ಕಾಸರಗೋಡಿನ ಮಕ್ಕಳು ಪ್ರಥಮ ಭಾಷೆಯಾಗಿ ಕಡ್ಡಾಯ ಮಲಯಾಳಂ ಅನ್ನು ತೆಗೆದುಕೊಂಡ ನಂತರ, ದ್ವಿತೀಯ ಭಾಷೆಯಾಗಿ ಕನ್ನಡವನ್ನು ತೆಗೆದುಕೊಳ್ಳಬಹುದಲ್ಲವೇ? ಆಗ ಸಮಸ್ಯೆ ಬಗೆಹರಿಯುವುದಲ್ಲ! ಆದರೆ ಪರಿಸ್ಥಿತಿ ಇಷ್ಟು ಸರಳವಿಲ್ಲ
ಕೇರಳ ಸರ್ಕಾರ ಇತ್ತೀಚೆಗೆ ಅನುಮೋದಿಸಿದ ಮಲಯಾಳಂ ಭಾಷಾ ನೀತಿ ಮಸೂದೆಯನ್ನು ಕಾಸರಗೋಡಿನ ಕನ್ನಡಿಗರ ಹಿತೃದಷ್ಟಿಯಿಂದ ಕರ್ನಾಟಕ ಸರ್ಕಾರ ವಿರೋಧಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನಿಯೋಗವು ಈ ಮಸೂದೆಗೆ ಸಹಿ ಹಾಕದಂತೆ ಕೇರಳ ರಾಜ್ಯಪಾಲ ಆರ್ ವಿಶ್ವನಾಥ್ ಅರ್ಲೇಕರ್ ಅವರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ-ಕೇರಳ ಸರ್ಕಾರಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದಿದ್ದ ಈ ವಿವಾದ, ಕನ್ನಡ ಪ್ರಗತಿಪರ ಪರಿಸರದಲ್ಲೆ ಒಡಕಿಗೆ ಕಾರಣವಾಗಿರೋದು ವಿಪರ್ಯಾಸ. ಇತ್ತೀಚೆಗೆ ಬೆಂಗಳೂರಿನ ಕೋಗಿಲು ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕೀಯ ಸಂಘರ್ಷಕ್ಕೆ ಮುಂದಾಗಿದ್ದ ಪಿಣರಾಯಿ ವಿಜಯನ್ ಅವರ ನೇತೃತ್ವದ ಕಮ್ಯುನಿಷ್ಟ್ ಮೈತ್ರಿಕೂಟ ಸರ್ಕಾರಕ್ಕೆ ತಿರುಗೇಟು ನೀಡುವ ಭರದಲ್ಲಿ ಕಾಸರಗೋಡಿನ ಕನ್ನಡಿಗರ ನೆಪದಲ್ಲಿ ಸಿದ್ದರಾಮಯ್ಯನವರು ತಪ್ಪಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಒಂದು ಗುಂಪು ವಿಶ್ಲೇಷಿಸುತ್ತಿದೆ. ಮತ್ತೊಂದು ಗುಂಪು, ಕೇರಳದೊಳಗಿನ ಭಾಷಿಕ ಅಲ್ಪಸಂಖ್ಯಾತರ ಮೇಲೆ ಮಲಯಾಳಂ ಹೇರುವ ಈ ಕ್ರಮವನ್ನು ವಿರೋಧಿಸಿ ಸಿದ್ದರಾಮಯ್ಯನವರು ಸರಿಯಾದ ಕೆಲಸ ಮಾಡಿದ್ದಾರೆ ಎಂದು ಹೇಳುತ್ತಿದೆ. ಆಶ್ಚರ್ಯವೆಂದರೆ, ಕನ್ನಡಪರ ನಿಲುವಿನ ಕೆಲವು ನಾಯಕರು ಕೂಡಾ ಭಾಷಾ ಸ್ವಾಯತ್ತೆ ಕಾಪಾಡಿಕೊಳ್ಳುವಲ್ಲಿ ಆಯಾ ಪ್ರಾದೇಶಿಕ ಸರ್ಕಾರಗಳ ಸಾರ್ವಭೌಮತೆ ಮತ್ತು ಬದ್ಧತೆಯನ್ನು ಉಲ್ಲೇಖಿಸುತ್ತಾ, ಕೇರಳದಲ್ಲಿ ಮಲಯಾಳಂ ರಕ್ಷಣೆಗೆ ಅಲ್ಲಿನ ಸರ್ಕಾರ ತೆಗೆದುಕೊಂಡ ಕ್ರಮದಲ್ಲಿ ಮೂಗುತೂರಿಸುವ ಮೂಲಕ ಸಿದ್ದರಾಮಯ್ಯನವರು ತಪ್ಪು ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ.
ಹಾಗಾದ್ರೆ ಇಡೀ ವಿವಾದದಲ್ಲಿ ಸರಿ ಯಾವುದು? ತಪ್ಪು ಎಲ್ಲಿದೆ?
ಮೊದಲನೆಯದಾಗಿ, ಈಗಾಗಲೇ ಭಾಷಾ ವಿವಾದದಿಂದಾಗಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿರುವ, ಮತ್ತು ಅದರಿಂದಾಗಿ ಪ್ರತಿಕೂಲ ಪರಿಣಾಮ ಎದುರಿಸುತ್ತಿರುವ ಕಾಸರಗೋಡಿನಂತಹ ಸಂಕೀರ್ಣ ಸಂಗತಿಗಳಲ್ಲಿ ಭುಗಿಲೇಳುವ ಯಾವುದೇ ವಿಚಾರವನ್ನು ರಾಜಕಾರಣಕ್ಕೆ ತಳುಕುಹಾಕಿ ನೋಡಲು ಮುಂದಾಗುವುದು ವಿಷಯವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ; ವಿಷಯದ ಆಳ ಮತ್ತು ವಿಸ್ತಾರಗಳನ್ನು ಅರಿಯುವಲ್ಲಿ ನಮಗೆ ಪೂರ್ವಗ್ರಹಗಳನ್ನು ತಂದೊಡ್ಡುತ್ತವೆ. ಹಾಗಾಗಿ ಕೋಗಿಲು ಪ್ರಕರಣಕ್ಕೆ ಪ್ರತಿಕ್ರಿಯೆಯೆಂಬಂತೆ ಸಿದ್ದರಾಮಯ್ಯನವರ ವಿರೋಧವನ್ನು ನೋಡುವುದಾಗಲಿ, ಅಥವಾ; ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿ, ಮುಂಬರುವ ವಿಧಾನಸಭಾ ಸೋಲಿನ ಭೀತಿಯಲ್ಲಿರುವ ಕಮ್ಯುನಿಸ್ಟ್ ನೇತೃತ್ವದ ಸರ್ಕಾರ ಮಲಯಾಳಿ ಸ್ವಾಭಿಮಾನದ ಮೇಲೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಭಾಷಾ ನೀತಿಯನ್ನು ಬಳಸಿಕೊಳ್ಳುತ್ತಿದೆ ಎಂಬ ರಾಜಕೀಯ ಆಯಾಮದಿಂದ ಮಸೂದೆಯನ್ನು ನೋಡುವುದಾಗಲಿ, ಎರಡೂ ಅಪಾಯಕಾರಿ. ಇವೆರಡು ಸಾಧ್ಯತೆಗಳು ಇರಬಹುದಾದರೂ, ನಾವು ಈ ಚಾರಿತ್ರಿಕ ಹಿನ್ನೆಲೆಯ ವಿವಾದವನ್ನು ಅಮೂಲಾಗ್ರವಾಗಿ ಅರ್ಥಮಾಡಿಕೊಳ್ಳಲು ಮತ್ತು ಉದ್ದೇಶಿತ ನೀತಿಯಿಂದ ಆಗಬಹುದಾದ ಭಾಷಾ ಪರಿಣಾಮಗಳನ್ನು ಅರಿತುಕೊಳ್ಳಲು, ಸಾಧ್ಯವಾದಷ್ಟು ಅಂತಹ ರಾಜಕೀಯವನ್ನು ಸೋಂಕಿಸಿಕೊಳ್ಳದಂತೆ ವಿಷಯವನ್ನು ಪ್ರವೇಶಿಸಬೇಕಿದೆ.
ಹೀಗೆ ತಟಸ್ಥ ನಿಲುವಿನಿಂದ ಕೇರಳ ಸರ್ಕಾರದ ಭಾಷಾ ಮಸೂದೆಯನ್ನು ಅಧ್ಯಯನ ಮಾಡಿದಾಗ, ಕನ್ನಡವೂ ಸೇರಿದಂತೆ ತನ್ನ ನೆಲದೊಳಗಿನ ಅಲ್ಪಸಂಖ್ಯಾತ ಭಾಷೆಗಳ ರಕ್ಷಣೆಗಾಗಿ ಕೇರಳ ಸರ್ಕಾರ ಮುತುವರ್ಜಿ ವಹಿಸಿರುವುದು ಅರ್ಥವಾಗುತ್ತೆ. ಅಂದರೆ, ಮಸೂದೆಯ ಸೆಕ್ಷನ್ 7ರ (1), (2) ಮತ್ತು (3)ನೇ ಸಬ್‌ಸೆಕ್ಷನ್‌ಗಳಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ನಾಗರಿಕರು ತಮ್ಮ ಮಾತೃಭಾಷೆಯಲ್ಲೆ ಆ ವ್ಯಾಪ್ತಿಯ ಸರ್ಕಾರಿ ಕಚೇರಿಗಳೊಂದಿಗೆ ಪತ್ರವ್ಯವಹಾರ ನಡೆಸಬಹುದು; ಅವರಿಗೆ ಪ್ರತಿಕ್ರಿಯೆಯನ್ನೂ ಅವರದೇ ಭಾಷೆಯಲ್ಲಿ ನೀಡಬೇಕು; ಮಕ್ಕಳು ಅವರ ಇಚ್ಛೆಯ ಭಾಷಾ ಮಾಧ್ಯಮದಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುವುದು; ಹೊರಗಿನಿಂದ ಬಂದ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯಲ್ಲಿ ಕಡ್ಡಾಯ ಮಲಯಾಳಂ ನಲ್ಲಿ ಪರೀಕ್ಷೆ ಬರೆಯುವುದರಿಂದ ವಿನಾಯ್ತಿ… ಹೀಗೆ ಸಾಕಷ್ಟು ಅನುಕೂಲಗಳನ್ನು ಕಾಣಿಸಲಾಗಿದೆ.
ಇಷ್ಟರಮಟ್ಟಿಗೆ ಇದು ಸ್ವಾಗತಾರ್ಹವೇನೋ ನಿಜ. ಆದರೆ ಇವೆಲ್ಲವೂ ಸಾಧ್ಯವಾಗುವುದು ಭಾಷಾ ಅಲ್ಪಸಂಖ್ಯಾತರ ಭಾಷೆಯು ಮುಂದಿನ ದಿನಗಳಿಗೂ ಉಳಿದು ಬಾಳಿದಾಗ. ಆದರೆ ಅಂತಹ ಉಳಿಯುವಿಕೆಯ ಸಾಧ್ಯತೆಯನ್ನೇ ಇಲ್ಲವಾಗಿಸುವಂತಹ ನಿಬಂಧನೆಯೊಂದು ಮಸೂದೆಯ ಆರಂಭದಲ್ಲಿಯೇ ಸೇರಿಕೊಂಡಿದೆ. ಒಂದರಿಂದ ಹತ್ತನೇ ತರಗತಿವರೆಗಿನ ಕೇರಳದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಡ್ಡಾಯವಾಗಿ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿಯೇ ಕಲಿಸಬೇಕೆನ್ನುವ ನಿಬಂಧನೆ ಅದು.
ಇದರಿಂದ ಏನಾಗಬಹುದು? ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಲಿತರೂ, ತ್ರಿಭಾಷಾ ನೀತಿಯನುಸಾರ ಅವರ ಭಾಷೆಯನ್ನು ಹಾಗೂ ಅವರದೇ ಮಾಧ್ಯಮದಲ್ಲಿ ಕಲಿಯುವ ಅವಕಾಶ ಇದೆಯಲ್ಲವೇ? ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ. ಬಹುಶಃ ಈ ಶೈಕ್ಷಣಿಕ ಸಂಕೀರ್ಣತೆ ನಮಗೆ ಅರ್ಥವಾಗಬೇಕೆಂದರೆ ನಾವು ಭಾಷಾ ಆಯಾಮದಿಂದ ಮಾತ್ರವಲ್ಲದೆ ಶೈಕ್ಷಣಿಕ ಕಲಿಕಾ ಆಯಾಮದಿಂದಲೂ ಸವಾಲನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
1968ರ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ತ್ರಿಭಾಷಾ ಸೂತ್ರವನ್ನು ದೇಶದಲ್ಲಿ ಅವಳಡಿಸಲಾಯ್ತು. ಇದರಿಂದಾಗಿ ದ್ರಾವಿಡ ಭಾಷೆಗಳ ಮೇಲೆ ಉತ್ತರ ಭಾರತದ ಹಿಂದಿ ಭಾಷೆಯ ಹೇರಿಕೆಯಾಗಿದೆ ಎನ್ನುವುದು ಗಂಭೀರ ಆರೋಪ. ಸದ್ಯಕ್ಕೆ ಅದನ್ನಿಲ್ಲಿ ಚರ್ಚಿಸುವುದು ಬೇಡ. ಈ ನೀತಿ ನಮ್ಮ ಕಲಿಕಾ ವ್ಯವಸ್ಥೆಯಲ್ಲಿ ಭಾಷೆಗಳನ್ನು ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ ಎಂದು ವಿಂಗಡಿಸುತ್ತದೆ. ಈ ವಿಂಗಡಣೆಯ ಹಿಂದಿರುವ ವ್ಯತ್ಯಾಸವೇನು ಎಂಬುದನ್ನು ಅರ್ಥ ಮಾಡಿಕೊಂಡಾಗ, ಕಾಸರಗೋಡಿನ ಕನ್ನಡದ ವಿದ್ಯಾರ್ಥಿಗಳಿಗೆ ಮಲಯಾಳಂ ಅನ್ನು ಕಡ್ಡಾಯ ಪ್ರಥಮ ಭಾಷೆಯಾಗಿಸಿರುವ ಅಪಾಯ ಅರಿವಾಗುತ್ತದೆ.
ಈ ಲೇಖನ ಓದಿದ್ದೀರಾ?: ಇಡಿ vs ಮಮತಾ | ಟಿಎಂಸಿ ಕಾರ್ಯತಂತ್ರ ಕದಿಯಲು ಬಿಜೆಪಿಯಿಂದ ತನಿಖಾ ಸಂಸ್ಥೆಯ ದುರುಪಯೋಗ?
ನಿರ್ದಿಷ್ಟ ಕಲಿಕಾ ಉದ್ದೇಶಕ್ಕಾಗಿ ಭಾಷೆಗಳನ್ನು ಪ್ರಥಮ, ದ್ವಿತೀಯ, ತೃತೀಯ ಎಂದು ವಿಂಗಡಿಸಲಾಗಿದೆ. ಇದು ಭಾಷೆಗಳ ವರ್ಗೀಕರಣ ಮಾತ್ರವಲ್ಲದೆ, ಕಲಿಕಾ ಪಠ್ಯಕ್ರಮದ ವ್ಯಾಪ್ತಿ, ಉದ್ದೇಶದಲ್ಲೂ ವ್ಯತ್ಯಯವಿರುತ್ತದೆ. ಪ್ರಥಮ ಭಾಷೆಯಲ್ಲಿ ಕೇವಲ ವರ್ಣಮಾಲೆ ಕಲಿಕೆ ಮಾತ್ರವಲ್ಲದೆ, ಪ್ರಾದೇಶಿಕ ಸಾಹಿತ್ಯ, ಸಂಕೀರ್ಣ ಗದ್ಯ, ವಿವರವಾದ ವ್ಯಾಕರಣ, ತಾರ್ಕಿಕ ಸಾಮರ್ಥ್ಯವನ್ನು ವೃದ್ಧಿಸುವಂತಹ ಕೌಶಲ್ಯಗಳಿಗೆ ಕಲಿಕೆಗೆ ಒತ್ತು ನೀಡುವಂತೆ ಪಠ್ಯವನ್ನು ರೂಪಿಸಲಾಗುತ್ತದೆ. ಯಾಕೆಂದರೆ, ಮಾತೃಭಾಷೆಯನ್ನೆ ಪ್ರಥಮ ಭಾಷೆಯಾಗಿ ಮತ್ತು ಕಲಿಕಾ ಮಾಧ್ಯಮವಾಗಿಯೂ (ಪರಿಣಾಮಕಾರಿ ಕಲಿಕೆಗಾಗಿ) ಆಯ್ಕೆ ಮಾಡಿಕೊಳ್ಳುವುದರಿಂದ ಗಣಿತ, ವಿಜ್ಞಾನ, ಸಮಾಜಶಾಸ್ತ್ರದಂತಹ ವಸ್ತುನಿರ್ದಿಷ್ಟ ವಿಷಯಗಳನ್ನು ಗ್ರಹಿಸಲು ಅನುಕೂಲವಾಗುವಂತೆ ಮಕ್ಕಳಲ್ಲಿ ಆ ಪ್ರಥಮ ಭಾಷೆಯ ವೃದ್ಧಿಗೆ ಒತ್ತು ನೀಡಿ ಪಠ್ಯವನ್ನು ರೂಪಿಸಲಾಗುತ್ತದೆ. ಇನ್ನು ದ್ವಿತೀಯ ಭಾಷೆಯಾಗಿ ಕಲಿಸುವ ಭಾಷೆಯ ಪಠ್ಯಕ್ಕೆ ಇಷ್ಟು ಒತ್ತು ಇರುವುದಿಲ್ಲ. ಯಾಕೆಂದರೆ ಅದನ್ನು ವೃತ್ತಿಸಂವಹನ ಭಾಷೆಯಾಗಿ functional grammar, writing (letters/reports), and conversation ಅಂಶಗಳನ್ನು ಆಧರಿಸಿ ಅದರ ಪಠ್ಯಕ್ರಮ ರೂಪಿಸಲಾಗಿರುತ್ತದೆ. ತೃತೀಯ ಭಾಷೆಯನ್ನು, ಭಾಷಾ ವೈವಿಧ್ಯತೆಯ ಭಾರತದ ಒಕ್ಕೂಟದಲ್ಲಿ ಐಕ್ಯತೆ ಸಾಧಿಸುವ ಉದ್ದೇಶದಿಂದ ಪರಿಚಯಿಸಲಾಗಿರುವುದರಿಂದ ಅದರ ಪಠ್ಯ ರಚನೆಗೆ ಇನ್ನೂ ಕಡಿಮೆ ಒತ್ತು ನೀಡಲಾಗಿರುತ್ತದೆ. ಹಾಗಾಗಿಯೇ ಪ್ರಥಮ ಭಾಷೆಯನ್ನು ಕನ್ನಡವಾಗಿ ತೆಗೆದುಕೊಂಡ ವಿದ್ಯಾರ್ಥಿಗೆ ನೀಡಲಾಗುವ ಪಠ್ಯಪುಸ್ತಕವನ್ನೇ, ಅದೇ ತರಗತಿಯಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡ ವಿದ್ಯಾರ್ಥಿಗೂ ನೀಡಲಾಗುವುದಿಲ್ಲ. ಎರಡೂ ಬೇರೆಬೇರೆ. ಯಾಕೆಂದರೆ ಅವುಗಳ ಉದ್ದೇಶವೂ ಬೇರೆಯಾಗಿರುತ್ತದೆ.
ಈಗ ಮಲಯಾಳಂ ಭಾಷಾ ನೀತಿಗೆ ಮರಳೋಣ;
ಸಾರಾಂಶದಲ್ಲಿ, ಬೇರೆಲ್ಲಾ ಒಟ್ಟಾರೆ ವಿಷಯ ಕಲಿಕೆಗೆ ಅಡಿಪಾಯವಾಗುವಂತೆ ಪ್ರಥಮ ಭಾಷೆ ಪಠ್ಯವನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಪ್ರಥಮ ಭಾಷೆಯಾಗಿ ಕಲಿಸುವುದು ಇದೇ ಕಾರಣಕ್ಕೆ. ಯಾವ ಮಾಧ್ಯಮದಲ್ಲಿ ಮಕ್ಕಳು ಕಲಿಯುತ್ತಾರೋ ಅದೇ ಪ್ರಥಮ ಭಾಷೆಯಾಗಿರುವುದು ಕಲಿಕಾ ಅವಶ್ಯಕ. ಅಂತದ್ದರಲ್ಲಿ ನಾವು ಪ್ರಥಮ ಭಾಷೆಯಾಗಿ ಮಲಯಾಳಂ ಅನ್ನು ಕಲಿಸಿ, ಇನ್ನುಳಿದ ವಿಷಯವಸ್ತುಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಯಿರಿ ಎಂದಾಗ, ಆ ವಿಷಯಗಳನ್ನು ಅರಿಯಲು ಬೇಕಾದ ಭಾಷಾ ಅಡಿಪಾಯವೇ ಇಲ್ಲದ ವಿದ್ಯಾರ್ಥಿಗಳು ಅವುಗಳನ್ನು ಗ್ರಹಿಸುವಲ್ಲಿ ಹಿನ್ನಡೆ ಅನುಭವಿಸುವುದಿಲ್ಲವೇ? ಯಾಕೆಂದರೆ ದ್ವಿತೀಯ ಮತ್ತು ತೃತೀಯ ಭಾಷಾ ಪಠ್ಯಗಳನ್ನು ನಮ್ಮ ಸಂವಹನ ಕೌಶಲ್ಯ ಮತ್ತು ಹೆಚ್ಚುವರಿ ಮಾಹಿತಿ ಸಂಗ್ರಹಕ್ಕೆ ಪೂರಕವಾಗಿರುವಂತೆ ರೂಪಿಸಲಾಗಿರುತ್ತದೆಯೆ ಹೊರತು ವಿಷಯಗಳ ಆಳವನ್ನು ಪ್ರವೇಶಿಸಲು ಬೇಕಾಗುವಷ್ಟು ವಿಸ್ತಾರದಿಂದ ರಚಿಸಲಾಗಿರುವುದಿಲ್ಲ. ಆಗ ಕಾಸರಗೋಡಿನ ಕನ್ನಡದ ಮಕ್ಕಳ ಶೈಕ್ಷಣಿಕ ಸಾಮರ್ಥ್ಯ, ಮಲಯಾಳಂ ಮಾಧ್ಯಮಗಳ ಮಕ್ಕಳಿಗಿಂತ ಕುಂಠಿತವಾಗುತ್ತದೆ. ಇದನ್ನು ತಪ್ಪಿಸಲು ಪೋಷಕರು ಕನ್ನಡ ಭಾಷಾ ಮಾಧ್ಯಮದಿಂದ ಮಲಯಾಳಂ ಭಾಷಾ ಮಾಧ್ಯಮಕ್ಕೆ ಒಲವು ತೋರುತ್ತಾರೆ. ಇದು ಮುಂಬರುವ ದಿನಗಳಲ್ಲಿ ಆ ಭಾಗದ ಕನ್ನಡ ಭಾಷೆಯ ನಶಿಸುವಿಕೆಗೆ ಕಾರಣವಾಗಲಿದೆ.
ಇದರಿಂದ ಕೇವಲ ಕಾಸರಗೋಡಿನ ಕನ್ನಡ ಮಕ್ಕಳು ಮಾತ್ರವಲ್ಲದೆ, ಕೇರಳದಲ್ಲಿ ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುವ ಮಕ್ಕಳೂ ಈ ಸೂಕ್ಷ್ಮ ಶೈಕ್ಷಣಿಕ ತೊಳಲಾಟಕ್ಕೆ ಈಡಾಗುತ್ತಾರೆ. ಯಾಕೆಂದರೆ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿತ ಅವರು, ಇನ್ನುಳಿದ ವಿಷಯಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕಾಗುತ್ತದೆ. ಆದರೆ ಈ ಮಕ್ಕಳು ಕಡೇಪಕ್ಷ ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಮತ್ತು ಅವರ ಶೈಕ್ಷಣಿಕ ವಾತಾವರಣವೆ ಇಂಗ್ಲಿಷ್‌ಮಯವಾಗಿರುವುದರಿಂದ ಈ ಒತ್ತಡ ನಿಭಾಯಿಸಿಕೊಳ್ಳಬಲ್ಲರೇನೊ. ಆದರೆ ಭಾಷಾ ಆಯಾಮದಿಂದ ನೋಡಿದಾಗ ಈ ನಿಯಮ ಕಾಸರಗೋಡಿನ ಕನ್ನಡದ ಅವಸಾನಕ್ಕೆ ಕಾರಣವಾಗಬಲ್ಲದು.
ಕಾಸರಗೋಡಿನ ಮಕ್ಕಳು ಪ್ರಥಮ ಭಾಷೆಯಾಗಿ ಕಡ್ಡಾಯ ಮಲಯಾಳಂ ಅನ್ನು ತೆಗೆದುಕೊಂಡ ನಂತರ, ದ್ವಿತೀಯ ಭಾಷೆಯಾಗಿ ಕನ್ನಡವನ್ನು ತೆಗೆದುಕೊಳ್ಳಬಹುದಲ್ಲವೇ? ಆಗ ಸಮಸ್ಯೆ ಬಗೆಹರಿಯುವುದಲ್ಲ! ಆದರೆ ಪರಿಸ್ಥಿತಿ ಇಷ್ಟು ಸರಳವಿಲ್ಲ. ಯಾಕೆಂದರೆ ಜಾಗತೀಕರಣದಿಂದಾಗಿ ಇವತ್ತು ಉದ್ಯೋಗ ಜಗತ್ತು ದೇಶಗಳ ಗಡಿಮೀರಿದೆ. ಇಂಗ್ಲಿಷ್ ಜಾಗತಿಕ ಅನಿವಾರ್ಯ ಭಾಷೆಯಾಗಿದೆ. ಭವಿಷ್ಯದ ದೃಷ್ಟಿಯಿಂದ ಅದರ ಕಲಿಕೆ ಅನಿವಾರ್ಯ. ಮಾತೃಭಾಷೆಯನ್ನೂ ನಿರ್ಲಕ್ಷಿಸಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಇದೇ ಕಾರಣಕ್ಕೆ. ಅಂತದ್ದರಲ್ಲಿ ಕಾಸರಗೋಡಿನ ಮಕ್ಕಳು ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡು, ಇಂಗ್ಲಿಷನ್ನು ತೃತೀಯ ಭಾಷೆಯಾಗಿ ಕಲಿತರೆ, ಅವರ ವೃತ್ತಿಪರ ಭವಿಷ್ಯ ದುಸ್ಥರವಾಗಿರಲಿದೆ. ಒಂದುವೇಳೆ, ಇದನ್ನು ತಪ್ಪಿಸಲು ಅವರು ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಸ್ವೀಕರಿಸಿದರೆ, ಆಗ ಕನ್ನಡ ತೃತೀಯ ಭಾಷೆಗೆ ಜಾರಲಿದೆ. ಅದೂ, ಹಿಂದಿಯನ್ನು ನಿರ್ಲಕ್ಷಿಸುವ ದಿಟ್ಟತೆ ತೋರಿದಾಗ.
ಈ ಪ್ರವೃತ್ತಿ ನಿಧಾನಕ್ಕೆ ಕಾಸರಗೋಡಿನ ಕಲಿಕಾ ಪರಿಸರದಲ್ಲಿ ಕನ್ನಡವನ್ನು ಕ್ಷೀಣಿಸುವಂತೆ ಮಾಡುತ್ತದೆ. ಕಲಿಕೆಯಲ್ಲೇ ಕನ್ನಡವು ತನ್ನ ಪ್ರಭಾವ ಕಳೆದುಕೊಂಡ ನಂತರ, ನೀವು ಸರ್ಕಾರಿ ಪತ್ರ ವ್ಯವಹಾರಕ್ಕೆ ಕನ್ನಡದಲ್ಲಿ ಅವಕಾಶ ಮಾಡಿಕೊಟ್ಟರೂ ಪ್ರಯೋಜನವೇನು? Kerala State Commission for Minorities Act, 2014 ಪ್ರಕಾರ ಕೇರಳದ ಅಲ್ಪಸಂಖ್ಯಾತ ಭಾಷೆಗಳ ರಕ್ಷಣೆಗೆ ಬದ್ಧವಿರುವುದಾಗಿ ಹೇಳಿರುವ ಕೇರಳ ಸರ್ಕಾರದ ಮಾತಿಗೇ ಈ ಭಾಷಾ ನೀತಿ ತದ್ವಿರುದ್ಧವಲ್ಲವೇ? ಭಾರತದ ಭಾಷಿಕ ಅಲ್ಪಸಂಖ್ಯಾತರ ಭಾಷಾ ರಕ್ಷಣೆ ಮತ್ತು ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ ಅವಕಾಶ ಮಾಡಿಕೊಟ್ಟಿರುವ ಸಂವಿಧಾನದ ಆರ್ಟಿಕಲ್ 29 ಮತ್ತು 30 ರ ಮೇಲೆಯೇ ಇದು ಪರೋಕ್ಷ ಪ್ರಹಾರ ಮಾಡಿದಂತಾಗುವುದಿಲ್ಲವೇ? ಮಕ್ಕಳ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲೆ ಲಭ್ಯವಾಗುವಂತೆ ಮಾಡಲು ಸರ್ಕಾರಗಳು ಮುತುವರ್ಜಿ ವಹಿಸಬೇಕೆನ್ನುವ ಆರ್ಟಿಕಲ್ 350ಎ ಅನ್ನು ಇದು ಸವಾಲು ಮಾಡಿದಂತಾಗುವುದಿಲ್ಲವೇ?
ಈ ನಿಟ್ಟಿನಿಂದ ಸಿದ್ದರಾಮಯ್ಯನವರು ತೋರುತ್ತಿರುವ ವಿರೋಧ ಸಮಂಜಸವಾಗಿ ಕಾಣುತ್ತದೆ. ಬಹುಶಃ, ಕೇರಳ ಸರ್ಕಾರ ಇದನ್ನು ರಾಜಕೀಯ ಜಿದ್ದಾಜಿದ್ದಿನ ಭಾಗವಾಗಿ ಮಾತ್ರವಲ್ಲದೇ, ಮಕ್ಕಳ ಕಲಿಕೆಯ ಶೈಕ್ಷಣಿಕ ಆಯಾಮ ಮತ್ತು ತನ್ನದೇ ನೆಲದ ಭಾಷಾ ವೈವಿಧ್ಯತೆಯ ಉಳಿವಿನ ಆಯಾಮದಿಂದ ನೋಡುವುದು ಸೂಕ್ತ. ಮತ್ತು ಹಾಗೆ ನೋಡಲಿದೆ ಎಂದೇ ಆಶಿಸೋಣ.
ಈಗ ಇನ್ನೊಂದು ಪ್ರಶ್ನೆಯನ್ನು ನೋಡೋಣ. ಕೇರಳ ಸರ್ಕಾರ ತನ್ನ ನೆಲದಲ್ಲಿ ತನ್ನ ನಾಡಭಾಷೆಯ ರಕ್ಷಣೆಗೆ ಕೈಗೊಂಡ ಕ್ರಮವನ್ನು ಸಿದ್ದರಾಮಯ್ಯನವರು ವಿರೋಧಿಸಬಹುದೇ? ನಾವು ಇಲ್ಲಿ ನಮ್ಮ ಕನ್ನಡದ ಹಿತದೃಷ್ಟಿಯಿಂದ ಇಂತಹ ನಿರ್ಧಾರ ತೆಗೆದುಕೊಂಡಾಗ ಅನ್ಯಭಾಷಿಕರು ವಿರೋಧ ವ್ಯಕ್ತಪಡಿಸಿದರೆ ನಾವು ಆ ವಿರೋಧಕ್ಕೆ ಮಣೆ ಹಾಕಬೇಕೆ? ಎಂಬ ಪ್ರಶ್ನೆ.
ಈ ಲೇಖನ ಓದಿದ್ದೀರಾ?: ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?
ಬಹುಶಃ, ಸ್ವತಃ ಕೇರಳವೇ ಸಮ್ಮತಿಸಿ ಸ್ವೀಕರಿಸಿರುವ ತನ್ನ ಭಾಷಾವೈವಿಧ್ಯತೆಯನ್ನು ಗ್ರಹಿಸುವಲ್ಲಿ ನಾವು ಸೋತುಹೋದಾಗ ಈತರಹದ ಮೇಲ್‌ಸ್ತರದ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ. 1956ರಲ್ಲಿ ಭಾಷಾ ಆಧಾರದಲ್ಲಿ ರಾಜ್ಯಗಳ ಮರುವಿಂಗಡಣೆಯಾದಾಗ, ಅಲ್ಲಿಯವರೆಗೂ ಮದ್ರಾಸ್ ಪ್ರೆಸೆಡೆನ್ಸಿಯ ಭಾಗವಾಗಿ ಮೈಸೂರು ಸಂಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕಾಸರಗೋಡು ಪ್ರಾಂತ್ಯವನ್ನು ಕೇರಳಕ್ಕೆ ಸೇರಿಸಲು ಆಯೋಗದ ಅಧ್ಯಕ್ಷರಾದ ಫಜಲ್ ಅಲಿಯವರು ಶಿಫಾರಸ್ಸು ಮಾಡುತ್ತಾರೆ. ಆಗ ಅಲ್ಲಿನ ಕನ್ನಡ ಭಾಷಿಕರು ಅದನ್ನು ವಿರೋಧಿಸಿ, ಹೋರಾಟಕ್ಕಿಳಿಯುತ್ತಾರೆ. ಕೊನೆಗೆ ಕೇಂದ್ರ ಸರ್ಕಾರ 1966ರಲ್ಲಿ ನ್ಯಾಯಮೂರ್ತಿ ಮಹಾಜನ್ ಆಯೋಗವನ್ನು ರಚಿಸುತ್ತದೆ. 1967ರಲ್ಲಿ ವರದಿ ನೀಡುವ ಆಯೋಗ ಚಂದ್ರಗಿರಿ ಮತ್ತು ಪಯಸ್ವಿನಿ ನದಿಗಳ ಉತ್ತರ ಭಾಗಕ್ಕಿರುವ ಕಾಸರಗೋಡು ಪ್ರಾಂತ್ಯದಲ್ಲಿ ಕನ್ನಡ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆ ಭಾಗವನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಶಿಫಾರಸ್ಸು ಮಾಡುತ್ತದೆ. ಕೇರಳ ಸರ್ಕಾರ ಇದನ್ನು ಒಪ್ಪುವುದಿಲ್ಲ. 1956ರ ಭಾಷಾ ವಿಂಗಡಣೆಯೇ ಅಂತಿಮ ಎಂದು ವಾದಿಸುತ್ತದೆ. ಪ್ರತಿಯಾಗಿ ಕರ್ನಾಟಕ (ಅಂದಿನ ಮೈಸೂರು ರಾಜ್ಯ) ಮಹಾಜನ್ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಕೇಂದ್ರದ ಮೇಲೆ ಒತ್ತಡ ತರುತ್ತದೆ. ಆದರೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಎಂದು ಕೇಂದ್ರ ಸರ್ಕಾರ ಕೈಚೆಲ್ಲುತ್ತದೆ. ಕೇವಲ ಕಾಸರಗೋಡು ಮಾತ್ರವಲ್ಲದೆ, ಮದ್ರಾಸ್ ರಾಜ್ಯದ ತಮಿಳು ಭಾಷಿಕರು ನೆಲೆಸಿದ್ದ ಪಾಲಕ್ಕಾಡ್, ಇಡುಕ್ಕಿ, ವಾಯನಾಡಿನ ಕೆಲವು ಭಾಗಗಳಲ್ಲೂ ಕೇರಳ ಇಂತದ್ದೇ ವಿವಾದ ಎದುರಿಸುತ್ತಿತ್ತು.
1984ರಲ್ಲಿ ಕೇರಳ ಸರ್ಕಾರವು ಈ ಪ್ರದೇಶಗಳನ್ನು ತಮ್ಮ ಭಾಷಿಕ ಅಲ್ಪಸಂಖ್ಯಾತ ಪ್ರದೇಶಗಳೆಂದು ಗುರುತಿಸಿ, ಅಲ್ಲಿನ ಜನರ ಭಾಷೆಯ ರಕ್ಷಣೆಗೆ ವಿಶೇಷ ಸವಲತ್ತುಗಳನ್ನು, ವಿನಾಯ್ತಿಗಳನ್ನು, ಅನುದಾನಗಳನ್ನು ನೀಡುವ ಭರವಸೆ ನೀಡಿ, ಆ ಜನರ ವಿಶ್ವಾಸ ಗಳಿಸಿಕೊಂಡು ಅವುಗಳನ್ನು ಕೇರಳದ ಅಧಿಕೃತ ಜಿಲ್ಲೆಗಳಾಗಿ ಘೋಷಿಸಿಕೊಳ್ಳುತ್ತದೆ. ಕರ್ನಾಟಕದಿಂದ ದೊಡ್ಡ ಪ್ರತಿರೋಧ ವ್ಯಕ್ತವಾಗುವುದಿಲ್ಲ. ಹಾಗೆ ಆ ಜನರಿಗೆ ನೀಡಿದ್ದ ಭವವಸೆ, ವಿಶೇಷ ಸವಲತ್ತುಗಳ ಆಶ್ವಾಸನೆಯೇ ಇವತ್ತು ಕೇರಳ ಸರ್ಕಾರದ ಕ್ರಮವನ್ನು ಪ್ರಶ್ನೆ ಮಾಡಲು ಕನ್ನಡಿಗರಿಗೆ ಅವಕಾಶ ಮಾಡಿಕೊಟ್ಟಿರುವುದು. ಕೇರಳ ಸರ್ಕಾರಕ್ಕೂ ಈ ಮಿತಿ ತಿಳಿದಿರುವುದರಿಂದಲೇ ತನ್ನ ಹೊಸ ನೀತಿಯಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ಜನರಿಗೆ ವಿಶೇಷ ವಿನಾಯ್ತಿಗಳನ್ನು ನೀಡಿದೆ. ಇಲ್ಲವಾದಲ್ಲಿ, ಸಮಗ್ರ ಕೇರಳಕ್ಕೆ ಒಂದೇ ನೀತಿಯನ್ನು ಜಾರಿ ಮಾಡಬಹುದಿತ್ತಲ್ಲವೇ? ಕನ್ನಡ ಮತ್ತು ತಮಿಳು ಭಾಷಿಕ ಪ್ರದೇಶಗಳಿಗೆ ಈ ವಿನಾಯ್ತಿಗಳನ್ನು ಘೋಷಿಸುವ ಅಗತ್ಯವೇನಿತ್ತು?
ಆದರೆ ಆ ವಿನಾಯ್ತಿಗಳು ಸದ್ಯಕ್ಕೆ ಅನುಕೂಲಕರವೆಂಬಂತೆ ಕಂಡುಬಂದರೂ ಭವಿಷ್ಯದಲ್ಲಿ ಮಕ್ಕಳ ಕಲಿಕಾ ವ್ಯವಸ್ಥೆಯ ಮೂಲಕ ಆ ಭಾಷೆಯ ಕ್ಷೀಣಿಸುವಿಕೆಗೇ ಕಾರಣವಾಗುವ ಸಾಧ್ಯತೆ ಇರುವುದರಿಂದ, ಭಾಷೆಗಳ ಉಳಿಯುವಿಕೆಯ ಆಸಕ್ತಿ ಇರುವವರು ಇದನ್ನು ಪ್ರಶ್ನಿಸಲೇಬೇಕಾಗುತ್ತದೆ. ಈ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದೆ ಅನ್ಯಭಾಷಾ ಸಂಘಟನೆಗಳ ಪುಂಡಾಟಿಕೆಯ ವರ್ತನೆಗಳಿಗೆ, ಸಿದ್ದರಾಮಯ್ಯನವರ ವಿರೋಧವನ್ನು ಹೋಲಿಸಲು ಮುಂದಾಗುವುದು ಸರಿಯಲ್ಲ. ಅಲ್ಪಸಂಖ್ಯಾತ ಭಾಷೆಗಳನ್ನು ರಕ್ಷಣೆ ಮಾಡುತ್ತೇನೆ ಎಂದು ತಾನೇ ಒಪ್ಪಿಕೊಂಡ ಕೇರಳ ಸರ್ಕಾರವು ತನ್ನ ಬದ್ಧತೆಗೆ ವಿರುದ್ಧವಾಗುವಂತಹ ಕ್ರಮ ಕೈಗೊಂಡಾಗ ಪ್ರಶ್ನೆ ಮಾಡುವುದು ಕೇವಲ ಸಿದ್ದರಾಮಯ್ಯನವರ ಹೊಣೆ ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗರ ಜವಾಬ್ಧಾರಿಯಾಗುತ್ತದೆ.
ಆರಂಭದಲ್ಲೇ ಹೇಳಿದಂತೆ, ಆರೋಪ-ಪ್ರತ್ಯಾರೋಪಗಳ ರಾಜಕಾರಣವನ್ನು ಹೊರಗಿಟ್ಟು ನಾವು ಈ ವಿವಾದವನ್ನು ಗ್ರಹಿಸುವುದು ಉತ್ತಮ. ಯಾಕೆಂದರೆ ಇದು ಭೌಗೋಳಿಕ ವಿವಾದದ ಪ್ರಶ್ನೆಯಲ್ಲ; ನೆಲದ ಭಾಷೆಯ ಉಳಿವಿನ ಪ್ರಶ್ನೆ; ಮಕ್ಕಳ ಕಲಿಕೆಯ ಪ್ರಶ್ನೆ.




