ಪತ್ರಿಕೆಯೊಂದರ ಸಂದರ್ಶನದಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರು “26 ಮಠಾಧೀಶರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಮನವಿ ಸಲ್ಲಿಸಿದ್ದಾರೆ” ಎಂದು ಹೇಳಿದ್ದಾರೆ. ಇವರಾಗಿಯೇ ಆಮಂತ್ರಿಸಿದ್ದಾರೋ ಅಥವಾ ಮಠಮಾನ್ಯಗಳೇ ಆಸಕ್ತಿ ವಹಿಸಿವೆಯೇ ಎಂಬುದು ಕನ್ನಡಿಗರಿಗೆ ಅರ್ಥವಾಗದ ಸಂಗತಿಯೇನಲ್ಲ.
ಈ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಪರಿಷತ್‌ಗೆ ಆರಿಸಿ ಬಂದ ಸಾಹಿತ್ಯೇತರ ಸರ್ಕಾರಿ ವ್ಯಕ್ತಿಗಳು ಜಾತಿ ಬಲ, ಅಧಿಕಾರ ಬಲ, ಹಣ ಬಲ ಇತ್ಯಾದಿ ಲಾಬಿಗಳನ್ನು ನಡೆಸಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾಯಿತರಾಗಿ ಬರುವ ಪ್ರಕ್ರಿಯೆಯೇ ನಮ್ಮ ಕಾಲದ ಕೆಟ್ಟ ನೀತಿಯಾಗಿದೆ. ಇಂತಹ ದುರಂತದ ಕಾಲದಲ್ಲಿ ನಾವು ಅಂತಹ ಮಹನೀಯರಿಂದ ನಿರೀಕ್ಷೆಗಳನ್ನಿಟ್ಟುಕೊಳ್ಳುವುದೇ ಹಾಸ್ಯಾಸ್ಪದ. ಇನ್ನು ಈಗಿನ ಅಧ್ಯಕ್ಷ ಆರೆಸ್ಸೆಸ್ ಕೃಪಾಪೋಷಿತ ನಾಟಕ ಕಂಪನಿಯ ಮರಿ ನಟನೆಂಬುದು ಕನ್ನಡಿಗರಿಗೆ ಗೊತ್ತಿಲ್ಲವೇ?
ಇವರು ಕಸಾಪಕ್ಕೆ ಬಂದು ವಕ್ಕರಿಸಿದ ದಿನದಿಂದ ಒಂದಲ್ಲಾ ಒಂದು ವಿವಾದಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ. ಹಾವೇರಿಯಲ್ಲಿ ನಡೆದ ಸಮ್ಮೇಳನವನ್ನು ನೆನಪಿಸಿಕೊಳ್ಳಿ, ಅವರ ಸೈದ್ಧಾಂತಿಕ ನಿಲುವುಗಳು ಸಾಹಿತ್ಯದ ಒಳಗೊಳ್ಳುವ ಭಾಷೆಗೆ ಒಗ್ಗುವ ಗುಣವುಳ್ಳದ್ದಲ್ಲ. ಸಾಹಿತ್ಯ ಪರಿಷತ್ತಿನ ಎಲ್ಲ ನಿಯಮ ಕಾನೂನುಗಳನ್ನು ಕೇಂದ್ರೀಕರಣಗೊಳಿಸುವ ಸರ್ವಾಧಿಕಾರಿ ಪ್ರಯತ್ನಗಳನ್ನು ಸಾಬೀತುಗೊಳಿಸಿದ್ದಾಗಿದೆ. ಈ ಬಾರಿಯ ಮಂಡ್ಯದಲ್ಲಿ ನಡೆಯುವ 87 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮುಂಚೆಯೇ ಸಮ್ಮೇಳನಾಧ್ಯಕ್ಷರು ಸಾಹಿತ್ಯೇತರರಾಗಿರಬಾರದೇಕೆ? ಎಂಬ ಹೇಳಿಕೆ ನೀಡಿ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಸಂಯುಕ್ತ ಕರ್ನಾಟಕ ನಡೆಸಿದ ಅವರ ಸಂದರ್ಶನದಲ್ಲಿ 26 ಮಠಾಧೀಶರುಗಳು (ಸರ್ವಾಧ್ಯಕ್ಷತೆಗೆ) ಮನವಿ ಸಲ್ಲಿಸಿದ್ದಾರೆಂಬ ಮಾತನ್ನು ಹೇಳಿದ್ದಾರೆ. ಇವರಾಗಿಯೇ ಆಮಂತ್ರಿಸಿದ್ದಾರೋ ಅಥವಾ ಮಠಮಾನ್ಯರುಗಳೇ ಆಸಕ್ತಿ ವಹಿಸಿದ್ದಾರೋ ಎಂಬುದು ಕನ್ನಡಿಗರಿಗೆ ಅರ್ಥವಾಗದ ಸಂಗತಿಯೇನಲ್ಲ. ಆದರೆ ಸಂದರ್ಶಕ ಕೇಳಿದ ಎಲ್ಲ ಪ್ರಶ್ನೆಗಳಿಗೂ ನೇರವಾಗಿ ಉತ್ತರಿಸದೇ ಅಡ್ಡಗೋಡೆಯ ಮೇಲೆ ದೀಪವಿಡುವ ಚತುರ ಜೋಶಿ ಈಗಾಗಲೇ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಿರಲೂಬಹುದು. ಬಹಿರಂಗಪಡಿಸದೇ ಚರ್ಚೆ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ಎಂಬ ನಡೆಯಿದು. ಹಿಂದೆ ದೊಡ್ಡರಂಗೇಗೌಡರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಿಸಿದಾಗಲೂ ಇಂತಹುದೇ ಚರ್ಚೆ ಆಗಿತ್ತು. ಈಗಲೂ ಗಂಟಲು ಹರಿದುಕೊಳ್ಳುವವರು ಹರಿದುಕೊಳ್ಳಲಿ, ತನಗೇನು ಎಂಬ ದುರಹಂಕಾರ ಅವರ ಧೋರಣೆಯಲ್ಲಿದೆ.
ಇದನ್ನೂ ಓದಿ ಕರ್ನಾಟಕದಲ್ಲಿ ಸಾಹಿತಿಗಳಿಗೆ ಬರವಿದೆಯೇ? ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಯೇ ಅಧ್ಯಕ್ಷರಾಗಲಿ; ಚಿಂತಕರ ಒತ್ತಾಯ
ಈ ಚರ್ಚೆಯ ಪರಿಣಾಮಗಳೇನೇ ಇರಲಿ ಈ ಬಾರಿಯಾದರೂ ಮಹಿಳಾ ಪ್ರತಿನಿಧೀಕರಣಕ್ಕೆ ಆದ್ಯತೆ ನೀಡಿ. ಕನ್ನಡ ನಾಡು ನುಡಿಗಾಗಿ ದುಡಿದ ಹಿರಿಯ ಡಾ. ಮಾಲತಿ ಪಟ್ಟಣಶೆಟ್ಟಿ, ಡಾ. ವೀಣಾ ಶಾಂತೇಶ್ವರ, ಸಬಿಹಾ ಭೂಮಿಗೌಡ ಮುಂತಾದ ಅನೇಕ ಲೇಖಕಿಯರಿದ್ದಾರೆ. ದನಿಯೇ ಇರದ ತಳಸಮುದಾಯದ ಸಾಹಿತಿಗಳಿದ್ದಾರೆ. ಅಂಥವರಿಗೆ ಅವಕಾಶ ಸಿಗುವಂತಾಗಬೇಕು. ನುಡಿಜಾತ್ರೆ ರಾಜಕೀಯದ ವೇದಿಕೆಯಾಗಬಾರದು. ಮಠಾಧೀಶರುಗಳಿಗೆ, ರಾಜಕಾರಣಿಗಳಿಗೆ, ಕಾರ್ಪೊರೇಟ್ ಧಣಿಗಳಿಗೆ ಬೇರೆ ವೇದಿಕೆಗಳಿವೆ. ಸಾಹಿತ್ಯದ ವೇದಿಕೆಯನ್ನು ರಾಡಿಗೊಳಿಸುವ ಈ ಹುನ್ನಾರ ಖಂಡಿತವಾಗಿ ಬೇಡ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




