ಮಚಾಡೊ ತನ್ನ ಸಂಪೂರ್ಣ ರಾಜಕೀಯ ಜೀವನವನ್ನು ವೆನೆಜುವೆಲಾದಲ್ಲಿ ವಿಭಜನೆಯನ್ನು ಉತ್ತೇಜಿಸಲು, ವೆನೆಜುವೆಲಾದ ಸಾರ್ವಭೌಮತ್ವವನ್ನು ನಾಶಗೊಳಿಸಲು ಹಾಗೂ ಅಲ್ಲಿನ ಜನರ ಘನತೆಯಿಂದ ಬದುಕುವ ಹಕ್ಕನ್ನು ಕಸಿದುಕೊಳ್ಳುವುದಕ್ಕಾಗಿ ವ್ಯಯಿಸಿದ್ದಾರೆ.
2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ವಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ ನೀಡುವುದಾಗಿ ನಾರ್ವೇಯಿಯನ್ ನೊಬೆಲ್ ಕಮಿಟಿ ಘೋಷಿಸಿದೆ. “ವೆನೆಜುವೆಲಾದ ಜನರಿಗಾಗಿ ಮತ್ತು ಜನತಾಂತ್ರಿಕ ಹಕ್ಕುಗಳಿಗಾಗಿ ಅವರ ಶಾಂತಿಯುತ ಹೋರಾಟ ಮತ್ತು ಪ್ರಯತ್ನಗಳ ಕಾರಣಕ್ಕಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ” ಎಂದು ಕಮಿಟಿಯ ಅಧ್ಯಕ್ಷ ಜಾರ್ಗನ್ ವ್ಯಾಟ್ನೆ ಫ್ರೈಡ್ನೆಸ್ ಹೇಳಿದ್ದಾರೆ.
ಆದಾಗ್ಯೂ, ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ದರ ಕುರಿತು ಟೀಕೆ, ವಿಮರ್ಶೆಗಳು ವ್ಯಕ್ತವಾಗುತ್ತಿವೆ. ಆಕೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ರಾಜಕೀಯ ಹುನ್ನಾರದ ಭಾಗವೆಂದು ಬಣ್ಣಿಸಲಾಗುತ್ತಿದೆ.
ಮ್ಯಾಕಡೊ ಅವರು 2000ದ ದಶಕದಲ್ಲಿ ರಾಜಕೀಯಕ್ಕೆ ಬಂದವರು. ಆರಂಭದಲ್ಲಿ ಸೂಮ್ಯಾಟೆ ಎಂಬ ಸಂಸ್ಥೆ ಸ್ಥಾಪಿಸಿ ಚುನಾವಣಾ ಪಾರದರ್ಶಕತೆಗಾಗಿ ಹೋರಾಟದ ಮುಖವಾಡ ಧರಿಸಿದ್ದವರು. ವೆನೆಜುವೆಲಾದ ಮಾಜಿ ಅಧ್ಯಕ್ಷ ದಿ. ಹ್ಯೂಗೋ ಚಾವೆಜ್ ಮತ್ತು ಹಾಲಿ ಅಧ್ಯಕ್ಷ ನಿಕೋಲಾಸ್ ಮಾಡುರೊ ಅವರ ಸೋಷಲಿಸ್ಟ್ ಆಡಳಿತದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವವರು. ಸರ್ಕಾರಗಳ ಉರುಳುವಿಕೆಗೂ ಕಾರಣರಾದವರು.
ಶಾಂತಿಯುತ ಹೋರಾಟದ ಬಣ್ಣ ಹಚ್ಚಿರುವ ಅವರು, ರಾಜಕೀಯದಲ್ಲಿ ಭಾರೀ ಅಸಹನೆ, ದ್ವೇಷ ಹೊಂದಿರುವ ರಾಜಕಾರಣಿ. ವೆನೆಜುವೆಲಾ-ಅಮೆರಿಕ ಸಂಬಂಧಗಳ ವಿಚಾರದಲ್ಲಿ ಮಚಾಡೊ ಅವರ ಧೋರಣೆಗಳು ಅವರ ತಂತ್ರ-ಕುತಂತ್ರಗಳು ಎದ್ದುಕಾಣುತ್ತವೆ. ಆಕೆಯ ರಾಜಕೀಯವನ್ನು ಅರ್ಥ ಮಾಡಿಕೊಂಡಿರುವವರು, “ಆಕೆ ಅಮೆರಿಕನ್ ಆಡಳಿತದ ನಗುತ್ತಿರುವ ಮುಖ, ಪ್ರಜಾಪ್ರಭುತ್ವದ ವೇಷ ಧರಿಸಿ ನಿರ್ಬಂಧಗಳು, ಖಾಸಗೀಕರಣ ಹಾಗೂ ವಿದೇಶಿ ಹಸ್ತಕ್ಷೇಪವನ್ನು ಗಹನವಾಗಿ ಬೆಂಬಲಿಸುವ, ಪ್ರಚೋದಿಸುವ ವಕ್ತಾರೆ” ಎನ್ನುತ್ತಾರೆ.
ಈ ಆರೋಪಕ್ಕೆ ಹತ್ತಾರು ಕಾರಣಗಳಿವೆ. ಮಚಾಡೊ ಅವರ ರಾಜಕೀಯವು ಹಿಂಸೆಯಿಂದ ಕೂಡಿದೆ. ಅವರು ವೆನೆಜುವೆಲಾ ಆಡಳಿತದಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಕರೆ ನೀಡಿದ್ದಾರೆ, ಗಾಜಾ ಮೇಲೆ ವಿನಾಶಕಾರಿ ಕ್ರೌರ್ಯ ಮೆರೆಯುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬೆಂಬಲಿಸಿದ್ದಾರೆ, ‘ಸ್ವಾತಂತ್ರ್ಯ’ ಎಂಬ ಬ್ಯಾನರ್ ಅಡಿಯಲ್ಲಿ ವೆನೆಜುವೆಲಾವನ್ನು ಸ್ವತಂತ್ರಗೊಳಿಸಲು ಬಾಂಬ್‌ಗಳೊಂದಿಗೆ ಸಹಾಯ ಮಾಡುವಂತೆ ಇಸ್ರೇಲ್‌ಅನ್ನು ಕೇಳಿದ್ದಾರೆ, ವೆನೆಜುವೆಲಾ ಮೇಲೆ ಅಮೆರಿಕ ಮತ್ತು ಇತರ ರಾಷ್ಟ್ರಗಳು ಹೇರಿದ್ದ ನಿರ್ಬಂಧಗಳನ್ನು ಬೆಂಬಲಿಸಿದ್ದಾರೆ, ಅಷ್ಟೇ ಯಾಕೆ? ಸ್ವತಃ ತಾವೇ ವೆನೆಜುವೆಲಾ ಮೇಲೆ ನಿರ್ಬಂಧ ಹೇರುವಂತೆ ಹಲವು ರಾಷ್ಟ್ರಗಳನ್ನು ಕೇಳಿದ್ದಾರೆ. ಅವರ ಈ ಧೋರಣೆಗಳು ಮತ್ತು ವೆನೆಜುವೆಲಾ ಮೇಲೆ ವಿದೇಶಿ ಹಸ್ತಕ್ಷೇಪವು ವೆನೆಜುವೆಲಾದಲ್ಲಿ ಔಷಧ, ಆಹಾರ ಹಾಗೂ ಅಗತ್ಯ ಸೌಲಭ್ಯಗಳ ಕೊರತೆ ಉಂಟಾಗುವಂತೆ ಮಾಡಿದೆ. ಇದೆಲ್ಲದರ ಪರಿಣಾಮವು ಯುದ್ಧಕ್ಕಿಂತಲೂ ಹೆಚ್ಚು ಜನರನ್ನು ಕೊಂದಿದೆ ಎಂದು ದಿ ಲ್ಯಾನ್ಸೆಟ್ ಮತ್ತು ಇತರ ನಿಯತಕಾಲಿಕೆಗಳ ಅಧ್ಯಯನಗಳು ಬಹಿರಂಗಗೊಳಿಸಿವೆ.
ಮಚಾಡೊ ತನ್ನ ಸಂಪೂರ್ಣ ರಾಜಕೀಯ ಜೀವನವನ್ನು ವೆನೆಜುವೆಲಾದಲ್ಲಿ ವಿಭಜನೆಯನ್ನು ಉತ್ತೇಜಿಸಲು, ವೆನೆಜುವೆಲಾದ ಸಾರ್ವಭೌಮತ್ವವನ್ನು ನಾಶಗೊಳಿಸಲು ಹಾಗೂ ಅಲ್ಲಿನ ಜನರ ಘನತೆಯಿಂದ ಬದುಕುವ ಹಕ್ಕನ್ನು ಕಸಿದುಕೊಳ್ಳುವುದಕ್ಕಾಗಿ ವ್ಯಯಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಹೊರಮೈ ರೋಗನಿರೋಧಕ ಸಹಿಷ್ಣುತೆಯ ಸಂಶೋಧನೆಗೆ 2025ರ ವೈದ್ಯಕೀಯ ನೊಬೆಲ್ ಪ್ರಶಸ್ತಿ
2002ರಲ್ಲಿ ಅಂದಿನ ಅಧ್ಯಕ್ಷ ಹ್ಯೂಗೋ ಚಾವೆಜ್ ಅವರ ಸರ್ಕಾರವನ್ನು ಉರುಳಿಸಿದ ದಂಗೆಯ ಹಿಂದೆ ಮಚಾಡೊ ಇದ್ದರು. ಸಂವಿಧಾನವನ್ನು ರದ್ದುಗೊಳಿಸುವ ಮತ್ತು ಪ್ರತಿಯೊಂದು ಸಾರ್ವಜನಿಕ ಸಂಸ್ಥೆಯನ್ನು ವಿಸರ್ಜಿಸುವ ಕಾರ್ಮೋನಾ ತೀರ್ಪಿಗೆ ಸಹಿ ಹಾಕಿದ್ದರು. ಅಂದಿನ ಆಡಳಿತ ಬದಲಾವಣೆಯನ್ನು ಸಮರ್ಥಿಸಿಕೊಳ್ಳಲು ಅವರು ಅಮೆರಿಕದೊಂದಿಗೆ ಕೈಜೋಡಿಸಿದ್ದರು. ಬಲಪ್ರಯೋಗದ ಮೂಲಕ ವೆನೆಜುವೆಲಾವನ್ನು ‘ಸ್ವತಂತ್ರಗೊಳಿಸಲು’ ವಿದೇಶಿ ಮಿಲಿಟರಿ ಹಸ್ತಕ್ಷೇಪವನ್ನು ಕೋರಿದ್ದರು.
2014ರಲ್ಲಿ ವೆನೆಜುವೆಲಾದಲ್ಲಿ ನಡೆದ ‘ಲಾ ಸಲಿಡಾ’ ಅಭಿಯಾನದ ನೇತಾರರಲ್ಲಿ ಮಚಾಡೊ ಕೂಡ ಒಬ್ಬರು. ಈ ಅಭಿಯಾನವು ತೀವ್ರ ಪ್ರತಿಭಟನೆಗಳಿಗೆ ಕರೆ ನೀಡಿತ್ತು. ಆ ಪ್ರತಿಭಟನೆಗಳ ಸಮಯದಲ್ಲಿ ರಸ್ತೆಗಳಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಯಿತು. ಕಾರ್ಮಿಕರನ್ನು ಸಾಗಿಸುವ ಬಸ್‌ಗಳನ್ನು ಸುಟ್ಟುಹಾಕಲಾಯಿತು, ಚಾವಿಸ್ಟಾ ಎಂದು ಶಂಕಿಸಲಾದ ಜನರನ್ನು ಥಳಿಸಿ ಕೊಲ್ಲಲಾಯಿತು, ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯರ ಮೇಲೂ ದಾಳಿ ಮಾಡಲಾಯಿತು. ವೈದ್ಯಕೀಯ ನೆರವು ನೀಡಲು ಕ್ಯೂಬಾದಿಂದ ಬಂದಿದ್ದ ವೈದ್ಯಕೀಯ ಸಿಬ್ಬಂದಿಗಳನ್ನು ಜೀವಂತವಾಗಿ ಸುಟ್ಟುಹಾಕಲಾಯಿತು. ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಸಾರ್ವಜನಿಕ ಕಟ್ಟಡಗಳು, ಆಹಾರ ಟ್ರಕ್‌ಗಳು ಹಾಗೂ ಶಾಲೆಗಳು ನಾಶವಾದವು.
ಈ ಪ್ರತಿಭಟನೆಗಳಿಗೆ ಮಚಾಡೊ ಜನರನ್ನು ಪ್ರಚೋದಿಸಿದ್ದರು. ಮಾತ್ರವಲ್ಲದೆ, ಆ ಕೃತ್ಯಗಳನ್ನು ಪ್ರತಿರೋಧವೆಂದು ಕರೆದರು. ಈ ಪ್ರತಿಭಟನೆಗಳು ‘ಶಾಂತಿಯುತ ಪ್ರತಿಭಟನೆಗಳಲ್ಲ. ಅವು ದೇಶಕ್ಕೆ ಭಾರೀ ಹೊಡೆತ ಕೊಡುವ ಮತ್ತು ಸರ್ಕಾರದ ಪತನವನ್ನು ಬಯಸುವ ಸಂಘಟಿತ ದಾಳಿಗಳು’ ಎಂದು ವಿದೇಶಿ ಪತ್ರಿಕೆಗಳು ವರದಿ ಮಾಡಿದ್ದವು.
ವೆನೆಜುವೆಲಾ ಮೇಲೆ ಡೊನಾಲ್ಡ್ ಟ್ರಂಪ್ ಸರ್ಕಾರ ಆಕ್ರಮಣ ನಡೆಸುವ ಬೆದರಿಕೆ ಮತ್ತು ಕೆರಿಬಿಯನ್‌ನಲ್ಲಿ ಅಮೆರಿಕನ್ ನೌಕಾ ಪಡೆಗಳ ನಿಯೋಜನೆಗಳನ್ನು ಮಚಾಡೊ ಬೆಂಬಲಿಸಿದ್ದರು. ಇದು ಮಾದಕವಸ್ತು ಕಳ್ಳಸಾಗಣೆಯನ್ನು ನಿಯಂತ್ರಿಸುವ ನೆಪದಲ್ಲಿ ವೆನೆಜುವೆಲಾದಲ್ಲಿ ಆಂತರಿಕ ಯುದ್ಧವನ್ನು ಪ್ರಚೋದಿಸುವ ಹುನ್ನಾರದ ಭಾಗವಾಗಿತ್ತು. 2025ರ ಜನವರಿಯಲ್ಲಿ ಟ್ರಂಪ್ ಯುದ್ಧನೌಕೆಗಳನ್ನು ಕಳುಹಿಸಿ ವೆನೆಜುವೆಲಾದ ಸರಕುಗಳನ್ನು ಸ್ಥಗಿತಗೊಳಿಸಿದಾಗ, ಅಮೆರಿಕಗೆ ಮಚಾಡೊ ಅವರು ಸ್ಥಳೀಯ ಪ್ರಾಕ್ಸಿಯಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದರು.
ವೆನೆಜುವೆಲಾದ ಮೇಲೆ ಆರ್ಥಿಕ ನಿರ್ಬಂಧ ಹೇರುವುದರಿಂದ ಬಡವರು, ರೋಗಿಗಳು, ಕಾರ್ಮಿಕ ವರ್ಗ ಗಂಭೀರ ಸಮಸ್ಯೆ ಎದುರಿಸುತ್ತದೆ ಎಂಬುದು ಗೊತ್ತಿದ್ದರೂ, ನಿರ್ಬಂಧ ಹೇರುವಂತೆ ಅಮೆರಿಕವನ್ನು ಮಚಾಡೊ ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ‘ಕೇಂದ್ರ ಗುಪ್ತಚರ ಸಂಸ್ಥೆ’ (ಐಸಿಇ) ಮೂಲಕ ವಲಸೆ ಮಕ್ಕಳನ್ನು ಪಂಜರದಲ್ಲಿ ಇರಿಸಿ ಕ್ರೌರ್ಯ ಮೆರೆದ ಮತ್ತು ಮಕ್ಕಳನ್ನು ಕಳೆದುಕೊಂಡ ತಾಯಂದಿರು ತಮ್ಮ ಮಕ್ಕಳಿಗಾಗಿ ಹುಡುಕಾಡುತ್ತಲೇ ನರಳುವಂತೆ ಮಾಡಿದ ಟ್ರಂಪ್ ಅವರ ಧೋರಣೆಯನ್ನು ಮಚಾಡೊ ಬೆಂಬಲಿಸಿದ್ದರು.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಆಡಳಿತ ವಿರೋಧಿ ಅಲೆ ದಾಟಿ ದಡ ಸೇರುವರೇ ನಿತೀಶ್-ಮೋದಿ?
ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆಸಿ, ಅದನ್ನು ಸ್ವರಕ್ಷಣೆ ಎಂದು ಕರೆದುಕೊಳ್ಳುವ ಹಾಗೂ ವರ್ಣಭೇದ ನೀತಿಯನ್ನು ಅನುಸರಿಸುತ್ತಿರುವ ಇಸ್ರೇಲ್ ಜೊತೆ ಬಹಿರಂಗವಾಗಿ ಮಚಾಡೊ ಹೊಂದಾಣಿಕೆ ಮಾಡಿಕೊಂಡಿದ್ದರು. ಜೆರುಸಲೆಮ್‌ನಲ್ಲಿ ವೆನೆಜುವೆಲಾದ ರಾಯಭಾರ ಕಚೇರಿಯನ್ನು ಮತ್ತೆ ತೆರೆಯುವುದಾಗಿ ಪ್ರತಿಜ್ಞೆ ಮಾಡಿದ್ದರು.
ಇದೀಗ, ಅವರು ವೆನೆಜುವೆಲಾದ ತೈಲ, ನೀರು ಮತ್ತು ಮೂಲಸೌಕರ್ಯವನ್ನು ಖಾಸಗಿ ನಿಗಮಗಳಿಗೆ ಹಸ್ತಾಂತರಿಸಲು ಬಯಸುತ್ತಿದ್ದಾರೆ.
ಇದೆಲ್ಲವೂ ಮಚಾಡೊ ಅವರು ಶಾಂತಿಯ ಧೂತರೆಂದು, ಪ್ರಗತಿಯ ಸಂಕೇತವೆಂದು ಹೇಳುವುದಿಲ್ಲ. ಬದಲಾಗಿ, ಅವರು ಫ್ಯಾಸಿಸಂ, ಝಿಯಾನಿಸಂ ಹಾಗೂ ನವ ಉದಾರವಾದ ‘ಬ್ರಾಂಡ್ ಅಂಬಾಸಿಡರ್’ ಆಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅವರ ಧೋರಣೆಗಳು ಪ್ರಜಾಪ್ರಭುತ್ವ ಮತ್ತು ಶಾಂತಿಯ ಸೋಗಿನಲ್ಲಿ ಪ್ರಾಬಲ್ಯ-ಆಕ್ರಮಣವನ್ನು ಸಮರ್ಥಿಸುವ ಕುತಂತ್ರವಾಗಿವೆ.
ವೆನೆಜುವೆಲಾದಲ್ಲಿ, ಮಚಾಡೊ ಅವರ ಶಾಂತಿಯ ಮೈತ್ರಿ ಎಂದರೆ ದಂಗೆಗಳು, ನಿರ್ಬಂಧಗಳು ಹಾಗೂ ಖಾಸಗೀಕರಣ.
ವಿಯೆಟ್ನಾಂ ಯುದ್ಧ ಮತ್ತು ಬಾಂಬ್ ದಾಳಿಗಳಿಂದ ಲಕ್ಷಾಂತರ ಜನರ ಸಾವುಗಳಿಗೆ ಕಾರಣರಾದ ಅಮೆರಿಕದ ಹೆನ್ರಿ ಕಿಸಿಂಜರ್, ಇಸ್ರೇಲ್-ಈಜಿಸ್ಟ್ ಯುದ್ಧ ಹಿಂದಿದ್ದ ಮೆನಾಹಮ್ ಬಿಗಿನ್, ಬಾಂಗ್ಲಾದಲ್ಲಿ ಕ್ಷಿಪ್ರ ಕ್ರಾಂತಿ ಮೂಲಕ ಅಧಿಕಾರಕ್ಕೆ ಬಂದಿರುವ ಅಮೆರಿಕ ಬೆಂಬಲಿತ ಮೊಹಮ್ಮದ್ ಯುನಿಸ್ ಹಾಗೂ ಯುದ್ಧಗಳನ್ನು ನಿಲ್ಲಿಸಿ – ಶಾಂತಿ ಸ್ಥಾಪಿಸುತ್ತಾರೆಂಬ ಮುಂದಾಲೋಚನೆಯೊಂದಿಗೆ ಬರಾಕ್ ಒಬಾಮಾ ಅವರೇ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವಾಗ, ಮಾರಿಯಾ ಕೊರಿನಾ ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಮುಖ್ಯವಾಗಿ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿರುವುದಕ್ಕೂ,ಇತ್ತೀಚಿನ ವರ್ಷಗಳಲ್ಲಿ ವೆನೆಜುವೆಲಾ ಮೇಲೆ ನಡೆಯುತ್ತಿರುವ ವಿದೇಶಿ ದಬ್ಬಾಳಿಕೆಗೂ ಹಾಗೂ ಅಂತಾರಾಷ್ಟ್ರೀಯ ತೈಲ ಬಿಕ್ಕಟ್ಟಿಗೂ ನೇರ ಸಂಬಂಧವಿದೆ. ಇಡೀ ಪ್ರಪಂಚದಲ್ಲಿಯೇ ಅತೀ ಹೆಚ್ಚು ಬೃಹತ್ ತೈಲ ನಿಕ್ಷೇಪಗಳನ್ನು ಹೊಂದಿರುವ ದೇಶ ವೆನೆಜುವೆಲಾ. ಪ್ರಸ್ತುತ ಸಂದರ್ಭದಲ್ಲಿ ಅಂತಾರಾಷ್ಟ್ರೀಯವಾಗಿ ಕಚ್ಚಾ ತೈಲ ಬಿಕ್ಕಟ್ಟು ಎದುರಾಗಿದೆ. ಜೊತೆಗೆ, ಮಧ್ಯಪ್ರಾಚ್ಯದಲ್ಲಿ ಸಂಘರ್ಷಗಳೂ ಸೇರಿದಂತೆ ನಾನಾ ರೀತಿಯಲ್ಲಿ ಅಲ್ಲೋಲ-ಕಲ್ಲೋಲಗಳಿಂದಾಗಿ ಮಧ್ಯಪ್ರಾಚ್ಯದಲ್ಲಿ ತೈಲ ಹೊರತೆಗೆಯುವಿಕೆ ಮತ್ತು ರಫ್ತು ಮಾಡುವಿಕೆ ಸ್ಥಗಿತಗೊಂಡರೆ, ತೈಲ ಬಿಕ್ಕಟ್ಟು ತೀವ್ರವಾಗಲಿದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಗೆ ವೆನೆಜುವೆಲಾ ಅತ್ಯಗತ್ಯ. ಹೀಗಾಗಿ, ಆ ರಾಷ್ಟ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಅಮೆರಿಕ-ಯುರೋಪ್ ಹವಣಿಸುತ್ತಿವೆ. ಅದಕ್ಕಾಗಿ, ವೆನೆಜುವೆಲಾದ ಹಾಲಿ ಆಡಳಿತದ ಮೇಲೆ ದಮನಗಳೂ – ಮಚಾಡೊ ಅವರನ್ನು ಕೊಂಡಾಡುವಿಕೆಯೂ ನಡೆಯುತ್ತಿದೆ. ಮೊಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ದರ ಹಿಂದೆ, ಅವರನ್ನು ರಾಜತಾಂತ್ರಿಕವಾಗಿ ಬುಟ್ಟಿಗೆ ಹಾಕಿಕೊಳ್ಳುವ ಕುತಂತ್ರವೂ ಇದೆ.
ಈ ಪ್ರಶಸ್ತಿಯನ್ನು ರಾಜತಾಂತ್ರಿಕತೆಯ ವೇಷ ಧರಿಸಿದ ಹಿಂಸಾ ಪ್ರಚೋದಕರಿಗೆ ನೀಡಿದಾಗಲೆಲ್ಲ, ಪ್ರಶಸ್ತಿಯು ಶಾಂತಿಯ ಅರ್ಥವನ್ನು ಕಳೆದುಕೊಳ್ಳುತ್ತದೆ. ಕಳೆದುಕೊಳ್ಳುತ್ತಲೇ ಇದೆ.
ಈಗ ಮಚಾಡೊ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ. ಮುಂದೊಂದು ದಿನ, ಜಗತ್ತಿನ ಮೇಲೆ ತನ್ನದೇ ಸರ್ವಾಧಿಕಾರ ಹೇರಲು ಯತ್ನಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೋಮುದ್ವೇಷ ಬಿತ್ತುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನರೇಂದ್ರ ಮೋದಿ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಬಹುದು. ಆಶ್ಚರ್ಯವೇನು ಇರದು.




