ನೆನಪು । ರಾಜೀವ್ ತಾರಾನಾಥ್ ಕುರಿತು ರಹಮತ್ ತರೀಕೆರೆ ಬರೆಹ

Date:

ನಮ್ಮ ನಡುವಿನ ಹಿರಿಯ ಜೀವ, ರಾಜೀವ್ ತಾರಾನಾಥ್ ಅವರಿಗೆ ಈಗ ಒಂಬತ್ತು ದಶಮಾನ. ಪ್ರತಿಭಾವಂತ ಕಲಾವಿದರ ನಿಡಿದಾದ ಬಾಳು, ದೀರ್ಘಾಯುವಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಪರಂಪರೆಯ ಯಾನಕ್ಕೆ, ಅದರೊಳಗಿನ ಸೃಜನಶೀಲ ಪ್ರಯೋಗ ಮತ್ತು ಸಾಹಸಗಳಿಗೆ ಲಗತ್ತಾಗಿರುತ್ತದೆ. ಅಮೀರಖುಸ್ರೂ, ಎರಡನೇ ಇಬ್ರಾಹಿಂ ಆದಿಲಶಾಹಿ, ಅಬ್ದುಲ್ ಕರೀಂಖಾನ್, ಅಲ್ಲಾದಿಯಾ ಖಾನ್, ಕುಮಾರ ಗಂಧರ್ವ, ಪಂ. ತಾರಾನಾಥ, ಪಂ.ರವಿಶಂಕರ್, ಲತಾ ಮಂಗೇಶ್ಕರ್, ಮಹಮದ್‍ರಫಿ, ನೌಷಾದ್, ಅಮೀರಬಾಯಿ ಕರ್ನಾಟಕಿ, ಗುಬ್ಬಿಯ ವೀರಣ್ಣ-ಈ ಯಾರ ಬಾಳನ್ನು ಕಂಡರೂ ಈ ದಿಟ ಗೋಚರವಾಗುವುದು. ಸಾಹಿತ್ಯದಲ್ಲಿ ಮಲೆಯಾಳದ ವೈಕಂ, ಉರ್ದುವಿನ ಗಾಲಿಬ್, ಕನ್ನಡದ ಕಾರಂತ ಲಂಕೇಶ್ ತೇಜಸ್ವಿ ಮುಂತಾದವರ ಮಟ್ಟಿಗೂ ಇದು ನಿಜ. ಇವರೆಲ್ಲ ತಾವು ಆರಿಸಿಕೊಂಡ ಮಾಧ್ಯಮದಲ್ಲಿ ಕೇವಲ ಕಲಾವಿದರಾಗಿ ದುಡಿದವರಲ್ಲ. ಆ ಮಾಧ್ಯಮದ ಚೌಕಟ್ಟನ್ನೆ ಬದಲಿಸಿದವರು. ಒಂದು ಮಾಧ್ಯಮಕ್ಕೆ ಸೀಮಿತರಲ್ಲ. ಹಲವು ಮಾಧ್ಯಮಗಳಿಗೆ ಹರಿದಾಡಿದವರು. ಇವರಿಗೆ ನಿಯಮ ಅಥವಾ ಸೀಮೆಗಳಿರುವುದು ಕೇವಲ ಪಾಲಿಸುವುದಕ್ಕಲ್ಲ, ಸೀಮೋಲ್ಲಂಘನಕ್ಕೆ. ಹದ್ದುಗಳಿರುವುದು ಅನಹದ್ ಆಗುವುದಕ್ಕೆ.

‘ಅನಹದ್’-ಫಾರಸಿ ಶಬ್ದ. ಸಾಧಕರು ತಮ್ಮ ಆನುಭಾವಿಕ ಸಾಧನೆಯಲ್ಲಿ ಮಾಡುವ ಏರುಯಾನವನ್ನು ವಿವರಿಸಲು ಕಬೀರನು ಈ ಪದವನ್ನು ಬಳಸಿದನು. ಅವನ ಬಾಳೇ ಹಲವು ಬಗೆಯ ಸೀಮೋಲ್ಲಂಘನೆಗಳ ಮೊತ್ತ. ಆತ ತನ್ನ ಧರ್ಮದ ಸಾಂಸ್ಥಿಕ ಚೌಕಟ್ಟು ಬಿಟ್ಟು ಗುರುಪಂಥೀಯ ಅನುಭಾವಕ್ಕೆ ಚಲಿಸಿದವನು. ಹುಟ್ಟಿಬೆಳೆದ ಬನಾರಸ್ಸನ್ನು ತೊರೆದು ಗೋರಖಪುರಕ್ಕೆ ಪ್ರಸ್ಥಾನ ಮಾಡಿದವನು. ಅವನ ಗುರುವಾಗಲಿ ಶಿಷ್ಯರಾಗಲಿ ಅವನ ಧರ್ಮದವರಲ್ಲ. ಗಾಯನ ಕಾವ್ಯ ಅನುಭಾವ ನೇಕಾರಿಕೆಗಳಲ್ಲಿ ಆತ ಮಗ್ಗದಲ್ಲಿ ನೂಲೆಳೆಗಳು ಹಾಸುಹೊಕ್ಕಾಡುವಂತೆ ಸಮದರ್ಶನದಲ್ಲಿ ಅಲೆದಾಡಿದವನು. ಹಿಂದೂಸ್ತಾನಿ ಸಂಗೀತ ಪ್ರವರ್ತಕನಾದ ಅಮೀರ ಖುಸ್ರೂನಲ್ಲೂ ಇಂತಹವೇ ಚಹರೆಗಳಿವೆ. ಟರ್ಕಿಮೂಲದ ತಂದೆ-ಬ್ರಾಹ್ಮಣ ತಾಯಿಯ ಮಗನಾದ ಈತ, ದೆಹಲಿಯ ನಿಜಾಮುದ್ದೀನರ ಮುರೀದನಾದವನು. ರಾಗಗಳನ್ನು ಅರಸುತ್ತ ಹಿಂದೂಸ್ತಾನವನ್ನು ಅಲೆದವನು. ಮರಾಠಾ ರಾಜಕುಮಾರಿಯನ್ನು ವರಿಸಿದ ಕಿರಾಣ ಘರಾಣೆಯ ಅಬ್ದುಲ್ ಕರೀಂಖಾನರ ಬದುಕಿನಲ್ಲೂ ಇಂಥವೇ ಜೈವಿಕ ಕಲಾತ್ಮಕ ಸೀಮೋಲ್ಲಂಘನೆಗಳಿವೆ. ಇಂತಹವೇ ಜೈವಿಕ ಮತ್ತು ಕಲಾತ್ಮಕ ಸಂಕರ ಪರಂಪರೆಯ ಉಳಿ ಸುತ್ತಿಗೆಗಳಿಂದ ರಾಜೀವ ತಾರಾನಾಥರ ವ್ಯಕ್ತಿತ್ವ ಕಟೆಯಲ್ಪಟ್ಟಿತು. ಎಂತಲೇ ಅದು ಭಾರತದ ನಡಾವಳಿಯ ಭಾಗವಾಗಿರುವ ಬಹುತ್ವದ ಪರಂಪರೆಯ ಪವಿತ್ರ ಪ್ರತೀಕವಾಗಿದೆ.

ಈ ಸುದ್ದಿ ಓದಿದ್ದೀರಾ? ವಿಶ್ವ ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್‌ ತಾರಾನಾಥ್ ನಿಧನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜೀವ್‌ ತಾರಾನಾಥ್

ರಾಜೀವರ ತಂದೆ ಪಂಡಿತ ತಾರಾನಾಥರು ಕರಾವಳಿ ಸೀಮೆಯಲ್ಲಿ ಹುಟ್ಟಿ ಹೈದರಾಬಾದಿನಲ್ಲಿ ಬೆಳೆದು, ನಾಡನ್ನೆಲ್ಲ ತಿರುಗಾಡಿ, ತುಂಗಭದ್ರಾದಲ್ಲಿ ಬೇರುತಳೆದವರು. ಕೊಂಕಣಿ ಮನೆಮಾತಿನ ಸಾರಸ್ವತ ಬ್ರಾಹ್ಮಣರಾಗಿ ತಮಿಳು ಮನೆಮಾತಿನ ಬೆಸ್ತ ಸಮುದಾಯದ ಸುಮತಿಬಾಯಿ ಅವರನ್ನು ಸಂಗಾತಿಯಾಗಿ ಪಡೆದವರು. ಅವರ ಈ ಸೀಮೋಲ್ಲಂಘನೆಗೆ ಪ್ರೇರಣೆಯಾಗಿದ್ದು ಪ್ರೇಮ. ಅವರ ಆಶ್ರಮದ ಹೆಸರು `ಪ್ರೇಮಾಯತನ’. ಅವರ ಗೆಳೆತನ, ಶಾಲೆ ಮತ್ತು ಆಶ್ರಮಗಳಲ್ಲಿ ಎಲ್ಲ ಧರ್ಮದವರು ಜಾತಿಯವರು ಇರುತ್ತಿದ್ದರು. ರಾಜೀವರ ಗುರುಗಳಾದ ಅಲಿ ಅಕಬರಖಾನರೂ, ಪಂಡಿತ ರವಿಶಂಕರರೂ ಹೀಗೇ ಲೋಕಸಂಚಾರಿಗಳು. ಅಕಬರಖಾನರ ತಂಗಿಯನ್ನು ಅವರ ಸಹಪಾಠಿಗಳಾಗಿದ್ದ ಪಂಡಿತ್ ರವಿಶಂಕರ್ ಲಗ್ನವಾದರು. ತಮ್ಮ ತಂದೆ ಅಲ್ಲಾವುದ್ದೀನ ಖಾನರಂತೆ, ಅಕಬರಖಾನರೂ ಎಲ್ಲ ಜಾತಿಯ ಮತ್ತು ಧರ್ಮದ ಶಿಷ್ಯರನ್ನು ಮನೆಯಲ್ಲಿ ಇಟ್ಟುಕೊಂಡು ಕಲಿಸಿದವರು. ರವಿಶಂಕರ್ ಹಾಗೂ ಅಲ್ಲಿ ಅಕಬರಖಾನರು ಸಿನಿಮಾಕ್ಕೆ ಸಂಗೀತ ನೀಡಿದ್ದು ಮಾತ್ರವಲ್ಲ, ಪಾಶ್ಚಿಮಾತ್ಯ ಸಂಗೀತದ ಜತೆ ಹಿಂದೂಸ್ತಾನಿ ಸಂಗೀತವನ್ನು ಕಸಿಗೊಳಿಸಿದವರು.

ಪಂಡಿತ ತಾರಾನಾಥರಿಗೆ ಸಂಸ್ಕೃತ ತಮಿಳು ಹಿಂದಿ ಉರ್ದು ಕನ್ನಡ ಅಂಗ್ರೇಜಿ ಕೊಂಕಣ ಮೊದಲಾಗಿ ಹಲವು ಭಾಷೆಗಳಲ್ಲಿ ಪ್ರವೇಶವಿತ್ತು. ವೈದ್ಯ, ಸಂಗೀತ, ಸಾಹಿತ್ಯ, ರಾಜಕೀಯ ಚಳುವಳಿ, ಯೋಗ, ತಂತ್ರ, ಉದ್ಯಮಶೀಲತೆ, ಅಧ್ಯಾಪನ- ಹೀಗೆ ಹಲವು ಹೊಲಗಳಲ್ಲಿ ಪೈರುಬೆಳೆದ ರೈತ ಅವರು. ರಾಜೀವರಿಗೆ ತಾಯಿತಂದೆಯರಿಂದ ತಮಿಳು ಕೊಂಕಣಿಗಳು ಸಹಜವಾಗಿ ವರ್ಗಾವಣೆಯಾದವು. ಅವರು ಕಲಿತಿದ್ದು ಮತ್ತು ಕಲಿಸಿದ್ದು ಆಂಗ್ಲಸಾಹಿತ್ಯ. ಬರೆದಿದ್ದು ಕನ್ನಡದಲ್ಲಿ. ಅವರ ಸಂಗೀತದ ಗುರುಗಳು ಬಂಗಾಳಿಗಳಾದ ಕಾರಣ, ಬಂಗಾಳಿ ದಕ್ಕಿತು. ಅವರಿಗೆ ಉರ್ದು ಅಥವಾ ಹಿಂದುಸ್ತಾನಿ ಪ್ರಿಯವಾದ ಭಾಷೆ. ಎಂತಲೇ ಅವರ ಸರಸವಾದ ಮಾತುಕತೆಯಲ್ಲಿ ಈ ಬಹುಭಾಷಿಕ ನುಡಿಗಟ್ಟು ಗಾದೆ ಕವಿತೆಯ ಸಾಲು ಸಂಗೀತದ ಚೀಜುಗಳು, ಒಂದೇ ರಾಗದ ವಿವಿಧ ಆಲಾಪಗಳಂತೆ ಬಂದುಹೋಗುತ್ತವೆ. ಅವರು ಮೂಲತಃ ಸಾಹಿತ್ಯ ವಿದ್ಯಾರ್ಥಿ. ಹೈದರಾಬಾದ್ ಯೆಮನ್ ತಿರುಚನಾಪಲ್ಲಿ ಇತ್ಯಾದಿ ಕಡೆ ಅಧ್ಯಾಪನ ಮಾಡಿದವರು. ಅದರ ಕಟ್ಟನ್ನು ಹರಿದೊಗೆದು ಸಂಗೀತಕ್ಕೆ ಚಲಿಸಿದವರು. ಶಾಸ್ತ್ರೀಯ ಸಂಗೀತದೊಳಗಿದ್ದೇ ರಂಗಭೂಮಿಗೂ ಸಿನಿಮಾಕ್ಕೂ ಸಂಗೀತ ಒದಗಿಸಿದವರು. ಸಂಗೀತ ರಂಗಭೂಮಿ ಸಿನಿಮಾ ಭಾಷೆ ಸಾಹಿತ್ಯ ಚಿತ್ರಕಲೆ ವಾಸ್ತುಶಿಲ್ಪಗಳು ದೊಡ್ಡದನ್ನು ಸಾಧಿಸಿರುವುದೇ, ಒಡ್ಡಿದ ಹದ್ದುಗಳನ್ನು ದಾಟುತ್ತ ಅನಹದ್ ವಿಸ್ತರಣೆ ಪಡೆವ ಮೂಲಕ.

rajeev taranath 3

ನಾನೊಮ್ಮೆ ರಾಜೀವರ ಸಂಗದಲ್ಲಿ ಎರಡು ದಿನವಿದ್ದೆ. ಅವರನ್ನು ಕಾಣಲು ಎಷ್ಟೊಂದು ಹಿನ್ನೆಲೆಯ ಜನ ಮನೆಗೆ ಬರುತ್ತಾರೆ? ಎಷ್ಟೊಂದು ಕ್ಷೇತ್ರದ ಮಂದಿ ಕರೆ ಮಾಡುತ್ತಾರೆ? ಅವರ ಮನೆಯಲ್ಲಿ ಪಾನೀಯ, ಊಟ, ಹರಟೆಗಳಿರುತ್ತವೆ. ಪೂರ್ವಸೂರಿಗಳು ಕಷ್ಟದಿಂದಲೂ ಪ್ರತಿಭೆಯಿಂದ ಗಳಿಸಿದ ಬಹುತ್ವದ ಪರಂಪರೆಯ ಅರಿವು, ವಿವೇಕ, ವೈಚಾರಿಕತೆಗಳಿರುತ್ತವೆ. ಸಂಗೀತದ ನಾದವಿರುತ್ತದೆ. ಬೆಚ್ಚಗಿನ ತಾಯಪ್ರೀತಿ ಸಿಗುತ್ತದೆ. ರಾಜೀವ್, ನಿಷ್ಠುರತೆಯ ಪೊಟ್ಟಣದೊಳಗೆ ಪ್ಯಾಕು ಮಾಡಿದ ಪ್ರೇಮದ ಸಿಹಿತಿಂಡಿಯಂತೆ. ಅವರು `ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು’ (ಸೂಫಿಕವಿ ಉಮರ್ ಖಯಾಮನ ಒಂದು ಒಸಗೆಯ ಬೇಂದ್ರೆಯವರ ಅನುವಾದವಿದು) ಎಂಬಂತೆ ಬದುಕಿದವರು. ಹಲವು ಹೂಗಳನ್ನು ತಿರಿದು ತಂದ ಜೇನನ್ನು ತುಂಬಿಯಂತೆ, ತಾಯಿಯಂತೆ ಗುರುವಿನಂತೆ, ಸಖನಂತೆ ಲೋಕಕ್ಕೆ ಉಣಿ ಸಿದವರು. ಅವರಿಗೆ ಶತಮಾನ ತುಂಬುವುದಕ್ಕೂ ನಾಡು ಸಾಕ್ಷಿಯಾಗಬೇಕು.

ಸಮಸ್ಯೆಯೆಂದರೆ, ಈಗ ಭಾರತದಲ್ಲಿ ಸಂಕರವೂ ಬಹುತ್ವವೂ ಅನಹದ್ ತತ್ವವೂ ಅಳಿವಿನಂಚಿನ ಜೀವಿಗಳಂತೆ ಕಾಣುತ್ತಿರುವುದು. ತಮ್ಮ ಸೀಮೋಲ್ಲಂಘನೆಯ ಪ್ರಯೋಗಶೀಲತೆಗಳಿಗೆ ಎರವಾಗುತ್ತಿರುವುದು. ಬಹುತ್ವವನ್ನು ತಬ್ಬಲಿಗೊಳಿಸುವುದಕ್ಕೆ ಕೆಲವರಿಗೆ ಇನ್ನಿಲ್ಲದ ಅವಸರ. ಸಾಂಸ್ಕೃತಿಕ ಅನಕ್ಷರತೆ, ಅಸಹನೆ, ಧ್ರುವೀಕರಣ ಮತ್ತು ಏಕರೂಪೀಕರಣದ ಕಾಲದಲ್ಲಿ, ಬಹುತ್ವದ ಪರಂಪರೆಯ ಕೊಂಡಿಗಳಲ್ಲಿ ಒಬ್ಬರಾಗಿರುವ ರಾಜೀವರ ತೊಂಬತ್ತರ ಹುಟ್ಟುಹಬ್ಬ ಏರ್ಪಟ್ಟಿದೆ. ನಾಡು, ಏಕರೂಪೀಕರಣದ ಇಳಿಜಾರಿನಲ್ಲಿ ಜಾರುತ್ತಿರುವಾಗ, ಬೀಳದಂತೆ ನಮಗೆ ರಾಜೀವರೂ ಅವರ ಗುರುಗಳೂ ನಡೆದು ಮಾಡಿದ ಹಾದಿ ಕೈಮರವಾಗಿ ಕಾಣುತ್ತಿದೆ. ಆದರೆ ಅದರಲ್ಲಿ ಪಥಿಕರಾಗಿ ನಡೆವವರು ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ.

(ಎರಡು ವರ್ಷಗಳ ಹಿಂದೆ ರಾಜೀವ ತಾರಾನಾಥರಿಗೆ ತೊಂಬತ್ತು ತುಂಬಿದಾಗ ಬರೆದ ಟಿಪ್ಪಣಿ)

Rahamat Tarikere
ರಹಮತ್ ತರೀಕೆರೆ
+ posts

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರಹಮತ್ ತರೀಕೆರೆ
ರಹಮತ್ ತರೀಕೆರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...