ನುಡಿ ನಮನ | ಜನರ ನಡುವಿನ ಪರಿಸರ ವಿಜ್ಞಾನಿ ‘ಮಾಧವ ಗಾಡ್ಗೀಳ್‌’

Date:

ಅವರ ಜೀವನ ಪರಿಸರ, ಪರಿಸರ ವಿಜ್ಞಾನ ಮತ್ತು ಸಮುದಾಯ ಈ ಮೂರನ್ನು ಕೇಂದ್ರೀಕರಿಸಿತ್ತು. ಅಭಿವೃದ್ಧಿಯ ಲಾಭಗಳನ್ನು ಉಳ್ಳವರು ಅನುಭವಿಸುತ್ತಿದ್ದಾರೆ ಮತ್ತು ಈ ಅಭಿವೃದ್ಧಿಗಾಗಿ ದುರ್ಬಲ ವರ್ಗದವರು ಬೆಲೆ ತೆರುತ್ತಿದ್ದಾರೆ ಎಂಬುದರ ಬಗೆಗೆ ಅವರು ತಮ್ಮ ಬರಹಗಳಲ್ಲಿ ಸಾಕಷ್ಟು ಚರ್ಚಿಸಿದ್ದರು. ಭಾರತದ ಜೀವವೈವಿಧ್ಯತೆಯ ಬಗೆಗೆ ಅವರಿಗಿದ್ದ ಜ್ಞಾನ ಪಶ್ಚಿಮ ಘಟ್ಟ ಪ್ರದೇಶ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ಹರಡಿತ್ತು.

ʻಮಾಧವ ಗಾಡ್ಗೀಳ್‌ʼ ಅವರ ಹೆಸರು ಹೆಚ್ಚು ಪರಿಚಿತವಾದುದು ಸ್ನಾತಕೋತ್ತರ ಪದವಿ ತರಗತಿಯಲ್ಲಿದ್ದ ದಿನಗಳಲ್ಲಿ. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ʻಪರಿಸರ ಪತ್ರಿಕೋದ್ಯಮʼ ಕುರಿತಾದ ವಿಷಯದ ಅಧ್ಯಯನದ ಸಂದರ್ಭದಲ್ಲಿ. ಆಗ ಅವರ ಹೆಸರನ್ನು ಮತ್ತು ಅವರು ಪರಿಸರದ ಕುರಿತು ಬರೆದ ಪುಸ್ತಕಗಳಾದ ʻಇಕಾಲಜಿ ಆಂಡ್‌ ಈಕ್ವಿಟಿʼ, ʻಇಕಾಲಜಿಕಲ್‌ ಜರ್ನೀಸ್‌ʼ ಗಳನ್ನು ಪರಿಸರ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಧ್ಯಯನಗಳನ್ನು ಕೈಗೊಂಡಿದ್ದ ಪ್ರೊಫೆಸರ್‌ ಡಿ ಎಸ್‌ ಪೂರ್ಣಾನಂದ ನಮ್ಮ ತರಗತಿಗಳಲ್ಲಿ ಯಾವಾಗಲೂ ಉಲ್ಲೇಖಿಸುತ್ತಿದ್ದರು. ಜೊತೆಗೆ ಆ ಪುಸ್ತಕಗಳನ್ನು ನಮಗೆ ಓದಲೂ ಕೊಟ್ಟಿದ್ದರು.

ನಂತರ ಪಿಎಚ್‌ಡಿ ಗೆ ಅಧ್ಯಯನ ನಡೆಸುತ್ತಿರುವ ದಿನಗಳಲ್ಲಿ ಪಶ್ಚಿಮ ಘಟ್ಟಶ್ರೇಣಿಗಳ ಕುರಿತಂತೆ ಮಾಧವ ಗಾಡ್ಗೀಳರಿಗಿದ್ದ ಅಪರಿಮಿತ ಕಾಳಜಿ, ಅದರ ಕುರಿತಂತೆ ಅವರು ನಡೆಸಿದ ಅಧ್ಯಯನಗಳು, ʻಪಶ್ಚಿಮ ಘಟ್ಟ ಉಳಿಸಿʼ ಚಳುವಳಿಯಲ್ಲಿ ತಳಮಟ್ಟದಿಂದಲೇ ಅವರ ತೊಡಗಿಸಿಕೊಳ್ಳುವಿಕೆ ಇದೆಲ್ಲದರ ಪರಿಚಯವಾಗುತ್ತ ಹೋಯಿತು. ಸ್ವತಃ ಗಾಡ್ಗೀಳ್‌ ಅವರೇ ರಾಮಚಂದ್ರ ಗುಹಾ ಅವರೊಂದಿಗಿನ ಮಾತುಕತೆಯಲ್ಲಿ ತನ್ನ ಬದುಕಿನಲ್ಲಿ ನನ್ನ ಎರಡು ಮುಖ್ಯ ಪ್ರೀತಿಪಾತ್ರರು ಎಂದರೆ ಒಂದು ತನ್ನ ʻಹೆಂಡತಿ ಸುಲೋಚನಾ ಗಾಡ್ಗೀಳ್‌ʼ, ಇನ್ನೊಂದು ʻಪಶ್ಚಿಮ ಘಟ್ಟ ಶ್ರೇಣಿಗಳುʼ ಎಂದಿದ್ದರಂತೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಹುಶ: 80ರ ದಶಕದಿಂದಲೇ ಗಾಡ್ಗೀಳ್‌ರವರು ಪರಿಸರಕ್ಕೆ, ಪರಿಸರ ವಿಜ್ಞಾನಕ್ಕೆ, ಪಶ್ಛಿಮ ಘಟ್ಟಗಳಿಗೆ, ವನ್ಯಮೃಗಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡಿದ್ದರೂ, ಎಲ್ಲರಿಗೂ ಅವರು ಹೆಚ್ಚು ಪರಿಚಿತ ಮತ್ತು ಗ್ರೇಟ್‌ ಪರಿಸರ ವಿಜ್ಞಾನಿ ಎನಿಸಿದ್ದು ತೀರಾ ಇತ್ತೀಚೆಗೆ. ಹವಾಮಾನ ಬದಲಾವಣೆ ಮತ್ತು ಮಾನವನ ʻಅಭಿವೃದ್ಧಿ ಕಾರ್ಯʼದಿಂದಾಗಿ ಪಶ್ಚಿಮ ಘಟ್ಟಗಳು ಕಂಪಿಸಿದ ನಂತರವೇ. ಎಲ್ಲರೂ ಪಶ್ಚಿಮ ಘಟ್ಟಗಳ ಕುರಿತಾದ ಅವರ ಜ್ಞಾನ, ಮುನ್ನೋಟ, ಆಳವಾದ ಅಧ್ಯಯನವನ್ನು ಮತ್ತು ಅವರ ಮುಂದಾಳತ್ವದಲ್ಲಿ ಕೇಂದ್ರ ಸರ್ಕಾರ ನೇಮಿಸಿದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (Western Ghats Ecology Expert Panel) ಯ ಶಿಫಾರಸ್ಸುಗಳತ್ತ, ವಿಶೇಷ ಪ್ರೀತಿ ಆದರದಿಂದ ನೋಡುವಂತಾದದ್ದು, 2018-2019ರಲ್ಲಿ ಕೇರಳ ಹಾಗು ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ನಂತರವೇ.

ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಪಶ್ಚಿಮ ಘಟ್ಟಗಳ ಸಮಗ್ರ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸುವಂತೆ ಗಾಡ್ಗೀಳ್‌ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು 2011ರಲ್ಲಿಯೇ ನೀಡಿದ್ದರೂ, ವರದಿ ಪ್ರಾಯೋಗಿಕವಾಗಿಲ್ಲ ಮತ್ತು ನಿಯಮಗಳು ಕಟ್ಟುನಿಟ್ಟಾಗಿವೆ, ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾಗಿವೆ ಎಂಬ ಕುಂಟು ನೆಪಗಳನ್ನೊಡ್ಡಿ ಸರ್ಕಾರ ಈ ವರದಿಯನ್ನು ತಿರಸ್ಕರಿಸಿತು.

ಪಶ್ಚಿಮ ಘಟ್ಟದಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಜಲವಿದ್ಯುತ್‌, ಉಷ್ಣ ವಿದ್ಯುತ್‌ ಯೋಜನೆಗಳಿಗೆ ಅಣೆಕಟ್ಟುಗಳು ಹಾಗು ಬೃಹತ್‌ ಉದ್ದಿಮೆಗಳಿಗೆ ಅನುಮತಿ ನೀಡಬಾರದು ಎಂದು ಈ ವರದಿಯು ಶಿಫಾರಸ್ಸು ಮಾಡಿತ್ತು. ಪಶ್ಚಿಮ ಘಟ್ಟ ಪ್ರದೇಶದಲ್ಲಿ 142 ತಾಲೂಕುಗಳನ್ನು ಪರಿಸರ ಸೂಕ್ಷ್ಮ ವಲಯಗಳು ಎಂದು ಗುರುತಿಸಿ, ಅವುಗಳ ಸಂರಕ್ಷಣೆಗೆ ಅವುಗಳನ್ನು ಮೂರು ಸೂಕ್ಷ್ಮ ವಲಯಗಳನ್ನಾಗಿ ವಿಂಗಡಿಸುವಂತೆ ಸಲಹೆಗಳನ್ನು ನೀಡಿತ್ತು. ಆದರೆ ಪಶ್ಚಿಮ ಘಟ್ಟ ಶ್ರೇಣಿಗಳನ್ನು ಒಳಗೊಂಡಿರುವ ಆರೂ ರಾಜ್ಯಗಳು ಆರ್ಥಿಕ ನಷ್ಟ, ವಿವಿಧ ಹಂತದಲ್ಲಿರುವ ʻಅಭಿವೃದ್ಧಿʼ ಯೋಜನೆಗಳಿಗೆ ಬೀಳಬಹುದಾದ ಹೊಡೆತ ಇವುಗಳನ್ನು ಮುಂದಿಡುತ್ತಾ ವರದಿಯನ್ನು ತಿರಸ್ಕರಿಸಿದವು. ಕೇರಳ ಗಾಡ್ಗೀಳ ವರದಿ ಮತ್ತು ಆ ನಂತರ ಗಾಡ್ಗೀಳ್‌ ವರದಿಯನ್ನು ಮರುಪರಿಶೀಲನೆ ಮಾಡಲು ಸರ್ಕಾರ ನೇಮಿಸಿದ ಕಸ್ತೂರಿ ರಂಗನ್‌ ಸಮಿತಿಯ ವರದಿ ಎರಡನ್ನೂ ತೀವ್ರವಾಗಿ ವಿರೋಧಿಸಿತು. ಸಮಿತಿಯಲ್ಲಿದ್ದ ಗಾಡ್ಗೀಳ್‌ರವರ ಒಡನಾಡಿಗಳು ಹೇಳುವಂತೆ ಕೇರಳ ಗಾಡ್ಗೀಳ್‌ರನ್ನು ʻವಿಲನ್‌ʼನಂತೆ ನೋಡುತ್ತಿತ್ತು.

ಪಶ್ಚಿಮ ಘಟ್ಟಗಳು

ಆದರೆ ಈ ನಿರ್ಲಕ್ಷದ ಪರಿಣಾಮವನ್ನು ಕೇರಳ ಕೆಲವೇ ವರ್ಷಗಳಲ್ಲಿ ನೋಡುವಂತಾಯಿತು. ಗಾಡ್ಗೀಳ್‌ ವರದಿ ಆಗ ಮತ್ತೊಮ್ಮೆ ಸುದ್ದಿಗೆ ಬಂತು. ಎಲ್ಲಾ ಮಾಧ್ಯಮಗಳು ಗಾಡ್ಗೀಳ್‌ ವರದಿಯಲ್ಲಿ ಹೇಳಲಾದ ಅಂಶಗಳನ್ನು ಪುನರುಚ್ಚರಿಸಿದವು. ಗಾಡ್ಗೀಳ್‌ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದ್ದರೆ ಕೇರಳದ ಜಲಪ್ರವಾಹದ ದುರಂತವನ್ನು ತಡೆಯಬಹುದಿತ್ತು ಎಂದವು. ಆಗ ಅವರು ಭಾರತ ಕಂಡ ಅಗ್ರ ಗಣ್ಯ ಪರಿಸರ ವಿಜ್ಞಾನಿ, ಜಗತ್ತಿನ ಕೆಲವೇ ಕೆಲವು ಪ್ರಮುಖ ಪರಿಸರ ವಿಜ್ಞಾನಿಗಳಲ್ಲಿ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂಬುದು ಎಲ್ಲರಿಗೂ ವೇದ್ಯವಾಗಿತ್ತು.

ಪಶ್ಚಿಮ ಘಟ್ಟದ ಪ್ರದೇಶದಲ್ಲಿ ವಾಸಿಸುತ್ತಿರುವವರನ್ನೇ ಸೇರಿಸಿಕೊಂಡು ರಚಿಸಿದ ತಮ್ಮ ಸಮಿತಿಯ ವರದಿಯನ್ನು ಸರ್ಕಾರ ತಿರಸ್ಕರಿಸಿದ್ದು ಮತ್ತು ಮರುಪರಿಶೀಲನೆಗೆ ಕಸ್ತೂರಿರಂಗನ್‌ ನೇತೃತ್ವದಲ್ಲಿ ಇನ್ನೊಂದು ಸಮಿತಿ ರಚಿಸಿದ್ದು ಗಾಡ್ಗೀಳರಿಗೆ ಸಾಕಷ್ಟು ನೋವನ್ನು ಉಂಟುಮಾಡಿತ್ತು. ಈ ಬಗ್ಗೆ ಅವರು ಒಂದು ಪತ್ರವನ್ನೂ ಕಸ್ತೂರಿ ರಂಗನ್‌ ಅವರಿಗೆ ಬರೆದಿದ್ದನ್ನು ತಮ್ಮ ಆಟೋ ಬಯೋಗ್ರಫಿ ʻಅ ವಾಕ್‌ ಅಪ್‌ ದ ಹಿಲ್‌ʼ (ಏರುಘಟ್ಟದ ನಡಿಗೆ – ಎಂದು ನಾಗೇಶ್‌ ಹೆಗಡೆ ಮತ್ತು ಶಾರದಾ ಗೋಪಾಲ್‌ ಅವರ ಆತ್ಮಕಥನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ) ನಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರದಲ್ಲಿ ʻಪರಿಸರ ಮತ್ತು ಅರಣ್ಯ ಮಂತ್ರಾಲಯಕ್ಕೆ ನಾವು ವರದಿ ಸಲ್ಲಿಸುವಾಗ ಹಳ್ಳಿ ಹಳ್ಳಿಗಳನ್ನೂ ಅಡ್ಡಾಡಿ, ಜನರೊಂದಿಗೆ ಕುಳಿತು ಚರ್ಚೆ ಮಾಡಿ, ಪಶ್ಚಿಮ ಘಟ್ಟಗಳಂತಹ ಸೂಕ್ಷ್ಮ ಪರಿಸರವನ್ನು ರಕ್ಷಣೆ ಮಾಡಲು ಸ್ಥಳೀಯ ಜನರ ಪಾತ್ರ ಬಹಳ ಮುಖ್ಯವೆಂದು ವಕಾಲತ್ತು ಮಾಡಿದೆವು. ಆದರೆ ನೀವು ಅದನ್ನು ತಿರಸ್ಕರಿಸಿದಿರಿʼ ಎಂಬುದಾಗಿ ವಿಷಾದಿಸಿದ್ದಾರೆ.

ಗಾಡ್ಗೀಳರ ಪರಿಸರಪರ ಕಾಳಜಿ ಮತ್ತು ವ್ಯಕ್ತಿತ್ವ

ಸುಮಾರು 1987ರ ಹೊತ್ತಿಗೆ ನಡೆದ ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯಿಂದ ಆರಂಭಗೊಂಡು ಮಾಧವ ಗಾಡ್ಗೀಳರ ಒಡನಾಟದಲ್ಲಿದ್ದ, ನಂತರ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯಲ್ಲಿ ಸದಸ್ಯರಾಗಿ ಗಾಡ್ಗೀಳರೊಂದಿಗೆ ಕಾರ್ಯನಿರ್ವಹಿಸಿದ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ವಿದ್ಯಾ ನಾಯಕ್‌ ಗಾಡ್ಗೀಳರ ಪರಿಸರ ಸಂಬಂಧಿ ಕಾರ್ಯವೈಖರಿಯನ್ನು ಹಂಚಿಕೊಳ್ಳುತ್ತಾರೆ.

ನಾಗರಿಕ ಸೇವಾ ಟ್ರಸ್ಟ್‌ನಲ್ಲಿ ಆರಂಭಿಸಿದ ಗ್ರಾಮ ಮಟ್ಟದ ಜೀವ ವೈವಿಧ್ಯ ದಾಖಲಾತಿ, ಶಾಲೆಗಳಲ್ಲಿ ಕೈಗೊಂಡ ನಿಸರ್ಗ ಅಧ್ಯಯನ, ಇದಕ್ಕೆಲ್ಲ ಗಾಡ್ಗೀಳ ಸ್ವತಃ ತಾವೇ ಬಂದು ಅದನ್ನು ಹೇಗೆ ನಡೆಸಬೇಕೆಂದು ತರಬೇತುದಾರರಿಗೆ ಮತ್ತು ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದರು. ಈ ಅಧ್ಯಯನದಲ್ಲಿ ಏನೆಲ್ಲಾ ದಾಖಲಿಸಬೇಕು ಎಂಬುದಕ್ಕೆ ತಾವೇ ಒಂದು ಕೈಪಿಡಿ ಮತ್ತು ಪ್ರಶ್ನಾವಳಿ ತಯಾರಿಸಿದ್ದರು. ಈ ಪ್ರದೇಶದಲ್ಲಿ ನಾಗಬನ ಮತ್ತು ದೇವರ ಕಾಡುಗಳ ದಾಖಲಾತಿ ಸಂಬಂಧಿತ ಅಧ್ಯಯನ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಶಿಶಿರ ಮತ್ತು ಧರ್ಮಸ್ಥಳ ಸುತ್ತಮುತ್ತಲಿನ ಇತರ ಪ್ರದೇಶಗಳಲ್ಲಿ ದೇವರಮೀನು/ ಮಹಷೀರ್‌ ಫಿಶ್‌ನ್ನು ವಿಷ ಹಾಕಿ ಕೊಲ್ಲುವ ಘಟನೆಗಳು ನಡೆದಾಗ ಗಾಡ್ಗೀಳ್‌ ನಾಗರಿಕ ಸೇವಾ ಟ್ರಸ್ಟ್‌ ಮೂಲಕ ಆ ಪ್ರದೇಶವನ್ನು ʻಹೆರಿಟೇಜ್‌ ಸೈಟ್‌ʼ ಎಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದರು.

Madhav Gadgil 750P

ಪರಿಸರ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳುವ ಸಂಸ್ಥೆಗಳ ಬಗ್ಗೆ ತೀವ್ರ ಅಭಿಮಾನ ಹೊಂದಿದ್ದ ಗಾಡ್ಗೀಳ್‌ ತಮಗೆ ಪ್ರಶಸ್ತಿ ಬಂದಾಗ ನಾಗರಿಕಾ ಸೇವಾ ಟ್ರಸ್ಟ್‌ಗೆ ಅದರಲ್ಲಿ ರೂ ೫೦,೦೦೦ ದೇಣಿಗೆಯನ್ನೂ ನೀಡಿದ್ದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯಲ್ಲಿ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಗಾಡ್ಗೀಳ್‌ ʻಮೂಲನಿವಾಸಿಗಳು ನಿಜವಾದ ಅರಣ್ಯ ರಕ್ಷಕರುʼ ಎಂದು ಅವರ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸಿದ್ದರು. ಅವರನ್ನು ಐಐಎಸ್‌ಸಿ ಕರೆದುಕೊಂಡು ಹೋಗಿ ಅಲ್ಲಿ ಅವರೊಂದಿಗೆ ಚರ್ಚೆ ನಡೆಸಿದರು. ಶ್ರೀ ಸಾಮಾನ್ಯರೂ ವಿಜ್ಞಾನಿಗಳ ಜೊತೆ ಚರ್ಚಿಸಲು ಸಾಧ್ಯ ಎಂಬುದನ್ನು ಗಾಡ್ಗೀಳ್‌ ತೋರಿಸಿದ್ದರು. ಅರಣ್ಯದಲ್ಲಿರುವ ಮೂಲನಿವಾಸಿಗಳ ತಲೆಮಾರುಗಳಿಂದ ಬಂದ ಅರಣ್ಯ ಜ್ಞಾನದ ಬಗ್ಗೆ ಅವರಿಗೆ ಸಾಕಷ್ಟು ಗೌರವವಿತ್ತು. ಅವರೊಂದಿಗೆ ಚರ್ಚಿಸಿ ಅದನ್ನು ತಿಳಿದುಕೊಳ್ಳುತ್ತಿದ್ದರು. ಪರಿಸರ ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಯಲ್ಲಿ ಆ ಜ್ಷಾನ ತೀರಾ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದನ್ನು ಅವರು ಮನಗಂಡಿದ್ದರು. ಅವರದ್ದು ತೀರಾ ಅಪರೂಪದ ವ್ಯಕ್ತಿತ್ವ, ಎನ್ನುತ್ತಾರೆ ವಿದ್ಯಾ ನಾಯಕ್‌.

ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯಲ್ಲಿ ಕಾರ್ಯ ನಿರ್ವಹಿಸುವಾಗ ಗಾಡ್ಗೀಳರ ಸರಳತೆಯನ್ನು ಹತ್ತಿರದಿಂದ ಕಂಡ ವಿದ್ಯಾ ʻಅವರಿಗೆ ನಡೆಯಲು ಬೇಸರ ಎಂಬುದೇ ಇಲ್ಲ. ಎಷ್ಟು ಬೇಕಾದರೂ ನಡೆಯುತ್ತಿದ್ದರು. ಬಿಸ್ಲೆರಿ ನೀರು ಕೂಡ ಬೇಕಿಲ್ಲ. ಒಂದು ಬರ್ಮುಡಾ ಚೆಡ್ಡಿ ಧರಿಸಿ ಮರದ ಕೊಂಬೆಯ ಮೇಲೆ ಕೂತೋ ಅಥವಾ ನೆಲದಲ್ಲಿ ಕೂತೋ ಜನರೊಂದಿಗೆ ಮಾತನಾಡುತ್ತಿದ್ದರು. ಅವರಿಗೆ ಕನ್ನಡ ಚೆನ್ನಾಗಿ ಬರುತ್ತಿತ್ತು. ಬೇರೆ ಭಾಷೆಯಲ್ಲಿ ಸಂಭಾಷಿಸಬೇಕಾದ ಸಂದರ್ಭ ಬಂದಾಗಷ್ಟೇ ಬೇರೆಯವರ ಸಹಾಯ ತೆಗೆದುಕೊಳ್ಳುತ್ತಿದ್ದರು. ತುಂಬಾ ಡೌನ್‌ ಟು ಅರ್ಥ್‌. ಸಣ್ಣ ಸಣ್ಣ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿಯೂ ಸಾಕಷ್ಟು ಆಸಕ್ತಿ ಇತ್ತು. ಜಾನಪದ ಕಥೆಗಳನ್ನು ಕೇಳುತ್ತಿದ್ದರು. ಅದರಲ್ಲಿ ಪರಿಸರ ಸಂರಕ್ಷಣೆ ಮಾಡುವ ಪಾರಂಪರಿಕ ವಿಧಾನಗಳಿದ್ದರೆ ಅದನ್ನು ಪ್ರಶಂಶಿಸುತ್ತಿದ್ದರು. ಪಶ್ಚಿಮ ಘಟ್ಟಗಳ ಇಂಚಿಂಚು ಅವರಿಗೆ ಗೊತ್ತಿತ್ತುʼʼ ಎಂದು ವಿದ್ಯಾ ನಾಯಕ್‌ ಗಾಡ್ಗೀಳ್‌ ಅವರ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ.

ಅವರ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯ ವರದಿ ಅಭಿವೃದ್ಧಿಯನ್ನು ಪರಿಸರ ಮತ್ತು ಜನರ ಪೂರಕವಾಗಿ ಹೇಗೆ ಮಾರ್ಪಡಿಸಬಹುದು ಎಂಬುದನ್ನು ಕೇಂದ್ರೀಕರಿಸಿತ್ತು. ಅದು ಜನಸ್ನೇಹಿ ಮತ್ತು ಪರಿಸರ ಸ್ನೇಹಿ ಆಗಿತ್ತು. ಅಲ್ಲಲ್ಲಿ ಪಬ್ಲಿಕ್‌ ಹಿಯರಿಂಗ್‌ಗಳನ್ನು ನಡೆಸಿ, ಜನರ ಅಭಿಪ್ರಾಯ ಸಂಗ್ರಹಿಸಿ, ಜನರ ಸಹಭಾಗಿತ್ವದಲ್ಲಿ ಹೊರತಂದ ಪಾರದರ್ಶಕ ವರದಿ ಅದಾಗಿತ್ತು. ಆದರೆ ಗಾಡ್ಗೀಳ್‌ ವರದಿಯನ್ನು ಸರ್ಕಾರ ತಿರಸ್ಕರಿಸಿತು ಅವರನ್ನು ಅಭಿವೃದ್ಧಿ ವಿರೋಧಿ ಎಂಬಂತೆ ಬಿಂಬಿಸಲಾಯಿತು.

ಆಹಾರದ ಕುರಿತಾಗಿ ಗಾಡ್ಗೀಳರ ಒಲವನ್ನು ಹಂಚಿಕೊಳ್ಳುತ್ತಾ ವಿದ್ಯಾ ನಾಯಕ್‌, “ನಿಸರ್ಗದತ್ತ ಆಹಾರದ ಬಗ್ಗೆ ಅವರಿಗೆ ಸಾಕಷ್ಟು ಒಲವು ಇತ್ತು. ಅದರ ಕುರಿತಾಗಿ ವಿದೇಶಿಯರಿಗೆ ಒಮ್ಮೆ ಒಂದು ಸೆಮಿನಾರ್‌ ಮಾಡಿದಾಗ, ಯಾವುದಾದರೊಂದು ನಿಸರ್ಗದತ್ತ ಆಹಾರ ಮಾಡಿ ಕಳುಹಿಸಲು ನನ್ನನ್ನು ಕೋರಿದ್ದರು. ನಾನು ಕೆಮ್ಮಲಕಾಯಿ ಉಪ್ಪಿನಕಾಯಿ ಮಾಡಿ ಕಳುಹಿಸಿದಾಗ ಇನ್ನೊಮ್ಮೆ ಬಂದವರು ಅದರ ಬೊಟಾನಿಕಲ್‌ ನೇಮ್‌ ಇತ್ಯಾದಿ ವಿವರಗಳನ್ನು ಖುದ್ದಾಗಿ ವಿಚಾರಿಸಿ ತಿಳಿದುಕೊಂಡಿದ್ದರು. ಮೀನು ಅವರ ಪ್ರಿಯ ಆಹಾರ. ಅವರಿಗೆ ಸಸ್ಯಾಹಾರ ಮಾಂಸಹಾರ ಎಂಬ ಬೇಧಭಾವಗಳಿರಲಿಲ್ಲ. ಯಾವುದೇ ಊರಿಗೆ ಹೋದರು ಆ ಊರಿನ ವಿಶೇಷ ಖಾದ್ಯ ಸವಿಯುತ್ತಿದ್ದರು” ಎನ್ನುತ್ತಾರೆ.

ಗಾಡ್ಗೀಳ ಯಾವುದೇ ವಿಷಯವನ್ನು ಮಂಡಿಸುವಾಗ ಸಾಕಷ್ಟು ಕಟ್ಟುನಿಟ್ಟಾಗಿರುತ್ತಿದ್ದರು. ಅಧಿಕಾರಿ ವರ್ಗದವರು ಯಾವುದಾದರೂ ವಿಷಯವನ್ನು ತೇಲಿಸಿಕೊಂಡು ಹೋಗುವ ಹಾಗೆ ಹೇಳಿದರೆ ಅವರನ್ನು ಬಿಡುತ್ತಿರಲಿಲ್ಲ. ಯಾವುದೇ ಮುಲಾಜಿಲ್ಲದೆ ಅವರನ್ನು ಖಂಡಿಸುತ್ತಿದ್ದರು, ಎಂದು ಅವರ ಪರಿಸರ ಸಂಬಂಧಿತ ವಿಷಯಗಳಲ್ಲಿ ಅವರ ನಿಷ್ಠುರತನವನ್ನು ವಿದ್ಯಾ ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ ಮಾಧವ ಗಾಡ್ಗೀಳ್ ಸಮಿತಿಯ ವರದಿಯಲ್ಲೇನಿತ್ತು? ಸರ್ಕಾರಗಳೇ ಅಪಪ್ರಚಾರ ನಡೆಸಿ ಕಲ್ಲು ಹೊಡೆದದ್ದು ಯಾಕೆ?

ಗಾಡ್ಗೀಳ್‌ ಕೇವಲ ಪಶ್ಚಿಮ ಘಟ್ಟ ಉಳಿಸಿ ಚಳುವಳಿ ಮಾತ್ರವಲ್ಲದೆ ಇತರ ಪರಿಸರ ಚಳುವಳಿಗಳಲ್ಲೂ ಸಕ್ರಿಯವಾಗಿದ್ದರು. ʻದಕ್ಷಿಣ ಕನ್ನಡ ಉಳಿಸಿʼ ಹೋರಾಟದ ಅಂಗವಾಗಿ ಬೃಹತ್‌ ಕೈಗಾರಿಕೆಗಳು ಜಿಲ್ಲೆಗೆ ಕಾಲಿಡುವ ಮೊದಲು ಇಲ್ಲಿನ ಧಾರಣಾ ಸಾಮರ್ಥ್ಯದ ಅಧ್ಯಯನವಾಗಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟದ್ದೇ ಗಾಡ್ಗೀಳ್‌. ಅದಕ್ಕೆ ಸಂಬಂಧಿಸಿದ ರೂಪುರೇಷೆಗಳನ್ನು ಅವರು ಸಿದ್ಧಪಡಿಸಿದ್ದರು. ಆದರೆ ಸರ್ಕಾರದ ಕೈಗಾರಿಕಾಪರ ಧೋರಣೆ ಈ ಅಧ್ಯಯನ ಕೈಗೊಳ್ಳುವುದನ್ನು ತಡೆಯಿತು, ಎನ್ನುತ್ತಾರೆ ನಾಗರಿಕ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿ ರಂಜನ್‌ ರಾವ್‌ ಯರ್ಡೂರು.

***

ಅವರ ಜೀವನ ಪರಿಸರ, ಪರಿಸರ ವಿಜ್ಞಾನ ಮತ್ತು ಸಮುದಾಯ ಈ ಮೂರನ್ನು ಕೇಂದ್ರೀಕರಿಸಿತ್ತು. ಅಭಿವೃದ್ಧಿಯ ಲಾಭಗಳನ್ನು ಉಳ್ಳವರು ಅನುಭವಿಸುತ್ತಿದ್ದಾರೆ ಮತ್ತು ಈ ಅಭಿವೃದ್ಧಿಗಾಗಿ ದುರ್ಬಲ ವರ್ಗದವರು ಬೆಲೆ ತೆರುತ್ತಿದ್ದಾರೆ ಎಂಬುದರ ಬಗೆಗೆ ಅವರು ತಮ್ಮ ಬರಹಗಳಲ್ಲಿ ಸಾಕಷ್ಟು ಚರ್ಚಿಸಿದ್ದರು. ಭಾರತದ ಜೀವವೈವಿಧ್ಯತೆಯ ಬಗೆಗೆ ಅವರಿಗಿದ್ದ ಜ್ಞಾನ ಪಶ್ಚಿಮ ಘಟ್ಟ ಪ್ರದೇಶ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ಹರಡಿತ್ತು. ಪರಿಸರ ಕ್ಷೇತ್ರದಲ್ಲಿ ಅವರ ಯಶಸ್ಸಿನೊಂದಿಗೆ ಹೆಚ್ಚಿನ ಕಾರ್ಯಗಳು ವೈಫಲ್ಯ ಕಂಡಿದ್ದರೂ ಗಾಡ್ಗೀಳ್‌ ಇವುಗಳಿಂದ ಹಿಂಜರಿಯಲಿಲ್ಲ. ಇತರರು ಕೆಲಸವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಿದ್ದರು. ಆದರೆ ದೇಶ ಎದುರಿಸಬಹುದಾದ ಪರಿಸರ ಮತ್ತು ಹವಾಮಾನ ಬದಲಾವಣೆ ಸಂಬಂಧಿತ ಸವಾಲುಗಳ ಬಗ್ಗೆ ಅವರಿಗೆ ಆತಂಕವೂ ಇತ್ತು ಮತ್ತು ಅದರೊಂದಿಗೆ ಅದನ್ನು ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿರುವ ಯುವಜನಾಂಗದ ಮೇಲೆ ಭರವಸೆಯೂ.

WhatsApp Image 2025 11 17 at 3.57.02 PM
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...