ಸ್ವಾತಂತ್ರ್ಯ ಹೋರಾಟಗಾರ ಮುರಗೋಡ ಮಾದೇವಪ್ಪ ಅವರು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ೧೯೧೫ ನವೆಂಬರ್ ೨ ರಂದು ತಂದೆ ಶಿವಪ್ಪ ತಾಯಿ ಕಾಳಮ್ಮನವರ ಉದರದಲ್ಲಿ ಜನಿಸಿದವರೇ ಮಾದೇವಪ್ಪನವರು. ತಂದೆಯ ಮೂಲಕ ಆಧ್ಯಾತ್ಮದಲ್ಲಿ ಆಸಕ್ತಿಯನ್ನು ಅಳವಡಿಸಿಕೊಂಡು, ಗುರು ಗಿರಿಮಲ್ಲೇಶ್ವರರಿಂದ ಉಪದೇಶ ಪಡೆದರು.
ಶಿಕ್ಷಣದ ಜೊತೆ-ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಆಸಕ್ತಿ ಹೊಂದಿದ ಮಾದೇವಪ್ಪನವರು ಹಲವಾರು ಯೋಜನೆಗಳನ್ನು ಹಾಕಿದವರು. ಆಧ್ಯಾತ್ಮದ ತಳಹದಿಯ ಮೇಲೆ ರಾಜಕಾರಣವನ್ನು ಮಾಡಬೇಕೆನ್ನುವ ವಿಚಾರ ಹೊಂದಿದವರಾಗಿದ್ದರು. ಇನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭಕ್ಕೆ ಹುಬ್ಬಳ್ಳಿಯ ಶ್ರೀ ಗಿರೀಶ ಆಶ್ರಮ ಹಾಗೂ ಇಂಚಗೇರಿ ಮಠದ ಮೂಲಕವಾಗಿ ಪುರುಷ, ಮಹಿಳಾ ಸೇನೆಯನ್ನು ಸಿದ್ಧಮಾಡಿಕೊಂಡು ಇಂಗ್ಲೀಷರಿಗೆ ಸಿಂಹಸ್ವಪ್ನವಾಗಿ ನಿಂತವರು.
ಆಧ್ಯಾತ್ಮ ವಲಯದಲ್ಲಿ ಗುರುಗಳಾದ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರಿಂದ ‘ದೇವರು’ ಎನಿಸಿಕೊಂಡ ಗುರುವರ್ಯರು. ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಶ್ರೀಮಠದ ಭಕ್ತರಿಂದ ಹಣ ಕೂಡಿಸಿ ಅದರಿಂದ ಸ್ವಾತಂತ್ರ್ಯ ಚಳುವಳಿಗೆ ಬೇಕಾದ ಪರಿಕರಗಳನ್ನು ಒಗ್ಗೂಡಿಸಿರುವುದನ್ನು ಮರೆಯುವಂತಿಲ್ಲ. ಅಂತಹ ಸ್ವಾತಂತ್ರ್ಯ ಸೇನಾನಿಯ ಕುರಿತು ಇಂದಿಗೂ ಎಲ್ಲಿಯೂ ಕೂಡ ಸರ್ಕಾರ ಪಠ್ಯಗಳನ್ನು ವಿದ್ಯಾರ್ಥಿಗಳಿಗಾಗಲೀ, ಸಾಹಿತ್ಯದಲ್ಲಾಗಲೀ ಗುರುತಿಸದೇ ಇರುವುದು ಬೇಸರದ ಸಂಗತಿ.
ಕ್ರಾಂತಿಕಾರಿ ಧ್ಯೇಯಗಳಿಂದ ರಾಷ್ಟೀಯ ಆಯಾಮವನ್ನು ಪಡೆದುಕೊಂಡು, ಕಟು ಸಂಪ್ರದಾಯ, ಕಂದಾಚಾರಗಳನ್ನು ಖಂಡಿಸುತ್ತಾ ಬರುತ್ತಾರೆ ಮಾದೇವಪ್ಪನವರು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿದರು. ಅವರ ಹೇಳಿದ ವಾಣಿ ಇಂದಿಗೂ ಪ್ರಸ್ತುತ ಅದೇನೆಂದರೆ, “ಯಾರು ಜನತಾ ಜನಾರ್ಧನನ ಸೇವೆ ಮಾಡುವಲ್ಲಿ ಧುಮುಕುವರೋ ಅವರು ಅಮೃತ ಪಾನ ಮಾಡಿ ಅಮರರಾಗುವರು.” ಎಂಬ ವಾಣಿಯು ಅವರು ಮಾಡಿರುವ ಸೇವಾ ಮನೋಭಾವನೆಯನ್ನು ಗುರುತಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಕುವೆಂಪು ಭಾಷಣ | ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡವೇ ಸಾರ್ವಭೌಮ ಭಾಷೆ
ಈ ನಿಟ್ಟಿನಲ್ಲಿ ನವೆಂಬರ್ ೨ ರಂದು ಅವರ ಜಯಂತಿಯ ಪ್ರಯುಕ್ತ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಎಲ್ಲ ಆಶ್ರಮಗಳಲ್ಲಿ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಆ ನಿಟ್ಟಿನಲ್ಲಿ ನಾಡಿನ ಸಮಸ್ತ ಜನತೆಗೆ ಮಾದೇವಪ್ಪನವರ ವಿಚಾರಗಳನ್ನು ಮುಟ್ಟಿಸುವುದು ಪ್ರಸ್ತುತ ಲೇಖನದ ಆಶಯ.
ಬರಹ : ಡಾ. ರಾಮಚಂದ್ರ ಪಡೆಸೂರ. ಕೆ.ಎಲ್.ಇ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಗದಗ





