಕ್ಟೋಬರ್ 2021 ರ ಬೆಳಿಗ್ಗೆ 9.30 ರ ಸುಮಾರಿಗೆ, ಲಖಿಂಪುರ ಮತ್ತು ಉತ್ತರ ಪ್ರದೇಶದ ಟೆರೈ ಪ್ರದೇಶದ ಇತರ ಜಿಲ್ಲೆಗಳ ರೈತರು ಒಟ್ಟುಗೂಡಲು ಪ್ರಾರಂಭಿಸಿದರು ಮತ್ತು ತಮ್ಮ ಟ್ರ್ಯಾಕ್ಟರ್‌ಗಳನ್ನು ಲಖಿಂಪುರದಲ್ಲಿರುವ ಟಿಕುನಿಯಾ ಹೆಲಿಪ್ಯಾಡ್‌ನಲ್ಲಿ ನಿಲ್ಲಿಸಿದರು.
ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಆಗಮನದ ಹಿನ್ನೆಲೆಯಲ್ಲಿ ಟಿಕುನಿಯಾ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾ ನಿರತ ರೈತನನ್ನು ಸಂಪರ್ಕಿಸಿ, ತಮ್ಮ ಟ್ರ್ಯಾಕ್ಟರ್ ಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಮತ್ತು ಪ್ರತಿಭಟನೆಯನ್ನು ನಿಲ್ಲಿಸಲು ಕೇಳಿಕೊಂಡರು. ಆದಾಗ್ಯೂ, ರೈತರು ತಮ್ಮ ನಿಲುವನ್ನು ಬದ್ದವಾಗಿದ್ದರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ, ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ನೇತೃತ್ವದ ವಾಹನಗಳ ಬೆಂಗಾವಲು ಕೇಶವ್ ಪ್ರಸಾದ್ ಮೌರ್ಯ ಅವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗುತ್ತಿತ್ತು. ರೈತರು ಮಿಶ್ರಾ ಅವರ ಕಾರನ್ನು ಮತ್ತು ಅವರ ಬೆಂಗಾಲವನ್ನು ತಡೆದರು. ಇದು ಬಿಜೆಪಿ ಬೆಂಬಲಿಗರೊಂದಿಗೆ ರೈತರ ಘರ್ಷಣೆಗೆ ಕಾರಣವಾಯಿತು. ಘರ್ಷಣೆಯ ಸಮಯದಲ್ಲಿ ನಾಲ್ವರು ರೈತರು ಸಾವನ್ನಪ್ಪಿದರು. ಬಿಜೆಪಿ ಸಂಸದ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಕಾರನ್ನು ಚಲಾಯಿಸುತ್ತಿದ್ದರು ಎಂದು ರೈತರು ಆರೋಪಿಸಿದರು.
ಇದು ಎರಡು ಗುಂಪುಗಳ ನಡುವೆ ಹಿಂಸಾಚಾರಕ್ಕೆ ಕಾರಣವಾಯಿತು. ಈ ವೇಳೆ ಇಬ್ಬರು ಬಿಜೆಪಿ ಕಾರ್ಯಕರ್ತರು, ಒಬ್ಬರು ಪತ್ರಕರ್ತರು ಮತ್ತು ಕಾರು ಚಾಲನೆ ಮಾಡುತ್ತಿದ್ದ ಒಬ್ಬ ವ್ಯಕ್ತಿ ಸಾವನ್ನಪ್ಪಿದರು. ಟಿಕುನಿಯಾ ಪೊಲೀಸ್ ಠಾಣೆಯಲ್ಲಿ ಆಶಿಶ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಾಯಿತು.
ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
ರೈತರ ಮೇಲೆ ಕಾರು ಹತ್ತಿಸಿ, ಎಂಟು ಜನರ ಸಾವಿಗೆ ಕಾರಣವಾಗಿದ್ದ ಆಶಿಶ್ ಮಿಶ್ರಾ ಅವರ ತಂದೆ ಮತ್ತು ಮಾಜಿ ಸಚಿವ ಅಜಯ್ ಮಿಶ್ರಾ “ನಾಯಿಗಳು ಬೊಗಳುತ್ತವೆ ಮತ್ತು ಬೆನ್ನಟ್ಟುತ್ತವೆ” ಎಂದು ವ್ಯಂಗ್ಯವಾಗಿ ರೈತರಿಗೆ ಅವಮಾನಿಸಿ ಮಾತನಾಡಿದ್ದರು. ಲಖಿಂಪುರ ಖೇರಿ ಘಟನೆ ನಡೆದ ನಂತರ ಅಜಯ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯ ಕೇಳಿ ಬಂದಾಗ 2023 ಆಗಸ್ಟ್ ನಲ್ಲಿ ಈ ರೀತಿ ಉದ್ಧಟತನ ಮೆರೆದಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಂಸದ ಅಜಯ್ ಮಿಶ್ರಾ ರೈತ ಕುಲಕ್ಕೆ ಅವಮಾನ ಮಾಡಿದ್ದರು. “ನಾನು ಕಾರಿನಲ್ಲಿ ಲಖನೌಗೆ ಪ್ರಯಾಣಿಸುವಾಗ ನಾಯಿಗಳು ಬೊಗಳುತ್ತವೆ. ಅವು ರಸ್ತೆಬದಿಯಲ್ಲಿ ಬೊಗಳುತ್ತಲೇ ಇರುತ್ತವೆ, ಕಾರನ್ನು ಬೆನ್ನಟ್ಟುತ್ತವೆ. ಅದು ಅವುಗಳ ಸ್ವಭಾವ. ನಾನು ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ. ನಿಮ್ಮ ಬೆಂಬಲದಿಂದಾಗಿ ನನಗೆ ತುಂಬಾ ವಿಶ್ವಾಸವಿದೆ” ಎಂದು ಅಜಯ್ ಮಿಶ್ರಾ ಠೇನಿ ತಮ್ಮ ಬೆಂಬಲಿಗರೊಂದಿಗೆ ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ವೈರಲ್ ಆಗಿರುವ ವಿಡಿಯೋದಲ್ಲಿ, ಪತ್ರಕರ್ತರನ್ನು ಗುರಿಯಾಗಿಸಿಕೊಂಡು “ಕೆಲವು ಮೂರ್ಖ ಪತ್ರಕರ್ತರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಆದರೆ ನಾನು ದುರ್ಬಲನಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ” ಎಂದು ಅವರು ಹೇಳಿದ್ದರು.
ಮೋದಿಯವರು ಭಾಷಣದಲ್ಲಿ ಮಾತ್ರ ಶುದ್ಧಹಸ್ತರು. ಬಾಯಿ ಮಾತಿನಲ್ಲಿ ಮಾತ್ರ ರೈತರ ಪರ, ಮಹಿಳೆಯರ ಪರ. ತಮ್ಮ ಪಕ್ಷದಲ್ಲಿ ಅತ್ಯಾಚಾರಿಗಳು, ಭ್ರಷ್ಟರು, ಕೊಲೆಗಾರರು ಇದ್ದರೆ ಅವರ ವಿರುದ್ಧ ಯಾವ ಕ್ರಮವೂ ಇಲ್ಲ. ಹಿಂದೂ ಧಾರ್ಮಿಕ ಮುಖಂಡರ ಅನ್ಯಾಯಗಳ, ಅನೀತಿಗಳ ಬಗ್ಗೆ ಜಾಣ ಮೌನ. ಇದರಿಂದಾಗಿ ಕಾನೂನು ಉಲ್ಲಂಘನೆ ಮಾಡುವವರಿಗೆ ಯಾವುದೇ ಭಯ ಇಲ್ಲದಂತಾಗಿದೆ.





