ಘಾಜಿಯಾಬಾದ್ ಬಸ್ ಸ್ಫೋಟ ಪ್ರಕರಣದಲ್ಲಿ ಸುಮಾರು 29 ವರ್ಷಗಳಿಂದ ಆರೋಪವನ್ನು ಹೊತ್ತಿರುವ, 12 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಇಲ್ಯಾಸ್ ಖುಲಾಸೆಗೊಂಡಿದ್ದಾರೆ. ನಿರಪರಾಧಿ ಕಳೆದುಕೊಂಡ ಜೀವನವನ್ನು ಮರಳಿಕೊಡಲು ಸಾಧ್ಯವೇ? ಈ ತಪ್ಪಿನ ಹೊಣೆ ಹೊರುವವರು ಯಾರು?
1996ರ ಘಾಜಿಯಾಬಾದ್ ಬಸ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೊಹಮ್ಮದ್ ಇಲ್ಯಾಸ್ ಎಂಬವರನ್ನು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿದೆ. ಸುಮಾರು 29 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ ಇಲ್ಯಾಸ್ ಈಗ ಜೈಲಿನಿಂದ ಹೊರಬರಲಿದ್ದಾರೆ. ಅಂದರೆ ಓರ್ವ ನಿರಪರಾಧಿ ತಮ್ಮ ಪತ್ನಿ, ಮಕ್ಕಳು, ಕುಟುಂಬಸ್ಥರು, ಸ್ನೇಹಿತರೊಂದಿಗೆ ಕಳೆಯಬೇಕಾದ ತಮ್ಮ ಜೀವಿತಾವಧಿಯ ಬಹುಕಾಲವನ್ನು ಜೈಲಿನಲ್ಲೇ ಕಳೆಯುವಂತಾಗಿದೆ!
1996ರ ಏಪ್ರಿಲ್ 27ರಂದು ಘಾಜಿಯಾಬಾದ್ ಬಸ್ ನಿಲ್ದಾಣದ ಬಳಿ ಬಸ್ಸಿನೊಳಗೆ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ 18 ಮಂದಿ ಸಾವನ್ನಪ್ಪಿದ್ದರು, 48 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಮೊಹಮ್ಮದ್ ಇಲ್ಯಾಸ್, ಅಬ್ದುಲ್ ಮತೀನ್ ಮತ್ತು ತಸ್ಲೀಮ್ ಎಂಬವನ್ನು ಬಂಧಿಸಿತ್ತು. ಈ ಬಸ್ ದೆಹಲಿಯಿಂದ ಹೊರಡುವ ಮೊದಲು ಬಸ್ಸಿನಲ್ಲಿ ಬಾಂಬ್ ಇರಿಸುವ ಸಂಚನ್ನು ಈ ಮೂವರು ರೂಪಿಸಿದ್ದರು ಎಂಬ ಆರೋಪವನ್ನು ಮಾಡಲಾಗಿತ್ತು.
ಇದನ್ನು ಓದಿದ್ದೀರಾ? ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪುರೋಹಿತ್ ಸೇರಿ ಎಲ್ಲ ಆರೋಪಿಗಳು ಖುಲಾಸೆ
2013ರಲ್ಲಿ, ವಿಚಾರಣಾ ನ್ಯಾಯಾಲಯವು ಇಲ್ಯಾಸ್ ಮತ್ತು ಮತೀನ್ ಅವರನ್ನು ದೋಷಿಗಳೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ತಸ್ಲೀಮ್ ಅವರನ್ನು ಖುಲಾಸೆಗೊಳಿಸಿತ್ತು. ಇದೀಗ ಸುಮಾರು 12 ವರ್ಷಗಳ ನಂತರ ಅಲಹಾಬಾದ್ ಹೈಕೋರ್ಟ್ ಮೊಹಮ್ಮದ್ ಇಲ್ಯಾಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇಲ್ಯಾಸ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸುವುದಾಗಿ ಹೇಳಿದೆ. ಸದ್ಯ ಕುಟುಂಬಸ್ಥರು ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಇಲ್ಯಾಸ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಇಲ್ಯಾಸ್ ಬಂಧನವಾದಾಗ ಅವರ ಮಗ ಹತ್ತನೇ ತರಗತಿಯ ವಿದ್ಯಾರ್ಥಿ. 2013ರಲ್ಲಿ ತನ್ನ ತಂದೆ ಜೈಲು ಸೇರುತ್ತಿದ್ದಂತೆ ಇಡೀ ಕುಟುಂಬದ ಹೊರೆಯನ್ನು ಹೊತ್ತ ಶಾಹಿದ್, ವಿದ್ಯಾಭ್ಯಾಸ ಬದಿಗೊತ್ತಿ ತಂದೆಯಂತೆ ಮರಗೆಲಸ ಮಾಡಲು ಆರಂಭಿಸಿದ್ದಾರೆ. ತಂದೆಯ ಬಂಧನದ ಬಳಿಕ ಜನರ ಚುಚ್ಚು ಮಾತು ಸಹಿಸಲಾಗದೆ 30ರ ಶಾಹಿದ್ ಈಗ ಪಂಜಾಬ್‌ನಲ್ಲಿ ವಾಸಿಸುತ್ತಿದ್ದಾರೆ. ಇವರ ಕುಟುಂಬದ ಕೆಲವರು ಇನ್ನೂ ಮುಝಾಫರ್‌ನಗರದ ಮೀರಾಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದೀಗ ಮುಝಾಫರ್‌ನಗರದಲ್ಲಿ ಇಲ್ಯಾಸ್‌ರನ್ನು ನೆನಪಿಸಿಕೊಳ್ಳುವವರು ಕೆಲವೇ ಜನರು. ಅದೂ ಬರೀ ಈ ಸ್ಫೋಟದ ವಿಚಾರದಿಂದಾಗಿ ಎಂದು ಮಾಧ್ಯಮಗಳ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ ಶಾಹಿದ್.
1997ರ ಜೂನ್ 8ರಂದು ಬಂಧನಕ್ಕೆ ಒಳಗಾದ ಇಲ್ಯಾಸ್ 2003ರಲ್ಲಿ ಜಾಮೀನಿನ ಮೇಲೆ ಹೊರಬಂದರು. ಅದಾದ ಬಳಿಕ ಮುಝಾಫರ್‌ನಗರದ ಮನೆ ಮಾರಿ, ಊರು ತೊರೆದು ಹತ್ತು ವರ್ಷಗಳ ಕಾಲ ಲುಧಿಯಾನದಲ್ಲಿ ಮರಗೆಲಸ ಮಾಡುತ್ತಾ ಜೀವನ ಸಾಗಿಸಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಮಾತ್ರ ಗಾಝಿಯಾಬಾದ್‌ಗೆ ಪ್ರಯಾಣಿಸುತ್ತಿದ್ದರು.
ತನ್ನ ತಂದೆ ಬಂಧನಕ್ಕೂ ಮುಂಚೆ ಹೇಳಿದ ಮಾತನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರ ಬಳಿ ಮಾತನಾಡುತ್ತಾ ನೆನಪಿಸಿಕೊಳ್ಳುವ ಶಾಹಿದ್, “ನನ್ನ ತಂದೆ ಕೊನೆಯದಾಗಿ ನನ್ನ ಬಳಿ ‘ಇಂದು ನಾನು ಜೈಲಿನಿಂದ ಹೊರಬರುತ್ತೇನೆ ಅಥವಾ ಪೂರ್ಣ ಜೀವನವನ್ನೇ ಜೈಲಿನಲ್ಲಿ ಕಳೆಯಬೇಕಾಗುತ್ತದೆ’ ಎಂದು ಹೇಳಿದ್ದರು. ಆಗ ನಾನು 10ನೇ ತರಗತಿಯಲ್ಲಿದ್ದೆ. ನನಗೆ ನಾಲ್ವರು ಸಹೋದರಿಯರಿದ್ದಾರೆ. ತಂದೆಯ ಬಂಧನದ ಬಳಿಕ ಕುಟುಂಬ ನಿರ್ವಹಣೆಗೆ ಕಷ್ಟವಾಯಿತು. ಶಾಲೆ ತೊರೆದು ಮರಗೆಲಸ ಮಾಡಬೇಕಾಯಿತು. ಹಲವು ವರ್ಷಗಳ ಕಾಲ ಕುಟುಂಬದ ಹೆಚ್ಚಿನವರು ನಮ್ಮನ್ನು ದೂರವಿಟ್ಟರು. ನಮ್ಮ ಬಳಿ ಮಾತೂ ಆಡುತ್ತಿರಲಿಲ್ಲ” ಎಂದು ತನ್ನ ಅಮೂಲ್ಯವಾದ ಜೀವನವನ್ನೂ ಕಳೆದುಕೊಂಡ ಬಗ್ಗೆ ಹೇಳುತ್ತಾರೆ.
ಮುಸ್ಲಿಮರೆಂದರೆ ಭಯೋತ್ಪಾದಕರು ಎಂಬ ತಪ್ಪು ಕಲ್ಪನೆಯನ್ನು ಹೊತ್ತಿರುವ ಈ ಸಮಾಜದಲ್ಲಿ ಬಲಿಯಾಗಿದ್ದು ಇಲ್ಯಾಸ್‌ನ ಇಡೀ ಕುಟುಂಬ. ಈ ಹಿಂದೆ ಯಾವುದೇ ಪ್ರಕರಣದಲ್ಲಿ ಭಾಗಿಯಾಗದವರು ಇಲ್ಯಾಸ್. ಸ್ಫೋಟ ನಡೆಯುವುದಕ್ಕೂ ಕೆಲವು ವಾರಗಳ ಮುನ್ನ ಜಮ್ಮುವಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಜಮ್ಮುವಿಗೆ ಹೋದ ಕಾರಣಕ್ಕೆ ಆ ರೈಲು ಟಿಕೆಟ್‌ಗಳನ್ನು ವಶಕ್ಕೆ ಪಡೆದುಕೊಂಡ ಉತ್ತರ ಪ್ರದೇಶ ಪೊಲೀಸರು ಇಲ್ಯಾಸ್ ಅವರಿಗೂ ಭಯೋತ್ಪಾದಕ ಎಂಬ ಹಣೆಪಟ್ಟಿ ಕಟ್ಟಿದರು.
ಇದನ್ನು ಓದಿದ್ದೀರಾ? 60ರ ವೃದ್ಧೆ ಮೇಲೆ ಅತ್ಯಾಚಾರ, ಕೊಲೆ: ಗಲ್ಲು ಶಿಕ್ಷೆಗೆ ಒಳಗಾಗಿದ್ದ ಆರೋಪಿ ಖುಲಾಸೆ
ಇಲ್ಯಾಸ್‌ನಿಂದ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಅಬ್ದುಲ್ ಮತೀನ್ ಜತೆ ಸೇರಿ ಇಲ್ಯಾಸ್ ಬಸ್ ಹೊರಡುವ ಮೊದಲು ದೆಹಲಿಯಲ್ಲಿ ಬಾಂಬ್ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾಗಿ ಹೇಳಿದರು. ಹಾಗೆಯೇ ರೈಲು ಟಿಕೆಟ್‌ಗಳ ಜೊತೆಗೆ, ಪೊಲೀಸರು ಇಲ್ಯಾಸ್‌ನಿಂದ ಪುರಾವೆಯನ್ನು ಡೈರಿಯೊಂದನ್ನು ವಶಪಡಿಸಿಕೊಂಡಿದ್ದರು. ಹಾಗೆಯೇ ಮತೀನ್ ಪಾಕಿಸ್ತಾನದ ಪ್ರಜೆ ಮತ್ತು ಇಲ್ಯಾಸ್‌ನ ಸಹ-ಸಂಚುಕೋರ ಎಂದೂ ಹೇಳಿದ್ದರು. ಸರಿಯಾದ ವಲಸೆ ದಾಖಲೆಗಳಿಲ್ಲದೆ ಭಾರತದಲ್ಲಿ ಮತೀನ್‌ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು ಎಂದೂ ಉತ್ತರ ಪ್ರದೇಶ ಪೊಲೀಸರು ಹೇಳಿಕೊಂಡಿದ್ದರು. ಆದರೆ ಕೋರ್ಟ್ ವಿಚಾರಣೆ ವೇಳೆ ಇಲ್ಯಾಸ್ ತಪ್ಪೊಪ್ಪಿಗೆಯನ್ನು ನಿರಾಕರಿಸಿದ್ದರು. ಜಮ್ಮು ಟಿಕೆಟ್ ಆಧಾರದಲ್ಲಿ ಇಲ್ಯಾಸ್ ಅಪರಾಧಿ ಎಂದು ಹೇಳಲು ಸಾಧ್ಯವಿಲ್ಲ. ಸರಿಯಾದ ಪುರಾವೆಗಳು ಇಲ್ಲ ಎಂದು ನ್ಯಾಯಾಲಯ ಹೇಳಿದೆ.
“ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು” ಎಂಬುದು ಭಾರತದ ನ್ಯಾಯಾಂಗದ ಸಾರವಾಗಿದೆ. ಆದರೆ ಸದ್ಯ ನಡೆಯುತ್ತಿರುವುದು ಅದಕ್ಕೆ ಭಿನ್ನವಾಗಿದ್ದು. ಇಲ್ಯಾಸ್ ಮಾತ್ರವಲ್ಲ ಅದೆಷ್ಟೋ ಮಂದಿ ಹೀಗೆ ಹತ್ತಾರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಮಾವೋವಾದಿ ಚಟುವಟಿಕೆಗಳ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕರಾದ ಜಿ.ಎನ್. ಸಾಯಿಬಾಬಾ ಅವರನ್ನು ಬಂಧಿಸಲಾಗಿತ್ತು. ಅವರು ವಿಚಾರಣಾಧೀನ ಕೈದಿಯಾಗಿ ಮತ್ತು ಅಪರಾಧಿಯಾಗಿ ಸುಮಾರು 10 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು. 2024ರ ಮಾರ್ಚ್‌ನಲ್ಲಿ ಬಾಂಬ್ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿಯೂ ಹಲವು ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಹೋರಾಟಗಾರರು ನಾಲ್ಕೈದು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. 2007ರಲ್ಲಿ ಗೋರಖ್‌ಪುರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಆರೋಪದ ಮೇಲೆ 12 ಮುಸ್ಲಿಂ ಯುವಕರನ್ನು ಬಂಧಿಸಲಾಗಿತ್ತು. ಅವರೂ ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದರು. 2024ರಲ್ಲಿ ಲಕ್ನೋದ ವಿಶೇಷ ನ್ಯಾಯಾಲಯವು ಈ ಎಲ್ಲ 12 ಆರೋಪಿಗಳನ್ನು ಖುಲಾಸೆಗೊಳಿಸಿತು. ಇವರು ಯಾರೂ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳೇ ಇಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಘಾಜಿಯಾಬಾದ್ ಬಸ್ ಸ್ಫೋಟ ಪ್ರಕರಣದಲ್ಲಿ ಇಲ್ಯಾಸ್ ಮಾತ್ರವಲ್ಲದೆ ಅವರ ಇಡೀ ಕುಟುಂಬವೇ ಭಾರಿ ನಷ್ಟ ಅನುಭವಿಸಿದೆ ಎಂಬುದನ್ನು ಅಲ್ಲಗಳೆಯಲಾಗದು. ಶಿಕ್ಷಣ ಪಡೆದು ಉತ್ತಮ ಜೀವನ ನಡೆಸಬೇಕಾಗಿದ್ದ ಇಲ್ಯಾಸ್ ಪುತ್ರ ಈಗ ಶಿಕ್ಷಣವಿಲ್ಲದೆ ಮರಗೆಲಸ ಮಾಡಿಕೊಂಡು ದಿನದೂಡುವಂತಾಗಿದೆ. ಇನ್ನೊಂದೆಡೆ ಸಮಾಜದಲ್ಲಿದ್ದ ಗೌರವವೂ ಇಲ್ಲದಂತಾಗಿದೆ. ಭಯೋತ್ಪಾದಕ ಎಂಬ ಹಣೆಪಟ್ಟಿಯನ್ನು ಈಗಾಗಲೇ ಸಮಾಜ ಕಟ್ಟಿಯಾಗಿದೆ. ಇಲ್ಯಾಸ್ ಮಾತ್ರವಲ್ಲ ಅದೆಷ್ಟೋ ಮಂದಿ ನಿರಪರಾಧಿಗಳು ತಾವು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇವೆಲ್ಲವುದರ ಹೊಣೆ ಯಾರದ್ದು? ಇಲ್ಯಾಸ್ ಕಳೆದುಕೊಂಡ ಜೀವನವನ್ನು ಮರಳಿ ಕೊಡಲು ಸಾಧ್ಯವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




