ದೇಶದಲ್ಲಿ ಆಗಾಗ್ಗೆ ಆಗುವ ವರದಿಗಳನ್ನು ನೋಡಿದರೆ, ದೇಶವಿರೋಧಿ ಕೃತ್ಯದಲ್ಲಿ ಹಿಂದೂ ಮೂಲದವರೇ ಹೆಚ್ಚು ತೊಡಗಿಸಿಕೊಂಡಿರುವುದು ಗೊತ್ತಾಗುತ್ತದೆ. ಇಷ್ಟಾದರೂ ಮಾಧ್ಯಮಗಳು ಆ ಬಗ್ಗೆ ಹೆಚ್ಚು ಬೆಳಕು ಚೆಲ್ಲುವುದಿಲ್ಲ; ಬದಲಾಗಿ ಭಯೋತ್ಪಾದಕರ ಧರ್ಮ ನೋಡಿ, ಸುದ್ದಿಗೆ ಕಡಿಮೆ ಪ್ರಾಮುಖ್ಯತೆ ನೀಡುತ್ತವೆ.
ಕೆಂಪು ಕೋಟೆ ಬಳಿ ಬಾಂಬ್ ಬ್ಲಾಸ್ಟ್ ಘಟನೆ ನಡೆದು 13 ಮಂದಿ ಮೃತಪಟ್ಟ ಬೆನ್ನಲ್ಲೇ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ 35 ಸೆಕೆಂಡ್‌ಗಳ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. “ಭಾರತದಲ್ಲಿ ಐಎಸ್‌ಐ ಕಾರ್ಯಚಟುವಟಿಕೆಗಳಿಗೆ ಮುಸ್ಲಿಮರಿಗಿಂತ ಹೆಚ್ಚು ಹಿಂದೂಗಳನ್ನು ನೇಮಕ ಮಾಡಿಕೊಳ್ಳಲಾಗಿದೆ” ಎಂದು ಅಜಿತ್ ದೋವಲ್ ಹೇಳಿರುವುದು ಆ ವಿಡಿಯೊದಲ್ಲಿತ್ತು. ಆದರೆ ಇದೊಂದು ಡೀಪ್ ಫೇಕ್ (ಎಐ ಸೃಷ್ಟಿತ) ದೃಶ್ಯವೆಂದು ಕೆಲವು ಮಾಧ್ಯಮಗಳು ವರದಿ ಹರಿಬಿಟ್ಟವು. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಆಗುತ್ತಿರುವ ಮುಜುಗರವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಿತು.
ವೈರಲ್ ವಿಡಿಯೊ ಸಂಬಂಧ CNN–NEWS18ಗೆ ಪ್ರತಿಕ್ರಿಯಿಸಿದ ಅಜಿತ್ ದೋವಲ್, “ಇದು ʼಡೀಪ್‌ಫೇಕ್ʼ ಆಗಿದ್ದು, ನಾನು ಅಂತಹ ಹೇಳಿಕೆ ನೀಡಿಲ್ಲ. ಸಾರ್ವಜನಿಕ ಅಭಿಪ್ರಾಯವನ್ನು ತಪ್ಪು ದಾರಿಗೆಳೆಯಲು ಇದನ್ನು ರಚಿಸಲಾಗಿದೆ” ಎಂಬುದಾಗಿ ಹೇಳಿಬಿಟ್ಟರು. Moneycontrol ಕೂಡ ಇದೇ ಅಭಿಪ್ರಾಯವನ್ನು ವರದಿ ಮಾಡಿತು. ವಾಸ್ತವದಲ್ಲಿ ಅಜಿತ್ ದೋವಲ್ ಅವರು ತಾವು ಆಡಿದ್ದ ಮಾತನ್ನೇ ಅಲ್ಲಗಳೆದಿರುವುದನ್ನು ‘ಆಲ್ಟ್ ನ್ಯೂಸ್’ ವೆಬ್‌ಸೈಟ್ ಬಯಲಿಗೆಳೆದಿದೆ.
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2014ರ ಮಾರ್ಚ್ 11ರಂದು ದೋವಲ್ ಅವರು ಮಾಡಿರುವ ಉಪನ್ಯಾಸ ಸಿಕ್ಕಿದೆ. ಡೀಪ್‌ಫೇಕ್ ತಂತ್ರಜ್ಞಾನ ಸಾಮಾನ್ಯ ಬಳಕೆಗೆ ಬರುವುದಕ್ಕಿಂತಲೂ ಮುಂಚೆಯೇ ಆಸ್ಟ್ರೇಲಿಯಾ ಇಂಡಿಯಾ ಇನ್‌ಸ್ಟಿಟ್ಯೂಟ್‌ನವರು ಮಾರ್ಚ್ 20, 2014ರಂದು ಈ ಉಪನ್ಯಾಸವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದರು!
ಇದನ್ನೂ ಓದಿರಿ: ಪುಲ್ವಾಮಾದಲ್ಲಿ ದೆಹಲಿ ಸ್ಫೋಟ ಆರೋಪಿಯ ಮನೆ ಧ್ವಂಸ; ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಲ್ಲವೇ?
ಅಧಿಕೃತ ವಿಡಿಯೊ ಪರಿಶೀಲಿಸಿದಾಗ 1 ಗಂಟೆ 4ನೇ ನಿಮಿಷದ ಭಾಗದಲ್ಲಿ, ದೋವಲ್ ಸ್ವತಃ “1947ರಿಂದಲೂ ಐಎಸ್‌ಐ ನೇಮಕಾತಿಗೆ ಒಳಪಟ್ಟವರಲ್ಲಿ ಬಹುಪಾಲು ಹಿಂದೂಗಳೇ; ಶೇಕಡಾ 20ರಷ್ಟೂ ಮುಸ್ಲಿಮರು ಇರಲಿಲ್ಲ” ಎಂದು ಸ್ಪಷ್ಟವಾಗಿ ಹೇಳಿರುವುದು ಕೇಳಿಸುತ್ತದೆ. ಹೀಗಾಗಿ, “ವೈರಲ್ ಕ್ಲಿಪ್ ನಕಲಿ ಅಲ್ಲ; AI ಡೀಪ್‌ಫೇಕ್ ಕೂಡ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ” ಎಂದು ‘ಆಲ್ಟ್ ನ್ಯೂಸ್’ ಹೇಳಿತ್ತು.
ರಾಜಕೀಯ ಕಾರಣಕ್ಕಾಗಿಯೋ ಸರ್ಕಾರದ ಒತ್ತಡದಿಂದಲೋ ಇದು ನಕಲಿ ವಿಡಿಯೊ ಎಂದು ದೋವಲ್ ವಾದಿಸಬಹುದು. ಆದರೆ ದೇಶದಲ್ಲಿ ಆಗಾಗ್ಗೆ ಆಗುವ ವರದಿಗಳನ್ನು ನೋಡಿದರೆ, ದೇಶವಿರೋಧಿ ಕೃತ್ಯದಲ್ಲಿ ಹಿಂದೂ ಮೂಲದವರೇ ಹೆಚ್ಚು ತೊಡಗಿಸಿಕೊಂಡಿರುವುದು ಗೊತ್ತಾಗುತ್ತದೆ. ಇಷ್ಟಾದರೂ ಮಾಧ್ಯಮಗಳು ಆ ಬಗ್ಗೆ ಹೆಚ್ಚು ಬೆಳಕು ಚೆಲ್ಲುವುದಿಲ್ಲ. ಬದಲಾಗಿ ಭಯೋತ್ಪಾದಕರ ಧರ್ಮ ನೋಡಿ, ಸುದ್ದಿಗೆ ಕಡಿಮೆ ಪ್ರಾಮುಖ್ಯತೆ ನೀಡುತ್ತವೆ.
2019ರ ಪುಲ್ವಾಮಾ ದುರಂತದ ಬಳಿಕ ಕೇಳಿಬಂದ ಮುಖ್ಯ ಹೆಸರು ದೇವಿಂದರ್ ಸಿಂಗ್. ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DSP) ಆಗಿದ್ದ ಈ ವ್ಯಕ್ತಿ, ಪುಲ್ವಾಮದಲ್ಲೂ ಸೇವೆ ಸಲ್ಲಿಸಿದಾತ. ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಈತ ಹಿಜ್ಬ್-ಉಲ್ ಮುಜಾಹಿದ್ದೀನ್ ಭಯೋತ್ಪಾದಕರೊಂದಿಗೆ 2020ರ ಜನವರಿ 20ರಂದು ಕಾಣಿಸಿಕೊಂಡಿದ್ದ. “2001ರ ಪಾರ್ಲಿಮೆಂಟ್ ದಾಳಿ, 2019ರ ಪುಲ್ವಾಮಾ ದಾಳಿ ಮತ್ತು ಇತರ ಭಯೋತ್ಪಾದನಾ ಘಟನೆಗಳೊಂದಿಗೆ ಈತನ ಸಂಬಂಧ ಇರಬಹುದು” ಎಂಬ ಗುಮಾನಿಯನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸಿದವು. ಈತನ ವಿರುದ್ಧ ಎನ್‌ಐಎ ತನಿಖೆ ಶುರುವಾಯಿತಾದರೂ ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಿಲ್ಲ. ಪುಲ್ವಾಮಾ ದಾಳಿಗೂ ಈತನಿಗೂ ಎಷ್ಟರ ಮಟ್ಟಿಗಿನ ಸಂಬಂಧವಿದೆ ಎಂಬುದನ್ನು ಮುನ್ನಲೆಗೆ ತರಲಿಲ್ಲ. ಈತ ಬಿಜೆಪಿಯ ಬೆಂಬಲಿಗೂ ಆಗಿದ್ದ ಎಂಬ ಚರ್ಚೆಗಳು ನಡೆದಿದ್ದವು ಎಂಬುದನ್ನು ಗಮನಿಸಬೇಕಾಗುತ್ತದೆ.
ರಾಜಸ್ಥಾನದಲ್ಲಿ ಸಕ್ರಿಯನಾಗಿದ್ದ ಶಂಕಿತ ಪಾಕಿಸ್ತಾನಿ ಗೂಢಾಚಾರಿ ನಂದಲಾಲ್ ಮಹಾರಾಜ್ (26) ಎಂಬಾತನನ್ನು ಗುಪ್ತಚರ ಇಲಾಖೆ, ರಾ ಮತ್ತು ರಾಜಸ್ಥಾನ ರಾಜ್ಯ ಗುಪ್ತಚರ ಸಂಸ್ಥೆ 2016ರಲ್ಲಿ ಬಂಧಿಸಿದ್ದವು. ನಂದಲಾಲ್ ಮತ್ತು ಅವನ ಜಾಲವು ಸುಮಾರು 35 ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್ ಅನ್ನು ಪಾಕಿಸ್ತಾನ- ಭಾರತ ಗಡಿಗೆ ಸಾಗಿಸಿದ್ದವು. ಭಾರತ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಲಾಗಿತ್ತು ಎಂದು ವರದಿಯಾಗಿತ್ತು.
ನೈಋತ್ಯ ದೆಹಲಿಯ ಭಾಟಿ ಮೈನ್ಸ್‌ನಲ್ಲಿರುವ ಸಂಜಯ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನ ಮೂಲದ ಹಿಂದೂ ಒಬ್ಬನನ್ನು 2022ರಲ್ಲಿ ಬಂಧಿಸಲಾಗಿತ್ತು. ಐಎಸ್‌ಐ ಮತ್ತು ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿರುವ ಗುಮಾನಿ ವ್ಯಕ್ತವಾಗಿತ್ತು. ಕಾರ್ಮಿಕ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ಭಾಗ್ ಚಂದ್ 1998ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಾತ ಎಂಬುದು ನಂತರ ತಿಳಿಯಿತು.
ಕಳೆದ ಮೇ 19ರಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿತ್ತು. ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಹರಿಯಾಣದ ಖ್ಯಾತ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. ಪಹಲ್ಗಾಮ್ ಘಟನೆಯ ನಂತರ ಈಕೆಯನ್ನು ಪೊಲೀಸರು ಬೆನ್ನು ಹತ್ತಿದ್ದರು. ಹಲವು ಸಲ, ಪಾಕಿಸ್ತಾನಕ್ಕೆ ಹೋಗಿರುವ ಉದ್ದೇಶವೇನು ಎಂಬುದನ್ನು ತಡಕಾಡಿದರು. ಈಕೆ ಪಾಕಿಸ್ತಾನದ ಹೈಕಮಿಷನ್ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದಳು ಎಂದು ದೂರಲಾಗಿದ್ದು, ಸದ್ಯ ಬಂಧನದಲ್ಲಿದ್ದಾಳೆ.
ಇದನ್ನೂ ಓದಿರಿ: ನಿಷ್ಪಕ್ಷಪಾತವಲ್ಲದ ಚುನಾವಣಾ ಆಯೋಗ ದೇಶಕ್ಕೆ ಅಪಾಯಕಾರಿ
ಪಟಿಯಾಲಾದ ಖಾಲ್ಸಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿದ್ದ 25 ವರ್ಷದ ದೇವೇಂದ್ರ ಸಿಂಗ್ ಧಿಲ್ಲೋನ್ ಎಂಬಾತನನ್ನು ಕಳೆದ ಮೇನಲ್ಲಿ ಬಂಧಿಸಲಾಗಿತ್ತು. ಫೇಸ್‌ಬುಕ್‌ನಲ್ಲಿ ಪಿಸ್ತೂಲ್ ಮತ್ತು ಬಂದೂಕುಗಳ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಮೇ 12 ರಂದು ಹರಿಯಾಣದ ಕೈಥಾಲ್‌ನಲ್ಲಿ ಆತನನ್ನು ಅರೆಸ್ಟ್ ಮಾಡಲಾಗಿತ್ತು. ಆತ ಕಳೆದ ವರ್ಷದ ನವೆಂಬರ್‌ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಪಟಿಯಾಲ ಮಿಲಿಟರಿ ಕಂಟೋನ್ಮೆಂಟ್‌ನ ಚಿತ್ರಗಳೊಂದಿಗೆ ಕೆಲವು ಸೂಕ್ಷ್ಮ ಮಾಹಿತಿಯನ್ನು ಐಎಸ್‌ಐ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿತ್ತು.
ಹೀಗೆ ಹತ್ತಾರು ಹಿಂದೂಗಳು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿರುವುದು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಆದರೆ ಮುಸ್ಲಿಂ ವ್ಯಕ್ತಿ ಬಂಧಿತನಾದಾಗ ಸಿಗುವಷ್ಟು ಪ್ರಚಾರ, ಮುಸ್ಲಿಮೇತರ ವ್ಯಕ್ತಿಗಳು ಬಂಧಿತರಾದಾಗ ಸಿಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮೇತರರೇ ಹೆಚ್ಚಿನದಾಗಿ ದೇಶವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿರುವುದು ಏತಕ್ಕೆ ಎಂದು ಯೋಚಿಸಬೇಕಿದೆ. ವಿನೋದ್ ಚಂದನ್ ಎಂಬವರ ಪ್ರಕಾರ, “ಮುಸ್ಲಿಮರಿಗಿಂತ ಮುಸ್ಲಿಮೇತರರು ಹಣದ ಆಮಿಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದಾರೆ. ಮುಸ್ಲಿಮರ ಪ್ರಮಾಣ ಇದರಲ್ಲಿ ಕಡಿಮೆ ಇದೆ ಎಂಬುದು ಗೊತ್ತಾಗುತ್ತಿದೆ. ಜೊತೆಗೆ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿಸಲು ಭಯೋತ್ಪಾದಕರು ಹನಿಟ್ರ್ಯಾಪ್ ಮಾಡುತ್ತಿರಬಹುದು. ಹೀಗೆ ಹನಿಟ್ರ್ಯಾಪ್‌ಗೆ ಒಳಗಾದವರು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳೇ ಇದ್ದಾರೆ” ಎಂದು ಶಂಕಿಸುತ್ತಾರೆ. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಒಟ್ಟಾರೆಯಾಗಿ ನೋಡಿದರೆ, ಭಯೋತ್ಪಾದಕರಿಗೆ ಧರ್ಮವೆಂಬುದಿಲ್ಲ ಎಂದು ಮಾಧ್ಯಮಗಳು ಅರಿತುಕೊಂಡು, ಎಲ್ಲ ದೇಶ ವಿರೋಧಿಗಳ ಕುರಿತು ಸಮನಾಗಿ ವರದಿ ಮಾಡಬೇಕಾಗುತ್ತದೆ.





