ಒಂದು ಕಾಲದಲ್ಲಿ ದೀರ್ಘಕಾಲೀನ ನಿರುದ್ಯೋಗ, ವಲಸೆ, ಬಡತನವೇ ಅತಿಯಾಗಿದ್ದ ಗ್ರಾಮೀಣ ಭಾರತದಲ್ಲಿ ಬಡವರನ್ನು ಮುಖ್ಯವಾಗಿಟ್ಟುಕೊಂಡು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ‘ಮನರೇಗಾ’, ಕೆಲಸದ ಜೊತೆಗೆ ಬದುಕಿನ ಭರವಸೆಯನ್ನೂ ನೀಡಿತ್ತು. ಗ್ರಾಮೀಣ ಮಹಿಳೆಯರಿಗೆ, ದಲಿತರಿಗೆ, ಬಡ ಕೂಲಿ ಕಾರ್ಮಿಕರಿಗೆ ಆರ್ಥಿಕ ಬಲದ ಜತೆಗೆ ಘನತೆಯಿಂದ ಬದುಕುವ ಮಾರ್ಗ ತೋರಿಸಿತ್ತು. ಆದರೆ ಈಗ ಆ ಕಾಯ್ದೆಯನ್ನು ಬುಡಮೇಲು ಮಾಡಿ ಬಿಜೆಪಿ ಸರ್ಕಾರ ಹೇರಲು ಹೊರಟಿರುವ ವಿಬಿ-ಜಿ ರಾಮ್‌ಜಿ ಕಾಯ್ದೆಯು ಬಡವರ ಬದುಕುವ ಹಕ್ಕನ್ನೇ ಕಸಿಯುತ್ತಿದೆ.
ಬದಲಾವಣೆಗಳ ಹೆಸರಿನಲ್ಲಿ ಯೋಜನೆಯನ್ನು ಸಂಕೀರ್ಣಗೊಳಿಸುವ ಪ್ರಯತ್ನಗಳು, ಗ್ರಾಮೀಣ ಬದುಕನ್ನು ಮತ್ತೆ ಅನಿಶ್ಚಿತತೆಯ ಅಂಚಿಗೆ ತಳ್ಳುತ್ತಿವೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಅಭಿವೃದ್ಧಿ ಹೆಸರಿನ ಲೇಪನವಿರುವ ರಾಜಕೀಯ ಶಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ ಎನ್ನುವ ಗಂಭೀರ ಆರೋಪಗಳು ಹೆಚ್ಚಾಗುತ್ತಿವೆ.
ಮನರೇಗಾ ಭಾರತದ ಗ್ರಾಮೀಣ ಬದುಕಿಗೆ ಹೇಗೆ ಊರುಗೋಲಾಗಿತ್ತು ಎನ್ನುವುದನ್ನು ತಿಳಿಯಲು ʼದ ಇಂಡಿಯನ್ ಎಕ್ಸ್‌ಪ್ರೆಸ್ʼ ಹೇಳಿರುವ ಒಂದು ಚಿಕ್ಕ ಕತೆ ಕೇಳಬೇಕಾಗಿದೆ…
“ನನಗೀಗ 60 ವರ್ಷ ದಾಟಿದೆ. ಆದರೂ ಮನರೇಗಾ ಇಂದ ಸಿಗುವ ಕೆಲಸಗಳಿಗೆ ಹೋಗುವುದರಿಂದ ಹಿಂದೆ ಬಿದ್ದಿಲ್ಲ. ಈ ಯೋಜನೆ ನನ್ನ ಬದುಕಿನ ದಿಕ್ಕನ್ನೇ ಬದಲಿಸಿದೆ. ಎಂಎನ್‌ಆರ್‌ಇಜಿಎಸ್ ಮೂಲಕ ಸಿಕ್ಕ ನಿರಂತರ ಕೂಲಿ ಹಾಗೂ ಆದಾಯದಿಂದ ನನ್ನ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಸಾಧ್ಯವಾಯಿತು. ಜೀವನಕ್ಕೂ ಆಸರೆಯಾಗಿದ್ದ ಇದೇ ಹಣದಿಂದ ನನ್ನ ಹಿರಿ ಮಗನನ್ನು ಕಾಲೇಜಿಗೆ ಸೇರಿಸಿದೆ. ಈಗವನು ಅಂತಪುರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಸ್ಥ. ಇದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸುಧಾರಿಸಿದೆ. ಅಲ್ಲದೆ ನನ್ನ ಮೊಮ್ಮಗಳು ಹೈದರಾಬಾದಿನ ಎಂಬಿಬಿಎಸ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾಳೆ. ಇದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ. 20 ವರ್ಷಗಳ ಹಿಂದೆ ನಮ್ಮದು ಖಾಲಿ ಕೈ. ಆ ಬರಿಕೈ ತುಂಬಲು ಈ ಕಾಯ್ದೆಯೇ ಮುಖ್ಯ ಕಾರಣ…” ಇದು ದೇಶದ ಮೊದಲ ಮನರೇಗಾ (MNREGS) ಜಾಬ್ ಕಾರ್ಡ್ ಪಡೆದ ಮೊದಲ ಮಹಿಳೆ, ಆಂಧ್ರಪ್ರದೇಶದ ಬಂಡ್ಲಪಲ್ಲಿಯ ನಿವಾಸಿ ಸಿ.ಪೆದ್ದಕ್ಕ ಅವರ ಹೆಮ್ಮೆಯ ಮಾತು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGS) ಆರಂಭವಾದ ಬಂಡ್ಲಪಲ್ಲಿ ಗ್ರಾಮ ಇಂದು ಸಾಕಷ್ಟು ಬದಲಾವಣೆ ಕಂಡಿದೆ. ಗುಡಿಸಲು, ಕಚ್ಚಾ ಮನೆ ಹಾಗೂ ಬತ್ತಿದ ಹೊಲಗಳಿಂದ ಕೂಡಿದ್ದ ಈ ಗ್ರಾಮದಲ್ಲಿ ಈಗ ಆಕರ್ಷಕ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಪಕ್ಕಾ ಮನೆಗಳು, ಮನೆ ಬಾಗಿಲಲ್ಲೇ ಕುಡಿಯುವ ನೀರಿನ ಟ್ಯಾಪ್‌ಗಳು, ಟ್ರಾಕ್ಟರ್‌ಗಳು ಮತ್ತು ಮೋಟರ್ ಸೈಕಲ್‌ಗಳಿಂದ ತುಂಬಿರುವ ಬೀದಿಗಳು ಕಾಣಿಸುತ್ತವೆ. ಅಲ್ಲದೆ ಮಾವು, ಆರ್ಕಿಡ್, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳ ಹೊಲಗಳು ಹಾಗೂ ಸಣ್ಣ ಹಾಲು ಉತ್ಪಾದನಾ ಘಟಕಗಳೂ ಗ್ರಾಮದಲ್ಲಿವೆ.
38 ವರ್ಷದ ನಾಗಲಕ್ಷ್ಮಿ ಅವರು, “ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವುದು, ಮನೆ ದುರಸ್ತಿ, ಮೊಬೈಲ್ ಖರೀದಿ ಇವೆಲ್ಲವೂ ಎಂಎನ್‌ಆರ್‌ಇಜಿಎಸ್ ಕೆಲಸಗಳಿಂದ ಬಂದ ಹಣದಿಂದ ಸಾಧ್ಯವಾಗಿದೆ. ಕೆಲಸದ ದಿನಗಳು ಹೆಚ್ಚಾದರೆ ನಮಗೆ ಇನ್ನೂ ಉತ್ತಮ” ಎಂದು ಅವರು ಹೇಳುತ್ತಾರೆ. 45 ವರ್ಷದ ಸಿ. ಚಂದ್ರಕಲಾ, “125 ದಿನ ಕೆಲಸ ಖಚಿತ ಎಂದರೆ ಸಂತೋಷ. ಆದರೆ ಅದನ್ನು 150 ದಿನ ಮಾಡಿದರೆ ಇನ್ನೂ ಒಳ್ಳೆಯದು” ಎನ್ನುತ್ತಾರೆ. ಕಡಿಮೆ ಮೊತ್ತದಿಂದ ಇಂದು ಲಕ್ಷದವರೆಗೆ ಸಾಲ ಪಡೆದು ಈ ದುಡಿಮೆಯಿಂದ ಬರುವ ಆದಾಯದಿಂದಲೇ ತಮ್ಮ ಸಾಲದ ಕಂತನ್ನು ಪಾವತಿಸುತ್ತಿದ್ದೇವೆ ಎನ್ನುವುದು ಹಲವು ಮಹಿಳೆಯರ ಮಾತು.
32 ವರ್ಷದ ಬಿ. ಶಿವರೆಡ್ಡಿ ಅವರು ಗ್ರಾಮದ ಮೊದಲ ಮಾವಿನ ತೋಟದ ಮಾಲೀಕರು. ʼಎಂಎನ್‌ಆರ್‌ಇಜಿಎಸ್ ಕೂಲಿಯಿಂದ ನಮ್ಮ ಮನೆ ರಿಪೇರಿ ಮಾಡಲಾಯಿತು, ನನಗೆ ಶಿಕ್ಷಣ ದೊರೆಯಿತು. ಈಗ 3.5 ಎಕರೆ ತೋಟದಿಂದ ಕಳೆದ ವರ್ಷ ₹3.5 ಲಕ್ಷ ಆದಾಯ ಸಿಕ್ಕಿತುʼ ಎನ್ನುತ್ತಾರವರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ. ವೆಂಕಟ ನಾರಾಯಣಮ್ಮ ಅವರ ಪ್ರಕಾರ, ಈ ಯೋಜನೆಯಿಂದ ಗ್ರಾಮದಿಂದ ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಕೋವಿಡ್ ಸಮಯದಲ್ಲಿ ಹಲವರು ಊರಿಗೆ ಮರಳಿದ್ದಾರೆ. ಆರ್ಥಿಕ ಸುಧಾರಣೆಯಿಂದ ಹಿಂಸಾತ್ಮಕ ಘರ್ಷಣೆಗಳೂ ಕಡಿಮೆಯಾಗಿವೆ. ಇದೆಲ್ಲವೂ ಮನರೇಗಾ ತಂದ ಮಹತ್ವದ ಬದಲಾವಣೆಗಳು.
ಇದು ಕೇವಲ ಪಕ್ಕದ ಆಂಧ್ರದ ಕತೆಯಲ್ಲ. ನಮ್ಮದೇ ರಾಜ್ಯದ ಉತ್ತರ ಭಾಗದ ಮನರೇಗಾ ಕೂಲಿ ನಂಬಿ ಬದುಕುತ್ತಿರುವ ಹಲವರ ಕತೆ.
ಆದರೆ ಇದೇ ಕಾಯ್ದೆ ಇಂದು ಹೊಸ ರೂಪದಲ್ಲಿ ವಿಬಿ-ಜಿ ರಾಮ್ ಜಿ ಹೆಸರಿನಲ್ಲಿ ಪುನರ್ ಆಕಾರ ಪಡೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಗ್ರಾಮೀಣ ವಾಸಿಗಳ ಹಸನಾಗಿದ್ದ ಬದುಕಿನಲ್ಲಿ ಮತ್ತೆ ಮಸುಕು ಸವರುತ್ತಿದೆ. ಒಂದೊಂದೇ ಹೆಜ್ಜೆ ಇಟ್ಟು ದೊಡ್ಡ ಬೆಟ್ಟ ಹತ್ತಿನಿಂತಿದ್ದ ಮನರೇಗಾ, ಹಳ್ಳಕ್ಕೆ ತಳ್ಳಲ್ಪಡುವ ಭೀತಿ ಎದುರಿಸುತ್ತಿದೆ. ಮನರೇಗಾ ಒಂದು ಕಾಯಿದೆ ಆಗಿದ್ದರಿಂದ ಜನರಿಗೆ ಹಕ್ಕಿನ ಭರವಸೆ ನೀಡುತ್ತಿತ್ತು. ಅಗತ್ಯವಿರುವ ಕಡೆ ಸರ್ಕಾರ ಒದಗಿಸಲೇಬೇಕಿತ್ತು. ಆದರೆ, ರಾಮ್ ಜಿ ಕತೆಯೇ ಬೇರೆ. ಬೇಡಿಕೆ ಆಧಾರಿತ ಉದ್ಯೋಗದಿಂದ ʼಅಗತ್ಯ ಆಧಾರಿತʼ ಕೆಲಸಗಳೆಡೆಗೆ ಸಾಗುತ್ತಿರುವುದು, ಉದ್ಯೋಗ ಖಾತರಿಯ ಆತ್ಮವನ್ನೇ ದುರ್ಬಲಗೊಳಿಸುತ್ತಿದೆ. ಬದಲಾದ ನಿಯಮಗಳು ಮನರೇಗಾ ಕೊಟ್ಟಿದ್ದ ಹಕ್ಕಿನ ಸ್ವರೂಪವನ್ನು ನಿಧಾನವಾಗಿ ಕಳಚುತ್ತಿದೆ.
ಇದನ್ನೂ ಓದಿ: ದಲಿತ-ಮಹಿಳೆಯರಿಗೆ ಘನತೆಯ ಹಕ್ಕು ಕೊಟ್ಟ ʼಮನರೇಗಾʼ; ಹಕ್ಕಿನ ಬೇರು ಕಿತ್ತ ʼವಿಬಿ-ಜಿ ರಾಮ್‌ಜಿʼ
ಹೊಸ ವ್ಯವಸ್ಥೆಯಲ್ಲಿ ಕೇಂದ್ರ–ರಾಜ್ಯಗಳ ನಡುವಿನ ಅನುದಾನ ಹಂಚಿಕೆ 60:40 ಆಗಿರುವುದು ರಾಜ್ಯಗಳಿಗೆ ಭಾರೀ ಒತ್ತಡ ತಂದಿದೆ. ಆರ್ಥಿಕವಾಗಿ ದುರ್ಬಲ ರಾಜ್ಯಗಳು ತಮ್ಮ ಪಾಲಿನ ಹಣವನ್ನು ಸಮಯಕ್ಕೆ ಸರಿಯಾಗಿ ಒದಗಿಸಲಾಗದೆ ಇದ್ದರೆ, ಅದರ ಪರಿಣಾಮ ನೇರವಾಗಿ ಕಾರ್ಮಿಕರ ಮೇಲೆ ಬೀಳುತ್ತದೆ. ಕೆಲಸ ಇದ್ದೂ ವೇತನವಿಲ್ಲದ ಸ್ಥಿತಿ ಈಗಾಗಲೇ ಹಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಇದು ಮನರೇಗಾ ಮೂಲಕ ಕಟ್ಟಿಕೊಂಡಿದ್ದ ಗ್ರಾಮೀಣ ಆರ್ಥಿಕ ಚಕ್ರವನ್ನು ನಿಧಾನವಾಗಿ ಮುರಿಯುವ ಪ್ರಕ್ರಿಯೆಯಾಗಿದೆ. ಯೋಜನೆಯ ಹೆಸರನ್ನು ಬದಲಿಸುವುದು, ಅದರ ಇತಿಹಾಸವನ್ನು ಮರೆಮಾಡುವ ಪ್ರಯತ್ನ, ಮತ್ತು ಕಾಂಗ್ರೆಸ್‌ನ ಜನಪರ ಯೋಜನೆಗಳ ಪರಂಪರೆಯನ್ನು ಅಳಿಸಿ ಹಾಕುವ ರಾಜಕೀಯ ಉದ್ದೇಶಗಳು ಅಭಿವೃದ್ಧಿಗಿಂತ ರಾಜಕೀಯ ಲಾಭವನ್ನೇ ಮುಖ್ಯವಾಗಿಸಿಕೊಂಡಿರುವ ನಿಲುವಿನ ಸೂಚನೆಗಳು. ವಿಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅನುದಾನ ವಿಳಂಬ ಮಾಡುವುದೇ ಈ ನಿಲುವಿಗೆ ಸ್ಪಷ್ಟ ಉದಾಹರಣೆ. ಯೋಜನೆಯ ಜಾರಿಗೆ ತಾಂತ್ರಿಕ ಅಡ್ಡಿ, ಆಡಳಿತಾತ್ಮಕ ಕಠಿಣತೆ, ಮನರೇಗಾದಡಿ ಕೆಲಸ ಮಾಡುವವರೇ ಇಲ್ಲ ಎಂಬಿತ್ಯಾದಿ ಕೇಂದ್ರ ಸರ್ಕಾರ ನೀಡಿರುವ ಕಾರಣಗಳೆಲ್ಲವೂ ಹುಸಿಯೇ. ಜನಪರವಾಗಿದ್ದದ್ದೇ ಆಗಿದ್ದರೆ, ಇರುವ ಯೋಜನೆಗೆ ಅಗತ್ಯವಿರುವ ಬಲ ತುಂಬಬಹುದಿತ್ತು. ಈ ಎಲ್ಲ ಬೆಳವಣಿಗೆಗಳು ವಿಬಿ–ಜಿ ರಾಮ್ ಜಿಯನ್ನು ಎದುರಾಳಿಗಳನ್ನು ಮಟ್ಟಹಾಕಲು ಕೇಂದ್ರ ಒಂದು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ರಾಜಕೀಯ ವಿರೋಧಿಗಳನ್ನು ದುರ್ಬಲಗೊಳಿಸುವ ತಂತ್ರ ಎಂಬ ಆರೋಪಗಳಿಗೆ ಬಲ ನೀಡುತ್ತವೆ.
ಮನರೇಗಾವನ್ನು ಕಾಯಿದೆಯಾಗಿ ರೂಪಿಸಿದ್ದರಿಂದಲೇ ಅದು ಬಡವರ ಹಕ್ಕಾಗಿತ್ತು. ಆದರೆ ವಿಬಿ–ಜಿ ರಾಮ್ ಜಿ ರೂಪದಲ್ಲಿ ಅದನ್ನು ಆಡಳಿತಾತ್ಮಕ ಯೋಜನೆಯ ಮಟ್ಟಕ್ಕೆ ಇಳಿಸುವ ಪ್ರಯತ್ನಗಳು, ಈ ಹಕ್ಕನ್ನು ಕಿತ್ತುಕೊಳ್ಳುತ್ತಿರುವಂತೆ ಕಾಣುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಈ ಬದಲಾವಣೆಗಳು ನಿಜವಾಗಿ ಬಡವರ ಬದುಕಿಗೆ ಬದಲಾಗಿ ಕೇಂದ್ರದ ರಾಜಕೀಯ ಲಾಭವನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎನಿಸುತ್ತಿದೆ. ಮನರೇಗಾ ಉಳಿಯಬೇಕಾದರೆ, ಅದು ಕಾಯಿದೆಯಾಗಿ, ಹಕ್ಕಿನ ಭರವಸೆಯೊಂದಿಗೆ ಉಳಿಯಬೇಕು. ಇಲ್ಲವಾದರೆ ಬಂಡ್ಲಪಲ್ಲಿಯಂತಹ ಸಾವಿರಾರು ಕಥೆಗಳು ಮತ್ತೆ ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗುವ ಅಪಾಯವಿದೆ. ರಾಜಕೀಯ ಲಾಭಕ್ಕಾಗಿ ಜನರ ಬದುಕನ್ನು ಪಣಕ್ಕಿಡುವ ಪ್ರಯತ್ನವನ್ನು ದೇಶ ಮೌನವಾಗಿ ನೋಡುತ್ತ ಕೂರಕೂಡದು. ಮನರೇಗಾವನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುವ ಬದಲು, ಗ್ರಾಮೀಣ ಭಾರತದ ಜೀವಾಳವಾಗಿ ಉಳಿಸಿಕೊಳ್ಳುವುದೇ ದೇಶದ ಭವಿಷ್ಯಕ್ಕೆ ಅಗತ್ಯ.





