ಭಾರತದ ರಾಜಕೀಯದಲ್ಲಿ ಆರ್ಥಿಕ ಸಂಪನ್ಮೂಲಗಳು ಪ್ರಮುಖ ಪಾತ್ರವಹಿಸುತ್ತವೆ. 2004ರಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಖಾತೆಯಲ್ಲಿ ಸುಮಾರು 87-88 ಕೋಟಿ ರೂಪಾಯಿಗಳು ಮಾತ್ರ ಇದ್ದವು. ಇದು 2025ರ ಹೊತ್ತಿಗೆ 10,107 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಪಾರ್ಟಿಯ ಮೊತ್ತ 38 ಕೋಟಿಯಿಂದ ಕೇವಲ 134 ಕೋಟಿಗೆ ಏರಿದೆ. ಬಿಜೆಪಿಯ ಖಾತೆಯಲ್ಲಿನ ಭಾರೀ ಹಣ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಲೆಕ್ಟೋರಲ್ ಬಾಂಡ್. ಇದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪತ್ರಗಳು ಹೇಳುವ ಸತ್ಯ.

ಹೌದು, 2004ರಲ್ಲಿ ದೇಶದ ರಾಜಕೀಯ ಚಿತ್ರಣವೇ ಬೇರೆ ಇತ್ತು. ಬಿಜೆಪಿ ಕೇಂದ್ರದಿಂದ ಹೊರಗುಳಿದಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿತ್ತು. ಆಗ ಬಿಜೆಪಿಯ ಬ್ಯಾಂಕ್ ಖಾತೆಯಲ್ಲಿ ಇದ್ದ ಮೊತ್ತ 87 ಕೋಟಿ ರೂ. ಮಾತ್ರ. 2024–25ರ ವೇಳೆಗೆ ಅದೇ ಬಿಜೆಪಿಯ ಖಾತೆಯಲ್ಲಿ 10,107 ಕೋಟಿ ರೂ. ಕೇವಲ 20 ವರ್ಷಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಏರಿಕೆಯಾಗೋಕೆ ಹೇಗೆ ಸಾಧ್ಯ? ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಹಣ 38 ಕೋಟಿಯಿಂದ 134 ಕೋಟಿಗೆ ಮಾತ್ರ ಏರಿದೆ. ಪ್ರಶ್ನೆ ಸುಲಭವಾಗಿದೆ. ಇಷ್ಟು ಭಾರೀ ಅಂತರ ಏಕೆ? ಇದು ಜನರ ದೇಣಿಗೆಯ ಫಲವೇ? ಅಥವಾ ಕಾರ್ಪೊರೇಟ್ ರಾಜಕೀಯದ ಪರಿಣಾಮವೇ?
2004ರಲ್ಲಿ ಬಿಜೆಪಿಯ ಆಸ್ತಿ ಸುಮಾರು 87 ಕೋಟಿ ರೂಪಾಯಿಗಳಾಗಿದ್ದರೆ, 2015-16ರ ಹೊತ್ತಿಗೆ ಅದು 893 ಕೋಟಿಗೆ ಏರಿತು, ಇದು 627% ಹೆಚ್ಚಳ. 2021-22ರಲ್ಲಿ ಬಿಜೆಪಿಯ ಆಸ್ತಿ 6,046 ಕೋಟಿ ರೂಪಾಯಿಗಳಾಗಿತ್ತು, ಇದು ಎಲ್ಲ ರಾಷ್ಟ್ರೀಯ ಪಕ್ಷಗಳಲ್ಲಿ ಅತಿ ಹೆಚ್ಚು. 2024ರ ಹೊತ್ತಿಗೆ ಇದು 10,107 ಕೋಟಿಗೆ ತಲುಪಿದೆ, ಇದು ಕಾಂಗ್ರೆಸ್‌ಗಿಂತ 75 ಪಟ್ಟು ಹೆಚ್ಚು.
2017ರಲ್ಲಿ ಮೋದಿ ಸರ್ಕಾರ ಪರಿಚಯಿಸಿದ ಎಲೆಕ್ಟೋರಲ್ ಬಾಂಡ್ ಯೋಜನೆ ರಾಜಕೀಯ ಹಣಕಾಸಿನ ಇತಿಹಾಸದಲ್ಲೇ ದೊಡ್ಡ ತಿರುವು. ಈ ವ್ಯವಸ್ಥೆಯ ವಿಶೇಷತೆ ಏನು? ಯಾರು ಹಣ ಕೊಟ್ಟಿದ್ದಾರೆ ಅನ್ನೋದು ಜನರಿಗೆ ತಿಳಿಯಲ್ಲ; ಯಾವ ಕಂಪನಿ, ಎಷ್ಟು ಹಣ, ಯಾವ ಪಕ್ಷಕ್ಕೆ ಎಲ್ಲವೂ ಗುಪ್ತ. ಸಾರ್ವಜನಿಕ ಪರಿಶೀಲನೆಗೆ ಅವಕಾಶವೇ ಇಲ್ಲ ಈ ವ್ಯವಸ್ಥೆಯಿಂದ ಅತ್ಯಂತ ಲಾಭ ಪಡೆದ ಪಕ್ಷ ಬಿಜೆಪಿ. ಎಲೆಕ್ಟೋರಲ್ ಬಾಂಡ್ ಮೂಲಕ ಸಂಗ್ರಹವಾದ ಒಟ್ಟು ಹಣದ ಸುಮಾರು 55–60% ಬಿಜೆಪಿ ಪಾಲಾಗಿದೆ. ಇಲ್ಲಿ ಪ್ರಶ್ನೆ ಬರೋದು ಯಾಕೆ ಹೆಚ್ಚಿನ ಕಾರ್ಪೊರೇಟ್ ಹಣ ಬಿಜೆಪಿ ಕಡೆಗೆ ಮಾತ್ರ ಹರಿಯಿತು? ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಗಳ ಪ್ರಕಾರ, ಬಿಜೆಪಿಯ ಆದಾಯದಲ್ಲಿ ದೇಣಿಗೆಯ ಪಾಲು ಗಣನೀಯವಾಗಿ ಹೆಚ್ಚಿದೆ. ಭಾರತದಲ್ಲಿ ದೊಡ್ಡ ಉದ್ಯಮಗಳು ಯಾವ ಪಕ್ಷಕ್ಕೆ ಹಣ ಕೊಡುತ್ತವೆ ಅನ್ನೋದಕ್ಕಿಂತ, ಯಾವ ಸರ್ಕಾರದಿಂದ ಅವರಿಗೆ ಹೆಚ್ಚು ಲಾಭ ಸಿಗುತ್ತದೆ ಅನ್ನೋದೇ ಮುಖ್ಯವಾಗಿದೆ.

ಈ ಎಲೆಕ್ಟೋರಲ್ ಬಾಂಡ್ ಅನ್ನು ಸುಪ್ರೀಂ ಕೋರ್ಟ್ 2024ರಲ್ಲಿ ಅಸಂವಿಧಾನಿಕ ಎಂದು ಘೋಷಿಸಿತು. ಏಕೆಂದರೆ ಇದು ದಾನಿಗಳ ಮತ್ತು ಪಕ್ಷಗಳ ನಡುವಿನ ಸಂಬಂಧವನ್ನು ಮರೆಮಾಚುತ್ತಿತ್ತು. 2018ರಿಂದ 2024ರವರೆಗೆ ಬಿಜೆಪಿಗೆ 8,251 ಕೋಟಿ ರೂಪಾಯಿಗಳು ಬಂದವು. ಇದು ಒಟ್ಟು ದಾನದ 50%ಕ್ಕಿಂತ ಹೆಚ್ಚು. 2019ರಿಂದ 2024ರವರೆಗೆ ಮಾತ್ರ 6,060 ಕೋಟಿ ರೂಪಾಯಿಗಳು ಬಿಜೆಪಿಗೆ ಲಭಿಸಿದವು.
ಈ ವ್ಯವಸ್ಥೆಯಲ್ಲಿ ದೊಡ್ಡ ಕಾರ್ಪೊರೇಟ್ ಕಂಪನಿಗಳು ಪ್ರಮುಖ ದಾನಿಗಳು. ಮೇಘಾ ಎಂಜಿನಿಯರಿಂಗ್ (584 ಕೋಟಿ), ಕ್ವಿಕ್ ಸಪ್ಲೈ ಚೈನ್ (375 ಕೋಟಿ), ವೇದಾಂತ (230 ಕೋಟಿ) ಮತ್ತು ಭಾರತಿ ಏರ್‌ಟೆಲ್ (197 ಕೋಟಿ) ಮುಂತಾದವು ಬಿಜೆಪಿಗೆ ದೊಡ್ಡ ಮೊತ್ತ ನೀಡಿವೆ. ಈ ದಾನಗಳ ಹಿಂದೆ “ಚಂದಾ ದೋ, ಧಂಧಾ ಲೋ” ಅಂದರೆ ದಾನ ನೀಡಿ, ವ್ಯವಹಾರ ಪಡೆಯಿರಿ ಎಂಬ ಆರೋಪಗಳಿವೆ, ಅಲ್ಲಿ ಕಂಪನಿಗಳು ದಾನ ಮಾಡಿ ಸರ್ಕಾರದಿಂದ ಲಾಭ ಪಡೆಯುತ್ತವೆ ಎಂದು ಟೀಕೆಗಳು ಇದೆ.

ದೊಡ್ಡ ಕಾರ್ಪೊರೇಟ್ ಗ್ರೂಪ್‌ಗಳು ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ಬಿಜೆಪಿಗೆ ದಾನ ಮಾಡಿವೆ. ಅದಾನಿ ಗ್ರೂಪ್ ಸಂಬಂಧಿತ ನಾಲ್ಕು ಕಂಪನಿಗಳು (ಎಬಿಸಿ ಇಂಡಿಯಾ ಲಿಮಿಟೆಡ್ ಮತ್ತು ವೆಲ್ಸ್ಪನ್ ಗ್ರೂಪ್‌ನ ಮೂರು ಅಂಗಸಂಸ್ಥೆಗಳು) 55 ಕೋಟಿ ರೂಪಾಯಿಗಳ ಬಾಂಡ್‌ಗಳನ್ನು ಖರೀದಿಸಿವೆ. ಅದರಲ್ಲಿ 42 ಕೋಟಿ ಬಿಜೆಪಿಗೆ ಹೋಗಿದೆ. ಅದಾನಿ ಗ್ರೂಪ್ ನೇರವಾಗಿ ಬಾಂಡ್ ಖರೀದಿಸಿಲ್ಲ, ಆದರೆ ಸಂಬಂಧಿತ ಕಂಪನಿಗಳ ಮೂಲಕ ದಾನ ಮಾಡಿದೆ.
ಅಂಬಾನಿ ಗ್ರೂಪ್ (ರಿಲಯನ್ಸ್) ಸಂಬಂಧಿತ ಕಂಪನಿಗಳು ಮತ್ತು ವ್ಯಕ್ತಿಗಳು 545 ಕೋಟಿ ರೂಪಾಯಿಗಳನ್ನು ಬಿಜೆಪಿಗೆ ನೀಡಿವೆ. ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ (ರಿಲಯನ್ಸ್ ಸಂಬಂಧಿತ) 375 ಕೋಟಿ ನೀಡಿದೆ, ಇದು ದೇಶದ ಮೂರನೇ ದೊಡ್ಡ ದಾನಿ. ಇದರ ಜೊತೆಗೆ ರಿಲಯನ್ಸ್ ಸಂಬಂಧಿತ ಇತರ ಕಂಪನಿಗಳು 170 ಕೋಟಿ ನೀಡಿವೆ.
ಈ ದೇಣಿಗೆ ಹಿಂದೆ ಸರ್ಕಾರದ ನೀತಿಗಳಿಂದ ಕಂಪನಿಗಳು ಲಾಭವನ್ನೂ ಪಡೆದಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಅದಾನಿ ಗ್ರೂಪ್‌ನ ನೆಟ್ ವರ್ತ್ 121% ಹೆಚ್ಚಿದೆ (50,400 ಕೋಟಿಯಿಂದ 1.1 ಲಕ್ಷ ಕೋಟಿ), ಮತ್ತು ಅಂಬಾನಿ ಗ್ರೂಪ್‌ನದು 118% (1.68 ಲಕ್ಷ ಕೋಟಿಯಿಂದ 3.65 ಲಕ್ಷ ಕೋಟಿ).

ಕಾರ್ಪೊರೇಟ್ ಟ್ಯಾಕ್ಸ್ ದರಗಳನ್ನು ಕಡಿಮೆ ಮಾಡಿ, ವಾರ್ಷಿಕವಾಗಿ ಲಕ್ಷಾಂತರ ಕೋಟಿ ರಿಯಾಯಿತಿಗಳು ನೀಡಲಾಗಿದೆ. ಅದಾನಿ ಗ್ರೂಪ್ ಕೀನ್ಯಾ, ಟಾಂಜಾನಿಯಾ ಮುಂತಾದ ದೇಶಗಳಲ್ಲಿ ಪೋರ್ಟ್, ಪವರ್ ಲೈನ್‌ಗಳಂತಹ ಪ್ರಾಜೆಕ್ಟ್‌ಗಳನ್ನು ಪಡೆದಿದೆ, ಮೋದಿ ವಿದೇಶ ಪ್ರವಾಸಗಳ ನಂತರ. ರಿಲಯನ್ಸ್ ಟೆಲಿಕಾಂ, ಎನರ್ಜಿ ಸೆಕ್ಟರ್‌ಗಳಲ್ಲಿ ಲಾಭ ಪಡೆದಿದೆ. ಮೋದಿ ಸರ್ಕಾರದ ರಸ್ತೆ, ಪೋರ್ಟ್, ಏರ್‌ಪೋರ್ಟ್, ಡಿಜಿಟಲ್ ಕನೆಕ್ಟಿವಿಟಿ ಯೋಜನೆಗಳಿಂದ ಅದಾನಿ ಮತ್ತು ಅಂಬಾನಿ ಗ್ರೂಪ್‌ಗಳು ಪ್ರಯೋಜನ ಪಡೆದಿವೆ. ಬ್ಯಾಂಕ್ ಲೋನ್‌ಗಳನ್ನು ರೈಟ್-ಆಫ್ ಮಾಡಿ, ಸಬ್ಸಿಡಿಗಳು ನೀಡಲಾಗಿದೆ. ಈ ಲಾಭಗಳು ರಾಜಕೀಯ ದಾನಗಳೊಂದಿಗೆ ಸಂಬಂಧಿಸಿವೆ. ಉದಾಹರಣೆಗೆ, ಕೆಲವು ಕಂಪನಿಗಳು ಸರ್ಕಾರದಿಂದ ಕಾಂಟ್ರಾಕ್ಟ್ ಪಡೆದ ನಂತರ ದೇಣಿಗೆಯನ್ನ ನೀಡಿದೆ. ಬಹುಷಃ ಈ ಎಲೆಕ್ಟರಾಲ್ ಬಾಂಡ್‌ನಲ್ಲಿ ಪಾರದರ್ಶಕತೆ ಇದ್ದಿದ್ರೆ, ಕೋರ್ಟ್ ಇದನ್ನ ರದ್ದುಪಡಿಸುವ ಅಗತ್ಯವೇ ಇರಲಿಲ್ಲ.
ಇಡಿ, ಸಿಬಿಐ, ಐಟಿ ದಾಳಿ ಇವು ಬಹುತೇಕ ಕಾಂಗ್ರೆಸ್, ಟಿಎಂಸಿ, ಆಪ್, ಎನ್‌ಸಿಪಿಯಂತಹ ಪ್ರತಿಪಕ್ಷ ನಾಯಕರ ಮೇಲೆ ಮಾತ್ರ ನಡೆಯುತ್ತಿರುವುದು ಗಮನಾರ್ಹ. ಇನ್ನೂ ವಿಪಕ್ಷಗಳ ಅಕೌಂಟ್‌ಗಳನ್ನ ಫ್ರೀಜ್ ಮಾಡಿಸೋದು ಕೂಡ ಮೋದಿ ಸರ್ಕಾರದ ಇನ್ನೊಂದು ಹುನ್ನಾರ. ಇದರ ನಡುವೆ ಬಿಜೆಪಿ ಮಾತ್ರ ನಿರ್ಬಂಧವಿಲ್ಲದ ದೇಣಿಗೆಯನ್ನ ಪಡೆಯುತ್ತದೆ. ಕೇವಲ ರಾಜಕೀಯ ಸ್ಪರ್ಧೆಯಲ್ಲ, ಇದು ಆರ್ಥಿಕ ಅಸಮಾನತೆಯ ಮೂಲಕ ರಾಜಕೀಯ ಅಸಮಾನತೆಯನ್ನ ನಿರ್ಮಿಸುವ ಬಿಜೆಪಿಯ ಹುನ್ನಾರ.

ಬಿಜೆಪಿಯ ಆರ್ಥಿಕ ಹೆಚ್ಚಳಕ್ಕೆ ಎಲೆಕ್ಟೋರಲ್ ಬಾಂಡ್‌ಗಳು ಮುಖ್ಯ ಕಾರಣ. ಅದಾನಿ, ಅಂಬಾನಿ ಮುಂತಾದ ಗ್ರೂಪ್‌ಗಳ ದಾನಗಳು ಇದರಲ್ಲಿ ಪ್ರಮುಖ ಪಾತ್ರವಹಿಸಿವೆ. ಭಾರತದಲ್ಲಿ ಜಾಹೀರಾತು, ಸೋಷಿಯಲ್ ಮೀಡಿಯಾ, ಐಟಿ ಸೆಲ್, ಭಾರೀ ರ್ಯಾಲಿಗಳು ಇವೆಲ್ಲಕ್ಕೂ ಬೇಕಾಗಿರುವುದು ಒಂದೇ – ಹಣ. 10,000 ಕೋಟಿ ರೂ. ಇರುವ ಬಿಜೆಪಿ ಪಕ್ಷ, 134 ಕೋಟಿ ರೂ. ಇರುವ ಕಾಂಗ್ರೆಸ್ ಪಕ್ಷ ಈ ಎರಡು ಪಕ್ಷಗಳು ಸಮಾನ ಚುನಾವಣಾ ಮೈದಾನದಲ್ಲಿ ನಿಂತಿವೆ ಅನ್ನೋದನ್ನ ನಂಬಬಹುದೇ?
ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿ ಮುಖ್ಯವಾಗಬೇಕಿತ್ತು. ಆದರೆ ಇಂದು ಕಾರ್ಪೊರೇಟ್ ಚೆಕ್‌ಗಳ ಶಬ್ದ ಜೋರಾಗಿದೆ. ಇವತ್ತು ಜನ ಸಾಲದ ಸುಳಿಯನ್ನ ಮುಳುಗಿದ್ದಾರೆ. ರೈತ ಆತ್ಮಹತ್ಯೆಗಳು ಹೆಚ್ಚಾಗುತ್ತಿದೆ, ಯುವಕರಿಗೆ ಉದ್ಯೋಗ ಇಲ್ಲ, ಆದ್ರೆ ಬಿಜೆಪಿ ಪಕ್ಷದ ಖಾತೆ ಮಾತ್ರ ದಿನೇ ದಿನೇ ಊದಿಕೊಳ್ಳುತ್ತಲೇ ಇದೆ. ಎಲೆಕ್ಟೋರಲ್ ಬಾಂಡ್ ಮೂಲಕ ಹಣ ಕೊಟ್ಟವರು ಯಾರು? ಅವರಿಗೆ ಏನು ಲಾಭ ಸಿಕ್ಕಿದೆ? ಈ ಪ್ರಶ್ನೆ ಕೇಳೋರನ್ನೇ ಯಾಕೆ ದೇಶದ್ರೋಹಿ ಅಂತ ಮಾಡಲಾಗ್ತಿದೆ? ಇದು ಚುನಾವಣೆ ಅಲ್ಲ, ಇದು ಹೂಡಿಕೆ.

ಇದು ಜನಮತ ಅಲ್ಲ, ಇದು ಕಾರ್ಪೊರೇಟ್ ಒಪ್ಪಂದ. ಈ ದೇಶವನ್ನ ಜನರು ನಡೆಸ್ತಿದ್ದಾರಾ? ಅಥವಾ ಹಣ ನಡೆಸುತ್ತಿದೆಯಾ? ಮತಪೆಟ್ಟಿಗೆಯಲ್ಲಿ ಬಿದ್ದ ಮತಕ್ಕಿಂತ ಬ್ಯಾಂಕ್ ಖಾತೆಗೆ ಬಿದ್ದ ಚೆಕ್ ದೊಡ್ಡದಾದ ದಿನ, ಅಂದು ಸೋತಿರೋದು ಒಂದು ಪಕ್ಷ ಅಲ್ಲ, ಸೋತಿರೋದು ಈ ದೇಶದ ಪ್ರಜಾಪ್ರಭುತ್ವ. ಈ ದೇಶದಲ್ಲಿ ಶಕ್ತಿ ಮತಪೆಟ್ಟಿಗೆಯಲ್ಲಿದೆಯಾ? ಅಥವಾ ಬ್ಯಾಂಕ್ ಖಾತೆಯಲ್ಲಾ? ಇದಕ್ಕೆ ಉತ್ತರ ಹುಡುಕುವ ಹೊಣೆ ಪ್ರತಿಪಕ್ಷಗಳಿಗೆ ಮಾತ್ರ ಇಲ್ಲ, ಪ್ರತಿ ನಾಗರಿಕನಿಗೂ ಇದೆ.





