ದೊಡ್ಡವರು ಲಾಭ ಮಾಡುತ್ತಾರೆ, ಸಣ್ಣವರು ಕಣ್ಣೀರು ಸುರಿಸುತ್ತಾರೆ. ಇದು ಅಸಮಾನತೆಯ ರಾಜಕೀಯ! ಸರ್ಕಾರಗಳು “ಮೇಕ್ ಇನ್ ಇಂಡಿಯಾ” ಎಂದು ಕೂಗುತ್ತಿವೆ, ಆದರೆ ಸ್ಥಳೀಯ ವ್ಯಾಪಾರಿಗಳನ್ನು ನೆಲ ಕಚ್ಚುವಂತೆ ಮಾಡಲಾಗುತ್ತಿದೆ. ಅಂಬಾನಿ-ಅದಾನಿ ಕೂಟ ದೇಶದ ಆರ್ಥಿಕತೆಯನ್ನು ಹಿಡಿದಿಟ್ಟುಕೊಂಡಿದ್ದಾರೆ – ಇಂಧನ, ರಿಟೇಲ್ ಎಲ್ಲದರಲ್ಲೂ ಅವರೇ ರಾಜರು!
ಕಿರಾಣಿ ಅಂಗಡಿ ಉಸಿರಾಡುವುದಕ್ಕೂ ಕಷ್ಟ ಪಡುವ ಪರಿಸ್ಥಿತಿ ಇದೆ. ನಮ್ಮ ದೇಶದಲ್ಲಿ ಒಂದೇ ವರ್ಷದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಾಗಿಲು ಮುಚ್ಚಿವೆ. ಹೌದು, ದೇಶದಲ್ಲಿ ಇ-ಕಾಮರ್ಸ್ ಸಂಸ್ಕೃತಿ ವೃದ್ಧಿಯಾಗಿ ಜನತೆ ಆನ್‌ಲೈನ್ ಶಾಪಿಂಗ್ ಕಡೆ ಮುಖ ಮಾಡುತ್ತಿದ್ದು, ಇದರಿಂದ ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಳೆದೊಂದು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಕಿರಾಣಿ ಅಂಗಡಿಗಳಿಗೆ ಬೀಗ ಬಿದ್ದಿದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. 4 ಲಕ್ಷಕ್ಕೂ ಅಧಿಕ ವಿತರಕರ ಸಂಘಟನೆಯಾಗಿರುವ ‘ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆದಾರರ ಸಂಘಟನೆ’ ನಡೆಸಿದ ಈ ಅಧ್ಯಯನ ದೇಶದಲ್ಲಿ ಇ-ಕಾಮರ್ಸ್ ಉದ್ಯಮ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿಗೊಂಡ ಬಳಿಕ ನಡೆದ ಮೊದಲ ಸಮಗ್ರ ಅಧ್ಯಯನ ಎನ್ನಲಾಗಿದೆ. ಸೂಪರ್ ಮಾರ್ಕೆಟ್ ಬಂದಾಗ ನಿಧಾನವಾಗಿ ಬಿದ್ದ ಏಟಿನಿಂದ ಸುಧಾರಿಸಿಕೊಳ್ಳುತ್ತಿರುವಾಗಲೇ ಆನ್‌ಲೈನ್ ಮಾರುಕಟ್ಟೆಯ ಹೊಡೆತದಿಂದ ಕಿರಾಣಿ ಅಂಗಡಿಗಳು ಕೊನೆಯುಸಿರೆಳೆಯುವ ಹಂತ ತಲುಪಿದೆ.
ಅಧ್ಯಯನದ ಪ್ರಕಾರ, ಮಹಾನಗರಗಳಲ್ಲಿ ಮಾಸಿಕ ಸರಾಸರಿ 5.5 ಲಕ್ಷ ರೂಪಾಯಿ ವಹಿವಾಟು ನಡೆಸುವ 17 ಲಕ್ಷ ಅಂಗಡಿಗಳಿದ್ದು, ಇವುಗಳಲ್ಲಿ ಶೇ.45ರಷ್ಟು ಮುಚ್ಚಿವೆ. ಅತ್ತ ಮಾಸಿಕ ಸರಾಸರಿ 3.5 ಲಕ್ಷ ರೂ. ನಷ್ಟು ವ್ಯಾಪಾರ ನಡೆಸುವ 12 ಲಕ್ಷ ಅಂಗಡಿಗಳಿರುವ ಟೈರ್1 ನಗರಗಳಲ್ಲಿ ಶೇ.30 ಅಂಗಡಿಗಳು ಮುಚ್ಚಿದ್ದು, ಟೈರ್ 2 ನಗರಗಳಲ್ಲಿ ಶೇ.25 ಅಂಗಡಿಗಳು ಬಾಗಿಲು ಹಾಕಿವೆ. ದೇಶದಲ್ಲಿ ಒಟ್ಟು 1.3 ಕೋಟಿ ಕಿರಾಣಿ ಅಂಗಡಿಗಳಿವೆ. ಈ ಪೈಕಿ ಟೈರ್ 1 ಸಿಟಿಗಳು ಅಂದರೆ ದೊಡ್ಡ ನಗರಗಳು 12 ಲಕ್ಷ ಅಂಗಡಿಗಳನ್ನು ಹೊಂದಿದ್ದರೆ, ಟೈರ್ 2 ಮತ್ತು ಟೈರ್ 3 ನಗರಗಳು ಉಳಿದ 1 ಕೋಟಿಗಿಂತ ಹೆಚ್ಚಿನ ಕಿರಾಣಿ ಅಂಗಡಿಗಳನ್ನು ಹೊಂದಿವೆ.

ಈ ಎಲ್ಲಾ ದೊಡ್ಡ ದೊಡ್ಡ ನಗರಗಳಲ್ಲೂ ಆನ್‌ಲೈನ್ ಶಾಪಿಂಗ್ ಅನ್ನೋದು ಮಧ್ಯಮ ವರ್ಗದ ಕಿರಾಣಿ ಅಂಗಡಿಗಳಿಗೆ ಪೆಟ್ಟು ಕೊಡುತ್ತಿದೆ. ತಲೆಮಾರುಗಳಿಂದ ಭಾರತೀಯ ಸಮಾಜದಲ್ಲಿ ಅವಿಭಾಜ್ಯವಾಗಿರುವ ಕಿರಾಣಿ ಸ್ಟೋರ್‌ಗಳು ಈ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಹೆಣಗಾಡುತ್ತಿವೆ.
ಈ ಇ-ಪ್ಲಾಟ್‌ಫಾರ್ಮ್‌ಗಳು ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ-ಆಪ್ಟಿಮೈಸ್ಡ್ ಲಾಜಿಸ್ಟಿಕ್ಸ್ ನೆಟ್‌ವರ್ಕ್‌ಗಳ ಮೂಲಕ ಸರಕುಗಳನ್ನು ಹತ್ತರಿಂದ ಇಪ್ಪತ್ತು ನಿಮಿಷಗಳಲ್ಲಿ ಗ್ರಾಹಕರಿಗೆ ತಲುಪಿಸುತ್ತಿವೆ. ಈ ಅನುಕೂಲವು ಗ್ರಾಹಕರಿಗೆ ಅದರಲ್ಲೂ ಯುವ ಜನರಿಗೆ ಉತ್ತಮವೆನಿಸುತ್ತಿವೆ. ಜನರ ಖರೀದಿ ನಿರ್ಧಾರಗಳನ್ನು ಮಾಡುವಾಗ ದಕ್ಷತೆ ಮತ್ತು ವೇಗಕ್ಕೆ ಆದ್ಯತೆ ನೀಡುತ್ತಾರೆ ಎನ್ನಬಹುದು. ಕೊರೋನ ಸಾಂಕ್ರಾಮಿಕವು ಅಂತಹ ಸೇವೆಗಳ ಅಳವಡಿಕೆಯನ್ನು ಭಾರತದಲ್ಲಿ ಮತ್ತಷ್ಟು ವೇಗಗೊಳಿಸಿದೆ. ಈ ಕಿರಾಣಿ ಅಂಗಡಿಗಳ ಜಾಗವನ್ನು ಮಾಲ್‌ಗಳು, ಸೂಪರ್ ಮಾರ್ಟ್‌ಗಳು ಆನ್‌ಲೈನ್ ಆಪ್‌ಗಳು ಆವರಿಸಿಕೊಳ್ಳುತ್ತಿವೆ. ನಮ್ಮ ಊರಿನ ಶೆಟ್ರಂಗಡಿ, ನಮ್ಮ ಏರಿಯಾದಲ್ಲಿರೊ ಸೇಟು ಅಂಗಡಿ, ಪಕ್ಕದ ಬೀದಿಯ ರಂಗಣ್ಣನ ಅಂಗಡಿಗಳಂತ ಸಮಾರು 2 ಲಕ್ಷ ಕಿರಾಣಿ ಅಂಗಡಿಗಳು ಬಂದ್ ಆಗಿದೆ.
ಈ ಎರಡು ಲಕ್ಷ ಅನ್ನೋದು ಕೇವಲ ಸಂಖ್ಯೆಯಾಗಿ ಉಳಿದಿಲ್ಲ, ಬದಲಿಗೆ ಇದು ಲಕ್ಷಾಂತರ ಕುಟುಂಬಗಳ ಜೀವನದ ಕಥೆಯಾಗಿದೆ. ಬೆಳಗ್ಗೆ ಎದ್ದು ಅಂಗಡಿ ತೆರೆದು, ಸಾಯಂಕಾಲ ಮನೆಗೆ ಹೋಗುವ ಸಾಧಾರಣ ಜನರ ಕನಸುಗಳು ಒಡೆದುಹೋಗಿವೆ. ಯಾಕೆಂದರೆ? ಇದು ರಾಜಕೀಯದ ಆಟ, ದೊಡ್ಡ ದೊಡ್ಡ ಉದ್ಯಮಿಗಳ ತಂತ್ರ. ಅಂಬಾನಿ, ಅದಾನಿ ಮತ್ತು ಇನ್ನೂ ಹಲವು ಕಾರ್ಪೊರೇಟ್ ದೈತ್ಯರು ತಮ್ಮ ರಿಲಯನ್ಸ್ ರಿಟೇಲ್, ಡಿಎಂಆರ್‌ಟಿ, ಬಿಗ್ ಬಜಾರ್‌ಗಳಂತಹ ಸೂಪರ್ ಮಾರ್ಕೆಟ್‌ಗಳನ್ನು ದೇಶದ ಮೂಲೆಮೂಲೆಗೆ ಹರಡಿಸಿ, ಸಣ್ಣ ಕಿರಾಣಿ ಅಂಗಡಿಗಳನ್ನು ನುಂಗಿಹಾಕುತ್ತಿದ್ದಾರೆ. ಇದು ಸಮುದ್ರದಲ್ಲಿ ನಡೆಯುವ ದೊಡ್ಡ ತಿಮಿಂಗಿಲದ ಕಥೆಯಂತೆ – ಬಾಯಿ ತೆರೆದು ನಿಂತರೆ ಸಾಕು, ಸಣ್ಣ ಮೀನುಗಳು ತಾವಾಗೇ ಹೊಟ್ಟೆ ಸೇರಿಬಿಡುತ್ತವೆ!
ಊಹಿಸಿಕೊಳ್ಳಿ, ಸಮುದ್ರದ ಆಳದಲ್ಲಿ ಒಂದು ದೊಡ್ಡ ನೀಲಿ ತಿಮಿಂಗಿಲ. ಅದರ ಬಾಯಿ ಎಷ್ಟು ದೊಡ್ಡದು ಗೊತ್ತಾ? ಕನಿಷ್ಠ 10 ರಿಂದ 15 ಅಡಿ ಅಗಲ! ಅದು ಈಜುತ್ತಾ ಹೋಗುತ್ತಿದ್ದಂತೆ, ನೀರು ಸೇರಿದಂತೆ ಸಾವಿರಾರು ಸಣ್ಣ ಮೀನುಗಳು, ಸಣ್ಣ ಸಣ್ಣ ಜನಚರಗಳು ಜೀವಿಗಳು ಅದರ ಬಾಯಿಗೆ ಒಳಗೆ ಹೋಗಿಬಿಡುತ್ತವೆ. ತಿಮಿಂಗಿಲಕ್ಕೆ ಯಾವುದೇ ಶ್ರಮವಿಲ್ಲ – ಕೇವಲ ಬಾಯಿ ತೆರೆದು ನಿಂತರೆ ಸಾಕು. ಅದೇ ರೀತಿ ನಮ್ಮ ದೇಶದ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಅಂಬಾನಿ ಅವರ ಜಿಯೋ ಮಾರ್ಟ್, ಅದಾನಿ ಅವರ ವಿಲ್ಮಾರ್ ರಿಟೇಲ್‌ಗಳು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳನ್ನು ತೆರೆದು, ಎಲ್ಲವನ್ನೂ ಒಳಗೆ ಹೀರಿಕೊಳ್ಳುತ್ತಿವೆ. ಸಣ್ಣ ಕಿರಾಣಿ ಅಂಗಡಿಯವರು ಎಷ್ಟೇ ಪ್ರಯತ್ನ ಪಟ್ಟರೂ, ದರ ಕಡಿಮೆ ಮಾಡಲು, ಸ್ಟಾಕ್ ತುಂಬಿಸಲು ಸಾಧ್ಯವಿಲ್ಲ. ಯಾಕೆಂದರೆ ದೊಡ್ಡವರ ಬಳಿ ಹಣದ ರಾಶಿ ಇದೆ, ಸರಕು ಸಾಗಾಣಿಕೆಯ ಜಾಲ ಇದೆ, ಜಾಹೀರಾತಿನ ಬಲ ಇದೆ. ಒಟ್ಟಿನಲ್ಲಿ ದೊಡ್ಡ ದೊಡ್ಡ ಕುಳಗಳ ಬಳಿ ಎಲ್ಲವೂ ಇದೆ!

ಈಗ ಇದು ಕೇವಲ ವ್ಯಾಪಾರದ ಕಥೆಯಾಗಿ ಉಳಿದಿಲ್ಲ ಬದಲಿಗೆ ಇದೊಂದು ರಾಜಕೀಯದ ಒಳಹೊಕ್ಕು! ಸರ್ಕಾರಗಳು ದೊಡ್ಡ ಕಂಪನಿಗಳಿಗೆ FDI (ವಿದೇಶಿ ನೇರ ಹೂಡಿಕೆ) ಅನುಮತಿ ಕೊಟ್ಟು, ತೆರಿಗೆ ರಿಯಾಯಿತಿ ನೀಡಿ, ಭೂಮಿ ಕೊಟ್ಟು ಸಹಾಯ ಮಾಡುತ್ತಿವೆ.
“ಉದ್ಯೋಗ ಸೃಷ್ಟಿ” ಎಂದು ಹೇಳಿ ಸಾಮಾನು ಜನರನ್ನು ಮರಳು ಮಾಡುತ್ತಿದ್ದಾರೆ. ಆದರೆ ಸತ್ಯ ಏನು? ಒಂದು ಸೂಪರ್ ಮಾರ್ಕೆಟ್ ತೆರೆದರೆ 50 ರಿಂದ 100 ಉದ್ಯೋಗ ಬರುತ್ತದೆ, ಆದರೆ ಅದರ ಸುತ್ತಮುತ್ತಲಿನ 10 ರಿಂದ 20 ಕಿರಾಣಿ ಅಂಗಡಿಗಳು ಮುಚ್ಚಿದರೆ ಸಾವಿರಾರು ಜನರ ಉದ್ಯೋಗ ಹೋಗುತ್ತದೆ! ಇದು ದೊಡ್ಡ ಮೀನುಗಳ ಆಟ. ಅವರು ಬಾಯಿ ತೆರೆದು ನಿಂತರೆ ಸಾಕು – ಗ್ರಾಹಕರು ಈಸಿಯಾಗಿ ಡಿಸ್ಕೌಂಟ್‌ಗಳ ಆಮಿಷಕ್ಕೆ ಒಳಗಾಗಿ ಒಳಹೊಕ್ಕುಹೋಗ್ತಾರೆ.
ಸಣ್ಣ ಅಂಗಡಿಯಲ್ಲಿ “ಅಣ್ಣಾ, ಒಂದು ಕೆಜಿ ಸಕ್ಕರೆ ಕೊಡಿ” ಎಂದು ಕೇಳುವ ಗ್ರಾಹಕ, ಆನ್‌ಲೈನ್ ಆ್ಯಪ್‌ನಲ್ಲಿ ಆರ್ಡರ್ ಮಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುತ್ತಾರೆ. ತಿಮಿಂಗಿಲದ ಹೊಟ್ಟೆಯಂತೆ, ಈ ದೈತ್ಯ ಮಾರ್ಕೆಟ್‌ಗಳು ಎಲ್ಲವನ್ನೂ ನುಂಗುತ್ತಿವೆ! ಇದರ ಪರಿಣಾಮ ಏನು? ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿ ಎಂದರೆ ಕೇವಲ ವ್ಯಾಪಾರವಲ್ಲ, ಅದು ಸಮುದಾಯದ ಕೇಂದ್ರಭಾಗವಾಗಿದೆ. ಅಲ್ಲಿ ಸುದ್ದಿ, ಚಹಾ, ಸ್ನೇಹ ಎಲ್ಲವೂ ನಡೆಯುತ್ತದೆ. ಆದರೆ ಈಗ ಅದು ಮಾಯವಾಗುತ್ತಿದೆ. 2 ಲಕ್ಷ ಅಂಗಡಿಗಳು ಮುಚ್ಚಿದ್ದು ಎಂದರೆ, ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಂತೆ. ಮಕ್ಕಳ ಶಾಲಾ ಫೀಸ್, ಮನೆ ಬಾಡಿಗೆ, ಆಹಾರ – ಎಲ್ಲಕ್ಕೂ ಸಮಸ್ಯೆ.
ದೊಡ್ಡವರು ಲಾಭ ಮಾಡುತ್ತಾರೆ, ಸಣ್ಣವರು ಕಣ್ಣೀರು ಸುರಿಸುತ್ತಾರೆ. ಇದು ಅಸಮಾನತೆಯ ರಾಜಕೀಯ! ಸರ್ಕಾರಗಳು “ಮೇಕ್ ಇನ್ ಇಂಡಿಯಾ” ಎಂದು ಕೂಗುತ್ತವೆ, ಆದರೆ ಸ್ಥಳೀಯ ವ್ಯಾಪಾರಿಗಳನ್ನು ನೆಲ ಕಚ್ಚುವಂತೆ ಮಾಡಲಾಗುತ್ತಿದೆ. ಅಂಬಾನಿ-ಅದಾನಿ ಕೂಟ ದೇಶದ ಆರ್ಥಿಕತೆಯನ್ನು ಹಿಡಿದಿಟ್ಟುಕೊಂಡಿದೆ – ಪೆಟ್ರೋಲ್, ಗ್ಯಾಸ್, ರಿಟೇಲ್, ಎಲ್ಲದರಲ್ಲೂ ಅವರೇ ರಾಜರು!

ಆದರೆ ಇದಕ್ಕೆ ಪರಿಹಾರವಿದೆಯೇ? ಹೌದು! ಸಣ್ಣ ಮೀನುಗಳು ಒಟ್ಟಾಗಿ ದೊಡ್ಡ ಶಕ್ತಿಯಾಗಬಲ್ಲವು. ಸ್ಥಳೀಯ ಅಂಗಡಿಗಳು ಒಕ್ಕೂಟ ಮಾಡಿ, ಆನ್‌ಲೈನ್ ಮಾರಾಟ ಶುರು ಮಾಡಿ, ಗ್ರಾಹಕರೊಂದಿಗೆ ನೇರ ಸಂಪರ್ಕ ಬೆಳೆಸಬೇಕು. ಸರ್ಕಾರ ಸಣ್ಣ ವ್ಯಾಪಾರಿಗಳಿಗೆ ಸಾಲ, ತರಬೇತಿ, ತೆರಿಗೆ ವಿನಾಯಿತಿ ಕೊಡಬೇಕು. ನಾವು ಗ್ರಾಹಕರು ಸ್ಥಳೀಯ ಅಂಗಡಿಗಳನ್ನು ಬೆಂಬಲಿಸೋಣ – “ವೋಕಲ್ ಫಾರ್ ಲೋಕಲ್” ಎಂದು ಹೇಳುವುದು ಕೇವಲ ಮಾತಿನಲ್ಲಿ ಮಾತ್ರವನ್ನ ನಮ್ಮ ಕ್ರಿಯೆಯಲ್ಲೂ ತೋರಿಸಬೇಕು. ತಿಮಿಂಗಿಲದ ಬಾಯಿಗೆ ಬೀಳದೇ, ಸಣ್ಣ ಮೀನುಗಳು ಒಟ್ಟಾಗಿ ಸಮುದ್ರವನ್ನೇ ಆಳಬಹುದು. ಇದು ಮಧ್ಯಮ ಹಾಗೂ ಬಡವರಿಗೆ ಒಂದು ಎಚ್ಚರಿಕೆಯ ಗಂಟೆ– ದೊಡ್ಡವರ ಆಟದಲ್ಲಿ ಸಣ್ಣವರು ಮಾಯವಾಗಬಾರದು. ಕಿರಾಣಿ ಅಂಗಡಿ ಮತ್ತೆ ಬೆಳಗಲಿ, ಸಣ್ಣ ಮೀನುಗಳು ಸ್ವತಂತ್ರವಾಗಿ ಈಜಲಿ.





