ಗಿರಿಯನ್ನು ಲಂಕೇಶರು ಎಂದೂ ತಮ್ಮ ಸಹಾಯಕ ಎಂದು ನೋಡಲಿಲ್ಲ. ನಡೆಸಿಕೊಳ್ಳಲಿಲ್ಲ. ಗಿರಿ ಕೂಡ, ಲಂಕೇಶರ ಇಹ-ಪರವೆಲ್ಲ ಗೊತ್ತಿದ್ದರೂ, ಸಾಸಿವೆಯಷ್ಟು ಕೂಡ ದುರುಪಯೋಗಪಡಿಸಿಕೊಳ್ಳಲಿಲ್ಲ.
ಲಂಕೇಶರ ‘ಅವ್ವ’ ಲೋಕಖ್ಯಾತಿ ಗಳಿಸಿದ ಕವಿತೆ. ಲಂಕೇಶರ ಕರುಳುಬಳ್ಳಿಯ ಕವಿತೆ. ಭೂಮಿಗಂಟಿ ಬದುಕಿದವರ ಬೆವರಿನ ಕವಿತೆ. ಅದರ ಅಸಲಿತನದಿಂದಾಗಿ ಹಲವು ಭಾಷೆಗಳಿಗೆ ಅನುವಾದಗೊಂಡು ಗಡಿ ದಾಟಿ, ಲಂಕೇಶರ ಮುಡಿಗೆ ಗರಿ ಮೂಡಿಸಿದ ಕವಿತೆ. ಇವತ್ತಿನ ಹೊಸ ತಲೆಮಾರಿನ ಯುವಜನತೆಯೊಂದಿಗೂ ಸಂವೇದಿಸುತ್ತಿರುವ ಕವಿತೆ.
ಆದರೆ ನಾನಿಲ್ಲಿ ಹೇಳಲು ಹೊರಟಿರುವುದು ಲಂಕೇಶರ ‘ಅವ್ವ’ ಕವಿತೆಯ ಕುರಿತಲ್ಲ. ಲಂಕೇಶರನ್ನು ಹೆತ್ತ ಅವ್ವನ ಬಗ್ಗೆಯೂ ಅಲ್ಲ. ಬದಲಿಗೆ, ‘ಲಂಕೇಶ್ ಪತ್ರಿಕೆ’ಯಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಲಂಕೇಶರ ಆಪ್ತ ಸಹಾಯಕರಾಗಿದ್ದ, ಅವರ ಇಷ್ಟ-ಕಷ್ಟಗಳನ್ನು ಕರುಳಿಗಿಳಿಸಿಕೊಂಡಿದ್ದ, ಲಂಕೇಶರನ್ನು ಮಗುವಿನಂತೆ ಪಾಲನೆ-ಪೋಷಣೆ ಮಾಡಿದ ಮೂಡಲಗಿರಿ ಎಂಬ ‘ಅವ್ವ’ನ ಕುರಿತು.
1985ರ ಅಕ್ಟೋಬರ್ ತಿಂಗಳಿನ ಒಂದು ದಿನ, ಬೆಂಗಳೂರಿನ ಬಸವನಗುಡಿಯ ಗೋವಿಂದಪ್ಪ ರಸ್ತೆಯಲ್ಲಿದ್ದ ‘ಲಂಕೇಶ್ ಪತ್ರಿಕೆ’ಯ ಕಚೇರಿಗೆ ಕಾಲಿಟ್ಟೆ. ಆ ಸಂದರ್ಭದಲ್ಲಿ ಪತ್ರಿಕೆ ಶುರುವಾಗಿ ಐದು ವರ್ಷವಾಗಿತ್ತು. ಜನಪ್ರಿಯತೆಯ ತುತ್ತ ತುದಿ ತಲುಪಿತ್ತು. ಕನ್ನಡ ಪತ್ರಿಕಾಲೋಕದಲ್ಲಿ, ಅದರಲ್ಲೂ ಟ್ಯಾಬ್ಲ್ಯಾಡ್ ಜಗತ್ತಿನಲ್ಲಿ ಕರ್ನಾಟಕ ಕಂಡರಿಯದ ದಾಖಲೆ ಬರೆದಿತ್ತು. ಅತಿ ಹೆಚ್ಚು ಸರ್ಕ್ಯುಲೇಷನ್ ಹೊಂದಿದ್ದು, ಭಾರೀ ಬೇಡಿಕೆಯಲ್ಲಿತ್ತು. ಲಂಕೇಶ್ ಪತ್ರಿಕೆಯನ್ನು ಓದುವುದು ಆಗ, ಹೆಮ್ಮೆಯ ವಿಷಯವಾಗಿತ್ತು.
ಇದನ್ನು ಓದಿದ್ದೀರಾ?: ಪಿ. ಲಂಕೇಶ್ ಅವರ ಕತೆ | ಮುಟ್ಟಿಸಿಕೊಂಡವನು
ಅದರ ಸಂಪಾದಕರಾದ ಪಿ. ಲಂಕೇಶರು, ನಮ್ಮ-ನಿಮ್ಮಂತೆ ಮನುಷ್ಯರಂತಿದ್ದರೂ, ಅಂಕೆಗೆ ಸಿಗದ ಆಸಾಮಿಯಾಗಿದ್ದರು. ಸಾರ್ವಜನಿಕ ವಲಯದಲ್ಲಿ ಸಿಡುಕ, ಮೂಡಿ ಎಂಬ ಹೆಸರು ಗಳಿಸಿದ್ದರು. ಆ ವಿಶೇಷಣಗಳಿಗೆ ಕುಮ್ಮಕ್ಕು ಕೊಡುವಂತೆ, ಅವರ ಬರವಣಿಗೆ ಇತ್ತು. ಅದಕ್ಕೆ ಪತ್ರಿಕೆಯ ಉಚ್ಛ್ರಾಯ ಸ್ಥಿತಿ ತಳಕು ಹಾಕಿಕೊಂಡಿತ್ತು. ಅಲ್ಲದೆ ಅವರನ್ನು ಕಾಣಲು ದೇಶದ ನಾನಾ ಮೂಲೆಗಳಿಂದ ಗಣ್ಯಾತಿಗಣ್ಯರೆಲ್ಲ ಬಂದುಹೋಗುತ್ತಿದ್ದರು.
ಅಂತಹ ಸಂದರ್ಭದಲ್ಲಿ ನಾನು ಲಂಕೇಶರನ್ನು ಕಾಣಲು ಪತ್ರಿಕೆಯ ಕಚೇರಿಗೆ ಕಾಲಿಟ್ಟೆ. ಕಚೇರಿಯ ಬಾಗಿಲಲ್ಲೆ ಒಬ್ಬ ವ್ಯಕ್ತಿ, ಕುಳ್ಳಗೆ-ಕಪ್ಪಗೆ, ಮಾತಿಲ್ಲ, ಹುಬ್ಬನ್ನೇ ಪ್ರಶ್ನಾರ್ಥಕ ಚಿನ್ಹೆಯನ್ನಾಗಿಸಿ ‘ಯಾರು ಬೇಕಾಗಿತ್ತು’ ಎನ್ನುವಂತೆ ಸೀರಿಯಸ್ಸಾಗಿ ನೋಡಿದರು. ‘ಲಂಕೇಶರನ್ನು ನೋಡಬೇಕಿತ್ತು’ ಅಂದೆ. ‘ಅವರು ಸಿಗಲ್ಲ… ಇಲ್ಲ… ಹೋಗು’ ಅಂದರು. ಅವರು ‘ಹೋಗು’ ಎಂದು ಹೇಳುವುದಕ್ಕೆ ಬೇಕಾದ ಆಕಾರ- ಸಣ್ಣಗೆ, ಕರ್‍ರಗೆ, ಹುಚ್ಚೆಳ್ಕಡ್ಡಿಯಂತಿದ್ದೆ. ಬಿರುಬಿಸಿಲಿನ ಬಯಲುಸೀಮೆಯಿಂದ ಬಂದಿದ್ದೆ. ಅವರ ತಿರಸ್ಕಾರಕ್ಕೆ ಸೂಕ್ತವಾಗಿದ್ದೆ. ಆದರೂ ಸುಧಾರಿಸಿಕೊಂಡು, ‘ಬಂದು ನೋಡಲಿಕ್ಕೆ ಹೇಳಿದಾರೆ’ ಎಂದು ನನ್ನ ವಿವರವನ್ನು ಹೇಳಿದೆ. ‘ಇರು’ ಎಂದು ಏಕವಚನದಲ್ಲಿ ಹೇಳಿ ಹೋದವರು, ಅಷ್ಟೇ ವೇಗವಾಗಿ ಬಂದು, ‘ಹೋಗಿ’ ಎಂದು ಬಹವಚನ ಬಳಸಿದರು.
ನನ್ನನ್ನು ಲಂಕೇಶರ ಬಳಿಗೆ ಕಳುಹಿಸಿದ, ಎರಡು ಪದಗಳ ಮೂಲಕ ಪರಿಚಯವಾದ ವ್ಯಕ್ತಿ- ಮೂಡಲಗಿರಿ. ಕೆಲಸದ ಸೀನಿಯಾರಿಟಿಯಲ್ಲಿ, ನನಗಿಂತ ಎಂಟು ತಿಂಗಳ ಹಿರಿಯ. ಆ ನಂತರ, ಪತ್ರಿಕೆ ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ತಿಳಿದುಬಂದದ್ದರಿಂದ- ಅದೂ ಕೂಡ ಸಂಜೆಯ ‘ಕೂತು ಮಾತನಾಡುವಾಗ’ ಬಾಯ್ಬಿಟ್ಟಿದ್ದರಿಂದ- ಅವರು ಬಿಎಸ್ಸಿ ಪದವೀಧರ. ಚುನಾವಣಾ ಸಮಯದಲ್ಲಿ ತುಮಕೂರು ಜಿಲ್ಲೆಯ ಸುದ್ದಿಗಳನ್ನು ಬರೆಯುವಾಗ, ಸಿರಾ ಕ್ಷೇತ್ರದ ಟಿ.ಬಿ. ಜಯಚಂದ್ರರ ಬಗ್ಗೆ ಕೊಂಚ ಆಸಕ್ತಿ ತೋರುವ ಮೂಲಕ ಗೊತ್ತಾಗಿದ್ದೆಂದರೆ- ಸಿರಾ ಬಳಿಯ ಕರಿದಾಸನಹಳ್ಳಿಯವರು, ಕುಂಚಟಿಗ ಒಕ್ಕಲಿಗರು. ಹಳ್ಳಿಗಾಡಿನ ಹಿಂಜರಿಕೆ, ಭಾಷೆಯ ತೊಡಕು, ಹಸಿವು, ಅವಮಾನ ಕಲಿಸಿದ ವಿನಯತೆ; ಗೊತ್ತಿದ್ದೂ ಗೊತ್ತಿಲ್ಲದಂತಿರುತ್ತಿದ್ದ ನಿರ್ಲಿಪ್ತತೆ, ಮುಗ್ಧತೆ ಮನೆಮಾಡಿತ್ತು.
‘ಲಂಕೇಶ್ ಪತ್ರಿಕೆ‘ಯ ಸಂಪಾದಕರ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದರು. ಆದರೆ ತಾನೊಬ್ಬ ಪದವೀಧರ ಎಂದು ಯಾರಿಗೂ, ಯಾವತ್ತಿಗೂ ಹೇಳಲಿಲ್ಲ. ಈಗಿನಂತೆ ಆಗ ಆಫೀಸ್‌ಗಳಲ್ಲಿ ಎಚ್‌ಆರ್ ಡಿಪಾರ್ಟ್‌ಮೆಂಟ್‌ಗಳಿರಲಿಲ್ಲ, ಅವರೂ ಕೇಳಲಿಲ್ಲ. ವರ್ಷಾನುಗಟ್ಟಲೆ ಅವರ ಜೊತೆಯಲ್ಲಿದ್ದರೂ, ಅವರ ನಡೆ ಮತ್ತು ನುಡಿ ಕೂಡ ಅದನ್ನು ಹೊರಹಾಕಲಿಲ್ಲ. ಕೆಲಸಕ್ಕಾಗಿ ಲಂಕೇಶರಿಗೇ ಸುಳ್ಳು ಹೇಳಿದ್ದರು. ಅವರೂ ಕೂಡ, ಅವರ ವೇಷಭೂಷಣ, ಅಮಾಯಕತೆಯನ್ನು ನಂಬಿದ್ದರು. ಅಷ್ಟರಮಟ್ಟಿಗೆ ಅವರ ಪದವಿಯ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರು. ಹೊಟ್ಟೆಪಾಡಿನ ಅನಿವಾರ್ಯತೆಯೋ, ಹಿಂಜರಿಕೆ ಸ್ವಭಾವವೋ, ಸಹಾಯಕನ ಕೆಲಸಕ್ಕೆ ಮನಸ್ಸು ಮತ್ತು ದೇಹವನ್ನು ಒಗ್ಗಿಸಿಕೊಂಡಿದ್ದರು.
‘ಲಂಕೇಶ್ ಪತ್ರಿಕೆ’ಯಲ್ಲಿ ಲಂಕೇಶರೇ ಎಲ್ಲ- ಸಂಪಾದಕರು, ಮಾಲೀಕರು. ಆದರೆ ಲಂಕೇಶರು ಎಂದೂ ಮೂಡಲಗಿರಿಯನ್ನು ತಮ್ಮ ಸಹಾಯಕ ಎಂದು ನೋಡಲಿಲ್ಲ. ನಡೆಸಿಕೊಳ್ಳಲಿಲ್ಲ. ಗಿರಿ ಕೂಡ, ಲಂಕೇಶರ ಇಹ-ಪರವೆಲ್ಲ ಗೊತ್ತಿದ್ದರೂ, ಸಾಸಿವೆಯಷ್ಟು ಕೂಡ ದುರುಪಯೋಗಪಡಿಸಿಕೊಳ್ಳಲಿಲ್ಲ.
ಲಂಕೇಶರ ಬೇಕು-ಬೇಡಗಳನ್ನು ಬಹುಬೇಗನೆ ಅರಿತು, ಬದುಕನ್ನೇ ಅವರಿಗೆ ಅರ್ಪಿಸಿಕೊಂಡಿದ್ದರು. ಮನೆ-ಮಕ್ಕಳು-ಮನರಂಜನೆಯನ್ನೇ ಮರೆತಿದ್ದರು. ಕೆಲಸಕ್ಕೆ ರಜೆ ಕೂಡ ಹಾಕದವರು. ಬೆಳಗ್ಗೆ ಎಂಟಕ್ಕೆ ಕಚೇರಿಗೆ ಬಂದರೆ, ರಾತ್ರಿ ಎಷ್ಟೊತ್ತಿಗೋ, ಅದು ಅವರಿಗೂ ಗೊತ್ತಿರಲಿಲ್ಲ. ಲಂಕೇಶರು ಮತ್ತು ಮೂಡಲಗಿರಿ ನಡುವೆ ಹೆಚ್ಚು ಮಾತು-ಕತೆ ಇರಲಿಲ್ಲ. ಹಾಗೆ ನೋಡಿದರೆ, ಲಂಕೇಶರ ಬಾಡಿ ಲ್ಯಾಂಗ್ವೇಜ್‌ನಲ್ಲಿ ಏನೊಂದೂ ಅರ್ಥವಾಗುತ್ತಿರಲಿಲ್ಲ. ಆದರೂ ಎಂದೂ ಎಲ್ಲೂ ಸಣ್ಣ ಲೋಪವೂ ಆಗಲಿಲ್ಲ. ಅಷ್ಟರಮಟ್ಟಿಗೆ ಅವರಿಬ್ಬರ ನಡುವೆ, ಅವರಿಗೇ ಗೊತ್ತಿಲ್ಲದಂತೆ ಒಬ್ಬೊರಿಗೊಬ್ಬರು ಅರಿತಿದ್ದರು, ಅನ್ಯೋನ್ಯತೆ ಇರಿಸಿಕೊಂಡಿದ್ದರು. ದೇಹ ಮತ್ತು ಮನಸ್ಸು ಒಂದಾಗಿತ್ತು. ಹಾಗಂತ ಮೇಸ್ಟ್ರನ್ನು ಅರೆದು ಕುಡಿದಿರಲಿಲ್ಲ. ಕುಡಿಯಲಿಕ್ಕೆ ಅವರೂ ಬಿಟ್ಟಿರಲಿಲ್ಲ. ಆದರೂ ಮೇಸ್ಟ್ರಿಗೆ ಸಂಬಂಧಿಸಿದ ಸಣ್ಣ ಸಂಗತಿಯನ್ನೂ ಮರೆಯುತ್ತಿರಲಿಲ್ಲ. ನೋಡುಗರಿಗೆ ನೆಲ-ಮುಗಿಲಿನ ಅಂತರದಂತೆ ಕಂಡರೂ; ಅವರ ರೂಮಿನೊಳಕ್ಕೆ ಹೋಗುವಾಗ- ಸಿಂಹ ಗುಹೆಯೊಳಕ್ಕೆ ಹೋಗುವಂತಹ ಭಯವಿದ್ದರೂ; ಅವರಿಗೆ ಇವರು, ಇವರಿಗೆ ಅವರು ಎನ್ನುವಂತೆ; ಅವರಿಗೇ ಗೊತ್ತಿಲ್ಲದಂತೆ ಅಲಿಖಿತ ಒಪ್ಪಂದವನ್ನು ಅಳವಡಿಸಿಕೊಂಡಿದ್ದರು.
ಇದನ್ನು ಓದಿದ್ದೀರಾ?: ಈ ಕಾಲಕ್ಕೂ ಸಲ್ಲುವ ಲಂಕೇಶ್ ಚಿಂತನೆ
ನನ್ನ ಸಣ್ಣ ತಿಳಿವಳಿಕೆಯ ಪ್ರಕಾರ ಲಂಕೇಶರ ಆ ತಲ್ಲಣದ ಗಳಿಗೆಗಳನ್ನು ತಣ್ಣನೆಯ ಗಳಿಗೆಗಳನ್ನಾಗಿ ಮಾಡುವಲ್ಲಿ ಗಿರಿಯ ಪಾತ್ರ ಅಗಾಧವಾದುದು, ಅಂಕೆಗೆ ಸಿಗದು ಎನಿಸುತ್ತದೆ. ಅದು ಲಂಕೇಶರಿಗಷ್ಟೇ ಗೊತ್ತು. ಲಂಕೇಶ್ ಪತ್ರಿಕೆಯೊಂದಿಗೆ ಒಡನಾಟವಿಟ್ಟುಕೊಂಡವರೆಲ್ಲರಿಗೂ ‘ಗಿರಿ’ ಗೊತ್ತು. ಅವರೆಲ್ಲರ ಪ್ರೀತಿಯ ‘ಗಿರಿ’ಯಾಗಿದ್ದರು. ಇದ್ದಾರೆ, ಈಗಲೂ ‘ಗಿರಿ’ಯಂತೆಯೇ.

ಲೇಖಕ, ಪತ್ರಕರ್ತ




