ಹೊಸ ನಿರ್ದೇಶಕರ ಮತ್ತು ಹೊಸ ಕಲಾವಿದರ ಅನೇಕ ಸಿನಿಮಾಗಳು ಈ ವರ್ಷ ಬಿಡುಗಡೆಯಾದವು. ಆದರೆ ಸಿನಿಮಾದೊಳಗಿನ ಕಂಟೆಂಟ್ ವಿಚಾರಕ್ಕೋ, ಅದರ ಮೇಕಿಂಗ್ ವಿಚಾರಕ್ಕೋ ಅಥವಾ ಪ್ರಮೋಷನ್ ವಿಚಾರದಲ್ಲಿಯೋ ಹಿಂದೆ ಬಿದ್ದಿದ್ದಾರೆ ಎಂದೇ ಹೇಳಬಹುದು.
2024ರ ಕೊನೆಯ ಭಾಗದಲ್ಲಿ ತೆರೆ ಕಂಡ ಉಪೇಂದ್ರ ನಟನೆಯ “ಯುಐ” ಮತ್ತು ಸುದೀಪ್ ನಟನೆಯ “ಮ್ಯಾಕ್ಸ್” ಚಿತ್ರ 2025ರ ಚಂದನವನವನ್ನು ಅರಳಿಸಿದವು. ಇವೆರಡು ಚಿತ್ರಗಳು ಆರಂಭ ಪಡೆದವೇ ವಿನಃ, ಧೀರ್ಘಕಾಲೀನ ಯಶಸ್ಸು ಕಾಣಲಿಲ್ಲ. ಆದರೆ ಈ ವರ್ಷದ 2025ರ ಆರಂಭದಿಂದ ಮೊದಲ ಆರು ತಿಂಗಳು ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದವು.
ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಯಶಸ್ಸು ಕಾಣದಿರುವಾಗ ಮತ್ತು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರದೆ ಇರುವಾಗ ಪ್ರೇಕ್ಷಕ ಪ್ರಭುಗಳು ಬೇಸರದಿಂದಲೇ ಇದ್ದರು. ಮೊದಲು ಆರು ತಿಂಗಳ ನಂತರ ಸ್ಟಾರ್ ನಟರ ಸಿನಿಮಾಗಳು ಸಾಲುಗಟ್ಟಿ ನಿಂತವು. ಭಾರತದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯಾ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್-1 ಬಿಡುಗಡೆಯಾಗಿ ಎರಡನೇ ಸ್ಥಾನ ಪಡೆಯಿತು. ಆದಾದ ನಂತರ ಒಂದರ ಮೇಲೆ ಒಂದರಂತೆ ಸಿನಿಮಾಗಳು ಬಿಡುಗಡೆಯಾದವು. ಆದರೆ ಚಿತ್ರಮಂದಿರಕ್ಕೆ ಜನರನ್ನು ಬರುವಂತೆ ಸೆಳೆದಿದ್ದು “ಸು ಫ್ರಂ ಸೋ” ತರದ ಬೆರಳೆಣಿಕೆಯ ಚಿತ್ರಗಳು.
ಇದನ್ನೂ ಓದಿ : 2025 ಹಿನ್ನೋಟ | ಸಾಹಿತ್ಯ, ಉದ್ಯಮ, ಸಿನಿಮಾ ಬಾಹ್ಯಾಕಾಶ, ಕ್ರೀಡೆ… ಸಾಧನೆ ತೋರಿದ ಭಾರತೀಯ ನಾರಿಯರು
ನಾವೀಗ ವರ್ಷದ ಕೊನೆಯಲ್ಲಿದ್ದೇವೆ. ಹೊಸ ವರ್ಷ ಆರಂಭವಾಗುವ ಮೊದಲೇ ಕನ್ನಡ ಚಿತ್ರರಂಗ ಈ ವರ್ಷದಲ್ಲಿ ಸಾಧಿಸಿದ ಮತ್ತು ಕಳೆದುಕೊಂಡ ಘಟನೆಗಳನ್ನು ಮೆಲುಕು ಹಾಕಬೇಕು. ಈ ವರ್ಷದಲ್ಲಿ ಒಟ್ಟು 226 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ತೆರೆಕಂಡ ಪೈಕಿ ಸದ್ದು ಮತ್ತು ದುಡ್ಡು ಮಾಡಿದ್ದು ಬೆರಳೆಣಿಕೆಯಷ್ಟು ಚಿತ್ರಗಳು. ಮೊದಲ ನಾಲ್ಕು ತಿಂಗಳಿನಲ್ಲೇ ಸುಮಾರು 90 ಸಿನಿಮಾಗಳು ಬಿಡುಗಡೆಯಾದವು. ಒಂದೇ ದಿನ 11 ಕನ್ನಡ ಸಿನಿಮಾಗಳು ತೆರೆಕಂಡಿದ್ದು ಇದೆ. ಇದೇನೂ ಆಶ್ಚರ್ಯವಲ್ಲ.
ಹೊಸ ನಿರ್ದೇಶಕರ ಮತ್ತು ಹೊಸ ಕಲಾವಿದರ ಅನೇಕ ಸಿನಿಮಾಗಳು ಈ ವರ್ಷ ಬಿಡುಗಡೆಯಾದವು. ಆದರೆ ಸಿನಿಮಾದೊಳಗಿನ ಕಂಟೆಂಟ್ ವಿಚಾರಕ್ಕೋ ಅಥವಾ ಅದರ ಮೇಕಿಂಗ್ ವಿಚಾರಕ್ಕೋ ಅಥವಾ ಪ್ರಮೋಷನ್ ವಿಚಾರದಲ್ಲಿಯೋ ಹಿಂದೆ ಬಿದ್ದಿದ್ದಾರೆ ಎಂದು ಭಾವಿಸಬಹುದು.
ಈ ಹಿಂದೆ ಹೆಸರು ಮಾಡಿದ್ದ ಅನೇಕ ನಟರ ಸಿನಿಮಾಗಳು ಸಹ ಹೆಚ್ಚು ಪ್ರಚಾರದ ನಡುವೆಯೂ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದವು. ಅದರಲ್ಲಿ ಶರಣ್ ನಟನೆಯ ‘ಛೂ ಮಂತರ್’ ಹಾಗೂ ಅಜಯ್ ರಾವ್ ನಿರ್ದೇಶಿಸಿ ನಟಿಸಿದ್ದ ‘ಯುದ್ಧಕಾಂಡ’ ಮತ್ತು ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಗಳಿಕೆಯಲ್ಲಿ ಸದ್ದು ಮಾಡಲಿಲ್ಲ. ಇವೆಲ್ಲದರ ನಡುವೆ ವಿಭಿನ್ನ ಶೈಲಿಯಲ್ಲಿ ಮೂಡಿಬಂದ ‘ಫೈರ್ ಫ್ಲೈ’ ಸಿನಿಮಾ ಸ್ವಲ್ಪ ಆರ್ಕಷಿಸಿತು. ಇವೆಲ್ಲವೂ ಸಹ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಗೊಂಡವು.

ಜೂನ್ ತಿಂಗಳಿನಿಂದ ಅನೇಕ ಸಿನಿಮಾಗಳು ಬಿಡುಗಡೆಯಾದವು. ವಿನೋದ್ ಪ್ರಭಾಕರ್ ನಟನೆಯ ‘ಮಾದೇವ’ ಚಿತ್ರ ಒಳ್ಳೆಯ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸುವ ದ್ವಿತಿಯಾರ್ಧವನ್ನು ಆರಂಭಿಸಿತು. ‘ಬ್ಯಾಂಗಲ್ ಬಂಗಾರಿ’ ಎಂಬ ಹಾಡಿನ ಮೂಲಕ ಎಲ್ಲರ ಮನಸ್ಸನ್ನು ಗೆದ್ದು, ಎಲ್ಲರೂ ರೀಲ್ಸ್ ಮಾಡುವ ಮಟ್ಟಕ್ಕೆ ಸದ್ದು ಮಾಡಿದ ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಜನರನ್ನು ಚಿತ್ರಮಂದಿರಕ್ಕೆ ಸೆಳೆಯಿತು. ಆದರೆ ದೀರ್ಘಕಾಲೀನ ಯಶಸ್ಸು ಕಾಣಲಿಲ್ಲ.
ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆಸಿದ ಚಿತ್ರ
ಇದೇ ಜುಲೈ 25 ರಂದು ತೆರೆಕಂಡ ಹೊಸ ನಿರ್ದೇಶಕ ಜೆ.ಪಿ.ತೂಮಿನಾಡು ಅವರ ನಟನೆ ಮತ್ತು ನಿರ್ದೇಶನದ ಚೊಚ್ಚಲ ಚಿತ್ರ ಇಡೀ ಚಿತ್ರರಂಗಕ್ಕೆ ಹೊಸ ಹುರುಪು ಕೊಟ್ಟಿತು. ಭಾರತೀಯ ಚಿತ್ರರಂಗವೇ ಚಂದನವನದ ಕಡೆ ತಿರುಗಿ ನೋಡುವಂತೆ ಮಾಡಿತು. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ಇಡೀ ಸಿನಿಮಾ ಕರಾವಳಿ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಅದೇ ಭಾಗದ ಭಾಷೆ ಮತ್ತು ಅಲ್ಲಿನ ಪರಿಸರದಲ್ಲಿಯೇ ಚಿತ್ರೀಕರಿಸಲಾಗಿತ್ತು. ಮೌಢ್ಯವನ್ನು ತೊಲಗಿಸುವ ಬಗ್ಗೆ ಹಾಸ್ಯದ ಮೂಲಕ ಹೀಗೂ ಹೇಳಬಹುದು ಎಂಬ ವಿಭಿನ್ನ ಸಂದೇಶವನ್ನು ನೀಡಿದ ಸಿನಿಮಾ, ಈ ವರ್ಷದ ಚಿತ್ರರಂಗದ ಗೆಲುವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಕೇವಲ 5 ಕೋಟಿ ಬಜೆಟ್ ನಲ್ಲಿ ಚಿತ್ರೀಕರಣ ಮಾಡಿ, ಸುಮಾರು ರೂ. 125 ಕೋಟಿಯಷ್ಟು ಗಳಿಕೆ ಮಾಡಿತು.

ಈ ಚಿತ್ರಕ್ಕೆ ಜೆ.ಪಿ.ತೂಮಿನಾಡು ನಿರ್ದೇಶನ, ರಾಜ್ ಬಿ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ ನಿರ್ಮಾಣ ಮಾಡಿದ್ದರು. ಯಾವುದೇ ಸೆಲೆಬ್ರಿಟಿ ಶೋಗಳನ್ನು ನಡೆಸದೆ, 38 ಪೇಯ್ಡ್ ಪ್ರೀಮಿಯರ್ ಆಯೋಜಿಸಿ ಜನರ ಮಾತುಗಳಿಗೆ ವೇದಿಕೆ ಕಲ್ಪಿಸಿತ್ತು. ಸ್ಟಾರ್ ನಟರು ಇದ್ದರೆ ಮಾತ್ರ ಚಿತ್ರರಂಗಕ್ಕೆ ಜನ ಬರುತ್ತಾರೆ ಎಂಬ ಪೂರ್ವಗ್ರಹವನ್ನು ಹೊಡೆದು ಹಾಕಿತು. ಅದ್ಧೂರಿಯಾಗಿಸದೆ, ಹೆಚ್ಚಿನ ಸೆಟ್ ಬಳಸದೆ, ಮನರಂಜನೆಗೆ ಒತ್ತು ಕೊಟ್ಟು ಪ್ರೇಕ್ಷಕರನ್ನು ಸೆಳೆಯುವಲ್ಲಿ ಹೊಸ ದಾಖಲೆ ಬರೆಯಿತು.
ಸ್ಟಾರ್ ನಟರ ಸಿನಿಮಾಗಳು ವರ್ಷದ ಕೊನೆಯಲ್ಲಿ ವಾಡಿಕೆಯಂತೆ ಬಿಡುಗಡೆಗೆ ಸಿದ್ದಗೊಂಡಿದ್ದವು. ಕಾಟೇರ ಸಿನಿಮಾದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ನಿರ್ಮಾಣದ, ಯುವ ನಿರ್ದೇಶಕ ಪುನೀತ್ ರಂಗಸ್ವಾಮಿಯ ‘ಏಳುಮಲೆ’ ಚಿತ್ರ ಭಾವನಾತ್ಮಕವಾಗಿ ಜನರನ್ನು ಕಟ್ಟಿಹಾಕಿತು. ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿತು. ಸಿನಿಮಾದಲ್ಲಿನ ಥ್ರಿಲರ್ ಮತ್ತು ಪ್ರೇಮ ಕಥೆ ಜನರ ಮೆಚ್ಚುಗೆ ಗಳಿಸಿತು. ಸಿನಿಮಾ ನೋಡಿದ ಬಹುತೇಕ ಮಂದಿ ಭಾವನಾತ್ಮಕವಾಗಿಯೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಿನಯ್ ರಾಜ್‌ಕುಮಾರ್ ನಟನೆಯ ‘ಅಂದೊಂದಿತ್ತು ಕಾಲ’ ಬಹುತೇಕರ ಗಮನಸೆಳೆಯಿತು.
ದಾಖಲೆ ನಿರ್ಮಿಸಿದ ಚಿತ್ರ
ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಿತ್ರ 2023ರಲ್ಲಿ ಬಿಡುಗಡೆಗೊಂಡಿತ್ತು. ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದ್ದ ರಿಷಭ್ ಶೆಟ್ಟಿ ಅವರನ್ನು ಇಡೀ ವಿಶ್ವಕ್ಕೆ ಪರಿಚಯಿಸಿತು. ಕಾಂತಾರ ಬರುವ ಮೊದಲೇ ರಿಷಭ್ ನಿರ್ದೇಶನ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯಪ್ರಶಸ್ತಿಗಳನ್ನು ತಂದುಕೊಟ್ಟಿದ್ದವು. ಆದರೆ ಅವರ ನಟನೆ ಮತ್ತು ನಿರ್ದೇಶನ ಮಾಡಿದ ಚಿತ್ರ ‘ಕಾಂತಾರ-ಒಂದು ದಂತಕಥೆ’, ಕೇವಲ ಭಾರತ ಮಾತ್ರವಲ್ಲದೆ, ಇಡೀ ವಿಶ್ವವೇ ಚಂದನವನದ ಕಡೆ ತಿರುಗಿ ನೋಡುವಂತೆ ಮಾಡಿತು. ಅನೇಕ ಭಾಷೆಗಳಿಗೆ ಡಬ್ ಆಗಿ ಯಶಸ್ಸು ಕಂಡಿತ್ತು. ಆ ಯಶಸ್ಸು ರಿಷಭ್ ಶೆಟ್ಟಿಗೆ ‘ಕಾಂತಾರ ಚಾಪ್ಟರ್-1’ ಸಿನಿಮಾ ಮಾಡಲು ಪ್ರೇರೇಪಿಸಿತು.

ಅದೇ ರೀತಿ ‘ಕಾಂತಾರ-ಚಾಪ್ಟರ್ 1’ ಇದೇ ಅಕ್ಟೋಬರ್ ನಲ್ಲಿ ತೆರೆಕಂಡು ಯಶಸ್ಸು ಕಂಡಿತು. ರಾಜ್ಯದ ಬಹುತೇಕ ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿತು. ಸು ಫ್ರಂ ಸೋ ನಂತರ ಜನ ಸ್ವಯಂ ಪ್ರೇರಿತವಾಗಿ ಚಿತ್ರಮಂದಿರಕ್ಕೆ ಬಂದಿದ್ದು ಕಾಂತಾರಕ್ಕಾಗಿ. ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವದಾದ್ಯಂತ ₹509.25 ಕೋಟಿ ಗಳಿಸಿತು. ಈ ಸಿನಿಮಾ ಒಟ್ಟಾರೆಯಾಗಿ ₹818 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆಯ ಮಟ್ಟವನ್ನು ಮುಟ್ಟಿತು. ಕರ್ನಾಟಕವೊಂದರಲ್ಲೇ ಗಳಿಕೆ ₹250 ಕೋಟಿ ದಾಟಿತು. ರಾಜ್ಯದಲ್ಲಿ ಇಷ್ಟು ಹಣ ಗಳಿಸುವ ಮೊದಲ ಕನ್ನಡ ಚಲನಚಿತ್ರ ಎಂಬ ದಾಖಲೆ ಕಾಂತಾರ-ಚಾಪ್ಟರ್ 1 ಸಿನಿಮಾದ ಪಾಲಾಯಿತು.
ಡಿಸೆಂಬರ್ ನಲ್ಲಿ ಪ್ರೇಕ್ಷಕರನ್ನು ಸೆಳೆಯದ ಸ್ಟಾರ್ ಗಳು
ಡಿಸೆಂಬರ್ ತಿಂಗಳಿನಲ್ಲಿ ಅನೇಕ ಸ್ಟಾರ್ ಗಳ ಸಿನಿಮಾಗಳ ಚಿತ್ರ ತೆರೆಕಂಡರು, ಯಶಸ್ಸು ಗಳಿಸುವಲ್ಲಿ ಸೋತವು. ಡಿ.11 ರಂದು ದರ್ಶನ್ ನಟನೆಯ, ಪ್ರಕಾಶ್ ವೀರ್ ನಿರ್ದೇಶನದ ‘ಡೆವಿಲ್’ ಮೊದಲ ದಿನ ಚಿತ್ರಮಂದಿರಗಳನ್ನು ತುಂಬಿಸಿತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ದರ್ಶನ್ ಜೈಲಿನಲ್ಲಿ ಇರುವಾಗಲೇ ಈ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮೀ ನೇತೃತ್ವದಲ್ಲಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದರು. ದ್ವಿಪಾತ್ರದಲ್ಲಿ ಕಾಣಿಸಿಕೊಂಡ ದರ್ಶನ್ ನಟನೆಯ ಡೆವಿಲ್ ಚಿತ್ರ, ಸುಮಾರು ₹13 ಕೋಟಿಯಷ್ಟು ಹಣವನ್ನು ಗಳಿಸಿತು.

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೂವರೂ ನಟಿಸಿರುವ ‘45’ ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ಪ್ರಚಾರ ನಡೆಸಿತು. ಈ ಸಿನಿಮಾವನ್ನು ಸಂಗೀತ ನಿರ್ದೇಶಕ ‘ಅರ್ಜುನ್ ಜನ್ಯ’ ನಿರ್ದೇಶಿಸಿದ್ದರು. ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ ‘45’ ಸಿನಿಮಾದ ಭವಿಷ್ಯವು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಗರುಡ ಪುರಾಣದ ಕಥೆಯನ್ನು ಇಟ್ಟುಕೊಂಡು ವಿಭಿನ್ನ ರೀತಿಯಲ್ಲಿ ಅರ್ಜುನ್ ಜನ್ಯ ನಿರ್ದೇಶಿಸಿದ್ದರು.

ಕಾಕತಾಳೀಯವೆಂಬಂತೆ ಕಳೆದ ವರ್ಷ ಸುದೀಪ್ ನಟನೆ ‘ಮ್ಯಾಕ್ಸ್’ ಚಿತ್ರ ಬಿಡುಗಡೆಗೊಂಡ ದಿನವೇ (ಡಿ.25), ಈ ವರ್ಷ ‘ಮಾರ್ಕ್’ ಸಿನಿಮಾ ಬಿಡುಗಡೆಗೊಂಡಿತು. ವಿಶೇಷವೆಂದರೆ, ಮ್ಯಾಕ್ಸ್ ಮತ್ತು 45 ಎರಡೂ ಸಿನಿಮಾಗಳು ಒಂದೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟವು.
ಯಶ್, ರಕ್ಷಿತ್ ಶೆಟ್ಟಿ, ಗಣೇಶ್, ಧ್ರುವ್ ಸರ್ಜಾ, ಶ್ರೀ ಮುರಳಿ, ದುನಿಯಾ ವಿಜಯ್, ಡಾಲಿ ಧನಂಜಯ್ ಈ ವರ್ಷ ತೆರೆಯಿಂದ ದೂರ ಉಳಿದಿದ್ದರು. ಆದರೆ ಇವರ ಸಿನಿಮಾಗಳಿಗಾಗಿ ಪ್ರೇಕ್ಷಕರು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.
ನೈಜತೆಯ ಸಿನಿಮಾಗಳು
ಆಯುಷ್ ಮಲ್ಲಿ ನಿರ್ದೇಶನದ ‘ಪಪ್ಪಿ’ ಸಿನಿಮಾ ಹಳ್ಳಿಯಿಂದ ಬೆಂಗಳೂರಿಗೆ ಬರುವ ಉತ್ತರ ಕರ್ನಾಟಕ ವಲಸೆ ಕಾರ್ಮಿಕರ ಬದುಕನ್ನು ಒಬ್ಬ ಹುಡುಗ ಮತ್ತು ಒಂದು ನಾಯಿ ಮರಿ ಇಟ್ಟುಕೊಂಡು ನೈಜವಾಗಿ ಚಿತ್ರೀಕರಿಸಲಾಗಿತ್ತು. ಇದು ಬದುಕಿನ ಕಥೆಯನ್ನು ಮನರಂಜನಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ತೆರೆ ಮೇಲೆ ತಂದಿತ್ತು.

ಅದೇ ರೀತಿ ಕರ್ಮಷಿಯಲ್ ಅಲ್ಲದಿದ್ದರೂ, ನೈಜ್ಯತೆಯ ನಿಜ ರೂಪದಂತೆ ಭೀಮರಾವ್ ಪಿ. ನಿರ್ದೇಶನದ ‘ಹೆಬ್ಬುಲಿ ಕಟ್’ ಸಿನಿಮಾ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆ, ಜಾತಿ ತಾರತಮ್ಯ, ದಬ್ಬಾಳಿಕೆ ಘಟನೆಗಳನ್ನು ಪ್ರೇಕ್ಷಕರಿಗೆ ಮನಮುಟ್ಟವಂತೆ ಚಿತ್ರೀಕರಿಸಲಾಗಿತ್ತು.
ಪ್ರಯೋಗಮುಖಿಯಾಗಿ ಗಮನ ಸೆಳೆದವರು
ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಚೊಚ್ಚಲ ಚಿತ್ರ ‘ವೀರ ಚಂದ್ರಹಾಸ’ ವಿಭಿನ್ನ ಪ್ರಯೋಗವಾಗಿ ಜನರ ಮುಂದೆ ಬಂದಿತು. ಯಕ್ಷಗಾನದ ಮೂಲಕ ಇಡೀ ಚಿತ್ರವನ್ನು ಕಟ್ಟಿಕೊಡುವಲ್ಲಿ ರವಿ ಬಸ್ರೂರ್ ಯಶಸ್ಸು ಕಂಡಿದ್ದರು. ಚಿತ್ರದ ವಿಶೇಷ ಗುರುತೆಂದರೆ, ಶಿವರಾಜ್‌ಕುಮಾರ್ ಸಹ ಯಕ್ಷಗಾನದ ವೇಷ ಧರಿಸಿ ನಟಿಸಿ ಸಿನಿಮಾಕ್ಕೆ ಸಾಥ್ ಕೊಟ್ಟಿದ್ದರು. ಈ ಪ್ರಯತ್ನಕ್ಕೆ ಇಡೀ ಚಿತ್ರರಂಗವೇ ಮೆಚ್ಚುಗೆಯನ್ನು ವ್ಯಕ್ತಪಡಿಸಿತ್ತು.

ಅದೇ ರೀತಿ ಗಮನ ಸೆಳೆದ ಸಿನಿಮಾಗಳಲ್ಲಿ ಕೇಶವ ಮೂರ್ತಿ ನಿರ್ದೇಶನದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ನಿರ್ದೇಶನದ ‘ಭಾವ ತೀರ ಯಾನ’, ಸಾಗರ್ ಕುಮಾರ್ ನಿರ್ದೇಶನದ ‘ಅನಾಮಧೇಯ ಅಶೋಕ್ ಕುಮಾರ್’, ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ‘ಅಪಾಯವಿದೆ ಎಚ್ಚರಿಕೆ, ಹಯವದನ ನಿರ್ದೇಶನದ ‘ಎಲ್ಲೋ ಜೋಗಪ್ಪ ನಿನ್ನರಮನೆ’, ಕುಲದೀಪ್ ಕಾರಿಯಪ್ಪ ನಿರ್ದೇಶನದ ‘ನೋಡಿದವರು ಏನಂತಾರೆ’. ಇವೆಲ್ಲ ಚಿತ್ರಗಳು ಪ್ರೇಕ್ಷಕರ ಗಮನವನ್ನು ಸೆಳೆದವು.
2026ರ ನಿರೀಕ್ಷೆಯ ಸಿನಿಮಾಗಳು
ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಹೊಸ ವರ್ಷದ ಆರಂಭದಲ್ಲಿಯೇ ತೆರೆಕಾಣಲಿದೆ. ಇದೇ ಜನವರಿ 23ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಈಗಾಗಲೇ ಪ್ರಚಾರದಲ್ಲಿ ತೊಡಗಿದೆ. ಕಳೆದ ಮೂರು ವರ್ಷದಿಂದ ಬಹು ನಿರೀಕ್ಷೆ ಇಟ್ಟಿರುವ ಚಿತ್ರವೆಂದರೆ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’. ಈ ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ದಿನಾಂಕವನ್ನು ತಿಳಿಸಿದೆ.

ಇನ್ನು ಧ್ರುವ ಸರ್ಜಾ ನಟನೆ ಮತ್ತು ಜೋಗಿ ಪ್ರೇಮ್ ನಿರ್ದೇಶನದ ‘KD’, ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’, ಸುದೀಪ್ ನಟನೆಯ ‘ಬಿಲ್ಲರಂಗ ಬಾಷಾ’ ಮತ್ತು ಸಪ್ತಸಾಗರದಾಚೆಯೆಲ್ಲೋ ಖ್ಯಾತಿಯ ನಿರ್ದೇಶಕ ಹೇಮಂತ್ ಎಂ.ರಾವ್ ನಿರ್ದೇಶನ ಮತ್ತು ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ನಟನೆಯ ‘666 ಆಪರೇಷನ್ ಡ್ರೀಮ್ ಥಿಯೇಟರ್’, ಡಾರ್ಲಿಂಗ್ ಕೃಷ್ಣ ನಟನೆ ಮತ್ತು ನಿರ್ದೇಶನದ ‘ಲವ್ ಮಾಕ್ ಟೈಲ್’ ಸಿನಿಮಾಗಳು ಸಾಕಷ್ಟು ಕುತೂಹಲವನ್ನು ಹುಟ್ಟಿಸಿವೆ.





