“ಹಿಡ್ಮಾ ಅವರನ್ನು ಎನ್ ಕೌಂಟರ್ ಮಾಡಲಾಗಿಲ್ಲ. ಅವರನ್ನು ಮೊದಲು ಬಂಧಿಸಿ ನಂತರ ಗುಂಡು ಹಾರಿಸಿ ಕೊಲ್ಲಲಾಗಿದೆ” ಎಂದು ಬುಡಕಟ್ಟು ಸಮುದಾಯದ ಹಕ್ಕಿಗಾಗಿ ಹೋರಾಡುತ್ತಿರುವ ಸೋನಿ ಸೋರಿ ಅವರು ಆರೋಪಿಸಿದ್ದಾರೆ. ಈ ಆರೋಪದ ನಂತರ ಈಗ ನಕ್ಸಲ್ ನಾಯಕ ಮಾಡವಿ ಹಿಡ್ಮಾ ಅವರ ಸಾವು ಸಾಕಷ್ಟು ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗಿದೆ.
ಛತ್ತೀಸಗಢದ ಬಸ್ತಾರ್ ವಲಯದ ಮುಖ್ಯಸ್ಥ, ಮಾವೋವಾದಿ ಚಳವಳಿಯಲ್ಲಿನ ಅತ್ಯಂತ ಪ್ರಭಾವಿ ಮತ್ತು ಮೋಸ್ಟ್ ವಾಂಟೆಡ್ ನಾಯಕರಲ್ಲಿ ಒಬ್ಬನಾಗಿದ್ದ ಮಾಡವಿ ಹಿಡ್ಮಾ ಅವರನ್ನು ನವೆಂಬರ್ 18 ಬುಧವಾರದಂದು, ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮಾರೇಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಚರಣೆಯಲ್ಲಿ ಹತ್ಯೆ ಮಾಡಲಾಗಿದೆ.
ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಮಾಡವಿ ಹಿಡ್ಮಾ ಮತ್ತು ಆತನ ಪತ್ನಿ ಮದಕಂ ರಾಜೆ ಸೇರಿ ಒಟ್ಟು 6 ಮಂದಿಯನ್ನು ಆಂಧ್ರಪ್ರದೇಶ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ ಎಂದು ಆಂಧ್ರಪ್ರದೇಶದ ಗುಪ್ತಚರ ವಿಭಾಗದ ಎಡಿಜಿಪಿ ಮಹೇಶ್ ಚಂದ್ರ ಲಡ್ಡಾ ಸುದ್ದಿಗೋಷ್ಠಿ ಮಾಡಿ ತಿಳಿಸಿದ್ದಾರೆ.
ಮಾರನೆಯ ದಿನವಾದ ಗುರುವಾರ ಬೆಳಗ್ಗೆ ಹಿಡ್ಮಾ ಮತ್ತು ಅವರ ಪತ್ನಿ ಮದಕಂ ರಾಜೆ ಅವರ ಮೃತದೇಹ ಅವರ ಹುಟ್ಟುರಾದ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಪುವರ್ತಿ ಗ್ರಾಮಕ್ಕೆ ತರುತ್ತಿದಂತೆ, ಇಡೀ ಗ್ರಾಮವೂ ಘೋಷಣೆಗಳಿಲ್ಲದೆ ದುಃಖದಲ್ಲಿ ಮಡುಗಟ್ಟಿತ್ತು. ಹಿಡ್ಮಾ ಅವರ ನಾಯಕತ್ವ ಮತ್ತು ಜನರಿಗೆ ಮಾಡಿದ ಸೇವೆ ಸ್ವ-ಗ್ರಾಮದ ಜನರ ಕಣ್ಣಿರೇ ಹೇಳುತ್ತಿದ್ದು. ಹಿಡ್ಮಾ ಸಾಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಆತನ ಮೇಲೆ ನೂರಾರು ಆರೋಪಗಳಿದ್ದರು, ತನ್ನ ಸಮುದಾಯವರ ಮುಂದೆ ಹೀರೋ ಆಗಿದ್ದ.
ಅಂತ್ಯಕ್ರಿಯೆಯ ವೇಳೆಗೆ ಸ್ಥಳಕ್ಕೆ ಆಗಮಿಸಿ ಬುಡಕಟ್ಟು ಸಮುದಾಯದ ನಾಯಕಿ ಸೋನಿ ಸೋರಿ ಹಿಡ್ಮಾ ಅವರ ಚಿತೆಗೆ ಹಣೆಯಿಟ್ಟು ನಮಿಸಿದರು. ಸೋನಿ ಸೋರಿ ಅವರು ಹಿಡ್ಮಾ ಅವರ ದೇಹಕ್ಕೆ ಕಪ್ಪು ಬಟ್ಟೆಯನ್ನು ಹಾಕಿ ಕೊನೆಯ ಸಂತಾಪವನ್ನು ಸೂಚಿಸಿದರು.
ಇದನ್ನು ಓದಿ : ಶಬ್ದದೊಳಗೆ ನಿಶ್ಯಬ್ದವಾಯ್ತು, ಹಿಡ್ಮಾ ಎಂಬ ‘ಬಸ್ತರ್ ಭೂತ’
“ಹಿಡ್ಮಾ ಅವರನ್ನು ಎನ್ ಕೌಂಟರ್ ಮಾಡಲಾಗಿಲ್ಲ. ಅವರನ್ನು ಮೊದಲು ಬಂಧಿಸಿ ನಂತರ ಗುಂಡು ಹಾರಿಸಿ ಕೊಲ್ಲಲಾಗಿದೆ” ಎಂದು ಬುಡಕಟ್ಟು ಸಮುದಾಯದ ಹಕ್ಕಿಗಾಗಿ ಹೋರಾಡುತ್ತಿರುವ ಸೋನಿ ಸೋರಿ ಅವರು ಆರೋಪಿಸಿದ್ದಾರೆ. ಈ ಆರೋಪದ ನಂತರ ಈಗ ನಕ್ಸಲ್ ನಾಯಕ ಮಾಡವಿ ಹಿಡ್ಮಾ ಅವರ ಸಾವು ಸಾಕಷ್ಟು ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಇದ್ದ ಇತರ ನಕ್ಸಲರಂತೆ ಹಿಡ್ಮಾ ಅವರನ್ನು ಏಕೆ ಬಂಧಿಸಲಾಗಿಲ್ಲ? ಎಂದು ಸೋರಿ ಪ್ರಶ್ನಿಸಿದ್ದಾರೆ. ಪೊಲೀಸರು ನಕಲಿ ಎನ್ ಕೌಂಟರ್ ಮಾಡಿದ್ದಾರೆ. ಮಾವೋವಾದಿ ದಿಟ್ಟ ನಾಯಕ ಹಿಡ್ಮಾ ಅವರನ್ನು ಎನ್ ಕೌಂಟರ್ ಮಾಡಿದ್ದೇವೆ ಎಂದು ತಪ್ಪು ಸಂದೇಶ ಕೊಡುತ್ತಿದ್ದಾರೆ. ಅವರನ್ನು ಕೊಲ್ಲಲು ಕಾರಣ ಕೇವಲ ಅವರೊಬ್ಬ “ಬುಡಕಟ್ಟು ಜನಾಂಗ”ದವರಾಗಿದ್ದಕ್ಕೆ ಎಂದು ಸೋರಿ ಆರೋಪಿಸಿ, ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಭಾನುವಾರ ದೆಹಲಿಯಲ್ಲಿ ನಡೆದ ತೀವ್ರ ವಾಯು ಮಾಲಿನ್ಯದ ವಿರುದ್ಧದ ಪ್ರತಿಭಟನೆಯಲ್ಲಿಯೂ ಸಹ ಪ್ರತಿಭಟನಕಾರರು ಹಿಡ್ಮಾ ಅವರ ಫೋಟೋಗಳನ್ನು ಹಿಡಿದು “ಮಾಡವಿ ಹಿಡ್ಮಾ ಅಮರ್ ರಹೇ” ಎಂದು ಘೋಷಣೆಗಳನ್ನು ಕೂಗಿದರು. ಅವರು ಹಿಡಿದ ಪೋಸ್ಟರ್ ಗಳಲ್ಲಿ “ಬುಡಕಟ್ಟು ನಾಯಕ ಬಿರ್ಸಾ ಮುಂಡಾದಿಂದ ಬುಡಕಟ್ಟು ನಾಯಕ ಮಾಡವಿ ಹಿಡ್ಮಾ ವರೆಗೆ ಪರಿಸರ, ಕಾಡು ರಕ್ಷಣೆಗಾಗಿ ಹೋರಾಡಿದ್ದಾರೆ” ಎಂದು ಬರೆದಿತ್ತು. ಒಬ್ಬ ನಕ್ಸಲ್ ನಾಯಕನ ಸಾವನ್ನು ಸಂಭ್ರಮಿಸುತ್ತಿರುವ ಪ್ರಭುತ್ವದ ವಿರುದ್ಧ, ಸಾಮಾನ್ಯ ನಾಗರಿಕರು ತಮ್ಮ ದುಖಃ ಮತ್ತು ಸಂತಾಪವನ್ನು ಈ ರೀತಿಯಲ್ಲಿ ಹೊರಹಾಕುತ್ತಿದ್ದಾರೆ.
ಇಲ್ಲಿ ಪ್ರಮುಖ ಚರ್ಚೆಗೆ ಕಾರಣವಾದ ವಿಚಾರವೇ, ಬುಡಕಟ್ಟು ಸಮುದಾಯದ ನಾಯಕಿ ಸೋನಿ ಸೋರಿ ಅವರ ಮಾತು. ಇದೊಂದು ನಕಲಿ ಎನ್ ಕೌಂಟರ್ ಎಂದು ಸೋರಿ ಹೇಳಿರುವ ಮಾತು ಈಗ ಸಾಕಷ್ಟು ಚರ್ಚೆಯಲ್ಲಿದೆ. ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು, ಸಾಮಾಜಿಕ ಜಾಲತಾಣದಲ್ಲಿ ಹಿಡ್ಮಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಸೋರಿ ಹೇಳಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪವನ್ನು ಬೆಂಬಲಿಸಿದ್ದಾರೆ. ಇದು ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಇದರ ಜೊತೆಗೆ ತೆಲಂಗಾಣ ಕ್ರಾಂಗೆಸ್ ಅಧ್ಯಕ್ಷ ಮಹೇಶ್ ಕುಮಾರ್ ಸಹ ಇದೊಂದು ನಕಲಿ ಎನ್ ಕೌಂಟರ್ ಎಂದಿದ್ದಾರೆ. ಇದರ ಮೂಲಕ ರಾಜಕೀಯ ವಿವಾದಕ್ಕೆ ಕಾರಣರಾಗಿದ್ದಾರೆ. ಪೊಲೀಸರು ಮಾವೋವಾದಿಗಳನ್ನು ಕೊಂದಿರುವುದು ಸುಳ್ಳು ಮತ್ತು ಇದೊಂದು ವ್ಯವಸ್ಥಿತ ಎನ್ ಕೌಂಟರ್. ಪೊಲೀಸರಿಂದಾಗಲಿ ಮತ್ತು ನಕ್ಸಲರಿಂದಗಾಲಿ ನಡೆಯುವ ಹಿಂಸಾಚಾರಗಳನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ ಎಂದಿದ್ದರು.
ನಕ್ಸಲ್ ಚಟುವಟಿಕೆಗಳಿಗೆ ಕೇವಲ ಎನ್ ಕೌಂಟರ್ ಒಂದೇ ಉತ್ತರವಲ್ಲ. ಅವರು ಬಂದೂಕುಗಳನ್ನು ಹಿಡಿದಿರಬಹದು. ಆದರೆ ಅದರ ಹಿಂದಿನ ಉದ್ದೇಶವನ್ನು ಅರಿಯಬೇಕು. ಇದೇ ರೀತಿಯ ಅನೇಕರು ನಕ್ಸಲ್ ಚಳುವಳಿಗೆ ಧುಮುಕಲು ಕಾರಣವಾದ ಅರಣ್ಯವಾಸಿಗಳ ಸಮಸ್ಯೆಗಳು, ಅರಣ್ಯ ಇಲಾಖೆಯವರು ಆದಿವಾಸಿಗಳ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳು ಮಾತ್ರ ಇಂದಿಗೂ ಹಾಗೆಯೇ ಜೀವಂತವಾಗಿಯೇ ಉಳಿದಿವೆ. ಕೇಂದ್ರ ಸರ್ಕಾರ ನಕ್ಸಲ್ ಮುಕ್ತ ಭಾರತವನ್ನು ನಿರ್ಮಿಸಲು ಟೊಂಕ್ಕ ತೊಟ್ಟಿ ಹೊರಟಂತೆ ಕಾಣುತ್ತಿದೆ. ಇದರ ಬೆನ್ನಲ್ಲೆ ಕಳೆದ 2-3 ವರ್ಷಗಳಿಂದ ಅನೇಕ ನಕ್ಸಲ್ ನಾಯಕರ ಎನ್ ಕೌಂಟರ್ ಗಳು ನಡೆದಿವೆ. ಈ ರೀತಿಯ ಎನ್ ಕೌಂಟರ್ ಗಳಿಗೆ ಕರ್ನಾಟಕ ಹೊರತಲ್ಲ. ಕಳೆದ ವರ್ಷ ನಕ್ಸಲ್ ನಾಯಕ ವಿಕ್ರಂಗೌಡನನ್ನು ಎನ್ ಕೌಂಟರ್ ಮಾಡಲಾಯಿತು. ಆರಂಭದಲ್ಲಿ ಈ ಎನ್ ಕೌಂಟರ್ ಬಗ್ಗೆ ಸಾಕಷ್ಟು ಸಂಶಯಗಳು ಬಂದವು. ಇದೊಂದು ನಕಲಿ ಎನ್ಕೌಂಟರ್ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಹಲವು ಸಂಘಟನೆಗಳು ಆರೋಪಿಸಿದವು. ಆದರೆ ಯಾವುದೇ ತನಿಖೆ ನಡೆಯಲೆ ಇಲ್ಲ.

ಈಗಲೂ ಸಹ ಮಾಡವಿ ಹಿಡ್ಮಾ ಅವರ ಎನ್ಕೌಂಟರ್ ನಲ್ಲಿಯೂ ಸಹ ಇದೇ ರೀತಿಯ ಗುಮಾನಿ ಎದ್ದಿದೆ. ಗುಮಾನಿ ಎನ್ನುವುದಕ್ಕಿಂತ ಬುಡಕಟ್ಟು ಸಮುದಾಯದ ನಾಯಕಿ ಸೋನಿ ಸೋರಿ ಅವರ ಗಂಭೀರ ಆರೋಪ. ಈ ಆರೋಪಗಳು ಕೇಳಿ ಬಂದಾಗ ಸರ್ಕಾರ ತಳ್ಳಿಹಾಕಲು ಪ್ರಯತ್ನಿಸುತ್ತಿರುತ್ತದೆ. ಇಲ್ಲಿಯೂ ಅದೇ ಆಗಬಹುದು.
ಇದೇ ವರ್ಷ 2025 ಜನವರಿ 9 ರಂದು ಕರ್ನಾಟಕ ಇನ್ನೊಂದು ಹೊಸ ಅಧ್ಯಾಯಕ್ಕೆ ಕಾರಣವಾಯಿತು. ಕರ್ನಾಟಕದ ಮುಖ್ಯಮಂತ್ರಿಗಳೇ ಮುಂದೆ ನಿಂತು 6 ನಕ್ಸಲರನ್ನು ಶರಣಾಗತಿಗೆ ಒಪ್ಪಿಗೆ ಸೂಚಿಸಿದರು. ಎನ್ಕೌಂಟರ್ ಬದಲು ಸಮಾಜದ ಮುಖ್ಯವಾಹಿನಿಗೆ ಬಂದು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಅವಕಾಶ ಮಾಡಿಕೊಟ್ಟರು. ಇದೊಂದು ಮಹತ್ವದ ಹೆಜ್ಜೆ ಎನ್ನಬಹುದು. ಕೇಂದ್ರ ಸರ್ಕಾರವಾಗಲಿ ಅಥವಾ ಯಾವುದೇ ರಾಜ್ಯ ಸರ್ಕಾರವಾಗಲಿ ಎನ್ಕೌಂಟರ್ ಮಾತ್ರ ಪರಿಹಾರ ಎಂಬ ಮನಸ್ಥಿತಿಯಿಂದ ಹೊರಬರಬೇಕು. ನಕ್ಸಲು ಹಿಡಿದ ಬಂದೂಕಿನ ಹಿಂದಿನ ಕಥೆಯನ್ನು ಕೇಳಬೇಕು.
ಇದನ್ನೂ ಓದಿ ಘಾಜಿಯಾಬಾದ್ ಬಸ್ ಸ್ಫೋಟ | 29 ವರ್ಷ ವಿಚಾರಣೆ-ಜೈಲು ಬಳಿಕ ಇಲ್ಯಾಸ್ ಖುಲಾಸೆ; ಕಳೆದ ಬದುಕಿಗೆ ಯಾರು ಹೊಣೆ?
ಮಾಡವಿ ಹಿಡ್ಮಾ ಅವರ ಎನ್ಕೌಂಟರ್ ನಕಲಿ ಎಂದು ದೇಶದ ಅನೇಕ ಪ್ರಜ್ಞಾವಂತರು ಹೇಳುತ್ತಿದ್ದಾರೆ. ಜೊತೆಗೆ ಸೋನಿ ಸೋರಿ ಅವರು ಮಾಡುತ್ತಿರುವ ಈ ಆರೋಪವನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳುತ್ತದೆಯಾ? ಆಥವಾ ಈ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಹೊಸ ತನಿಖಾ ತಂಡ ರಚಿಸಲಿದೆಯಾ? ಇದು ಈಗಿನ ಮುಖ್ಯ ಪ್ರಶ್ನೆಯಾಗಿದೆ.





