ಮೂರ್ತಿ ಮಹಾಶಯರೇ, ದುರ್ಬಲ ಜಾತಿಗಳಿಗೆ ಮೀಸಲಾತಿಯಲ್ಲಿ ಮಾತ್ರ ಮೆರಿಟ್ ನೆನಪಾಗುವುದೇ?

Date:

ಇನ್ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ತಾವು ಹಿಂದುಳಿದ ವರ್ಗದವರಲ್ಲವೆಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು ಸಂವಿಧಾನ ವಿರೋಧಿ ಮತ್ತು ಸಾಮಾಜಿಕ ನ್ಯಾಯ ವಿರೋಧಿ ನಿಲುವಾಗಿದೆ.

ಯಾವುದೇ ದೇಶದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾದರೆ ಕರಾರುವಾಕ್ಕಾದ ಅಂಕಿಅಂಶಗಳು ಅತ್ಯಗತ್ಯ. ಅಂಕಿಅಂಶಗಳಿಲ್ಲದೆ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಯೋಜನೆಗಳಿಗೆ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಸಮರ್ಪಕವಾಗಿ ಜಾರಿಗೆ ತರುವುದು ಸಾಧ್ಯವಿಲ್ಲ. ನಿಖರವಾದ ಮಾಹಿತಿ, ಅಂಕಿಅಂಶಗಳನ್ನು ಕಾಲಕಾಲಕ್ಕೆ ಪಡೆದು, ವಾಸ್ತವವನ್ನು ದಾಖಲಿಸಿ, ವೈಜ್ಞಾನಿಕವಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ನೀತಿಗಳನ್ನು ಜಾರಿಗೆ ತರುವುದು ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರದ ಜವಾಬ್ದಾರಿ. ಯಾವ ಯಾವ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಯಾವ ಸ್ಥಿತಿಯಲ್ಲಿವೆ ಎಂಬ ಬಗ್ಗೆ ಮಾಹಿತಿ ಪಡೆಯಲು ಮತ್ತು ಹಿಂದುಳಿದ ವರ್ಗಗಳನ್ನು ಗುರುತಿಸಲು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು 1992ರಲ್ಲಿ ನೀಡಿದ ಮಾರ್ಗಸೂಚಿಗಳ ಅನ್ವಯ ಕರ್ನಾಟಕ ಸರ್ಕಾರ ಕೈಗೊಂಡ ಸಮೀಕ್ಷೆ ಹಲವು ಕಾರಣಗಳಿಗಾಗಿ ಐತಿಹಾಸಿಕ ಪ್ರಾಮುಖ್ಯತೆ ಪಡೆದುಕೊಂಡಿದೆ.

ರಾಜ್ಯದ ಪ್ರಬಲ ಜಾತಿಗಳನ್ನು ಪ್ರತಿನಿಧಿಸುವ ಸಂಘಟನೆಗಳು ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿವೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ರಾಜ್ಯ ಒಕ್ಕಲಿಗರ ಸಂಘ ಹತ್ತು ವರ್ಷಗಳ ಹಿಂದೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯ ವರದಿಯನ್ನು ಒಪ್ಪಿಕೊಳ್ಳಬಾರದೆಂದು ಯಾವುದೇ ಸಮಂಜಸ ಕಾರಣ ನೀಡದೆ ಪ್ರತಿಭಟಿಸಿದ್ದವು. ಆ ಸಮೀಕ್ಷೆ ವೈಜ್ಞಾನಿಕವಾಗಿಲ್ಲ ಎಂಬ ವಾದವನ್ನು ಮುಂದಿಟ್ಟವೇ ಹೊರತು ಅದರಲ್ಲಿರುವ ನಿರ್ದಿಷ್ಟ ಲೋಪಗಳೇನು ಎಂದು ತೋರಿಸಲಿಲ್ಲ. ಈ ವರ್ಷ ಎರಡನೇ ಸಮೀಕ್ಷೆ ಆರಂಭವಾದ ನಂತರ ಅದಕ್ಕೆ ತಡೆಯಾಜ್ಞೆ ಕೋರಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಈ ಸಂಘಟನೆಗಳು ರಿಟ್‌ ಅರ್ಜಿ ಸಲ್ಲಿಸಿದವು. ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಲಯ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದನ್ನು ನಾಗರಿಕರ ಆಯ್ಕೆಗೆ ಬಿಟ್ಟಿತು. ಡಿಸೆಂಬರ್‌ 5ರಂದು ವಿಚಾರಣೆ ಮುಂದುವರಿಯಲಿದೆ. ನ್ಯಾಯಾಲಯದ ತೀರ್ಪು ಏನೇ ಆಗಿದ್ದರೂ, ಸಮೀಕ್ಷೆಯ ಫಲಿತಾಂಶವನ್ನು ಪ್ರಬಲ ಸಮುದಾಯಗಳು ಪುನಃ ತಿರಸ್ಕರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿಂದಿನ ಸಮೀಕ್ಷೆ ವೈಜ್ಞಾನಿಕವಾಗಿರಲಿಲ್ಲ ಎಂದು ಟೀಕಿಸುತ್ತಿದ್ದ ಈ ಸಂಘಟನೆಗಳು ಸಮೀಕ್ಷೆಯನ್ನೇ ನಡೆಸಕೂಡದೆಂಬ ವಾದವನ್ನು ಮುಂದಿಟ್ಟಿದ್ದು ಅವರ ವಿರೋಧಕ್ಕೆ ಬೇರೆಯೇ ಕಾರಣಗಳಿರುವುದನ್ನು ಸ್ಪಷ್ಟಪಡಿಸುತ್ತದೆ. ಕರ್ನಾಟಕದ ಬಹುತೇಕ ಸಾಮಾಜಿಕ ಗುಂಪುಗಳು ಸಮೀಕ್ಷೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರೆ ಈ ಸಂಘಟನೆಗಳು ತಮ್ಮ ಸಮುದಾಯಗಳ ರಾಜಕೀಯ ಯಜಮಾನಿಕೆಗೆ ಸಮೀಕ್ಷೆಯ ಫಲಿತಾಂಶ ಸವಾಲಾಗಬಹುದೆಂಬ ಆತಂಕದಿಂದ ತಾವೇ ಸಮೀಕ್ಷೆಯನ್ನು ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದವು. ಸಂಘ ಪರಿವಾರವಂತೂ ಸಮೀಕ್ಷೆ ಹಿಂದೂ ಸಮಾಜವನ್ನು ಒಡೆಯುವ ತಂತ್ರವೆಂದು ಪ್ರಚಾರ ಮಾಡುತ್ತಾ ಬಂದಿದೆ.ಇವೆಲ್ಲಾ ವಿರೋಧದ ನಡುವೆಯೂ ಸಮೀಕ್ಷೆಯನ್ನು ನಡೆಸುವ ದಿಟ್ಟ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿತು.

ಸಮಾಜ ಕಲ್ಯಾಣ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲು ಎಲ್ಲ ಸಮುದಾಯಗಳ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಅಂಕಿಅಂಶ ಅಗತ್ಯವೆಂಬ ತಿಳುವಳಿಕೆ ಶಿಕ್ಷಿತ ವರ್ಗಕ್ಕೂ ಅರ್ಥವಾಗದೇ ಇರುವುದು ದುರದೃಷ್ಟಕರ. ಇನ್ಫೋಸಿಸ್‌ ಸ್ಥಾಪಕ ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ತಾವು ಹಿಂದುಳಿದ ವರ್ಗದವರಲ್ಲವೆಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು ಸಂವಿಧಾನ ವಿರೋಧಿ ಮತ್ತು ಸಾಮಾಜಿಕ ನ್ಯಾಯ ವಿರೋಧಿ ನಿಲುವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಅವರ ಇಚ್ಛೆಗೆ ಬಿಟ್ಟದ್ದೇನೋ ಹೌದು, ಆದರೆ ಮತದಾನವೂ ಕೂಡ ಹಾಗೇ ಅಲ್ಲವೇ? ಚುನಾವಣೆಗಳಲ್ಲಿ ಮತದಾನ ಮಾಡಲೇಬೇಕೆಂಬುದು ಕಡ್ಡಾಯವಲ್ಲ. ಆದರೂ ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಟಿವಿ ಕ್ಯಾಮೆರಾ ಮುಂದೆ ನಿಂತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಕರೆ ಕೊಟ್ಟಿದ್ದರು. ನಾನು ಮತದಾನ ಮಾಡುವುದಿಲ್ಲ ಎಂದು ಹೇಳುವುದು ಎಷ್ಟು ಪ್ರಜಾಪ್ರಭುತ್ವ ವಿರೋಧಿ ನಿಲುವೋ, ನಾನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳುವುದೂ ಅಷ್ಟೇ ಪ್ರಜಾಪ್ರಭುತ್ವ ವಿರೋಧಿ ನಿಲುವು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ಇವರನ್ನು ಆದರ್ಶ ಉದ್ಯಮಿಯೆಂದು ನೋಡುವವರಿಗೆ, ಅವರ ಅಭಿಮಾನಿ ಇಂಜಿನಿಯರುಗಳಿಗೆ ಮತ್ತು ಉದ್ಯಮೋತ್ಸಾಹಿಗಳಿಗೆ ತಪ್ಪು ಸಂದೇಶ ನೀಡಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪ್ರಮಾಣ ಬೆಂಗಳೂರಿನಂತಹ ನಗರದಲ್ಲಿ ಗಣನೀಯವಾಗಿ ಕಡಿಮೆಯಾಗಿರುವುದಕ್ಕೆ ನಾರಾಯಣಮೂರ್ತಿಯಂತಹವರ ನಿಲುವೂ ಕಾರಣವಾಗಿರಬಹುದು.

ಸಾವಿರಾರು ವರ್ಷಗಳಿಂದಲೂ ಬಹುಜನರನ್ನು ಹೊರಗಿಟ್ಟು ದೇವಸ್ಥಾನದಿಂದ ಹಿಡಿದು ಹಲವು ಸಾಂಸ್ಥಿಕ ವ್ಯವಸ್ಥೆಗಳಲ್ಲಿ ನೂರರಷ್ಟು ಮೀಸಲಾತಿಯನ್ನು ಅನುಭವಿಸುತ್ತಾ ಬಂದಿರುವ ಸಮುದಾಯಕ್ಕೆ ಸೇರಿದ ನಾರಾಯಣಮೂರ್ತಿಯವರು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದವರು. ʻಸೆಮಿನಾರ್ʼ ಮಾಸಿಕಕ್ಕೆ ಜನವರಿ 2000ದಲ್ಲಿ ನೀಡಿದ ಸಂದರ್ಶನದಲ್ಲಿ ʻಕರ್ನಾಟಕದಲ್ಲಿದ್ದ ಮೀಸಲಾತಿ ವ್ಯವಸ್ಥೆಯಿಂದಾಗಿ ಸಮಾಜದ ಒಂದು ನಿರ್ದಿಷ್ಟ ವರ್ಗದಿಂದ ಬಂದಂತಹ ನನ್ನಂತವರಿಗೆ ಉದ್ಯೋಗ ದೊರೆಯುವುದು ಸುಲಭವಾಗಿರಲಿಲ್ಲ. ಆ ಕಾರಣಕ್ಕೆ ಉದ್ಯೋಗ ಹುಡುಕುವ ಪ್ರಯತ್ನವನ್ನು ನಿಲ್ಲಿಸಿ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಸೇರಿಕೊಂಡೆʼ ಎಂದು ಹೇಳಿದ್ದರು. ಇಂದೂ ಪ್ರಚಲಿತವಿರುವ ʻಮೀಸಲಾತಿಯಿಂದಾಗಿ ಮೇಲು ವರ್ಗದ ಪ್ರತಿಭಾವಂತ ಯುವಕರಿಗೆ ಅನ್ಯಾಯವಾಗುತ್ತಿದೆʼ ಎಂಬ ಆಧಾರರಹಿತ ತಪ್ಪು ತಿಳಿವಳಿಕೆ ಇದು. ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುವ ಮೂರ್ತಿಯವರು ಆರ್ಥಿಕ ಮಾನದಂಡದ ಆಧಾರದ ಮೇಲೆ ನೀಡುವ ಮೀಸಲಾತಿಗೆ ನನ್ನ ವಿರೋಧವಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಕೆಳ ಜಾತಿಯ ಸಮುದಾಯಗಳು ಸಾವಿರಾರು ವರ್ಷಗಳಿಂದ ಅನುಭವಿಸುತ್ತಿರುವ ದೌರ್ಜನ್ಯ, ಅನ್ಯಾಯ, ತಾರತಮ್ಯ, ಶೋಷಣೆಯ ಅರಿವಿಲ್ಲದವರು ಮಾತ್ರ ಈ ನಿಲುವನ್ನು ತಾಳಬಲ್ಲರು.

0 42 648x430 1

ತಮ್ಮ ಮೀಸಲಾತಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವಿನಿಂದಾಗಿಯೇ ಮೂರ್ತಿ ದಂಪತಿಗಳು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾರೆಂಬುದು ಸ್ಪಷ್ಟ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೌಲ್ಯಗಳನ್ನು ಗೌರವಿಸದ ಕಾರ್ಪೊರೇಟ್‌ ವಲಯದ ಪ್ರಮುಖ ಪ್ತತಿನಿಧಿ ಇವರು. 2019ರಲ್ಲಿ ಬ್ರಾಹ್ಮಣರೂ ಸೇರಿದಂತೆ ಕೆಲವೇ ಮೇಲ್ಜಾತಿಗಳಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಹಲವು ಪಟ್ಟು ಹೆಚ್ಚಿನ ಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ನೀಡಿದಾಗ ಮೀಸಲಾತಿ ವಿರೋಧಿಗಳಾದ ನಾರಾಯಣಮೂರ್ತಿಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕೆನ್ನುವ ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡಿ ಯಾವುದೇ ಅಂಕಿಅಂಶಗಳ ಆಧಾರವೂ ಇಲ್ಲದೆ ಹೊಸ ವರ್ಗವನ್ನು ಸೃಷ್ಟಿಸಿ ಈಗಾಗಲೇ ಅವರ ಜನಸಂಖ್ಯೆಗಿಂತಲೂ ಹೆಚ್ಚು ಪ್ರಮಾಣದ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದವರಿಗೆ ಮೀಸಲಾತಿ ನೀಡಿದ್ದು ಮೆರಿಟ್ ಗೆ ಮಾಡಿದ ಅನ್ಯಾಯ ಎಂದು ಮೂರ್ತಿಗಳಿಗೆ ಅನಿಸಲಿಲ್ಲ. ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರಾದ ಕೆಳಜಾತಿಗಳಿಗೆ ಮೀಸಲಾತಿ ದೊರೆತಾಗ ಮಾತ್ರ ಅವರಿಗೆ ಮೆರಿಟ್‌ ನೆನಪಾಗುತ್ತದೆ. ಕೇಂದ್ರ ಸರ್ಕಾರವು ಮುಂದೆ ನಡೆಸಬಹುದಾದ ಜಾತಿ ಗಣತಿಯಲ್ಲಿ ಭಾಗವಹಿಸಲು ಮೂರ್ತಿಗಳು ನಿರಾಕರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಆಸ್ತಿ, ಉದ್ಯೋಗ ಮತ್ತು ಆದಾಯದ ಬಗ್ಗೆ ನೀಡಿದ ಮಾಹಿತಿ ದುರುಪಯೋಗವಾಗುತ್ತದೆಂಬ ಸುಳ್ಳು ಪ್ರಚಾರ, ಅಸಮರ್ಪಕ ಸಿದ್ಧತೆ ಮತ್ತು ತಾಂತ್ರಿಕ ದೋಷಗಳು ಸಮೀಕ್ಷೆಗೆ ಸವಾಲಾಗಿದ್ದವು. ೨೦೧೫ರಲ್ಲಿ ಸಮೀಕ್ಷಾಪೂರ್ವ ತಯಾರಿಗೆ ಮತ್ತು ತರಬೇತಿಗೆ ಅಗತ್ಯ ಗಮನ ನೀಡಲಾಗಿತ್ತು. ಅಲ್ಲದೆ ಸಮೀಕ್ಷೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನೂ ಕೈಗೊಳ್ಳಲಾಗಿತ್ತು. ಆದರೆ ಈ ಸಮೀಕ್ಷೆಗೆ ಅಗತ್ಯವಾದ ಸಿದ್ಧತೆಯನ್ನು ಮಾಡಿಕೊಳ್ಳದೆ ಅವಸರದಲ್ಲಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದು ಕಾಣಿಸುತ್ತದೆ. ಸಮೀಕ್ಷೆದಾರರಿಗೆ ನೀಡಬೇಕಾಗಿದ್ದ ತರಬೇತಿಯನ್ನು ನಿರ್ಲಕ್ಷಿಸಲಾಯಿತು. ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರ ಅವಧಿಯಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕೆಂಬ ಅದೇಶ ಅಪ್ರಾಯೋಗಿಕವಾಗಿತ್ತು. ಅದು ಶಾಲೆಗಳಿಗೆ ಮಧ್ಯಂತರ ರಜೆಯ ಸಮಯವಾಗಿದ್ದರಿಂದ ಮತ್ತು ಸರಣಿ ಹಬ್ಬಗಳೂ ಇದ್ದುದರಿಂದ ನಿರಂತರ ಸಮೀಕ್ಷೆ ನಡೆಸುವುದು ಸಮೀಕ್ಷದಾರರಿಗೆ ಸಾಧ್ಯವಾಗಲಿಲ್ಲ. ಇದು ಡಿಜಿಟಲ್‌ ಸಮೀಕ್ಷೆಯಾಗಿದ್ದರಿಂದ ಎಷ್ಟೋ ಹಳ್ಳಿಗಳಲ್ಲಿ ಅಂತರ್ಜಾಲ ಲಭ್ಯವಿಲ್ಲದೇ ಅಥವಾ ಸಿಗ್ನಲ್‌ ಅತಿ ಕ್ಷೀಣವಾಗಿದ್ದು ೬೦ ಪ್ರಶ್ನೆಗಳಿಗೆ ಉತ್ತರಗಳನ್ನು ಆಯ್ಕೆ ಮಾಡಿ ಸಲ್ಲಿಸುವುದು ಸಮೀಕ್ಷಾದಾರರಿಗೆ ಕಷ್ಟದ ಕೆಲಸವಾಗಿತ್ತು.

ಸಮೀಕ್ಷಾ ವಿವರಗಳ ಸ್ವ-ಸಲ್ಲಿಕೆಗೆ ಅವಕಾಶ ನೀಡಲಾಗಿದ್ದರೂ ಮೊಬೈಲ್‌ ಆಪ್‌ ಸಮರ್ಪಕವಾಗಿ ಕೆಲಸ ಮಾಡದೆ, ಎರಡು ಮೂರನೇ ಹಂತದಿಂದ ಮುಂದೆ ಹೋಗಲಾಗದೆ ಸ್ವ-ಸಲ್ಲಿಕೆಯ ಪ್ರಯತ್ನಗಳು ವಿಫಲವಾದವು. ಮೊದಲ ಕೆಲವು ದಿನಗಳಲ್ಲಿ ಪ್ರಶ್ನಾವಳಿಯ ಆರಂಭಿಕ ಪುಟಗಳೇ ತೆರೆದುಕೊಳ್ಳುತ್ತಿರಲಿಲ್ಲ. ಪ್ರಶ್ನೆಗಳನ್ನು ಉತ್ತರಿಸುವಾಗ ಎದುರಾಗಬಹುದಾದ ತಾಂತ್ರಿಕ ತೊಂದರೆಗಳಿಗೆ ಅಲ್ಲಿಯೇ ಪರಿಹಾರಗಳನ್ನು ನೀಡಬಹುದಾಗಿತ್ತು. ಆದರೆ ಆ ಬಗ್ಗೆ ತಾಂತ್ರಿಕ ಪರಿಣಿತರು ಗಮನ ನೀಡಿದಂತೆ ಕಾಣುವುದಿಲ್ಲ. ಮೊಬೈಲ್‌ ಆಪ್‌ ಬಳಕೆದಾರಸ್ನೇಹಿ ಆಗಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮೀಕ್ಷೆಯಲ್ಲಿ ಪಾಲುಗೊಳ್ಳುವ ಸಾಧ್ಯತೆಯಿತ್ತು. ಈ ಎಲ್ಲ ಮಿತಿಗಳ ನಡುವೆಯೂ ಶೇಕಡ ೮೦ಕ್ಕಿಂತಲು ಹೆಚ್ಚು ಜನರ ಸಮೀಕ್ಷೆ ನಡೆಸಿದ್ದು ಅಲ್ಪ ಸಾಧನೆಯೇನೂ ಅಲ್ಲ.

ಯಾವುದೇ ವರ್ಗದ ಸಬಲೀಕರಣಕ್ಕಾಗಿ ಸಂಪನ್ಮೂಲಗಳನ್ನು, ಸೌಲಭ್ಯಗಳನ್ನು ಒದಗಿಸಲು ಅದರ ಬಗೆಗಿನ ಸಂಪೂರ್ಣ ಮಾಹಿತಿ ಅತ್ಯವಶ್ಯ. ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಅತ್ಯಗತ್ಯವಾದ ಮಾಹಿತಿ, ದತ್ತಾಂಶ, ಅಂಕಿಅಂಶಗಳನ್ನು ಸಾರ್ವಜನಿಕ ಸಂಸ್ಥೆಗಳ ಮೂಲಕ ಸಂಗ್ರಹಿಸಿ ವಿಶ್ಲೇಷಿಸುವ ನೀತಿಯನ್ನು ನೆಹರು-ಮಹಲನೋಬಿಸ್‌ ಜಾರಿಗೆ ತಂದಿದ್ದರು. ಆ ಸಂಪ್ರದಾಯ 2014ರ ವರೆಗೂ ನಡೆದುಕೊಂಡು ಬಂದಿತ್ತು. ನಂತರದ ದಿನಗಳಲ್ಲಿ ಎಲ್ಲ ಕ್ಷೇತ್ರಗಳೂ ಪ್ರಗತಿಯಲ್ಲಿವೆ ಎಂಬ ಹುಸಿ ಭಾವನೆ ಮೂಡಿಸಲು ಅಂಕಿಅಂಶಗಳನ್ನು ಮುಚ್ಚಿಡುವ, ನಿರಾಕರಿಸುವ ಮತ್ತು ತಿರುಚುವ ಸಂಪ್ರದಾಯ ಆರಂಭವಾಯಿತು. ಪಂಚವಾರ್ಷಿಕ ಯೋಜನೆಗಳಿಗೆ ರೂಪು ಕೊಡಲು ಮತ್ತು ಕಾರ್ಯರೂಪಕ್ಕೆ ತರಲು ಹಿಂದಿನ ಯೋಜನಾ ಆಯೋಗವು ದತ್ತಾಂಶಗಳನ್ನು ಸಂಗ್ರಹಿಸಿ, ವಿಸ್ತೃತ ವರದಿಗಳನ್ನು ತಯಾರಿಸಿ, ವಿವಿಧ ಇಲಾಖೆಗಳೊಂದಿಗೆ ಹಂಚಿಕೊಳ್ಳುತ್ತಿತ್ತು. ಯೋಜನಾ ಆಯೋಗವನ್ನು ವಿಸರ್ಜಿಸಿ ಅದರ ಬದಲಿಗೆ ರಚಿಸಲಾದ ನೀತಿ ಆಯೋಗ ಬಹುತೇಕ ಪ್ರಚಾರ ಸಂಸ್ಥೆಯಂತೆ ಕೆಲಸ ಮಾಡುತ್ತಿದೆ. ಕೇರಳ ಪ್ರವಾಸೋದ್ಯಮ ಇಲಾಖೆಯ ʻಗಾಡ್ಸ್‌ ಓನ್‌ ಕಂಟ್ರಿʼ ಮತ್ತು ಕೇಂದ್ರ ಸರ್ಕಾರದ ‌ʻಮೇಕ್‌ ಇನ್ ಇಂಡಿಯಾʼ ಜಾಹೀರಾತು ಪ್ರಚಾರಾಂದೋಲನಕ್ಕೆ ಹೆಸರಾಗಿದ್ದ ತಂತ್ರಜ್ಞ ಅಮಿತಾಬ್‌ ಕಾಂತ್‌ರವರು ಏಳು ವರ್ಷಗಳ ಕಾಲ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಇಲ್ಲಿ ಗಮನಾರ್ಹ. 2017-18ರಲ್ಲಿ ನಿರುದ್ಯೋಗ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದ್ದನ್ನು ಸರ್ಕಾರವೇ ನಡೆಸಿದ ಸಮೀಕ್ಷೆ ಹೇಳಿದ್ದರೂ ಕಾಂತ್‌ರವರು ಅದನ್ನು ಖಂಡಿಸಿ ತಿರಸ್ಕರಿಸಿದ್ದರು.

ದತ್ತಾಂಶಗಳನ್ನು ನಿರ್ಲಕ್ಷಿಸುತ್ತಿರುವ ಈ ಕಾಲದಲ್ಲಿ ಮಾಹಿತಿಯ ಕೊರತೆ ಎಲ್ಲ ಇಲಾಖೆಗಳಲ್ಲಿ ಕಾಣುತ್ತಿದೆ. ಕೋವಿಡ್‌ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ, ಲಾಕ್ ಡೌನ್‌ ಕಾರಣ ತಮ್ಮ ಊರುಗಳಿಗೆ ಮರಳಿದ ಕೂಲಿಕಾರರ ಸಂಖ್ಯೆ, ನಿರುದ್ಯೋಗಿಗಳ ಸಂಖ್ಯೆ, ಸ್ವಾಭಾವಿಕ ದುರಂತಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ, ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಇವಾವುಗಳ ಬಗ್ಗೆಯೂ ಸರ್ಕಾರದಲ್ಲಿ ಅಂಕಿಅಂಶಗಳಿಲ್ಲ. ಕೇಂದ್ರ ಸರ್ಕಾರವು ತನ್ನ ಎಲ್ಲ ಹೊಣೆಗಾರಿಕೆಗಳಿಂದ ತಪ್ಪಿಸಿಕೊಳ್ಳುವ ಬೇಜವಾಬ್ದಾರಿ ನಡೆ ಇದಾಗಿದೆ. ಹಾಗಾಗಿಯೇ ಸರ್ಕಾರ ಒಂದೂವರೆ ದಶಕಗಳಾದರೂ ಜನಗಣತಿಯನ್ನು ನಡೆಸದೇ ದಿವ್ಯ ನಿರ್ಲಕ್ಷ ತೋರಿದೆ.

ಇದನ್ನೂ ಓದಿ ಸಮಾಜಮುಖಿಯ ಸ್ವಗತಗಳು l ಅಮೆರಿಕ, ನೊಬೆಲ್ ಪ್ರಶಸ್ತಿ ಹಾಗೂ ಬೆರೆಯಲಾರದ ಅನಿಲಗಳು…

2027ರಲ್ಲಿ ಜನಗಣತಿ ನಡೆಸಿ ಅದರೊಂದಿಗೆ ಜಾತಿ ಗಣತಿಯನ್ನು ಮಾಡುವುದಾಗಿ ಸರ್ಕಾರ ಘೋಷಿಸಿದೆ.ಆದರೆ ಘೋಷಣೆ, ಭರವಸೆಗಳನ್ನು ನೀಡಿ ಅದರಂತೆ ನಡೆದುಕೊಳ್ಳದೇ ಇರುವ ಉದಾಹರಣೆಗಳು ಇರುವುದರಿಂದ ಜನಗಣತಿ ನಡೆಯುತ್ತದೆ ಎಂಬ ಖಾತ್ರಿ ಇಲ್ಲ. ಜಾತಿ ಗಣತಿ ನಡೆದರೂ ಅದರಲ್ಲಿ ಯಾವ ಮಾಹಿತಿಯನ್ನು ಪಡೆಯಲಾಗುತ್ತದೆ ಎಂಬ ಬಗ್ಗೆ ಅನುಮಾನಗಳಿವೆ. ಕರ್ನಾಟಕದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿರುವ ಶಿಕ್ಷಣ, ಉದ್ಯೋಗ, ಆಸ್ತಿ, ತಂತ್ರಜ್ಞಾನ ಬಳಕೆ ಮತ್ತಿತರ ವಿಷಯಗಳ ಬಗೆಗಿನ ಪ್ರಶ್ನೆಗಳನ್ನು ಜಾತಿ ಗಣತಿ ಒಳಗೊಳ್ಳದೇ ಇರಬಹುದು. ಪ್ರಶ್ನಾವಳಿಯು ನಾಗಪುರದಲ್ಲಿ ಅನುಮೋದನೆಗೊಂಡರೆ ಅದರಲ್ಲಿ ಯಾವ ವಿವರಗಳನ್ನು ಕೇಳಲಾಗುತ್ತದೆ ಎಂಬ ಬಗ್ಗೆ ಊಹಿಸಬಹುದು. ಜಾತಿ ಆಧಾರಿತ ಮೀಸಲಾತಿ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಅಗತ್ಯವಾದ ಮಾಹಿತಿ ಸಂಗ್ರಹವಾಗದಿರುವ ಸಾಧ್ಯತೆಗಳಿವೆ. ಏಕೆಂದರೆ ಜಾತಿ ಗಣತಿ ಹಿಂದೂ ಧರ್ಮವನ್ನು ಒಡೆಯುತ್ತದೆ ಎಂಬುದು ಸಂಘಪರಿವಾರದ ನಿಲುವಾಗಿದೆ.

ದೇಶದೆಲ್ಲೆಡೆ ಏಕರೂಪದ ಜಾತಿಗಣತಿ ಮಾಡುವುದು ಎಷ್ಟು ಪ್ರಾಯೋಗಿಕ ಎಂಬುದೂ ಒಂದು ದೊಡ್ಡ ಪ್ರಶ್ನೆ. ಒಂದು ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಜಾತಿಗಳು ಮತ್ತೊಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಅಥವಾ ಬುಡಕಟ್ಟಿಗೆ ಸೇರಿರಬಹುದು. ಅಗತ್ಯವಿರುವ ಸಂವಿಧಾನಿಕ ತಿದ್ದುಪಡಿಗಳನ್ನು ಮಾಡಿಕೊಂಡು ಜಾತಿ ಗಣತಿಯನ್ನು ರಾಜ್ಯಗಳಿಗೇ ಬಿಟ್ಟುಬಿಡುವುದು ಹೆಚ್ಚು ಸೂಕ್ತ.

poornanada
ಪ್ರೊ.ಡಿ.ಎಸ್. ಪೂರ್ಣಾನಂದ
+ posts

ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ.ಡಿ.ಎಸ್. ಪೂರ್ಣಾನಂದ
ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...