ಕ್ಯಾನ್ಸರ್ ಆಸ್ಪತ್ರೆಯ ಬೆಡ್ ಮೇಲಿಂದ ಕಾಕಡ ಮಲ್ಲಿಗೆ ಬೆಳೆಯುವ ಕನಸು ಕಂಡ ʼನೀರ್ ಸಾಬ್‌ʼ

Date:

ವಿಪರೀತದ ಓದು, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ರಾಜಕಾರಣವನ್ನು ಮೆಚ್ಚಿಕೊಂಡಿದ್ದ ಯುವಕ ನಜೀರ್ ಎಂದೂ ಮಸೀದಿಗಾಗಲಿ, ಮಂದಿರಕ್ಕಾಗಲಿ, ಹೋದವರಲ್ಲ. ಸದಾ ಜನರ ಕಷ್ಟಗಳಿಗೆ ಸ್ಪಂದಿಸುವ ಮಗನನ್ನು ತಂದೆ ಪೀರಸಾಬರೇ ಸಮಾಜ ಸೇವೆ ಮಾಡಲು ಪ್ರೇರೇಪಿಸಿದರು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ 80ರ ದಶಕಕ್ಕೆ ವಿಶೇಷ ಸ್ಥಾನವಿದೆ. ಆ ದಶಕದಲ್ಲಿ ನಡೆದ ಪ್ರಯೋಗಶೀಲ ರಾಜಕಾರಣ ಮತ್ತು ಕೆಲ ರಾಜಕಾರಣಿಗಳ ಮಾದರಿ ಆಡಳಿತ, ಮತ್ತವರ ವೈಯಕ್ತಿಕವು ಸಾಮಾಜಿಕವೂ ಆಗಿ ಬದುಕಿದ, ನೈತಿಕ ಪ್ರಜ್ಞೆಯ ಮಾದರಿಗಳು ಅನನ್ಯವಾದವುಗಳಾಗಿವೆ. ವಿಧಾನಸಭಾ ಅಧಿವೇಶನ ನಡೆಯುತ್ತಿತ್ತು. ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಆಡಳಿತಾರೂಢ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೊತ್ತೂ ಸಹನೆಯಿಂದ ಕೇಳಿಸಿಕೊಂಡ ಆಡಳಿತಾರೂಢ ಮಂತ್ರಿ, ತಮ್ಮದೇ ಸರ್ಕಾರದಲ್ಲಿ ಕೇವಲ ಎರಡೇ ಎರಡು ನಗರಗಳಿಗೆ ಕೊಟ್ಟ ಅನುದಾನವನ್ನು ತನ್ನ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒದಗಿಸಿದ್ದರೆ ಕನಿಷ್ಠ ಏನಿಲ್ಲವೆಂದರೂ 2,600 ಹಳ್ಳಿಗಳಲ್ಲಿ ಜನತಾ ಮನೆಗಳನ್ನು ನಿರ್ಮಿಸಿ ಕೊಡಬಹುದಿತ್ತು. ಹಳ್ಳಿಗಳನ್ನು ನಿರ್ಲಕ್ಷಿಸಿ, ನಗರಗಳ ಜನರಿಗೆ ಮಾತ್ರ ಸವಲತ್ತು ಕೊಡುವುದು ಎಷ್ಟರಮಟ್ಟಿಗೆ ಸರಿ? ಎಂದು ಖರ್ಗೆಯವರನ್ನೇ ಪ್ರಶ್ನಿಸಿದರು. ಹೀಗೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಇದ್ದರೂ, ಜನರಿಗೆ ನೀರು ಮತ್ತು ಸೂರು ಪೂರೈಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಮಂತ್ರಿ ಅಬ್ದುಲ್ ನಜೀರ್ ಸಾಬು ಎಂದು ಯಾರನ್ನಾದರೂ ಕೇಳಿದರೆ ಒಂದರೆಕ್ಷಣ ಯೋಚಿಸಿಯಾರೇನೋ. ಆದರೆ ‘ನೀರ್ ಸಾಬು’ ಎಂದು ಕೇಳಿ, ತಕ್ಷಣ ನಗುಮುಖದ ಸಾಧಾರಣ ಮೈಕಟ್ಟಿನ ವಿನಯವೇ ಮೈವೆತ್ತಿದ್ದ ಆಕೃತಿ ಕಣ್ಣಮುಂದೆ ಮೂಡುತ್ತದೆ.

ಕರ್ನಾಟಕದ ಗಡಿ ಪ್ರದೇಶಕ್ಕೆ ಅಂಟಿಕೊಂಡಂತೆ ಇರುವ ತಮಿಳುನಾಡಿನ ಬೈಯಣಪುರವು ಎಂಬ ಹಳ್ಳಿಯಲ್ಲಿ ಪೀರ್ ಸಾಬು ಮತ್ತು ಆಯೇಷಾಬಿ ಇವರ ಪುತ್ರನಾದ ಅಬ್ದುಲ್ ನಜೀರ್ ಸಾಬು ಮುಂದೊಂದು ದಿನ ಕರ್ನಾಟಕ ಜನಮಾನಸದಲ್ಲಿ ನೀರ್ ಸಾಬು ಎಂದು ಪ್ರಖ್ಯಾತಿಯಾಗುತ್ತಾನೆ ಎಂದು ಯಾರು ತಾನೆ ಊಹಿಸಿಕೊಳ್ಳಲಿಕ್ಕೆ ಸಾಧ್ಯವಿತ್ತು?

ಮಕ್ಕಳಿಗೆ ಕನ್ನಡದಲ್ಲಿಯೇ ವಿದ್ಯಾಭ್ಯಾಸ ಮಾಡಿಸಬೇಕು ಎಂಬ ಹಂಬಲದೊಂದಿಗೆ ತಮ್ಮ ಇಡೀ ಕುಟುಂಬವನ್ನೇ ಗುಂಡ್ಲುಪೇಟೆಗೆ ಸ್ಥಳಾಂತರಿಸಿದ ಪೀರಸಾಬರು, ತಮ್ಮ ಮಗ ನಜೀರನ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸುವಂತೆ ನೋಡಿಕೊಂಡರು. ಪಠ್ಯದ ಜೊತೆಗೆ ಪಠ್ಯೇತರ ಪುಸ್ತಕಗಳನ್ನೇ ವಿಪರೀತ ಓದುತ್ತಿದ್ದ ನಜೀರ್ ಸಾಬು ಎಂಬ ಯುವಕನಿಗೆ ಅದೇ ಮುಳುವಾಗಿ ಆರೋಗ್ಯ ಕೈಕೊಟ್ಟಿತು. ಕಾಲೇಜಿಗೂ ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯನ್ನು ತಂದೊಡ್ಡಿತು. ಅನಿವಾರ್ಯವಾಗಿ ಕಾಲೇಜಿನ ವಿದ್ಯಾಭ್ಯಾಸವನ್ನೂ ಅಲ್ಲಿಗೇ ಮೊಟಕುಗೊಳಿಸಬೇಕಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಪರೀತದ ಓದು, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ರಾಜಕಾರಣವನ್ನು ಮೆಚ್ಚಿಕೊಂಡಿದ್ದ ಯುವಕ ನಜೀರ್ ಎಂದೂ ಮಸೀದಿಗಾಗಲಿ, ಮಂದಿರಕ್ಕಾಗಲಿ, ಹೋದವರಲ್ಲ. ಸದಾ ಜನರ ಕಷ್ಟಗಳಿಗೆ ಸ್ಪಂದಿಸುವ ಮಗನನ್ನು ತಂದೆ ಪೀರಸಾಬರೇ ಸಮಾಜ ಸೇವೆ ಮಾಡಲು ಪ್ರೇರೇಪಿಸಿದರು. ನಂತರ ನಡೆದಿದ್ದು ಗುಂಡ್ಲುಪೇಟೆಯ ಮುನಿಸಿಪಾಲಿಟಿಯ ಮೆಂಬರು ಚುನಾವಣೆ, ಅದಾದ ನಂತರ ಗುಂಡ್ಲುಪೇಟೆ ಶಾಸಕಿಯಾಗಿ ವಿಧಾನಸಭೆಯ ಸಭಾಪತಿಯೂ ಆಗಿದ್ದ ನಾಗರತ್ನಮ್ಮನವರು ಅತ್ಯಂತ ಪ್ರಾಮಾಣಿಕ, ನಿಸ್ಪೃಹ ವ್ಯಕ್ತಿತ್ವದ ನೆಚ್ಚಿನ ನೀಲಿ ಕಂಗಳ ಈ ಹುಡುಗ ನಜೀರನನ್ನು 1976ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲು ಪಕ್ಷದ ಮೇಲೆ ಒತ್ತಡ ತಂದು ಅದರಲ್ಲಿ ಯಶಸ್ವಿಯೂ ಆದರು.

ನಂತರ ಕರ್ನಾಟಕ ಕ್ರಾಂತಿ ರಂಗದ ಬಳಗ ಸೇರಿಕೊಂಡ ನಜೀರ್ ಸಾಬರು, 1983ರಲ್ಲಿ ಜನತಾರಂಗದ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಮಂತ್ರಿಯಾದರು. ಅಂದು ಮುಖ್ಯಮಂತ್ರಿ ಹೆಗಡೆಯವರು, ಅಬ್ದುಲ್ ನಜೀರ್ ಸಾಬರ ಮುಂದೆ ಸಂಪುಟದ ಪೋರ್ಟ್ ಫೋಲಿಯೋಗಳನ್ನು ಹರಡಿ “ನೋಡಿ ನಜೀರ್ ಇಲ್ಲಿ ಹಣಕಾಸು, ಗೃಹ, ನೀರಾವರಿ, ಕೈಗಾರಿಕೆ, ಶಿಕ್ಷಣ, ಸಮಾಜ ಕಲ್ಯಾಣ, ಲೋಕೋಪಯೋಗಿ, ಸಾರಿಗೆ, ಕಂದಾಯ ಮುಂತಾದ ಸಚಿವ ಖಾತೆಗಳಿವೆ. ನಿನಗೆ ಯಾವುದು ಬೇಕೋ ಆಯ್ಕೆ ಮಾಡಿಕೋ, ಈ ಅವಕಾಶ ನಿನಗೆ ಮಾತ್ರ”ಎಂದರಂತೆ.

ಅಬ್ದುಲ್ ನಜೀರ ಸಾಬರು “ನನಗೆ ಗ್ರಾಮೀಣಾಭಿವೃದ್ಧಿ ಖಾತೆಯೇ ಇರಲಿ”ಎಂದು ಆಯ್ದುಕೊಂಡರಂತೆ. ಸಚಿವ ನಜೀರ್ ತಲೆಯಲ್ಲಿ ಗುಡಿಸಲು ಮುಕ್ತ ಹಳ್ಳಿಗಳ ಕನಸು, ಪ್ರತಿಯೊಬ್ಬರಿಗೂ ಕುಡಿಯುವ ನೀರು, ಕೃಷಿಗೆ ನೀರು ಒದಗಿಸುವ ಬಗ್ಗೆಯೇ ಚಿಂತೆ. ಹೀಗೆ ಕನಸು ಮೊಳಕೆಯೊಡೆದು ಸಸಿಯಾಗಿ ಕೊನೆಗೊಂದು ದಿನ ಬಡವರಿಗೆ ಸರ್ಕಾರವೇ ಕಟ್ಟಿಕೊಡುವ “ಜನತಾ ಮನೆ” ಮತ್ತು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಮೈಲುಗಟ್ಟಳೆ ಹೊತ್ತು ಸಾಗುವ ಗರ್ಭಿಣಿಯರ ಕಷ್ಟಗಳನ್ನು ನಿವಾರಿಸುವ ಹಳ್ಳಿ ಹಳ್ಳಿಗೆ ಕೈಪಂಪಿನ ಬೋರ್ ವೆಲ್ಲು ಕೊರೆಸಿ ನೀರು ಹರಿಸಿದ ಭಗೀರಥನಾಗಿ ಹೆಸರು ಮಾಡಿದ್ದು ಈಗ ಇತಿಹಾಸ.

ನಜೀರ್‌ ಸಾಬ್‌ ಇನ್‌ಸ್ಟಿಟ್ಯೂಟ್‌

ಬರಪೀಡಿತ ಮೊಳಕಾಲ್ಮೂರು ತಾಲೂಕಿನ ಹಳ್ಳಿಗಳಿಗೆ ಬೋರ್ ವೆಲ್‌ ಕೊರೆಸಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿದೆ ನಜೀರ್ ಸಾಬರು, ಗಂಗಾ ಕಲ್ಯಾಣ ಎಂಬ ಕಿರು ನೀರಾವರಿ ಪದ್ದತಿಯನ್ನನುಸರಿಸಿ ಬ್ಯಾಸಾಯ ಮಾಡಲು ರೈತರನ್ನು ಪ್ರೇರೇಪಿಸಿದರು. ಅದೇಕೋ ಏನೋ, ಮೊಳಕಾಲ್ಮೂರು ತಾಲೂಕಿನ ಬಂಜಗೆರೆ ಎಂಬ ಹಳ್ಳಿಯ ಪಕ್ಕದ ಒಂದು ಹಳ್ಳಿಯಲ್ಲಿ ಎಷ್ಟೇ ಬೋರು ಕೊರೆದರೂ ಹನಿ ನೀರು ಬೀಳಲಿಲ್ಲ. ಅದೊಂದು ದಿನ, ಸ್ವತಃ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದ ನಜೀರ ಸಾಬರಿಗೆ ವಿಷಯ ತಿಳಿದು ಹಳ್ಳಿಯ ಜನರ ಸಂಕಷ್ಟ ನೆನೆದು ತಳಮಳಿಸಿದರು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜಿಯಾಲಜಿಸ್ಟರೊಂದಿಗೆ ಸ್ವತಃ ಹಳ್ಳಿಗೆ ಬಂದು, ಹಳ್ಳಿಯ ಮೂಲೆ ಮೂಲೆಗಳಲ್ಲೂ ನೀರಿಗಾಗಿ ತಡಕಾಡಿದರು. ಒಂದು ಹನಿ ನೀರೂ ಬೀಳುವುದಿಲ್ಲ ಎಂದು ಭೂ ವಿಜ್ಞಾನಿಗಳು ಖಚಿತವಾಗಿ ಹೇಳತೊಡಗಿದರು. ಬೆಳಿಗ್ಗೆಯಿಂದಲೂ ಹಳ್ಳಿಯ ಸುತ್ತಲಿನ ಹೊಲ, ಕಣಗಳಲ್ಲಿ ಸುತ್ತಾಡಿದ್ದ ನಜೀರರಿಗೆ ಆ ಬಿರುಬಿಸಿಲಿನ ನಾಡಿನಲ್ಲಿ, ದೂರದ ಆಸೆಯ ಕಂಗಳ ಹಳ್ಳಿಗರನ್ನು ಕಂಡು ಕರುಳು ಚುರುಕ್ ಎಂದಿತು. ತಾನೊಬ್ಬ ಪ್ರಭಾವಿ ಮಂತ್ರಿ ಎಂಬುದನ್ನೂ ಮರೆತು ಸಾಮಾನ್ಯರಲ್ಲಿ ಸಾಮಾನ್ಯನಂತೆ ‘ಚಿಂತಿ ಮಾಡಬ್ಯಾಡ್ರಿ ಏನರ ಮಾಡೋಣ ತಡಿರಿ’ ಎಂದು ಹೇಳುತ್ತಲೇ ತಾವು ಸುಧಾರಿಸಿಕೊಳ್ಳಲೆಂದು ಕುಳಿತಿದ್ದ ಜಗುಲಿಯಿಂದ ಛಂಗನೆ ಜಿಗಿದು ಜೋರಾಗಿ ನಡೆಯತೊಡಗಿದರು. ಅವರ ಹಿಂದೆ ಹಿಂದೆ ಅಧಿಕಾರಿಗಳು, ಪೊಲೀಸರು, ಜಿಯಾಲಜಿಸ್ಟರುಗಳೂ ಏದುಸಿರು ಬಿಡುತ್ತಲೇ ನಡೆದು ಬಂದರು. ಒಂದು, ಎರಡು, ಮೂರು ಕಿಲೋಮೀಟರುಗಳ ದೂರದಲ್ಲಿದ್ದ ಬಂಜಗೆರೆ ಎಂಬ ಹಳ್ಳಿಯಲ್ಲಿ ಬೋರವೆಲ್ಲು ಕೊರೆಯುವಂತೆ ಹೇಳಿದರು. ಸಂಜೆಯಷ್ಟೊತ್ತಿಗೆ ನೀರು ಚಿಮ್ಮತೊಡಗಿತು. ಅಲ್ಲಿಯವರೆಗೂ ಕ್ಯಾಬಿನೆಟ್ ಮಿನಿಸ್ಟರ್ ನಜೀರರು ಇಂದು ಹನಿ ನೀರೂ ಕುಡಿದಿರಲಿಲ್ಲ! ಆ ಊರಿನಿಂದ ಮೂರು ಕಿಲೋಮೀಟರು ದೂರದ ಊರಿಗೆ ಪೈಪ್‌ಲೈನ್ ಮುಖಾಂತರ ನೀರು ಹರಿಸಲಾಯಿತು. ಬೊಗಸೆಯಲ್ಲಿ ಹಿಡಿದ ನೀರಿನಲ್ಲಿ ಹಳ್ಳಿಗಳ ಮುಖಗಳನ್ನು ಕಂಡು ನಜೀರಸಾಬರಿಗೆ ಅಂದು ಸುಖದ ನಿದ್ರೆ ಆವರಿಸಿರಬೇಕು ಎಂದು ಆ ಊರಿನ ಮುಖಂಡ ಬಿ.ಎಂ.ಹನುಮಂತಪ್ಪ ಈಗಲೂ ಧನ್ಯತೆಯಿಂದ ಸ್ಮರಿಸುತ್ತಾರೆ.

ಹೀಗೆ ಸಾಗಿ ಬಂದ ನಜೀರ್ ಸಾಬು ತನ್ನ ಸೂರು ಮತ್ತು ನೀರು ಇವೆರಡರಿಂದಾಗಿ ಮುಖ್ಯಮಂತ್ರಿಗಳಿಗಿಂತಲೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡರು. 1983ರಿಂದ 1987ರವರೆಗಿನ ಕರ್ನಾಟಕ ಸರಕಾರದಲ್ಲಿ ಅತ್ಯಂತ ಪ್ರಭಾವಿ ಮತ್ತು ವರ್ಚಸ್ಸಿನ ಮಂತ್ರಿಯಾಗಿದ್ದರೂ ಎಂದೆಂದಿಗೂ ಅಹಂನ್ನು ತಲೆಗೇರಿಸಿಕೊಳ್ಳದೆ ಸರಳವಾಗಿಯೆ ಬದುಕಿದರು. ಮಂತ್ರಿಯಾದರೂ ತನ್ನ ಬಾಲ್ಯದ ಅಪರಿಮಿತ ಗೆಳೆಯರನ್ನು ಮರೆಯದೆ “ಮಾವಿನಹಣ್ಣು ಸೀಜನ್ ಕಣ್ಲಾ… ಮಾನಣ್ಣು ತಿನ್ನಾಣ ಬಾ”ಎಂದು ಕರೆದು ಗೆಳೆಯರೊಂದಿಗೆ ತನ್ನ ಎರಡೂ ಕೈಗಳೊಂದಿಗೆ ಮಾವಿನಹಣ್ಣು ಹಿಚುಕಿ ಮುಖ ಮೂತಿಯೆಲ್ಲಾ ಹಣ್ಣಿನ ರಸ ಸುರಿಸಿಗೊಂಡು, ಅಂಗಿ ಮೇಲೂ ಇಳಿಸಿಕೊಂಡು ತಿನ್ನುವ ಪರಿಗೆ “ನಜೀರಣ್ಣ… ನೀನೀಗ ಮಂತ್ರಿ ಕಣ್ಣೋ”ಎಂದರೆ, “ಯಾಕ್ಲಾ…. ಮಂತ್ರಿಯಾದರೆ ಮಾನಣ್ಣು ತಿನ್ನಬಾರದು ಅಂತೇನರ ಕಾನೂನು ಐತಾ?” ಎಂದು ಕೇಳುತ್ತಿದ್ದರು. ಗ್ರಾಮೀಣ ಜನರು ಸರ್ಕಾರದ ಆಡಳಿತದಲ್ಲಿ ಸಹಭಾಗಿಗಳಾಗಬೇಕು ಎನ್ನುವ ಪೀಪಲ್ಸ್ ಪಾರ್ಟಿಸಿಪೇಷನ್ ತತ್ವಕ್ಕೆ ಅನುಗುಣವಾಗಿ ಅವರು ಜಾರಿಗೆ ತಂದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಮಂಡಲ ಪಂಚಾಯಿತಿಗಳಂತಹ ಅಧಿಕಾರ ವಿಕೇಂದ್ರೀಕರಣ ಇಡೀ ಭಾರತಕ್ಕೆ ಮಾದರಿಯಾಯಿತು.

ಜನರ ಕಷ್ಟಸುಖಗಳೆರಡನ್ನೂ ಅರಿತಿದ್ದ ನಜೀರ್ ಸಾಬರು ಜಾತಿ, ಮತ ಧರ್ಮಗಳನ್ನು ನಂಬಿ ಎಂದೂ ರಾಜಕಾರಣ ಮಾಡಲಿಲ್ಲ. ವರ್ಗನೆಲೆಯ ಮೌಲಿಕ ರಾಜಕಾರಣಕ್ಕೆ ಬದ್ಧರಾಗಿ ಜನಪರ ಕೆಲಸ ಮಾಡಿ ಜನಾನುರಾಗಿಯಾದರು. ರಾಜಕಾರಣ ಎಂಥವರನ್ನೂ ಕೆಟ್ಟವರನ್ನಾಗಿಸಿಬಿಡುತ್ತದೆಯಂತೆ. ಇವರ ಖ್ಯಾತಿಯನ್ನು ಸಹಿಸಿಕೊಳ್ಳಲಾಗದ ಕೆಲವರು, ನಜೀರ್ ಸಾಬು ಈಗ ಮೊದಲಿನಂತಿಲ್ಲ.ಆತ ಭ್ರಷ್ಟನಾಗಿದ್ದಾನೆ ಎಂಬುದಾಗಿ ಅಪಪ್ರಚಾರದಲ್ಲಿ ತೊಡಗಿದ್ದರು. ಅದಕ್ಕೆ ಅವರ ಆತ್ಮೀಯ ಗೆಳೆಯರಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ “ಭ್ರಷ್ಟನಾಗೋಕೂ ಧೈರ್ಯ ಬೇಕು, ಆ ಧೈರ್ಯ ನಜೀರನಿಗೆ ಎಲ್ಲಿದೆ?” ಎಂಬುದಾಗಿ ನಜೀರ್ ಸಾಬರ ನೈತಿಕ ಪ್ರಜ್ಞೆಯನ್ನು ಕೊಂಡಾಡಿದ್ದರು.

nz1

ಇದನ್ನೂ ಓದಿ ಗೂಗಲ್ AI ಡೇಟಾ ಹಬ್ ಕರ್ನಾಟಕದ ಕೈ ತಪ್ಪಿತೇ?

ತನ್ನ ಕ್ಷೇತ್ರವನ್ನು ತಾಯಿಯಂತೆ ಪೊರೆದು,ಕ್ಷೇತ್ರದ ಜನತೆಯನ್ನು ಮಕ್ಕಳಂತೆ ಪೋಷಿಸಿದ ಇಂತಹ ತಾಯ್ಗರುಳಿನ ಶಾಸಕ,ಮಂತ್ರಿ ಹೋಗಲಿ, ಈಗೊಬ್ಬ ಗ್ರಾಮಪಂಚಾಯಿತಿ ಸದಸ್ಯ ಕೂಡ ಈ ಕಾಲದಲ್ಲಿ ಹುಡುಕಿದರೂ ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ.
ಒಬ್ಬ ಸಿಟ್ಟಿಂಗ್ ಮಿನಿಸ್ಟರ್ ಸ್ವತಃ ಗುಣಪಡಿಸಲಾಗದ ಕ್ಯಾನ್ಸರ್ ರೋಗಕ್ಕೆ ತಾನೇ ತುತ್ತಾದಾಗ, ಗುಂಡ್ಲುಪೇಟೆ ಕ್ಷೇತ್ರದಿಂದ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಬಂದ ರೈತ ಗೆಳೆಯನನ್ನು ಕಂಡು ಕ್ಯಾನ್ಸರ್ ಆಸ್ಪತ್ರೆಯ ಬೆಡ್ ಮೇಲಿಂದಲೇ ಪ್ರೀತಿಯಿಂದ ನಜೀರ್ ಮಾತಾಡಿಸಿದರು. ಆ ಸಂದರ್ಭದಲ್ಲಿ ರಾಜಕೀಯದ ವಿಐಪಿಗಳು, ರಾಜಕಾರಣಿಗಳೂ ಸಹ ಅಲ್ಲಿದ್ದರು. ಆಗ ಅವರನ್ನೆಲ್ಲ ಕೂಡಿಸಿ, ನಜೀರಸಾಬರು ಆ ರೈತ ಸ್ನೇಹಿತನ ಹೆಗಲ ಮೇಲೆ ಕೈ ಹಾಕಿ,”ನೀನು ಹೀಗೇ ಟೈಮ್ ಕಳೆದು ಬಿಟ್ಟೆ, ವಯಸ್ಸು ವಾಪಸ್ಸು ಬರೋದಿಲ್ಲ ದೋಸ್ತ, ನಾನು ಹೇಳೋದನ್ನು ಕೇಳಿಲ್ಲಿ… ಈ ಸರ್ತಿ ನೀನು ಒಂದೇ ಒಂದು ಎಕರೆಯಲ್ಲಿ ಕಾಕಡ ಮಲ್ಲಿಗೆ ಅಂಟು ಹಚ್ಚಿಬಿಡು, ಅವೇ ನಿನ್ನನ್ನು ಬಡತನದಿಂದ ದೂರ ಇಡುತ್ತವೆ. ನಿನ್ನ ಸಮಸ್ಯೆ ಕಷ್ಟ ಎಲ್ಲಾ ಬಗೆಹರೀತದೆ ಏನಪಾ..?” ಹೀಗೆ ಸಂತೈಸುವ ಕ್ಯಾನ್ಸರ್ ಪೇಷಂಟು ಗೆಳೆಯ, ತನ್ನ ಹಿತ ಬಯಸುವ ತಮ್ಮೂರಿನ ಎಮ್ಮೆಲ್ಲೆಯನ್ನು ಕಂಡು ಆ ಗೆಳೆಯನಿಗೆ ಅಳು ತಡೆಯಲಾಗಲಿಲ್ಲ.

ಕೃಷಿರಂಗ | ದೇಸಿ ಜಾನುವಾರುಗಳ ಸಂರಕ್ಷಣೆ

ವಿನಯ, ಸಜ್ಜನಿಕೆ, ಮತ್ತು ಪ್ರಾಮಾಣಿಕತೆಗಳನ್ನು ಎಂದಿಗೂ ಬಿಡದ ನಜೀರ್ ಸಾಬು ಈ ಹೊತ್ತಿನ ರಾಜಕಾರಣದ ಸಂತನಂತೆ, ಅಪ್ಪಟ ಮನುಷ್ಯನಂತೆ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತಾರೆ. ಅಧಿಕಾರ ಮತ್ತು ಅಂತಸ್ತು ಈ ಹೊತ್ತಿನ ಬಹುದೊಡ್ಡ ಅಪಾಯಗಳಿಂದ ತಪ್ಪಿಸಿಕೊಳ್ಳುವುದೂ ಒಂದು ಸವಾಲು. ಅಧಿಕಾರ, ಹಣ, ಧರ್ಮ ಮತ್ತು ಜಾತೀಯ ಹೊಳೆಯಲ್ಲಿ ಕೊಚ್ಚಿಹೋದವರ ಕತೆಗಳು ನಮ್ಮೆದುರಿಗೇ ಇವೆ. ಹಸಿದವನ ಮುಂದೆ ಉಂಡವನು ತೇಗುವ ಹಾಗೆ ನಜೀರ್ ಸಾಬು ಎಂದಿಗೂ ತೇಗಲಿಲ್ಲ. ಬದಲಾಗಿ
ವಯಸ್ಸಾಗುತ್ತಾ ಹೋದಂತೆ ತನ್ನ ದುಗುಡ ಹೆಚ್ಚುತ್ತಿದೆ. ಜಗತ್ತಿನ ಜತೆ ರಾಜಿ ಮಾಡಿಕೊಂಡು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಹೀಗೆ ಹೇಳಿ ನೈತಿಕ ಪ್ರಜ್ಞೆಯನ್ನು ಮೆರೆದ ಮಹಾ ಸೋಷಿಯಲಿಸ್ಟ್ ರಸೆಲ್ ನ ತಳಮಳವನ್ನೇ ನಜೀರ್ ಸಾಬರು ಅನುಭವಿಸಿದರು.

ಹಿಂದು, ಹಿಂದುತ್ವ ಇವೇ ಮುಂತಾದ ಕ್ಲೀಷೆಗಳಲ್ಲಿ ಮುಳುಗಿಹೋದ ಭಾರತದ ಕ್ಷುದ್ರ ರಾಜಕಾರಣಕ್ಕೆ ಅಬ್ದುಲ್ ನಜೀರ್ ಸಾಬರ ಸೂರು ಮತ್ತು ನೀರು ಇವೆರಡರ ನೆನಪು ಇಂದಿನ ತುರ್ತಾಗಬೇಕಿದೆ. ನಮ್ಮ ಊರು ಮತ್ತು ಊರುಗಳ ರಾಜಕಾರಣವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಬೇಕಾದ ವಿವೇಕವನ್ನು ನಜೀರ್ ರ ವ್ಯಕ್ತಿತ್ವ ಮತ್ತವರ ರಾಜಕಾರಣ ನಮಗೆ ಎಂದೆಂದಿಗೂ ಮಾದರಿಯಾಗಿರುತ್ತವೆ.

IMG 20250630 195411
ಬಿ ಶ್ರೀನಿವಾಸ
+ posts

ಸಾಹಿತಿಗಳು

ಪೋಸ್ಟ್ ಹಂಚಿಕೊಳ್ಳಿ:

ಬಿ ಶ್ರೀನಿವಾಸ
ಬಿ ಶ್ರೀನಿವಾಸ
ಸಾಹಿತಿಗಳು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...