ಮಾಂಸಾಹಾರದ ಬಗೆಗಿನ ಕೀಳರಿಮೆ, ಅಸಹನೆ ತೊಡಗಿ ಹಾಕಲು ಪ್ರತಿ ಜಿಲ್ಲೆಯಲ್ಲೂ ಕುರಿ ಆಡಿನ ಬಾಡಿನ ಹಬ್ಬವನ್ನು ಸರ್ಕಾರವೇ ಸಂಘಟಿಸಬೇಕಾಗಿದೆ. ಮಾಂಸಾಹಾರಿ ಸಂಸ್ಕೃತಿ, ಪಶುಪಾಲನೆ ಕುರಿತಾದ ಸಮಾಜೋ ಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿ ಬೆಸೆಯುವ ಸಂವಾದ ನಡೆಯಲಿ
ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಸರಿಗಟ್ಟಿ ಮುನ್ನುಗ್ಗುವ ದಿನವಾದ ಜನವರಿ 6,2026 ರಂದು, ಅವರ ಅಭಿಮಾನಿಗಳು ನಾಟಿಕೋಳಿ ಬಾಡಿನ ಹಬ್ಬದ ಆಚರಣೆ ಮೂಲಕ ದೊಡ್ಡಮಟ್ಟದಲ್ಲಿ ಉತ್ಸವವನ್ನು ಸಂಘಟಿಸಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ – ಈ ಇಬ್ಬರೂ ಪರಸ್ಪರ ತಮ್ಮ ತಮ್ಮ ಮನೆಗಳಲ್ಲಿ ಕಳೆದ ತಿಂಗಳು ಎರಡು ಬಾರಿ ಸೌಹಾರ್ದ ಉಪಾಹಾರ ಕೂಟಗಳನ್ನು ಏರ್ಪಡಿಸಿಕೊಂಡಿದ್ದರು. ಅಲ್ಲಿ ಸಿದ್ದರಾಮಯ್ಯನವರು ಬೆಳಿಗ್ಗೆಯೇ ಮಾಂಸಾಹಾರ ಸವಿದರು. ನಂತರ ಉಪಮುಖ್ಯಮಂತ್ರಿಗಳ ಮನೆಗೆ ಹೋದಾಗಲೂ ತನಗೆ ನಾನ್ ವೆಜ್ ಬೇಕೆಂತಲೂ, ಅದು ನಾಟಿಕೋಳಿಯೇ ಆಗಬೇಕೆಂದು ಮೊದಲೇ ಖಚಿತಪಡಿಸಿಕೊಂಡರು. ಅದರಂತೆ ಒಂದೇ ಟೇಬಲಿನಲ್ಲಿ ಬೇರೆಯವರು ಸಸ್ಯಾಹಾರ ಸೇವಿಸಿದರೆ, ಇವರು ಮಾಂಸದ ಭಕ್ಷ್ಯಗಳನ್ನು ಸವಿದರು.
ಇದಕ್ಕೂ ಹಿಂದೆ ಹೋದರೆ ಅವರು ದೇವರ ದರ್ಶನಕ್ಕೆ ಹೋದಾಗಲೆಲ್ಲಾ ಮೀಡಿಯಾ ಮೈಕ್‌ಗಳು ಮೀನು, ಕುರಿ ಕೋಳಿ ತಿಂದು ಬಂದಿದ್ದಾರೆ ಎಂದು ಗುಲ್ಲಬ್ಬಿಸಿ ತಮ್ಮ ಮನುವಾದಿ ಮನಸ್ಸನ್ನು ಪ್ರದರ್ಶಿಸುತ್ತಿದ್ದವು. ಇತ್ತೀಚಿನ ದೇವಸ್ಥಾನ
ಭೇಟಿಯಲ್ಲಿ ಸಿದ್ದರಾಮಯ್ಯನವರೇ ಖಡಕ್ಕಾಗಿ ನಾನು ಏನು ತಿಂದು ಬಂದರೆ ನಿಮಗೇನು? ಮಾಂಸಾಹಾರ ಸೇವನೆ ನನ್ನ ಆಹಾರ ಹಕ್ಕು. ನಿಮ್ಮ ಆಹಾರ ನಿಮ್ಮ ಹಕ್ಕು ಎಂದರು. ಇದರಿಂದ ಸುಮ್ಮನಾಗಿದ್ದವು ಕೂಗುಮಾರಿಗಳು.
ಈ ಎಲ್ಲ ಘಟನೆಗಳಿಂದ ನಾಡಿನ ಮಾಂಸಾಹಾರ ಸಮುದಾಯಗಳಲ್ಲಿ ನವೋಲ್ಲಾಸದ, ಆತ್ಮಗೌರವದ, ಸ್ವಾಭಿಮಾನದ ಅಲೆ ಎದ್ದಿದೆ. ಮಾಂಸಾಹಾರ ತಿನ್ನದವರ ಮೇಲರಿಮೆಯನ್ನೂ, ತಿನ್ನುವವರ ಕೀಳರಿಮೆಯನ್ನೂ ಒಂದೇ ಬಾರಿಗೆ ಈ ನಡೆಗಳು ಅಲುಗಾಡಿಸಿವೆ !!
ಪ್ರಭುತ್ವದ ಚುಕ್ಕಾಣಿ ಹಿಡಿದವ
ತನ್ನ ಆಡಳಿತ ಸೂತ್ರಗಳಿಂದ ಆರ್ಥಿಕ ಅಭಿವೃದ್ಧಿಯನ್ನು ಮಾಡುವಷ್ಟೇ ಮುಖ್ಯವಾಗಿ ಸಮಾಜೋ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸಬೇಕಾಗುತ್ತದೆ.
ನೋಡಿ, ಮಂಟೇಸ್ವಾಮಿಯ ಚಿಕ್ಕಲೂರು ಜಾತ್ರೆ ಒಳಗೊಂಡು ನಾಡಿನ ಸಾಂಸ್ಕೃತಿಕ ನಾಯಕರ ಜಾತ್ರೆಗಳಲ್ಲಿ, ಗ್ರಾಮ ದೇವತೆಗಳ ಹಬ್ಬಗಳಲ್ಲಿ, ಮಾಂಸಾಹಾರ ವಿಜೃಂಭಿಸುತ್ತಿತ್ತು; ಈಗ ಕೋಮುವಾದಿಗಳ ಕಾಟದಿಂದ ಹಿಂಜರಿಯುತ್ತಿರುವಂತೆ ಕಂಡರೂ ಅದು ಮುಂದುವರಿಯುತ್ತಿದೆ. ಮಾಂಸಾಹಾರ ಸಂಸ್ಕೃತಿ ತಳಸಮುದಾಯಗಳನ್ನು ಬೆಸೆಯುತ್ತದೆ; ಪೊರೆಯುತ್ತದೆ. ಭೇದ ಬೋಧಿಸುವವರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಈ ಮಹಾನ್ ಸಂಸ್ಕೃತಿಯ ವಕ್ತಾರರಾಗಿ ಒಡಮೂಡಿದ್ದಾರೆ ಸಿದ್ದರಾಮಯ್ಯನವರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವೆನೆಜುವೆಲಾ ಮೇಲೆ ‘ಅಮೆರಿಕ’ ಹಿಡಿತ: ಮೂರನೇ ವಿಶ್ವಯುದ್ಧದ ಕಾರ್ಮೋಡ
ಆಡು ಕುರಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳ್ಳದೆ ಕಾಡುಗೊಲ್ಲರು, ಮ್ಯಾಸಬೇಡರು, ಬೇಡ ಕಂಪಣರು, ಕೃಷ್ಣ ಗೊಲ್ಲರು, ಗೌಳಿಗರು,ಅಲೆಮಾರಿ ಕುರುಬರು, ಹಂದಿ ಜೋಗಿಗಳು, ಲಂಬಾಣಿಗಳು, ಚರ್ಮಕಾರರು, ಡೋಹರ್‌ಗಳು – ಹೀಗೆ ಎಲ್ಲ ತಳಸಮುದಾಯಗಳ, ಕಾಡಂಚಿನ ಸಮುದಾಯಗಳ ಆರ್ಥಿಕತೆಯಾಗಿದೆ; ಬದುಕಾಗಿದೆ. ಆಡು, ಕುರಿ, ಕೋಳಿ, ಹಂದಿ ಪಾಲನೆಗೆ ಯಾವುದೇ ನೀರಾವರಿ, ರಸಗೊಬ್ಬರ, ಸಬ್ಸಿಡಿ ಬೇಡುತ್ತಿಲ್ಲ. ಈ ಕಸುಬು ಭೂರಹಿತರು, ಸಣ್ಣ ಹಿಡುವಳಿದಾರರಿಗೆ ಲಗತ್ತಾಗಿದೆ. ನಾಡಿನ ಉತ್ತರದ ಮಳೆ ಕಡಿಮೆ ಬೀಳುವ ಪ್ರದೇಶಗಳಿಗೆ ಹೋದಂತೆಲ್ಲ ಈ ಆಡು ಕುರಿಗಳ ಸಂಖ್ಯಾಸಾಂದ್ರತೆ ಏರುತ್ತದೆ.
ಬೆಂಗಳೂರಿನ ಭಾನುವಾರ
ಒಂದೇ ಐವತ್ತು ಸಾವಿರ ಕುರಿ ಆಡುಗಳನ್ನು ತನ್ನ ಹೊಟ್ಟೆಗೆ ಬೇಡುತ್ತದೆ. ನಾಡಿನಲ್ಲಿ ಇರುವುದು ಒಂದು ಮುಕ್ಕಾಲು ಕೋಟಿ ಮಾತ್ರ ಆಡು ಕುರಿಗಳು. ಬೆಂಗಳೂರಿಗೆ ಪ್ರತಿದಿನವೂ ವ್ಯಾಗನ್‌ಗಳಲ್ಲಿ ಹೊರರಾಜ್ಯದಿಂದ ಬಂದಿಳಿಯುತ್ತಿವೆ ಆಡು ಕುರಿಗಳು. ಈಗ ಲಭ್ಯವಿರುವ ಕುರಿ ಮಾಂಸದ ತಲಾವಾರು ಪ್ರಮಾಣ ಕೇವಲ 2.4 ಕೆಜಿ. ಡಿಮಾಂಡ್‌ಗೆ ತಕ್ಕ ಲಭ್ಯತೆ ಇರದ ಕಾರಣಕ್ಕೆ ಮಾಂಸ ಕೆಜಿಗೆ 700 ರೂ. ಇಂದ 1600 ರೂ. ಗೆ ತಲುಪಿದೆ. ಕುರಿ ಆಡಿನ ಮಾಂಸ ಬಡವರ ಗಗನ ಕುಸುಮವಾಗಿದೆ. ವಿಜ್ಞಾನ ವರ್ಷಕ್ಕೆ ಪ್ರತಿಯೊಬ್ಬನಿಗೆ 75 ಕೆ ಜಿ. ಮಾಂಸ ಬೇಕು ಅನ್ನುತ್ತದೆ. ಈಗ ತಲಾವಾರು 10 ಕೆ.ಜಿ. ಕೊಡಬೇಕೆಂದರೂ ಐದು ಲಕ್ಷ ಆಡು ಕುರಿಗಳು ಬೇಕಾಗುತ್ತವೆ. ಆಗ ಐದು ಲಕ್ಷ ಕೋಟಿ ರೂ.ಗಳ ಆರ್ಥಿಕತೆಯಾಗುತ್ತದೆ. ಕರ್ನಾಟಕದ ಬಜೆಟ್ ಅನ್ನು ಹಿಂದೆ ಹಾಕಿ ತಾವೇ ನಾಡಿನ ಬಜೆಟ್ ಅನ್ನೂ ಭರಿಸುತ್ತೇವೆ ಅನ್ನುತ್ತವೆ ಪಶುಪಾಲಕ ಸಮುದಾಯಗಳು. ಇದರಿಂದ ಐದು ಲಕ್ಷ ಉದ್ಯೋಗಗಳ ನಿರ್ಮಾಣ ಅನಾಯಾಸವಾಗಿ ಆಗಿ ಬಿಡುತ್ತದೆ !
ಇಷ್ಟಕ್ಕೂ ಪಶುಪಾಲಕ ಸಮುದಾಯಗಳು ಕೇಳುತ್ತಿರುವುದು
ದುಡ್ಡಲ್ಲ, ಹಣಕಾಸಿನ ಅನುದಾನವಲ್ಲ
ಪಶುಪಾಲನೆ, ಸಹಕಾರ, ಕಂದಾಯ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಅರಣ್ಯ ಇಲಾಖೆಗಳಲ್ಲಿ, ಎಪಿಯಂಸಿಗಳಲ್ಲಿ ಕೆಲವೊಂದು ಪಶುಪಾಲಕ ಪೂರಕ ಪಾಲಿಸಿಗಳನ್ನು. ಅಷ್ಟೇ !
ಮಾನ್ಯ ಸಿದ್ದರಾಮಯ್ಯನವರು ಮಾಂಸಾಹಾರದ ಪ್ರೀತಿಯನ್ನು ತಮ್ಮ ಕಾರ್ಯಸೂಚಿ ಮಾಡಿಕೊಂಡು ಇಡೀ ಕರ್ನಾಟಕದ ಆರ್ಥಿಕತೆ, ಉದ್ಯೋಗ ನಿರ್ಮಾಣ ಸೃಷ್ಟಿಯನ್ನು ಸದೃಢಗೊಳಿಸಿ, ಮಾಂಸಾಹಾರಿ ಸಮುದಾಯಗಳ ನಡುವಿನ ಸಾಂಸ್ಕೃತಿಕ, ಸಾಮಾಜಿಕ ಸಾಮರಸ್ಯಕ್ಕೆ ಬುನಾದಿ ಹಾಕಲು ಕಾಲ ಸೂಕ್ತವಾಗಿದೆ. ಅವರ ಕನಸಿನ ಅಹಿಂದದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮಗ್ಗಲುಗಳನ್ನು ಕಟ್ಟಲು ಅಪರೂಪದ ಅವಕಾಶವಾಗಿದೆ.
ಕೊನೆಯ ಮಾತು
ಕುರಿ ಆಡಿನ ಬಾಡಿನ ಹಬ್ಬ
ಮಾಂಸಾಹಾರದ ಬಗೆಗಿನ ಕೀಳರಿಮೆ, ಅಸಹನೆ ತೊಡಗಿ ಹಾಕಲು ಪ್ರತಿ ಜಿಲ್ಲೆಯಲ್ಲೂ ಕುರಿ ಆಡಿನ ಬಾಡಿನ ಹಬ್ಬವನ್ನು ಸರ್ಕಾರವೇ ಸಂಘಟಿಸಬೇಕಾಗಿದೆ. ಮಾಂಸಾಹಾರಿ ಸಂಸ್ಕೃತಿ, ಪಶುಪಾಲನೆ ಕುರಿತಾದ ಸಮಾಜೋ ಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿ ಬೆಸೆಯುವ ಸಂವಾದ ನಡೆಯಲಿ. ಪಶುಪಾಲಕ ಸಮುದಾಯಗಳ ಆರ್ಥಿಕತೆ, ಅಳಿವು ಉಳಿವು, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳು ಇವುಗಳನ್ನು ಬಿಂಬಿಸುವ ಚಲನಚಿತ್ರ, ಡಾಕ್ಯುಮೆಂಟರಿ, ಕಲಾಪ್ರಕಾರಗಳು, ಆಟ- ಊಟ ಎಲ್ಲ ಇರಲಿ ಅಲ್ಲಿ. ಎಕ್ಸಿಬಿಷನ್‌ನ ಹೊರ ಆವರಣದಲ್ಲಿ ಗ್ರಾಮೀಣ ಮಹಿಳೆಯರು ಮಾಡಿದ ಮಾಂಸದಡಿಗೆಯ ಭಕ್ಷ್ಯಗಳ ಸ್ಟಾಲ್‌ಗಳು ಬಂದವರ ಹೊಟ್ಟೆ ತಣಿಸಲಿ. ಪಶುಪಾಲಕರ ಸಮಸ್ಯೆಗಳು, ಸವಾಲುಗಳು, ಭವಿಷ್ಯದ ಯೋಜನೆಗಳ ಚರ್ಚೆ ಆಗಲಿ. ಪಶುಪಾಲಕರೇ ಮಾಡಿದ ಪಶು ಉತ್ಪನ್ನಗಳ ಮಾರಾಟ, ಮಾತುಕತೆ ಅಲ್ಲಿಗೆ ಬರುವ ಮಾರುಕಟ್ಟೆ ಪ್ರತಿನಿಧಿಗಳ ಜೊತೆ ಸಾಂಗವಾಗಿ ಏರ್ಪಡಲಿ.
ಒಟ್ಟಾರೆ ಪಶುಪಾಲಕರ ಆರ್ಥಿಕತೆ, ಸಾಮಾಜಿಕ ಸಾಂಸ್ಕೃತಿಕ ಜ್ಞಾನ, ವಿವೇ̧ಕ ಅರಿವು ಮುಖ್ಯವಾಹಿನಿಗೆ ಈ ಮೂಲಕ ಹರಿದು ಬರಲಿ.

ಡಾ ರಘುಪತಿ
ವೃತ್ತಿಯಲ್ಲಿ ಪಶು-ವೈದ್ಯ. ಊರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ. ಇವರು ಪರ್ಯಾಯ ಸಾಧ್ಯತೆಗಳ ಚಿಂತಕ ಹಾಗೂ ಬರಹಗಾರ.




