ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಹನುಮಂತ ಎದೆ ಸೀಳಿ ನಿಂತಿರುವ ಫೋಟೋವನ್ನು ನೀವು ನೋಡಿರುತ್ತೀರಿ. ಅದರಲ್ಲಿ ರಾಮ, ಲಕ್ಷ್ಮಣರ ಚಿತ್ರಣ ಇರುತ್ತದೆ. ಹಾಗೆಯೇ ಸಿದ್ದರಾಮಯ್ಯನವರ ಎದೆ ಸೀಳಿದರೆ ಬಸವಣ್ಣ ಕಾಣಿಸುತ್ತಾರೆ. ಯಾಕೆಂದರೆ ಅಷ್ಟು ಬಸವಕಾರ್ಯಗಳನ್ನು ಅವರು ಮಾಡಿದ್ದಾರೆ" ಎಂದು ಬಣ್ಣಿಸಿದರು.
ಬಸವಧರ್ಮ ಅನುಯಾಯಿಗಳಿಂದ ಇಂದು (ಭಾನುವಾರ) ಬೆಂಗಳೂರಿನ ಅರಮನೆ ಮೈದಾನ ಕಂಗೊಳಿಸಿತು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಅದ್ಧೂರಿಯಾಗಿ ಜರುಗಿದ ‘ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ’ವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆಗಳನ್ನು ಮನಸಾರೆ ಸ್ಮರಿಸಿತು.
‘ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂದು ಘೋಷಿಸಿರುವ ಸಿದ್ದರಾಮ್ಯಯ್ಯನವರನ್ನು ವಿಶೇಷವಾಗಿ ಗೌರವಿಸಲಾಯಿತು. ಅವರ ಹಣೆಗೆ ವಿಭೂತಿ ಹಚ್ಚಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿದ ಸ್ವಾಮೀಜಿಗಳು, ಸ್ಮರಣಾ ಫಲಕ ನೀಡಿ ಸನ್ಮಾನಿಸಿದರು.
ಒಂದು ತಿಂಗಳ ಕಾಲ ಬಸವ ಸಂಸ್ಕೃತಿ ಅಭಿಯಾನ ನಡೆದಿತ್ತು. ಅದರ ಸಮಾರೋಪಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಲಿಂಗಾಯತರ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಬಾಲ್ಕಿ ಮಠದ ಬಸವಲಿಂಗ ಪಟ್ಟದ್ದೇವರು, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ಕೂಡಲ ಸಂಗಮ ಬಸವಧರ್ಮ ಪೀಠದ ಮಾತೆಗಂಗಾದೇವಿ ಸೇರಿದಂತೆ ನೂರಾರು ಮಠಾಧೀಶರು ಸಮಾವೇಶದ ಭಾಗವಾಗಿದ್ದರು. ಸಚಿವರಾದ ಎಂ.ಬಿ.ಪಾಟೀಲ್, ಶರಣಪ್ರಕಾಶ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಕೆ.ಎಚ್.ಮುನಿಯಪ್ಪ, ಸಿಎಂ ಕಾರ್ಯದರ್ಶಿ ನಜೀರ್ ಅಹಮದ್, ಶಾಸಕರಾದ ಬಿ.ಆರ್.ಪಾಟೀಲ್, ಬಾಬಾಸಾಹೇಬ್ ಪಾಟೀಲ್, ಉದ್ಯಮಿ ಅಶೋಕ್ ಖೇಣಿ, ಮಾಜಿ ಐಎಎಸ್ ಅಧಿಕಾರಿ ಸೋಮಶೇಖರ್ ಸೇರಿದಂತೆ ನೂರಾರು ಜನ ಮುಖಂಡರು ವೇದಿಕೆಯಲ್ಲಿ ಹಾಜರಿದ್ದರು.
2013ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮತ್ತು ಈಗ ಸಿದ್ದರಾಮಯ್ಯನವರು ಮಾಡಿರುವ ಬಸವಧರ್ಮ ಪರವಾದ ಕೆಲಸಗಳನ್ನು ಸಮಾರಂಭದ ಉದ್ಧಕ್ಕೂ ಸ್ಮರಿಸಲಾಯಿತು. ಜೊತೆಜೊತೆಗೆ ಲಿಂಗಾಯತ ಧರ್ಮದ ಕೂಗು ಮತ್ತೊಮ್ಮೆ ಎದ್ದೇಳುವ ಸೂಚನೆಯನ್ನು ಸಮಾವೇಶವು ರವಾನಿಸಿತು.

ಜಾಗತಿಕ ಲಿಂಗಾಯತ ಮಹಾಸಭೆಯ ಎಸ್.ಎಂ.ಜಾಮದಾರ ಮಾತನಾಡಿ, “ಸಿದ್ದರಾಮಯ್ಯನವರು ನಮ್ಮೆಲ್ಲರ ಗೌರವಕ್ಕೆ ಅರ್ಹರಾಗಿದ್ದಾರೆ. ರಾಜ್ಯದ ಪ್ರಥಮ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿಯವರ ಹೆಸರಿಟ್ಟವರು ಸಿದ್ದರಾಮಯ್ಯ. ವಿರಕ್ತ ಮಠಗಳಲ್ಲಿಯೇ ಬಸವಣ್ಣನವರ ಭಾವಚಿತ್ರ ಕಾಣೆಯಾಗಿರುವ ಹೊತ್ತಿನಲ್ಲಿ ಸರ್ಕಾರದ ಎಲ್ಲ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರ ಹಾಕಬೇಕು ಎಂದು ಆದೇಶ ಮಾಡಿದವರು ಸಿದ್ದರಾಮಯ್ಯ. ಶಿವಮೊಗ್ಗ ನಗರದಲ್ಲಿದ್ದ ಕಾರಾಗೃಹವನ್ನು ಖಾಲಿ ಮಾಡಿಸಿ, ಅದನ್ನು ಊರ ಹೊರಗೆ ಹಾಕಲಾಯಿತು. ಖಾಲಿ ಜಾಗದಲ್ಲಿ ಉದ್ಯಾನವನ ಕಟ್ಟಿಸಿ ಅದಕ್ಕೆ ಅಲ್ಲಮಪ್ರಭುವಿನ ಹೆಸರಿಟ್ಟರು. ಲಿಂಗಾಯತರ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಿದ್ದು ಸಿದ್ದರಾಮಯ್ಯ” ಎಂದು ಜನರ ಮುಂದಿಟ್ಟರು.
ಲಿಂಗಾಯತ ಸ್ವಾಮೀಜಿಗಳಿಂದ ಸಿದ್ದರಾಮಯ್ಯನವರಿಗೆ ಭಾರೀ ಮೆಚ್ಚುಗೆ
ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯನವರು ಮಾಡಿರುವ ಕಾರ್ಯಗಳನ್ನು ಕಾರ್ಯಕ್ರಮದುದ್ದಕ್ಕೂ ಸ್ಮರಿಸಲಾಯಿತು. ಪ್ರಮುಖ ಸ್ವಾಮೀಜಿಗಳೆಲ್ಲ ಮುಖ್ಯಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿರಿ: ಎಳೆತನದಲ್ಲೇ ಬುದ್ಧಿ ಸ್ಥಗಿತಗೊಂಡ ಸ್ಥಿತಿಯಲ್ಲಿ RSS; ದೇವನೂರರ ಮನೋಜ್ಞ ವಿಶ್ಲೇಷಣೆ
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, “ಮುಖ್ಯಮಂತ್ರಿಯವರು ಓದಿದ್ದು ಕಾನೂನು, ಆದರೆ ಅತಿಹೆಚ್ಚು ಸಲ ಬಜೆಟ್ ಮಂಡಿಸಿ ಅರ್ಥಶಾಸ್ತ್ರದ ಕೆಲಸವನ್ನೇ ಹೆಚ್ಚು ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಜನಸಾಮಾನ್ಯರ ನಾಡಿಮಿಡಿತ ಗೊತ್ತಿದೆ. ಅವರು ಬಡವರಿಗಾಗಿ ಕೆಲಸ ಮಾಡಿದ್ದಾರೆ. ಒಬ್ಬ ನಾಯಕನಿಗೆ ಇರಬೇಕಾದ ಗುಣವಿದು” ಎಂದು ಶ್ಲಾಘಿಸಿದರು.
ಕೂಡಲಸಂಗಮದ ಮಾತೆ ಗಂಗಾಬಿಕೆ ಮಾತನಾಡಿ, “ಸಿದ್ದರಾಮಯ್ಯನವರ ಹೆಸರೇ ಒಂದು ವೈಶಿಷ್ಟ್ಯ. ಆ ಕಾಲದಲ್ಲಿಯೂ ಸಿದ್ಧರಾಮೇಶ್ವರರಿಗೆ ಬಸವಣ್ಣನವರ ಕಂಡರೆ ಅಪಾರ ಗೌರವವಿತ್ತು. ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಸಿದ್ದರಾಮಯ್ಯ ಎಂದು ಅವರ ತಂದೆ ತಾಯಿ ಹೆಸರಿಟ್ಟಿದ್ದು ಸಾರ್ಥಕವಾಯಿತು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಸಾಮಾನ್ಯವಾದ ವಿಚಾರವಲ್ಲ. ಸಿದ್ದರಾಮಯ್ಯನವರು ಬಂದ ಮೇಲೆ ಆರು ನೂರು ಕೋಟಿ ರೂಪಾಯಿಗಳನ್ನು ಅನುಭವ ಮಂಟಪಕ್ಕೆ ಕೊಟ್ಟಿದ್ದಾರೆ” ಎಂದು ಸ್ಮರಿಸಿದರು.
ಮಠಾಧಿಪತಿಗಳ ಒಕ್ಕೂಟದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಹನುಮಂತ ಎದೆ ಸೀಳಿ ನಿಂತಿರುವ ಫೋಟೋವನ್ನು ನೀವು ನೋಡಿರುತ್ತೀರಿ. ಅದರಲ್ಲಿ ರಾಮ, ಲಕ್ಷ್ಮಣರ ಚಿತ್ರಣ ಇರುತ್ತದೆ. ಹಾಗೆಯೇ ಸಿದ್ದರಾಮಯ್ಯನವರ ಎದೆ ಸೀಳಿದರೆ ಬಸವಣ್ಣ ಕಾಣಿಸುತ್ತಾರೆ. ಯಾಕೆಂದರೆ ಅಷ್ಟು ಬಸವಕಾರ್ಯಗಳನ್ನು ಅವರು ಮಾಡಿದ್ದಾರೆ. ಬಸವ ಜಯಂತಿಯಂದು ಅವರು ಪ್ರಮಾಣವಚನ ಸ್ವೀಕರಿಸಿದ್ದರು” ಎಂದು ನೆನಪಿಸಿಕೊಂಡರು.
“ಲಿಂಗಾಯತ ಸ್ವತಂತ್ರ ಧರ್ಮ ಎಂದು ಮುದ್ರೆ ಹೊತ್ತಿದವರು ಸಿದ್ದರಾಮಯ್ಯ. ಬಸವಣ್ಣನವರ ಹೆಸರು ಇರುವವರೆಗೂ ಸಿದ್ದರಾಮಯ್ಯನವರ ಹೆಸರು ಚಿರಸ್ಥಾಯಿಯಾಗಿರುತ್ತದೆ. ಇದಲ್ಲ ನಾಳೆ ಬಸವ ಧರ್ಮ ಆಗಿಯೇ ಆಗುತ್ತದೆ. ನಿಜಲಿಂಗಪ್ಪನವರಂತೆ ಕಳಂಕರಹಿತ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹೊಮ್ಮಿದ್ದಾರೆ” ಎಂದು ಬಣ್ಣಿಸಿದರು.
“ವಚನ ವಿಶ್ವವಿದ್ಯಾಲಯ ಆಗಬೇಕೆಂಬ ಬೇಡಿಕೆ ಇಟ್ಟಿದ್ದೆವು. ಮುಂದಿನ ವರ್ಷ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಜನಪದ ವಿಶ್ವವಿದ್ಯಾಲಯ, ಸಂಗೀತ ವಿವಿ, ಸಂಸ್ಕೃತ ವಿವಿಗಳಂತೆ ವಚನ ವಿಶ್ವವಿದ್ಯಾಲಯ ಮಾಡಬೇಕು. ನೀವು ವಿಶ್ವವಿದ್ಯಾಲಯ ಮಾಡಿದರೆ ಮತ್ತೊಂದು ಇತಿಹಾಸ ಬರೆದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, “900 ವರ್ಷಗಳ ಬಳಿಕ, ಸ್ವಾತಂತ್ರ್ಯ ಬಂದು 75 ವರ್ಷಗಳಾದ ಮೇಲೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಲು ಸಿದ್ದರಾಮಯ್ಯನವರು ಬರಬೇಕಾಯಿತು. ಲಿಂಗಾಯತದಲ್ಲಿ ಜಾತಿ ಸಂಕುಚಿತತೆ ಇಲ್ಲ. ಲಿಂಗಾಯತ ಎಂದರೆ ಸಂಸ್ಕಾರ, ಜೀವನ ಪದ್ಧತಿ, ಬಸವಣ್ಣನವರ ಆಶಯವೇ ಆಗಿದೆ. ನಾವೆಲ್ಲ ಬಸವಣ್ಣನವರ ಮಕ್ಕಳು” ಎಂದು ತಿಳಿಸಿದರು.
ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, “ಬುದ್ಧನ ಚಳವಳಿಗೆ ಸಾಮ್ರಾಟ್ ಅಶೋಕ ಜೊತೆಯಾಗಿ ನಿಂತಂತೆ, ಬಸವ ಚಳವಳಿಯ ಜೊತೆ ಎಂ.ಬಿ.ಪಾಟೀಲರು ನಿಂತಿದ್ದಾರೆ. ಅದರೊಂದಿಗೆ ಅನೇಕರು ಇದ್ದಾರೆ. ವೈದಿಕ ಪರಂಪರೆಯಿಂದ ಲಿಂಗಾಯತದ ಕಡೆಗೆ ಹೊರಟಿದ್ದೇವೆ” ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮ: ಎಂ.ಬಿ.ಪಾಟೀಲ್
“ಸಿಖ್, ಜೈನರು ಇದ್ದಂತೆ ಬಸವ ಧರ್ಮ. ನಮ್ಮಲ್ಲಿ ಇರುವ ಸಣ್ಣಸಣ್ಣ ಸಮುದಾಯಗಳಿಗೆ ಶಕ್ತಿಯನ್ನು ತುಂಬಬೇಕಿದೆ. ಆಗ ಬಸವಣ್ಣನವರ ಅನುಭವ ಮಂಟಪ ಯಶಸ್ವಿಯಾಗುತ್ತದೆ” ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಆ ಮೂಲಕ ಪ್ರತ್ಯೇಕ ಧರ್ಮದ ಕೂಗನ್ನು ಮುನ್ನಲೆಗೆ ತಂದರು.
ಸಿದ್ದರಾಮಯ್ಯನವರ ಕೊಡುಗೆಗಳನ್ನು ಸ್ಮರಿಸಿದ ಅವರು, “ನಮ್ಮ ಪರವಾಗಿ ಸಿಎಂ ಇದ್ದಾರೆ” ಎಂದರು.
ವೈಚಾರಿಕ ಮಾತುಗಳಿಂದ ಗಮನ ಸೆಳೆದ ನಿಜಗುಣಾನಂದ ಸ್ವಾಮೀಜಿ
ಕ್ರಾಂತಿಕಾರಕ ಮತ್ತು ವಿಚಾರ ಪ್ರಚೋದಕ ಮಾತುಗಳಿಗೆ ಹೆಸರಾದ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಯವರ ಭಾಷಣ ಗಮನ ಸೆಳೆಯಿತು.
“ಬಸವ ಸಂಸ್ಕೃತಿ ಅಭಿಯಾನವನ್ನು ಒಂದು ತಿಂಗಳು ನಡೆಸಿದೆವು. ಈ ಅಭಿಯಾನಕ್ಕೆ ನಮ್ಮ ಸಮುದಾಯದಲ್ಲಿ ಹುಟ್ಟಿರುವ ಮಠಾಧಿಪತಿಗಳೇ ಮುಳ್ಳಾಗಿದ್ದರು. ಒಂದು ತಿಂಗಳ ಕಾಲ ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಬಸವಣ್ಣನವರನ್ನು ನಂಬಿದವರು ಯಾರೂ ಕೆಟ್ಟಿಲ್ಲ. ಕೆಟ್ಟವರು ಯಾರೂ ಬಸವಣ್ಣನವರನ್ನು ನಂಬುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.

“ಯಾರು ಶರಣಾಗುತ್ತಾರೋ ಅವರಿಗೆ ಬಸವಣ್ಣನೇ ರಕ್ಷಕ. ಯಂತ್ರ-ತಂತ್ರಗಳನ್ನು ನಂಬಿ, ಮಠಗಳಲ್ಲಿ ಕುಳಿತು ಮೂಢನಂಬಿಕೆಯನ್ನು ಬೆಳೆಸುವ ಸ್ವಾಮಿಗಳಿಗಾಗಿ ಬಸವಣ್ಣನಿಲ್ಲ. ಬಸವಣ್ಣ ಹುಟ್ಟಿದ್ದು ಜನರಿಗಾಗಿ, ಜನರ ಏಳಿಗೆಗಾಗಿ, ರೈತರಿಗಾಗಿ, ದಮನಿತರಿಗಾಗಿ, ಶ್ರಮಿಕರಿಗಾಗಿ” ಎಂದರು.
“ವಿಜ್ಞಾನ ತಂತ್ರಜ್ಞಾನ ಬೆಳೆದಿರುವ 21ನೇ ಶತಮಾನದಲ್ಲಿಯೇ ಇಷ್ಟೊಂದು ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಇನ್ನು 12ನೇ ಶತಮಾನದಲ್ಲಿ ಬಸವಣ್ಣನವರಿಗೆ ಎಷ್ಟು ಸವಾಲು ಎದುರಾಗಿರಬಹುದು! ನಮ್ಮೆಲ್ಲರ ಹೃದಯದಲ್ಲಿ ಬಸವಣ್ಣ ಉಳಿಯಬೇಕು. ಅಂತಹ ಸಂಸ್ಕೃತಿ, ಪರಂಪರೆಯನ್ನು ಅವರು ಕೊಟ್ಟಿದ್ದಾರೆ. ಮಾನವಹಕ್ಕುಗಳನ್ನು ಪ್ರತಿಪಾದಿಸುವ ಲಿಂಗಾಯತ ಧರ್ಮವನ್ನು ನೀಡಿದ್ದಾರೆ. ಬಸವಣ್ಣನವರು ಬರದೇ ಹೋಗಿದ್ದರೆ, ದಲಿತರ ಸ್ಥಿತಿ ಏನಾಗುತ್ತಿತ್ತು?” ಎಂದು ಪ್ರಶ್ನಿಸಿದ ಅವರು ‘ಅಂಬೇಡ್ಕರ್ ಮತ್ತು ಬಸವಣ್ಣ’ನವರನ್ನು ಸಮೀಕರಿಸಿ ಮಾತು ಮುಂದುವರಿಸಿದರು.
“ಧಾರ್ಮಿಕ ಸಂಹಿತೆಯಲ್ಲಿ ಮಾನವನ ಅಸ್ಮಿತೆಗೆ, ಘನತೆಗೆ ಗೌರವವನ್ನು ಕೊಟ್ಟವರು ಬಸವಣ್ಣ. 21ನೇ ಶತಮಾನದಲ್ಲಿ ಬಸವಣ್ಣನವರ ತತ್ವವನ್ನು ಹೇಳುವ ಸಂವಿಧಾನವನ್ನು ಅಂಬೇಡ್ಕರ್ ತಂದಿದ್ದಾರೆ. ಇದು ಬಸವಣ್ಣನವರ ಕಾಲ, ಅಂಬೇಡ್ಕರ್ ಅವರ ಕಾಲ. ಇದು ಸಮಾನತೆಯ, ವೈಚಾರಿಕತೆಯ ಕಾಲ. ಕಂದಾಚಾರ, ಮೂಢನಂಬಿಕೆ ಬಿತ್ತುವ ಕಾಲವಲ್ಲ ಇದು. ಇದು ವಿಜ್ಞಾನದ ಕಾಲ. ಬಸವಣ್ಣನವರ ತತ್ವಗಳನ್ನು ಸರಿಯಾಗಿ ಹೇಳದಿದ್ದರೆ, ಜನರು ಮಠಾಧಿಪತಿಗಳನ್ನು ಬಿಟ್ಟು, ತಮ್ಮ ಪಾಡಿಗೆ ತಾವು ಬಸವಣ್ಣನವರ ಹಿಂದೆ ಹೋಗುತ್ತಾರೆ” ಎಂದು ಹೇಳಿದರು.
“ಭಾರತೀಯ ಸಂಸ್ಕೃತಿಯ ಒಳಗಡೆ ಬಸವ ಸಂಸ್ಕೃತಿ ಭಿನ್ನವಾಗಿದೆ. ಬಸವಣ್ಣನವರು ನನ್ನದು ಮಾದಾರ ಚೆನ್ನಯ್ಯನ ಗೋತ್ರಾ ಎಂದರು. ಇದು ಬಸವಣ್ಣನವರ ಸಂಸ್ಕೃತಿ. ಹೆಣ್ಣನ್ನು ಮಾಯೆ ಎಂದು ಕರೆದಾಗ, ಹೆಣ್ಣುಮಕ್ಕಳಿಗೆ ಮಹಾಮನೆಯ ಬಾಗಿಲನ್ನು ತೆರೆದ ಸಂಸ್ಕೃತಿ ಬಸವಸಂಸ್ಕೃತಿ. ಗುಡಿಯೊಳಗೆ ಬಿಟ್ಟುಕೊಡದೆ ಇರುವಾಗ ದೇಹವೇ ದೇವಾಲಯ ಎಂದು ಸಾರಿದ ಸಂಸ್ಕೃತಿ ಇದು. ಇದು ಗುಡಿ ಸಂಸ್ಕೃತಿಯಲ್ಲ. ಮಾನವ ಘನತೆಯ ಸಂಸ್ಕೃತಿಯನ್ನು ಬಸವಣ್ಣ ಬೆಳೆಸಿದ್ದಾರೆ” ಎಂದು ಪ್ರತಿಪಾದಿಸಿದರು.
“ಲಿಂಗಾಯತ ಮಠಾಧಿಪತಿಗಳ ಒಕ್ಕೂಟವನ್ನು ಒಗ್ಗಟ್ಟಿನಿಂದ ಮುನ್ನಡೆಸಬೇಕು. ರುದ್ರಾಕ್ಷಿ ಹಾಕಬೇಕು. ಲಿಂಗ ಕಟ್ಟಬೇಕು. ಏಕದೇವೋಪಾಸನೆ ಮಾಡಬೇಕು. ನಮ್ಮ ಧರ್ಮಗುರು ಬಸವಣ್ಣ, ನಮ್ಮ ಧರ್ಮ ಗ್ರಂಥ ವಚನಗಳು” ಎಂದರು.
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, “ಬಸವಣ್ಣನವರು ವಿಶ್ವಗುರು. ಬಸವಣ್ಣನವರ ತತ್ವಗಳನ್ನು ನಾವೆಲ್ಲ ಪಾಲಿಸಬೇಕು. ಶಾಸಕರುಗಳಿಗೆ ಬಸವತತ್ವದ ನೆಲೆಯಲ್ಲಿ ಪ್ರತಿವರ್ಷ ತರಬೇತಿ ನೀಡಬೇಕು. ಆ ಮೂಲಕ ಜನಪ್ರತಿನಿಧಿಗಳ ಆತ್ಮಾವಲೋಕನಕ್ಕೆ ದಾರಿ ಮಾಡಬೇಕು. ಆಗ ಮಾತ್ರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದಿದ್ದು ಸಾರ್ಥಕವಾಗುತ್ತದೆ” ಎಂದು ಬೇಡಿಕೆ ಇಟ್ಟರು.
ಇದನ್ನೂ ಓದಿರಿ: ʼಬಸವ ಸಂಸ್ಕೃತಿ ಅಭಿಯಾನʼ ಸಮಾರೋಪ ನಾಡಿನ ಉತ್ಸವವಾಗಲಿ
ಜಾಗೃತ ಕರ್ನಾಟಕದ ಡಾ.ಎಚ್.ವಿ.ವಾಸು ಮಾತನಾಡಿ, “ಕೋವಿಡ್‌ಗೂ ಮುನ್ನ ಸಾಣೆಹಳ್ಳಿ ಶ್ರೀಗಳ ನೇತೃತ್ವದಲ್ಲಿ ಮತ್ತೆ ಕಲ್ಯಾಣ ಆರಂಭವಾದಾಗಲೇ, ಕರ್ನಾಟಕದಲ್ಲಿ ಹೊಸ ಸಂಚಲನ ಮೂಡಲಿದೆ ಎಂದು ಗೊತ್ತಾಯಿತು. ಆದರೆ ಕೋವಿಡ್ ಕಾರಣದಿಂದ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ಮಾಡಲಾಗಲಿಲ್ಲ. ಆ ಕೆಲಸವನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೆಗೆದುಕೊಂಡು ಹೋಗಿರುವುದು ಖುಷಿಯ ಸಂಗತಿ” ಎಂದು ಸಂತಸ ವ್ಯಕ್ತಪಡಿಸಿದರು.
ಮುಂದುವರಿದು, “ಬಸವ ಸಂಸ್ಕೃತಿ ಅಭಿಯಾನದ ಭಾಗವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಮುಸ್ಲಿಂ ಸಮುದಾಯಕ್ಕೆ ಸೇರಿದವರು” ಎಂದು ತಿಳಿಸಿದರು.

“ಎಂಟು ವರ್ಷಗಳ ಹಿಂದೆ ನೂರಾರು ಪಾಳೇಗಾರರ ಆಳ್ವಿಕೆ ಕರ್ನಾಟಕದಲ್ಲಿ ಇತ್ತು. ಸರಳ ಕನ್ನಡ ಬಳಸಿದ ನೂರಾರು ಶರಣರು, ವಚನಗಳ ಮೂಲಕ ಕನ್ನಡವನ್ನು ಒಂದುಗೂಡಿಸಿದರು. ಕನ್ನಡ ರಾಷ್ಟ್ರೀಯತೆ ಉಗಮವಾಗಿದ್ದು 12ನೇ ಶತಮಾನದಲ್ಲಿ” ಎಂದು ವಿಶ್ಲೇಷಿಸಿದರು.
ಜಸ್ಟಿಸ್ ಎಚ್.ಎನ್. ನಾಗಮೋಹನ್ ದಾಸ್ ಮಾತನಾಡಿ, “ಜಗತ್ತಿನ ಎಲ್ಲ ಮಾನವರಿಗೆ, ಜೀವರಾಶಿಗಳಿಗೆ ಅಗತ್ಯವಾಗಿ ಬೇಕಾಗಿರುವ ತತ್ವ- ಬಸವತತ್ವ. ಪ್ರತಿಯೊಬ್ಬರೂ ದುಡಿದು ಬದುಕಬೇಕು. ಕಾಯಕವೇ ಪೂಜ್ಯವೆಂದು ಶರಣರು ಸಾರಿದರು” ಎಂದರು.
ಜನಸಾಮಾನ್ಯರ ಕಣ್ಣಲ್ಲಿ ಸಮಾವೇಶ
ಬಸವ ಸಂಸ್ಕೃತಿ ಸಮಾವೇಶದ ಸಂದರ್ಭದಲ್ಲಿ ‘ಈದಿನ’ದ ಜೊತೆಯಲ್ಲಿ ಹಲವು ಜನಸಾಮಾನ್ಯರು ಮಾತನಾಡಿದರು. “ಲಿಂಗಾಯತ ಪ್ರತ್ಯೇಕ ಧರ್ಮ. ನಾವೆಲ್ಲ ಬಸವಣ್ಣನವರ ಅನುಯಾಯಿಗಳು. ನಮ್ಮದು ಬಸವ ಮಾರ್ಗ. ಸಮಾನತೆಯೇ ನಮ್ಮ ಧರ್ಮದ ತಳಹದಿ” ಎಂಬುದು ಜನರ ಅಭಿಪ್ರಾಯವಾಗಿತ್ತು.
“ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ನಾವೆಲ್ಲ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ಬರೆಸುತ್ತಿದ್ದೇವೆ. ಇಂದಲ್ಲ ನಾಳೆ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕೇ ಸಿಗುತ್ತದೆ” ಎಂಬುದು ಅವರ ನಿರೀಕ್ಷೆಯಾಗಿತ್ತು.





