ಅಮೆರಿಕನ್ ಮೈಗ್ರೇನ್ ಫೌಂಡೇಶನ್ 12 ವರ್ಷಕ್ಕಿಂತ ಮೇಲ್ಪಟ್ಟ 24,000ಕ್ಕೂ ಹೆಚ್ಚು ಮೈಗ್ರೇನ್ ಇರುವವರಿಗೆ ಪ್ರಶ್ನಾವಳಿ ಕಳುಹಿಸಿ, ಲಭಿಸಿದ ಸುಮಾರು 16,000-18,000 ಉತ್ತರಗಳ ಆಧಾರದಲ್ಲಿ ಸಂಶೋಧನೆಯನ್ನು ನಡೆಸಿದೆ. ಯೌವನಾವಸ್ಥೆಯ ನಂತರ ಮಹಿಳೆಯರಲ್ಲಿ ಮೈಗ್ರೇನ್ ಅಧಿಕವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ 25 ವರ್ಷದಲ್ಲಿ, ಪುರುಷರಲ್ಲಿ 24 ವರ್ಷದಲ್ಲಿ ಮೈಗ್ರೇನ್ ಕಾಡಲು ಆರಂಭವಾಗುತ್ತದೆ ಎಂದು ಸಂಶೋಧನಾ ವರದಿ ಹೇಳುತ್ತದೆ.
‘ಮೈಗ್ರೇನ್’ ಅಂದರೆ ತೀವ್ರ ತಲೆನೋವು ಅಥವಾ ಅರೆ ತಲೆನೋವು ಸದ್ಯ ಹೆಚ್ಚಾಗಿ ಯುವ ಸಮುದಾಯವನ್ನು ಕಾಡುವ ಆರೋಗ್ಯ ಸಮಸ್ಯೆ. ತಲೆಯ ಒಂದೇ ಬದಿಯಲ್ಲಿ ಯಾರೋ ಬಡಿದಂತೆ ನೋವು, ವಾಕರಿಕೆ, ವಾಂತಿ, ಬೆಳಕು ಕಂಡಾಗ ಕಣ್ಣು ಕುಕ್ಕಿದಂತಾಗುವುದು- ಹೀಗೆ ಹಲವು ಕೆಟ್ಟ ಅನುಭವಗಳು ಮೈಗ್ರೇನ್‌ಗೆ ಒಳಗಾದವರದ್ದು. ಅದರಲ್ಲೂ ಪುರುಷರಿಗಿಂತ ಅಧಿಕವಾಗಿ ಮೈಗ್ರೇನ್‌ಗೆ ತುತ್ತಾಗುವವರು ಮಹಿಳೆಯರು. ಮಹಿಳೆಯರಲ್ಲಿ ಮೈಗ್ರೇನ್ 2 ರಿಂದ 4 ಪಟ್ಟು ಹೆಚ್ಚಾಗುತ್ತದೆ ಎಂದು ಹಲವು ವೈಜ್ಞಾನಿಕ ಸಂಶೋಧನಾ ವರದಿಗಳು ಹೇಳುತ್ತವೆ.
2004ರಿಂದ 2009ವರೆಗೆ ಅಮೆರಿಕನ್ ಮೈಗ್ರೇನ್ ಫೌಂಡೇಶನ್ ನಡೆಸಿದ ಅಮೆರಿಕನ್ ಮೈಗ್ರೇನ್ ಪ್ರಿಸ್ವಲೆನ್ಸ್ ಅಂಡ್ ಪ್ರಿವೆನ್ಷನ್ (American Migraine Prevalence and Prevention-AMPP) ಸಂಶೋಧನೆಯ ಪ್ರಕಾರ ಪುರುಷರಿಗಿಂತ ಅಧಿಕ ಮಹಿಳೆಯರಿಗೆ ಮೈಗ್ರೇನ್ ಕಂಡುಬರುತ್ತಿದೆ. 12 ವರ್ಷಕ್ಕಿಂತ ಮೇಲ್ಪಟ್ಟ 24,000ಕ್ಕೂ ಹೆಚ್ಚು ಮೈಗ್ರೇನ್ ಇರುವವರಿಗೆ ಪ್ರಶ್ನಾವಳಿ ಕಳುಹಿಸಿ, ಲಭಿಸಿದ ಸುಮಾರು 16,000-18,000 ಉತ್ತರಗಳ ಆಧಾರದಲ್ಲಿ ಈ ಸಂಶೋಧನೆಯನ್ನು ಮಾಡಲಾಗಿದೆ. ಯೌವನಾವಸ್ಥೆಯ ನಂತರ ಮಹಿಳೆಯರಲ್ಲಿ ಮೈಗ್ರೇನ್ ಅಧಿಕವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ 25 ವರ್ಷದಲ್ಲಿ, ಪುರುಷರಲ್ಲಿ 24 ವರ್ಷದಲ್ಲಿ ಮೈಗ್ರೇನ್ ಕಾಡಲು ಆರಂಭವಾಗುತ್ತದೆ ಎಂದು ಸಂಶೋಧನಾ ವರದಿ ಹೇಳುತ್ತದೆ.
ಇದನ್ನು ಓದಿದ್ದೀರಾ? ಮಾತೃತ್ವ ರಜೆ ಒಂದು ವರ್ಷಕ್ಕೆ ಏರಿಸಿ: ಇದು ಕರುಣೆಯಲ್ಲ, ಮಹಿಳೆಯರ ಘನತೆಯ ಹಕ್ಕು
ಇನ್ನು 2022ರಲ್ಲಿ ಪ್ರಕಟವಾದ Sex and gender differences in migraines: a narrative review ಸಂಶೋಧನಾ ವರದಿಯೂ ಇದನ್ನೇ ಹೇಳುತ್ತದೆ. ಮೈಗ್ರೇನ್ ಹೊಂದಿರುವವರಲ್ಲಿ ಲಿಂಗಾಧಾರಿತ ವ್ಯತ್ಯಾಸಗಳನ್ನು ವಿವರಿಸುವ ಪ್ರಮುಖ ಲೇಖನಗಳ ಆಧಾರದಲ್ಲಿ ಒಟ್ಟು 7 ಸಂಸ್ಥೆಗಳು ಸೇರಿ ಈ ವರದಿ ಸಿದ್ಧಪಡಿಸಲಾಗಿದೆ. ಈ ಸಂಶೋಧನೆ ಪ್ರಕಾರ ಮಹಿಳೆಯರಿಗೆ ಅತಿ ದೀರ್ಘ ಕಾಲ ಮೈಗ್ರೇನ್ ಕಾಡುತ್ತದೆ. ಇವೆಲ್ಲವುದಕ್ಕೂ ಮಾನಸಿಕ ಒತ್ತಡ, ಜೀವನಶೈಲಿ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ವೈದ್ಯೆ, ಲೇಖಕಿ ವಸುಂಧರಾ ಭೂಪತಿ, “ಮಹಿಳೆಯರಿಗೆ ಅಧಿಕವಾಗಿ ಮೈಗ್ರೇನ್ ಕಾಡುವುದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಒಂದು ಮಾನಸಿಕ ಒತ್ತಡ. ಮಹಿಳೆಯರು ಸಾಮಾನ್ಯವಾಗಿಯೇ ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುವವರು. ಕೌಟುಂಬಿಕ ಜವಾಬ್ದಾರಿಯ ಜತೆಗೆ ವೃತ್ತಿ ಜೀವನವೂ ಇರುತ್ತದೆ. ಹೀಗೆ ಅಧಿಕ ಕೆಲಸವನ್ನು ನಿಭಾಯಿಸುವುದರಿಂದ ನರಗಳ ಮೇಲೆ ಒತ್ತಡವಾಗಿ ಮೈಗ್ರೇನ್ ಕಾಡುತ್ತದೆ” ಎಂದು ಹೇಳಿದ್ದಾರೆ.
“ಇನ್ನೊಂದು ಹಾರ್ಮೋನ್ ಏರುಪೇರಾಗುವುದರಿಂದಲೂ ಮೈಗ್ರೇನ್ ಕಾಡುತ್ತದೆ. ಮುಟ್ಟಿಗೂ ಮುನ್ನ ಅಥವಾ ಮುಟ್ಟಿನ ಬಳಿಕ ಹಾರ್ಮೋನ್‌ನ ಏರುಪೇರಾಗಿ, ರಕ್ತದೊತ್ತಡ ಉಂಟಾಗಿ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ಜತೆಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿರುವುದೂ ಒಂದು ಕಾರಣ” ಎಂದಿದ್ದಾರೆ.

“ಬಹಳ ಮುಖ್ಯವಾಗಿ ನಮ್ಮ ಹೊಟ್ಟೆಗೂ ಮೆದುಳಿಗೂ ಲಿಂಕ್ ಇರುತ್ತದೆ. ಅಂದರೆ ಹೊಟ್ಟೆಯಲ್ಲಿ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡಲು ಹೈಡ್ರೋಕ್ಲೋರಿಕ್ ಆಮ್ಲ ಉತ್ಪಾದನೆಯಾಗುತ್ತಾ ಇರುತ್ತದೆ. ಅದಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ನೀಡದೆ ಇದ್ದಾಗ ಸಮಸ್ಯೆಯಾಗುತ್ತದೆ. ಹೊಟ್ಟೆ ಉರಿ ಹೆಚ್ಚಾಗುತ್ತದೆ. ಅದರಿಂದಲೂ ತಲೆ ನೋವು ಕಾಡುತ್ತದೆ” ಎಂದು ಹೇಳಿದ್ದಾರೆ.
“ಮಹಿಳೆಯರು ನಾವಾಗಿಯೇ ಅಡುಗೆ ಮಾಡಿದರೂ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವುದು ಬಹಳ ಕಡಿಮೆ. ಕುಟುಂಬದವರಿಗೆ, ಮಕ್ಕಳು, ಗಂಡ, ಅತ್ತೆ ಮಾವ ಹೀಗೆ ಎಲ್ಲರಿಗೂ ಕೊಟ್ಟು ಕೊನೆಯಲ್ಲಿ ಉಳಿದಿದ್ದನ್ನು ಸ್ವಲ್ಪ ತಿನ್ನುವುದು ಅಥವಾ ಏನೋ ಒಂಚೂರು ತಿಂದರೆ ಸಾಕು ಎಂದು ಮಹಿಳೆಯರು ಅಂದುಕೊಳ್ಳುತ್ತಾರೆ. ರೊಟ್ಟಿ-ಚಟ್ನಿ, ಮುದ್ದೆ-ಸಾರು ತಿಂದರೂ ಸರಿಯಾಗಿ ತರಕಾರಿ ತಿನ್ನಲ್ಲ. ಪೋಷಕಾಂಶಗಳ ಪ್ರಮಾಣ ಇರುವುದಿಲ್ಲ. ಅದರಿಂದಲೂ ‘ಗ್ಯಾಸ್ಟ್ರಿಕ್ ಇರಿಟೇಶನ್’ (Gastritis) ಆಗಿ ಮೈಗ್ರೇನ್ ಕಾಡುತ್ತದೆ. ಇವೆಲ್ಲವೂ ಒಂದಕ್ಕೊಂದು ಸಂಬಂಧವನ್ನು ಹೊಂದಿರುವಂತದ್ದು” ಎಂದಿದ್ದಾರೆ.
ಇದನ್ನು ಓದಿದ್ದೀರಾ? 2025 ಹಿನ್ನೋಟ | ಸಾಹಿತ್ಯ, ಉದ್ಯಮ, ಸಿನಿಮಾ ಬಾಹ್ಯಾಕಾಶ, ಕ್ರೀಡೆ… ಸಾಧನೆ ತೋರಿದ ಭಾರತೀಯ ನಾರಿಯರು
“ಮಹಿಳೆಯರಲ್ಲಿ ಮೈಗ್ರೇನ್ ಹೆಚ್ಚಾಗಿ ಕಾಡಲು ಇನ್ನೊಂದು ಕಾರಣ ನೀರು ಕುಡಿಯದೆ ಇರುವುದು. ಗಾರ್ಮೆಟ್‌ನತ್ತ ಕೆಲಸದ ಸ್ಥಳದಲ್ಲಿ, ಕೆಲವು ಶಾಲೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಇದ್ದರೂ ನೀರು, ಶುಚಿತ್ವ ಇರಲ್ಲ. ಈ ತರಹದ ಸಮಸ್ಯೆಯಿಂದಾಗಿ ಮಹಿಳೆಯರು ಕೆಲಸದ ಅವಧಿಯಲ್ಲಿ ಹೆಚ್ಚಾಗಿ ನೀರು ಕುಡಿಯುವುದಿಲ್ಲ. ರಾತ್ರಿ ಮನೆಗೆ ಹೋದ ಬಳಿಕ ಮಾತ್ರ ನೀರು ಕುಡಿಯುವವರು ಇದ್ದಾರೆ. ನೀರಿನ ಪ್ರಮಾಣ ದೇಹದಲ್ಲಿ ಕಡಿಮೆಯಾದಾಗ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ನಿದ್ದೆ ಮಾಡದಿರುವುದೂ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.
ಮೈಗ್ರೇನ್ ತಡೆಗಟ್ಟಲು ಏನು ಮಾಡುವುದು?
ಇನ್ನು ಮಹಿಳೆಯರು ಮೈಗ್ರೇನ್ ತಡೆಗಟ್ಟಲು ಏನು ಮಾಡುವುದು ಎಂಬ ಬಗ್ಗೆ ಮಾತನಾಡಿದ ವೈದ್ಯೆ ವಸುಂಧರಾ ಭೂಪತಿ, “ಮೈಗ್ರೇನ್‌ಗೆ ದೈಹಿಕ, ಮಾನಸಿಕ ಎರಡೂ ಕಾರಣಗಳಿವೆ. ಮಾನಸಿಕವಾಗಿ ನಿಭಾಯಿಸಲು ಕೆಲವು ಜೀವನಶೈಲಿಯಲ್ಲಿ ರೂಢಿಸಿಕೊಳ್ಳಬೇಕಾಗುತ್ತದೆ. ನಮಗೆ ಇಷ್ಟವಾಗುವ ಹವ್ಯಾಸಗಳನ್ನು ಅಭ್ಯಾಸ ಮಾಡಿಕೊಂಡು ಮಾನಸಿಕ ಒತ್ತಡ ನಿಭಾಯಿಸಿದರೆ ಮೈಗ್ರೇನ್ ಅನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಲೇಬೇಕು. ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು” ಎಂದು ಸಲಹೆ ನೀಡಿದ್ದಾರೆ.
“ಯಾವ ಕಾರಣದಿಂದಾಗಿ ಮೈಗ್ರೇನ್ ಆಗುತ್ತಿದೆ ಎಂದು ತಿಳಿಯುವುದು ಮುಖ್ಯವಾಗುತ್ತದೆ. ಮುಖ್ಯವಾಗಿ ಖಾಲಿ ಹೊಟ್ಟೆಯಲ್ಲಿ ಕಾಫಿ, ಚಹಾ ಸೇವನೆ ಮಾಡದಿರಿ. ಸಮತೋಲನ ಆಹಾರ ಸೇವನೆ ಮಾಡಬೇಕು. ಬೇಳೆ, ಏಕದಳ ಧಾನ್ಯ, ತರಕಾರಿ, ಹಣ್ಣುಗಳು, ಮಾಂಸಹಾರ, ಮೊಟ್ಟೆ ಎಲ್ಲವೂ ಒಳಗೊಂಡಂತಹ ಆಹಾರ ಸೇವಿಸಿದರೆ ಈ ಮೈಗ್ರೇನ್ ಸಮಸ್ಯೆಯನ್ನು ತಡೆಗಟ್ಟಬಹುದು” ಎಂದು ತಿಳಿಸಿದ್ದಾರೆ.
ಮೈಗ್ರೇನ್ ಮಾತ್ರವಲ್ಲ ಸಾಮಾನ್ಯವಾಗಿಯೇ ಪುರುಷರಿಗಿಂತ ಮಹಿಳೆಯರಿಗೆ ಅಧಿಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಮಹಿಳೆಯರ ಜೀವನದಲ್ಲಿ ಮುಟ್ಟು, ಗರ್ಭಧಾರಣೆ ಮತ್ತು ಮುಟ್ಟು ನಿಲ್ಲುವಿಕೆ (ಮೆನೋಪಾಸ್) ಸಮಯದಲ್ಲಿ ಹಾರ್ಮೋನುಗಳಲ್ಲಿ ಭಾರಿ ಏರುಪೇರಾಗುತ್ತದೆ. ಇವೆಲ್ಲವೂ ಥೈರಾಯ್ಡ್ ಸಮಸ್ಯೆ, ಖಿನ್ನತೆ ಮತ್ತು ಮೂಳೆಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಹಾಗೆಯೇ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿಯೂ ಪುರುಷರಿಗಿಂತ ಭಿನ್ನವಾಗಿರುತ್ತದೆ. ಆದ್ದರಿಂದಾಗಿ ಮಹಿಳೆಯರು ಹೆಚ್ಚಾಗಿ ತಮ್ಮ ಕುಟುಂಬದ ಜತೆಗೆ ತಮ್ಮ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯ. ಪೋಷಕಾಂಶಯುಕ್ತ ಆಹಾರ ಸೇವಿಸಿ. ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಿ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




