'ಬೇಟಿ ಬಚಾವೋ' ಎಂದು ಗಂಟಲು ಹರಿಯುವಂತೆ ಕೂಗುವ ಈ ಬಿಜೆಪಿಗರು ತಮ್ಮದೇ ಪಕ್ಷದವರು ಅಕ್ರಮಗಳನ್ನು ಎಸಗಿದಾಗ ಏನೂ ಮಾತಾಡದೇ ಸುಮ್ಮನಾಗುತ್ತಾರೆ. ಆರೋಪಿಗಳನ್ನ ರಕ್ಷಿಸುವ ನಿಟ್ಟಿನತ್ತ ಗಮನಹರಿಸುತ್ತಾರೆ. ತಮ್ಮದೇ ಪಕ್ಷದ ಮಂತ್ರಿಗಳು, ಶಾಸಕರು, ಸಂಸದರು ಅಪರಾಧಿ ಸ್ಥಾನದಲ್ಲಿ ನಿಂತಾಗ ಸುಮ್ಮನಿರುವ ಇವರುಗಳು ಮೋದಿ ಆಡಳಿತದಲ್ಲಿ ಏನು ಮಾಡಿದ್ದಾರೆ?
ವಿಶ್ವಗುರುವೆಂದು ಜಗದಗಲ ಕರೆಸಿಕೊಳ್ಳುವ ಪ್ರಧಾನಿ ಮೋದಿ ಅವರ ದೇಶದಲ್ಲಿಯೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ದೇಶದಲ್ಲಿ ಪ್ರತಿ 50 ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ ಕೃತ್ಯಗಳು ನಡೆಯುತ್ತಿವೆ. ದೇಶದ ರಕ್ಷಣೆ ಮಾಡುತ್ತೇವೆಂದು ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಯೇ ಅತ್ಯಾಚಾರಿಗಳನ್ನ ಸಾಕುತ್ತಿದೆ. ಅತ್ಯಾಚಾರಿಗಳನ್ನು ಉನ್ನತ ಸ್ಥಾನದಲ್ಲಿಟ್ಟು ಮೇರೆಸುತ್ತಿದೆ.
ಇದೇ ಹಾದಿಯಲ್ಲಿ ಉತ್ತರಪ್ರದೇಶದ ಶಹಜಹಾನ್ಪುರದ ಸಂಸದ, ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದನ ಕೃತ್ಯವೂ ಇದೆ. ಈತ 2011ರಲ್ಲಿ ತನ್ನ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ನಲ್ಲಿ ವಾಸವಿದ್ದ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ. ಆದರೂ, ಆತನಿಗೆ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಗೆಲ್ಲಿಸಿತ್ತು. ಮಂತ್ರಿಗಿರಿಯನ್ನೂ ನೀಡಿತ್ತು.

ಹಾಸ್ಟೆಲ್‌ನ ಬಾತ್‌ರೂಮಿನಲ್ಲಿ ಸ್ನಾನ ಮಾಡುತ್ತಿರುವಾಗ ವಿಡಿಯೋ ಚಿತ್ರಿಸಿ ಅದನ್ನಿಟ್ಟುಕೊಂಡು ಒಂದುವರೆ ವರ್ಷಗಳ ಕಾಲ ಅತ್ಯಾಚಾರ ನಡೆಸಿದ ಆರೋಪ ಬಿಜೆಪಿ ಮಾಜಿ ಸಚಿವನ ಮೇಲಿತ್ತು. ಆತನ ವಿರುದ್ಧ ದೂರು ದಾಖಲಾಗಿತ್ತು.
ಹೌದು, ಸ್ವಾಮಿ ಚಿನ್ಮಯಾನಂದ ಅಧಿನದಲ್ಲಿರುವ ಶಹಜಹಾನ್ಪುರದ ಸ್ವಾಮಿ ಶುಕ್ ದೇವಾನಂದ ಸ್ನಾತಕೋತ್ತರ ಕಾನೂನು ಕಾಲೇಜಿನಲ್ಲಿ 23 ವರ್ಷದ ಯುವತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಅದೇ ಕಾಲೇಜಿನ ಹಾಸ್ಟೆಲ್‌ವೊಂದರಲ್ಲಿ ವಾಸವಿದ್ದ ಯುವತಿ ಬಾತ್ ರೂಮ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಚಿತ್ರಿಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ವಿಡಿಯೋಗಳನ್ನ ಮುಂದಿಟ್ಟುಕೊಂಡು ಸತತ ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಯುವತಿ ಮೇಲೆ ಬಿಜೆಪಿಯ ಮಾಜಿ ಸಚಿವ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಜತೆಗೆ, ಯುವತಿಯ ಮನೆಯವರಿಗೆ ಈತ ಬೆದರಿಕೆ ಹಾಕಿದ್ದನು ಎಂದು ಹೇಳಲಾಗಿದೆ.
ಸತತ ಹಿಂಸೆಯಿಂದ ಬೇಸತ್ತಿದ್ದ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಕ್ಲಿಪ್ ಅಪಲೋಡ್ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಳು. ಆಕೆಯ ಕಾಲೇಜಿನ ನಿರ್ದೇಶಕ ಚಿನ್ಮಯಾನಂದ್ ತನ್ನನ್ನು ಮತ್ತು ತನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಳು.
ಮುಂದುವರೆದು ಮಾತನಾಡಿದ್ದ ಯುವತಿ, “ಈ ಬಿಜೆಪಿ ನಾಯಕ ಹಲವಾರು ಹುಡುಗಿಯರ ಜೀವನ ಹಾಳು ಮಾಡಿದ್ದಾನೆ” ಎಂದು ಆರೋಪಿಸಿದ್ದಳು. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹಾಯ ಕೂಡ ಕೇಳಿದ್ದಳು. ಆದರೆ, ಈ ಯುವತಿಯ ಅಳಲು ಮೋದಿಗಾಗಲಿ, ಯೋಗಿಗಾಗಲಿ ಕೇಳಿಸಲಿಲ್ಲ.
“ಹಲವು ಹುಡುಗಿಯರ ಜೀವನವನ್ನು ಹಾಳು ಮಾಡಿದ ಈತ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ನಾಯಕ. ನನಗೆ ಈತ ಜೀವ ಬೆದರಿಕೆ ಹಾಕುತ್ತಿದ್ದಾನೆ. ನನ್ನ ಬಳಿ ಅವನ ವಿರುದ್ಧ ಎಲ್ಲ ದಾಖಲೆಗಳಿವೆ. ದಯವಿಟ್ಟು ನನಗೆ ಸಹಾಯ ಮಾಡುವಂತೆ ನಾನು ಮೋದಿಜೀ ಮತ್ತು ಯೋಗಿಜೀ ಅವರನ್ನು ವಿನಂತಿಸುತ್ತೇನೆ. ಅವನು ನನ್ನ ಕುಟುಂಬವನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ” ಎಂದು ಅವರು ವೀಡಿಯೊದಲ್ಲಿ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ಮತ್ತು ತಮಿಳುನಾಡಿನ ರಾಜಕಾರಣ
1.27 ನಿಮಿಷದ ವೀಡಿಯೋದಲ್ಲಿ ಯುವತಿ ಮಾಜಿ ಕೇಂದ್ರ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ತನ್ನ ಹಾಗೂ ತನ್ನಂತಿರುವ ಹಲವಾರು ಯುವತಿಯರ ಬಾಳನ್ನು ಆತ ಹಾಳು ಮಾಡಿದ್ದಾರೆ ಎಂದು ದೂರಿದ್ದರು.
ವಿಡಿಯೋ ಅಪಲೋಡ್ ಮಾಡಿದ ಬಳಿಕ ಯುವತಿ ನಾಪತ್ತೆಯಾಗಿದ್ದಳು. ಬರೋಬ್ಬರಿ ಆರು ದಿನಗಳ ನಂತರ ಅವಳನ್ನು ರಾಜಸ್ಥಾನದಲ್ಲಿ ಪತ್ತೆ ಹಚ್ಚಲಾಗಿತ್ತು. ಮೂರು ಬಾರಿ ಸಂಸದರಾಗಿರುವ ಚಿನ್ಮಯಾನಂದ್ ವಿರುದ್ಧ ದೂರು ನೀಡಿದ್ದಕ್ಕಾಗಿ ಸ್ಥಳೀಯ ಜಿಲ್ಲಾ ಮ್ಯಾಜಿಸ್ಟ್ರೇಟ್ ತನ್ನ ಪೋಷಕರಿಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದರು. ಈ ಘಟನೆಯ ದೃಷ್ಟಿಯಿಂದ ಆಕೆ ಮತ್ತು ಆಕೆಯ ಕುಟುಂಬಕ್ಕೆ ಪೊಲೀಸರು ರಕ್ಷಣೆಯನ್ನೂ ಒದಗಿಸಿದ್ದರು.
ಉತ್ತರ ಪ್ರದೇಶ ಶಹಜಹಾನ್ಪುರದಲ್ಲಿ ಎಫ್ ಐ ಆರ್ ದಾಖಲಿಸಲು ನಿರಾಕರಿಸಿದ ಕಾರಣ ಯುವತಿ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದರು. ಆಕೆಯ ದೂರಿನ ಮೇರೆಗೆ, ನವೆಂಬರ್ 2011ರಲ್ಲಿ ನಗರ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿತು. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಆದೇಶಿಸಿತು.
ಎಸ್ ಐ ಟಿಗೆ ಸಂತ್ರಸ್ತೆಯ ಸಹೋದರ ಪೆನ್ ಡ್ರೈವ್ ಅನ್ನು ಹಸ್ತಾಂತರಿಸಿದ್ದರು. ಎಸ್ಐಟಿ ನ್ಯಾಯಯುತ ತನಿಖೆ ನಡೆಸಿದರೆ, ಸತ್ಯ ಹೊರಬರಲಿದೆ. ಈ ಪೆನ್ ಡ್ರೈವ್‌ನಲ್ಲಿ ಚಿನ್ಮಯಾನಂದ್ ವಿರುದ್ಧ ಕೆಲವು ಪ್ರಮುಖ ಪುರಾವೆಗಳಿವೆ ಎಂದು ಸಂತ್ರಸ್ತೆ ಮತ್ತು ಆಕೆಯ ಸಹೋದರ ಹೇಳಿಕೊಂಡಿದ್ದರು.

ಚಿನ್ಮಯಾನಂದ ಅವರು ಮಲಗುವ ಕೋಣೆಗೆ ಯುವತಿಯ ಸಮ್ಮುಖದಲ್ಲಿ ತೆರಳಿದ ಎಸ್‌ಐಟಿ ತಂಡ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿತ್ತು. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ಚಿನ್ಮಯಾನಂದ್ ಅವರನ್ನು 2019ರ ಸೆಪ್ಟೆಂಬರ್ 13 ರಿಂದ ಗೃಹಬಂಧನದಲ್ಲಿ ಇರಿಸಲಾಗಿತ್ತು. ಬಳಿಕ, 2019ರ ಸೆಪ್ಟೆಂಬರ್ 20ರಂದು ಎಸ್‌ಐಟಿ ಬಂಧಿಸಿತು. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತು. ಆಗ, ಆತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವನಾಗಿದ್ದರು. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ವಿಶೇಷ ತನಿಖಾ ತಂಡ 4,700 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತನಿಖೆಯ ಸಂದರ್ಭದಲ್ಲಿ ಎಸ್ ಐ ಟಿ 105 ಮಂದಿಯ ಹೇಳಿಕೆಗಳು ಮತ್ತು 55 ದಾಖಲಾತಿಗಳನ್ನು ಸಂಗ್ರಹಿಸಿದೆ. ಹಾಗೆಯೇ, ಆರು ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿದೆ.
ಇನ್ನು ಚಿನ್ಮಯಾನಂದ ಯುವತಿಯಿದ್ದ ಹಾಸ್ಟೆಲ್ ರೂಮಿನಿಂದ ಕೆಲ ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ್ದಾರೆ ಎಂದೂ ಆತನ ವಿರುದ್ಧ 376ಬಿ ಅಡಿ ಪ್ರಕರಣ ದಾಖಲಿಸಬೇಕು ಎಂದು ಯುವತಿಯ ಪೋಷಕರು ಆಗ್ರಹಿಸಿದ್ದರು. ಈ ಪ್ರಕರಣದಲ್ಲಿ ದೂರು ನೀಡಿದ್ದ ಯುವತಿಯನ್ನು ಸಹ ಪೊಲೀಸರು ಬಂಧನ ಮಾಡಿದ್ದರು. 2019ರಲ್ಲಿ ಅಲಹಾಬಾದ್ ಹೈಕೋರ್ಟ್ ಆಕೆಗೆ ಜಾಮೀನು ನೀಡಿತ್ತು. ಯುವತಿಗೆ ಜಾಮೀನು ನೀಡಿದ 2 ತಿಂಗಳಲ್ಲೇ ಆರೋಪಿಗೂ ಕೂಡ ಜಾಮೀನು ಸಿಕ್ಕಿತ್ತು.
ಚಿನ್ಮಯಾನಂದ್ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸದಿದ್ದಕ್ಕಾಗಿ 23 ವರ್ಷದ ಎಲ್ ಎಲ್ ಎಂ ವಿದ್ಯಾರ್ಥಿನಿ ಎಸ್ಐಟಿ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.
ಅಷ್ಟೇ ಅಲ್ಲ, ಸಂತ್ರಸ್ತೆಯ ಪರವಾಗಿ ನಿಲ್ಲಬೇಕಾಗಿದ್ದ ಉತ್ತರಪ್ರದೇಶ ಸರ್ಕಾರ ಪ್ರಕರಣವನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ ನ್ಯಾಯಾಲಯಕ್ಕೆ ಪತ್ರವನ್ನು ಕಳಿಸಿತ್ತು. ಆದರೆ, ಸಂತ್ರಸ್ತೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರಕರಣವನ್ನು ಹಿಂಪಡೆಯಲು ಬಯಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಕೋರಿದ್ದರು.
ಇದಾದ ನಂತರ, 77 ವರ್ಷದ ಚಿನ್ಮಯಾನಂದ್ ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಆದರೆ, ಪರಿಹಾರ ಪಡೆಯಲು ವಿಫಲರಾದರು.
ಚಿನ್ಮಯಾನಂದ್ ಅವರು ಡಿಸೆಂಬರ್ 19, 2022 ರಂದು ಅಲಹಾಬಾದ್ ಹೈಕೋರ್ಟ್‌ನಿಂದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದರು.
2024ರಲ್ಲಿ ನಡೆದ ವಿಚಾರಣೆಯಲ್ಲಿ ಗೃಹ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಚಿನ್ಮಯಾನಂದ ಅವರನ್ನು ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ. ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಹ್ಸಾನ್ ಹುಸೇನ್ ಅವರು ಈ ಪ್ರಕರಣದಿಂದ ಖುಲಾಸೆಗೊಳಿಸಿದ್ದರು.

ಚಿನ್ಮಯಾನಂದ ಅವರು ಉತ್ತರ ಪ್ರದೇಶದಿಂದ ಮೂರು ಬಾರಿ ಸಂಸದರಾಗಿದ್ದರು. ವಾಜಪೇಯಿ ಸರ್ಕಾರದಲ್ಲಿ ಕಿರಿಯ ಸಚಿವರಾಗಿದ್ದರು. 77ವರ್ಷದ ಚಿನ್ಮಯಾನಂದ ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ದುರುಪಯೋಗಪಡಿಸಿಕೊಂಡು ವಿದ್ಯಾರ್ಥಿನಿಗೆ ಲೈಂಗಿಕ ಹಿಂಸೆ ನೀಡಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ, ಭಾರೀ ರಾಜಕೀಯ ಚರ್ಚೆ ಮತ್ತು ಸಾಮಾಜಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಈಗ ಅವರು ದೋಷದಿಂದ ಮುಕ್ತರಾಗಿದ್ದಾರೆ. ಸಂತ್ರಸ್ತೆಗೆ ನ್ಯಾಯ ಸಿಗದಂತಾಗಿದೆ.
‘ಬೇಟಿ ಬಚಾವೋ’ ಎಂದು ಗಂಟಲು ಹರಿಯುವಂತೆ ಕೂಗುವ ಈ ಬಿಜೆಪಿಗರು ತಮ್ಮದೇ ಪಕ್ಷದವರು ಅಕ್ರಮಗಳನ್ನು ಎಸಗಿದಾಗ ಏನೂ ಮಾತನಾಡದೇ ಸುಮ್ಮನಾಗುತ್ತಾರೆ. ಆರೋಪಿಗಳನ್ನು ರಕ್ಷಿಸುವ ನಿಟ್ಟಿನತ್ತ ಗಮನಹರಿಸುತ್ತಾರೆ. ತಮ್ಮದೇ ಪಕ್ಷದ ಮಂತ್ರಿಗಳು, ಶಾಸಕರು, ಸಂಸದರು ಅಪರಾಧಿ ಸ್ಥಾನದಲ್ಲಿ ನಿಂತಾಗ ಸುಮ್ಮನಿರುವ ಇವರುಗಳು ಮೋದಿ ಆಡಳಿತದಲ್ಲಿ ಏನು ಮಾಡಿದ್ದಾರೆ? ಎಂದು ಸಾಮಾನ್ಯ ಜನರು ಪ್ರಶ್ನೆ ಮಾಡಿದರೇ, ಅವರಿಗೆ ದೇಶದ್ರೋಹಿ ಇಲ್ಲವೇ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಅರಚುತ್ತಾರೆ.
ಹೆಣ್ಣುಮಕ್ಕಳ ಪಾಲಿಗೆ ಅತ್ಯಾಚಾರವೆಂಬುದೇ ಭಯಾನಕ ನರಕ. ಅದಕ್ಕಿಂತ ಭೀಕರ ಅದನ್ನು ಬಹಿರಂಗಪಡಿಸಿ ಆರೋಪಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದು. ಮೋದಿ ಕಾಲದಲ್ಲಿರುವ ನಾವುಗಳು ಈ ಕುರುಡು, ಕಿವುಡು ಸರ್ಕಾರ ಮತ್ತು ಈ ಸಮಾಜವನ್ನು ಎದುರಿಸಲು ನಿಜಕ್ಕೂ ಗಟ್ಟಿ ಗುಂಡಿಗೆ ಬೇಕಾಗಿದೆ.




