ತಂದೆಯ ‘ಸುಪ್ರೀಂ ಲೀಡರ್ ಕಚೇರಿ’ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು ಆ ಕಚೇರಿಯ ‘ಗೇಟ್‌ಕೀಪರ್’ಆಗಿದ್ದರು. ಗುಪ್ತಚರ ಇಲಾಖೆ ಮತ್ತು ಐಆರ್‌ಜಿಸಿ ಮೇಲಿನ ಅವರ ಹಿಡಿತ ಎಷ್ಟಿತ್ತೆಂದರೆ, ಯಾವುದೇ ಪ್ರಮುಖ ನಿರ್ಧಾರಗಳು ಮೊಜ್ತಬಾ ಒಪ್ಪಿಗೆಯಿಲ್ಲದೆ ಹೊರಬೀಳುತ್ತಿರಲಿಲ್ಲ
ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಫೆಬ್ರವರಿ 28ರಂದು ನಡೆಸಿದ ಜಂಟಿ ವಾಯುದಾಳಿಯಲ್ಲಿ ಇರಾನ್‌ನ ಪ್ರಭಾವಿ ಪರಮೋಚ್ಚ ನಾಯಕ (ಸುಪ್ರೀಂ ಲೀಡರ್) ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಮಧ್ಯಪ್ರಾಚ್ಯದ ಭೌಗೋಳಿಕ-ರಾಜಕಾರಣ ತೀವ್ರ ಕುತೂಹಲಘಟ್ಟ ತಲುಪಿದೆ. ಖಮೇನಿ ನಿಧನದ ಕೇವಲ ಎಂಟು ದಿನಗಳಲ್ಲಿ, ಅಂದರೆ ಮಾರ್ಚ್ 8 ರಂದು ಇರಾನ್‌ನ ಶಕ್ತಿಶಾಲಿ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ (ತಜ್ಞರ ಮಂಡಳಿ) ಮುಂದಿನ ಪರಮೋಚ್ಚ ನಾಯಕನಾಗಿ ಖಮೇನಿಯವರ ಎರಡನೇ ಪುತ್ರ ಮೊಜ್ತಬಾ ಖಮೇನಿ ಅವರನ್ನು ಅಧಿಕೃತವಾಗಿ ಘೋಷಿಸಿದೆ.
ಇಸ್ರೇಲ್-ಅಮೆರಿಕದ ಕಣ್ಣುತಪ್ಪಿಸಿ ಬದುಕುಳಿದಿರುವ 56 ವರ್ಷದ ಈ ಮಧ್ಯಮ ಶ್ರೇಣಿಯ ಧರ್ಮಗುರುವಿನ ಆಯ್ಕೆ ಕೇವಲ ಅಧಿಕಾರದ ಹಸ್ತಾಂತರವಲ್ಲ; ಬದಲಾಗಿ 1979ರ ಇಸ್ಲಾಮಿಕ್ ಕ್ರಾಂತಿಯ ಮೂಲ ಆಶಯಗಳಲ್ಲೇ ಆಗಿರುವ ಬಹುದೊಡ್ಡ ಪಲ್ಲಟ. “ಶತ್ರುಗಳಿಂದ ಅತಿ ಹೆಚ್ಚು ದ್ವೇಷಿಸಲ್ಪಡುವ ವ್ಯಕ್ತಿಯೇ ಇರಾನ್‌ನ ಉನ್ನತ ನಾಯಕನಾಗಬೇಕು” ಎಂಬ ಅಲಿ ಖಮೇನಿ ಅವರ ಅಂತಿಮ ಇಚ್ಛೆಯಂತೆಯೇ ಈ ಆಯ್ಕೆ ನಡೆದಿದೆ ಎಂದು ಮಂಡಳಿಯ ಸದಸ್ಯ ಅಯತೊಲ್ಲಾ ಮೊಹ್ಸೆನ್ ಹೈದರಿ ಅಲೆಕಾಸಿರ್ ಸಮರ್ಥಿಸಿಕೊಂಡಿದ್ದಾರೆ.
1969ರ ಸೆಪ್ಟೆಂಬರ್ 6 ರಂದು ಶಿಯಾಗಳ ಪವಿತ್ರ ನಗರಿ ಮಶ್ಹಾದ್‌ನಲ್ಲಿ ಜನಿಸಿದ ಮೊಜ್ತಬಾ ಖಮೇನಿ, ಬಾಲ್ಯದಿಂದಲೂ ಹೋರಾಟದ ವಾತಾವರಣದಲ್ಲೇ ಬೆಳೆದವರು. ಷಾ ರಾಜಮನೆತನದ ವಿರುದ್ಧ ತಂದೆ ಅಲಿ ಖಮೇನಿ ಸಾರಿದ್ದ ಬಂಡಾಯ, ಷಾನ ಗುಪ್ತಚರ ಪಡೆ ‘ಸವಾಕ್’ (SAVAK) ನಡೆಸುತ್ತಿದ್ದ ನಿರಂತರ ದಾಳಿಗಳು ಮತ್ತು ತಂದೆಯ ಬಂಧನದಂತಹ ಪ್ರಕ್ಷುಬ್ಧ ಸನ್ನಿವೇಶಗಳು ಮೊಜ್ತಬಾ ಅವರ ವ್ಯಕ್ತಿತ್ವವನ್ನು ರೂಪಿಸಿದವು. 1979ರ ಕ್ರಾಂತಿಯ ನಂತರ ಟೆಹ್ರಾನ್‌ನ ಪ್ರತಿಷ್ಠಿತ ‘ಅಲಾವಿ ಹೈಸ್ಕೂಲ್’ನಲ್ಲಿ ವ್ಯಾಸಂಗ ಮಾಡಿದ ಅವರು, ಇರಾನ್‌ನ ಪ್ರಮುಖ ಧಾರ್ಮಿಕ ಕೇಂದ್ರ ‘ಕೋಮ್’ (Qom) ಸೆಮಿನರಿಯಲ್ಲಿ ಸಂಪ್ರದಾಯವಾದಿ ವಿದ್ವಾಂಸರ ಗರಡಿಯಲ್ಲಿ ಪಳಗಿದರು. ಧಾರ್ಮಿಕ ವಲಯದಲ್ಲಿ ಅವರು ‘ಹೊಜ್ಜತೊಲೆಸ್ಲಾಮ್’ (Hojjatoleslam) ಎಂಬ ಉನ್ನತ ಶ್ರೇಣಿ ಹೊಂದಿದ್ದಾರೆ.
ವ್ಯಾಸಂಗದ ಬೆನ್ನಲ್ಲೇ ಇರಾನ್‌ನ ಅತ್ಯಂತ ಪ್ರಭಾವಿ ಪಡೆಯಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಸೇರಿದ ಮೊಜ್ತಬಾ, 1987-88ರ ಇರಾನ್-ಇರಾಕ್ ಯುದ್ಧದಲ್ಲಿ ‘ಹಬೀಬ್ ಬೆಟಾಲಿಯನ್’ನಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ಕಟ್ಟಿಕೊಂಡ ಮಿಲಿಟರಿ ನಾಯಕರುಗಳ ಸ್ನೇಹಬಳಗವೇ ಇಂದು ಇರಾನ್ ಸೇನಾ ವ್ಯವಸ್ಥೆಯ ಉನ್ನತ ಹುದ್ದೆಗಳಲ್ಲಿದೆ.
ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು
ಅಚ್ಚರಿಯೆಂದರೆ, ಮೊಜ್ತಬಾ ಈವರೆಗೆ ಯಾವುದೇ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ಯಾವುದೇ ಅಧಿಕೃತ ಸರ್ಕಾರಿ ಹುದ್ದೆಯನ್ನೂ ಅನುಭವಿಸಿಲ್ಲ. ಆದರೂ ಅವರು ದಶಕಗಳಿಂದ ಇರಾನ್‌ನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ತಂದೆಯ ‘ಸುಪ್ರೀಂ ಲೀಡರ್ ಕಚೇರಿ’ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು ಆ ಕಚೇರಿಯ ‘ಗೇಟ್‌ಕೀಪರ್’ಆಗಿದ್ದರು. ಗುಪ್ತಚರ ಇಲಾಖೆ ಮತ್ತು ಐಆರ್‌ಜಿಸಿ ಮೇಲಿನ ಅವರ ಹಿಡಿತ ಎಷ್ಟಿತ್ತೆಂದರೆ, ಯಾವುದೇ ಪ್ರಮುಖ ನಿರ್ಧಾರಗಳು ಮೊಜ್ತಬಾ ಒಪ್ಪಿಗೆಯಿಲ್ಲದೆ ಹೊರಬೀಳುತ್ತಿರಲಿಲ್ಲ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಪಾಶ್ಚಿಮಾತ್ಯ ದೇಶಗಳೊಂದಿಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಯತ್ನಿಸುತ್ತಿದ್ದ ಸುಧಾರಣಾವಾದಿಗಳನ್ನು ಅವರು ಕಟುವಾಗಿ ವಿರೋಧಿಸುತ್ತಿದ್ದರು. ಈ ಹಿನ್ನೆಲೆಯಲ್ಲೇ ಅಮೆರಿಕದ ಖಜಾನೆ ಇಲಾಖೆಯು 2019ರಲ್ಲಿ ಅವರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು.
ಇರಾನ್‌ನ ಆಂತರಿಕ ರಾಜಕಾರಣದಲ್ಲಿ ಉಂಟಾದ ಹಲವು ಬಿಕ್ಕಟ್ಟುಗಳ ಹಿಂದೆ ಮೊಜ್ತಬಾ ಅವರ ಅಗೋಚರ ಕೈವಾಡವಿತ್ತು. 2009ರಲ್ಲಿ ಭುಗಿಲೆದ್ದ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಸೇನಾ ಪಡೆಯಾದ ‘ಬಸಿಜ್’ (Basij) ಮೂಲಕ ಕ್ರೂರವಾಗಿ ಹತ್ತಿಕ್ಕಿದ ಆರೋಪವೂ ಅವರ ಮೇಲಿದೆ. ಇನ್ನು, 2022ರಲ್ಲಿ ಹಿಜಾಬ್ ವಿರೋಧಿ ಹೋರಾಟದ ವೇಳೆ ಮಹ್ಸಾ ಅಮೀನಿ ಸಾವಿಗೆ ನ್ಯಾಯ ಕೇಳಿ ಬೀದಿಗಿಳಿದವರನ್ನು ದಮನ ಮಾಡುವಲ್ಲಿಯೂ ಮೊಜ್ತಬಾ ಪ್ರಮುಖ ಪಾತ್ರ ವಹಿಸಿದ್ದರು.
ಮೊಜ್ತಬಾ ಅವರ ಈ ಉತ್ತರಾಧಿಕಾರ ಕೇವಲ ವ್ಯಕ್ತಿಯೊಬ್ಬನ ಆಯ್ಕೆಯಲ್ಲ, ಇಸ್ಲಾಮಿಕ್ ಗಣರಾಜ್ಯದ ವ್ಯವಸ್ಥೆಯ ಬಹುದೊಡ್ಡ ವಿಪರ್ಯಾಸ. 1979ರಲ್ಲಿ ಷಾ ರಾಜಮನೆತನದ ‘ವಂಶಪಾರಂಪರಿಕ ಆಡಳಿತ’ವನ್ನು ವಿರೋಧಿಸಿಯೇ ಇರಾನ್‌ನಲ್ಲಿ ಕ್ರಾಂತಿ ನಡೆದಿತ್ತು. ಆದರೆ ಇಂದು, ಅದೇ ಕ್ರಾಂತಿಯ ನಾಯಕನ ಮಗನಿಗೆ ವಂಶಪಾರಂಪರಿಕವಾಗಿ ಅಧಿಕಾರ ಹಸ್ತಾಂತರಿಸಲಾಗಿದೆ. ಶಿಯಾ ಧರ್ಮಗುರುಗಳ ಒಂದು ಬಣವು ತಂದೆಯಿಂದ ಮಗನಿಗೆ ಅಧಿಕಾರ ವರ್ಗಾವಣೆಯಾಗುವುದನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಆದರೂ, 2024ರಲ್ಲೇ ಕೋಮ್‌ನಲ್ಲಿ ತಾವು ಬೋಧಿಸುತ್ತಿದ್ದ ತರಗತಿಗಳನ್ನು ಹಠಾತ್ತನೆ ಸ್ಥಗಿತಗೊಳಿಸುವ ಮೂಲಕ ಮೊಜ್ತಬಾ ತಾವು ಭವಿಷ್ಯದ ನಾಯಕನಾಗುವ ಮುನ್ಸೂಚನೆ ನೀಡಿದ್ದರು.
ಇಸ್ರೇಲ್-ಅಮೆರಿಕದ ದಾಳಿಯಿಂದ ಅಕ್ಷರಶಃ ನಲುಗಿರುವ ಇರಾನ್‌ಗೆ ಈಗ ಸೇಡು ಮತ್ತು ಮರುನಿರ್ಮಾಣದ ಸವಾಲಿದೆ. ಮೊಜ್ತಬಾ ಖಮೇನಿ ಅವರ ಆಯ್ಕೆಯು ಇರಾನ್‌ನಲ್ಲಿ ಕಟ್ಟರ್ ಪಂಥೀಯರ ಹಿಡಿತ ಇನ್ನಷ್ಟು ಬಿಗಿಯಾಗುವುದರ ಸ್ಪಷ್ಟ ಸಂಕೇತವಾಗಿದೆ. ಯಾವುದೇ ಅಧಿಕೃತ ಹುದ್ದೆಯಿಲ್ಲದೆ ಕೇವಲ ‘ನೆರಳಿನಲ್ಲೇ’ಕುಳಿತು ಅಧಿಕಾರ ಚಲಾಯಿಸುತ್ತಿದ್ದ ಮೊಜ್ತಬಾ, ಈಗ ಅಧಿಕೃತವಾಗಿ ಬೆಳಕಿಗೆ ಬಂದಿದ್ದಾರೆ. ತಂದೆಯಂತೆಯೇ ಅಮೆರಿಕ-ಇಸ್ರೇಲ್ ವಿರೋಧಿ ನಿಲುವನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವರ ನೇತೃತ್ವದಲ್ಲಿ, ಮಧ್ಯಪ್ರಾಚ್ಯದ ರಾಜಕಾರಣ ಮತ್ತಷ್ಟು ಉದ್ವಿಗ್ನಗೊಳ್ಳುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ.





