‘ಆಳಂದ’ ಕ್ಷೇತ್ರದಲ್ಲಿ ಭಾರೀ ಮತ ಕಳ್ಳತನ; ಸಿಐಡಿ ತನಿಖೆಗೆ ಸ್ಪಂದಿಸದ ಚುನಾವಣಾ ಆಯೋಗ!

Date:

ಸಿಐಡಿ ಅಧಿಕಾರಿಗಳು ಪದೇಪದೇ ಪತ್ರಗಳನ್ನು ಬರೆದರೂ ಕೆಲವು ಮಹತ್ವದ ದಾಖಲೆಗಳನ್ನು ಚುನಾವಣಾ ಆಯೋಗ ಒದಗಿಸುತ್ತಿಲ್ಲ. "ಯಾರೋ ಒಬ್ಬರು ಅರ್ಜಿ ಸಲ್ಲಿಸುತ್ತಾರೆ, ಇನ್ನಾರದೋ ಹೆಸರನ್ನು ಮತಪಟ್ಟಿಯಿಂದ ಕೈಬಿಡಲಾಗುತ್ತದೆ!"- ಇಂತಹ ಮತ ಕಳ್ಳತನ ಪ್ರಕರಣದ ಕುರಿತು 'ದಿ ಹಿಂದೂ' ವಿಸ್ತೃತವಾಗಿ ವರದಿ ಮಾಡಿದೆ.

ಚುನಾವಣಾ ಆಯೋಗದ ವಿರುದ್ಧ ಮತ ಕಳ್ಳತನದ ಆರೋಪವನ್ನು ಕಾಂಗ್ರೆಸ್ ಹೊರಿಸಿರುವ ಹೊತ್ತಿನಲ್ಲೇ ರಾಜ್ಯದಲ್ಲಿ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ. ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 5,994 ಮತಗಳನ್ನು ಅಳಿಸಿ ಹಾಕಲು ಯತ್ನಿಸಿದ್ದು ಗೊತ್ತಾಗಿ ಎರಡೂವರೆ ವರ್ಷವಾದರೂ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ. ಪ್ರಖ್ಯಾತ ‘ದಿ ಹಿಂದೂ’ ದಿನಪತ್ರಿಕೆ ಮುಖಪುಟ ಹಾಗೂ ರಾಷ್ಟ್ರೀಯ ಪುಟದಲ್ಲಿ ಇಂದು (ಭಾನುವಾರ) ಪ್ರಕಟಿಸಿರುವ ವಿಸ್ತೃತ ವರದಿಯು ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ‘ಆಳಂದ’ ಕ್ಷೇತ್ರದಲ್ಲಿ ಕಾಣದ ಕೈಗಳು ಮಾಡಿದ್ದ ಪಿತೂರಿಗಳು ಬಯಲಾದರೂ, ಸೂಕ್ತ ತನಿಖೆಗೆ ಚುನಾವಣಾ ಆಯೋಗ ಸ್ಪಂದಿಸದೆ ಇರುವುದರಿಂದ ಪ್ರಕರಣ ಬಹುತೇಕ ಹಳ್ಳಹಿಡಿದಂತೆ ಕಾಣುತ್ತಿದೆ. ‘ಅಪರಾಧ ತನಿಖಾ ವಿಭಾಗ’ (ಸಿಐಡಿ) ಪತ್ರಗಳ ಮೇಲೆ ಪತ್ರ ಬರೆದರೂ “ಕೆಲವು ಮಹತ್ವದ ದಾಖಲೆಗಳನ್ನು ಆಯೋಗ ಒದಗಿಸುತ್ತಿಲ್ಲ ಏಕೆ?” ಎಂಬ ಪ್ರಶ್ನೆಯು ಉದ್ಭವಿಸಿದೆ.

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದದ್ದು ಅಕ್ಷರಶಃ ಪಿತೂರಿ. “ಯಾರೋ ಒಬ್ಬರು ಅರ್ಜಿ ಸಲ್ಲಿಸುತ್ತಾರೆ, ಇನ್ನಾರದೋ ಹೆಸರನ್ನು ಮತಪಟ್ಟಿಯಿಂದ ಕೈಬಿಡಲಾಗುತ್ತದೆ!”- ಹೀಗೆ 5,994 ಮತಗಳನ್ನು ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಅಳಿಸಿ ಹಾಕಲಾಗಿತ್ತು. ಈ ಮತ ಕಳ್ಳತನ ಅರಿವಿಗೆ ಬಂದ ಬಳಿಕ ಮತದಾರರನ್ನು ಮರುಸೇರ್ಪಡೆ ಮಾಡಲಾಯಿತು. ಆದರೆ ಈ ಕೃತ್ಯದ ಹಿಂದೆ ಯಾರಿದ್ದಾರೆಂಬುದು ಪತ್ತೆ ಹಚ್ಚಲಾಗಿಲ್ಲ. ಹೀಗೆ ಅಳಿಸಿ ಹಾಕಿದ್ದ ಮತಗಳೆಲ್ಲವೂ ಕಾಂಗ್ರೆಸ್ ಬೆಂಬಲಿತವಾಗಿದ್ದವು ಎಂಬುದು ಮೇಲುನೋಟಕ್ಕೆ ಕಾಣುತ್ತಿದೆ.

2018ರ ಚುನಾವಣೆಯಲ್ಲಿ ಕೇವಲ 697 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಷ್‌ ಗುತ್ತೇದಾರ್ ವಿರುದ್ಧ ಸೋತಿದ್ದವರು ಕಾಂಗ್ರೆಸ್ ನಾಯಕ ಬಿ.ಆರ್.ಪಾಟೀಲ್. ಸಮಾಜವಾದಿ ಹಿನ್ನೆಲೆಯ ಪಾಟೀಲರು, 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಎಲೆಕ್ಷನ್‌ಗೂ ಮುನ್ನ ಆದ ಬೆಳವಣಿಗೆಯಲ್ಲಿ ಸತ್ಯ ಸಂಗತಿಯೊಂದು ಪಾಟೀಲರ ಗಮನಕ್ಕೆ ಬಂದಿತ್ತು. “ಸಾವಿರಾರು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿರುವುದು ಸ್ವತಃ ಮತದಾರರಿಗೂ ಗೊತ್ತಿಲ್ಲ” ಎಂಬುದು ದೊಡ್ಡ ಆಘಾತ ತಂದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಬಿಹಾರ | ‘ಮತ ಕಳ್ಳತನ’ವನ್ನು ಸೋಲಿಸಿ ಗೆಲ್ಲುವುದೇ ‘ಇಂಡಿಯಾ’?

2023ರ ವಿಧಾನಸಭಾ ಚುನಾವಣೆಗೆ ಮುನ್ನ ಫಾರ್ಮ್ 7 ಅನ್ನು ನಕಲು ಮಾಡುವ ಮೂಲಕ ಮತದಾರರನ್ನು ತೆಗೆದು ಹಾಕಲು ಪ್ರಯತ್ನ ನಡೆಸಲಾಗಿತ್ತು. ಸದರಿ ಪ್ರಕರಣದ ಸ್ಥಿತಿಯನ್ನು ಹಿರಿಯ ಪತ್ರಕರ್ತ ‘ಆದಿತ್ಯ ಭಾರದ್ವಾಜ್’ ಅವರು ಎಳೆಎಳೆಯಾಗಿ ‘ದಿ ಹಿಂದೂ’ ಪತ್ರಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಆರ್.ಪಾಟೀಲರು 2023ರ ಫೆಬ್ರವರಿಯಲ್ಲಿ ಮತ ಕಳ್ಳತನವನ್ನು ಗಮನಿಸುತ್ತಾರೆ. “ಕ್ಷೇತ್ರದ ಮತದಾರರ ಅರಿವಿಗೆ ಬಾರದೆ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ” ಎಂದು ಪಾಟೀಲರು ಹೇಳುತ್ತಾರೆ. ಜೊತೆಗೆ ಚುನಾವಣಾ ಆಯೋಗಕ್ಕೆ ತಕ್ಷಣವೇ ದೂರು ಸಲ್ಲಿಸುತ್ತಾರೆ. ಆ ನಂತರ ಪ್ರಕರಣ ಸದ್ದು ಮಾಡುತ್ತದೆ.

“ಬೂತ್ ಮಟ್ಟದ ಅಧಿಕಾರಿಯೊಬ್ಬರು [ಬಿಎಲ್‌ಒ] ತಮ್ಮ ಸಹೋದರನ ಮತವನ್ನೇ ಅಳಿಸಿ ಹಾಕಲು ಕೋರಿರುವ ಫಾರ್ಮ್ 7 ಅರ್ಜಿಯನ್ನು ಅನಿರೀಕ್ಷಿತವಾಗಿ ಗಮನಿಸುತ್ತಾರೆ. ಆದರೆ ಅವರ ಸಹೋದರ ಅರ್ಜಿ ಸಲ್ಲಿಸಿರಲಿಲ್ಲ. ಆ ಬಿಎಲ್‌ಒ ಸಹೋದರನು ನನ್ನ ಬೆಂಬಲಿಗ. ಅದೇ ಹಳ್ಳಿಯ ಇನ್ನೊಬ್ಬ ಮತದಾರರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅವರಿಗೂ ಅದರ ಬಗ್ಗೆ ತಿಳಿದಿರಲಿಲ್ಲ. ಇದು ನಮಗೆ ಮತ ಕಳ್ಳತನದ ಸುಳಿವು ನೀಡಿತು” ಎನ್ನುತ್ತಾರೆ ಪಾಟೀಲ್.

patil 3
ಶಾಸಕ ಬಿ.ಆರ್. ಪಾಟೀಲ್

ತಮ್ಮ ಗುರುತುಗಳನ್ನು ದುರುಪಯೋಗ ಮಾಡಿಕೊಂಡು, ಫಾರ್ಮ್‌ 7ರ ಅರ್ಜಿಗಳನ್ನು ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಳಿಸಿ ಹಾಕಲು ಯತ್ನಿಸಿರುವ ಸಂಬಂಧ ಅನೇಕ ಮತದಾರರು ತಮ್ಮ ದೂರುಗಳನ್ನು ಆಳಂದ ತಹಶೀಲ್ದಾರ್‌ಗೆ ಸಲ್ಲಿಸುತ್ತಾರೆ. ಈ ಆರೋಪಗಳು ಬಂದ ಹಿನ್ನೆಲೆಯಲ್ಲಿ 6,018 ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ.

ಆಳಂದದ ಚುನಾವಣಾಧಿಕಾರಿ ಮತ್ತು ಕಲಬುರಗಿಯ ಸಹಾಯಕ ಆಯುಕ್ತೆ ಮಮತಾ ದೇವಿ ಅವರು 2023ರ ಫೆಬ್ರವರಿ 21ರಂದು ಆಳಂದ ಪೊಲೀಸರಿಗೆ ದೂರು ನೀಡಿ ಪ್ರಕರಣದ ಸ್ವರೂಪವನ್ನು ವಿವರಿಸುತ್ತಾರೆ. “6,018 ಪ್ರಕರಣಗಳಲ್ಲಿ ಕೇವಲ 24 ಅರ್ಜಿಗಳು ಮಾತ್ರ ಅಸಲಿಯಾಗಿವೆ. ಸದರಿ 24 ಅರ್ಜಿಗಳಿಗೆ ಸಂಬಂಧಿಸಿದ ಮತದಾರರು ತಮ್ಮ ಕ್ಷೇತ್ರವನ್ನು ಬೇರೆಡೆಗೆ ಬದಲಿಸಿದ್ದರಿಂದ ಇಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿ ಹಾಕಲು ಕೋರಿರುವುದು ನಿಜ. ಉಳಿದ 5,994 ಮತದಾರರ ಹೆಸರಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ” ಎನ್ನುತ್ತಾರೆ ಮಮತಾ ದೇವಿ. ಇಷ್ಟು ದೊಡ್ಡ ಮಟ್ಟದಲ್ಲಿ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (26/2023 ಆಳಂದ ಪೊಲೀಸ್ ಠಾಣೆ) ದಾಖಲಾಗುತ್ತದೆ. ಅಂತಿಮವಾಗಿ, ಈ 5,994 ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗುತ್ತದೆ. ಅವರು 2023ರ ಚುನಾವಣೆಯಲ್ಲಿ ಮತ ಚಲಾಯಿಸಿರಬಹುದು. ನಂತರ ಪ್ರಕರಣ ಏನಾಯಿತೆಂಬುದು ಮುಖ್ಯವಾಗುತ್ತದೆ.

ಕಾರ್ಯಾಚಣೆಯಲ್ಲಿ ಕಂಡು ಬಂದ ಸತ್ಯ

ದ್ವಿಚಕ್ರ ವಾಹನ ಮೆಕ್ಯಾನಿಕ್ ಆಗಿರುವ 42 ವರ್ಷದ ಶ್ರೀಶೈಲ ಬರಾಬಾಯಿ ಅವರು ಆಳಂದ ತಾಲ್ಲೂಕಿನ ಸರಸಾಂಬ ಗ್ರಾಮದ ನಿವಾಸಿ. ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಅಳಿಸಿ ಹಾಕುವಂತೆ ಅರ್ಜಿ ಸಲ್ಲಿಕೆಯಾಗಿದ್ದ ಸಂಬಂಧ ನೆನಪಿಸಿಕೊಳ್ಳುತ್ತಾರೆ. ‘ಸ್ಥಳಾಂತವಾಗಿರುವ ಕಾರಣ ಹೆಸರು ಡಿಲೀಟ್ ಮಾಡಿ’ ಎಂದು ಅರ್ಜಿ ಸಲ್ಲಿಕೆಯಾಗಿರುತ್ತದೆ. ಇವರ ಹೆಸರನ್ನು ‘ಭಾಗ ಸಂಖ್ಯೆ 71 (ಕ್ರಮ ಸಂಖ್ಯೆ 775)’ರಲ್ಲಿ ಪಟ್ಟಿ ಮಾಡಲಾಗಿತ್ತು. “ನಾನು ಈ ಗ್ರಾಮವನ್ನು ಬಿಟ್ಟು ಹೊರಗಡೆ ಹೋದವನಲ್ಲ. ಆದರೆ ಬಿಎಲ್‌ಒ ಅವರು ಪರಿಶೀಲಿಸಲು ಬಂದಾಗ ಇಂತಹದೊಂದು ಅರ್ಜಿ ಇದೆ ಎಂದು ನನಗೆ ಗೊತ್ತಾಯಿತು. ನನ್ನ ಮತವನ್ನು ಡಿಲೀಟ್ ಮಾಡಲು ಬೇರೆಯವರು ಹೇಗೆ ಅರ್ಜಿ ಸಲ್ಲಿಸಿದರು ಎಂಬುದು ನನಗೆ ತಿಳಿಯಲಿಲ್ಲ” ಎನ್ನುತ್ತಾರೆ ಶ್ರೀಶೈಲ.

alanda 1
ಆಳಂದ ತಹಶೀಲ್ದಾರ್ ಅವರಿಗೆ ಹಲವು ಮತದಾರರು ದೂರುಗಳನ್ನು ನೀಡಿರುವುದನ್ನು ಗಮನಿಸಬಹುದು.
Alanda 5
ಆಳಂದ ತಹಶೀಲ್ದಾರ್ ಅವರಿಗೆ ಹಲವು ಮತದಾರರು ದೂರುಗಳನ್ನು ನೀಡಿರುವುದನ್ನು ಗಮನಿಸಬಹುದು.

‘ಭಾಗ ಸಂಖ್ಯೆ 71(ಕ್ರಮ ಸಂಖ್ಯೆ 563)’ರಲ್ಲಿ ಪಟ್ಟಿ ಮಾಡಲಾದ ಮತ್ತು ಸರಸಂಬಾ ಗ್ರಾಮದ ರೈತ ಕಾಶಿಮ್ ಅಲಿ (48) ಅವರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. “ನಿಮ್ಮ ಹೆಸರನ್ನು ಅಳಿಸಿ ಹಾಕಲು ಅರ್ಜಿ ಹಾಕಿದ್ದೀರಾ? ಎಂದು 2023ರಲ್ಲಿ ಬಿಎಲ್‌ಒ ಕೇಳಿದ್ದರು. ನನ್ನ ಮತವನ್ನು ಅಳಿಸಲಾಗಿದೆ ಎಂದು ಭಾವಿಸಿ 2023ರ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಲಿಲ್ಲ” ಎನ್ನುತ್ತಾರೆ ಕಾಶಿಮ್. ಆದರೆ ಅವರು ಸದರಿ ವಿಳಾಸದಲ್ಲಿಯೇ ಮೊದಲಿನಿಂದ ವಾಸವಿದ್ದಾರೆ ಎಂಬುದನ್ನು ಗಮನಿಸಿರುವ ಅಧಿಕಾರಿಗಳು, ನಕಲಿ ಅರ್ಜಿಯನ್ನು ವಜಾ ಮಾಡಿದ್ದಾರೆ.

ಇದನ್ನೂ ಓದಿರಿ: ಬಂಗಾಳಕ್ಕೂ ಕಾಲಿಟ್ಟ ಎಸ್‌ಐಆರ್‌ ಭೂತ; ಜನನ ಪ್ರಮಾಣಪತ್ರಕ್ಕಾಗಿ ಜನರ ಪರದಾಟ

ಈ ಇಬ್ಬರ ಹೆಸರುಗಳನ್ನು ಅಳಿಸಲು ಫಾರ್ಮ್ 7 ಅರ್ಜಿಗಳನ್ನು ಸೂರ್ಯಕಾಂತ್ ಗೋವಿನ್ (67) ಎಂಬವರ ಹೆಸರಿನಲ್ಲಿ ಸಲ್ಲಿಸಲಾಗಿತ್ತು. ಖಾಸಗಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸೂರ್ಯಕಾಂತ್ ಈಗ ಸರಸಂಬಾ ಗ್ರಾಮದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಜೊತೆಗೆ ಅದೇ ‘ಭಾಗ ಸಂಖ್ಯೆ 71(ಕ್ರಮ ಸಂಖ್ಯೆ 1)’ರಲ್ಲಿ ಮತದಾರರಾಗಿದ್ದಾರೆ. “ಭಾಗ ಸಂಖ್ಯೆ 71 ರಿಂದ ಕೆಲವು ಮತದಾರರನ್ನು ಡಿಲೀಟ್ ಮಾಡಲು ನನ್ನ ಹೆಸರಿನಲ್ಲಿ ಒಂಬತ್ತು ಅರ್ಜಿಗಳನ್ನು ಸಲ್ಲಿಸಲಾಗಿದೆ. ಅಲ್ಲಿ ನಾನು ಸಹ ಮತದಾರನಾಗಿದ್ದೇನೆ. ದುಷ್ಕರ್ಮಿಗಳು ಅದನ್ನು ಹೇಗೆ ಮಾಡಿದ್ದಾರೆಂದು ನನಗೆ ತಿಳಿದಿಲ್ಲ. ಈ ಎಲ್ಲಾ ಅರ್ಜಿಗಳಲ್ಲಿ, ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಫೋಟೋ ಸೇರಿದಂತೆ ನನ್ನ ಇತರ ವಿವರಗಳು ಸರಿಯಾಗಿದ್ದರೂ, ಪ್ರತಿ ಅರ್ಜಿಯಲ್ಲಿ ಫೋನ್ ನಂಬರ್‌ಗಳು ಬೇರೆಬೇರೆಯಾಗಿವೆ. ಈ ನಂಬರ್‌ಗಳಲ್ಲಿ ಯಾವುದೂ ನನಗೆ ಸೇರಿಲ್ಲ” ಎಂದು ‘ದಿ ಹಿಂದೂ’ಗೆ ಪ್ರತಿಕ್ರಿಯಿಸಿದ್ದಾರೆ.

Aland 3
‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ

ಅಳಿಸಿ ಹಾಕುವಂತೆ ಸಲ್ಲಿಸಲಾದ ನಕಲಿ ಅರ್ಜಿಗಳಲ್ಲಿ ಉಲ್ಲೇಖಗೊಂಡಿರುವ ಆಳಂದ ಕ್ಷೇತ್ರದ ಮತದಾರರ ಪ್ರತಿಕ್ರಿಯೆಗಳನ್ನು ‘ದಿ ಹಿಂದೂ’ ದಾಖಲಿಸಿದೆ. ಕೆಲವು ಪ್ರಕರಣಗಳಲ್ಲಿ ಇಡೀ ಮನೆಯವರೆಲ್ಲರ ಮತಗಳನ್ನು ಡಿಲೀಟ್ ಮಾಡುವಂತೆ ಅರ್ಜಿ ಹಾಕಿರುವುದು ಗೊತ್ತಾಗಿದೆ. ಉದಾಹರಣೆಗೆ ನಿವೃತ್ತ ಪೊಲೀಸ್ ವೀರಣ್ಣ ಹೊನಶೆಟ್ಟಿ ಅವರ ಮಾತುಗಳನ್ನು ಗಮನಿಸಬಹುದು: “ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಸದಸ್ಯೆ ಹಾಗೂ ನನ್ನ ಪತ್ನಿಯೂ ಆಗಿರುವ ರೇವಮ್ಮ ಅವರ ಹೆಸರು ಸೇರಿದಂತೆ ನಮ್ಮ ಕುಟುಂಬದಲ್ಲಿನ ಎಂಟು ಮತಗಳನ್ನು ಅಳಿಸಲು ನಕಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು” ಎನ್ನುತ್ತಾರೆ ವೀರಣ್ಣ!

ಹೀಗೆ ಸಲ್ಲಿಕೆಯಾಗಿರುವ ಅರ್ಜಿಗಳ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ‘ದಿ ಹಿಂದೂ’, “ಭಾಗ ಸಂಖ್ಯೆ ಲೀಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿರುವ ಮೊದಲ ಮತದಾರ ಅಥವಾ ಅಪರೂಪಕ್ಕೊಮ್ಮೆ ಎರಡನೇ ಮತದಾರನ ಹೆಸರಲ್ಲಿ ಇಂತಹ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ” ಎಂದಿದೆ.

ಏನಾಯಿತು ಸಿಐಡಿ ತನಿಖೆ?

ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಎರಡೂವರೆ ವರ್ಷಗಳ ಕಾಲ ನಡೆದ ತನಿಖೆಯ ನಂತರ, ಪ್ರಕರಣ ನಿದ್ರಾವಸ್ಥೆಗೆ ಜಾರಿದೆ. ಇಲ್ಲಿಯವರೆಗೆ ನಡೆದ ತನಿಖೆಯು ದೊಡ್ಡ ದೊಡ್ಡ ಕದೀಮರ ಸಂಕೀರ್ಣ ಜಾಲವನ್ನು ಬಯಲು ಮಾಡುವ ಪ್ರಯತ್ನವನ್ನು ಮಾಡಿರುವುದಂತೂ ಸತ್ಯ. ಆದರೆ ಹೆಚ್ಚಿನ ಪರಿಣಾಮಕಾರಿ ತನಿಖೆಗೆ ಚುನಾವಣೆ ಆಯೋಗ ಸ್ಪಂದಿಸುವ ಅಗತ್ಯವಿದೆ.

ವಿವಾದಕ್ಕೆ ಕಾರಣವಾಗಿರುವ ಫಾರ್ಮ್ 7 ನಕಲಿ ಅರ್ಜಿಗಳನ್ನು ‘ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್’ (NVSP), ‘ಮತದಾರರ ಸಹಾಯವಾಣಿ ಅಪ್ಲಿಕೇಶನ್’ (VHA) ಮತ್ತು ಚುನಾವಣಾ ಆಯೋಗದ ‘ಗರುಡ ಅಪ್ಲಿಕೇಶನ್’ ಮೂಲಕ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಈ ಪ್ಲಾಟ್‌ಫಾರ್ಮ್‌ಗಳ ಮೂಲಕ ಅರ್ಜಿ ಸಲ್ಲಿಸಬೇಕಾದರೆ ನೇರವಾಗಿ ಮತದಾರನೇ ಆಗಿರಬೇಕೆಂದೇನಿಲ್ಲ. ಮತದಾರನ ಪರ ಯಾರು ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಡಿಜಿಟಲ್‌ ವ್ಯವಸ್ಥೆ ಮೂಲಕ ಅರ್ಜಿ ಹಾಕುವುದು ಗೊತ್ತಿಲ್ಲದವರು ಸಾಮಾನ್ಯವಾಗಿ ಸೈಬರ್ ಸೆಂಟರ್‌ನವರನ್ನೋ ಅಥವಾ ಈ ರೀತಿಯ ಸೇವೆ ಸಲ್ಲಿಸುವವರ ಸಹಾಯವನ್ನೋ ಪಡೆಯುವ ಸಾಧ್ಯತೆ ಇರುತ್ತದೆ. ಬಹುಶಃ ಮತದಾರನ ಮೊಬೈಲ್‌ ಸಂಖ್ಯೆಯು ಬೇರೆ ಬೇರೆ ಇರುವುದನ್ನು ನೋಡಿದರೆ, ನಕಲಿ ನಂಬರ್‌ಗಳ ಮೂಲಕ ಒಟಿಪಿಗಳನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ ಎಂದೂ ಊಹಿಸಲಾಗಿದೆ. ಈ ಜಾಲವನ್ನು ಪತ್ತೆ ಹಚ್ಚುವುದು ಸಿಐಡಿ ಮುಂದಿರುವ ಸವಾಲಾಗಿತ್ತು.

ಸಿಐಡಿ ಮತ್ತು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (CEO) ನಡುವೆ ನಡೆದಿರುವ ಪತ್ರ ವ್ಯವಹಾರಗಳು ಮತ್ತಷ್ಟು ಸಂಗತಿಗಳನ್ನು ತಿಳಿಸುತ್ತವೆ. “ಈ ನಕಲಿ ಅರ್ಜಿಗಳನ್ನು ಎಲ್ಲಿಂದ ತುಂಬಲಾಗಿದೆ? ಯಾವ ಮಷಿನ್ ಬಳಸಲಾಗಿದೆ? ಐಪಿ ಅಡ್ರೆಸ್ [ಇಂಟರ್ನೆಟ್ ಪ್ರೋಟೋಕಾಲ್ ಲಾಗ್‌ಗಳು] ಏನು? ದಿನಾಂಕ, ಸಮಯ, ಡೆಸ್ಟಿನೇಶನ್ ಐಪಿಗಳು, ಡೆಸ್ಟಿನೇಶನ್ ಪೋರ್ಟ್‌ಗಳು ಏನು?- ಈ ವಿವರಗಳನ್ನು ಚುನಾವಣಾ ಆಯೋಗ ನೀಡಬೇಕು” ಎಂದು ಸಿಐಡಿ ವಿನಂತಿಸಿತ್ತು. ಆದರೆ ಪದೇಪದೇ ಪತ್ರಗಳನ್ನು ಬರೆದರೂ ಆಯೋಗ ಪೂರ್ಣಪ್ರಮಾಣದಲ್ಲಿ ಸ್ಪಂದಿಸಿಲ್ಲ!

ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ; ಈ ದಾಖಲೆಗಳಿಗೆ ಬಿಜೆಪಿ, ಜೆಡಿಎಸ್ ನಾಯಕರು ಏನು ಹೇಳುತ್ತಾರೆ?

ಇದೇ ವರ್ಷ ಜನವರಿಯಿಂದ ಏಪ್ರಿಲ್‌ವರೆಗೆ ಏಳು ಪತ್ರಗಳನ್ನು, ಈ ಹಿಂದೆ ಐದು ಪತ್ರಗಳನ್ನು ಸಿಐಡಿ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ. ಮತ್ತದೇ ಮನವಿಗಳನ್ನು ಪುನರಾವರ್ತನೆ ಮಾಡಿದ್ದಾರೆ.

“ತನಿಖೆಯ ಸಮಯದಲ್ಲಿ, ಐಪಿ ಲಾಗ್‌ಗಳನ್ನು ಒದಗಿಸಲಾಗಿದೆ.  ಡೆಸ್ಟಿನೇಶನ್ ಐಪಿ ಮತ್ತು ಡೆಸ್ಟಿನೇಶನ್ ಪೋರ್ಟ್ ಸಿಕ್ಕಿಲ್ಲ. ಆದ್ದರಿಂದ, ಸಂಬಂಧಪಟ್ಟವರಿಗೆ ಇವುಗಳನ್ನು ಒದಗಿಸಲು ನಿರ್ದೇಶಿಸುವಂತೆ ವಿನಂತಿಸುತ್ತೇವೆ” ಎಂದು ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ನಿರ್ದಿಷ್ಟ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಡೆಸ್ಟಿನೇಶನ್ ಐಪಿಗಳು ಮತ್ತು ಡೆಸ್ಟಿನೇಶನ್ ಪೋರ್ಟ್‌ಗಳಿಲ್ಲದೆ ತನಿಖೆ ಸ್ಥಗಿತಗೊಂಡಿದೆ.

Alanda 2
ಡೆಸ್ಟಿನೇಶನ್ ಐಪಿಗಳು ಮತ್ತು ಡೆಸ್ಟಿನೇಶನ್ ಪೋರ್ಟ್‌ಗಳನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಸಿಐಡಿ ಬರೆದಿರುವ ಪತ್ರ

5,700ಕ್ಕೂ ಹೆಚ್ಚು ಫಾರ್ಮ್ 7 ನಕಲಿ ಅರ್ಜಿಗಳ ದತ್ತಾಂಶವನ್ನು ಚುನಾವಣಾ ಆಯೋಗ ಹಂಚಿಕೊಂಡಿದೆ ಎಂದು 2023ರ ಸೆಪ್ಟೆಂಬರ್‌ನಲ್ಲಿ ಸಿಐಡಿ ಮೂಲಗಳು ಹೇಳಿದ್ದವು. 4,400ಕ್ಕೂ ಹೆಚ್ಚು ಅರ್ಜಿಗಳ ಬಗ್ಗೆ ಸಾಕಷ್ಟು ದತ್ತಾಂಶ ಇದ್ದರೂ, ಉಳಿದವು ಅಪೂರ್ಣ ವಿವರಗಳನ್ನು ಹೊಂದಿದ್ದವು. ಆಯೋಗದ ಮೂರು ಅಪ್ಲಿಕೇಶನ್‌ಗಳಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ರಚಿಸಲು ದುಷ್ಕರ್ಮಿಗಳು ಬಳಸಿರುವ ಮೊಬೈಲ್ ಸಂಖ್ಯೆಗಳನ್ನು ಆಯೋಗ ಒದಗಿಸಿದೆ. ಇವುಗಳ ಮೂಲಕ ಎಲ್ಲಾ ನಕಲಿ ಫಾರ್ಮ್ 7ಗಳನ್ನು ಸಲ್ಲಿಸಲಾಗಿದೆ.

“ನೀಡಲಾದ ದಾಖಲೆಗಳಲ್ಲಿ ಒಂಬತ್ತು ಮೊಬೈಲ್ ಸಂಖ್ಯೆಗಳನ್ನು ನಾವು ಪತ್ತೆಹಚ್ಚಿದ್ದೇವೆ. ಅವರು ಹೆಚ್ಚಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದವರಾಗಿದ್ದಾರೆ. ಈ ಮೊಬೈಲ್‌ ಸಂಖ್ಯೆಗಳ ಮಾಲೀಕರು, ಚುನಾವಣಾ ಆಯೋಗದ ಯಾವುದೇ ಅಪ್ಲಿಕೇಶನ್‌ಗಳಲ್ಲಿ ಈ ಖಾತೆಗಳನ್ನು ಎಂದಿಗೂ ರಚಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಇವರಲ್ಲಿ ಹಲವರು ಡಿಜಿಟಲ್ ಅನಕ್ಷರಸ್ಥರು” ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಟೆಲಿಕಾಂ ಸೇವಾ ಪೂರೈಕೆದಾರರಿಗೆ (TSPs) ಪತ್ರ ಬರೆದಿರುವ ಸಿಐಡಿಯವರು, ಐಪಿವಿ 4 ಸ್ವರೂಪದ ಐಪಿ ವಿಳಾಸಗಳನ್ನು ಹೊಂದಿರುವ ‘ಸಾರ್ವಜನಿಕ ಇಂಟರ್ನೆಟ್ ಪ್ರೋಟೋಕಾಲ್ ವಿವರ ದಾಖಲೆ’ (ಐಪಿಡಿಆರ್) ಪಡೆದುಕೊಂಡಿದ್ದಾರೆ. ಪ್ರತಿ ಐಪಿ ಅಡ್ರೆಸ್‌ಗೆ ಡೈನಾಮಿಕ್ ಐಪಿ ಅಡ್ರೆಸ್‌ಗಳ ರೂಪದಲ್ಲಿ 200ಕ್ಕೂ ಹೆಚ್ಚು ಬಳಕೆದಾರರನ್ನು ಲಗತ್ತಿಸಲಾಗಿದೆ ಎಂದು ವರದಿಯಾಗಿದೆ. ಅಂದರೆ ಎಂಟು ಲಕ್ಷಕ್ಕೂ ಹೆಚ್ಚು ಸಾಧನಗಳನ್ನು ಪರಿಶೀಲಿಸಿ, ತನಿಖೆ ಮಾಡುವುದೇ ಇದರ ಉದ್ದೇಶ ಎನ್ನುತ್ತವೆ ಮೂಲಗಳು.

ಇಂಟರ್ನೆಟ್‌ನಲ್ಲಿರುವ ಯಾವುದೇ ಮಷಿನ್‌ನ ಐಪಿ ಅಡ್ರೆಸ್, ಅದರ ಡಿಜಿಟಲ್ ವಿಳಾಸವಾಗಿರುತ್ತದೆ. ನಿರ್ದಿಷ್ಟ ವಹಿವಾಟು ಮಾಡಿದ ಮಷಿನ್‌ಅನ್ನು ಟ್ರ್ಯಾಕ್ ಮಾಡಲು ಇದನ್ನು ಬಳಸಬಹುದು. ಆದಾಗ್ಯೂ, ಐಪಿಗಳು ಯಾವಾಗಲೂ ಸ್ಥಿರವಾಗಿರುವುದಿಲ್ಲ. ಡೈನಾಮಿಕ್ ಐಪಿ ಎಂದರೆ ಸರ್ವರ್‌ನಿಂದ ಮಷಿನ್‌ಗೆ ನಿಯೋಜಿಸಲಾದ ತಾತ್ಕಾಲಿಕ ಅಡ್ರೆಸ್ ಆಗಿರುತ್ತದೆ.

ಇದನ್ನೂ ಓದಿರಿ: ಚುನಾವಣಾ ಆಯೋಗ ಕಣ್ಣಾಮುಚ್ಚಾಲೆ ಆಡುತ್ತಿರುವುದೇಕೆ?

ಹುಡುಕಾಟವನ್ನು ಕಡಿಮೆ ಮಾಡಲು ಉದ್ದೇಶಿಸಿರುವ ಸಿಐಡಿ, “ಡೆಸ್ಟಿನೇಷನ್ ಐಪಿಗಳು ಮತ್ತು ಡೆಸ್ಟಿನೇಷನ್ ಪೋರ್ಟ್‌ಗಳನ್ನು ಹಂಚಿಕೊಳ್ಳಿ” ಎಂದು ಆಯೋಗದ ಬಳಿ ಕೇಳುತ್ತಿದೆ. ಡೆಸ್ಟಿನೇಷನ್‌ ಐಪಿ ಸಿಕ್ಕರೆ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಆಯೋಗ ಇವುಗಳನ್ನು ಒದಗಿಸುತ್ತಿಲ್ಲ. ಇವೆಲ್ಲವೂ ಅನುಮಾನಗಳನ್ನು ಹುಟ್ಟುಹಾಕಿವೆ.

ಇಂತಹ ಅನೇಕ ಆಘಾತಕಾರಿ ಸಂಗತಿಯನ್ನು ‘ದಿ ಹಿಂದೂ’ ವರದಿ ಬಯಲಿಗೆಳೆದಿದೆ. ರಾಷ್ಟ್ರ ಮಟ್ಟದಲ್ಲಿ ‘ಮತಕಳ್ಳತನ ವಿರೋಧಿ ಆಂದೋಲನ’ವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸುತ್ತಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳು ಗಂಭೀರ ಸ್ವರೂಪದ್ದಾಗಿವೆ. ಇದೇ ಹೊತ್ತಿನಲ್ಲಿ ದೇಶದ ವಿವಿಧೆಡೆ ನಡೆದಿರುವ ‘ಮತ ಕಳವು’ ಪ್ರಕರಣಗಳ ಸ್ಥಿತಿಗತಿ ಚರ್ಚೆಗೆ ಬರುತ್ತಿವೆ. ‘ಆಳಂದ’ ಕ್ಷೇತ್ರದ ಕೇಸ್‌ಗೂ ಮತ್ತು 2018ರ ಚುನಾವಣೆಯಲ್ಲಿ ಬಿ.ಆರ್.ಪಾಟೀಲರು ಅತೀ ಕಡಿಮೆ ಅಂತರದಲ್ಲಿ ಸೋತ ರೀತಿಗೂ ಸಂಬಂಧವಿದೆಯೇ? ಈ ಮತ ಕಳವು ಬಹಳ ಹಿಂದಿನಿಂದಲೂ ನಡೆಯುತ್ತಿತ್ತೇ? ಚುನಾವಣಾ ಆಯೋಗ ಈ ಕುರಿತು ಮಾತನಾಡುತ್ತಿಲ್ಲವೇಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ‘ದಿ ಹಿಂದೂ’ ವರದಿ ಮುನ್ನಲೆಗೆ ತಂದಿರುವುದಂತೂ ಸತ್ಯ.

(ಟಿಪ್ಪಣಿ: ‘ದಿ ಹಿಂದೂ’ ಪ್ರಕಟಿಸಿರುವ ವರದಿಯಲ್ಲಿನ ಅಂಶಗಳನ್ನು ಇಲ್ಲಿ ಬಳಸಲಾಗಿದೆ.)

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...