ಮಹಾಡ್ ಸತ್ಯಾಗ್ರಹ | ಚವದಾರ್ ನೀರು ಮುಟ್ಟಿ, ಮನುಸ್ಮೃತಿ ಸುಟ್ಟ ಮೊದಲ ದಲಿತ ಬಂಡಾಯ

Date:

ನಾವು ಮೂರು ಬಗೆಯ ಶುದ್ಧೀಕರಣಗಳಿಗೆ ಒಳಪಡಬೇಕು. ಈ ಕ್ಷಣದಿಂದಲೇ ಸತ್ತ ದನದ ಮಾಂಸ ತಿನ್ನುವುದಿಲ್ಲವೆಂದು ಪ್ರತಿಜ್ಞೆ ಮಾಡಿ. ನಮ್ಮ ನಮ್ಮಲ್ಲೇ ಉಚ್ಚ ನೀಚ ಭಾವನೆಗಳನ್ನು ತ್ಯಜಿಸಿ. ರೊಟ್ಟಿಯ ಚೂರುಗಳನ್ನು ಎಸೆದರೆ ಅವುಗಳನ್ನು ತಿನ್ನುವುದಿಲ್ಲವೆಂದು ದೃಢ ನಿಶ್ಚಯ ಮಾಡಿರಿ ಎಂದಿದ್ದರು ಅಂಬೇಡ್ಕರ್.

ದಲಿತರಿಗೆ ಸಾರ್ವಜನಿಕ ಚವದಾರ್ ಕೆರೆಯ ನೀರನ್ನು ಕುಡಿಯುವ ಮತ್ತು ಬಳಸುವ ಅಧಿಕಾರ ಗಳಿಸಿಕೊಡಲು ಬಾಬಾಸಾಹೇಬ್ ಅಂಬೇಡ್ಕರ್ ಅವರು ನಡೆಸಿದ್ದ ಚಳವಳಿಯನ್ನು ಚವದಾರ್ ಸತ್ಯಾಗ್ರಹ ಅಥವಾ ಮಹಾಡ್ ಸತ್ಯಾಗ್ರಹ ಎಂದು ಕರೆಯಲಾಗುತ್ತದೆ. 1927ರ ಮಾರ್ಚ್ 20ರಂದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡದಲ್ಲಿ ಜರುಗಿದ ಅತ್ಯಂತ ಮಹತ್ವಪೂರ್ಣ ಐತಿಹಾಸಿಕ ಘಟನೆಯಿದು. ಸಾವಿತ್ರೀ ನದಿ ದಡದಲ್ಲಿರುವ ಮಹಾಡ್ ಟೌನ್ ಐತಿಹಾಸಿಕ ಬೌದ್ಧ ನೆಲೆಯೂ ಹೌದು.

ದಲಿತ ಸಮುದಾಯವು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸುವ ದೃಢನಿಶ್ಚಯವನ್ನು ಸಾಮೂಹಿಕವಾಗಿ ಪ್ರದರ್ಶಿಸಿ ತಮ್ಮ ಮಾನವ ಹಕ್ಕುಗಳನ್ನು ಸಮರ್ಥಿಸಿಕೊಂಡ ಮೊದಲ ವಿದ್ಯಮಾನವಿದು. ದಲಿತ ಆಂದೋಲನಕ್ಕೆ ಅಡಿಗಲ್ಲನ್ನು ಇರಿಸಿದ ವಿದ್ಯಮಾನ. ದಲಿತ ಚೇತನವನ್ನು ಬಡಿದೆಬ್ಬಿಸಿ ರಾಜಕೀಯ ಅಧಿಕಾರಕ್ಕೆ ದಾವೆ ಹೂಡುವತ್ತ ಇರಿಸಿದ ಮೊದಲ ಹೆಜ್ಜೆ ಎಂದು ಮಹಾಡ್ ಸತ್ಯಾಗ್ರಹವನ್ನು ಗುರುತಿಸಲಾಗುತ್ತದೆ.

ಕ್ರೂರ ಜಾತಿವ್ಯವಸ್ಥೆಯಿಂದ ದಲಿತರ ವಿಮೋಚನೆಗೆ ಹೋರಾಡಿದ ಬಾಬಾಸಾಹೇಬರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಚಳವಳಿಯಿದು. ಮಹಾಡ್ ಸತ್ಯಾಗ್ರಹವನ್ನು ‘ಮೊದಲ ದಲಿತ ಬಂಡಾಯ’ ಎಂದೇ ಕರೆದಿದ್ದಾರೆ ವಿದ್ವಾಂಸ-ನಾಗರಿಕ ಹಕ್ಕುಗಳ ಹೋರಾಟಗಾರ ಆನಂದ ತೇಲ್ತುಂಬ್ಡೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂದು ದೇಶದ ಎಲ್ಲೆಡೆಗಳಿಂದ ಬಂದು ಸೇರಿದ್ದ ದಲಿತರು ಸಾವಿರಾರು ಸಂಖ್ಯೆಯಲ್ಲಿ ಚವದಾರ್ ಕೆರೆಯತ್ತ ನಡೆದರು. ಕೆರೆಗಿಳಿದು ಬೊಗಸೆಯಲ್ಲಿ ನೀರು ತೆಗೆದುಕೊಂಡು ಕುಡಿದ ಬಾಬಾಸಾಹೇಬರನ್ನು ದಲಿತ ಸಮುದಾಯ ಅನುಕರಿಸಿತು.

ಸವರ್ಣ ಹಿಂದುಗಳು ದಲಿತರನ್ನು ಹಿಂದು ಧರ್ಮದ ಭಾಗವೆಂದು ಅಂದೂ ಹೇಳುತ್ತಿದ್ದರು. ಇಂದೂ ಹೇಳುತ್ತಿದ್ದಾರೆ. ಆದರೆ, ಕ್ರೈಸ್ತರು, ಮುಸಲ್ಮಾನರಿಗೆ ಚವದಾರ್ ಕೆರೆಯ ನೀರು ಕುಡಿಯುವ ಅವಕಾಶವಿದ್ದರೂ, ದಲಿತರಿಗೆ ನಿರಾಕರಿಸಲಾಗಿತ್ತು. ಈ ಸಾರ್ವಜನಿಕ ಕೆರೆಯ ನೀರನ್ನು ಪ್ರಾಣಿಗಳೂ ಕುಡಿಯಬಹುದಿತ್ತು. ದಲಿತರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಕಾಣಲಾಗುತ್ತಿತ್ತು.

ಸರ್ಕಾರ ನಿರ್ಮಿಸಿ ನಿರ್ವಹಿಸುವ ಎಲ್ಲ ಸಾರ್ವಜನಿಕ ಜಲಮೂಲಗಳು, ಬಾವಿಗಳು, ಧರ್ಮಶಾಲೆಗಳು, ಸಾರ್ವಜನಿಕ ಶಾಲೆಗಳು, ಕೋರ್ಟುಗಳು, ಕಚೇರಿಗಳು ಹಾಗೂ ದವಾಖಾನೆಗಳನ್ನು ಬಳಸಲು ಅಸ್ಪೃಶ್ಯ ವರ್ಗಗಳಿಗೂ ಅವಕಾಶ ನೀಡಬೇಕೆಂಬ ನಿರ್ಣಯವೊಂದನ್ನು ಸಮಾಜ ಸುಧಾರಕ ಎಸ್.ಕೆ ಬೋಲೆ ಅವರು ಬಾಂಬೆ ವಿಧಾನಪರಿಷತ್ತಿನಲ್ಲಿ ಮಂಡಿಸಿದ್ದರು.
ಒಲ್ಲದ ಮನಸ್ಸಿನಿಂದ ಈ ನಿರ್ಣಯವನ್ನು ಪಾಸು ಮಾಡಿ, ಅದರ ಜಾರಿಗಾಗಿ ನಿರ್ದೇಶನ ನೀಡಲಾಯಿತು. ಆದರೆ, ನೆಲಮಟ್ಟದಲ್ಲಿ ಪರಿಸ್ಥಿತಿ ಯಾವುದೇ ರೀತಿಯಲ್ಲಿ ಬದಲಾಗಿರಲಿಲ್ಲ. ಸಾರ್ವಜನಿಕ ಜಲಮೂಲಗಳ ಬಳಿ ಬರದಂತೆ ತಳಸಮುದಾಯಗಳನ್ನು ತಡೆದಿದ್ದರು ಮೇಲ್ಜಾತಿ ಹಿಂದುಗಳು.

ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ‘ಬಹಿಷ್ಕೃತ ಹಿತಕಾರಿಣಿ ಸಭಾ’ ಎಂಬ ಸಂಘಟನೆಯ ಮೂಲಕ ಅಸ್ಪೃಶ್ಯತೆಯ ವಿರುದ್ಧ ದಲಿತ ಹೋರಾಟಗಳನ್ನು ಸಂಘಟಿಸಲು ನೆರವಾಗುತ್ತಿದ್ದರು. ಹಿತಕಾರಣಿ ಸಭಾವನ್ನು ಬಾಬಾಸಾಹೇಬರೇ 1921ರಲ್ಲಿ ಸ್ಥಾಪಿಸಿದ್ದರು.
ಆ ಸಂದರ್ಭದಲ್ಲಿ ಕೊಂಕಣದ ಅಸ್ಪೃಶ್ಯರ ಸಮ್ಮೇಳನವೊಂದರ ಅಧ್ಯಕ್ಷತೆ ವಹಿಸಬೇಕೆಂದು ಮಹಾಡ್‌ನ ದಲಿತ ರಾಜಕೀಯ ಮುಂದಾಳು ರಾಮಚಂದ್ರ ಬಾಬಾಜಿ ಮೋರೆ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಕೋರಿದರು.

ಮೋರೆಯವರ ವಿನಂತಿಯನ್ನು ಒಪ್ಪಿದ ಬಾಬಾಸಾಹೇಬರು ಸಮ್ಮೇಳನದ ಏರ್ಪಾಡಿನ ಉಸ್ತುವಾರಿಯನ್ನೂ ನೋಡಿಕೊಂಡರು. 1927ರ ಮಾರ್ಚ್ 19-20ರಂದು ಮಹಾಡ್‌ನಲ್ಲಿ ಬಹಿಷ್ಕೃತ ಹಿತಕಾರಣಿ ಸಭಾದ ಆಶ್ರಯದಲ್ಲಿ ಸಮ್ಮೇಳನ ನಡೆಯಿತು. ಮಹಾರಾಷ್ಟ್ರ ಮತ್ತು ಗುಜರಾತಿನಿಂದ 2,500 ಸಾವಿರ ಪ್ರತಿನಿಧಿಗಳು ಪಾಲ್ಗೊಂಡರು. ಊಟ ಮತ್ತಿತರೆ ಏರ್ಪಾಡುಗಳಿಗಾಗಿ ಸುತ್ತಮುತ್ತಲ 40 ಹಳ್ಳಿಗಳಿಂದ ಅಕ್ಕಿ-ಗೋಧಿ ಹಾಗೂ ತಲಾ ಮೂರು ರುಪಾಯಿ ವಂತಿಗೆಯನ್ನು ಸಂಗ್ರಹಿಸಲಾಗಿತ್ತು. ಆ ಹಂತದಲ್ಲಿ ಈ ವಿದ್ಯಮಾನವನ್ನು ಸಮ್ಮೇಳನ ಎಂದು ಕರೆಯಲಾಗಿತ್ತೇ ವಿನಾ ಸತ್ಯಾಗ್ರಹವೆಂದು ಅಲ್ಲ.

WhatsApp Image 2025 03 20 at 17.56.25

ಸತ್ಯಾಗ್ರಹಗಳಲ್ಲಿ ಬಾಬಾಸಾಹೇಬರಿಗೆ ವಿಶ್ವಾಸ ಇರಲಿಲ್ಲ. ಆದರೆ ಸವರ್ಣೀಯರ ಮೇಲೆ ಪ್ರಭಾವ ಬೀರಲು ಈ ದಾರಿಯನ್ನೂ ಪ್ರಯೋಗಿಸಿದ್ದರು. ”ಸತ್ಯಾಗ್ರಹವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಸತ್ಯಾಗ್ರಹ ಎಂಬುದು ಮೇಲ್ಜಾತಿಯ ಹಿಂದೂ ಮನಸ್ಥಿತಿಗಳಲ್ಲಿ ನಾವು ಮಾಡಿಕೊಂಡಿರುವ ಮನವಿ ಮಾತ್ರ. ಹಿಂದೂ ಮನಸ್ಥಿತಿಯು ಮನುಷ್ಯರನ್ನು ಮನುಷ್ಯರಂತೆ ಕಾಣುವುದೇ ಇಲ್ಲವೇ ಎಂಬುದನ್ನು ಈ ಸತ್ಯಾಗ್ರಹ ರುಜುವಾತು ಮಾಡಿ ತೋರಿಸಲಿದೆ” ಎಂದಿದ್ದರು.

”ನಮ್ಮನ್ನು ನಾವು ಮೂರು ಬಗೆಯ ಶುದ್ಧೀಕರಣಗಳಿಗೆ ಒಳಪಡಿಸಿಕೊಳ್ಳದೆ ಹೋದರೆ ಬಹುದೂರದ ಪ್ರಗತಿಯನ್ನು ಸಾಧಿಸುವುದು ಸಾಧ್ಯವಿಲ್ಲ. ಉಡುಗೆ ತೊಡುಗೆ, ವರ್ತನೆ, ವ್ಯವಹಾರ, ಆಚರಣೆಯನ್ನು ತಿದ್ದಿಕೊಳ್ಳುವುದು, ನಮ್ಮ ಮಾತಿನ ಉಚ್ಚಾರಣೆಗಳನ್ನು ಸರಿಪಡಿಸಿಕೊಳ್ಳುವುದು ಹಾಗೂ ನಮ್ಮ ಆಲೋಚನೆಗಳಿಗೆ ಹೊಸ ಶಕ್ತಿಯನ್ನು ತುಂಬಿಸಿಕೊಳ್ಳುವುದೇ ಈ ಮೂರು ಮುಖ್ಯ ಶುದ್ಧೀಕರಣಗಳು. ಈ ಕ್ಷಣದಿಂದಲೇ ಸತ್ತ ದನದ ಮಾಂಸ ತಿನ್ನುವುದಿಲ್ಲವೆಂದು ಪ್ರತಿಜ್ಞೆ ಮಾಡಿ. ನಮ್ಮ ನಮ್ಮಲ್ಲೇ ಉಚ್ಚ ನೀಚ ಭಾವನೆಗಳನ್ನು ತ್ಯಜಿಸಿ. ರೊಟ್ಟಿಯ ಚೂರುಗಳನ್ನು ಎಸೆದರೆ ಅವುಗಳನ್ನು ತಿನ್ನುವುದಿಲ್ಲವೆಂದು ದೃಢ ನಿಶ್ಚಯ ಮಾಡಿರಿ. ಸ್ವಸಹಾಯವನ್ನು ಕಲಿಯೋಣ, ಆತ್ಮಗೌರವವನ್ನು ಮತ್ತೆ ಗಳಿಸಿಕೊಳ್ಳೋಣ, ಅರಿವೇ ಗುರು ಎಂಬುದನ್ನು ಅರಿಯೋಣ. ತಮ್ಮ ಮಕ್ಕಳ ಸ್ಥಿತಿ ತಮಗಿಂತ ಉತ್ತಮವಾಗಿರಬೇಕು ಎಂದು ಪೋಷಕರು ಆಸೆ ಪಡದೆ ಹೋದರೆ ಅವರಿಗೂ, ಪ್ರಾಣಿಗಳಿಗೂ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ. ಹಳಸಿದ ಅನ್ನವನ್ನು ತಿನ್ನದಿರೋಣ. ಹಳೆಯ ದಾರಿ ಇರುವ ತನಕ ಯಾರೂ ಹೊಸ ದಾರಿಯನ್ನು ತುಳಿಯುವುದಿಲ್ಲ. ಎಲ್ಲಿಯವರೆಗೆ ಹಳೆಯ ದಾರಿಗೇ ಅಂಟಿಕೊಂಡಿರುತ್ತೇವೆಯೋ ಅಲ್ಲಿಯವರೆಗೆ ಆತ್ಮಘನತೆಯಿಂದ ವಂಚಿತರಾಗಿರುತ್ತೇವೆ. ಈ ಜಾಗೃತಿಯ ಬೆಳಕು ಆರದಂತೆ ನೋಡಿಕೊಳ್ಳೋಣ” ಎಂದು ಬೋಧಿಸಿದರು.

ಸಮ್ಮೇಳನದ ನಂತರ ಬಾಬಾಸಾಹೇಬರು ಮತ್ತು ಸಮ್ಮೇಳನಕ್ಕೆ ಬಂದಿದ್ದ ಎಲ್ಲ ಪ್ರತಿನಿಧಿಗಳು ಚವದಾರ್ ಕೆರೆಯೆಡೆಗೆ ಮೆರವಣಿಗೆಯಲ್ಲಿ ನಡೆದರು. ಈ ಕೆರೆಯ ನೀರನ್ನು ಮುಟ್ಟುವ ಅವಕಾಶ ಅಸ್ಪೃಶ್ಯರಿಗೆ ಇರಲಿಲ್ಲ. ಚವದಾರ್ ಕೆರೆಯ ನೀರನ್ನು ಸೇವಿಸುವ ಉದ್ದೇಶ ಸಮ್ಮೇಳನದ ಮೂಲ ಕಾರ್ಯಕ್ರಮ ಪಟ್ಟಿಯಲ್ಲಿ ಇರಲಿಲ್ಲ.

ಮಹಾತ್ಮಾ ಗಾಂಧೀ ಕೀ ಜೈ, ಶಿವಾಜಿ ಮಹಾರಾಜ್ ಕೀ ಜೈ, ಸಮಾನತೆಗೆ ಜಿ ಎಂಬ ಘೋಷಣೆಗಳನ್ನು ಕೂಗುತ್ತ ಮಹಾಡ್ ಮಾರುಕಟ್ಟೆ ಜಾಗದಿಂದ ಶಿಸ್ತಾಗಿ ಸಾಲುಗಟ್ಟಿ ಮೆರವಣಿಗೆಯಲ್ಲಿ ಸಾಗಿದರು. ಚವದಾರ್ ಕೆರೆ ದಡದಲ್ಲಿ ನಿಂತರು. ಅಂಬೇಡ್ಕರ್ ಅವರು ನೀರಿಗಿಳಿದು ಬೊಗಸೆಯಲ್ಲಿ ತುಂಬಿಕೊಂಡರು. ಹರಹರ ಮಹಾದೇವ್ ಎಂದು ಹೇಳುತ್ತ ದಲಿತರು ಚವದಾರ್ ಕೆರೆಯ ನೀರು ಕುಡಿದರು.

ಸಮ್ಮೇಳನ ಅಂತ್ಯಗೊಂಡಿತು. ದಲಿತರು ದೇವಾಲಯ ಪ್ರವೇಶಿಸಲು ಹಂಚಿಕೆ ಹೂಡಿದ್ದು, ಅದನ್ನು ತಡೆಯಬೇಕೆಂದು ಸ್ಥಳೀಯ ದೇವಾಲಯವೊಂದರ ಪೂಜಾರಿ ಎಲ್ಲೆಡೆ ಸಾರುತ್ತಿದ್ದ. ಈ ಬೆಳವಣಿಗೆ ಘರ್ಷಣೆಗೆ ಎಡೆ ಮಾಡಿತು. 20 ಮಂದಿ ತೀವ್ರವಾಗಿ ಗಾಯಗೊಂಡರು. ನಾಲ್ವರು ಮಹಿಳೆಯರೂ ಸೇರಿದಂತೆ 60-70 ಮಂದಿ ಗಾಯಗೊಂಡರು. 108 ಗಡಿಗೆಗಳ ತುಂಬ ಗೋಮೂತ್ರವನ್ನು ತಂದು ಸುರಿದು ಚವದಾರ್ ಕೆರೆ ಶುದ್ಧೀಕರಣ ಮಾಡಿದರು ಸವರ್ಣೀಯ ಹಿಂದೂಗಳು. ಈ ತಿರುಗೇಟಿನಿಂದ ಅಂಬೇಡ್ಕರ್ ವಿಚಲಿತರಾಗಲಿಲ್ಲ. ಬದಲಿಗೆ ದಲಿತರ ದೃಢಸಂಕಲ್ಪವನ್ನು ಪ್ರದರ್ಶಿಸುವ ಇನ್ನೂ ದೊಡ್ಡ ಸಮ್ಮೇಳನವನ್ನು ಮಹಾಡ್‌ನ ಅದೇ ಜಾಗದಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು. 1927ರ ಡಿಸೆಂಬರ್ 26ರ ದಿನವನ್ನೂ ನಿಗದಿಪಡಿಸಿದರು. ಈ ಸಲ ಈ ಸಮ್ಮೇಳನಕ್ಕೆ ಸತ್ಯಾಗ್ರಹ ಎಂದೇ ಹೆಸರಿಟ್ಟರು.

ಮೇಲ್ಜಾತಿಯ ಹಿಂದೂಗಳು ಡಿಸೆಂಬರ್ 12ರಂದು ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳ ವಿರುದ್ಧ ಕೇಸು ಹೂಡಿದರು. ಚವದಾರ್ ಕೆರೆಯನ್ನು ಖಾಸಗಿ ಆಸ್ತಿ ಎಂದು ದಾವೆ ಹೂಡಿದರು. ಮುಂದಿನ ಆದೇಶದ ತನಕ ಅಂಬೇಡ್ಕರ್ ಮತ್ತು ದಲಿತರು ಕೆರೆಯ ಬಳಿ ಹೋಗದಂತೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತು.

ನ್ಯಾಯಾಲಯದ ತಡೆಯಾಜ್ಞೆ ಯುವ ಸಂಘಟಕರನ್ನಾಗಲಿ, ಪ್ರತಿನಿಧಿಗಳನ್ನಾಗಲಿ ಹಿಮ್ಮೆಟ್ಟಿಸಲಿಲ್ಲ. ಹೊಸ ಸಂಕಲ್ಪದೊಂದಿಗೆ ಸುಮಾರು 4,000 ಮಂದಿ ದಲಿತರು ಮಹಾಡ್‌ನಲ್ಲಿ ಸೇರಿದರು. ಡಿಸೆಂಬರ್ 24ರಂದು ಅಂಬೇಡ್ಕರ್ ಸ್ಥಳವನ್ನು ತಲುಪಿದರು. ಕೇಸಿನ ಸಂಗತಿಯನ್ನು ತಿಳಿಸಿ, ಸತ್ಯಾಗ್ರಹವನ್ನು ಮುಂದೂಡುವಂತೆ ಅಂಬೇಡ್ಕರ್ ಅವರಿಗೆ ಸೂಚನೆ ನೀಡಿದರು ಪೊಲೀಸರು.
ಸಮಾಲೋಚನೆ ನಡೆದು ಸತ್ಯಾಗ್ರಹವನ್ನು ಅಮಾನತಿನಲ್ಲಿ ಇರಿಸಲು ತೀರ್ಮಾನಿಸಲಾಯಿತು. ಈ ಸಲ ಚವದಾರ್ ಕೆರೆಯ ನೀರನ್ನು ಮುಟ್ಟಲಿಲ್ಲ.

ನಮ್ಮ ಹೋರಾಟ ಸವರ್ಣೀಯ ಹಿಂದೂಗಳ ವಿರುದ್ಧ. ನಮ್ಮ ಒಗ್ಗಟ್ಟು ಮತ್ತು ಶಕ್ತಿಯನ್ನು ಪ್ರದರ್ಶಿಸುವ ಉದ್ದೇಶ ಈಡೇರಿದೆ. ನ್ಯಾಯಾಲಯದ ತಡೆಯಾಜ್ಞೆಯನ್ನು ಮೀರಿದರೆ ಸರ್ಕಾರದ ವಿರುದ್ಧ ನೇರ ಘರ್ಷಣೆಗೆ ಇಳಿದಂತಾಗುತ್ತದೆ. ಜಿಲ್ಲಾಧಿಕಾರಿಯು ದಲಿತರ ಪರ ಸಹಾನುಭೂತಿ ಹೊಂದಿದ್ದು, ಈ ಹಂತದಲ್ಲಿ ಘರ್ಷಣೆ ಸೂಕ್ತವಲ್ಲ ಎಂದು ಬಾಬಾಸಾಹೇಬರು ಸಮ್ಮೇಳನದಲ್ಲಿ ತಮ್ಮ ನಿಲುವು ಪ್ರಕಟಿಸಿದರು ಎಂಬುದಾಗಿ ಆನಂದ್ ತೇಲ್ತುಂಬ್ಡೆ ಅವರು ತಮ್ಮ ಮಹಾಡ್ ಕುರಿತ ತಮ್ಮ ಕೃತಿಯಲ್ಲಿ ಬಣ್ಣಿಸಿದ್ದಾರೆ.

ಈ ವರದಿ ಓದಿದ್ದೀರಾ?: ದಿಹುಲೀ ದಲಿತ ಹತ್ಯಾಕಾಂಡ; 44 ವರ್ಷ ನಡೆದ ಕೇಸಿನ ಬೆವರು-ನೆತ್ತರು-ಕಂಬನಿಯ ಕತೆಯೇನು?

ಕೆರೆಯ ನೀರನ್ನು ಮುಟ್ಟದೆ ಹೋದರೂ ಮತ್ತೊಂದು ಮಹತ್ವದ ಘಟನೆಗೆ ಈ ಸಮ್ಮೇಳನ ಸಾಕ್ಷಿಯಾಯಿತು. ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಜಾತಿವ್ಯವಸ್ಥೆಯನ್ನು ವಿರೋಧಿಸುವ ಸಂಕೇತವಾಗಿ ಮನುಸ್ಮೃತಿಯನ್ನು ಸುಟ್ಟು ಹಾಕಿದರು. ಮನುಸ್ಮೃತಿಯನ್ನು ಸುಡಲು ಚಿತೆಯೊಂದನ್ನು ನಿರ್ಮಿಸಲಾಗಿತ್ತು. ನಾಲ್ಕೂ ಮೂಲೆಗಳಲ್ಲಿ ಬಟ್ಟೆಯ ಫಲಕಗಳ ಕಟ್ಟಲಾಗಿತ್ತು. ‘ಮನುಸ್ಮೃತಿಯ ದಹನ ಭೂಮಿ, ಅಸ್ಪೃಶ್ಯತೆ ನಾಶವಾಗಲಿ, ಬ್ರಾಹ್ಮಣವಾದವನ್ನು ಹೂತು ಹಾಕಿರಿ’ ಎಂಬುದಾಗಿ ಅವುಗಳಲ್ಲಿ ಬರೆಯಲಾಗಿತ್ತು. ದಹನದಿನದ ಸಂಜೆ ಮನುಸ್ಮೃತಿಯನ್ನು ಸುಡುವ ಗೊತ್ತುವಳಿಯನ್ನು ಅಂಬೇಡ್ಕರ್ ಅವರ ಬ್ರಾಹ್ಮಣ ಸಂಗಾತಿ ಗಂಗಾಧರ ನೀಲಕಂಠ ಸಹಸ್ರಬುದ್ಧೆ ಮಂಡಿಸಿದರು. ಅಸ್ಪೃಶ್ಯ ತಲೆಯಾಳು ಪಿ.ಎನ್ ರಾಜಭೋಜ್ ಅನುಮೋದಿಸಿದರು. ಆನಂತರ ಮನುಸ್ಮೃತಿಯನ್ನು ಚಿತೆಯ ಮೇಲಿರಿಸಿ ಸುಡಲಾಯಿತು.

ಅಧ್ಯಕ್ಷ ಭಾಷಣ ಮಾಡಿದ ಬಾಬಾಸಾಹೇಬರು ಮಹಾಡ್ ಸತ್ಯಾಗ್ರಹದ ಗುರಿ ಚವದಾರ್ ಕೆರೆಯ ನೀರು ಕುಡಿಯುವುದು ಮಾತ್ರವೇ ಅಲ್ಲದೆ ವರ್ಣವ್ಯವಸ್ಥೆಯನ್ನು ಮುರಿಯುವುದೇ ಆಗಿದೆ ಎಂದು ಸಾರಿದರು. ಅಂತರ್ಜಾತಿಯ ಮದುವೆಗಳ ನಿಷೇಧವೇ ಅಸ್ಪೃಶ್ಯತೆಯ ಬೇರು. ಈ ಬೇರನ್ನು ಕಡಿದು ಹಾಕಬೇಕಿದೆ ಎಂದರು. ಮನುಸ್ಮೃತಿಯಲ್ಲಿ ಸಾಮಾಜಿಕ ಸಮಾನತೆಯ ಪರಿಕಲ್ಪನೆಯ ಲವಲೇಶವೂ ಇಲ್ಲ. ಇದು ಅನುಮಾನಕ್ಕೆಡೆಯಿಲ್ಲದಂತೆ ಮನದಟ್ಟಾಗಿರುವ ಸಂಗತಿಯೆಂದು ಡಾ.ಅಂಬೇಡ್ಕರ್ ತಮ್ಮ ಪತ್ರಿಕೆ ‘ಬಹಿಷ್ಕೃತ ಭಾರತ’ದ 1928ರ ಫೆಬ್ರವರಿ ಮೂರರ ಸಂಚಿಕೆಯಲ್ಲಿ ಮನುಸ್ಮೃತಿ ಸುಟ್ಟಿದ್ದನ್ನು ಸಮರ್ಥಿಸಿ ವಿವರಿಸಿದರು. ಇತರೆ ಪತ್ರಿಕೆಗಳಲ್ಲಿಯೂ ಇಂತಹುದೇ ಲೇಖನಗಳನ್ನು ಬರೆದರು.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...